ಡಿಜಿಟಲ್ ಜಗತ್ತು ಎಂಬುದು ಹಿಂದೆ ನಾವು ಪ್ರವೇಶಿಸುತ್ತಿದ್ದ ಒಂದು ಹೊರಗಿನ ಪ್ರಪಂಚವಾಗಿತ್ತು. ಆದರೆ ಇಂದಿನ ‘ಜೆನ್ ಝೆಡ್’ (Gen Z) ಪೀಳಿಗೆಗೆ ಅದು ತಾವೇ ಜೀವಿಸುತ್ತಿರುವ ಬದುಕಿನ ಭಾಗವಾಗಿದೆ. ಒಂದು ಫೋಟೋ, ಒಂದು ಕಮೆಂಟ್, ಲಿಂಕ್ಡ್ಇನ್ (LinkedIn) ಪ್ರೊಫೈಲ್, ಗೇಮಿಂಗ್ ಯೂಸರ್ ನೇಮ್ ಅಥವಾ ವಾಟ್ಸಾಪ್ ಸ್ಟೇಟಸ್ ಸಹ ಜಗತ್ತು ಅವರನ್ನು ಹೇಗೆ ನೋಡುತ್ತದೆ ಎಂಬುದನ್ನು ನಿರ್ಧರಿಸುತ್ತದೆ; ಮತ್ತು ಕ್ರಮೇಣ ಅವರು ತಮ್ಮನ್ನು ತಾವೇ ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನೂ ಇದು ಪ್ರಭಾವಿಸುತ್ತಿದೆ. ಲೈಕ್ಸ್, ಫಾಲೋವರ್ಸ್ ಮತ್ತು ಎಚ್ಚರಿಕೆಯಿಂದ ಆಯ್ಕೆಮಾಡಿದ ಪೋಸ್ಟ್ಗಳ ತೆರೆಮರೆಯಲ್ಲಿ ಒಂದು ಗಂಭೀರ ಪ್ರಶ್ನೆ ಎದುರಾಗಿದೆ: ಯುವ ಜನತೆ ನಿಜವಾದ ಡಿಜಿಟಲ್ ವ್ಯಕ್ತಿತ್ವವನ್ನು ನಿರ್ಮಿಸುತ್ತಿದ್ದಾರೋ ಅಥವಾ ತಾವೇ ಇಂಟರ್ನೆಟ್ಗಾಗಿ ಸೃಷ್ಟಿಸಿಕೊಂಡ ಕೃತಕ ವ್ಯಕ್ತಿತ್ವದಂತೆ ನಿಧಾನವಾಗಿ ಬದಲಾಗುತ್ತಿದ್ದಾರೋ?
ಜೆನ್ ಝೆಡ್ ಪಾಲಿಗೆ ಡಿಜಿಟಲ್ ಜಗತ್ತು ಬೇರೆಯೇ ಆದ ಲೋಕವಲ್ಲ; ಅದು ಅವರ ದೈನಂದಿನ ಜೀವನದೊಂದಿಗೆ ಹಾಸಹೊಕ್ಕಾಗಿದೆ. ಸಾಮಾಜಿಕ ಜಾಲತಾಣಗಳು, ಆನ್ಲೈನ್ ಸಮುದಾಯಗಳು, ಗೇಮಿಂಗ್ ಪ್ಲಾಟ್ಫಾರ್ಮ್ಗಳು ಮತ್ತು ಡಿಜಿಟಲ್ ನೆಟ್ವರ್ಕ್ಗಳು ಯುವಕರು ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳಲು, ಸಂಬಂಧಗಳನ್ನು ಬೆಳೆಸಲು, ಹೊಸ ಅವಕಾಶಗಳನ್ನು ಕಂಡುಕೊಳ್ಳಲು ಮತ್ತು ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು ಇರುವ ಪ್ರಮುಖ ವೇದಿಕೆಗಳಾಗಿವೆ. ಹಲವು ವಿಧಗಳಲ್ಲಿ, ಯುವಕರೊಬ್ಬರ ಡಿಜಿಟಲ್ ವ್ಯಕ್ತಿತ್ವವು ಅವರು ಭೌತಿಕ ಜಗತ್ತಿನಲ್ಲಿ ಹೊಂದಿರುವ ವ್ಯಕ್ತಿತ್ವದ ಮುಂದುವರಿದ ಭಾಗವಾಗಿ ಮಾರ್ಪಟ್ಟಿದೆ.
