ದೀಪಾವಳಿ ಎಂದರೆ ಕೇವಲ ದೀಪಗಳ ಅಲಂಕಾರವಲ್ಲ, ನಮ್ಮೊಳಗೆ ಅಧ್ಯಾತ್ಮದ ಜ್ಯೋತಿ ಪ್ರಜ್ವಲಿಸುವ ಶುಭಕಾಲ. ಕತ್ತಲಿನಿಂದ ಹೊರತರುವ ಜೀವನದಲ್ಲಿ ಜ್ಞಾನದ ಬೆಳಕು ಹರಡುವ ಹಬ್ಬ. ಹಬ್ಬಗಳಿಗೆಲ್ಲ ಹಿರಿದಾದ ಹಬ್ಬ ದೀಪಾವಳಿ. ಪ್ರತಿಯೊಬ್ಬರ ಮನದಲ್ಲಿ, ಮನೆಯಲ್ಲಿ ಸಂಭ್ರಮ ಇಮ್ಮಡಿಗೊಳಿಸುವ ಬೆಳಕಿನ ಹಬ್ಬ ದೀಪಾವಳಿ. ಕನಕ ವರ್ಣದ ಬೆಳಕಿನ ಮೂಲಕ ಪರಿಸರತುಂಬೆಲ್ಲ ಹಣತೆಗಳಿಂದ ಹೊರಹೊಮ್ಮುವ ಜ್ಞಾನದ ದೀಪಾವಳಿ. ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ, ಅಮೋಘ ಸಂಸ್ಕೃತಿ, ಐತಿಹಾಸಿಕ ಮತ್ತು ಪೌರಾಣಿಕ ಪಾರಂಪರಿಕ ಹಿನ್ನೆಲೆಗಳಿವೆ, ಜೊತೆಗೆ ಸಂಭ್ರಮವಿದೆ. ಪ್ರತಿಯೊಬ್ಬರೂ ಆಚರಿಸುವ ದೊಡ್ಡ ಹಬ್ಬ ಈ ದೀಪಾವಳಿ.
ಆಶ್ವಿನ ಮಾಸದ ಕೃಷ್ಣಪಕ್ಷದ ತ್ರಯೋದಶಿಯಿಂದ ಆರಂಭಿಸಿ ಕಾರ್ತೀಕ ಶುಕ್ಲಪಕ್ಷದ ಪಂಚಮಿವರೆಗೂ ಆಚರಿಸುವ ಹಬ್ಬಕ್ಕೆ ದೀಪಾವಳಿ ಎಂದು ಹೆಸರು. ಪ್ರತಿಯೊಬ್ಬರ ಮನದಲ್ಲಿಯೂ ಸಂಭ್ರಮ ಮನೆಮಾಡಿ, ಮನಕೆ ಮುದ ನೀಡುವ ಹಬ್ಬ. ಎಲ್ಲಿ ನೋಡಿದರೂ ಹಣತೆಗಳಲ್ಲಿ ಬೆಳಗುವ ದೀಪಗಳ ಸಾಲು ಸಾಲು ಕಣ್ಣುತುಂಬಿಸಿಕೊಳ್ಳಲು ಸಡಗರ, ಸಂಭ್ರಮ ಎಲ್ಲರಲ್ಲೂ ತುಂಬಿರುತ್ತದೆ.
ಆಶ್ವಿನ ಮಾಸದ ತ್ರಯೋದಶಿ ದಿನದಿಂದ ಪ್ರಾರಂಭವಾಗುವ ದೀಪಾವಳಿ ಹಬ್ಬದ ಸಡಗರದ ಮೊದಲ ದಿನದ ಹಬ್ಬಕ್ಕೆ ಧನತ್ರಯೋದಶಿ, ಜಲಪೂರ್ಣ ತ್ರಯೋದಶಿ ಎಂದು ಹೇಳುವರು. ಕಾರ್ತೀಕ ಮಾಸದವರೆಗೂ ಮುಂದುವರಿಯುವ ದೀಪಾವಳಿ ಹಬ್ಬಕ್ಕೆ ಮುನ್ನಡಿ ಬರೆಯುವ ಹಬ್ಬ ಜಲಪೂರ್ಣ ತ್ರಯೋದಶಿ. ಈ ದಿನದಿಂದಲೇ ದೀಪಾವಳಿ ಹಬ್ಬದ ಸಡಗರವು ಪ್ರಾರಂಭವಾಗುತ್ತದೆ. ಜಲಪೂರ್ಣ ತ್ರಯೋದಶಿಗೆ “ನೀರು ತುಂಬುವ ಹಬ್ಬ” ಎಂದೂ ಹೇಳುವರು. ಇದು ಗಂಗಾದೇವಿಯನ್ನು ಆರಾಧಿಸುವ ಹಬ್ಬ ಎಂದು ಪುರಾಣಗಳ ಪುಟದಲ್ಲಿ ತಿಳಿಸಲ್ಪಟ್ಟಿದೆ.
