ಬೆಂಗಳೂರು, ನವೆಂಬರ್ 17, 2026: ಇಂದಿನ ಯುವಕರು ದೇಶದ ಸ್ವಾಭಿಮಾನ ಮತ್ತು ಇತಿಹಾಸದೊಂದಿಗೆ ಗಟ್ಟಿಯಾಗಿ ಬೆಸೆದುಕೊಂಡಿದ್ದಾರೆ. ಕ್ರಿಕೆಟ್ ಅಥವಾ ಸಿನೆಮಾ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿರಲಿ, ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕಿ ಜೈ’ ಎಂದು ಹೇಳಲು ಅವರು ಹಿಂಜರಿಯುವುದಿಲ್ಲ. ಭಾರತೀಯ ಯುವಕರಲ್ಲಿ ಸಾಂಸ್ಕೃತಿಕ ಆತ್ಮವಿಶ್ವಾಸ ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಪ್ರತಿಯೊಬ್ಬ ಭಾರತೀಯನಲ್ಲೂ ಇಂತಹ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಳೆದ ನೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದರು.
ಮಂಥನ ಬೆಂಗಳೂರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ರಶ್ಮೀ ಸಾಮಂತ್ ಸಂಪಾದಿಸಿರುವ ‘Hundred Years Young: Rashtriya Swayamsevak Sangh’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತೀಯ ಯುವಕರಿಗೆ ದೇಶದ ವ್ಯವಸ್ಥೆಯ ಮೇಲೆ ವಿಶ್ವಾಸವಿದೆ
ಭಾರತದ ಯುವಕರನ್ನು ದಾರಿ ತಪ್ಪಿಸಲು ಜಗತ್ತಿನ ಹಲವು ಕಡೆಗಳಿಂದ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪ್ರಯತ್ನಗಳು ಅನೇಕ ದೇಶಗಳಲ್ಲಿ ಯಶಸ್ವಿಯಾಗಿ ಅಲ್ಲಿನ ವ್ಯವಸ್ಥೆಗಳನ್ನು ಅಸ್ಥಿರಗೊಳಿಸಿವೆ. ಆದರೆ ಬೇರೆ ದೇಶಗಳಲ್ಲಿ ನಡೆದಂತೆ ಭಾರತದಲ್ಲಿ ಇಂತಹ ಷಡ್ಯಂತ್ರಗಳು ಯಶಸ್ವಿಯಾಗುತ್ತಿಲ್ಲ. ಇದಕ್ಕೆ ಕಾರಣ ದೇಶದ ವ್ಯವಸ್ಥೆಗಳ ಮೇಲೆ ಯುವಕರಿಗಿರುವ ನಂಬಿಕೆ. ಯುವಕರು ಸಂವಿಧಾನದ ಚೌಕಟ್ಟಿನಲ್ಲಿಯೇ ನಂಬಿಕೆ ಹೊಂದಿದ್ದಾರೆ. ಅವರು ದೇಶವನ್ನು ಎಂದಿಗೂ ಸೋಲಲು ಬಿಡುವುದಿಲ್ಲ. ಆದ್ದರಿಂದ ಯುವಕರ ಮೇಲೆ ಅಪನಂಬಿಕೆ ಇಡುವ ಬದಲು ಅವರಲ್ಲಿ ವಿಶ್ವಾಸವಿಡಬೇಕು ಎಂದು ಸುನೀಲ್ ಅಂಬೇಕರ್ ಅಭಿಪ್ರಾಯಪಟ್ಟರು.
ಸಂಘದ ಆಲೋಚನೆ ಮತ್ತು ಕಾರ್ಯವೈಖರಿ ಸದಾ ಯುವಜನರ ಉತ್ಸಾಹದಿಂದ ಕೂಡಿರುತ್ತದೆ. ಹೀಗಾಗಿಯೇ ಅದು ಪ್ರತಿ ಪೀಳಿಗೆಯ ಯುವಕರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಸಂಘಟನೆ ಹಳೆಯದಾದರೂ ಅದರ ಚಿಂತನೆ ಮತ್ತು ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಸಂಘದ ಮೇಲೆ ಆರೋಪಗಳೇಕೆ?
