ನವೆಂಬರ್ 1 ಕರ್ನಾಟಕದಾದ್ಯಂತ ಕೆಂಪು, ಹಳದಿ ಬಣ್ಣಗಳು ಕಂಗೊಳಿಸುವ ದಿನ. ಗೌರಿ, ಗಣೇಶ ಹಬ್ಬದ ನಂತರ ಬೀದಿ ಬೀದಿಗಳಲ್ಲಿ ರಂಗು ರಂಗಿನ ಬಾವುಟಗಳು ಹಾರಾಡುವ ದಿನ. ಎಲ್ಲೆಲ್ಲಿಯೂ ಕನ್ನಡ ಗೀತೆಗಳು ಮೊಳಗುವ ದಿನ. ಶಾಲಾ ಕಾಲೇಜು, ಕಚೇರಿ, ಸಂಘ – ಸಂಸ್ಥೆಗಳಲ್ಲಿ ನಾಡು ನುಡಿಯ ಗುಣಗಾನ ನಡೆಯುವ ದಿನ. ಕನ್ನಡಿಗರ ಮನದಲ್ಲಿ ನಾಡಿನ ಬಗೆಗಿನ ಅಭಿಮಾನ ಉಕ್ಕುವ ದಿನ. ಆದರೆ ಈ ಸಂಭ್ರಮ ಕನ್ನಡ ನಾಡು ತನ್ನನ್ನು ತಾನು ವಿಮರ್ಶಿಸಿಕೊಳ್ಳುವ, ತನ್ನ ಸಾಧನೆಗಳನ್ನು ಅಳೆಯುವ, ಭವಿಷ್ಯದ ದಾರಿಯನ್ನು ನಿರ್ಧರಿಸುವ ಮಹತ್ವದ ದಿನದ ಆಚರಣೆ ಇದಾಗದೆ ಕೇವಲ ಹಬ್ಬದ ಆಚರಣೆಗೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ. ಕರ್ನಾಟಕ ರಾಜ್ಯೋತ್ಸವದ ನಿಜವಾದ ಅರ್ಥ ಅದರ ಗತ ವೈಭವವನ್ನು ಕೊಂಡಾಡುವುದಕ್ಕೆ ಮಾತ್ರ ಸೀಮಿತವಾಗಬಾರದು. ವರ್ತಮಾನದ ಕೊರತೆಗಳನ್ನು ಗುರುತಿಸುವ, ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯ ಅರಿವು ಮೂಡಿಸುವ ಹಬ್ಬ ಇದಾಗಬೇಕು.
ಕನ್ನಡದ, ಕರ್ನಾಟಕದ ಇತಿಹಾಸ ಎಂದರೆ ಅದು ಕೇವಲ ಸಾಹಿತ್ಯದ ಇತಿಹಾಸ ಮಾತ್ರವಲ್ಲ. ಅದು ಎರಡು ಸಾವಿರ ವರುಷ ಇತಿಹಾಸವಿರುವ ಭಾಷೆಯ ಇತಿಹಾಸ. ಅದು ಸಮಾಜದ ಚಿಂತನೆ, ಆಡಳಿತ, ವ್ಯಾಪಾರ, ಧರ್ಮ, ತತ್ವಜ್ಞಾನ, ಜನಜೀವನ ಶೈಲಿ, ವಿಕಾಸದ ಇತಿಹಾಸ. ಕನ್ನಡದ ಮೊದಲ ಶಾಸನ ಹಲ್ಮಿಡಿಯಿಂದ ಪ್ರಾರಂಭಿಸಿ ವಿವಿಧ ಕಾಲಘಟ್ಟಗಳ ಶಾಸನಗಳು, ಕನ್ನಡ ಭಾಷೆಯ ಬೆಳವಣಿಗೆಯನ್ನೂ ಅಂದಿನ ಸಮಾಜದ ಬದುಕನ್ನೂ ಪರಿಚಯಿಸುತ್ತವೆ. ಕವಿರಾಜಮಾರ್ಗವು ಕನ್ನಡದ ಸಾಹಿತ್ಯಕ ಪ್ರೌಢಿಮೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಕರ್ನಾಟಕದಲ್ಲಿ ಕದಂಬರ ಆಳ್ವಿಕೆಯಿಂದ ಪ್ರಾರಂಭಿಸಿ, ಕೆಳದಿ ಮೈಸೂರು ಅರಸರ ಆಡಳಿತದವರೆಗೆ ಹರಡಿರುವ ಇತಿಹಾಸ. ಪಂಪ, ರನ್ನ, ಪೊನ್ನರಂತಹ ಮಹಾಕವಿಗಳಿಂದ ಹಿಡಿದು ವಚನಕಾರರು, ದಾಸಸಾಹಿತಿಗಳು, ಸರ್ವಜ್ಞ, ಕುಮರವ್ಯಾಸ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ಮೊದಲಾದವರು ಬೆಳೆಸಿದ ಸಾಹಿತ್ಯಕ ಇತಿಹಾಸ. ಬಿ.