- ಬಸವರಾಜ ಸಿ. ಚಿಕ್ಕಗೂಳ, ಪತ್ರಿಕೋದ್ಯಮ ವಿದ್ಯಾರ್ಥಿ
“ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತವನ್ನು ಉಪಯೋಗಿಸದೇ ಇರುವುದರಿಂದ ಸಂಸ್ಕೃತಕ್ಕಾಗುವ ನಷ್ಟವೇನಿಲ್ಲ, ನಷ್ಟ ಕನ್ನಡಕ್ಕೆ”. ಇತ್ತೀಚಿಗೆ ಕನ್ನಡ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಲೇಖಕರೊಬ್ಬರು ಹೇಳಿದ ಮಾತು. “ಜನ ಸರಿ ಇಲ್ಲ ರೀ” ಇದು ನೀವು ಸಾಮಾನ್ಯವಾಗಿ ಕೇಳುವ ಪದ. ಈ ಜನ ಎಂದರೆ ಯಾರು? ನಾವೇ. ಜನರನ್ನೇ ಸಮುದಾಯ, ಜನಾಂಗ, ಕೊನೆಗೆ ಸಮಾಜ ಎಂದು ಕರೆಯುತ್ತಾರೆ. ಪ್ರತಿಯೊಬ್ಬರೂ ಈ ಸಮಾಜದ ಭಾಗವೇ ಹಾಗೂ ಪ್ರತಿಯೊಬ್ಬರೂ ಕೂಡುವುದರಿಂದಲೇ ಸಮಾಜ ನಿರ್ಮಾಣವಾಗುತ್ತದೆ. ಒಬ್ಬನನ್ನು ಒಂದು ಸಮಾಜವೆನ್ನಲು ಸಾಧ್ಯವಿಲ್ಲ. ಹಾಗಾಗಿ ಜನ ಸರಿ ಇಲ್ಲ ಎನ್ನುವ ಮೊದಲು ನಮ್ಮನ್ನು ನಾವೇ ನೋಡಿಕೊಳ್ಳಬೇಕಷ್ಟೇ. ಒಂದು ಸಮಾಜ ತಾನು ಉಳಿಯಲು, ಬೆಳೆಯಲು, ಉತ್ತುಂಗಕ್ಕೇರಲು ಸಂಸ್ಕೃತಿ, ಸಿದ್ಧಾಂತ, ನೀತಿ, ನಿಯಮಗಳನ್ನು, ಅನೇಕ ವ್ಯವಸ್ಥೆಗಳನ್ನು, ಧರ್ಮ (ಕರ್ತವ್ಯ)ವನ್ನು ತನಗೆ ತಾನೇ ನಿರ್ಮಿಸಿಕೊಳ್ಳುತ್ತದೆ(ತ್ತಾರೆ).
ತನಗೆ ಏನು ಬೇಕು, ಏನು ಬೇಡ ಎಂಬುದನ್ನು ಸಮಾಜವೇ ನಿರ್ಧರಿಸುತ್ತದೆ. ಅದರ ಆಧಾರದ ಮೇಲೆ ತನಗೆ ಬೇಕಾದುದನ್ನು ಸಮಾಜವೇ ಸೃಷ್ಟಿಸಿಕೊಳ್ಳುತ್ತದೆ ಹಾಗೂ ಬೇಡವಾದುದನ್ನು ಹಾವು ಪೊರೆ ತ್ಯಜಿಸಿದ ಹಾಗೆ, ಮನುಷ್ಯ ಬಟ್ಟೆ ತ್ಯಜಿಸಿದ ಹಾಗೆ, ಆತ್ಮ ಶರೀರವನ್ನು ತ್ಯಜಿಸಿದ ಹಾಗೆ ತ್ಯಜಿಸಿಬಿಡುತ್ತದೆ.
