ಬೆಂಗಳೂರು: “ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಧ್ಯಕ್ಷ, ನಾಯಕ ಅಶೋಕ್ ಸಿಂಘಾಲ್ ಅವರು ತಮ್ಮ ಜೀವನಪೂರ್ತಿ ಬ್ರಹ್ಮಚಾರಿಯಾಗಿ, ಸಂನ್ಯಾಸಿಯಂತೆ ಬದುಕಿದ ಯೋಗಿ ಹಾಗೂ ರಾಮಜನ್ಮಭೂಮಿ ಹೋರಾಟಕ್ಕೆ ದಿಟ್ಟ ನೇತೃತ್ವ ನೀಡಿದ ಅಪರೂಪದ ವೀರ ಯೋಧ. ಪ್ರಚಂಡ ಆತ್ಮವಿಶ್ವಾಸ ಮತ್ತು ಧೈರ್ಯವೇ ಅವರ ಯಶಸ್ಸಿನ ಮೂಲ” ಎಂದು ಆರ್ಎಸ್ಎಸ್ ಅಖಿಲ ಭಾರತ ಸಹ ಬೌದ್ಧಿಕ್ ಪ್ರಮುಖ್ ಶ್ರೀ ಸುಧೀರ್ಜಿ ಬಣ್ಣಿಸಿದರು.
ಜಯನಗರದ ಎನ್ಎಂಕೆ ಆರ್ ವಿ ಕಾಲೇಜಿನ ಮಂಗಳ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅಶೋಕ್ ಸಿಂಘಾಲ್ ಅವರ ಜನ್ಮ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸಿಂಘಾಲ್ ಅವರ ಸುದೀರ್ಘ ಸಂಘಟನಾತ್ಮಕ ಜೀವನ, ತ್ಯಾಗ ಹಾಗೂ ಶ್ರೀ ರಾಮಜನ್ಮಭೂಮಿ ಮುಕ್ತಿ ಆಂದೋಲನಕ್ಕೆ ಅವರು ನೀಡಿದ ಕೊಡುಗೆಯನ್ನು ಅತ್ಯಂತ ಭಾವಪೂರ್ಣವಾಗಿ ಸ್ಮರಿಸಿದರು.

ಯೋಗಿ ಮತ್ತು ಯೋಧನ ವ್ಯಕ್ತಿತ್ವ: ಸನ್ಯಾಸಿಯಂತೆ ವೈಯಕ್ತಿಕ ಸುಖ-ಸೌಲಭ್ಯಗಳನ್ನು, ಅಗಾಧ ಆಸ್ತಿ-ಪಾಸ್ತಿಯನ್ನು ತ್ಯಜಿಸಿ ಪ್ರಚಾರಕರಾಗಿ ಹೊರಟ ಅಶೋಕ್ ಸಿಂಘಾಲ್ ಜಿ, ಯಾವುದೇ ವಿರೋಧಕ್ಕೂ ಜಗ್ಗದೆ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಿದ ಧೀರ ಯೋಧರಾಗಿದ್ದರು. ಸಂಸ್ಕೃತ ಸುಭಾಷಿತದಂತೆ ಸೂರ್ಯಮಂಡಲವನ್ನು ಭೇದಿಸುವ ಅತ್ಯುನ್ನತ ಸ್ಥಾನಕ್ಕೆ ಅವರು ಅರ್ಹರಾಗಿದ್ದಾರೆ.