ಇನ್ಸ್ಟಾಗ್ರಾಮ್ನಲ್ಲಿರುವ ಒಂದು ಫೋಟೋ, ಲಿಂಕ್ಡ್ಇನ್ನಲ್ಲಿರುವ ವೃತ್ತಿಪರ ಪ್ರೊಫೈಲ್, ಗೇಮಿಂಗ್ ಯೂಸರ್ ನೇಮ್, ಯೂಟ್ಯೂಬ್ನಲ್ಲಿನ ಕಾಮೆಂಟ್ ಅಥವಾ ವಾಟ್ಸಾಪ್ ಸ್ಟೇಟಸ್ ಸಹ ವ್ಯಕ್ತಿಯೊಬ್ಬರು ಯಾರೆಂಬುದನ್ನು— ಅಥವಾ ತಾವು ಇತರೆ ಜಗತ್ತಿಗೆ ಹೇಗಿರಬೇಕೆಂದು ಬಯಸುತ್ತಾರೋ ಅದನ್ನು— ವ್ಯಕ್ತಪಡಿಸುತ್ತವೆ. ಜೆನ್-ಝೆಡ್ ಪೀಳಿಗೆಯು ಯಾವ ವಿಷಯಗಳ ಹಿಂದೆ ಬಿದ್ದಿದೆ ಎಂಬುದನ್ನು ಒಮ್ಮೆ ಅವಲೋಕಿಸೋಣ:
- ನಾವು ಪ್ರದರ್ಶಿಸುವ ‘ಸ್ವಯಂ’ (The Self We Present)
ಯುವಕರು ಆನ್ಲೈನ್ನಲ್ಲಿ ಹಂಚಿಕೊಳ್ಳುವ ವಿಷಯಗಳನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಾರೆ. ಸೋಲುಗಳು ಮತ್ತು ಕಷ್ಟಗಳಿಗಿಂತ ಸಾಧನೆಗಳು, ಸಂಭ್ರಮಗಳು, ಪ್ರಯಾಣಗಳು ಮತ್ತು ಆಕರ್ಷಕ ಚಿತ್ರಗಳು ಸಹಜವಾಗಿಯೇ ಹೆಚ್ಚು ಗಮನ ಸೆಳೆಯುತ್ತವೆ. ವಿದ್ಯಾರ್ಥಿಯೊಬ್ಬರು ತಾವಿಟ್ಟ ಅನೇಕ ವಿಫಲ ಹೆಜ್ಜೆಗಳನ್ನು ಮರೆಮಾಚಿ, ತಾವು ಯಶಸ್ವಿಯಾದ ಪ್ರಾಜೆಕ್ಟ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸಬಹುದು. ಕ್ರಮೇಣ, ಈ ರೀತಿ ರೂಪಿಸಿಕೊಂಡ ಆನ್ಲೈನ್ ವ್ಯಕ್ತಿತ್ವವು ಆ ವ್ಯಕ್ತಿಯ ನೈಜ ಜೀವನದ ಸಂಪೂರ್ಣ ವಾಸ್ತವತೆಯಿಂದ ಸಂಪೂರ್ಣ ಭಿನ್ನವಾಗಬಹುದು. - ಅನೇಕ ವ್ಯಕ್ತಿತ್ವಗಳು, ಆದರೆ ಒಬ್ಬ ವ್ಯಕ್ತಿ (Many Identities, One Person)
ಜೆನ್ ಝೆಡ್ ಪೀಳಿಗೆಯು ವಿವಿಧ ಡಿಜಿಟಲ್ ಜಾಗಗಳ ನಡುವೆ ಬಹಳ ಸಲೀಸಾಗಿ ಸಂಚರಿಸುತ್ತದೆ. ಲಿಂಕ್ಡ್ಇನ್ ಅವರ ವೃತ್ತಿಪರ ಮುಖವನ್ನು ತೋರಿಸಿದರೆ, ಇನ್ಸ್ಟಾಗ್ರಾಮ್ ಅವರ ಸೃಜನಶೀಲ ಅಥವಾ ಸಾಮಾಜಿಕ ಬದುಕನ್ನು ಬಿಂಬಿಸುತ್ತದೆ; ಹಾಗೂ ಗೇಮಿಂಗ್ ಪ್ಲಾಟ್ಫಾರ್ಮ್ ಅವರ ಉತ್ಸಾಹಿ ಮುಖವನ್ನು ತೆರೆದಿಡುತ್ತದೆ. ಇವು ಕೃತಕ ವ್ಯಕ್ತಿತ್ವಗಳಲ್ಲ, ಬದಲಿಗೆ ಒಂದೇ ವ್ಯಕ್ತಿಯ ಬೇರೆ ಬೇರೆ ಮುಖಗಳು ಅಷ್ಟೆ. - ಶಾಶ್ವತವಾದ ಡಿಜಿಟಲ್ ಹೆಜ್ಜೆಗುರುತು (The Permanent Digital Footprint)
