“ಯುವಜನರು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಭಾರತದ ಸಾಂಸ್ಕೃತಿಕ, ಬೌದ್ಧಿಕ ಪರಂಪರೆಯನ್ನು ಮುಂದುವರಿಸಬೇಕು”: ಪ್ರೊ. ಬಟ್ಟು ಸತ್ಯನಾರಾಯಣ
ಸಿ.ಯು.ಕೆ.ಯಲ್ಲಿ “ಭಾರತೀಯ ಜ್ಞಾನ ವ್ಯವಸ್ಥೆ: ಒಂದು ಪರಿಚಯ” ಕುರಿತು ವಿಶೇಷ ಉಪನ್ಯಾಸ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿ.ಯು.ಕೆ.) ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗ ಹಾಗೂ ಭಾಷಾಶಾಸ್ತ್ರ ವಿಭಾಗ ಜಂಟಿಯಾಗಿ “ಭಾರತೀಯ ಜ್ಞಾನ ವ್ಯವಸ್ಥೆ: ಒಂದು ಪರಿಚಯ” ಕುರಿತು ವಿಶೇಷ ಉಪನ್ಯಾಸವನ್ನು ಬುಧವಾರ ವಿ.ವಿ.ಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಯುವ ವಿದ್ವಾಂಸ ಹಾಗೂ Indian Knowledge System ಕೃತಿಯ ಸಹ-ಲೇಖಕರಾದ ಶ್ರೀ ಅಂಶುಮಾನ್ ಪಾಂಡಾ, ಭಾರತವು ಸಾವಿರಾರು ವರ್ಷಗಳ ಶ್ರೀಮಂತ ಹಾಗೂ ನಿರಂತರ ಜ್ಞಾನ ಪರಂಪರೆಯನ್ನು ಹೊಂದಿರುವ ದೇಶವಾಗಿದೆ ಎಂದು ಹೇಳಿದರು. ಮಾನವೀಯ ಮೌಲ್ಯಗಳು, ನೈತಿಕತೆ, ಸಾಹಿತ್ಯ, ತತ್ತ್ವಶಾಸ್ತ್ರ, ಗಣಿತ, ವಿಜ್ಞಾನ, ವೈದ್ಯಕೀಯ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತೀಯ ಜ್ಞಾನ ಪರಂಪರೆಯು ಮಹತ್ವದ ಕೊಡುಗೆ ನೀಡಿದೆ ಎಂದು ಅವರು ತಿಳಿಸಿದರು.
ಭಾರತೀಯ ಜ್ಞಾನ ವ್ಯವಸ್ಥೆ (ಐಕೆಎಸ್) ಕೇವಲ ಭಾರತಕ್ಕೆ ಸೀಮಿತವಾಗಿರದೆ ಜಾಗತಿಕ ಪ್ರಸ್ತುತತೆಯನ್ನು ಹೊಂದಿದೆ. ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕತೆ, ತಂತ್ರಜ್ಞಾನ ಮತ್ತು ನಾವೀನ್ಯತೆಯೊಂದಿಗೆ ಅರ್ಥಪೂರ್ಣವಾಗಿ ಸಂಯೋಜಿಸುವ ಮೂಲಕ ಸಮಕಾಲೀನ ಸಮಾಜಕ್ಕೆ ಉಪಯುಕ್ತವಾಗಿಸಬಹುದು ಎಂದು ಅವರು ಹೇಳಿದರು. ಶಿಕ್ಷಣದ ಅವಿಭಾಜ್ಯ ಅಂಗವಾಗಿ ಐಕೆಎಸ್ ಅನ್ನು ಉತ್ತೇಜಿಸುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು. ಶಾಲಾ ಮತ್ತು ಉನ್ನತ ಶಿಕ್ಷಣದ ಪಠ್ಯಕ್ರಮಗಳಲ್ಲಿ ಭಾರತದ ಸ್ಥಳೀಯ ಹಾಗೂ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ಅಳವಡಿಸುವ ಮೂಲಕ, ಭಾರತದ ಶ್ರೀಮಂತ ಜ್ಞಾನ ಪರಂಪರೆಯನ್ನು ಸಮಕಾಲೀನ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಕಲಿಕೆಯೊಂದಿಗೆ ಸಂಪರ್ಕಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ಯು.ಕೆ.ಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರು ಭಾರತೀಯ ಸಾಂಸ್ಕೃತಿಕ ಮೌಲ್ಯಗಳು, ನೈತಿಕತೆ ಹಾಗೂ ಪರಂಪರೆಯನ್ನು ಸಂರಕ್ಷಿಸುವ ಮಹತ್ವವನ್ನು ಒತ್ತಿ ಹೇಳಿದರು. ರಾಮಾಯಣ ಮತ್ತು ಮಹಾಭಾರತದಲ್ಲಿ ಪ್ರತಿಬಿಂಬಿತವಾಗಿರುವ ಮೌಲ್ಯಗಳನ್ನು ಉಲ್ಲೇಖಿಸಿದ ಅವರು, ಹಿರಿಯರಿಗೆ ಗೌರವ, ಕೌಟುಂಬಿಕ ಮೌಲ್ಯಗಳು, ನೈತಿಕ ನಡವಳಿಕೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ವಿವರಿಸಿದರು. “ಯುವಜನರು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಭಾರತದ ಸಾಂಸ್ಕೃತಿಕ ಹಾಗೂ ಬೌದ್ಧಿಕ ಪರಂಪರೆಯನ್ನು ಅರ್ಥಮಾಡಿಕೊಂಡು ಮುಂದುವರಿಸಿಕೊಂಡು ಹೋಗಬೇಕು” ಎಂದು ಅವರು ಕರೆ ನೀಡಿದರು.
ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೋಟಾ ಸಾಯಿ ಕೃಷ್ಣ ಮಾತನಾಡಿ, “ವಸುಧೈವ ಕುಟುಂಬಕಮ್” ಎಂಬ ಭಾರತೀಯ ತತ್ತ್ವವು ಇಡೀ ಜಗತ್ತನ್ನು ಒಂದು ಕುಟುಂಬವೆಂದು ಪರಿಗಣಿಸುವ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯವನ್ನು ಒತ್ತಿಹೇಳುತ್ತದೆ ಎಂದು ಹೇಳಿದರು. ಯುವಜನರು ದೇಶದ ಮೌಲ್ಯಗಳನ್ನು ಎತ್ತಿಹಿಡಿದು, ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಬೇಕು ಹಾಗೂ ಸ್ವಾವಲಂಬನೆ ಮತ್ತು “ವಿಕಸಿತ ಭಾರತ 2047”ರ ಗುರಿಯತ್ತ ಶ್ರಮಿಸಬೇಕು ಎಂದು ಕರೆ ನೀಡಿದರು.
ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಮುಖ್ಯಸ್ಥ ಪ್ರೊ. ಚಂದನ್ ಕುಮಾರ್ ಪಾಂಡಾ ಸ್ವಾಗತ ಭಾಷಣ ಮಾಡಿದರು. ಡಾ. ಆಶಿಶ್ ಬೆಲಮ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ರಾಹುಲ್ ಎನ್. ಮಹೈಸ್ಕರ್ ವಂದಿಸಿದರು.
ಡಾ. ರವಿ ಜೆ. ಖಂಗೈ, ಡಾ. ಗಣಪತಿ ಬಿ. ಸಿನ್ನೂರು, ಪ್ರೊ. ಸಂದೀಪ್ ವಿಶ್ವನಾಥರಾವ್ ರಣಭೀರ್ಕರ್, ಪ್ರೊ. ಮನೋಹರ ಲಕ್ಷ್ಮಣಪ್ಪ ಭಂಡಾರೆ, ಪ್ರೊ. ದೇವರಾಜಪ್ಪ, ಡಾ. ಪ್ರಕಾಶ್ ಬಾಳಿಕಾಯಿ, ಡಾ. ಮುದನಾರ್ ದತ್ತಾ ಸರ್ಜೆರಾವ್, ಡಾ. ಭಾವನಾ, ಡಾ. ವಿ. ಗೋವಿಂದ್ ಜಾಧವ್, ಡಾ. ಜಿ. ಆಂಜನೇಯಲು, ಡಾ. ಪಿ. ಕುಮಾರ್ ಮಂಗಳಂ, ಕುಮಾರಿ ಪಿಯಾಲಿ ರಾಯ್ ಹಾಗೂ ಡಾ. ಶ್ರೀಲತಾ ಸೇರಿದಂತೆ ವಿವಿಧ ವಿಭಾಗಗಳ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಗೀತ ಮತ್ತು ಲಲಿತಕಲೆಗಳ ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
