ಸಂಗೀತ ಸಾಮಾಜಿಕ ಏಕತೆಯ ಮಾಧ್ಯಮವೂ ಹೌದು; ಶಿಸ್ತು ಮತ್ತು ಸಾಂಸ್ಕೃತಿಕ ಮೌಲ್ಯಗಳು ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ ಎಂದು ಆರ್ಎಸ್ಎಸ್ ಸರಸಂಘಚಾಲಕರ ಮಾತು
ಜೋಧಪುರ: ಮಾದಕ ವಸ್ತುಗಳಿಂದ ದೂರವಿರುವ ವ್ಯಕ್ತಿ ಮಾತ್ರ ಸಂತೋಷದ ಜೀವನ ನಡೆಸಲು ಸಾಧ್ಯ. ಉತ್ತಮ ಸಂಸ್ಕಾರಗಳನ್ನು ಹೊಂದಿರುವ ವ್ಯಕ್ತಿ ರಾಷ್ಟ್ರಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡಬಲ್ಲ ಎಂಬ ನಂಬಿಕೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕಿದೆ. ಇತರರ ಸುಖ-ದುಃಖಗಳಲ್ಲಿ ಅವರೊಂದಿಗೆ ನಿಲ್ಲುವ ವ್ಯಕ್ತಿ ಸಾಮಾಜಿಕ ಏಕತೆಯನ್ನು ಬಲಪಡಿಸಲು ನೆರವಾಗುತ್ತಾನೆ ಎಂದು ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ಸಂಗೀತವು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಲ್ಲ. ಯುದ್ಧಭೂಮಿಯಲ್ಲಿಯೂ ಅದು ಪ್ರಮುಖ ಪಾತ್ರ ವಹಿಸುತ್ತದೆ. ನಮಗೆ ನಮ್ಮದೇ ಆದ ಯುದ್ಧ ಸಂಗೀತದ ಪರಂಪರೆ ಇರಬೇಕು. ಸಂಗೀತವು ಸ್ವಾಭಿಮಾನದ ಭಾವನೆಯನ್ನು ಮೂಡಿಸುತ್ತದೆ ಎಂದು ಅವರು ತಿಳಿಸಿದರು.
ನವೆಂಬರ್ 15ರಂದು ಜೋಧಪುರದಲ್ಲಿ ನಡೆದ ನಾಲ್ಕು ದಿನಗಳ ಆರ್ಎಸ್ಎಸ್ ಪ್ರಾಂತ ಘೋಷ್ ಶಿಬಿರ ‘ಮರು ನಿನಾದ್ 2026’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಜೋಧಪುರದ ಲೂಣಿ ಶಿಕರ್ಪುರದಲ್ಲಿರುವ ಶ್ರೀ ರಾಜಾರಾಮ್ ಆಶ್ರಮದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 15,000ಕ್ಕೂ ಹೆಚ್ಚು ಸ್ವಯಂಸೇವಕರು ಮತ್ತು ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಘೋಷ್ ವಾದ್ಯವೃಂದದ ಪ್ರದರ್ಶನವನ್ನು ಪ್ರೇಕ್ಷಕರು ವೀಕ್ಷಿಸಿದ್ದಾರೆ. ಆದರೆ ಅದರ ಹಿಂದೆ ಇರುವ ಮೌಲ್ಯಗಳು ಮತ್ತು ಶಿಸ್ತನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಈ ಮೌಲ್ಯಗಳು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ದಾರಿಯನ್ನು ತೋರಿಸುತ್ತವೆ ಎಂದು ಡಾ. ಭಾಗವತ್ ಹೇಳಿದರು.
