ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಭಾರತೀಯರನ್ನು ಒಗ್ಗೂಡಿಸಿ, ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಕೈಗೊಂಡ ನಿರ್ಧಾರ ಐತಿಹಾಸಿಕವಾದದ್ದು. ಅಲ್ಲಿಯವರೆಗೆ ಕೇವಲ ಮನೆಗಳ ನಾಲ್ಕು ಗೋಡೆಗಳ ಮಧ್ಯೆ ಪೂಜಿಸಲ್ಪಡುತ್ತಿದ್ದ ಗಣೇಶೋತ್ಸವವನ್ನು ಬೀದಿಗೆ ತಂದು, ಸಾರ್ವಜನಿಕ ಉತ್ಸವವನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ತಿಲಕರಿಗೆ ಸಲ್ಲುತ್ತದೆ. ಈ ಮೂಲಕ ಜನರಲ್ಲಿದ್ದ ಭೇದಭಾವಗಳನ್ನು ಮರೆಸಿ, ಅವರಲ್ಲಿ ರಾಷ್ಟ್ರಭಕ್ತಿ ಮತ್ತು ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುವಲ್ಲಿ ತಿಲಕರು ಯಶಸ್ವಿಯಾದರು.
ಬ್ರಿಟಿಷ್ ಸರ್ಕಾರವು ಭಾರತೀಯರು ರಾಜಕೀಯವಾಗಿ ಸಂಘಟಿತರಾಗುವುದನ್ನು ತಡೆಯಲು ಅನೇಕ ಕಟ್ಟುನಿಟ್ಟಿನ ನಿಯಮಗಳನ್ನು ಹೇರಿತ್ತು. ಜನ ಒಂದೆಡೆ ಸೇರುವುದಕ್ಕೂ ನಿಷೇಧವಿತ್ತು. ಆದರೆ ಧಾರ್ಮಿಕ ಆಚರಣೆಗಳಿಗೆ ಬ್ರಿಟಿಷರು ತಡೆ ಒಡ್ಡುತ್ತಿರಲಿಲ್ಲ. ಈ ಸೂಕ್ಷ್ಮವನ್ನು ಅರಿತ ತಿಲಕರು, 1893ರಲ್ಲಿ ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ಚಾಲನೆ ನೀಡಿದರು.ಜಾತಿ, ಮತ ಮತ್ತು ವರ್ಗಗಳ ಗಡಿಗಳನ್ನು ಮೀರಿ ಸಮಸ್ತ ಭಾರತೀಯರನ್ನು ಒಂದೇ ವೇದಿಕೆಯಡಿಯಲ್ಲಿ ತರುವುದು.
ಉತ್ಸವದ ನೆಪದಲ್ಲಿ ಜನರನ್ನು ಸೇರಿಸಿ, ದೇಶಪ್ರೇಮಿ ಭಾಷಣಗಳು, ಜಾನಪದ ಕಲೆಗಳು ಮತ್ತು ಸಭಾ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ತಿಳಿಸುವುದು.
ತಿಲಕರು ತಮ್ಮ ‘ಕೇಸರಿ’ ಮತ್ತು ‘ಮರಾಠ’ ಪತ್ರಿಕೆಗಳ ಮೂಲಕ ಗಣೇಶೋತ್ಸವದ ಕಲ್ಪನೆಯನ್ನು ದೇಶಾದ್ಯಂತ ಪಸರಿಸಿದರು.
”ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ” ಎಂದು ಘರ್ಜಿಸಿದ ತಿಲಕರು, ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡದೆ, ಅದನ್ನು ರಾಷ್ಟ್ರೀಯ ಜಾಗೃತಿಯ ಶಕ್ತಿಶಾಲಿ ಅಸ್ತ್ರವನ್ನಾಗಿ ಮಾಡಿದರು. ಇಂದು ದೇಶಾದ್ಯಂತ ವಿಜೃಂಭಣೆಯಿಂದ ನಡೆಯುವ ಸಾರ್ವಜನಿಕ ಗಣೇಶೋತ್ಸವವು ನಮ್ಮ ಸಾಂಸ್ಕೃತಿಕ ವೈಭವ ಮಾತ್ರವಲ್ಲದೆ, ದೇಶದ ಸ್ವಾತಂತ್ರ್ಯ ಹೋರಾಟದ ಮಹತ್ವದ ಸಂಕೇತವೂ ಆಗಿದೆ.
