ಆ.6: ಹಿರೋಷಿಮಾ ದಿನ
- ತೇಜಸ್ ಎಚ್ ಬಾಡಾಲ, ಕಾನೂನು ವಿದ್ಯಾರ್ಥಿ
ಧರೆಯೊಡೆದು ನಡುಪುರದ ಚೌಕದಲಿ ರವಿಮೂಡೆ
ಬೆರಗಾಗಿ ದಶದಿಶೆಗೆ ಚೆಲ್ಲಿದವು ನೆರಳುಗಳು
ಉರಿಯೆದ್ದು ಧರೆಯೊಡಲು ಬಗೆಯುತ್ತ ಭೋರ್ಗರೆಯೆ ಮೃತ್ಯುವಿನ ಕಪ್ಪುರಥದೈ |
ಕಿರಣಗಳು ನಭದಿಂದ ಇಳಿಯದಲೆ ಪುರದೆದೆಯ
ಕರಗಿಸಿರೆ ಊರನದು ಚಕ್ರಗಳು ಹರಿದಿಹವು
ಮರಣವನು ಬಿತ್ತುತಲಿ ದಿಶೆದಿಶೆಗೆ ಚೆಲ್ಲಿದವು ಸೂರ್ಯನುದಯಿಸಿಮುಳುಗಿದಾ ||
ಕಳಚಿಹುದು ನಡುಹಗಲು ಕುರುಡಾಗೆ ದೃಷ್ಟಿಗಳು
ಬಳಿಕೇನು ನೆರಳುಗಳು ಸಾಯದಲೆ ಉಳಿದಿಹವು
ಅಳಿಸುತಲಿ ಮನುಜರನೆ ಮಂಜಾಗಿ ಮೃತವಾಗಿ ಬರಿಯಕಲ್ ಬೀದಿಗಳಲೇ |
ಬೆಳೆಯದಲೆ ನರನವನು ಸೃಷ್ಟಿಸಿದ ರವಿಯುರಿಯೆ
ಹೊಳೆಯುತಲಿ ಬೂದಿಯಲಿ ಗಾಳಿಯೊಳು ಬೆರೆತಿಹನು
ಕಳೆಯದಲೆ ಕಲ್ಲಮೇಲ್ ಬಿಳಿನೆರಳು ಸಾಕ್ಷಿಯನೆ ಮನುಜಗೀ ಮನುಜನೆಂದಾ ||
ಅಂದು little boy ಆಕಾಶದಿಂದ ಧಡಲ್ಲನೇ ಧುಮುಕಿ ಹಿರೋಷಿಮಾಪಟ್ಟಣದ ನಟ್ಟನಡುವೆ ಬಿದ್ದಾಗ ಬಾಲರಿಂದ ಮೊದಲುಗೊಂಡು ವೃದ್ಧರವರೆಗೂ ವಯಸ್ಸು ಜಾತಿ ಲಿಂಗಗಳ ಬೇಧವಿಲ್ಲದೆ ಎಲ್ಲರೂ ಆವಿಯಾಗಿಬಿಟ್ಟರು! ಮೇಲಿರುವ ಕವನವು ಜಪಾನಿಗೆ ಪ್ರವಾಸಕ್ಕೆಂದು ಹೋಗಿದ್ದ ಹಿಂದಿ ಕವಿ ಆಜ್ಞೇಯರ ‘ಹಿರೋಷಿಮಾ’ದ ಕನ್ನಡಾನುವಾದ. ಶಾಂತಿಗಾಗಿ ಯುದ್ಧವೆಂದು ಬೀಗುವ ವಿಶ್ವಗೃಹದ ನಾಮ್ ಕೆ ವಾಸ್ತೆ ದೊಡ್ಡಣ್ಣನು, ಪೆಟ್ಟು ಕೊಟ್ಟರೆ ಶಿಸ್ತು ಬಂದೀತೆಂದು ಬಗೆದು ಒಲೆಗೇ ತಳ್ಳಿಬಿಡುವಂತೆ, ಅಮೆರಿಕ ಹೂಡಿದ ಆ ಮರಣಮೃದಂಗದ ರಭಸಕ್ಕೆ ಕ್ಷಣಮಾತ್ರದಲ್ಲಿ ಲಕ್ಷಾಂತರ ಉಸಿರುಗಳು ಕೇವಲ ಗಾಳಿಯಲ್ಲಿ ಬೆರೆತುಹೋದವು. ಆ ದಿನದ ಮುಂಜಾನೆ ಎಂದಿನಂತೆ ರಸ್ತೆಗಿಳಿದು ದೈನಂದಿನ ಕೆಲಸಗಳಿಗೆ ಧಾವಿಸುತ್ತಿದ್ದವರು, ಶಾಲೆಗೆ ಹೊರಟಿದ್ದ ಅಚ್ಚುಮೆಚ್ಚಿನ ಕಂದಮ್ಮಗಳು, ಚಹಾದ ಗುಟುಕು ಏರಿಸುತ್ತಿದ್ದ ವೃದ್ಧರು ಕ್ಷಣಾರ್ಧದಲ್ಲಿ ರಕ್ತಮಾಂಸಗಳ ಚಹರೆಯನ್ನೇ ಕಳೆದುಕೊಂಡು ಸುಟ್ಟು ಕರಕಲಾದ ಕಪ್ಪು ಬೂದಿಯ ರಾಶಿಯಾದರು. ಆಗಸದಿಂದ ಭೋರ್ಗರೆದು ಸುರಿದ ಅಗೋಚರ ವಿಕಿರಣಗಳ ಉಷ್ಣತೆಗೆ ಕಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತಿದ್ದವರ ಶರೀರಗಳು ಕರಗಿ, ಅವರ ನೆರಳುಗಳು ಶಾಶ್ವತವಾಗಿ ಆ ಕಲ್ಲಿನಲ್ಲೇ ಅಚ್ಚಾಗಿಬಿಟ್ಟವು. ಮನುಷ್ಯನೊಬ್ಬ ತನ್ನದೇ ಜನಾಂಗದ ಮೇಲೆ ಪ್ರಯೋಗಿಸಿದ ಅತ್ಯಂತ ಪೈಶಾಚಿಕ ತಂತ್ರವಿದು. ಚರ್ಮ ಸುಲಿದು ನೇತಾಡುತ್ತಿದ್ದರೂ ದಾಹದಿಂದ ಹಾಹಾಕಾರ ಮಾಡುತ್ತಾ ಅತ್ತಿಂದಿತ್ತ ಓಡಾಡಿ ನರಳಿದ ಆ ಮೂಕಜೀವಿಗಳ ರೋದನ ಇಂದಿಗೂ ಜಪಾನಿನ ಗಾಳಿಯಲ್ಲಿ ಪ್ರತಿಧ್ವನಿಸುತ್ತಲೇ ಇದೆ. ಮೂಳೆಗಳನ್ನು ಕರಗಿಸುವ ಆ ತಾಪಕ್ಕೆ ಸಿಲುಕಿ ಆಸ್ಪತ್ರೆಗಳು, ಶಾಲೆಗಳು, ನೂರಾರು ವರ್ಷಗಳ ಇತಿಹಾಸವಿದ್ದ ಕಟ್ಟಡಗಳು ಮಸಣದ ಭಸ್ಮವಾಗಿ ಮಾರ್ಪಟ್ಟವು. ಆಕಾಶದಿಂದ ಸುರಿದ ಕಪ್ಪು ಮಳೆ ಆ ಜನರ ನರಳಾಟವನ್ನು ಮತ್ತಷ್ಟು ಹೆಚ್ಚಿಸಿತೇ ವಿನಃ ಅವರ ದಾಹವನ್ನು ತಣಿಸಲಿಲ್ಲ.
ಈ ಮಹಾವಿನಾಶದ ನಂತರ ಅಮೆರಿಕದ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್ ಜಗತ್ತಿನ ಮುಂದೆ ನಿಂತು, ಜಪಾನ್ ಶರಣಾಗದಿದ್ದರೆ ಮುಂಬರುವ ದಿನಗಳಲ್ಲಿ ಆಕಾಶದಿಂದ ಮತ್ತಷ್ಟು ವಿನಾಶದ ಮಳೆ ಸುರಿಯಲಿದೆ ಎಂದು ಅಹಂಕಾರದಿಂದ ಎಚ್ಚರಿಸಿದ. ಅಮೆರಿಕದ ಸೈನಿಕರ ಪ್ರಾಣವನ್ನು ಉಳಿಸಲು ಮತ್ತು ಜಾಗತಿಕ ಯುದ್ಧವನ್ನು ಕೊನೆಗಾಣಿಸಲು ಈ ಬಾಂಬ್ ದಾಳಿ ಅನಿವಾರ್ಯವಾಗಿತ್ತು ಎಂಬ ಪರಮ ಕುತರ್ಕವನ್ನು ಆತ ಮಂಡಿಸಿದ. ಶಾಂತಿಯನ್ನು ಸ್ಥಾಪಿಸುವ ಭ್ರಮೆಯಲ್ಲಿ ಲಕ್ಷಾಂತರ ಮುಗ್ಧರನ್ನು ಬಲಿತೆಗೆದುಕೊಂಡ ಆ ನಿರ್ಧಾರವು ತದನಂತರದ ಜಾಗತಿಕ ಶೀತಲ ಸಮರಕ್ಕೆ ಅಧಿಕೃತವಾಗಿ ನಾಂದಿ ಹಾಡಿತು. ಅಣ್ವಸ್ತ್ರಗಳನ್ನು ಹೊಂದಿರುವ ರಾಷ್ಟ್ರವೇ ಜಗತ್ತಿನ ಏಕೈಕ ಒಡೆಯನೆಂಬ ಅಲಿಖಿತ ನಿಯಮವೊಂದು ಅಲ್ಲಿಂದ ಸೃಷ್ಟಿಯಾಯಿತು. ರಷ್ಯಾ, ಚೀನಾ ಸೇರಿದಂತೆ ಹಲವು ದೇಶಗಳು ಪರಮಾಣು ಶಸ್ತ್ರಾಸ್ತ್ರಗಳ ಹುಚ್ಚು ಸಂಗ್ರಹಣೆಯಲ್ಲಿ ತೊಡಗಿಕೊಂಡವು. ಪ್ರಾಣಹಾನಿಯ ಭಯ ಹುಟ್ಟಿಸಿ ಬಲಪ್ರಯೋಗದಿಂದಲೇ ಜಗತ್ತಿನಲ್ಲಿ ಶಾಂತಿ ಸ್ಥಾಪಿಸುತ್ತೇವೆ ಎಂಬ ಅಮೆರಿಕದ ದುರಹಂಕಾರದ ನೀತಿಯು ಅಂದಿನಿಂದ ಇಂದಿನವರೆಗೂ ಜಾಗತಿಕ ರಾಜಕಾರಣದ ಕರಾಳ ಮುಖವಾಡವಾಗಿಯೇ ಉಳಿದುಕೊಂಡಿದೆ. ಶಾಂತಿಯ ಹೆಸರಿನಲ್ಲಿ ಶಸ್ತ್ರಾಸ್ತ್ರಗಳ ಪೈಪೋಟಿಗೆ ಇಳಿದ ಜಗತ್ತು ಅಕ್ಷರಶಃ ಒಂದು ಮದ್ದಿನ ಗುಡಿಸಲಿನ ಮೇಲೆ ಕುಳಿತು ಧೂಮಪಾನ ಮಾಡುವ ಪರಿಸ್ಥಿತಿಗೆ ಬಂದು ತಲುಪಿತು.