ಇಂಟರ್ನೆಟ್ಗೆ ನೆನಪಿನ ಶಕ್ತಿ ಬಹಳ ಹೆಚ್ಚು. ಹದಿನೇಳನೇ ವಯಸ್ಸಿನಲ್ಲಿ ಮಾಡಿದ ಯೋಚನೆಯಿಲ್ಲದ ಕಾಮೆಂಟ್, ಫೋಟೋ ಅಥವಾ ವೀಡಿಯೊ ಹಲವು ವರ್ಷಗಳ ನಂತರ ಕಾಲೇಜು ಪ್ರವೇಶದ ಸಂದರ್ಭದಲ್ಲೋ, ಉದ್ಯೋಗದಾತರ ಮುಂದೆಯೋ ಅಥವಾ ವೃತ್ತಿಪರ ವಲಯದಲ್ಲೋ ಮತ್ತೆ ಮುನ್ನೆಲೆಗೆ ಬರಬಹುದು. ಹೀಗಾಗಿ, “ಯಾವುದೇ ಪೋಸ್ಟ್ ಮಾಡುವ ಮೊದಲು ಯೋಚಿಸಿ” ಎನ್ನುವ ಸರಳ ನುಡಿ ದಿನದಿಂದ ದಿನಕ್ಕೆ ಹೆಚ್ಚು ಪ್ರಸ್ತುತವಾಗುತ್ತಿದೆ. - ಮಾನ್ಯತೆಗಾಗಿ ಹುಡುಕಾಟ (The Search for Validation)
ಲೈಕ್ಸ್, ವ್ಯೂಸ್, ಶೇರ್ಸ್ ಮತ್ತು ಫಾಲೋವರ್ಸ್ ತಕ್ಷಣದ ಪ್ರತಿಕ್ರಿಯೆಯನ್ನು ನೀಡುತ್ತವೆ. ಒಂದು ವೈರಲ್ ಪೋಸ್ಟ್ ಅತಿಯಾದ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ನೀಡಿದರೆ, ನಿರ್ಲಕ್ಷ್ಯಕ್ಕೊಳಗಾದ ಪೋಸ್ಟ್ ನಿರಾಶೆಯನ್ನು ಮೂಡಿಸುತ್ತದೆ. ಆದರೆ ಜನಪ್ರಿಯತೆ ಎನ್ನುವುದು ವ್ಯಕ್ತಿಯ ಅರ್ಹತೆಯಲ್ಲ. ಯಾವುದೇ ಅಲ್ಗಾರಿದಮ್ ಮೂಲಕ ವ್ಯಕ್ತಿಯ ನಿಜವಾದ ಮೌಲ್ಯವನ್ನು ಅಳೆಯಲು ಸಾಧ್ಯವಿಲ್ಲ. - ಪ್ರಭಾವಿಗಳು ಮತ್ತು ಆಕಾಂಕ್ಷಿಗಳು (Influencers and Aspirations)
ಯುವಕರು ಯಾರನ್ನು ಮೆಚ್ಚಬೇಕು, ಯಾವುದನ್ನು ಖರೀದಿಸಬೇಕು ಮತ್ತು ಭವಿಷ್ಯದಲ್ಲಿ ಏನಾಗಬೇಕೆಂದುಕೊಳ್ಳಬೇಕು ಎಂಬುದನ್ನು ಇಂದಿನ ಪ್ರಭಾವಿಗಳು (Influencers) ನಿರ್ಧರಿಸುತ್ತಿದ್ದಾರೆ. ಕೋಡಿಂಗ್ ವಿಷಯಗಳಿಗೆ ಒಡ್ಡಿಕೊಳ್ಳುವ ವಿದ್ಯಾರ್ಥಿಯೊಬ್ಬರು ಪ್ರೋಗ್ರಾಮಿಂಗ್ ಕಲಿಯಲು ಪ್ರೇರೇಪಿತರಾಗಬಹುದು; ಮತ್ತೊಬ್ಬರು ಫಿಟ್ನೆಸ್, ಕಲೆ ಅಥವಾ ಉದ್ಯಮಶೀಲತೆಯಿಂದ ಸ್ಫೂರ್ತಿ ಪಡೆಯಬಹುದು. ಯುವಕರು ಸ್ವತಂತ್ರವಾಗಿ ಯೋಚಿಸಲು, ಪ್ರಶ್ನಿಸಲು ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕಲಿತರೆ ಈ ಪ್ರಭಾವಗಳು ಸಕಾರಾತ್ಮಕವಾಗಿರುತ್ತವೆ. - ಗಡಿಗಳಿಲ್ಲದ ಸಮುದಾಯಗಳು (Communities Without Borders)
ಡಿಜಿಟಲ್ ಜಗತ್ತು ಪರಸ್ಪರ ಬೆಸೆಯಲು ಅದ್ಭುತ ಅವಕಾಶಗಳನ್ನು ಸೃಷ್ಟಿಸುತ್ತದೆ. ಸಂಸ್ಕೃತ, ರೋಬೋಟಿಕ್ಸ್, ಶಾಸ್ತ್ರೀಯ ಸಂಗೀತ ಅಥವಾ ಪರಿಸರ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಯಾರೇ ಆಗಲಿ, ಭೌತಿಕ ಗಡಿಗಳನ್ನು ಮೀರಿ ಸಮಾನ ಮನಸ್ಕರನ್ನು ಕಂಡುಕೊಳ್ಳಬಹುದು. ಇಲ್ಲದಿದ್ದರೆ ಎಂದಿಗೂ ಭೇಟಿಯಾಗದಂಥ ವ್ಯಕ್ತಿಗಳನ್ನು ತಂತ್ರಜ್ಞಾನವು ಇಂದು ಒಂದುಗೂಡಿಸುತ್ತಿದೆ. - ಅಭಿವೃದ್ಧಿಯಿಂದ ಸಕ್ರಿಯ ಹೋರಾಟದವರೆಗೆ (From Expression to Activism)
ಸಾಮಾಜಿಕ ಜಾಲತಾಣಗಳು ಜೆನ್ ಝೆಡ್ಗೆ ಪ್ರಬಲ ದ್ವನಿಯಾಗಿ ಪರಿಣಮಿಸಿವೆ. ಯುವಕರು ಜಾಗೃತಿ ಮೂಡಿಸಲು, ಅಭಿಯಾನಗಳನ್ನು ಸಂಘಟಿಸಲು, ನಿಧಿ ಸಂಗ್ರಹಿಸಲು ಮತ್ತು ಸಾಮಾಜಿಕ ಸಮಸ್ಯೆಗಳತ್ತ ಗಮನ ಸೆಳೆಯಲು ಇದನ್ನು ಬಳಸುತ್ತಿದ್ದಾರೆ. ಉದಾಹರಣೆಗೆ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಮಾಡಿದ ಒಂದು ಸರಳ ಆನ್ಲೈನ್ ಅಭಿಯಾನವು ಭೌತಿಕ ಸಮುದಾಯದಲ್ಲೂ ಬದಲಾವಣೆಗೆ ಸ್ಪೂರ್ತಿ ನೀಡಬಲ್ಲದು. - ಡಿಜಿಟಲ್ ಜನಸಂದಣಿಯ ಅಪಾಯ (The Danger of the Digital Crowd)
ಇದೇ ಸಂಪರ್ಕವು ಸುಳ್ಳುಸುದ್ದಿಗಳು, ಹಿಂಡಿನ ಮನೋಭಾವ (herd behaviour), ಟ್ರೋಲಿಂಗ್ ಮತ್ತು ಆನ್ಲೈನ್ ಆಕ್ರೋಶಗಳಿಗೂ ದಾರಿ ಮಾಡಿಕೊಡಬಹುದು. ಎಲ್ಲರೂ ಹಂಚಿಕೊಳ್ಳುತ್ತಿದ್ದಾರೆಂಬ ಕಾರಣಕ್ಕೆ ಒಬ್ಬ ವ್ಯಕ್ತಿಯು ಯಾವುದೇ ಪರಿಶೀಲನೆ ಇಲ್ಲದೆ ಅತಿರೇಕದ ಸುದ್ದಿಯನ್ನು ಹಂಚಿಕೊಳ್ಳಬಹುದು. ಸತ್ಯಾಸತ್ಯತೆ ಪರಿಶೀಲನೆಗಿಂತ ಭಾವನೆಗಳು ವೇಗವಾಗಿ ಹರಡಿದಾಗ, ಭಿನ್ನಾಭಿಪ್ರಾಯಗಳು ಕ್ಷಣಾರ್ಧದಲ್ಲಿ ತೀವ್ರ ಖಂಡನೆಗೆ ತಿರುಗುತ್ತವೆ. ಇದುವೇ ‘ಕ್ಯಾನ್ಸಲ್ ಕಲ್ಚರ್’ (cancel culture) ಹುಟ್ಟಿಕೊಳ್ಳುವ ವಾತಾವರಣ. - ಅಸಲಿಯತ್ತಿನ ಪ್ರಶ್ನೆ (The Question of Authenticity)
ಜೆನ್ ಝೆಡ್ ಪೀಳಿಗೆಯು ಡಿಜಿಟಲ್ ಗುರುತನ್ನು ಹೊಂದಬೇಕೆ ಅಥವಾ ಬೇಡವೇ ಎಂಬುದು ಇಲ್ಲಿರುವ ನಿಜವಾದ ಸವಾಲಲ್ಲ— ಅವರು ಖಂಡಿತವಾಗಿಯೂ ಅದನ್ನು ಹೊಂದಿರುತ್ತಾರೆ. ಆದರೆ ಇಲ್ಲಿರುವ ಆಳವಾದ ಪ್ರಶ್ನೆಯೆಂದರೆ: ಆ ವ್ಯಕ್ತಿತ್ವವು ಜವಾಬ್ದಾರಿ, ಅಸಲಿಯತ್ತು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆಯೇ?
ಡಿಜಿಟಲ್ ಜಗತ್ತು ನಮ್ಮ ಅತ್ಯುತ್ತಮ ಗುಣಗಳನ್ನು ಪ್ರತಿಬಿಂಬಿಸುವ ಕನ್ನಡಿಯಾಗಬಹುದು ಅಥವಾ ಅವುಗಳನ್ನು ಮರೆಮಾಚುವ ಮುಖವಾಡವೂ ಆಗಬಹುದು. ಜೆನ್ ಝೆಡ್ನ ಡಿಜಿಟಲ್ ಗುರುತು ಅವಕಾಶ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದೆ. ತಂತ್ರಜ್ಞಾನವು ಆತ್ಮಾವಲೋಕನಕ್ಕೆ, ಸಮುದಾಯ ನಿರ್ಮಾಣಕ್ಕೆ ಮತ್ತು ಜ್ಞಾನಾರ್ಜನೆಗೆ ವೇದಿಕೆ ಕಲ್ಪಿಸುತ್ತದೆ ನಿಜ, ಆದರೆ ಅದೇ ಸಮಯದಲ್ಲಿ ಇದು ವಿಮರ್ಶಾತ್ಮಕ ಚಿಂತನೆ, ಗೌಪ್ಯತೆ, ಸಹಾನುಭೂತಿ ಮತ್ತು ಸಂಯಮವನ್ನು ಬೇಡುತ್ತದೆ.
ನಿಮ್ಮನ್ನು ಕಳೆದುಕೊಳ್ಳಲು ತಂತ್ರಜ್ಞಾನವನ್ನು ಬಳಸಬೇಡಿ, ಬದಲಿಗೆ ನಿಮ್ಮನ್ನು ನೀವು ಅಭಿವೃದ್ಧಿಪಡಿಸಿಕೊಳ್ಳಲು ಬಳಸಿ.
ಆರೋಗ್ಯಕರ ಡಿಜಿಟಲ್ ವ್ಯಕ್ತಿತ್ವ = ಅಸಲಿಯತ್ತು + ವಿಮರ್ಶಾತ್ಮಕ ಚಿಂತನೆ + ಗೌಪ್ಯತೆ + ಜವಾಬ್ದಾರಿ + ಸಹಾನುಭೂತಿ + ಡಿಜಿಟಲ್ ಶಿಸ್ತು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
