ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು
- ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ
ಆ ಡಾಕ್ಟರ್ ಕೊಲ್ಕತ್ತಾದಲ್ಲಿ ವೈದ್ಯಕೀಯ ಪದವಿಗಳಿಸಿ ನಾಗಪುರಕ್ಕೆ ಬಂದರೂ ಸ್ವಂತಕ್ಕಾಗಿ ಸಂಪಾದನೆಯ ಮಾರ್ಗ ಹಿಡಿಯಲಿಲ್ಲ. ಕೈ ತುಂಬ ಸಂಪಾದನೆಯ ಅವಕಾಶಗಳಿದ್ದರೂ ಅದರತ್ತ ನೋಡಲೇ ಇಲ್ಲ. ಐಕ್ಯತೆಯು ಮಣ್ಣುಗೂಡಿ ತಾಯಿ ಭಾರತಿ ಬಳಲುತ್ತಿರುವ ಸಂಕಟ ಅವರನ್ನು ಸಮಾಜ ವೈದ್ಯರನ್ನಾಗಿ ಬದಲಾಯಿಸಿತು. ಹಿಂದೂ ಸಮಾಜದ ಅನೈಕ್ಯತೆಯ ರೋಗಕ್ಕೆ ಮದ್ದು ಕೊಡಲು ತಮ್ಮ ಸಂಪೂರ್ಣ ಬದುಕು ಮುಡುಪಾಗಿಟ್ಟರು. ಇಂದು ಜಗತ್ತಿನ ಏಕೈಕ ಬೃಹತ್ ಸ್ವಯಂ ಸೇವಾ ಸಂಸ್ಥೆ ಎನಿಸಿರುವ ಆರ್ಎಸ್ಎಸ್ ಸಂಘಟನೆಗೆ ಭದ್ರಬುನಾದಿ ಹಾಕಿದರು.
ಈ ಡಾಕ್ಟರ್ ಮೈಸೂರಿನಲ್ಲಿ ಎಂಬಿಬಿಎಸ್ ಪದವಿ ಪಡೆದು ಅನಂತರ ಕೆಲಕಾಲ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರೂ ಅವರ ಮನಸ್ಸು ತುಡಿಯುತ್ತಿದ್ದುದು ಸಮಾಜ ಸೇವೆಯ ಕಡೆಗೇ. ಅನಂತರ ಸರ್ಕಾರಿ ವೈದ್ಯಹುದ್ದೆ ತೊರೆದು ತಮ್ಮನ್ನು ಸಂಪೂರ್ಣವಾಗಿ ಹಿಂದೂ ಸಮಾಜದ ಸೇವೆಗೆ ಅರ್ಪಿಸಿಕೊಂಡರು. ಡಾಕ್ಟರ್ ಆಗಿ ಕೈ ತುಂಬಾ ಸಂಪಾದನೆಯ ಅವಕಾಶ ಕಳೆದುಕೊಂಡರೂ ಸಮಾಜ ಸಂಘಟನೆಯ ಕಾರ್ಯದಲ್ಲಿ ನೂರ್ಕಾಲ ನೆನಪಿಡುವ ಸ್ಮರಣೀಯ ಸೇವೆ ಸಲ್ಲಿಸಿದರು.
ಅವರೇ ಆನೇಕಲ್ ತಾಲೂಕಿನ ನೆರಳೂರಿನ ಡಾ. ರಾಜಪ್ಪ. ಪ್ರಾಥಮಿಕ ಶಿಕ್ಷಣದ ಬಳಿಕ ಮೈಸೂರಿಗೆ ಎಂಬಿಬಿಎಸ್ ಪದವಿ ಪಡೆಯಲು ಹೋದಾಗ ಇವರನ್ನು ಕೈಬೀಸಿ ಕರೆದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಅಲ್ಲಿ ಆಗ ವಿದ್ಯಾರ್ಥಿ ಕಾರ್ಯಕರ್ತರಾಗಿದ್ದ ಮೈ.ಚ. ಜಯದೇವ, ನ. ಕೃಷ್ಣಪ್ಪ, ಸು. ರಾಮಣ್ಣ, ನ.ಮಧ್ವರಾವ್ ಮೊದಲಾದವರ ಸಹವಾಸ, ಒಡನಾಟ ಇವರ ಮೇಲೆ ಬೀರಿದ ಪ್ರಭಾವ ಅಗಾಧ. ಜೊತೆಗೆ ಸಂಘದ ಪ್ರಚಾರಕರಾಗಿದ್ದ ಸೂರ್ಯನಾರಾಯಣರಾವ್ರ (ಸೂರೂಜಿ) ಸಹವಾಸವೂ ದೊರಕಿತ್ತು. “ಎಂಬಿಬಿಎಸ್ ಮುಗಿದ ಬಳಿಕ ನೀನು ವೈದ್ಯವೃತ್ತಿ ಮಾತ್ರ ಮಾಡಿದರೆ ಸಾಲದು. ಸಂಘದ ಕಾರ್ಯವನ್ನೂ ಮಾಡಬೇಕಪ್ಪಾ” ಎಂಬ ಸೂರೂಜಿಯವರ ಆಗ್ರಹದ ಮಾತು ರಾಜಪ್ಪನವರ ಮನಕ್ಕೆ ನಾಟಿತ್ತು. ಅವರ ಮಾತನ್ನು ಆದೇಶದಂತೆಯೇ ಸ್ವೀಕರಿಸಿದ ಡಾ. ರಾಜಪ್ಪ ಜೀವನಪೂರ್ತಿ ಹಾಗೆಯೇ ನಡೆದುಕೊಂಡರು.
