ನವದೆಹಲಿ: ದೇಶದ ಆಂತರಿಕ ವಿಷಯಗಳ ಕುರಿತು ಕಾಮೆಂಟ್ ಮಾಡಲು ಇಸ್ಲಾಮಿಕ್ ಸಹಕಾರ ಸಂಘಟನೆಗೆ (OIC) ಯಾವುದೇ ಅಧಿಕಾರವಿಲ್ಲ ಎಂದು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ. OIC ಸಂಪರ್ಕ ಗುಂಪಿನ (Contact Group) ಜಂಟಿ ಹೇಳಿಕೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲೇಖ ಮಾಡಿದ್ದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ನ್ಯೂಯಾರ್ಕ್ನಲ್ಲಿ ನಡೆದ ವಿಶ್ವಸಂಸ್ಥೆಯ ಮಹಾಅಧಿವೇಶನದ (UNGA) ಅಂಚಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಈ ಹೇಳಿಕೆ ನೀಡಲಾಗಿತ್ತು.
57 ರಾಷ್ಟ್ರಗಳನ್ನು ಹೊಂದಿರುವ ಈ ಇಸ್ಲಾಮಿಕ್ ಒಕ್ಕೂಟ ಮತ್ತು ಪಾಕಿಸ್ತಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಾಜಕೀಯ ಪ್ರೇರಿತ ಅಪಪ್ರಚಾರವನ್ನು ನಿರಂತರವಾಗಿ ಬೆಂಬಲಿಸುವುದು ಸಂಘಟನೆಯ ವಿಶ್ವಾಸಾರ್ಹತೆಯನ್ನು ಗಂಭೀರವಾಗಿ ಕುಂದಿಸುತ್ತದೆ ಎಂದು ಎಚ್ಚರಿಸಿದೆ.
MEA ವಕ್ತಾರ ರಣ್ಧೀರ್ ಜೈಸ್ವಾಲ್ ಮಾತನಾಡಿ, “ಜಮ್ಮು ಮತ್ತು ಕಾಶ್ಮೀರದ ಕುರಿತು OIC ಸಂಪರ್ಕ ಗುಂಪಿನ ಜಂಟಿ ಹೇಳಿಕೆಯಲ್ಲಿ ಭಾರತದ ಬಗ್ಗೆ ನೀಡಿರುವ ಅನಗತ್ಯ ಮತ್ತು ವಾಸ್ತವಿಕವಾಗಿ ತಪ್ಪಾದ ಉಲ್ಲೇಖಗಳನ್ನು ಭಾರತವು ಸಂಪೂರ್ಣವಾಗಿ ತಿರಸ್ಕರಿಸುತ್ತದೆ” ಎಂದಿದ್ದಾರೆ.
ಅಪಪ್ರಚಾರಗಳಿಂದ ಭಾರತದ ಸಾರ್ವಭೌಮತ್ವ ಬದಲಾಯಿಸಲು ಸಾಧ್ಯವಿಲ್ಲ;
ಸಾರ್ವಭೌಮ ಪ್ರಾದೇಶಿಕ ಸಮಗ್ರತೆಯ ಕುರಿತು ನವದೆಹಲಿಯ ನಿಲುವನ್ನು ಪುನರುಚ್ಚರಿಸಿದ ಅಧಿಕೃತ ವಕ್ತಾರರು, “ಭಾರತದ ಸಂಪೂರ್ಣವಾಗಿ ಆಂತರಿಕ ವಿಷಯಗಳ ಕುರಿತು ಮಾತನಾಡುವ ಯಾವುದೇ ಅಧಿಕೃತ ಹಕ್ಕು OICಗೆ ಇಲ್ಲ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅಭಿಜ್ಯ ಮತ್ತು ಅವಿಭಾಜ್ಯ ಅಂಗಗಳಾಗಿವೆ. ರಾಜಕೀಯ ಪ್ರೇರಿತ ಅಪಪ್ರಚಾರವನ್ನು ಎಷ್ಟೇ ಬಾರಿ ಪುನರಾವರ್ತಿಸಿದರೂ ಈ ವಾಸ್ತವತೆಯನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಒತ್ತಿ ಹೇಳಿದರು.
