ಹಣತೆ ಅರ್ಥಾತ್ ದೀಪಕ್ಕೆ ಬೆಳಕು, ಮಾರ್ಗ, ಸ್ಪೂರ್ತಿ, ಜ್ಞಾನ ಎಂಬ ಅರ್ಥಗಳಿವೆ. ನಮ್ಮ ಮನಸ್ಸಿನ ಕತ್ತಲನ್ನು ಹೊಡೆದೋಡಿಸುವ ದೀಪದ ಸಹಚರ್ಯ ನಮಗೆ ಯಾವಾಗಲೂ ಬೇಕು. ದೀಪದ ಬೆಳಕನ್ನು ‘ಜ್ಯೋತಿ’ ಎನ್ನುವುದಿದೆಯೇ ಹೊರತು ‘ಕಿಡಿ’ ಎಂದಾಗಲಿ, ‘ಬೆಂಕಿ’, ’ಉರಿ’, ’ಜ್ವಾಲೆ’, ’ಅನಲ’, ’ಕಿಚ್ಚು’ ಎಂದು ಕರೆಯುವುದಿಲ್ಲ. ಇದರಲ್ಲೆ ದೀಪದ ಮಹತ್ವ ಅಡಗಿದೆ. ಲೋಕವ್ಯಾಪಾರದ ಕತ್ತಲನ್ನು ಹೊಡೆದೋಡಿಸಲು ‘ದೀಪ’ ಅಥವಾ ‘ಪ್ರಣತಿ’ ಅಗತ್ಯ. ಆದರೆ ನಮ್ಮಂತರ್ಗತ ಅಜ್ಞಾನವನ್ನು ಹೊಡೆದೋಡಿಸಲು’ ಜ್ಞಾನ’ ಎಂಬ ದೀವಿಗೆಯ ಅವಶ್ಯಕತೆ ಇದೆ.
ನರಕಾಸುರನನ್ನು ಕೊಂದು ಅವನಿಂದ ಪೀಡಿತರಾಗಿದ್ದವರನ್ನು ಕೃಷ್ಣ ಕಾಪಾಡಿದ ದಿನವನ್ನು ‘ನರಕಚತುರ್ದಶಿ’ ಎಂದು ಕರೆಯುತ್ತೇವೆ. ಅಂದರೆ ಬಂಧನ ಎನ್ನುವ ಕತ್ತಲಲ್ಲಿ ಇದ್ದವರನ್ನು ಬಿಡುಗಡೆ ಎಂಬ ಬೆಳಕಿಗೆ ತಂದವನು ಶ್ರೀಕೃಷ್ಣ.
ಬಲಿ ಚಕ್ರವರ್ತಿ ಭೂಮಿಗೆ ಬರುವ ದಿನವನ್ನು ‘ಬಲಿಪಾಡ್ಯ’ ಎನ್ನುತ್ತೇವೆ. ಇಲ್ಲೆಲ್ಲ ಸಂತಸವನ್ನೆ ಕಾಣುವುದು. ಇಷ್ಟೆ ಎನ್ನುವುದೆ? ಇಲ್ಲ! ಅಶ್ವಯುಜ ಮಾಸ ಕಳೆದು ಕಾರ್ತಿಕ ಮಾಸ ಬರುವ ಸಂದರ್ಭಕ್ಕೆ ಭೂಮಿಯಲ್ಲಿ ಸಹಜವಾಗಿ ಕತ್ತಲು ಹೆಚ್ಚಾಗಿ ಆವರಿಸಿರುತ್ತದೆ. ವರ್ಷದಲ್ಲಿ ಅತ್ಯಂತ ಕಡಿಮೆ ಬೆಳಕಿರುವ ದಿನ ಡಿಸೆಂಬರ್ 22ಕ್ಕೆ ಮುನ್ನ ಕಾರ್ತಿಕ ಮಾಸವಿರುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ನವೆಂಬರ್ನಲ್ಲಿ ಕಾರ್ತಿಕ ಮಾಸ ಪ್ರಾರಂಭವಾಗಿ ಸರಿಸುಮಾರು ಡಿಸೆಂಬರ್ ಮಧ್ಯದವರೆಗೂ ಇರತ್ತದೆ. ಹಾಗಾಗಿ ವಾಸ್ತವದಲ್ಲಿ ಈ ದಿನಗಳಲ್ಲಿ ಹೆಚ್ಚು ದೀಪವನ್ನು ಪ್ರಜ್ವಲಿಸುವುದರಿಂದ ಹೆಚ್ಚು ಕತ್ತಲೂ ದುರವಾಗುತ್ತದೆ.
‘ದೀಪ’ ಮತ್ತು ‘ಅವಳಿ’ ಸೇರಿ ‘ದೀಪಾವಳಿ’ ಆಗಿದೆ ಇದನ್ನು ‘ದೀವಳಿಗೆ’ ಎನ್ನುವುದಿದೆ. ‘ಅವಳಿ’ ಅಂದರೆ ‘ಜೊತೆ’, ಆವಳಿ ಅಂದರೆ ‘ಸಮೂಹ’ ಅನ್ನುವ ಅರ್ಥವೂ ಇದೆ. ಕನ್ನಡದ ‘ದೀಪಾವಳಿ’ ಹಿಂದಿಯಲ್ಲಿ ‘ದಿವಾಲಿ’ ಎಂದಾಗುತ್ತದೆ. ದೀಪಗಳ ಹಬ್ಬ ದೀಪಾವಳಿ ನಮ್ಮ ನೆಲದ ಸೊಗಡಿನ ಹಬ್ಬ. ಮಣ್ಣಿನ ಹಣತೆ, ಗೋಪೂಜೆ, ಹೊಲಗಳಿಗೆ ಬೂದಿಯನ್ನು ಸಿಂಪಡಿಸುವುದು, ಚೆಂಡುಹೂ, ಕುಂಬಳಹೂ, ಹುಚ್ಚೆಳ್ಳು ಹೂ, ರಾಗಿ ತೆನೆ ಮುಂತಾದವನ್ನು ಕೆರಕಲಿಗೆ ಇಟ್ಟು ಪೂಜಿಸುವ, ತಿಪ್ಪೆಯನ್ನೂ ಸಿಂಗರಿಸಿ ಒಟ್ಟಾರೆ ಪ್ರಕೃತಿಯನ್ನು ಆರಾಧಿಸುವ ದೇಸಿಯ ಬನಿ ತುಂಬಿದ ಹಬ್ಬ. ಆದರೆ ದೇಸಿ ಹಣತೆ, ಹೂಗಳ ಅಲಂಕಾರಕ್ಕೆ ಬದಲಾಗಿ ಕೃತಕ ದೀಪಗಳು, ಕೃತಕ ಸಿಹಿ, ಕೃತಕ ಹೂವಿನ ಹಾರಗಳದ್ದೆ ಹಾವಳಿ ಆಗಿದೆ. ದೇಸೀ ಆಚರಣೆಯ ಪರಿಪ್ರೇಕ್ಷಗಳಿಗೆ ಅತೀ ವ್ಯಾಪಾರೀಕರಣದ ಲೇಪ ಆಗಿರುವುದು ಬೇಸರದ ಸಂಗತಿ. ಅನುಭವ ಶೂನ್ಯ, ನೋಟವಷ್ಟೆ ಸುಂದರವಾಗಿರುವ ಇವುಗಳು ಹಬ್ಬದ ಸಡಗರವನ್ನು ಮುಕ್ಕಾಗಿಸಿವೆ. ಪಟಾಕಿಯನ್ನು ದುಷ್ಟ ಶಕ್ತಿಯನ್ನು ಹೊಡೆದೋಡಿಸುವ ಸಂಕೇತವಾಗಿ ಹೊಡೆಯುತ್ತಿದ್ದುದು ಇಂದಿಗೆ ಅತೀ ಮೋಜಿನ ಸಂಗತಿಯಾಗಿದೆ.
ಬಹಳ ಸದ್ದುಮಾಡುವ ಬಹು ಬಣ್ಣದ ಪಟಾಕಿಗಳು ಹಾನಿಕಾರಕ ರಾಸಾಯನಿಕಯುಕ್ತವಾಗಿರುತ್ತವೆ. ಸರಕಾರ ನಿಷೇಧ ಮಾಡಿದ ರಾಸಾಯನಿಕಗಳನ್ನು ಬಣ್ಣದ ವಿಶೇಷ ಅನುಭೂತಿಯನ್ನು ತರಿಸಲು ಬಳಸಿರುತ್ತಾರೆ. ಇವು ವಾಯುಮಾಲಿನ್ಯ ಉಂಟುಮಾಡುತ್ತವೆ. ಹಣ ಕೊಟ್ಟು ರೋಗವನ್ನು ಕೊಂಡು ಕೊಂಡ ಹಾಗೆ. ಈಗ ಹಸಿರು ಪಟಾಕಿ ಬಂದಿದೆ. ಆದರೆ ಅವುಗಳಲ್ಲೂ ರಾಸಾಯನಿಕಗಳು ಇರುತ್ತವೆ. ಪಟಾಕಿ ಸಿಡಿಸುವ ಸಂಭ್ರಮ ಆ ಸಂತಸ ಅನೇಕರಲ್ಲಿರುತ್ತದೆ. ಆದರೆ ಇದು ಅತೀವ ತೊಂದರೆ ಕೊಡುವುದು ವೃದ್ಧರಿಗೆ, ಹಸುಕಂದಮ್ಮಗಳಿಗೆ, ಸಾಕು ಪ್ರಾಣಿಗಳಿಗೆ. ಅಷ್ಟು ಪ್ರಮಾಣದ ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ ಅನ್ನುವ ಹೆಚ್ಚುಗಾರಿಕೆಗಿಂತ ಇತರರಿಗೆ ತೊಂದರೆ ಕೊಡುವುದಿಲ್ಲ, ನಮ್ಮಿಂದ ಯಾವುದೆ ತೊಂದರೆ ಆಗಿಲ್ಲ ಅನ್ನುವುದರಲ್ಲೇ ಹೆಚ್ಚು ಸಮಾಧಾನವಿದೆ. ಪಟಾಕಿಗಳು ಹೆಚ್ಚು ಕಣ್ಣಿಗೆ ಹಾನಿ ಉಂಟುಮಾಡುತ್ತದೆ ಜ್ಯೋತಿಯ ಇನ್ನೊಂದು ಹೆಸರಿನಲ್ಲಿ ಹಬ್ಬವನ್ನು ಆಚರಿಸಿ ದೃಷ್ಟಿ ಎಂಬ ನಿರಂತರ ಬೆಳಕಿಗೆ ಸಂಚಕಾರ ತರುವುದರಲ್ಲಿ, ತಂದುಕೊಳ್ಳುವಲ್ಲಿ ಅರ್ಥವಿಲ್ಲ.
ಪಾಲಿಕ್ಲೋರಿನೇಟೆಡ್ ಡೈಆಕ್ಸಿನ್ ಹಾಗು ಬೆಂಜೋಫ್ಯೂರಾನ್ಸ್(ನೀಲಿಬಣ್ಣ) ಕ್ಯಾನ್ಸರ್ ಕಾರಕ ಮುಖ್ಯವಾಗಿ ಬೇರಿಯಂ(ಹಸಿರು ಬಣ್ಣದ ಕಿರಣಗಳನ್ನು ಸೂಸುತ್ತದೆ) ಅಂಶ ಪಟಾಕಿಯಲ್ಲಿದ್ದು ಇದರ ಹೊಗೆ ಹಿರಿಯರ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ ಕಿರಿಯರ ಬೆಳವಣಿಗೆಗೆ ಅಡ್ಡಿ ತಂದು ಆಸ್ತಮಾ ಕಾಯಿಲೆಗೂ ನಾಂದಿಯಾಗುತ್ತದೆ,. ಪಟಾಕಿಯಲ್ಲಿರುವ ಪೊಟ್ಯಾಸಿಯಂ ನೈಟ್ರೇಟ್ ಕ್ಯಾನ್ಸರ್ ಕಾರಕ, ಅಲ್ಯೂಮಿಮಿಯಂ ಚರ್ಮಕ್ಕೆ ಹಾನಿಕಾರಕ, ಪರ್ಕ್ಲೋರೇಟ್ ಬಳಸಿ ತಯಾರಿಸಿದ ಪಟಾಕಿಗಳ ಹೊಗೆ ಹಲವು ಕಾಲ ವಾಯುಮಂಡಲದಲ್ಲಿರುತ್ತದೆ.
ಪಟಾಕಿಯಲ್ಲಿರುವ ಸಲ್ಫರ್ ವಾತಾವರಣ ಸೇರಿ ಆಮ್ಲಮಳೆಗೆ ಕಾರಣವಾಗುತ್ತದೆ. ಇಂಥ ಕಪಟಿ, ಅಬ್ಬರದ ಸದ್ದಿನ ಪಟಾಕಿ ಸಿಡಿಸುವುದರ ಬದಲಿಗೆ ಸಾಲು ಸಾಲು ದೀಪಗಳನ್ನು ಹಚ್ಚುವುದರಲ್ಲೂ ಪರಿಸರಸ್ನೇಹಿ, ಸೌಂದರ್ಯೋಪಾಸನೆಯ ಸುಖವಿದೆ. ಒಂದೇ ಬಾರಿಗೆ ಒಂದೇ ಸ್ವಚ್ ಒತ್ತುವುದರ ಮೂಲಕ ನೂರಾರು ಸಾವಿರಾರು ವಿದ್ಯುತ್ ದೀಪಗಳನ್ನು ಹೊತ್ತೊಸಬಹುದು. ಆದರೆ ಒಂದು ವಿದ್ಯುತ್ ದೀಪದಿಂದ ಇನ್ನೊಂದು ವಿದ್ಯುತ್ ದೀಪವನ್ನು ಬೆಳಗಿಸಲು ಸಾಧ್ಯವಿಲ್ಲ. ಆದರೆ ನಮ್ಮ ಎಣ್ಣೆ ಬತ್ತಿಯ ಹಣತೆಯಿಂದ ಒಂದಲ್ಲ ಸಹಸ್ರ ಸಹಸ್ರ ದೀಪಗಳನ್ನು ಬೆಳಗಬಹುದು. ಇದು ಬರೆ ಬೆಳಕಿನ ದೀಪವೇ ಆಗಿರದೆ ಅರಿವಿನ, ಮಾನವತೆಯ ದೀಪವೂ ಆಗಬಹುದು.