ಸಂಘದ ಮೇಲೆ ಆಗಾಗ ಆರೋಪಗಳು ಕೇಳಿಬರುತ್ತಿರುವುದೇಕೆ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ ಇಂತಹ ಆರೋಪಗಳು ಸಂಘದ ಬಗ್ಗೆ ಸಮಾಜದಲ್ಲಿ ಚರ್ಚೆ ನಡೆಯಲು ಕಾರಣವಾಗುತ್ತವೆ. ಇದರಿಂದ ಸಂಘದ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ಮತ್ತು ಸ್ಪಷ್ಟತೆ ದೊರೆಯುತ್ತದೆ. ಸಂಘವು ಸಮಾಜದ ಸಂಘಟನೆಯಾಗಿರುವುದರಿಂದ ಅದರ ಬಗ್ಗೆ ಪ್ರಶ್ನೆಗಳು ಕೇಳಿಬರುವುದು ಸಹಜ. ಇಂತಹ ಚರ್ಚೆಗಳಿಂದ ಹೊಸ ವಿಚಾರಗಳು ಮತ್ತು ಆಲೋಚನೆಗಳು ಹುಟ್ಟಿಕೊಳ್ಳಬೇಕು ಎಂದು ಅವರು ಹೇಳಿದರು.
ಹಿಂದೂ ಸಮಾಜದಲ್ಲಿ ಯಾವುದೇ ಕೊರತೆ ಕಂಡುಬಂದರೂ ಜನರು ಸಂಘವನ್ನು ಪ್ರಶ್ನಿಸುತ್ತಾರೆ. ಏಕೆಂದರೆ ಸಂಘ ಆರಂಭದಿಂದಲೂ ದೇಶ ಮತ್ತು ಸಮಾಜ ನಮ್ಮದು ಎಂಬ ಭಾವನೆಯೊಂದಿಗೆ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ದೇಶ ಮತ್ತು ಸಮಾಜವನ್ನು ನಮ್ಮದೆಂದು ಭಾವಿಸದೆ ಕೇವಲ ಟೀಕೆ ಮಾಡುವುದರಿಂದ ಪ್ರಯೋಜನವಿಲ್ಲ. ದೇಶ ನಮ್ಮದು ಎಂದ ಮೇಲೆ ಅದರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ತಿಳಿಸಿದರು.
ದೇಶದ ಜವಾಬ್ದಾರಿ ಎಲ್ಲರದ್ದೂ ಆಗಿದೆ
ದೇಶದ ಜವಾಬ್ದಾರಿ ಕೆಲವರಿಗಷ್ಟೇ ಸೀಮಿತವಾಗಿರಬಾರದು. ಪ್ರತಿಯೊಬ್ಬರೂ ಅದರಲ್ಲಿ ತಮ್ಮ ಪಾಲಿನ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಈ ಜವಾಬ್ದಾರಿ ಒಂದು ಪೀಳಿಗೆಗೆ ಮಾತ್ರ ಸೇರಿದ್ದಲ್ಲ; ಮುಂದಿನ ಪ್ರತಿಯೊಂದು ಪೀಳಿಗೆಯೂ ಅದನ್ನು ಮುಂದುವರಿಸಬೇಕು.
ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಸಂಘ ಕಾರ್ಯನಿರ್ವಹಿಸುತ್ತಿದೆ. ಯುವಕರ ಕನಸುಗಳು ಮತ್ತು ಆಶಯಗಳಿಗೆ ಅನುಗುಣವಾಗಿ ಸಂಘದ ಕಾರ್ಯಗಳು ರೂಪುಗೊಳ್ಳುತ್ತಿವೆ. ಇಂದಿನ ಯುವಪೀಳಿಗೆ ದೇಶದ ಮೇಲೆ ವಿಶ್ವಾಸ ಹೊಂದಿದೆ. ಭಾರತೀಯ ಯುವಕರು ತಮ್ಮ ಸಂಸ್ಕೃತಿಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದು ಸುನೀಲ್ ಅಂಬೇಕರ್ ಹೇಳಿದರು.