ವೈದ್ಯಕೀಯ ಪದವಿ ಮುಗಿಸಿದ ಬಳಿಕ ಕೆಲಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯವೃತ್ತಿ. ಸರ್ಜಾಪುರದಲ್ಲಿ ಮನೆ ಮಾಡಿ, ಮನೆಯ ಒಂದು ಭಾಗದಲ್ಲಿ ಕ್ಲಿನಿಕ್ ತೆರೆದರು. ಅದು ಹೆಸರಿಗಷ್ಟೇ ಕ್ಲಿನಿಕ್ ಆಗಿತ್ತು. ಅದರಿಂದ ಆಗುತ್ತಿದ್ದ ಹಣ ಸಂಪಾದನೆ ಅಷ್ಟಕಷ್ಟೇ. ನಿಜವಾಗಿ ಅದೊಂದು ಕಾರ್ಯಕರ್ತರ ತಯಾರಿ ಕೇಂದ್ರವಾಗಿತ್ತು. ಅಲ್ಲಿ ಕಾಯಿಲೆಗೆ ಔಷಧಿ ಏನೋ ಸಿಗುತ್ತಿತ್ತು. ಆದರೆ ಅದರ ಜೊತೆಗೆ ಸಮಾಜಮುಖಿ ಚಿಂತನೆಯ ಮಾತ್ರೆಗಳೂ ದೊರಕುತ್ತಿದ್ದವು!. ರಾಜಪ್ಪನವರ ಕೈಗುಣ ಚೆನ್ನಾಗಿದೆ ಎಂದು ಹಲವರು ಕ್ಲಿನಿಕ್ಗೆ ಬರುತ್ತಿದ್ದರು. ಹೀಗೆ ಬಂದ ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸಿ, ಅವರ ಕಷ್ಟ ಸುಖ ವಿಚಾರಿಸಿ, ತಮ್ಮ ಮಾತಿನಿಂದಲೇ ರೋಗಿಗಳ ಅರ್ಧ ಕಾಯಿಲೆಯನ್ನು ವಾಸಿ ಮಾಡುತ್ತಿದ್ದ ಚತುರ ಡಾಕ್ಟರ್ ಅವರಾಗಿದ್ದರು.
ಕ್ಲಿನಿಕ್ನ ನಿಗದಿತ ಸಮಯ ಮುಗಿದ ಕೂಡಲೇ ಉಳಿದ ಸಮಯವೆಲ್ಲ ಸಮಾಜ ಸಂಘಟನೆಯ ಕಾರ್ಯಕ್ಕೆ ಮೀಸಲು. ಡಾ.ರಾಜಪ್ಪ ಸ್ಕೂಟರ್ ಏರಿ ಹೊರಟರೆಂದರೆ ಅದೇ ದಿನ ವಾಪಸ್ ಮರಳಿದ್ದು ತೀರಾ ಕಡಿಮೆ. ಆಗಿನ ಬೆಂಗಳೂರು ಜಿಲ್ಲೆಯ 11 ತಾಲ್ಲೂಕುಗಳಲ್ಲೂ ನಿರಂತರ ಪ್ರವಾಸ. ಸ್ವಯಂಸೇವಕರ, ಕಾರ್ಯಕರ್ತರ ಭೇಟಿ, ಮಾತುಕತೆ. ಅವರ ಕಷ್ಟ ಸುಖಗಳನ್ನು ಸಾವಧಾನವಾಗಿ ಆಲಿಸಿ ಧೈರ್ಯ, ಭರವಸೆ ತುಂಬಿ ಮುಂದಿನ ಊರಿಗೆ ಪ್ರಯಾಣ.