ಕುರುಕ್ಷೇತ್ರ ಯುದ್ಧದ ನಂತರ ಭೀಷ್ಮ ಪಿತಾಮಹರ ಆಶೀರ್ವಾದ ಪಡೆಯಲು ಬಂದ ಧರ್ಮರಾಯ, ತನ್ನ ಸಂದೇಹಗಳನ್ನು ಕೇಳುತ್ತಾನೆ. ಪಿತಾಮಹ ಈ ರಾಜ್ಯ, ರಾಜ, ಸೈನ್ಯ ಇದೆಲ್ಲದರ ಅವಶ್ಯಕತೆ ಏನಿದೆ? ಎಂದು. ಆ ಪ್ರಶ್ನೆಗೆ ಉತ್ತರಿಸಿದ ಭೀಷ್ಮ ಪಿತಾಮಹರು “ಒಂದು ಕಾಲದಲ್ಲಿ ಈ ಯಾವ ವ್ಯವಸ್ಥೆಯೂ ಇರಲಿಲ್ಲ. ಕಾಲಾನಂತರದಲ್ಲಿ ಸಮಾಜದಲ್ಲಾದ ಬದಲಾವಣೆಯ ಕಾರಣ ಮೊದಲು ಪ್ರಜಾಪತಿಗಳು ಬಂದರು. ಆನಂತರ ಈ ಎಲ್ಲ ವ್ಯವಸ್ಥೆಗಳು ಹುಟ್ಟಿಕೊಂಡವು” ಎನ್ನುತ್ತಾರೆ. ಅದರ ಅರ್ಥ ಯಾವಾಗ ಸಮಾಜದಲ್ಲಿ ಅಧರ್ಮ (ಕಳ್ಳತನ, ಮೋಸ, ವಂಚನೆ, ಭ್ರಷ್ಟಾಚಾರ ಇತ್ಯಾದಿಗಳು) ಹೆಚ್ಚಾಯಿತೋ ಆಗ ಸಮಾಜ ತನ್ನಲ್ಲೇ ಒಬ್ಬ ನಾಯಕನನ್ನು ‘ಅಧರ್ಮ’ವನ್ನು ನಿಯಂತ್ರಿಸಲು ನೇಮಿಸಿತು. ಆಗ ನೀತಿಗಳು, ದಂಡ, ಶಿಕ್ಷೆ, ಇತ್ಯಾದಿಗಳು ಸೃಷ್ಟಿಯಾದವು. ಅದು ಮುಂದುವರಿದು ರಾಜ ಮತ್ತು ರಾಜ್ಯ ಪದ್ಧತಿಯಾಗಿ ಪರಿವರ್ತನೆಯಾಯಿತು. ಪ್ರಸ್ತುತ ಅನೇಕ ಸಂಘರ್ಷ, ಸಂಗ್ರಾಮ, ಹೋರಾಟಗಳ ನಂತರ ಇಂದು ಭಾರತೀಯ ಹಿಂದೂ ಸಮಾಜ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿದೆ. ಅದು ಹಿಂದೂ ಸಮಾಜಕ್ಕೆ ಸರಿ ಎನಿಸಿದೆ. ಆದರೆ ಎಲ್ಲಾ ಸಮಾಜಕ್ಕೂ ಪ್ರಜಾಪ್ರಭುತ್ವವೇ ಸರಿ ಎನಿಸಬೇಕೆಂದೇನಿಲ್ಲ.