ಇಂತಹ ನಿಲುವುಗಳನ್ನು ಬೆಂಬಲಿಸುವುದರಿಂದ ಜಾಗತಿಕ ವೇದಿಕೆಯಲ್ಲಿ ಆ ಸಂಘಟನೆಯ ಮೌಲ್ಯ ಕುಸಿಯುವ ಅಪಾಯವಿದೆ ಎಂದು ಸಚಿವಾಲಯ ಎಚ್ಚರಿಸಿದೆ. “ಇಂತಹ ಪ್ರೇರಿತ ನಿರೂಪಣೆಗಳನ್ನು ಪದೇ ಪದೇ ಬೆಂಬಲಿಸುವುದು OIC ಯ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು MEA ಹೇಳಿದೆ.
ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತ: ಭಾರತ ವಿರೋಧಿ ಅಭಿಯಾನ ನಡೆಸದಂತೆ OIC ಗೆ ಎಚ್ಚರಿಕೆ
ಒಕ್ಕೂಟದೊಳಗೆ ಇಸ್ಲಾಮಾಬಾದ್ನ ಪಾತ್ರವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡ ನವದೆಹಲಿ, OIC ತನ್ನ ವೇದಿಕೆಯನ್ನು ಭಾರತ ವಿರೋಧಿ ಅಭಿಯಾನಗಳಿಗೆ ಬಳಸಿಕೊಳ್ಳಲು ಬಿಡಬಾರದು ಮತ್ತು ಬದಲಿಗೆ ಈ ಪ್ರದೇಶದಲ್ಲಿ ಅಸ್ಥಿರತೆಗೆ ಮೂಲ ಕಾರಣವಾಗಿರುವ ಗಡಿಯಾಚೆಗಿನ ಭಯೋತ್ಪಾದನೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದೆ.
“ಪಾಕಿಸ್ತಾನದ ಕಪೋಲಕಲ್ಪಿತ ಮತ್ತು ಪ್ರೇರಿತ ಅಪಪ್ರಚಾರಕ್ಕೆ OIC ವೇದಿಕೆ ಕಲ್ಪಿಸುವ ಬದಲು, ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಪ್ರಾಯೋಜಿಸುವ ದಾಖಲೆಗಳನ್ನು ಹೊಂದಿರುವ ಪಾಕಿಸ್ತಾನಕ್ಕೆ ಬುದ್ಧಿಮಾತು ಹೇಳಬೇಕು. ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳಿಂದ ಉದ್ಭವಿಸುತ್ತಿರುವ ಭಯೋತ್ಪಾದನೆಯ ಬೆದರಿಕೆಯನ್ನು ತಡೆಯಲು ಪಾಕಿಸ್ತಾನವು ತನ್ನದೇ ದೇಶದ ಆಂತರಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವಂತೆ OIC ಸಲಹೆ ನೀಡುವುದು ಉತ್ತಮ” ಎಂದು MEA ತಿಳಿಸಿದೆ.
ಜಮ್ಮು-ಕಾಶ್ಮೀರ ಮತ್ತು ಲಡಾಖ್ ದೇಶದ ಅಭಿಜ್ಯ ಅಂಗಗಳಾಗಿವೆ ಎಂದು ಭಾರತ ನಿರಂತರವಾಗಿ ಪ್ರತಿಪಾದಿಸುತ್ತ ಬಂದಿದ್ದು, OIC ಯ ಎಲ್ಲಾ ಜಂಟಿ ಹೇಳಿಕೆಗಳು ಮತ್ತು ನಿರ್ಣಯಗಳನ್ನು ಭಾರತದ ಆಂತರಿಕ ವ್ಯವಹಾರಗಳಲ್ಲಿನ ಸ್ವೀಕಾರಾರ್ಹವಲ್ಲದ ಹಸ್ತಕ್ಷೇಪವೆಂದು ತಿರಸ್ಕರಿಸಿದೆ.