ಭಾರತದಲ್ಲಿ ಯುದ್ಧ ಸಂಗೀತಕ್ಕೆ ಪ್ರಾಚೀನ ಪರಂಪರೆ ಇದೆ. ಭಗವದ್ಗೀತೆಯಲ್ಲಿಯೂ ಇದಕ್ಕೆ ಸಂಬಂಧಿಸಿದ ಉಲ್ಲೇಖಗಳಿವೆ. ಪ್ರಣವ, ಪಾಂಚಜನ್ಯ ಮತ್ತು ಶಂಖಶ್ಚರ್ಯ ಮೊದಲಾದ ಪದಗಳು ಈ ಸಂದರ್ಭದಲ್ಲಿ ಉಲ್ಲೇಖವಾಗುತ್ತವೆ ಎಂದು ಅವರು ತಿಳಿಸಿದರು. ಹಲವು ಏಕವ್ಯಕ್ತಿ ಸಂಗೀತ ಸಂಯೋಜನೆಗಳು, ಸಂಗೀತ ಪ್ರಸ್ತುತಿಗಳು ಮತ್ತು ಘೋಷ್ ಪ್ರದರ್ಶನಗಳ ಮೂಲಕ ಸಂಘವು ತನ್ನದೇ ಆದ ವಿಶಿಷ್ಟ ಸಂಗೀತ ಪರಂಪರೆಯನ್ನು ಬೆಳೆಸಿದೆ. ಯುದ್ಧ ಸಂಗೀತವು ಈಗ ಭಾರತೀಯ ಸಂಗೀತದ ಒಂದು ಭಾಗವಾಗಿದೆ ಎಂದರು.
ಸಂಘದ ಸಂಗೀತಗಾರರು ವೃತ್ತಿಪರ ಸಂಗೀತಗಾರರಲ್ಲ ಎಂದು ಡಾ. ಭಾಗವತ್ ಹೇಳಿದರು. ಸಂಗೀತವು ಭಾರತೀಯ ಜೀವನ ಪದ್ಧತಿ, ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಒಳಗೊಂಡಿರುವ ಕಲೆಯಾಗಿದೆ. ಸುಂದರವಾದ ಹಾಡು ವಾತಾವರಣವನ್ನು ಸೃಷ್ಟಿಸುವುದರ ಜೊತೆಗೆ ಕೇಳುಗರ ಮನದಲ್ಲಿ ಭಾವನೆಗಳನ್ನು ಮೂಡಿಸುತ್ತದೆ ಎಂದು ಅವರು ವಿವರಿಸಿದರು.
ಸಂಘದ ಘೋಷ್ನಲ್ಲಿ ಯಾರೊಬ್ಬರ ವೈಯಕ್ತಿಕ ಪ್ರದರ್ಶನಕ್ಕೆ ಅವಕಾಶವಿಲ್ಲ. ಎಲ್ಲರೂ ಒಟ್ಟಾಗಿ ವಾದ್ಯ ನುಡಿಸುತ್ತಾರೆ. ಸಾಮೂಹಿಕವಾಗಿ ಪ್ರದರ್ಶನ ನೀಡುವಾಗ ಭಾಗವಹಿಸುವವರ ಮನಸ್ಸುಗಳೂ ಒಂದಾಗುತ್ತವೆ. ಒಂದೇ ಸ್ಥಳದಲ್ಲಿ ಸೇರಿ, ಒಟ್ಟಿಗೆ ವಾಸಿಸಿ, ಉತ್ತಮ ಉದ್ದೇಶಕ್ಕಾಗಿ ಸಾಮೂಹಿಕವಾಗಿ ಕೆಲಸ ಮಾಡುವುದು ಸಂಘದ ಕಾರ್ಯಪದ್ಧತಿಯಾಗಿದೆ ಎಂದು ಅವರು ಹೇಳಿದರು. ಉತ್ತಮ ಸಂಗೀತ ವಿಮರ್ಶಕರಾಗಲು ಪರಿಣತರಾಗಿರಬೇಕೆಂದಿಲ್ಲ; ಸಂಗೀತವನ್ನು ಆಸ್ವಾದಿಸುವ ಕೇಳುಗರೂ ಉತ್ತಮ ವಿಮರ್ಶಕರಾಗಬಹುದು ಎಂದರು.
ಕಾರ್ಯಕ್ರಮವು ಭಗವಾಧ್ವಜಾರೋಹಣದೊಂದಿಗೆ ಆರಂಭವಾಯಿತು. ಬಳಿಕ ಶಿಬಿರದಲ್ಲಿ ತರಬೇತಿ ಪಡೆದ ಸಾವಿರಾರು ಸ್ವಯಂಸೇವಕರು ವಿವಿಧ ವಿನ್ಯಾಸಗಳಲ್ಲಿ ಆಕರ್ಷಕ ಘೋಷ್ ಪ್ರದರ್ಶನ ನೀಡಿದರು. ಅವರ ಶಿಸ್ತುಬದ್ಧ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು.
ನಂತರ ಜೋಧಪುರ ಪ್ರಾಂತ ಸಂಘಚಾಲಕ ಹರ್ದಯಾಳ್ ವರ್ಮಾ ಅವರು ಶಿಬಿರದ ವರದಿಯನ್ನು ಮಂಡಿಸಿ, ವೇದಿಕೆಯಲ್ಲಿದ್ದ ಗಣ್ಯರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹೇಶರಾಮ್ ಮೇಘವಾಲ್ ಅವರು ಎಲ್ಲರೂ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಮನವಿ ಮಾಡಿದರು.
ಮತ್ತೊಬ್ಬ ಗಣ್ಯ ಅತಿಥಿಯಾದ ಮೇಜರ್ ಜನರಲ್ ಅರ್ಜುನ್ ಸಿಂಗ್ ರಾಥೋಡ್ ಅವರು ಘೋಷ್ ಪ್ರದರ್ಶನ ನೀಡಿದ ಸ್ವಯಂಸೇವಕರನ್ನು ಶ್ಲಾಘಿಸಿದರು. ಅವರ ನಿಸ್ವಾರ್ಥ ಸಂಗೀತ ಪ್ರದರ್ಶನವು ಇಡೀ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹರಡಿದೆ ಎಂದು ಹೇಳಿದರು. ಸ್ವಯಂಸೇವಕರ ಪ್ರದರ್ಶನವು ಅತ್ಯಂತ ಶಿಸ್ತುಬದ್ಧವಾಗಿದ್ದು, ಉತ್ತಮ ತರಬೇತಿ ಪಡೆದ ಸೇನಾ ತುಕಡಿಯ ಪ್ರದರ್ಶನದಂತಿತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಸ್ವಯಂಸೇವಕರೊಬ್ಬರು ಕುರುಕ್ಷೇತ್ರದಲ್ಲಿ ಮೊಳಗಿದ ಶಂಖನಾದದ ಮಹತ್ವವನ್ನು ಅರ್ಥಮಾಡಿಕೊಳ್ಳುವ ಮತ್ತು ಧರ್ಮದ ಪರವಾಗಿ ನಿಂತವರನ್ನು ಗುರುತಿಸುವ ಸಂದೇಶ ಸಾರುವ ಭಾವಪೂರ್ಣ ಗೀತೆಯನ್ನು ಪ್ರಸ್ತುತಪಡಿಸಿದರು. ಈ ಗೀತೆಯು ನೆರೆದಿದ್ದವರ ಮನಮುಟ್ಟಿತು.
ಸಮಾರೋಪದಲ್ಲಿ ಡಾ. ಮೋಹನ್ ಭಾಗವತ್ ಅವರು ಎಲ್ಲರಿಗೂ ಛಠ್ ಪೂಜೆಯ ಶುಭಾಶಯಗಳನ್ನು ತಿಳಿಸಿ, ಘೋಷ್ ಶಿಬಿರ ಮುಕ್ತಾಯಗೊಂಡಿರುವುದಾಗಿ ಅಧಿಕೃತವಾಗಿ ಘೋಷಿಸಿದರು.
ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಚಂದ್ರ, ಅಖಿಲ ಭಾರತೀಯ ಶಾರೀರಿಕ ಪ್ರಮುಖ್ ಜಗದೀಶ್ ಚಂದ್ರ, ಸಹ ವ್ಯವಸ್ಥಾ ಪ್ರಮುಖ್ ಅನಿಲ್ ಓಕ್, ಸೀಮಾ ಜಾಗರಣ್ ಸಂಚಾಲಕ ಮುರಳೀಧರ್, ಸಹ ಸಂಚಾಲಕ ನಿಮ್ಬ್ ಸಿಂಗ್, ಲಘು ಉದ್ಯೋಗ ಸಂಘಟನೆಯ ಕಾರ್ಯದರ್ಶಿ ಪ್ರಕಾಶ್ ಚಂದ್ರ, ಸಕ್ಷಮ್ ರಾಷ್ಟ್ರೀಯ ಕಾರ್ಯದರ್ಶಿ ಚಂದ್ರಶೇಖರ್, ಪರಿಸರ ಚಟುವಟಿಕೆಯ ಪ್ರತಿನಿಧಿ ಗೋಪಾಲ್ ಆರ್ಯ ಸೇರಿದಂತೆ ವಿವಿಧ ಪ್ರಾಂತ ಮತ್ತು ಪ್ರಾದೇಶಿಕ ಹಂತದ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