ಜಗತ್ತಿನಲ್ಲಿ 57ಕ್ಕೂ ಹೆಚ್ಚು ಮುಸ್ಲಿಂ ದೇಶಗಳಿವೆ. ಅವುಗಳಲ್ಲಿ ಕೇವಲ 20 ದೇಶಗಳ ಮುಸ್ಲಿಂ ಸಮಾಜವು ಮಾತ್ರ ಸೆಕ್ಯುಲರಿಸಂ ಅನ್ನು ಒಪ್ಪಿಕೊಂಡಿವೆ. ಅವುಗಳನ್ನು ಹೊರತುಪಡಿಸಿ ಉಳಿದ 36 ದೇಶಗಳ ಮುಸ್ಲಿಂ ಸಮಾಜವು ‘ಶರಿಯಾ’ವನ್ನೇ ತಬ್ಬಿಕೊಂಡಿವೆ. ರಷ್ಯಾ ಹಾಗೂ ಚೀನಾದ ಸಮಾಜಕ್ಕೆ ಸಮತಾವಾದ (ಕಮ್ಯುನಿಸಮ್) ಸರಿ ಎನಿಸಿರಬೇಕು. ಇಸ್ರೇಲ್ ದೇಶದ ಯಹೂದಿ ಸಮಾಜ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿದೆ. ಯಾವಾಗ ಆ ಸಮಾಜಕ್ಕೆ ಒಪ್ಪಿಕೊಂಡಿರುವ ವ್ಯವಸ್ಥೆಯು ನಕಾರಾತ್ಮಕವಾಗಿ ಪರಿಣಾಮ ಬೀರತೊಡಗುವುದೋ ಆಗ ಕ್ರಾಂತಿ, ಹೋರಾಟ, ಸಂಘರ್ಷಗಳಾಗಿ ಬೇರೆ ವ್ಯವಸ್ಥೆಯನ್ನು ಅಥವಾ ತನ್ನದೇ ಆದ ಹೊಸ ವ್ಯವಸ್ಥೆಯನ್ನು ಆ ಸಮಾಜಗಳು ಸೃಷ್ಟಿಸಿಕೊಳ್ಳಬಹುದು. ಪಾಕಿಸ್ತಾನ ಮುಸ್ಲಿಂದೇಶ ಎಂದು ಘೋಷಿಸಿಕೊಂಡಂತೆ.
ಈ ಮೇಲಿನ ಎಲ್ಲಾ ವಾಸ್ತವಿಕ ಮಾಹಿತಿಯಿಂದ ತಿಳಿಯುವುದೇನೆಂದರೆ, ಎಲ್ಲಾ ಬದಲಾವಣೆಗಳಿಗೂ ಸಮಾಜವೇ ಜವಾಬ್ದಾರಿ. ಅಂದರೆ ನಾವು. ಒಂದು ವೇಳೆ ಸಮಾಜದಲ್ಲಿ ನಡೆದ ದುರ್ಘಟನೆಗೆ ನಮ್ಮ ಕೊಡುಗೆ/ಪಾತ್ರ ಇಲ್ಲದಿದ್ದರೂ, ನಾವು ಸುಮ್ಮನಿರುವುದೂ ಕೊಡುಗೆಯೇ ಆಗಿರುತ್ತದೆ. ಹಾಗಾಗಿ ಒಳ್ಳೆಯದರ ಮೇಲೆ ದಬ್ಬಾಳಿಕೆಯಾದಾಗ ಧ್ವನಿ ಎತ್ತಬೇಕು, ಪ್ರತಿಭಟಿಸಬೇಕು, ಹೋರಾಟ ನಡೆಸಬೇಕು, ಅನಿವಾರ್ಯತೆ ಬಿದ್ದರೆ ಸಂಘರ್ಷವನ್ನೂ ಮಾಡಬೇಕು ಎನ್ನುವುದು. 1885ರಲ್ಲಿ ಮಹಂತ ರಘುಬೀರ್ ದಾಸ್, ಪ್ರಧಾನ ಅರ್ಚಕರು ಧ್ವನಿ ಎತ್ತದೇ ಇದ್ದಿದ್ದರೆ, ಆರ್ಎಸ್ಎಸ್, ವಿಎಚ್ಪಿ, ಬಜರಂಗದಳ, ಪ್ರತಿಭಟಿಸದೇ ಇದ್ದಿದ್ದರೆ, 1992ರಲ್ಲಿ ಸಂಘರ್ಷಕ್ಕೆ ನಿಂತು ಮಸೀದಿಯನ್ನು ದ್ವಂಸ ಮಾಡದೆ ಇದ್ದಿದ್ದರೆ, ಇಂದು ರಾಮಮಂದಿರ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ!.
ಇಂದು ನಾವು ಹೆಚ್ಚು ಚರ್ಚೆ ಮಾಡುವ ವಿಷಯಗಳಲ್ಲಿ ಭ್ರಷ್ಟಾಚಾರವೂ ಒಂದು. ಭ್ರಷ್ಟಾಚಾರ ಎಂದ ತಕ್ಷಣ ನಮ್ಮ ತೋರು ಬೆರಳು ನೇರವಾಗಿ ರಾಜಕಾರಣಿಗಳತ್ತ ಸೆಟೆದು ನಿಲ್ಲುತ್ತದೆ. ಆದರೆ ಅದು ಏಕೆ? ರಾಜಕಾರಣಿಗಳು ಮನೆ ಬಾಗಿಲಿಗೆ ಬಂದು ನಮಗೆ ಪ್ರಾಮಾಣಿಕ ಮತ ನೀಡಿ ಎಂದು ಕೈ ಮುಗಿದಾಗ, ಕೈ ಚಾಚಿದವರು ಯಾರು? ನಮ್ಮಲ್ಲೇ ಕೆಲವರಲ್ಲವೇ? ಸಾರ್ವಜನಿಕ ಬಸ್ಸು (ಕ.ರಾ.ರ.ಸಾ.ನಿ)
ಹತ್ತಿದಾಗ 11-12 ವರ್ಷಗಳ ಮಕ್ಕಳನ್ನು 5ನೇ ತರಗತಿ (10 ವರ್ಷ) ಎಂದು ಹೇಳಿ, ಅರ್ಧ(/) ಚಾರ್ಜ್ ತೆಗೆಸುವುದು ಮತ್ತು ಬಸ್ ಹತ್ತುವ ಮೊದಲೇ ಮಕ್ಕಳಿಗೆ “5ನೇ ತರಗತಿ ಎಂದು ಹೇಳಬೇಕು” ಎಂದು ಹೇಳಿಕೊಡುವವರು ನಾವೇ ಆಗಿರುತ್ತೇವೆ. ತೆರಿಗೆಯಿಂದ ಸಾಧ್ಯವಾದಷ್ಟು ತಪ್ಪಿಸಿಕೊಳ್ಳಲು ಲೆಕ್ಕಪರಿಶೋಧಕರ (ಸಿಎ) ಬಳಿ ಓಡಿ ಹೋಗಿ, ಅನೇಕ ಕಳ್ಳದಾರಿಗಳನ್ನು ಹುಡುಕುತ್ತೇವೆ. ಆ ತೆರಿಗೆಯನ್ನು ನಮ್ಮ ಮೇಲೆ ಹಾಕಿದವರು ನಾವೇ ಆರಿಸಿ ಕಳಿಸಿದವರೇ ತಾನೇ? ಹಾಗೊಂದು ವೇಳೆ ತೆರಿಗೆಯಿಂದ ತೀವ್ರ ತೊಂದರೆಯಾದರೆ ಕಾನೂನಾತ್ಮಕವಾಗಿಯೇ ತೆರಿಗೆ ಕಮ್ಮಿ ಮಾಡಿಸಿಕೊಳ್ಳಲು ಸರಿಯಾದ ಮಾರ್ಗ ಹುಡುಕಬಹುದು. ಆದರೆ ಅದಕ್ಕೆ ಯಾರಿಗೂ ಸಮಯವಾಗಲೀ ವ್ಯವಧಾನವಾಗಲೀ ಇರುವುದಿಲ್ಲ. ಇದು ಕೇವಲ ಒಂದು ಉದಾಹರಣೆ ಅಷ್ಟೇ. ಹೀಗೆ ನಾವು ಅಂದುಕೊಳ್ಳುವ ಸಮಾಜದ ದೊಡ್ಡ-ದೊಡ್ಡ ಪಿಡುಗುಗಳ ಬೀಜಗಳು ಮೊಳಕೆ ಹೊಡೆಯುವುದು ನಮ್ಮಲ್ಲಿಯೇ! ನಮ್ಮ ನಡುವೆಯೇ. ನಾವು ಬದಲಾಗಲು ಆರಂಭವಾಗುವ ತನಕ ಬೇರೆಯವರೆಡೆಗೆ ಬೆರಳು ತೋರುವುದರಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ.