ಪಾಕಿಸ್ತಾನದ ವಕ್ತಾರನಂತೆ OIC ವರ್ತನೆ:
OIC ಸಂಪರ್ಕ ಗುಂಪು (ಪಾಕಿಸ್ತಾನ, ಅಜೆರ್ಬೈಜಾನ್, ಟರ್ಕಿ, ಸೌದಿ ಅರೇಬಿಯಾ ಮತ್ತು ನೈಜರ್) ಇಸ್ಲಾಮಾಬಾದ್ನ ಅಪಪ್ರಚಾರದ ಯಂತ್ರದಂತೆ ಬಹಿರಂಗವಾಗಿ ವರ್ತಿಸಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಡೆಗಣಿಸಿ, ಕಪೋಲಕಲ್ಪಿತ ನಿರೂಪಣೆಗಳನ್ನು ಈ ಗುಂಪು ಪುನರುಚ್ಛರಿಸಿದೆ. ಪಹಲ್ಗಾಮ್ನಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ದಾಳಿಯಲ್ಲಿ 26 ನಿರಪರಾಧಿಗಳು ಬಲಿಯಾದ ಘಟನೆಗೆ ತಕ್ಕ ಪ್ರತಿಕ್ರಿಯೆಯಾಗಿ ಭಾರತವು ಮೇ 2025 ರಲ್ಲಿ ಕೈಗೊಂಡ ಭಯೋತ್ಪಾದನಾ ನಿಗ್ರಹ ಮಿಲಿಟರಿ ಕಾರ್ಯಾಚರಣೆಯನ್ನು ಈ ಗುಂಪು ಖಂಡಿಸಿರುವುದು ಇದರ ಬಲಪಂಥೀಯ ಧೋರಣೆಯನ್ನು ತೋರಿಸುತ್ತದೆ.
ಪಾಕಿಸ್ತಾನದ ಅಧೀನದಲ್ಲಿರುವ ಜಮ್ಮು ಮತ್ತು ಕಾಶ್ಮೀರ (PoJK) ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನ್ನಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳು, ಕುಸಿದಿರುವ ಪ್ರವಾಸೋದ್ಯಮ ಮತ್ತು ದೀರ್ಘಕಾಲಿಕ ಸಂವಹನ ನಿರ್ಬಂಧಗಳಿಂದಾಗಿ ಅಲ್ಲಿನ ನಿವಾಸಿಗಳು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳು ತೀವ್ರ ಆರ್ಥಿಕ ಹಾಗೂ ಸಾಮಾಜಿಕ ಒತ್ತಡವನ್ನು ಎದುರಿಸುತ್ತಿದ್ದಾರೆ. ಪಾಕಿಸ್ತಾನಿ ಭದ್ರತಾ ಪಡೆಗಳು ಈ ಪ್ರತಿಭಟನೆಗಳನ್ನು ನಿರ್ದಾಕ್ಷಿಣ್ಯವಾಗಿ ದಮನ ಮಾಡುತ್ತಿದ್ದು, ಅಮಾಯಕ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲಲಾಗುತ್ತಿದೆ.
ಇಸ್ಲಾಮಾಬಾದ್ನ ಇಂತಹ ಕಠಿಣ ವಾಸ್ತವತೆಗಳು ಮತ್ತು ದೌರ್ಜನ್ಯಗಳನ್ನು ನಿರ್ಲಕ್ಷಿಸುತ್ತಿರುವ OIC, ಪಾಕಿಸ್ತಾನದ ಮುಖವಾಣಿಯಾಗಿ ವರ್ತಿಸುತ್ತಾ ಉಗ್ರ ರಾಷ್ಟ್ರದ ತರ್ಕಹೀನ ಅಪಪ್ರಚಾರವನ್ನು ಹರಡುತ್ತಿದೆ ಎಂದು ಭಾರತ ಟೀಕಿಸಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