ಆದರೆ ಸ್ವಾತಂತ್ರ್ಯ ದೊರೆತು ದಶಕಗಳು ಕಳೆದ ಮೇಲೆಯೂ ಸಾಂಸ್ಕೃತಿಕ ಆಚರಣೆಗಳು ಮತ್ತು ಮೆರವಣಿಗೆಗಳ ವಿಷಯದಲ್ಲಿ ಹಲವು ರೀತಿಯ ಸವಾಲುಗಳು ಎದುರಾಗುತ್ತಿರುವುದು ವಿಪರ್ಯಾಸ. ಧಾರ್ಮಿಕ ಉತ್ಸವಗಳು ಹಾಗೂ ಮೆರವಣಿಗೆಗಳಿಗಾಗಿ ಸರ್ಕಾರದ ಅನುಮತಿ ಪಡೆಯುವುದು, ನಿಗದಿಪಡಿಸಿದ ಮಾರ್ಗಗಳಲ್ಲೇ ಸಾಗುವುದು ಮತ್ತು ಹಲವಾರು ಷರತ್ತುಗಳಿಗೆ ಒಳಪಡುವುದು ಇಂದಿನ ಸಾಮಾನ್ಯ ನಿಯಮಗಳಾಗಿವೆ.
ಇಂತಹ ಕಾನೂನು ಮತ್ತು ಆಡಳಿತಾತ್ಮಕ ನಿಯಮಗಳು ಕೇವಲ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗಿರದೆ, ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕಾದುದು ಪ್ರಜಾಪ್ರಭುತ್ವದ ಮೂಲ ತತ್ವ. ಆಚರಣೆಗಳು ಯಾವುದೇ ಇರಲಿ- ಸಾರ್ವಜನಿಕ ಶಾಂತಿ, ಭದ್ರತೆ ಮತ್ತು ಎಲ್ಲಾ ಸಮುದಾಯಗಳ ಹಕ್ಕುಗಳನ್ನು ಗೌರವಿಸುವ ರೀತಿಯಲ್ಲಿ ನಿಯಮಗಳು ನ್ಯಾಯಯುತವಾಗಿ ಕಾರ್ಯರೂಪಕ್ಕೆ ಬರಬೇಕಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುತ್ತಲೇ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಇಂದಿನ ಅಗತ್ಯವಾಗಿದೆ.ಆದರೆ ಬಹುಸಂಖ್ಯಾತ ಹಿಂದೂ ಸಮುದಾಯದ ಆಚರಣೆಗಳಿಗೆ ಬ್ರಿಟಿಷರು ಕೊಟ್ಟ ಅನುಮತಿಯನ್ನೂ ಈಗಿನ ವ್ಯವಸ್ಥೆ ಕೊಡುತ್ತಿಲ್ಲ ಎಂದರೆ, ನಾವು ಇರುವ ವ್ಯವಸ್ಥೆಯು ಬ್ರಿಟಿಷರ ಆಡಳಿತಕ್ಕಿಂತಲೂ ಕಡೆಗಣಿಸಲ್ಪಟ್ಟಂತಿದೆ. ಅನ್ಯಧರ್ಮದವರು ನಡೆಸುವ ಮೆರವಣಿಗೆಗಳು ದೇವಾಲಯ ಅಥವಾ ಹಿಂದೂಗಳ ಮನೆಗಳಿರುವ ರಸ್ತೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಸಾಗಬಹುದು. ಆದರೆ ಹಿಂದೂಗಳ ಮೆರವಣಿಗೆಗಳು ಮಾತ್ರ ಆಡಳಿತವು ನಿಗದಿಪಡಿಸುವ ನಿರ್ದಿಷ್ಟ ಜಾಗಗಳಲ್ಲೇ ಹೋಗಬೇಕು ಎಂಬುದು ಎಂಥಾ ವಿಪರ್ಯಾಸ! ಸ್ವಾತಂತ್ರ್ಯ ತಂದುಕೊಟ್ಟ ಗಣೇಶನ ಮೆರವಣಿಗೆಗೆ ಹಲವು ನಿರ್ಬಂಧಗಳಾದರೆ, ಇನ್ನೂಳಿದ ಹಿಂದೂ ಹಬ್ಬಗಳ ಆಚರಣೆಗೆ ಧಾರ್ಮಿಕ ಸ್ವಾತಂತ್ರ್ಯ ಎಲ್ಲಿದೆ?
ಅಗ್ನಿಹೋತ್ರಿ ಲೋಕೇಶ್ ಶರ್ಮಾ
ಲೇಖಕ ಹಾಗೂ ಪತ್ರಕರ್ತ
ಬೆಂಗಳೂರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