ಡಾ. ರಾಜಪ್ಪನವರು ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿದ್ದರೂ ಅವರು ತಮ್ಮ ಸಂಘಟನಾ ಕಾರ್ಯಕ್ಕೆ ಆರಿಸಿಕೊಂಡಿದ್ದು ರಾಜಕೀಯ ಕ್ಷೇತ್ರವನ್ನು. ಆಗಷ್ಟೇ ಕಣ್ಣು ತೆರೆದಿದ್ದ ಭಾರತೀಯ ಜನಸಂಘದ ಬೆಳವಣಿಗೆಗಾಗಿ ಅವರು ಊರೂರಿಗೆ ತೆರಳಿ, ಬೆವರು ಹರಿಸಿದರು. ಸ್ಕೂಟರ್ ಚಕ್ರ, ಇಂಜಿನ್ ಸವೆದು ಹೋದರೂ ರಾಜಪ್ಪನವರ ಪ್ರವಾಸ, ಓಡಾಟಗಳಿಗೆ ವಿರಾಮವೆಂಬುದಿರಲಿಲ್ಲ. ವೈದ್ಯರಾಗಿ ಅವರಿಗೆ ರೋಗಿಯ ಮುಖ ನೋಡಿದ ತಕ್ಷಣ ಆತನನ್ನು ಕಾಡುತ್ತಿರುವ ರೋಗ ಯಾವುದು ಎಂಬುದನ್ನು ಪತ್ತೆ ಹಚ್ಚುವ ಶಕ್ತಿ ಇತ್ತು. ಹಾಗೆಯೇ ವ್ಯಕ್ತಿಗಳ ಪರಿಚಯವಾಗುತ್ತಿದ್ದಂತೆ ಸಮಾಜಕಾರ್ಯಕ್ಕೆ ಅವರ ಉಪಯೋಗ ಹೇಗೆ ಪಡೆಯಬಹುದೆಂಬುದು ರಾಜಪ್ಪನವರ ಅರಿವಿಗೆ ಬರುತ್ತಿತ್ತು. ತಮ್ಮ ಸಂಪರ್ಕಕ್ಕೆ ಬಂದವರನ್ನು ತಿದ್ದಿ ತೀಡಿ, ಕಾರ್ಯಕರ್ತರಾಗಿ ರೂಪಿಸುತ್ತಿದ್ದರು. ಯಾರಾದರೂ ತಪ್ಪಿ ನಡೆದಲ್ಲಿ ನಯವಾಗಿ ತಿದ್ದಿ, ಜನ ಸಂಘದ ಧ್ಯೇಯ, ಉದ್ದೇಶಗಳಿಗೆ ತಕ್ಕಂತೆ ಹೇಗೆ ವ್ಯವಹರಿಸಬೇಕೆಂದು ತಿಳಿಹೇಳುತ್ತಿದ್ದರು.
