ಅಧ್ಯಾತ್ಮ ಸಾಧನೆಯಲ್ಲಿ ತೊಡಗುವ ದಾರ್ಶನಿಕನೊಬ್ಬ ಸಮಾಜಮುಖಿಯಾದ ರಾಜಕಾರಣದಲ್ಲಿ ಸಕ್ರಿಯನಾಗಿರುವುದು ವಿರಳ; ಅಂತೆಯೇ ಸಮಾಜಮುಖಿಯಾದ ರಾಜಕಾರಣಿಯೊಬ್ಬ ಆತ್ಮಾಭಿಮುಖಿ ಸಾಧನೆಯಲ್ಲಿ ತೊಡಗುವುದೂ ಸುಲಭವೇನೂ ಅಲ್ಲ. ಇಂದಿನ ದಿನಗಳಲ್ಲಂತೂ ದಾರ್ಶನಿಕತೆ ಹಾಗೂ ರಾಜನೀತಿಗಳನ್ನು ಪರಸ್ಪರ ವಿರುದ್ಧ ಹಾದಿಗಳೆಂದೇ ಭಾವಿಸುವ ವಾತಾವರಣ ಸೃಷ್ಟಿಯಾಗಿದೆ. ಆದರೆ ಹಿಂದಿನ ಕಾಲದಲ್ಲಿಯೂ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಸಮನ್ವಯತೆ ಸುಲಭವಾಗಿರಲಿಲ್ಲ. ಏಕೆಂದರೆ, ಎಲ್ಲ ಕಾಲದಲ್ಲಿಯೂ ರಾಜಕೀಯವು ತಂತ್ರ-ಕುತಂತ್ರಗಳ ವಕ್ರದಾರಿ; ಅಧ್ಯಾತ್ಮವು ಶಾಂತಿ-ಸಮಾಧಾನಗಳ ಋಜುಮಾರ್ಗ. ಹೀಗಿದ್ದರೂ, ಈ ಎರಡೂ ಕ್ಷೇತ್ರಗಳಲ್ಲಿ ಸಮತೋಲನ ಸಾಧಿಸುವುದೇ ನಿಜವಾದ ಯೋಗ ಎಂದು “ಸಮತ್ವಂ ಯೋಗ ಉಚ್ಯತೇ” ಎನ್ನುವ ಗೀತೆಯ ವಾಕ್ಯದಲ್ಲಿ ಶ್ರೀಕೃಷ್ಣ ಪ್ರತಿಪಾದಿಸಿದ್ದಾನೆ. ಅಷ್ಟೇ ಅಲ್ಲದೆ, ಒಬ್ಬನೇ ವ್ಯಕ್ತಿ ಪೂರ್ಣ ದಾರ್ಶನಿಕನಾಗಿಯೂ, ಇಡೀ ರಾಷ್ಟ್ರವನ್ನೇ ಪ್ರಭಾವಿಸಬಲ್ಲ ಸಮರ್ಥ ಸಕ್ರಿಯ ರಾಜಕಾರಣಿಯಾಗಿಯೂ ಇರಲು ಸಾಧ್ಯ ಎಂಬುದನ್ನು ಶ್ರೀಕೃಷ್ಣ ತನ್ನ ಬದುಕಿನ ಮೂಲಕವೇ ಲೋಕಕ್ಕೆ ತೋರಿಸಿಕೊಟ್ಟಿದ್ದಾನೆ.