ಎಲ್. ರೈಸ್, ಆರ್. ನರಸಿಂಹಾಚಾರ್ ಮೊದಲಾದ ಮಹನೀಯರು ದಾಖಲಿಸಿದ ಶಾಸನಗಳ, ಸ್ಮಾರಕಗಳ ಇತಿಹಾಸ. ಆಧುನಿಕ ಕನ್ನಡ ಸಾಹಿತಿಗಳನ್ನೊಳಗೊಂಡು ಇಂದಿನ ಕೃತಕ ಬುದ್ಧಿಮತ್ತೆಯವರೆಗೆ ಬೆಳೆದುಬಂದ ಇತಿಹಾಸ.
ವಚನ ಸಾಹಿತ್ಯವು ಜಾತಿ, ಕಾಯಕ, ದಾಸೋಹ ಮತ್ತು ಮಾನವ ಘನತೆಯ ಕುರಿತು ಎತ್ತಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತವಾಗಿವೆ. ದಾಸಸಾಹಿತ್ಯವು ಭಕ್ತಿ ಮತ್ತು ನೈತಿಕ ಬದುಕಿನ ಮಹತ್ವವನ್ನು ಸಾರಿದೆ. ಆಧುನಿಕ ಕನ್ನಡ ಸಾಹಿತ್ಯವು ಸಾಮಾಜಿಕ ಅಸಮಾನತೆ, ಮಹಿಳಾ ಸ್ವಾತಂತ್ರ್ಯ, ದಲಿತ ಬದುಕು, ರೈತರ ಸಂಕಟ, ನಗರೀಕರಣ ಮತ್ತು ಮನುಷ್ಯನ ಅಂತರಂಗದ ತಲ್ಲಣಗಳನ್ನು ಅಭಿವ್ಯಕ್ತಿಸಿವೆ. ಇಂತಹ ವಚನಗಳನ್ನು ಓದುವ, ಸಮಾರಂಭಗಳಲ್ಲಿ ಅದನ್ನು ಉಲ್ಲೇಖಿಸುವ, ಕುವೆಂಪು ನೀಡಿದ ವಿಶ್ವಮಾನವ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ, ಬಸವಣ್ಣನವರ ಸಮಾನತೆಯ ತತ್ವವನ್ನು ಸಾಮಾಜಿಕ ಸಂಬಂಧಗಳಲ್ಲಿ ಪಾಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಅದು ಕರ್ನಾಟಕದ ಸಾಂಸ್ಕೃತಿಕ ಮಹತ್ವವನ್ನು ನಿಂತ ನೀರಾಗಿಸದೆ ಹರಿವ ನದಿಯಾಗಿ, ಭಾರತೀಯ ಇತಿಹಾಸ, ಸಂಸ್ಕೃತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತ ಬಂದಿದೆ. ಈ ಶ್ರೀಮಂತ ಇತಿಹಾಸ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ನಮ್ಮ ವರ್ತಮಾನದ ಬದುಕಿನಲ್ಲಿ ಎಂದೂ ಜೀವಂತವಾಗಿ ಉಳಿಸುವ ಕೆಲಸ ಆಗಬೇಕಿದೆ. ಇಂತಹ ಪ್ರಶ್ನೆಗಳು ರಾಜ್ಯೋತ್ಸವದ ವೇದಿಕೆಯಲ್ಲಿ ಕೇಳಿಬರುವಂತಾಗಬೇಕಾಗಿದೆ. ಪರಂಪರೆಯ ಕುರಿತು ಹೆಮ್ಮೆ ಪಡುವುದಕ್ಕಿಂತಲೂ ಪರಂಪರೆಯಲ್ಲಿ ಇರುವ ಮೌಲ್ಯವನ್ನು ವರ್ತಮಾನದಲ್ಲಿ ಅನುಷ್ಠಾನಗೊಳಿಸುವ ಕೆಲಸ ಆಗಬೇಕಿದೆ.