ಭಾಗೀರಥಿ – ಪಾಪಹಾರಿಣಿ ಗಂಗೆ
ಭರತ ಭೂಮಿಯ ಪವಿತ್ರ ನದಿಗಳಲ್ಲಿ ಗಂಗಾ ಭಾಗೀರಥಿಗೆ ಮೊದಲ ಆದ್ಯತೆ. ಗಂಗಾಜಲವು ಎಲ್ಲ ಜಲಗಳಿಗಿಂತ ಪರಮ ಪವಿತ್ರ ಜಲವಾಗಿದೆ. ಗಂಗಾಜಲದ ಒಂದು ಹನಿಯು ಸಂಪೂರ್ಣ ಗಂಗೆಯಷ್ಟೇ ಪವಿತ್ರ. ಗಂಗಾನದಿಯು ಪೃಥ್ವಿಯ ಮೇಲಿನ ಪ್ರತ್ಯಕ್ಷ ದೇವನದಿ, ಸರ್ವಶ್ರೇಷ್ಠ ತೀರ್ಥವಾಗಿದೆ. ಗಂಗಾಜಲವನ್ನು ಯಾವುದೇ ವ್ಯಕ್ತಿ, ವಸ್ತು, ಸ್ಥಾನದ ಮೇಲೆ ಸಿಂಪಡಿಸಿದರೆ ಅದು ಪವಿತ್ರವಾಗುತ್ತದೆ. ಸತ್ಯಯುಗದಲ್ಲಿ ಪ್ರತಿಯೊಂದು ಸ್ಥಳಗಳು ಪವಿತ್ರವೇ ಆಗಿದ್ದವು. ತ್ರೇತಾಯುಗದಲ್ಲಿ ‘ಪುಷ್ಕರ’ ಮತ್ತು ದ್ವಾಪರಯುಗದಲ್ಲಿ ‘ಕುರುಕ್ಷೇತ್ರ’ ಎಲ್ಲಕ್ಕಿಂತ ಪವಿತ್ರ ತೀರ್ಥಕ್ಷೇತ್ರಗಳಾಗಿದ್ದರೆ, ಕಲಿಯುಗದಲ್ಲಿ ‘ಗಂಗಾ’ ನದಿಯು ಪರಮಪವಿತ್ರ ತೀರ್ಥವಾಗಿದೆ ಎಂದು ಸಾರುತ್ತಿದೆ ಮಹಾಭಾರತ. ಇದಕ್ಕೆ ಮೂಲ ಕಾರಣ ಗಂಗೆ ಮೊದಲ ಬಾರಿಗೆ ಬಂದಿದ್ದು ಸರ್ವೋತ್ತಮನಾದ ಮಹಾವಿಷ್ಣುವಿನ ಹೆಬ್ಬೆರಳಿನ ತುತ್ತತುದಿಯಿಂದ. ಈಕೆ ಬ್ರಹ್ಮಾಂಡದ ವಿಷ್ಣುತೀರ್ಥಳೆಂದು ಗುರುತಿಸಿಕೊಳ್ಳುತ್ತಾಳೆ. ಶರೀರದ ಒಳಗಿನ ಹಾಗೂ ಹೊರಗಿನ ಮತ್ತು ಮಾನಸಿಕ ಪಾಪಗಳೊಳಗೊಂಡ ನಮ್ಮ ಹತ್ತು ಪಾಪಗಳನ್ನು ಹರ ಮಾಡುವುದರಿಂದ ಗಂಗೆಯನ್ನು ‘ದಶಹರಾ’ ಎಂದು ಕರೆದಿವೆ ಶ್ರುತಿ-ಸ್ಮೃತಿಗಳು.