ತಮ್ಮನ್ನು ತಾವು ತಾತ್ವಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದರೂ, ಸಾಮಾಜಿಕ ಹಾಗೂ ರಾಜಕೀಯ ಸಂಕಟಗಳ ಪರಿಹಾರ ಮತ್ತು ಪರಿಷ್ಕಾರಕ್ಕೆ ಪರಿಣಾಮಕಾರಿಯಾಗಿ ಸ್ಪಂದಿಸಿದ ಅನೇಕ ಮಹನೀಯರ ದೃಷ್ಟಾಂತಗಳು ಭಾರತದ ಇತಿಹಾಸದಲ್ಲಿ ವಿಪುಲವಾಗಿ ಸಿಗುತ್ತವೆ. ಸ್ವಾಮಿ ದಯಾನಂದ ಸರಸ್ವತಿ, ಸ್ವಾಮಿ ರಾಮತೀರ್ಥರು, ರಮಣ ಮಹರ್ಷಿಗಳು, ಯೋಗಿ ಅರವಿಂದರು, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು… ಹೀಗೆ ಸಮಾಜಮುಖಿ ದಾರ್ಶನಿಕರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲರ ಸಮಾಜಮುಖಿ ಪ್ರವೃತ್ತಿಗೆ ಶ್ರೀಕೃಷ್ಣನ ಜೀವನವೇ ಪ್ರೇರಣೆಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸ್ವಾಮಿ ವಿವೇಕಾನಂದರಂತೂ “ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ” ಎಂಬ ಶ್ರೀಕೃಷ್ಣನ ಮಾತನ್ನೇ ಉದ್ಧರಿಸಿ ಜೀವನೋತ್ಸಾಹದ ಪ್ರೇರಣೆ ನೀಡಿದರು. ಅಲ್ಲದೆ, ಶ್ರೀಕೃಷ್ಣನು ಬೋಧಿಸಿದ ಕರ್ಮ-ಭಕ್ತಿ-ಜ್ಞಾನ ಯೋಗಗಳನ್ನು ತಮ್ಮ ಮಾತು, ಬರಹ ಹಾಗೂ ಉಪದೇಶಗಳಲ್ಲಿ ಪ್ರಚುರಪಡಿಸುವ ಮೂಲಕ ತಮ್ಮ ಮೇಲಿದ್ದ ಕೃಷ್ಣನ ಪ್ರಭಾವವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಹೀಗೆ ಸಾಮಾಜಿಕ, ರಾಜಕೀಯ ಹಾಗೂ ದಾರ್ಶನಿಕ ಮಾರ್ಗಗಳು ಸಮನ್ವಯಗೊಳ್ಳುವುದೇ ರಾಷ್ಟ್ರಹಿತವೆಂದು ಸ್ಪಷ್ಟವಾಗಿ ತೋರಿಸಿಕೊಟ್ಟ ಆದಿಪುರುಷ ಶ್ರೀಕೃಷ್ಣ ಎನ್ನಬಹುದು.
ದಾರ್ಶನಿಕನಾಗಿ ಶ್ರೀಕೃಷ್ಣ:
ಶ್ರೀಕೃಷ್ಣನ ದಾರ್ಶನಿಕತೆಯ ঔನ್ನತ್ಯಕ್ಕೆ ಭಗವದ್ಗೀತೆಗಿಂತ ಬೇರೆ ಸಾಕ್ಷಿಯ ಅಗತ್ಯವಿಲ್ಲ. ಉದ್ಧವನ ಪ್ರಶ್ನೆಗಳಿಗೆ ಶ್ರೀಕೃಷ್ಣ ಉತ್ತರಿಸಿದ ಭಾಗವತದ ಪ್ರಸಂಗವು ತತ್ವಶಾಸ್ತ್ರ ಪ್ರಪಂಚದಲ್ಲಿ “ಉದ್ಧವಗೀತೆ” ಎಂದೇ ಪ್ರಸಿದ್ಧಿ ಪಡೆದಿದೆ. ಮಹಾಭಾರತ, ಭಾಗವತ ಹಾಗೂ ಹರಿವಂಶಗಳಲ್ಲಿ ನಾರದರಂತಹ ಮುನಿಗಳು, ಋಷಿಗಳು ಹಾಗೂ ಭೀಷ್ಮನಂತಹ ತತ್ವಜ್ಞಾನಿಗಳು ಶ್ರೀಕೃಷ್ಣನ ಕುರಿತು ಆಡಿದ ಮಾತುಗಳು ಅವನ ತತ್ವಜ್ಞತೆಯನ್ನು ಸಾರುತ್ತವೆ. ಶ್ರೀಕೃಷ್ಣನು ಪಾಂಡವರಿಗೆ ಹಾಗೂ ತನ್ನ ಸಹವರ್ತಿಗಳಿಗೆ ಸಂದರ್ಭೋಚಿತವಾಗಿ ಮಾಡಿದ ಬಿಡಿ-ಬಿಡಿಯಾದ ಉಪದೇಶಗಳಲ್ಲಿಯೂ ಅವನ ದಾರ್ಶನಿಕತೆ ಎದ್ದು ಕಾಣುತ್ತದೆ. ಶ್ರೀಕೃಷ್ಣನ ಮಾತು ಮಾತ್ರವಲ್ಲ, ಅವನ ಪ್ರತಿಯೊಂದು ಚರ್ಯೆಯೂ ಭಾವುಕರಿಗೆ ಒಂದೊಂದು ದರ್ಶನವನ್ನು ನೀಡುವ ಸೊಗಸು ಅನ್ಯತ್ರ ದುರ್ಲಭ. ಅವನ ಮೈಬಣ್ಣವೂ ಸಹ ಉದಾತ್ತ ದರ್ಶನವನ್ನು ಸಂಕೇತಿಸುವ ಶಕ್ತಿಯನ್ನು ಹೊಂದಿದೆ.
ಶ್ರೀಕೃಷ್ಣನ ಮೈಬಣ್ಣದಲ್ಲಿ ದರ್ಶನ:
‘ಕೃಷ್ಣ’ ಎನ್ನುವ ಹೆಸರಿಗೆ ಇರುವ ಅನೇಕ ಅರ್ಥಗಳಲ್ಲಿ ‘ಕಪ್ಪು’ ಎನ್ನುವುದೂ ಒಂದು. ಕಪ್ಪು ಕೃಷ್ಣನ ಮೈಬಣ್ಣವೂ ಹೌದು, ಕತ್ತಲೆಯ ಬಣ್ಣವೂ ಹೌದು. ಸಾಹಿತ್ಯ, ಕಾವ್ಯ ಹಾಗೂ ಅವುಗಳ ಪ್ರಭಾವದಿಂದಾಗಿ ವ್ಯವಹಾರದಲ್ಲಿಯೂ ‘ಕಪ್ಪು’ ಅಥವಾ ‘ಕತ್ತಲೆ’ಯನ್ನು ನಕಾರಾತ್ಮಕ ಭಾವನೆಗಳಿಗಾಗಿಯೇ ಬಳಸುವುದು ಪ್ರಬಲ ರೂಢಿ. ಕತ್ತಲೆಯು ಕಪ್ಪಾಗಿರುವುದರಿಂದಲೇ ಅದನ್ನು ತಾಮಸ ಹಾಗೂ ಆಸುರೀ ಕಾಲವೆಂದು ಭಾವಿಸಲಾಗುತ್ತದೆ. ಅಜ್ಞಾನ, ಪಾಪಗಳಂತಹ ಹೇಯ ಭಾವಗಳಿಗೂ, ನಮ್ಮ ಮೇಲೆ ದುಷ್ಪ್ರಭಾವ ಬೀರುವ ಶನಿ, ರಾಹು, ಕೇತುಗಳಂತಹ ಗ್ರಹಗಳಿಗೂ ಪರಂಪರೆಯು ಕಪ್ಪು ಬಣ್ಣವನ್ನೇ ಮೀಸಲಾಗಿರಿಸಿದೆ. ಹೀಗೆ ನಕಾರಾತ್ಮಕ ಸಂದರ್ಭಗಳಿಗೇ ಪ್ರಸಿದ್ಧವಾದ ಕಪ್ಪು ಬಣ್ಣವನ್ನು ತನ್ನ ಮೈಬಣ್ಣವಾಗಿಸಿಕೊಂಡು, ಕಪ್ಪಿನ ಆಳ್ವಿಕೆಯ ರಾತ್ರಿ ವೇಳೆಯಲ್ಲಿ ಜನ್ಮತಳೆದ ಕೃಷ್ಣನ ಕಪ್ಪು ಮಾತ್ರ ಭಕ್ತರಿಗೆ ಪೂಜ್ಯವಾಗಿ, ಯೋಗಿಗಳಿಗೆ ಧ್ಯೇಯವಾಗಿ, ಕವಿಗಳಿಗೆ ಆಕರ್ಷಕ ಕಾವ್ಯವಸ್ತುವಾಗಿ ತೋರುವುದು ಒಂದು ಅಚ್ಚರಿ! ದೈವರಹಸ್ಯವೆಂದರೆ ಇದೇ ಇರಬೇಕು.
ನಾವು ದಿನವೂ ಪ್ರಾರ್ಥಿಸುವ—
“ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾ ವಾ ಪ್ರಕೃತೇ: ಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||”
– ಎಂಬ ಶ್ಲೋಕದಂತೆ, ನಾವು ಮಾಡುವ ಕಾಯಿಕ, ವಾಚಿಕ ಹಾಗೂ ಮಾನಸಿಕ ದೋಷಗಳನ್ನು ಪರಮಾತ್ಮನಿಗೆ ಅರ್ಪಿಸುತ್ತೇವೆ. ಏಕೆಂದರೆ, ದೋಷಗಳನ್ನೂ ಅದೋಷಗಳಾಗಿಸುವ ಮಹಿಮೆ ಅವನಲ್ಲಿದೆ. ಈ ಮಹಿಮೆಯೇ ಕೃಷ್ಣನಲ್ಲಿರುವ ನಕಾರಾತ್ಮಕ ಬಣ್ಣವು ಸಕಾರಾತ್ಮಕವಾಗಿ ತೋರುವ ಸೋಜಿಗಕ್ಕೂ ಉತ್ತರವಾಗುತ್ತದೆ.
ಅಥವಾ ಬೆಳಕಿನ ಉಪಾಸನೆಗೆ ಪ್ರಸಿದ್ಧವಾಗಿರುವ ನಮ್ಮ ಪರಂಪರೆಯಲ್ಲಿ ಕತ್ತಲೆ-ಕಪ್ಪುಗಳನ್ನೂ ಉಪಾಸ್ಯವಾಗಿ ಕಂಡಿರುವ ಒಂದು ವಿಶೇಷತೆಯನ್ನು ಗಮನಿಸಬಹುದು. ಋಗ್ವೇದದ ‘ರಾತ್ರಿ ಸೂಕ್ತ’ವು (10-127) ರಾತ್ರಿಯನ್ನೇ ದೇವಿಯ ಸ್ವರೂಪದಲ್ಲಿ ಕೊಂಡಾಡಿದೆ. ಹಾಗೆಯೇ ಋಗ್ವೇದದ ‘ನಾಸದೀಯ ಸೂಕ್ತ’ವು (10-129) ಸೃಷ್ಟಿಯ ಆದಿಯಲ್ಲಿ ಇದ್ದದ್ದು ಕೇವಲ ಕತ್ತಲೆ ಮಾತ್ರ ಎನ್ನುತ್ತದೆ. ಇಲ್ಲಿ ಸೃಷ್ಟಿಯ ಆದಿಯಲ್ಲಿದ್ದ ತತ್ವದ ಅಗೋಚರತೆಯನ್ನು ರೂಪಕ ಭಾಷೆಯಲ್ಲಿ ‘ಕತ್ತಲೆ’ ಎಂದು ಹೇಳಿರುವ ಸಾಧ್ಯತೆ ಇದೆಯಾದರೂ, ಅಂತಹ ಮಹಾ ಆದಿತತ್ವದೊಂದಿಗೆ ಹೋಲಿಕೆಯಾಗುವ ಯೋಗ್ಯತೆಯೊಂದು ಕತ್ತಲೆ ಅಥವಾ ಕಪ್ಪಿಗಿದೆ ಎಂದು ಒಪ್ಪಿಕೊಂಡಂತಾಯಿತು. ಈ ಹಿನ್ನೆಲೆಯಲ್ಲಿ ಕೃಷ್ಣನ ಕಪ್ಪು ಬಣ್ಣವು, ಆತನು ನಾಸದೀಯ ಸೂಕ್ತವು ಹೇಳುವ ‘ಅಗೋಚರ ಮಹಾ ಆದಿತತ್ವದ ಮೂರ್ತರೂಪ’ ಎಂಬುದನ್ನು ಸಂಕೇತಿಸುತ್ತದೆ.