ಕನ್ನಡದ ದೇವತೆ ಭುವನೇಶ್ವರಿಯ ಮೊದಲ ದೇವಾಲಯ ನಮಗೆ ನೋಡಲು ಸಿಗುವುದು ಉತ್ತರಕನ್ನಡ ಜಿಲ್ಲೆಯ ಭುವನಗಿರಿಯಲ್ಲಿ. ಇದು ಸಿದ್ಧಾಪುರ ಸಮೀಪದಲ್ಲಿ. ಅಂತೆಯೇ ಕನ್ನಡದ ಜ್ಯೋತಿಯನ್ನು ಮೊದಲು ವಿಜಯನಗರದಿಂದ ತರಲಾಗುತ್ತಿತ್ತು. ಇಂದು ಕೆಳದಿ ದೇವಾಲಯದಿಂದ ತರುವುದು ರೂಢಿಯಲ್ಲಿದೆ.
೧೯೫೬ರ ನವೆಂಬರ್ ಒಂದು ಭಾಷಾವಾರು ರಾಜ್ಯಗಳ ಪುನರ್ ರಚನೆಯ ಸಂದರ್ಭದಲ್ಲಿ ಕನ್ನಡ ಮಾತನಾಡುವ ಪ್ರಮುಖ ಪ್ರದೇಶಗಳು ಒಂದೇ ಆಡಳಿತಾತ್ಮಕ ಘಟಕದ ಅಡಿಯಲ್ಲಿ ತಂದಂತಹ ದಿನ. ಆಗ ರೂಪುಗೊಂಡ ರಾಜ್ಯ ಮೈಸೂರು ರಾಜ್ಯ. ೧೯೭೩ ನವೆಂಬರ್ ಒಂದರಂದು ಅಂದಿನ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರಿಂದ ಇದು ‘ಕರ್ನಾಟಕ’ ರಾಜ್ಯವೆಂದು ಹೆಸರು ಪಡೆದು, ವಿಶಾಲವಾದ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿಕೊಂಡು ಬರುತ್ತಿದೆ.
ಏಕೀಕರಣದ ಹಿಂದೆ ಅನೇಕ ಹೋರಾಟಗಾರರ ತ್ಯಾಗ, ಸಾಹಿತಿಗಳ ಚಿಂತನೆ, ಪತ್ರಕರ್ತರ ಅಂಕಣ ಬರಹಗಳು, ಸಾರ್ವಜನಿಕರ ಹೋರಾಟ ಮತ್ತು ಕನ್ನಡಪರ ಸಂಘಟನೆಗಳ ನಿರಂತರ ಪರಿಶ್ರಮವಿದೆ. ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಮಹನೀಯರ ಕನ್ನಡಿಗರ ಭೌಗೋಳಿಕ ಮತ್ತು ಸಾಂಸ್ಕೃತಿಕ ಏಕತೆಯ ಕನಸನ್ನು ನಮ್ಮ ಮನದಲ್ಲಿ ಬಿತ್ತಿದರು. ವಿವಿಧ ಆಡಳಿತಗಳ ಅಡಿಯಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದುಗೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಪ್ರಾಂತ್ಯದಲ್ಲಿದ್ದ ಕನ್ನಡ ಪ್ರದೇಶಗಳು, ಕೊಡಗು ಮತ್ತು ಹಳೆಯ ಮೈಸೂರು ಸಂಸ್ಥಾನದ ಭಾಗಗಳು ಒಂದೇ ರಾಜ್ಯದ ಪರಿಕಲ್ಪನೆಯೊಳಗೆ ಬಂದಾಗ, ಕರ್ನಾಟಕದ ಭೌಗೋಳಿಕ ನಕ್ಷೆ ಮಾತ್ರ ಬದಲಾಗಲಿಲ್ಲ. ಕನ್ನಡಿಗರ ಸಾಮೂಹಿಕ ಗುರುತಿಗೂ ಇದು ಹೊಸ ರೂಪವನ್ನು ತಂದುಕೊಟ್ಟಿತು. ಆದರೆ ಭೌಗೋಳಿಕ ಏಕೀಕರಣದೊಂದಿಗೆ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮಾನತೆ ಸಂಪೂರ್ಣವಾಗಿ ಸಾಧಿತವಾಗಿದೆಯೇ ಎಂಬ ಪ್ರಶ್ನೆ ಇಂದಿಗೂ ಪ್ರಸ್ತುತವೆನಿಸಿದೆ. ರಾಜ್ಯದ ಎಲ್ಲ ಪ್ರದೇಶಗಳಿಗೂ ಸಮಾನ ಅವಕಾಶ, ಗುಣಮಟ್ಟದ ಶಿಕ್ಷಣ, ಉದ್ಯೋಗ, ಆರೋಗ್ಯಸೇವೆ ಮತ್ತು ಮೂಲ ಸೌಕರ್ಯ ದೊರೆತಿವೆಯೇ ಎಂಬುದನ್ನು ಪರಿಶೀಲಿಸುವುದು ರಾಜ್ಯೋತ್ಸವದ ಅವಿಭಾಜ್ಯ ಭಾಗವಾಗಬೇಕಾಗಿದೆ.
ಕರ್ನಾಟಕ ಬಹುಸಂಸ್ಕೃತಿಗಳ ಸಂಗಮದ ನಾಡು. ಹಾಗಾಗಿ ಕರ್ನಾಟಕವನ್ನು ಕೇವಲ ಒಂದು ಭಾಷೆಯ ಗಡಿಯಲ್ಲಿ ಸೀಮಿತಗೊಳಿಸಲು ಸಾಧ್ಯವಾಗದು. ಈ ನೆಲದಲ್ಲಿ ಕನ್ನಡದೊಂದಿಗೆ ತುಳು, ಕೊಡವ, ಕೊಂಕಣಿ, ಬ್ಯಾರಿ, ಉರ್ದು ಮತ್ತು ಇತರ ಭಾಷಾ ಸಮುದಾಯಗಳೂ ತಮ್ಮದೇ ಆದ ಸಾಂಸ್ಕೃತಿಕ ಕೊಡುಗೆಯನ್ನು ಕೊಡುತ್ತ ಬಂದಿವೆ. ಹವ್ಯಕ, ದೀವ, ಕುಂದಾಪುರ, ಉತ್ತರ ಕನ್ನಡ ಮೊದಲಾದ ಕಡೆಗಳಲ್ಲಿ ಬಳಸುವ ಅವರವರ ಆಡು ಭಾಷೆಗಳೂ ಕನ್ನಡ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗಿವೆ. ಕನ್ನಡವೇ ರಾಜ್ಯದ ಪ್ರಮುಖ ಭಾಷೆ ಮತ್ತು ವಿಶಾಲವಾದ ಸಾಂಸ್ಕೃತಿಕ ಬಂಧದ ಕೇಂದ್ರವಾಗಿದ್ದರೂ, ಇತರ ಭಾಷೆಗಳ ಅಸ್ತಿತ್ವವನ್ನು ಗೌರವಿಸುವುದರಿಂದ ಕನ್ನಡದ ಮಹತ್ವ ಕಡಿಮೆಯಾಗುವುದಿಲ್ಲ. ಬದಲಾಗಿ ಕನ್ನಡದ ಉದಾರತೆಯನ್ನು ಈ ಭಾಷೆಗಳು ಹೆಚ್ಚಿಸಿವೆ. ಯಾವುದೇ ಭಾಷೆಯ ನಿಜವಾದ ಶಕ್ತಿ ಅದು ಎಷ್ಟು ಜನರನ್ನು ಹೊರಗಿಡಬಲ್ಲದು ಎಂಬುದಕ್ಕಿಂತ ಎಷ್ಟು ಜನರನ್ನು ತನ್ನೊಳಗೆ ಸೇರಿಸಿಕೊಳ್ಳಬಲ್ಲದು ಎಂಬುದರಲ್ಲಿ ಅಡಗಿದೆ. ಭಾಷೆ ಬೆಳವಣಿಗೆಗೆ ಇತರ ಭಾಷೆಗಳ ಪದಕೋಶಗಳ ಎರವಲು ಕೂಡ ಸಹಕಾರಿ. ಹಾಗಾಗಿ ನಾವಿಂದು ನಮ್ಮ ಕನ್ನಡ ಭಾಷೆಯಲ್ಲಿ ಹಿಂದಿ, ಸಂಸ್ಕೃತ, ಉರ್ದು, ಪಾರ್ಶಿ, ಇಂಗ್ಲಿಷ್ ಮೊದಲಾದ ಭಾಷೆಗಳ ಪದಬಳಕೆಯನ್ನು ಕಾಣಬಹುದು. ಇದು ಮಾತೃ ಭಾಷೆಯಿಂದ ಹೊರತಾಗಿ ಕನ್ನಡ ಭಾಷಾ ಪದವಾಗಿ ರೂಪುಗೊಂಡು ಬಳಕೆಯಾಗುತ್ತಿರುವುದು ಭಾಷಾ ಅಭಿವೃದ್ಧಿಗೆ ಕಾರಣವಾಗಿದೆ. ಈ ಕಾರಣದಿಂದ ನಾವು ಇನ್ನೊಂದು ಭಾಷೆಯನ್ನು ದ್ವೇಷಿಸುವುದು ನಮ್ಮ ಭಾಷೆಯ ಅಭಿವೃದ್ಧಿ ಕುಂಠಿತಗೊಳ್ಳಲೂ ಕಾರಣವಾಗಬಹುದು ಎಂಬುದನ್ನರಿಯಬೇಕಾಗುತ್ತದೆ.
ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯವನ್ನು ಗಮನಿಸಿದಲ್ಲಿ, ಉತ್ತರ ಕರ್ನಾಟಕದ ಜನಪದ ಪರಂಪರೆ, ಕರಾವಳಿಯ ಯಕ್ಷಗಾನ, ಮಲೆನಾಡಿನ ಪ್ರಕೃತಿ ಸಂಸ್ಕೃತಿ, ಆಹಾರ ವೈವಿಧ್ಯ, ಕೊಡಗಿನ ವಿಶಿಷ್ಟ ಆಚರಣೆ, ಕಲ್ಯಾಣ ಕರ್ನಾಟಕದ ಶರಣ ಪರಂಪರೆ, ಹಳೆ ಮೈಸೂರಿನ ಸಾಹಿತ್ಯ, ಸಂಗೀತ ಪರಂಪರೆ ಇವೆಲ್ಲವೂ ಸೇರುವುದರ ಜೊತೆಗೆ ಕರ್ನಾಟಕದ ಬಹುಮುಖ ವ್ಯಕ್ತಿತ್ವವನ್ನು ಗುರುತಿಸಿದೆ. ಈ ವೈವಿಧ್ಯವೇ ನಮ್ಮ ಶಕ್ತಿ. ಒಂದೇ ಭಾಷೆ ಮಾತನಾಡುವ ಎಲ್ಲರೂ ಒಂದೇ ರೀತಿಯ ಜೀವನ ಶೈಲಿಯನ್ನು ಹೊಂದಿರಬೇಕೆಂದಿಲ್ಲ. ವಿಭಿನ್ನ ಭಾಷಾ ಹಿನ್ನೆಲೆಯ ಜನರೂ ಸಮಾನ ಗೌರವದೊಂದಿಗೆ ಒಂದೇ ನಾಡಿನ ನಾಗರಿಕರಾಗಿರಬಹುದು. ಹೀಗಾಗಿ ಕನ್ನಡದ ಅಭಿಮಾನವು ಇತರ ಭಾಷೆಗಳ ಮೇಲಿನ ದ್ವೇಷವಾಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳುವುದು ಪ್ರಬುದ್ಧ ಕನ್ನಡಿಗರ ಕರ್ತವ್ಯವಾಗಿದೆ.