ದಶಕಗಳು ಉರುಳಿವೆ, ಜಗತ್ತಿನ ಭೂಪಟದಲ್ಲಿ ಅಧಿಕಾರದ ಸಮೀಕರಣಗಳು ಆಮೂಲಾಗ್ರವಾಗಿ ಬದಲಾಗಿವೆ. ಅಂದು ಅಣ್ವಸ್ತ್ರದ ಬೆದರಿಕೆಯೊಡ್ಡಿ ಇಡೀ ಜಗತ್ತನ್ನು ತಲ್ಲಣಗೊಳಿಸಿದ್ದ ಅದೇ ಅಮೆರಿಕ ಇಂದು ತಾನೇ ಹೆಣೆದ ಭ್ರಮೆಯ ಬಲೆಯಲ್ಲಿ ಒದ್ದಾಡುತ್ತಿದೆ. ಮಧ್ಯಪ್ರಾಚ್ಯದ ಮರಳುಗಾಡಿನಲ್ಲಿ ಈಗ ಹೊಸ ಕದನದ ಕಾರ್ಮೋಡಗಳು ದಟ್ಟವಾಗಿ ಕವಿದಿವೆ. ಅಮೆರಿಕ ಮತ್ತು ಇರಾನ್ ನಡುವಿನ ಹಗೆತನವು ಮೂರನೇ ಜಾಗತಿಕ ಯುದ್ಧದ ಕಿಡಿಯನ್ನು ಹೊತ್ತಿಸುವ ಹಂತಕ್ಕೆ ತಲುಪಿದೆ. ಆದರೆ ಅಂದಿನ ಹಿರೋಷಿಮಾ ಕಾಲದ ಅಮೆರಿಕಗೂ ಇಂದಿನ ಅಮೆರಿಕಗೂ ಅಜಗಜಾಂತರ ವ್ಯತ್ಯಾಸವಿದೆ. ಪ್ರಜಾಪ್ರಭುತ್ವದ ಕಾವಲುಗಾರನೆಂದು ಬಿಂಬಿಸಿಕೊಳ್ಳುವ ದೊಡ್ಡಣ್ಣನ ಬತ್ತಳಿಕೆಯಲ್ಲಿ ಈಗ ಹಿಂದಿನ ಆ ದರ್ಪದ ಅಸ್ತ್ರಗಳ ದಾಸ್ತಾನು ಉಳಿದಿಲ್ಲ. ಉಕ್ರೇನ್ ಯುದ್ಧ ಮತ್ತು ಇಸ್ರೇಲ್ ಸಂಘರ್ಷಗಳಿಗೆ ನಿರಂತರವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಿ ಅಮೆರಿಕದ ರಕ್ಷಣಾ ಉಗ್ರಾಣಗಳು ಬರಿದಾಗುತ್ತಿವೆ.
ಇನ್ನೊಂದೆಡೆ ಇರಾನ್ ಇಂದು ತನ್ನ ನೆಲದಡಿಯ ಬೃಹತ್ ಗುಹೆಗಳಲ್ಲಿ ಮತ್ತು ಸುರಂಗಗಳಲ್ಲಿ ಭಯಾನಕ ಕ್ಷಿಪಣಿಗಳ ಬೃಹತ್ ಸಾಮ್ರಾಜ್ಯವನ್ನೇ ನಿರ್ಮಿಸಿದೆ. ಪಾಶ್ಚಿಮಾತ್ಯ ದೇಶಗಳ ಕಣ್ತಪ್ಪಿಸಿ ನಿರ್ಮಾಣವಾದ ಶಾಹಿದ್ ಡ್ರೋನ್ಗಳು, ಶಬ್ದದ ವೇಗವನ್ನು ಮೀರಿಸುವ ಹೈಪರ್ಸಾನಿಕ್ ಕ್ಷಿಪಣಿಗಳು, ನಿಖರ ಗುರಿಯಿಡುವ ಸ್ಮಾರ್ಟ್ ಬಾಂಬ್ಗಳು ಇರಾನ್ ಸೇನೆಯ ಕೈಬೆರಳ ತುದಿಯಲ್ಲಿವೆ. ದಿನೇ ದಿನೇ ತನ್ನ ಯುರೇನಿಯಂ ಪುಷ್ಟೀಕರಣದ ಮಟ್ಟವನ್ನು ಹೆಚ್ಚಿಸುತ್ತಿರುವ ಇರಾನ್, ಅಣ್ವಸ್ತ್ರ ತಯಾರಿಕೆಯ ಹೊಸ್ತಿಲಲ್ಲಿ ನಿಂತು ಅಮೆರಿಕದ ಕಣ್ಣಿಗೆ ಬೆರಳಿಟ್ಟು ಆಡಿಸುತ್ತಿದೆ. ಹಿಜ್ಬುಲ್ಲಾ, ಹೌತಿಗಳಂತಹ ತನ್ನ ಬೆಂಬಲಿತ ಸಶಸ್ತ್ರ ಗುಂಪುಗಳ ಮೂಲಕ ಇರಾನ್ ಇಡೀ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೆಲೆಗಳನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಪಶ್ಚಿಮದ ಆರ್ಥಿಕ ದಿಗ್ಬಂಧನಗಳನ್ನು ಸಂಪೂರ್ಣವಾಗಿ ಲೆಕ್ಕಿಸದೆ ತನ್ನ ಮಿಲಿಟರಿ ಶಕ್ತಿಯನ್ನು ನೂರ್ಮಡಿಗೊಳಿಸಿಕೊಂಡಿರುವ ಇರಾನ್ ಈಗ ಅಮೆರಿಕದ ಮಿತ್ರರಾಷ್ಟ್ರಗಳಿಗೆ ದಿನನಿತ್ಯದ ದುಸ್ವಪ್ನವಾಗಿ ಕಾಡುತ್ತಿದೆ.