ಸಾಂಸ್ಕೃತಿಕ ಆತ್ಮವಿಶ್ವಾಸ ಹೆಚ್ಚಿಸುವುದು ಸಂಘದ ಗುರಿ
ಭಾರತೀಯರಲ್ಲಿ ಸಾಂಸ್ಕೃತಿಕ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದಲೇ ಡಾ. ಹೆಡಗೇವಾರ್ ಅವರು ಸಂಘವನ್ನು ಸ್ಥಾಪಿಸಿದರು. ಇಂದು ಲಕ್ಷಾಂತರ ಜನರು ಈ ಸಾಂಸ್ಕೃತಿಕ ಆತ್ಮವಿಶ್ವಾಸದೊಂದಿಗೆ ಸಮಾಜದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುವಕರು ತಮ್ಮ ಭಾರತೀಯ ಅಸ್ಮಿತೆಯ ಬಗ್ಗೆ ಹೆಮ್ಮೆ ಮತ್ತು ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ಅವರು ಹೇಳಿದರು.
ಕೋಟ್ಯಂತರ ಯುವಕರ ಮನದ ಮಾತನ್ನು ಪ್ರತಿನಿಧಿಸುವ ಕೃತಿ
ಭಾರತದ ಭವಿಷ್ಯ ಉಜ್ವಲವಾಗಿದೆ. ದೇಶದ ಮುಂದೆ ಹಲವು ಸವಾಲುಗಳು ಎದುರಾಗಬಹುದು. ಆದರೆ ಅವುಗಳನ್ನು ಎದುರಿಸುವ ಸಾಮರ್ಥ್ಯ ಇಂದಿನ ಯುವಕರಿಗಿದೆ. ‘A Hundred Years Young’ ಕೃತಿಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಕೇವಲ 20 ಜನರಿಗೆ ಮಾತ್ರ ಸೀಮಿತವಾಗಿಲ್ಲ. ಅದೇ ರೀತಿಯ ಚಿಂತನೆ ಹೊಂದಿರುವ ಕೋಟ್ಯಂತರ ಯುವಕರ ಭಾವನೆಗಳನ್ನು ಈ ಕೃತಿ ಪ್ರತಿನಿಧಿಸುತ್ತದೆ. ಕೃತಿಗೆ ನೀಡಿರುವ ಶೀರ್ಷಿಕೆಯೂ ಅರ್ಥಪೂರ್ಣವಾಗಿದೆ ಎಂದು ಸುನೀಲ್ ಅಂಬೇಕರ್ ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಸಂವಾದದ ಮನೋಭಾವ ಬೆಳೆಸಿದ ಸಂಘ
ಅತ್ಯಂತ ಕಠಿಣ ಸಂದರ್ಭಗಳಲ್ಲಿಯೂ ಸಮಾಜದಲ್ಲಿ ಸಂವಾದದ ವಾತಾವರಣವನ್ನು ನಿರ್ಮಿಸಲು ಸಂಘ ಪ್ರಯತ್ನಿಸಿದೆ. ಮಣಿಪುರದಂತಹ ಪ್ರದೇಶಗಳಲ್ಲಿ ಅಲ್ಲಿನ ಯುವಕರೊಂದಿಗೆ ಸಂಘ ನಡೆಸಿದ ಸಂವಾದ ಇದಕ್ಕೆ ಉದಾಹರಣೆಯಾಗಿದೆ. ಯುವಕರು ಭಾರತವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ದೇಶದ ರಕ್ಷಣೆಗಾಗಿ ದೃಢವಾಗಿ ನಿಲ್ಲುತ್ತಾರೆ ಎಂಬುದು ಇತಿಹಾಸದ ಹಲವು ಘಟನೆಗಳಿಂದ ಸಾಬೀತಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೃತಿಯ ಸಂಪಾದಕಿ ರಶ್ಮೀ ಸಾಮಂತ್, ಈ ಪುಸ್ತಕದ ಸಂಪಾದಕಿಯಾಗಿರುವುದು ತಮ್ಮ ಜೀವನದ ಅತ್ಯಂತ ಗೌರವದ ಕ್ಷಣಗಳಲ್ಲಿ ಒಂದು ಎಂದು ಹೇಳಿದರು. ಆರ್ಎಸ್ಎಸ್ನ ನೂರು ವರ್ಷಗಳ ಪಯಣವನ್ನು ಕೇವಲ ಸಂಘಟನೆಯ ಇತಿಹಾಸವಾಗಿ ದಾಖಲಿಸುವುದಕ್ಕಿಂತ, ಅದರೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳ ಜೀವನಾನುಭವಗಳ ಮೂಲಕ ಪರಿಚಯಿಸುವುದು ಈ ಪುಸ್ತಕದ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಯುವಜನರ ಚಿಂತನೆಯಿಂದ ರೂಪುಗೊಂಡ ಕೃತಿ
1925ರಲ್ಲಿ ಸಂಘ ಸ್ಥಾಪನೆಯಾದಾಗಿನಿಂದ ಅದರ ಬೆಳವಣಿಗೆಯಲ್ಲಿ ಯುವಜನರು ಪ್ರಮುಖ ಪಾತ್ರ ವಹಿಸಿದ್ದಾರೆ. ಇತಿಹಾಸದ ವಿವಿಧ ಹಂತಗಳಲ್ಲಿ ದೇಶದ ದಿಕ್ಕು ನಿರ್ಧರಿಸುವಲ್ಲಿಯೂ ಯುವಕರು ಮಹತ್ವದ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಪುಸ್ತಕದ ಪರಿಕಲ್ಪನೆ ರೂಪುಗೊಂಡಿತು ಎಂದು ರಶ್ಮೀ ಸಾಮಂತ್ ತಿಳಿಸಿದರು.
ಭಾರತ ಮತ್ತು ವಿದೇಶಗಳ 20 ಮಂದಿ ತಮ್ಮ ವೈಯಕ್ತಿಕ ಅನುಭವಗಳ ಮೂಲಕ ಆರ್ಎಸ್ಎಸ್ನೊಂದಿಗಿನ ತಮ್ಮ ಸಂಬಂಧವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಕೆಲವರು ತಮ್ಮ ತಂದೆ, ತಾತ ಮತ್ತು ಕುಟುಂಬದ ಹಿರಿಯರಿಂದ ಪಡೆದ ಪ್ರೇರಣೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಸಂಘದೊಂದಿಗಿನ ತಮ್ಮ ವೈಯಕ್ತಿಕ ಅನುಭವಗಳು ಮತ್ತು ಸಂವಾದಗಳ ಬಗ್ಗೆ ಬರೆದಿದ್ದಾರೆ.
ಕೃತಕ ಬುದ್ಧಿಮತ್ತೆ ಮತ್ತು ಗೂಗಲ್ನಂತಹ ತಂತ್ರಜ್ಞಾನಗಳು ವ್ಯಾಪಕವಾಗಿರುವ ಇಂದಿನ ಕಾಲದಲ್ಲಿಯೂ ಪುಸ್ತಕಗಳ ಮಹತ್ವ ಕಡಿಮೆಯಾಗುವುದಿಲ್ಲ. ತಂತ್ರಜ್ಞಾನದಿಂದ ಮಾಹಿತಿಯನ್ನು ಪಡೆಯಬಹುದು. ಆದರೆ ವ್ಯಕ್ತಿಗಳ ಜೀವನಾನುಭವ, ನೆನಪುಗಳು ಮತ್ತು ಭಾವನೆಗಳನ್ನು ಪುಸ್ತಕಗಳು ವಿಶಿಷ್ಟವಾಗಿ ದಾಖಲಿಸುತ್ತವೆ ಎಂದು ಅವರು ಹೇಳಿದರು.
‘ಪ್ರಸಿದ್ಧಿ ಪರಾನ್ಮುಖತೆ’: ಮನ್ನಣೆಗಿಂತ ಸೇವೆಗೆ ಆದ್ಯತೆ
ಆರ್ಎಸ್ಎಸ್ನ ಕಾರ್ಯವೈಖರಿಯನ್ನು ವಿವರಿಸಿದ ರಶ್ಮೀ ಸಾಮಂತ್, ಸಂಘದ ಪ್ರಮುಖ ಮೌಲ್ಯಗಳಲ್ಲಿ ಒಂದಾದ ‘ಪ್ರಸಿದ್ಧಿ ಪರಾನ್ಮುಖತೆ’ಯನ್ನು ಉಲ್ಲೇಖಿಸಿದರು. ಅಂದರೆ ಪ್ರಚಾರ ಅಥವಾ ವೈಯಕ್ತಿಕ ಮನ್ನಣೆಯನ್ನು ಬಯಸದೆ ಸಮಾಜದ ಹಿತಕ್ಕಾಗಿ ನಿರಂತರವಾಗಿ ಕೆಲಸ ಮಾಡುವುದು.
ಸಾರ್ವಜನಿಕವಾಗಿ ಕಾಣಿಸುವ ಸಂಘದ ಸಾಧನೆಗಳು ಅದರ ಒಟ್ಟು ಕಾರ್ಯದ ಒಂದು ಸಣ್ಣ ಭಾಗ ಮಾತ್ರ. ತೆರೆಮರೆಯಲ್ಲಿ ನಡೆಯುತ್ತಿರುವ ಸಾವಿರಾರು ಸೇವಾ ಕಾರ್ಯಗಳ ಬಗ್ಗೆ ಸಮಾಜದ ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ಇಂತಹ ನಿಸ್ವಾರ್ಥ ಸೇವೆಯೇ ಸಂಘದ ಕಾರ್ಯವೈಖರಿಯ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದರು.
ವಿವಿಧ ಕ್ಷೇತ್ರಗಳ 20 ಸಾಧಕರ ಅನುಭವಗಳು
ಈ ಪುಸ್ತಕದಲ್ಲಿ ಕಾನೂನು, ಸಿನಿಮಾ, ಕ್ರೀಡೆ, ಪತ್ರಿಕೋದ್ಯಮ, ಉದ್ಯಮ, ಸಾರ್ವಜನಿಕ ಜೀವನ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ 20 ಮಂದಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಆದಿತ್ಯ ಶ್ರೀನಿವಾಸನ್: ಸುಪ್ರೀಂ ಕೋರ್ಟ್ ವಕೀಲರು ಹಾಗೂ ಹಾರ್ವರ್ಡ್ ಪದವೀಧರರಾಗಿರುವ ಇವರು, ಸಂಘದೊಂದಿಗಿನ ಒಡನಾಟದಿಂದ ತಾವು ಕಲಿತ ಜೀವನಪಾಠಗಳನ್ನು ದಾಖಲಿಸಿದ್ದಾರೆ.
ವಿಜಯ್ ಸುಬ್ರಮಣಿಯನ್: ಚಲನಚಿತ್ರ ನಿರ್ಮಾಪಕ ಮತ್ತು ಪ್ರತಿಭಾ ನಿರ್ವಾಹಕರಾಗಿರುವ ಇವರು, ಭಾರತದ ಸಾಂಸ್ಕೃತಿಕ ಆತ್ಮವನ್ನು ಜೀವಂತವಾಗಿಡುವಲ್ಲಿ ಸಂಘದ ಪಾತ್ರವನ್ನು ವಿವರಿಸಿದ್ದಾರೆ.
ಜರ್ಮನಿಯ ಹೆಸ್ಸೆನ್ ರಾಜ್ಯದ ಶಾಸಕರು: ಎಡಪಂಥೀಯ ಹಿನ್ನೆಲೆಯಿಂದ ಬಂದಿರುವ ಈ ಲೇಖಕರು, ಸಂಘದ ಮೂಲಕ ತಮ್ಮ ಭಾರತೀಯ ಅಸ್ಮಿತೆಯನ್ನು ಗುರುತಿಸಿಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ಜತೆಗೆ ಫ್ರಾಂಕ್ಫರ್ಟ್ನಲ್ಲಿ ಶಾಖೆ ಆರಂಭಿಸಿದ ಬಗ್ಗೆಯೂ ವಿವರಿಸಿದ್ದಾರೆ.
ವಿಕ್ರಾಂತ್ ಮಸ್ಸಿ: ಚಿತ್ರೀಕರಣಕ್ಕಾಗಿ ದೂರದ ಪ್ರದೇಶಗಳಿಗೆ ತೆರಳಿದ ಸಂದರ್ಭದಲ್ಲಿ ಅಲ್ಲಿ ಸಂಘ ನಡೆಸುತ್ತಿದ್ದ ಉಚಿತ ಶಿಕ್ಷಣ ಮತ್ತು ಸೇವಾ ಚಟುವಟಿಕೆಗಳನ್ನು ಕಂಡ ಅನುಭವವನ್ನು ದಾಖಲಿಸಿದ್ದಾರೆ.
ರುಬಿಕಾ ಲಿಯಾಕತ್: ಜೈಪುರದ ಮುಸ್ಲಿಂ ಕುಟುಂಬದಲ್ಲಿ ಬೆಳೆದ ಪತ್ರಕರ್ತೆಯಾಗಿ ತಮ್ಮ ಜೀವನಾನುಭವ ಹಾಗೂ ರೇಶಿಂಬಾಗ್ಗೆ ನೀಡಿದ ಭೇಟಿಯ ಕುರಿತು ಬರೆದಿದ್ದಾರೆ.
ಅಂಕಿತ್ ಗುಪ್ತಾ: ಕೋವಿಡ್ ಸಂದರ್ಭದಲ್ಲಿ ಸಂಘವು ದುರ್ಬಲ ವರ್ಗದ ಜನರಿಗೆ ನೀಡಿದ ನೆರವು ಮತ್ತು ಬೆಂಬಲದ ಬಗ್ಗೆ ದಾಖಲಿಸಿದ್ದಾರೆ.
ವಿಶೇಷ್ ರಘುವಂಶಿ: ಅರ್ಜುನ ಪ್ರಶಸ್ತಿ ಪುರಸ್ಕೃತ ಬಾಸ್ಕೆಟ್ಬಾಲ್ ಆಟಗಾರರಾಗಿರುವ ಇವರು, ಶಾಖೆಯ ಅನುಭವದಿಂದ ಅಸಾಂಪ್ರದಾಯಿಕ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರಣೆ ಪಡೆದ ಬಗ್ಗೆ ವಿವರಿಸಿದ್ದಾರೆ.
ಬೃಂದಾ ಘೋಟಕ್: ಮುಂಬೈ ಮೂಲದ ಉದ್ಯಮಿಯಾಗಿರುವ ಇವರು, ಸಂಘದ ನಿರ್ವಹಣಾ ವಿಧಾನ ಮತ್ತು ಸಂಘಟನಾ ವ್ಯವಸ್ಥೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಸ್ವಾಮಿ ಸರಸ್ವತಿ ಸಾಗರ್: ಸಂಘದಿಂದ ತಮಗೆ ದೊರೆತ ಮೌಲ್ಯಗಳು ಮತ್ತು ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸೇವಾ ಚಟುವಟಿಕೆಗಳ ಬಗ್ಗೆ ವಿವರಿಸಿದ್ದಾರೆ.
ಭಾಷಾ ಸುಂಬ್ಲಿ: ನಟಿಯಾಗಿರುವ ಇವರು, ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರಿಗಾಗಿ ಸಂಘ ನಡೆಸಿದ ಶಿಬಿರಗಳೊಂದಿಗೆ ತಮ್ಮ ಬಾಲ್ಯದಲ್ಲಿ ಹೊಂದಿದ್ದ ನಂಟಿನ ಕುರಿತು ಬರೆದಿದ್ದಾರೆ.
ನಿಖಿಲ್ ಛಾಬ್ರಾ: ದೇಶ ವಿಭಜನೆಯ ಸಂದರ್ಭದಲ್ಲಿ ನಿರಾಶ್ರಿತರಾದ ಕುಟುಂಬದ ಮೂರನೇ ತಲೆಮಾರಿನ ಸದಸ್ಯರಾಗಿರುವ ಇವರು, ಸಂಘದೊಂದಿಗಿನ ಬಾಂಧವ್ಯ ಮತ್ತು ಅದರೊಂದಿಗೆ ಬೆಸೆದುಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ.