ಗಂಗಾ ಪೂಜೆ
“ಮಾಡಿದರೊಂದು ಸ್ನಾನಮಾತ್ರದಲಿ, ಸುಟ್ಟು ಹೋಹುದು ಸಾಸಿರಜನ್ಮ ಪಾಪ” ಪುರಂದರ ದಾಸರ ಉಕ್ತಿಯಂತೆ ಇಂದು ದೇವತೀರ್ಥ ಗಂಗಾದೇವಿಯ ಉಪಕಾರ ಸ್ಮರಿಸುವ ದಿನ. ನದಿತೀರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ ತಿಳಿಯದೆಯೋ-ತಿಳಿದೋ ಮಾಡಿದ ಸಕಲ ಪಾಪಗಳು ತನ್ನಲ್ಲಿ ಮಿಂದರೆ ತೊಳೆದು ಹಾಕುವ ಮಾತೃಸ್ವರೂಪಿ ಭಾರತದ ಜೀವನದಿ ಗಂಗೆ. ಈ ಎಲ್ಲ ವಿಶೇಷತೆಗಳಿಂದ ಕೂಡಿದ ಭಾಗೀರಥಿಯ ಉಪಕಾರ ಸ್ಮರಿಸುವ ದಿನ ಅಶ್ವಿನ ಮಾಸದ ಶುಕ್ಲಪಕ್ಷದ ತ್ರಯೋದಶಿ “ನೀರು ತುಂಬುವ ಹಬ್ಬದ” ಆಚರಣೆಯ ದಿನ.
ನೀರು ತುಂಬುವ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯಪೂರ್ಣ ಪದ್ಧತಿಯಿದೆ. ಹೆಸರೇ ಸೂಚಿಸುವಂತೆ ಶುದ್ಧ ಜಲ ಸಂಗ್ರಹಿಸಿ ಪೂಜಿಸುವ ದಿನ. ಅಂದು ನೀರು ತುಂಬಿಸುವ ಪಾತ್ರೆ ಮತ್ತು ನೀರು ಕಾಯಿಸುವ ತಾಮ್ರದ ಹಂಡೆಗಳನ್ನು ಉಪ್ಪು ಮಿಶ್ರಿತ ಹುಣಸೆಹಣ್ಣಿನಿಂದ ತಿಕ್ಕಿ ತೊಳೆದು ಪಳಪಳ ಹೊಳೆಯುವಂತೆ ಸ್ವಚ್ಛಗೊಳಿಸುತ್ತಾರೆ. ಹಂಡೆಗೆ ಸುಣ್ಣ ಮತ್ತು ಕೆಂಪುಮಣ್ಣು ಬಳಸಿ ಪಟ್ಟೆಪಟ್ಟೆ ಗೆರೆಗಳನ್ನು ಬಿಡಿಸಿ ಒಲೆಯ ಮೇಲಿಟ್ಟು ಸಮೀಪದ ಬಾವಿ, ಕೆರೆ, ನದಿಯಿಂದ ನೀರು ತಂದು ತುಂಬುತ್ತಾರೆ. ದೇವರ ಮನೆಯಲ್ಲೂ ದೇವರ ಮುಂದೆ ರಂಗೋಲಿ ಬರೆದು, ಗಂಗೆಯನ್ನು ಕಲಶಗಳಲ್ಲಿ ತುಂಬಿಸಿ ಪೀಠದ ಮೇಲೆ ಪ್ರತಿಷ್ಠಾಪಿಸಿ, ಗಂಗಾದಿ ಸಕಲ ತೀರ್ಥಾಭಿಮಾನಿ ದೇವತೆಗಳನ್ನು ಆಹ್ವಾನಿಸಿ ಪೂಜಿಸಿ ಗಂಗಾಜನಕ ರಮಾಪತಿ ತ್ರಿವಿಕ್ರಮ ದೇವರಿಗೆ ಸಮರ್ಪಿಸುತ್ತಾರೆ.