ಇಂದು ತಂತ್ರಜ್ಞಾನವು ಭಾಷೆಗಳ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ. ಕೃತಕ ಬುದ್ಧಿಮತ್ತೆ, ಯಂತ್ರಾನುವಾದ, ಧ್ವನಿ ಗುರುತಿಸುವಿಕೆ, ಡಿಜಿಟಲ್ ಗ್ರಂಥಾಲಯಗಳು, ಅಂತರ್ಜಾಲದ ಮೂಲಕ ಕನ್ನಡದ ಬಳಕೆಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ. ಆದರೆ ಕನ್ನಡದಲ್ಲಿ ಉತ್ತಮ ಡಿಜಿಟಲ್ ಪಠ್ಯಸಂಪತ್ತು, ವೈಜ್ಞಾನಿಕ ಪದಸಂಪತ್ತು, ಗುಣಮಟ್ಟದ ಕಲಿಕಾ ಸಾಮಗ್ರಿಗಳು ಮತ್ತು ಸಂಶೋಧನಾ ಸಂಪನ್ಮೂಲಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸದಿದ್ದರೆ ಈ ಅವಕಾಶಗಳು ಸಂಪೂರ್ಣವಾಗಿ ಫಲಪ್ರದ ಆಗುವುದಿಲ್ಲ. ಕನ್ನಡ ಭೂತಕಾಲದ ವೈಭವವನ್ನು ನೆನಪಿಸುವ ಭಾಷೆಯಾಗಿ ಮಾತ್ರ ಉಳಿಯದೆ ಭವಿಷ್ಯದ ಜ್ಞಾನವನ್ನು ಸೃಷ್ಟಿಸುವ ಭಾಷೆಯಾಗಿ ಬಳಸಿಕೊಳ್ಳಬೇಕಿದೆ.
ಇಂದು ಭಾಷಣಗಳ ಮೂಲಕ ಕನ್ನಡದ ಅಳಿವನ್ನು ತಡೆಯಲು ಸಾಧ್ಯವಿಲ್ಲ. ಕನ್ನಡದ ಕುರಿತು ಮಾತನಾಡುವಾಗ ಭಾಷೆಯ ಅವನತಿಯ ಆತಂಕವನ್ನು ಪದೇಪದೇ ವ್ಯಕ್ತಪಡಿಸಲಾಗುತ್ತದೆ. ಆದರೆ ಭಾಷೆಯ ಭವಿಷ್ಯವನ್ನು ನಿರ್ಧರಿಸುವುದು ಕೇವಲ ಘೋಷಣೆಗಳಲ್ಲ. ಅದು ದೈನಂದಿನ ಬಳಕೆ. ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದು, ಕನ್ನಡ ಪುಸ್ತಕಗಳನ್ನು ಕೊಂಡು ಓದುವುದು, ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಚರ್ಚಿಸುವುದು, ಆಡಳಿತದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವುದು, ವ್ಯಾಪಾರ, ವಹಿವಾಟುಗಳಲ್ಲಿ ಕನ್ನಡವನ್ನು ಬಳಸುವುದು, ಐದನೇ ತರಗತಿಯವರೆಗೆ ಕನ್ನಡವನ್ನು ಕನ್ನಡ ಮತ್ತು ಉರ್ದು ಶಾಲೆಗಳಲ್ಲಿ ಕಡ್ಡಾಯಗೊಳಿಸುವುದು, ಜಾಗತಿಕ ಸ್ಪರ್ಧೆಯಲ್ಲಿ ಬಹುಭಾಷಾ ಜ್ಞಾನವು ಅವಕಾಶಗಳನ್ನು ವಿಸ್ತರಿಸುವುದನ್ನು ಗಮನಿಸಿರುವ ನಾವು ಹಿಂದಿ, ಇಂಗ್ಲಿಷ್ ಮೊದಲಾಗಿ ಬೇರೊಂದು ಭಾಷೆಯನ್ನು ಕಲಿಯುವ ಜೊತೆಗೆ ಮಾತೃಭಾಷೆಯನ್ನು ಕೀಳಾಗಿ ಕಾಣದೆ ಅದರ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವಂತಾಗಬೇಕು.
ಕರ್ನಾಟಕವು ವಿಜ್ಞಾನ, ತಂತ್ರಜ್ಞಾನ, ಉನ್ನತ ಶಿಕ್ಷಣ, ಕೈಗಾರಿಕೆ, ವೈದ್ಯಕೀಯ ಸೇವೆ, ಸಂಶೋಧನೆ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಗಳಿಸಿದೆ. ಬೆಂಗಳೂರಿನ ಜಾಗತಿಕ ಗುರುತು ರಾಜ್ಯದ ಆರ್ಥಿಕ, ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಆದರೆ ಕರ್ನಾಟಕದ ಅಭಿವೃದ್ಧಿಯನ್ನು ಬೆಂಗಳೂರಿನ ಸಾಧನೆಗಳ ಆಧಾರದ ಮೇಲೆ ಮಾತ್ರ ಅಳೆಯಲಾಗದು. ಗ್ರಾಮೀಣ ಕರ್ನಾಟಕದ ರೈತನ ಕೃಷಿ ಅವಲಂಬಿತ ಬದುಕು, ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳು ಮತ್ತು ಕಲ್ಯಾಣ ಕರ್ನಾಟಕದ ಹಿಂದುಳಿದ ಭಾಗಗಳಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶಗಳು, ನಗರ ಪ್ರದೇಶಗಳಲ್ಲಿ ವಸತಿ, ಸಂಚಾರ, ನೀರು, ಪರಿಸರದ ಸಮಸ್ಯೆಗಳು ಈ ಮೊದಲಾದವು ಅಭಿವೃದ್ಧಿಯ ನಿಜವಾದ ಮಾನದಂಡವಾಗಿದೆ.
ಕನ್ನಡಿಗ ಎನ್ನುವ ಗುರುತು ಜಾತಿ, ಧರ್ಮ, ಲಿಂಗ, ಆರ್ಥಿಕ ಸ್ಥಿತಿ, ಹುಟ್ಟೂರಿನ ಆಧಾರದ ಮೇಲೆ ಯಾರನ್ನೂ ಹೊರಗಿಡಬಾರದು. ಸಂವಿಧಾನದ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ನ್ಯಾಯದ ಮೌಲ್ಯಗಳೊಂದಿಗೆ ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಜೋಡಿಸಿದಾಗ ಮಾತ್ರ ನಾಡಿನ ಅಸ್ಮಿತೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಕರ್ನಾಟಕದ ಗುರುತು ಅದರ ಭಾಷೆ ಮತ್ತು ಸಾಹಿತ್ಯದಲ್ಲಿ ಇರುವ ಪ್ರಕೃತಿಯಲ್ಲಿಯೂ ಇದೆ. ಪಶ್ಚಿಮ ಘಟ್ಟಗಳು, ನದಿಗಳು, ಅರಣ್ಯಗಳು, ಕರಾವಳಿ, ಮಲೆನಾಡು, ಬಯಲುಸೀಮೆ ಮತ್ತು ಕೃಷಿಭೂಮಿಗಳು ನಮ್ಮ ಜೀವನದ ಆಧಾರ. ನಾವು ನಾಡನ್ನು ಪ್ರೀತಿಸುವುದು ಎಂದರೆ ಅದರ ಭೂಮಿ, ನೀರು, ಕಾಡು, ಜೀವವೈವಿಧ್ಯವನ್ನು ಪ್ರೀತಿಸುವುದು ಎಂದು ತಿಳಿಯಬೇಕು.