ರಿಷಭ್ ಷಾ: ಯುವಜನರ ನೇತೃತ್ವದ ಮಾದರಿ ವಿಶ್ವಸಂಸ್ಥೆ ಉಪಕ್ರಮವನ್ನು ಮುನ್ನಡೆಸುತ್ತಿರುವ ಇವರು, ನಾಗ್ಪುರದಲ್ಲಿ ಕಂಡ ಶಿಸ್ತು ಮತ್ತು ಸಂಘಟನಾ ವ್ಯವಸ್ಥೆಯ ಬಗ್ಗೆ ಬರೆದಿದ್ದಾರೆ.
ಸೈನಾ ನೆಹ್ವಾಲ್: ಒಲಿಂಪಿಕ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಇವರು, ಪುಸ್ತಕದ ಕೊನೆಯ ಲೇಖನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಇವರಲ್ಲದೆ, ಬ್ರಿಟಿಷ್ ವಿದ್ವಾಂಸರೊಬ್ಬರು ಯುರೋಪಿನ ಉದಾರವಾದಿ ದೃಷ್ಟಿಕೋನದಿಂದ ಸಂಘದ ನೂರು ವರ್ಷಗಳ ಪಯಣವನ್ನು ವಿಶ್ಲೇಷಿಸಿದ್ದಾರೆ.
ಸಾವಿರಾರು ಸಾಮಾನ್ಯ ದಿನಗಳ ಪರಿಶ್ರಮವೇ ಶತಮಾನದ ಇತಿಹಾಸ
ಪುಸ್ತಕದಲ್ಲಿ ಸೈನಾ ನೆಹ್ವಾಲ್ ಬರೆದಿರುವ ಲೇಖನದ ಒಂದು ಭಾಗವನ್ನು ಉಲ್ಲೇಖಿಸಿದ ರಶ್ಮೀ ಸಾಮಂತ್, ಯಾವುದೇ ಸಂಸ್ಥೆಯ ನೂರು ವರ್ಷಗಳ ಇತಿಹಾಸವು ಕೆಲವು ಅಸಾಧಾರಣ ದಿನಗಳಿಂದ ಮಾತ್ರ ನಿರ್ಮಾಣವಾಗುವುದಿಲ್ಲ ಎಂದು ಹೇಳಿದರು. ಬದಲಾಗಿ ಸಾವಿರಾರು ಸಾಮಾನ್ಯ ದಿನಗಳಲ್ಲಿ ನಡೆದ ನಿರಂತರ ಪರಿಶ್ರಮವೇ ಅಂತಹ ಇತಿಹಾಸಕ್ಕೆ ಅಡಿಪಾಯವಾಗುತ್ತದೆ ಎಂಬ ಸಂದೇಶವನ್ನು ಅವರು ವಿವರಿಸಿದರು.
ವಿಪತ್ತುಗಳು, ಯುದ್ಧಗಳು, ಬರಗಾಲ ಮತ್ತು ಕೋವಿಡ್ನಂತಹ ಸಂಕಷ್ಟದ ಸಂದರ್ಭಗಳಲ್ಲಿ ಸಂಘದ ಸ್ವಯಂಸೇವಕರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸೇವೆಯಲ್ಲಿ ತೊಡಗಿರುವ ಸಾವಿರಾರು ಕಾರ್ಯಕರ್ತರು ವೈಯಕ್ತಿಕವಾಗಿ ಪ್ರಸಿದ್ಧಿ ಪಡೆಯದಿದ್ದರೂ, ಅವರ ನಿರಂತರ ಪರಿಶ್ರಮವೇ ಸಂಘದ ನೂರು ವರ್ಷಗಳ ಪಯಣಕ್ಕೆ ಆಧಾರವಾಗಿದೆ ಎಂಬುದು ಈ ಲೇಖನದ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.