ಸ್ನಾನಗೃಹದ ಒಲೆಯ ಮುಂಭಾಗದಲ್ಲಿ ಚಿತ್ತಾರದ ರಂಗೋಲಿ ಬಿಡಿಸಿ, ಹಂಡೆಯ ಒಳಗೆ ನೀರು ತುಂಬಿ ಈ ಮಂತ್ರದಿಂದ “ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಽಸ್ಮಿನ್ ಸನ್ನಿಧಿಂ ಕುರು, ಗಂಗಾಯೈ ನಮಃ, ಗಂಗಾಂ ಅಸ್ಮಿನ್ ಕಲಶಜಲೇ ಆವಾಹಯಾಮಿ, ಅರ್ಘ್ಯ ಪಾದ್ಯಾಚಮನೀಯಾದಿ ಸರ್ವೋಪಚಾರ ಪೂಜಾ ಸಮರ್ಪಯಾಮಿ” ಎಂದು ಗಂಗಾದೇವಿಯನ್ನು ಹಾಗೂ ಸಕಲ ನದಿಗಳನ್ನು, ನದಿಯ ಅಭಿಮಾನಿ ದೇವತೆಗಳನ್ನು ಈ ಜಲದಲ್ಲಿ ಸನ್ನಿಹಿತರಾಗಲೆಂದು ಆಹ್ವಾನ ಮಾಡಲಾಗುತ್ತದೆ.
ನೀರಿನ ಹಂಡೆಗೆ ಮಾವಿನ ತೋರಣ ಕಟ್ಟಿ ಹೂವುಗಳಿಂದ ಅಲಂಕರಿಸಿ, ಅರಿಶಿನ, ಕುಂಕುಮದಿಂದ ಅರ್ಚಿಸಿ, ಆಚಮನ, ಪ್ರಾಣಾಯಾಮಗಳ ನಂತರ ಸಂಕಲ್ಪ ಮಾಡಿ, ಹಣ್ಣು-ಸಿಹಿ ಕಜ್ಜಾಯ ನಿವೇದಿಸಿ ಶಂಖ-ಜಾಗಟೆಗಳನ್ನು ಬಾರಿಸುತ್ತ ಗಂಗಾದೇವಿಯನ್ನು ಪೂಜಿಸುವ ಭಾರತ ದೇಶದ ಉದ್ದಗಲಕ್ಕೂ ಕಾಣಬಹುದಾದ ಮಹೋನ್ನತ ಸಂಪ್ರದಾಯಬದ್ಧ ಹಬ್ಬವಾಗಿದೆ. ಕೊಳೆಯನ್ನು ಹೋಗಿಸಿ ಮನೆಯನ್ನು ಶುಭ್ರವಾಗಿಸುವಂತೆ, ನಮ್ಮ ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳನ್ನು ತೊಲಗಿಸಿ ನಿರ್ಮಲವಾಗಿರಲಿ ಎನ್ನುವ ಸಂಕೇತ ಗಂಗಾಪೂಜೆಯ ಹಿನ್ನೆಲೆಯೂ ಎಂದು ಹೇಳಬಹುದು.
ಮರುದಿನ ಶ್ರೀಕೃಷ್ಣ ಪರಮಾತ್ಮ ನರಕಾಸುರನನ್ನು ಸಂಹಾರ ಮಾಡಿದ ದಿನವಾದ ನರಕಚತುರ್ದಶಿಯಂದು ನೀರು ತುಂಬುವ ಹಬ್ಬದಂದು ಪೂಜಿಸಿದ ಹಂಡೆಯ ನೀರನ್ನೇ ಕಾಯಿಸಿ ಮುಂಜಾನೆ ಚಂದ್ರೋದಯದ ಕಾಲಕ್ಕೆ ಪ್ರತಿಯೊಬ್ಬರೂ ತೈಲ ಅಭ್ಯಂಜನ ಸ್ನಾನ ಮಾಡುವರು.
– ಮನೋಹರ ಜೋಶಿ
ಬೆಂಗಳೂರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