ಹಾಗೆಯೇ, ಬೆಳಕಿನಲ್ಲಿ ಕಾಣುವ ಉಬ್ಬು-ತಗ್ಗುಗಳು, ಹತ್ತಿರ-ದೂರಗಳು, ಆ ಬಣ್ಣ-ಈ ಬಣ್ಣ ಎನ್ನುವ ದ್ವೈತದ ಯಾವ ಭೇದವೂ ತೋರದಂತೆ ಎಲ್ಲವನ್ನೂ ತನ್ನೊಳಗೆ ಅಡಗಿಸಿಕೊಂಡು ಜೀವಿಗಳಿಗೆ ‘ಅದ್ವೈತ ವಿಶ್ರಾಂತಿ’ಯನ್ನು ನೀಡುವುದು ಕತ್ತಲೆಯ ಗುಣ. ಕೃಷ್ಣನ ಕಪ್ಪು ಈ ಅದ್ವೈತವನ್ನೇ ಪ್ರತಿನಿಧಿಸುತ್ತದೆ. ವಿಶ್ವದ ಎಲ್ಲ ಪದಾರ್ಥಗಳೂ ತಮ್ಮ ಪ್ರತ್ಯೇಕ ಬಣ್ಣವನ್ನು ತ್ಯಜಿಸಿ ಒಂದರಲ್ಲೇ ಬೆರೆತುಹೋಗುವ ‘ಮೋಕ್ಷ’ದ ಉತ್ತಮ ಮಾದರಿಯನ್ನೂ ಕತ್ತಲೆಯ ಕಪ್ಪು ತೋರಿಸುತ್ತದೆ. ಕೃಷ್ಣನ ಕಪ್ಪು ಇಂತಹ ಮೋಕ್ಷತತ್ವದ ಸಂಕೇತವಾಗಿದೆ. ಹೀಗೆ ಕೃಷ್ಣನ ರೂಪ, ಲಾವಣ್ಯ, ವೇಷ-ಭೂಷಣಗಳ ಸಾಕಾರ ಅನುಸಂಧಾನವು ಜಟಿಲವಾದ ವೇದಾಂತ ತತ್ವಗಳ ದರ್ಶನ ಮಾಡಿಸುವ ರೀತಿ, ಭಾವುಕರ ದೃಷ್ಟಿ ವಿಸ್ತರಿಸಿದಂತೆ ವಿಸ್ತರಿಸುತ್ತಲೇ ಸಾಗುವ ಸಾಮರ್ಥ್ಯ ಹೊಂದಿದೆ.
ರಾಜನೀತಿಜ್ಞನಾಗಿ ಶ್ರೀಕೃಷ್ಣ:
ರಾಜಪ್ರಭುತ್ವದ ಆಳ್ವಿಕೆಯ ಕಾಲದಲ್ಲಿ ಚಕ್ರವರ್ತಿಯಾದ ರಾಜನು ಕೇಂದ್ರಾಡಳಿತವನ್ನು ನಡೆಸುತ್ತಿದ್ದನು. ಚಂದ್ರವಂಶ ಹಾಗೂ ಸೂರ್ಯವಂಶದ ರಾಜರು ಚಕ್ರವರ್ತಿಗಳಾಗುವ ಯೋಗ್ಯತೆಯನ್ನು ಪರಂಪರೆಯಿಂದ ಹೊಂದಿದ್ದರು. ಹಾಗೆಂದು ತಂದೆಯಿಂದ ಮಗನಿಗೆ ಬರುವ ಚಕ್ರವರ್ತಿ ಸ್ಥಾನವು ಕೇವಲ ವಂಶಾಡಳಿತ ಮಾದರಿಯಲ್ಲಿ ಇರಲಿಲ್ಲ ಎನ್ನುವುದು ಗಮನಾರ್ಹ. ಇಂದಿನ ಆಡಳಿತ ಪಕ್ಷವು ವಿಶೇಷ ಸಂದರ್ಭಗಳಲ್ಲಿ ಬಹುಮತವನ್ನು ಸಾಬೀತುಪಡಿಸಿ ಆಡಳಿತ ಯೋಗ್ಯತೆಯನ್ನು ದೃಢಪಡಿಸಿಕೊಳ್ಳುವಂತೆ, ಅಂದಿನ ಚಕ್ರವರ್ತಿಯಾಗುವ ಯುವರಾಜನು ದಿಗ್ವಿಜಯದ ಮೂಲಕ ಅಧೀನ ರಾಜರನ್ನು ಪರಾಭವಗೊಳಿಸಿ ಪರಂಪರೆಯಿಂದ ಬಂದ ತನ್ನ ಚಕ್ರವರ್ತಿ ಪದವಿಯನ್ನು ಸ್ವಯಂ ನವೀಕರಿಸಿಕೊಳ್ಳಬೇಕಾಗಿತ್ತು. ಪ್ರತಿಯೊಬ್ಬ ಚಕ್ರವರ್ತಿಯೂ ದಿಗ್ವಿಜಯ ಮಾಡಿಯೇ ಪೀಠವೇರಬೇಕೆಂಬುದು ಕಡ್ಡಾಯ ನಿಯಮವಲ್ಲದಿದ್ದರೂ, ಅಧೀನ ರಾಜರ ನಿಷ್ಠೆ ಬದಲಾಗುವ ಸೂಚನೆ ಗುಪ್ತಚರ ಇಲಾಖೆಯಿಂದ ತಿಳಿದಾಗ ಅಶ್ವಮೇಧ, ರಾಜಸೂಯ ಅಥವಾ ದಿಗ್ವಿಜಯಗಳ ಮೂಲಕ ಅವರ ನಿಷ್ಠೆಯನ್ನು ಪರೀಕ್ಷಿಸಿ, ಬಂಡಾಯವೆದ್ದ ರಾಜರನ್ನು ಮತ್ತೆ ವಶವರ್ತಿ ಮಾಡಿಕೊಳ್ಳುವ ಕೆಲಸವನ್ನು ಅಗತ್ಯವಿದ್ದಾಗಲೆಲ್ಲ ಮಾಡಬೇಕಾಗುತ್ತಿತ್ತು.
ಶ್ರೀಕೃಷ್ಣನು ಸರ್ವಸಮರ್ಥನಾಗಿದ್ದು, ತನ್ನ ಯದುವಂಶವನ್ನೇ ಚಕ್ರವರ್ತಿ ಪೀಠದಲ್ಲಿ ಸ್ಥಾಪಿಸುವ ಯೋಗ್ಯತೆ ಹೊಂದಿದ್ದನು. ಆದರೆ ಯದುವಂಶಕ್ಕೆ ಅದೇ ವಂಶದ ರಾಜನಾದ ಯಯಾತಿಯು “ಯದುಗಳು ಚಕ್ರವರ್ತಿತ್ವಕ್ಕೆ ಬಾಹಿರರಾಗಲಿ” ಎಂದು ಶಾಪ ನೀಡಿದ್ದನು. ಈ ಶಾಪಕ್ಕೆ ಮಾನ್ಯತೆ ನೀಡುವುದಕ್ಕಾಗಿ, ಚಕ್ರವರ್ತಿ ಸ್ಥಾನಕ್ಕೆ ಧಾರ್ಮಿಕವಾದ ಪರ್ಯಾಯ ಶಕ್ತಿಯನ್ನು ಆರಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿ ಕೃಷ್ಣನು ಆಯ್ಕೆ ಮಾಡಿದ್ದು ಧರ್ಮನಿಷ್ಠರಾದ ಪಾಂಡವರನ್ನು.