ಹೀಗೆ ಡಾ. ರಾಜಪ್ಪ ಅವರ ಗರಡಿಯಲ್ಲಿ ಬೆಳೆದ ಕಾರ್ಯಕರ್ತರ ಸಂಖ್ಯೆ ಅಗಣಿತ. ಬೆಂಗಳೂರು ಜಿಲ್ಲೆಯ ಪ್ರತೀ ತಾಲೂಕಿನಲ್ಲೂ ಯೋಗ್ಯ ಕಾರ್ಯಕರ್ತರನ್ನು ಬೆಳೆಸುವಲ್ಲಿ ಡಾ. ರಾಜಪ್ಪನವರ ಯೋಗದಾನ ಮರೆಯುವಂತಹದಲ್ಲ. ಆನೇಕಲ್ ತಾಲೂಕಿನ ಶ್ರೀ ಕೃಷ್ಣ ಶಾಸ್ತ್ರಿ, ಯಂಗಾ ರೆಡ್ಡಿ, ಮುನಿರೆಡ್ಡಿ, ಕನಕಪುರದ ಅನಂತಸ್ವಾಮಿ, ರಾಮನಗರದ ದಾಸಪ್ಪರೆಡ್ಡಿ, ಚನ್ನಪಟ್ಟಣದ ಶಿವ ಬೀರಪ್ಪ, ಮಾಗಡಿಯ ವರದರಾಜ ಅಯ್ಯಂಗಾರ್, ದೊಡ್ಡಬಳ್ಳಾಪುರದ ಶರ್ಮ, ಮೋಹಿತೆ, ಹನುಮಂತರಾಯಪ್ಪ, ಕೆ.ಟಿ. ವೆಂಕಟಾಚಲಯ್ಯ, ದೇವನಹಳ್ಳಿಯ ನಾಗರಾಜ್, ಹೊಸಕೋಟೆಯ ಗೋಪಿ… ಹೀಗೆ ಪ್ರತಿ ತಾಲೂಕಿನಲ್ಲೂ ತನಗೆ ಸರಿಮಿಗಿಲಾಗಿ ಕಾರ್ಯನಿರ್ವಹಿಸಬಲ್ಲ ಕಾರ್ಯಕರ್ತರ ಪಡೆಯನ್ನೇ ಬೆಳೆಸಿದರು. ಜನ ಸಂಘವೆಂದರೆ ಆಗ ಏನೇನೂ ತಾಕತ್ತಿಲ್ಲದ, ಎಲ್ಲರ ಲೇವಡಿಗೆ ಒಳಗಾಗಿದ್ದ ರಾಜಕೀಯ ಪಕ್ಷವಾಗಿತ್ತು. ಅಂತಹ ಪಕ್ಷಕ್ಕೆ ಯೋಗ್ಯ ಕಾರ್ಯಕರ್ತರ ಪಡೆಯನ್ನೇ ಕಟ್ಟಿ ಬೆಳೆಸುವಲ್ಲಿ ಡಾ. ರಾಜಪ್ಪನವರ ಪಾತ್ರ ಸ್ಮರಣೀಯ.
ಇಂತಹ ದೇವದುರ್ಲಭ ಕಾರ್ಯಕರ್ತರನ್ನು ಡಾ. ರಾಜಪ್ಪನವರು ಬೆಳೆಸಿದ ಪರಿಯಾದರೂ ಹೇಗೆ? ಪ್ರವಾಸಕ್ಕೆ ತೆರಳಿದಾಗ ರಾತ್ರಿ ಕಾರ್ಯಕರ್ತರ ಮನೆಯಲ್ಲೇ ವಾಸ್ತವ್ಯ. ಅವರೊಂದಿಗೆ ಊಟ, ಹರಟೆ, ಮಾತುಕತೆ, ಯೋಗ್ಯ ಮಾರ್ಗದರ್ಶನ. ಕಾರ್ಯಕರ್ತರ ಕಷ್ಟ ಸುಖಗಳಿಗೆ, ದುಃಖ ದುಮ್ಮಾನಗಳಿಗೆ ಕಿವಿಯಾಗಿ, ಕಣ್ಣಾಗಿ ಸಾಂತ್ವನ, ಭರವಸೆ. ಕಾರ್ಯಕರ್ತರಿಗೆ ಇದಕ್ಕಿಂತ ಮಿಗಿಲಾದದ್ದು ಇನ್ನೇನು ಬೇಕು? ಯೋಗ್ಯ ರಾಜಕೀಯ ಕಾರ್ಯಕರ್ತರನ್ನು ಬೆಳೆಸುವ ತಂತ್ರಗಾರಿಕೆಯನ್ನು ಅವರು ಕಲಿತಿದ್ದು ಸಂಘದಿಂದಲೇ.
1991ರ ಪಾರ್ಲಿಮೆಂಟ್ ಚುನಾವಣೆ ಘೋಷಣೆಯಾದಾಗ, ಕನಕಪುರದ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಡಾ. ರಾಜಪ್ಪನವರಿಗೆ ಮನದ ಮೂಲೆಯಲ್ಲಿ ಒಂದು ಬಯಕೆ ಎದ್ದಿತ್ತು. ಆದರೆ ಆಗ ಬಿಜೆಪಿ ಅಭ್ಯರ್ಥಿಯಾಗಿ ಅವರಿಗೆ ಟಿಕೆಟ್ ಸಿಗಲಿಲ್ಲ.