1962ರ ಭಾರತ-ಚೀನಾ ಯುದ್ಧದ ಬಳಿಕ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು 1963ರ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಸುಮಾರು 3,500 ಆರ್ಎಸ್ಎಸ್ ಸ್ವಯಂಸೇವಕರನ್ನು ಆಹ್ವಾನಿಸಿದ್ದ ಘಟನೆಯನ್ನೂ ಅವರು ಸ್ಮರಿಸಿದರು. ಈ ಐತಿಹಾಸಿಕ ಕ್ಷಣದ ಛಾಯಾಚಿತ್ರವೇ ಪುಸ್ತಕದ ಮುಖಪುಟದಲ್ಲಿ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ಅನುಭವಗಳ ಮೂಲಕ ಸಂಘದ ಶತಮಾನದ ಪಯಣ
ತಾವು ಕೂಡ ಸ್ವಯಂಸೇವಕರೊಬ್ಬರ ಮಗಳಾಗಿ ಬೆಳೆದ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿರುವುದಾಗಿ ರಶ್ಮೀ ಸಾಮಂತ್ ಹೇಳಿದರು. ಕೃತಿಯಲ್ಲಿರುವ ಬಹುತೇಕ ಲೇಖಕರು ವೃತ್ತಿಪರ ಬರಹಗಾರರಲ್ಲ. ಅವರು ತಮ್ಮ ಜೀವನದಲ್ಲಿ ಕಂಡ, ಅನುಭವಿಸಿದ ಮತ್ತು ಅರ್ಥಮಾಡಿಕೊಂಡ ಸಂಗತಿಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ ಈ ಪುಸ್ತಕವು ಕೇವಲ ಸಾಹಿತ್ಯಿಕ ಕೃತಿಯಾಗಿರದೆ, ವಿಭಿನ್ನ ವ್ಯಕ್ತಿಗಳ ಬದುಕಿನ ಅನುಭವಗಳನ್ನು ಪರಿಚಯಿಸುವ ಪ್ರಯತ್ನವಾಗಿದೆ ಎಂದು ವಿವರಿಸಿದರು.
ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಸಂಘವನ್ನು ನಿರಂತರವಾಗಿ ರೂಪುಗೊಳ್ಳುತ್ತಿರುವ ಮತ್ತು ಬೆಳೆಯುತ್ತಿರುವ ಪ್ರಕ್ರಿಯೆ ಎಂದು ವಿವರಿಸಿರುವುದನ್ನು ರಶ್ಮೀ ಸಾಮಂತ್ ಸ್ಮರಿಸಿದರು. ಸಂಘದ ನೂರು ವರ್ಷಗಳ ಪಯಣವೇ ಅಂತಿಮ ಗುರಿಯಲ್ಲ. ಅದು ಸಮಾಜದ ಹಿತಕ್ಕಾಗಿ ನಿರಂತರವಾಗಿ ಮುಂದುವರಿಯುತ್ತಿರುವ ಪ್ರಯಾಣವಾಗಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
‘100 Years Young: Rashtriya Swayamsevak Sangh’ ಕೃತಿಯು ಸಂಘದ ಇತಿಹಾಸವನ್ನು ಕೇವಲ ಘಟನೆಗಳು ಮತ್ತು ಸಾಧನೆಗಳ ಮೂಲಕ ಪರಿಚಯಿಸುವುದಿಲ್ಲ. ಬದಲಾಗಿ ಸಂಘದೊಂದಿಗೆ ಬದುಕಿದ ಮತ್ತು ನಂಟು ಹೊಂದಿರುವ 20 ವಿಭಿನ್ನ ವ್ಯಕ್ತಿಗಳ ಅನುಭವಗಳ ಮೂಲಕ ಅದರ ಶತಮಾನದ ಪಯಣವನ್ನು ಓದುಗರ ಮುಂದೆ ತೆರೆದಿಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಎಂ. ಜಯಪ್ರಕಾಶ್, ಶಿಕ್ಷಣತಜ್ಞ ಹಾಗೂ ಚಿಂತಕ ಡಾ. ಪಿ.ವಿ. ಕೃಷ್ಣಭಟ್, ಕರ್ನಾಟಕ ಮತ್ತು ಉತ್ತರ ಪ್ರಾಂತ ಪ್ರಚಾರ ಪ್ರಮುಖ್ ಅರುಣ್ ಕುಮಾರ್, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಿಂತಕರು, ಸಾಮಾಜಿಕ ಕಾರ್ಯಕರ್ತರು, ಲೇಖಕರು ಹಾಗೂ ಯುವ ಬರಹಗಾರರು ಭಾಗವಹಿಸಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