ರಾಜ್ಯೋತ್ಸವದ ಸಂಭ್ರಮ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗದೆ ಅದು ಪ್ರತಿ ದಿನ ನಮ್ಮ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಳುವಳಿಗೆ ಪ್ರೇರಣೆ ಆಗುವಂತಿರಬೇಕು. ಪ್ರತಿ ಗ್ರಾಮ, ತಾಲ್ಲೂಕು, ಜಿಲ್ಲೆ ತನ್ನ ಮಡಿಲಲ್ಲಿ ಸ್ಮಾರಕಗಳನ್ನು ಇರಿಸಿಕೊಂಡಿದೆ. ಇತಿಹಾಸ, ಶಾಸನಗಳು, ಜನಪದ ಕಲೆಗಳು, ಸ್ಥಳೀಯ ಭಾಷಾ ರೂಪಗಳನ್ನು ಒಳಗೊಂಡಿದೆ. ಇಂತಹ ವೈಶಿಷ್ಟ್ಯಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಸಲುವಾಗಿ ದಾಖಲಿಸುವ ಕೆಲಸ ಆಗಬೇಕಿದೆ. ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಕನ್ನಡದ ಹಸ್ತಪ್ರತಿ, ಶಾಸನ, ಅಪರೂಪದ ಪುಸ್ತಕಗಳು ಮತ್ತು ಮೌಖಿಕ ಇತಿಹಾಸವನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸುವತ್ತ ಪ್ರಯತ್ನ ಮಾಡಬೇಕಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳು ಕನ್ನಡದ ಬಳಕೆಯ ಜೊತೆಗೆ ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಬೇಕಿದೆ. ಭಾಷೆಯ ಹೆಸರಿನಲ್ಲಿ ಭಾವನಾತ್ಮಕ ಉತ್ಸಾಹ ಮೂಡಿಸುವುದು ಸುಲಭ. ಆದರೆ ಭಾಷೆಯ ಮೂಲಕ ಜ್ಞಾನ, ಉದ್ಯೋಗ, ನ್ಯಾಯ ಮತ್ತು ಮಾನವೀಯತೆಯನ್ನು ಬೆಳೆಸುವುದು ಹೆಚ್ಚು ಕಷ್ಟಕರವಾದರೂ ಅದು ಅತ್ಯಂತ ಅಗತ್ಯದ ಕಾರ್ಯವಾಗಿದೆ.
ಕನ್ನಡ ಎಂದರೆ ಅದು ಕೇವಲ ಮಾತನಾಡುವ ಭಾಷೆಯಲ್ಲ. ಅದು ಚಿಂತಿಸುವ, ಸೃಷ್ಟಿಸುವ, ಪ್ರಶ್ನಿಸುವ ಮತ್ತು ಮಾನವೀಯವಾಗಿ ಬದುಕುವ ಮಾಧ್ಯಮ. ಕರ್ನಾಟಕ ಎಂದರೆ ಕೇವಲ ಭೌಗೋಳಿಕ ಗಡಿಯಲ್ಲ. ಅದು ಸಮಾನತೆ, ಸೌಹಾರ್ದ, ಜ್ಞಾನ ಮತ್ತು ನ್ಯಾಯದ ಮೌಲ್ಯಗಳ ಮೇಲೆ ನಿರಂತರವಾಗಿ ನಿರ್ಮಾಣವಾಗುತ್ತಿರುವ ಒಂದು ಸಾಮೂಹಿಕ ಕನಸು. ಆ ಕನಸು ಸಾಕಾರವಾದಾಗ ಮಾತ್ರ ರಾಜ್ಯೋತ್ಸವದ ಸಂಭ್ರಮಕ್ಕೆ ಪೂರ್ಣ ಅರ್ಥ ದೊರೆಯುತ್ತದೆ. ಅದುವೇ ನಾಡಿಗೆ ಸಲ್ಲಿಸುವ ನಿಜವಾದ ಗೌರವ, ಅದುವೇ ಕನ್ನಡತನದ ಸಾರ್ಥಕತೆ.
ಸಿರಿಗನ್ನಡಂ ಗೆಲ್ಗೆ : ಸಿರಿಗನ್ನಡಂ ಬಾಳ್ಗೆ!
ಸಮೃದ್ಧ, ಸಮಾನತೆಯ, ಸೌಹಾರ್ದದ ಕರ್ನಾಟಕ ನಿರ್ಮಾಣವಾಗಲಿ !
- ಡಾ. ಕೆಳದಿ ವೆಂಕಟೇಶ ಜೋಯಿಸ್
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