ರಾಸೆಯಾಗಿದ್ದು ಸಹಜವೇ. ಸ್ವಲ್ಪಕಾಲ ಮನೆಯಲ್ಲಿ ತಣ್ಣಗೆ ಕುಳಿತುಬಿಟ್ಟರು. ಸಂಘದ ಪ್ರಮುಖ ಕಾರ್ಯಕರ್ತರೊಬ್ಬರು ಆಗ ಅವರ ಮನೆಗೆ ಹೋಗಿ ಸಮಾಧಾನಪಡಿಸಲು ಯತ್ನಿಸಿದ್ದರು. ಇಬ್ಬರ ನಡುವೆ ತಡರಾತ್ರಿಯವರೆಗೆ ಮಾತುಕತೆ, ಬಿಸಿಬಿಸಿ ಚರ್ಚೆ ನಡೆದಿತ್ತು. ಯಾವುದೋ ಗಳಿಗೆಯಲ್ಲಿ ಹತಾಶ ಭಾವದಿಂದ ಕ್ರುದ್ಧರಾಗಿ ಆ ಕಾರ್ಯಕರ್ತರಿಗೆ ಡಾ. ರಾಜಪ್ಪ “ಮನೆ ಬಿಟ್ಟು ಆಚೆ ಹೋಗಯ್ಯ” ಎಂದುಬಿಟ್ಟರು. ಆ ಕಾರ್ಯಕರ್ತರು ತಣ್ಣಗೆ ಎದ್ದು ಮನೆಯ ಹೊರಗಿನ ಗೇಟಿನವರೆಗೆ ಬಂದರು. ಇನ್ನೇನು ಗೇಟು ದಾಟಿ ಹೊರ ಹೋಗಬೇಕೆನ್ನುವಷ್ಟರಲ್ಲಿ ಡಾ. ರಾಜಪ್ಪ ಧಾವಿಸಿ ಬಂದು ಕಣ್ಣೀರಿಡುತ್ತಾ “ತಪ್ಪಾಯ್ತು, ನನ್ನನ್ನು ಕ್ಷಮಿಸಿ. ಹೀಗೆ ಹೇಳಬಾರದಿತ್ತು” ಎಂದು ಕೈಹಿಡಿದು ಬೇಡಿಕೊಂಡಿದ್ದರು. ಅಂತಹ ಸೂಕ್ಷ್ಮ ಸ್ವಭಾವದ, ಉದಾರಹೃದಯಿ ಅವರಾಗಿದ್ದರು.
ಮಕ್ಕಳಿಗೆ ಭಾರತೀಯ ಹಿಂದೂ ಸಂಸ್ಕೃತಿ ಪರಂಪರೆ ಪ್ರಧಾನವಾದ ಶಿಕ್ಷಣ ನೀಡಬೇಕೆಂಬುದು ಡಾ. ರಾಜಪ್ಪನವರ ಕನಸುಗಳಲ್ಲೊಂದು. ತಮ್ಮ ಊರು ನೆರಳೂರಿನಲ್ಲಿ ಹಾಗೂ ಚಂದಾಪುರದಲ್ಲಿ ಅಂತಹ ಶಾಲೆಗೆ ಭದ್ರಬುನಾದಿ ಹಾಕಿದವರು ಅವರೇ. ಚಂದಾಪುರದ ಒಂದಿಬ್ಬರು ಶ್ರೀಮಂತರನ್ನು ಕಾಡಿಬೇಡಿ ಶಾಲೆ ನಿರ್ಮಿಸಲು ಅವರ ಸ್ವಂತ ಜಮೀನು ದಾನವಾಗಿ ಕೊಡಿಸುವಲ್ಲಿ ಸಫಲರಾದರು. ಈಗ ಆ ಶಾಲೆ ವ್ಯವಸ್ಥಿತ, ಸುಸಜ್ಜಿತ ಕಟ್ಟಡ ಹೊಂದಿ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನೆರಳೂರಿನಲ್ಲೂ ಸುಮಾರು 10 ಎಕರೆ ಜಾಗದಲ್ಲಿ ಸುಸಜ್ಜಿತ ಕಟ್ಟಡವಿರುವ ಶಾಲೆ ತಲೆಯೆತ್ತಿದ್ದು ಅಲ್ಲಿಯೂ ಐದು ಸಹಸ್ರ ವಿದ್ಯಾರ್ಥಿಗಳು ಭಾರತೀಯ ಪರಂಪರೆಯ ಶಿಕ್ಷಣ ಪಡೆಯುತ್ತಿದ್ದಾರೆ. ಡಾ. ರಾಜಪ್ಪನವರ ಗರಡಿಯಲ್ಲಿ ತಯಾರಾದ ಕಾರ್ಯಕರ್ತರೇ ಈಗ ಆ ಶಾಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಮೈಕೋ ಕಾರ್ಖಾನೆಯಲ್ಲಿ ಕಮ್ಯುನಿಸ್ಟ್ ಯೂನಿಯನ್ ಬಹಳ ಪ್ರಬಲವಾಗಿದ್ದ ಕಾಲವದು. ಒಮ್ಮೆ ಕಾರ್ಖಾನೆಯನ್ನು ಸಿಪಿಎಂ ಮುಖಂಡರು ಲಾಕೌಟ್ ಮಾಡಿಸಿದರು. ಆದರೆ ಡಾ. ರಾಜಪ್ಪ ಮುಂದೆ ನಿಂತು, ಕಾರ್ಯಕರ್ತರನ್ನು ಕಾರ್ಖಾನೆಗೆ ಕಳುಹಿಸಿ ಆ ಲಾಕ್ ಔಟ್ ಅನ್ನು ವಿಫಲಗೊಳಿಸಿದ್ದರು. ಕೆಲವು ಕಾರ್ಯಕರ್ತರು ಈ ಸಂದರ್ಭದಲ್ಲಿ ಏಟು ತಿನ್ನಬೇಕಾಯಿತಾದರೂ ಯಾರೂ ಎದೆಗುಂದಿರಲಿಲ್ಲ. ಡಾ. ರಾಜಪ್ಪನವರ ಗರಡಿಯ ಮಹಿಮೆ ಅಂತಹದಾಗಿತ್ತು.
ಸ್ವಂತಕ್ಕೆ ಏನನ್ನೂ ಅಪೇಕ್ಷೆ ಪಡಲಿಲ್ಲ. ಸಮಾಜಕ್ಕೆ ತನ್ನನ್ನೇ ಸಮರ್ಪಿಸಿಕೊಂಡರು. ಕಾರ್ಯಕರ್ತರು, ಅಭಿಮಾನಿಗಳ ಮನಃಪಟಲದಲ್ಲಿ ಚಿರಂಜೀವಿಯಾಗಿ ಉಳಿದುಕೊಂಡರು. ನಾನೂ ಡಾಕ್ಟರ್ ರಾಜಪ್ಪನವರಂತೆ ಆಗಬೇಕು ಎಂದು ಹಂಬಲಿಸಿ ಈಗಲೂ ಕೆಲಸ ಮಾಡುತ್ತಿರುವ ನೂರಾರು ಕಾರ್ಯಕರ್ತರೇ ಇದಕ್ಕೆ ಸಾಕ್ಷಿ.
ಡಾ. ರಾಜಪ್ಪ ನಿಧನರಾಗಿ ದಶಕಗಳೇ ಉರುಳಿವೆ. ಆದರೆ ಅವರ ನೆನಪು ಇನ್ನೂ ಮಾಸಿಲ್ಲ. ಇತ್ತೀಚೆಗೆ ಆನೇಕಲ್ ಪ್ರದೇಶದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದ ಹಿಂದೂ ಸಮಾಜೋತ್ಸವದ ವೇದಿಕೆಗೆ ‘ಡಾ. ರಾಜಪ್ಪ ವೇದಿಕೆ’ ಎಂದು ಹೆಸರಿಟ್ಟಿದ್ದು ಕಾರ್ಯಕರ್ತರಿಗೆ ಅವರ ಮೇಲಿರುವ ಶ್ರದ್ಧೆ, ಅಭಿಮಾನ, ಗೌರವಗಳಿಗೆ ದಿವ್ಯ ನಿದರ್ಶನ. ಸಾವಿನ ನಂತರವೂ ಒಬ್ಬ ವ್ಯಕ್ತಿ ಜೀವಂತವಾಗಿರುವುದೆಂದರೆ ಇದೇ ಅಲ್ಲವೇ? ಬದುಕಿದ್ದಾಗ ಡಾ. ರಾಜಪ್ಪ ಹಲವರಿಗೆ ಪ್ರೇರಣೆ ನೀಡಿದರು. ಸತ್ತ ನಂತರವೂ ಪ್ರೇರಣಾಸ್ರೋತವಾಗಿ ಉಳಿದಿದ್ದಾರೆ.
(ಮಾಹಿತಿ ನೆರವು: ಭೋಜರಾಜ್)