ಅದಾಗಲೇ ಪಾಂಡವರ ಪೂರ್ವಜರಾದ ಹಸ್ತಿನಾವತಿಯ ಚಂದ್ರವಂಶೀಯ ರಾಜರು ಚಕ್ರವರ್ತಿಗಳಾಗಿದ್ದರು. ಆದರೆ ಶಂತನುವಿನ ಹಿರಿಯ ಮಗ ಭೀಷ್ಮ ಚಕ್ರವರ್ತಿ ಪೀಠವನ್ನು ತ್ಯಾಗ ಮಾಡಿದ ಕಾರಣ ಹಾಗೂ ಶಂತನುವಿನ ಇನ್ನಿಬ್ಬರು ಮಕ್ಕಳಾದ ಚಿತ್ರಾಂಗದ ಮತ್ತು ವಿಚಿತ್ರವೀರ್ಯರು ಅಕಾಲ ಮರಣಕ್ಕೆ ತುತ್ತಾದ ಕಾರಣ ಚಕ್ರವರ್ತಿ ಸ್ಥಾನವು ದುರ್ಬಲವಾಗುತ್ತಾ ಸಾಗಿತ್ತು. ವಿಚಿತ್ರವೀರ್ಯನ ಮಗನಾದ ಪಾಂಡುವು ದಿಗ್ವಿಜಯ ಮಾಡಿ ಚಕ್ರವರ್ತಿತ್ವದ ಪ್ರಬಲತೆಯನ್ನು ಮತ್ತೊಮ್ಮೆ ಪ್ರತಿಷ್ಠಾಪಿಸಿದನಾದರೂ, ಆತನೂ ಅಕಾಲ ಮರಣಕ್ಕೀಡಾದಾಗ ಧೃತರಾಷ್ಟ್ರ ಹಾಗೂ ಪಾಂಡುವಿನ ಮಕ್ಕಳು ಇನ್ನು ಬಾಲಕರಾಗಿದ್ದರಿಂದ ಪಾಂಡುವಿನ ಅಣ್ಣನಾದ ಅಂಧ ಧೃತರಾಷ್ಟ್ರನನ್ನು ಚಕ್ರವರ್ತಿಯನ್ನಾಗಿ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಅಧೀನ ರಾಜರ ನಿಷ್ಠೆ ಸಡಿಲವಾಗುತ್ತಾ ಸಾಗಿ, ಚಕ್ರವರ್ತಿ ಸ್ಥಾನ ಹಸ್ತಿನಾವತಿಯಿಂದ ವಿಕೇಂದ್ರಿತವಾಗುವ ಅಪಾಯ ಎದುರಾಯಿತು.
ಈ ರಾಜಕೀಯ ಸನ್ನಿವೇಶದ ಲಾಭ ಪಡೆದವನು ಮಗಧದ ಜರಾಸಂಧ. ಇವನು ಪರಾಕ್ರಮಿಯಾಗಿದ್ದರೂ ಕ್ರೂರಿ, ಮಾಯಾವಿ, ಆಭಿಚಾರಿ ಹಾಗೂ ಹಿಂಸಾವಿನೋದಿ ಪ್ರವೃತ್ತಿಯವನಾಗಿದ್ದ. ಈಗಾಗಲೇ ತನ್ನ ಪರಾಕ್ರಮದಿಂದ ಭಾರತದ ಎಲ್ಲಾ ರಾಜರನ್ನೂ ವಶವರ್ತಿ ಮಾಡಿಕೊಂಡು ಅಘೋಷಿತ ಚಕ್ರವರ್ತಿಯಾಗಿದ್ದ. ಜರಾಸಂಧನ ಅಳಿಯ ಕಂಸ, ಸೇನಾಪತಿ ಶಿಶುಪಾಲ, ಶಿಷ್ಯ ದಂತವಕ್ತ್ರ, ಆಪ್ತಮಿತ್ರರಾದ ಹಂಸ-ಡಿಂಬಕರು ಹಾಗೂ ಚೇದಿವಂಶದ ಪೌಂಡ್ರಕ—ಹೀಗೆ ಬೆರಳೆಣಿಕೆಯ ರಾಜರು ಮಾತ್ರ ಆತನ ಆಧಾರ್ಮಿಕ ಆಡಳಿತದ ಪ್ರಬಲ ಸಮರ್ಥಕರಾಗಿದ್ದರು. ಉಳಿದ ಹೆಚ್ಚಿನ ರಾಜರೆಲ್ಲರೂ ಜರಾಸಂಧನ ಕ್ರೌರ್ಯಕ್ಕೆ ಹೆದರಿ ಅಥವಾ ಪರಾಕ್ರಮಕ್ಕೆ ಮಣಿದು ಅವನನ್ನು ಒಪ್ಪಿಕೊಂಡಿದ್ದರು. ಅವರ ಮನಸ್ಸಿನಲ್ಲಿ ಜರಾಸಂಧನ ವಿರುದ್ಧ ತೀವ್ರ ಬಂಡಾಯವಿತ್ತು. ಹೀಗಾಗಿ ಜರಾಸಂಧನನ್ನು ಯಾರು ಕೊಲ್ಲುತ್ತಾರೋ ಅವರನ್ನು ಚಕ್ರವರ್ತಿಯಾಗಿ ಎಲ್ಲರೂ ಒಪ್ಪಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಂಸನೇ ಮೊದಲಾದ ಜರಾಸಂಧನ ಸಮರ್ಥಕರನ್ನು ಕೃಷ್ಣನೇ ಸಂಹಾರ ಮಾಡುತ್ತಾನೆ. ಜರಾಸಂಧನನ್ನು ಕೊಲ್ಲುವುದು ಕೃಷ್ಣನಿಗೆ ಅಸಾಧ್ಯವೇನೂ ಆಗಿರಲಿಲ್ಲ. ಆದರೆ ಪಾಂಡವರ ಮೂಲಕವೇ ಜರಾಸಂಧನನ್ನು ಕೊಲ್ಲಿಸಿ, ಪಾಂಡವರಿಗೆ ಚಕ್ರವರ್ತಿತ್ವದ ಯೋಗ್ಯತೆ ಇರುವುದನ್ನು ಎಲ್ಲ ರಾಜರೂ ನಿರ್ವಿವಾದವಾಗಿ ಒಪ್ಪಿಕೊಳ್ಳುವಂತೆ ಮಾಡುವುದು ಕೃಷ್ಣನ ದೂರಾಲೋಚನೆಯಾಗಿತ್ತು. ರಾಜಸೂಯ ಯಾಗದ ದಿಗ್ವಿಜಯದ ನೆಪದಲ್ಲಿ ಪಾಂಡವರ ಮೂಲಕವೇ ಜರಾಸಂಧನನ್ನು ಕೊಲ್ಲಿಸುವ ಮೂಲಕ ಈ ಕಾರ್ಯವನ್ನು ಸಾಧಿಸಿದ ರೀತಿ ಶ್ರೀಕೃಷ್ಣನ ರಾಜನೈತಿಕ ಜಾಣ್ಮೆಯನ್ನು ಎತ್ತಿ ಹಿಡಿಯುತ್ತದೆ.
ಜರಾಸಂಧನ ನಂತರ ಪಾಂಡವರ ಪ್ರಭುತ್ವಕ್ಕೆ ಅಡ್ಡಿಯಾದವನು ಅವರದೇ ಸಹೋದರನಾದ ದುರ್ಯೋಧನ. ಮಗ್ಗುಲ ಮುಳ್ಳಿನಂತೆ ಪಾಂಡವರನ್ನು ಕಾಡಿದ ಇವನನ್ನು ಕುರುಕ್ಷೇತ್ರ ಯುದ್ಧದಲ್ಲಿ ಸೋಲಿಸಲು ಸಾಧ್ಯವಾದದ್ದು ಕೃಷ್ಣನ ಯುಕ್ತಿಗಳಿಂದಲೇ ಎಂಬುದು ಪ್ರಸಿದ್ಧ ವಿಷಯ. ಹೀಗೆ ಆಡಳಿತದ ಕೇಂದ್ರಸ್ಥಾನದಲ್ಲಿ ಧರ್ಮವನ್ನು ಪ್ರತಿಷ್ಠಾಪಿಸುವ ಮೂಲಕ ರಾಜಕೀಯದ ಕೇಂದ್ರಭಾಗದಲ್ಲಿ ಧಾರ್ಮಿಕ ಶಕ್ತಿಯೇ ಇರುವುದು ರಾಷ್ಟ್ರಕ್ಕೆ ಒಳಿತು ಎನ್ನುವ ಆದರ್ಶವನ್ನು ಶ್ರೀಕೃಷ್ಣ ತೋರಿಸಿಕೊಟ್ಟಿದ್ದಾನೆ. ಇದನ್ನು ಅರಿತಾಗ, ಜಾತ್ಯತೀತತೆ ಹಾಗೂ ಧರ್ಮನಿರಪೇಕ್ಷತೆಯನ್ನೇ ಮುಖ್ಯ ಸಿದ್ಧಾಂತವಾಗಿಸಿಕೊಂಡಿರುವ ನಮ್ಮ ಇಂದಿನ ರಾಜಕಾರಣವು ಶ್ರೀಕೃಷ್ಣನ ಆದರ್ಶದ ವಿಲೋಮ ಮಾರ್ಗದಲ್ಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
- ಡಾ|| ನರಸಿಂಹ ಗಣಪತಿ ಭಟ್ಟ, ಕವಡಿಕೆರೆ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