ಬೆಳಕಿನ ಕಿರಣದಿಂದ ಮಾನವತೆ ಅನ್ನುವ ಕಾರುಣ್ಯದವರೆಗೆ ದೀಪಗಳ ಸಾಲುಗಳಿರಬೇಕು. ದೀಪದಿಂದ ದೀಪ ಅನ್ನುವ ಹಾಗೆ ಮಾನವನಿಂದ ಮನುಕುಲದವರೆಗೆ ಹಣತೆಯ ಬೆಳಕು ವಿಸ್ತರಿಸಬೇಕು. ದೀಪವೆಂದರೆ.. ತಾನೆ ಕತ್ತಲಲ್ಲೆ ಇದ್ದರೂ ಬೆಳಕನ್ನು ನೀಡಿ ಜ್ಞಾನ ಪಸರಿಸುವುದು. ತಾನು ತ್ಯಾಗಿಯಾಗಿ ಇತರರಿಗೆ ಮಾರ್ಗಿಯಾಗುವುದು. ದೀಪಗಳ ಬೆಳಕು ಊರ್ಧ್ವಮುಖಿಯಾಗಿರುತ್ತದೆ ಅಂದರೆ ಮನುಷ್ಯನ ಮನಸ್ಸೂ ಕೂಡ ಇತಿಮಿತಿಗಳನ್ನು ಮೀರಿ ಊರ್ಧ್ವಮುಖಿಯಾಗಿರಬೇಕು ಎನ್ನುವುದನ್ನು ಸೂಚಿಸುತ್ತದೆ.
ಒಟ್ಟಾರೆಯಾಗಿ ಪ್ರಣತಿಯೆಂದರೆ ಮನುಷ್ಯನನ್ನು ಸಮಾಜಮುಖಿಯಾಗಿಸುವ ಪ್ರಕಲ್ಪ ಹೀಗೆ ಭಾರತೀಯ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ದೀಪಗಳನ್ನು ಇಂದಿನಿಂದಲೆ ಹಚ್ಚುತ್ತೇವೆ. ಆದರೆ ಮಣ್ಣಿನ ಹಣೆತೆಯಲ್ಲ ದೀಪವೂ ಕೃತಕವಾಗಿದೆ ಪಿಂಗಾಣಿ ಎಂಬ ಚೀನಿ ಮಣ್ಣಿನ ಹಣತೆಗೆ ಮಾರು ಹೋಗಿದ್ದೇವೆ. ವಿದ್ಯುತ್ ಚಾಲಿತ ಹಣತೆಗಳನ್ನು ಕೊಂಡು ಕೊಳ್ಯರತ್ತೇವೆ ಬತ್ತಿ ಹಾಕು ಎನ್ಣೆ ಬಿಡುವ ಅವಶ್ಯಕತೆಯಿಲ್ಲ ಬರೆ ಸ್ವಿಚ್ಚೊತ್ತಿದರೆ ಸಾಕು ಜಗ್ದಗನೆ ಹೊತ್ತುವ ದೀಪಗಳಿಗೆ ಮನಸ್ಸುಕೊಟ್ಟಿದ್ದೇವೆ. ಅದನ್ನು ಬಿಟ್ಟು ಮಣ್ಣಿನ ದೀಪಗಳೆಡೆಗೆ ಮತ್ತೆ ಹೊರಳೋಣ ಮಣ್ಣು ಮುಟ್ಟಿ ದೀಪಗಳನ್ನು ಮಾಡಿದ ಕೈಗಳನ್ನು ಹಿಡಿಯೋಣ ದೀಪದ ಬುಡದಲ್ಲೇ ಕತ್ತಲೆ ಎಂಬ ಮಾತನ್ನು ಹೊಡೆದೋಡಿಸೋಣ ನಾವೀನ್ಯತೆಯ ಬೆರಗಿಗೆ ಸೊರಗುತ್ತಿರುವ ಮಣ್ಣಿನ ಹಣತೆಯನ್ನೆ ಹೆಚ್ಚಾಗಿ ಹಚ್ಚೋಣ.
- ಸುಮಾ ವೀಣಾ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