ಆಂದೋಲನದ ಇತಿಹಾಸ: ಸುಮಾರು 30 ವರ್ಷಗಳ ಕಾಲ ವಿಶ್ವ ಹಿಂದೂ ಪರಿಷತ್ತಿನ ಚುಕ್ಕಾಣಿ ಹಿಡಿದಿದ್ದ ಸಿಂಘಾಲ್ ಜಿ, ಜಗತ್ತಿನ 40ಕ್ಕೂ ಹೆಚ್ಚು ದೇಶಗಳಲ್ಲಿ ಸಂಘಟನೆಯನ್ನು ವಿಸ್ತರಿಸಿದರು. ಇತಿಹಾಸ ಕಾಣದ ಜಗತ್ತಿನ ಅತಿ ದೊಡ್ಡ ಶ್ರೀ ರಾಮಜನ್ಮಭೂಮಿ ಆಂದೋಲನವನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಸಮರ್ಥವಾಗಿ ಮುನ್ನಡೆಸಿ, ಲಕ್ಷಾಂತರ ಕಾರ್ಯಕರ್ತರನ್ನು ಹಾಗೂ ಸಾಧು-ಸಂತರನ್ನು ಒಂದೇ ವೇದಿಕೆಗೆ ತಂದರು.
’ಮಂದಿರ್ ವಹೀ ಬನಾಯೆಂಗೆ’ ಉದ್ಘೋಷ: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜಾಗೃತಿ ಮೂಡಿಸಿದ ‘ವಂದೇ ಮಾತರಂ’ ಜಯಘೋಷದಷ್ಟೇ ಶಕ್ತಿಶಾಲಿ ಮತ್ತು ರಾಷ್ಟ್ರ ಜೀವನಕ್ಕೆ ತಿರುವು ನೀಡಿದ ಉದ್ಘೋಷ ‘ಮಂದಿರ್ ವಹೀ ಬನಾಯೆಂಗೆ’ ಆಗಿತ್ತು.
ಪ್ರಚಂಡ ಆತ್ಮವಿಶ್ವಾಸ: ಮಂದಿರ ನಿರ್ಮಾಣದ ಯಾವುದೇ ಲಕ್ಷಣಗಳಿಲ್ಲದಿದ್ದಾಗಲೂ, ಭವಿಷ್ಯದ ದೃಷ್ಟಿಯಿಂದ ಕಲ್ಲುಗಳನ್ನು ಕೆತ್ತಿಸುವುದು, ಜಮೀನು ಹಾಗೂ ಪರಿಕರಗಳನ್ನು ಕಾಯ್ದಿರಿಸುವ ಕೆಲಸವನ್ನು ಸಿಂಘಾಲ್ ಜಿ ಪ್ರಾರಂಭಿಸಿದ್ದರು. ಆರಂಭದಲ್ಲಿ ಇದು ಹುಚ್ಚುತನ ಎನಿಸಿದರೂ, ಅವರ ಈ ಪ್ರಚಂಡ ಆತ್ಮವಿಶ್ವಾಸವೇ ಕೊನೆಗೆ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿತು.
ಪ್ರಾಣಪ್ರತಿಷ್ಠಾಪನೆ ವೇಳೆ ಸ್ಮರಣೆ: ಭವ್ಯ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಪೂಜ್ಯ ಮೋಹನ್ ಭಾಗವತ್ ಅವರು ಅಶೋಕ್ ಸಿಂಘಾಲ್ ಜಿ ಅವರ ತ್ಯಾಗವನ್ನು ಭಾವುಕರಾಗಿ ಸ್ಮರಿಸಿದ್ದನ್ನು ಸುಧೀರ್ಜಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೇಲಿಮಠ ಮಹಾ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಪೂಜ್ಯ ಚರಮೂರ್ತಿ ಶಿವರುದ್ರ ಸ್ವಾಮಿಗಳು, ಚಿತ್ರದುರ್ಗದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಗಳು, ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಉಪಾಧ್ಯಕ್ಷರಾದ ಶ್ರೀ ಚಂಪತ್ ರಾಯ್, ಗೌಹಾಟಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಶ್ರೀಧರ್ ರಾವ್, ಪ್ರಮುಖ ನಾಯಕರು, ಸಂಘಟನೆಯ ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಸಜ್ಜನ ಬಂಧುಗಳು ಭಾಗವಹಿಸಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