ಇದಕ್ಕೆ ಪ್ರತಿಯಾಗಿ ಅಮೆರಿಕ ಹಳೆಯ ಹುಲಿಯಂತೆ ಗರ್ಜಿಸುತ್ತಿದೆಯೇ ವಿನಃ ವಾಸ್ತವದಲ್ಲಿ ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡಂತಿದೆ. ತಾಂತ್ರಿಕವಾಗಿ ಮತ್ತು ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಹಿಂದೊಮ್ಮೆ ಅಪ್ರತಿಮ ಸಾಮ್ರಾಟನಾಗಿ ಮೆರೆದಿದ್ದ ಅಮೆರಿಕ ಇಂದು ಆಂತರಿಕ ರಾಜಕೀಯ ಕಲಹಗಳು, ಆರ್ಥಿಕ ಹಿಂಜರಿತ ಮತ್ತು ರಕ್ಷಣಾ ಉತ್ಪಾದನಾ ವಲಯದ ಮಂದಗತಿಯಿಂದ ಬಳಲುತ್ತಿದೆ. ಇರಾನ್ನ ನಿರಂತರ ಆಕ್ರಮಣಕಾರಿ ಹೆಜ್ಜೆಗಳನ್ನು ಸಮರ್ಥವಾಗಿ ಎದುರಿಸಲು ಬೇಕಾದ ನಿರ್ಣಾಯಕ ಶಸ್ತ್ರಾಸ್ತ್ರಗಳ ಕೊರತೆ ಪೆಂಟಗನ್ ಅಧಿಕಾರಿಗಳ ನಿದ್ದೆಗೆಡಿಸಿದೆ. ವಿಮಾನವಾಹಕ ನೌಕೆಗಳನ್ನು ಅರಬ್ಬಿ ಸಮುದ್ರದಲ್ಲಿ ನಿಲ್ಲಿಸಿ ಕೇವಲ ಬೆದರಿಸುವ ತಂತ್ರಕ್ಕಷ್ಟೇ ವಾಷಿಂಗ್ಟನ್ ಈಗ ಸೀಮಿತವಾಗಿದೆ. ಶಕ್ತಿಯ ಬಳಕೆಯ ಮೂಲಕ ಶಾಂತಿ ಎಂಬ ಒಣ ಘೋಷಣೆಗಳನ್ನು ಕೂಗುತ್ತಾ ಅಮೆರಿಕ ತನ್ನ ಶಸ್ತ್ರಾಸ್ತ್ರಗಳ ಕೊರತೆಯನ್ನು ಮುಚ್ಚಿಕೊಳ್ಳಲು ಕಪಟ ಶಾಂತಿಯ ಮುಖವಾಡ ತೊಟ್ಟಿದೆ. ಇರಾನ್ನ ಪ್ರತೀಕಾರದ ಕ್ಷಿಪಣಿಗಳ ದಾಳಿಗೆ ನೇರ ಪ್ರತ್ಯುತ್ತರ ನೀಡುವ ಧೈರ್ಯವಿಲ್ಲದೆ, ರಾಜತಾಂತ್ರಿಕ ಮಾತುಕತೆಯೆಂಬ ನೆಪವೊಡ್ಡಿ ತನ್ನ ಹಳೆಯ ಮರ್ಯಾದೆ ಉಳಿಸಿಕೊಳ್ಳುವ ಹತಾಶ ಯತ್ನದಲ್ಲಿದೆ.
ಹಿರೋಷಿಮಾದ ರಕ್ತಸಿಕ್ತ ಬೂದಿಯಿಂದ ಈ ಜಗತ್ತು ಮತ್ತು ಅದರ ನಾಯಕರು ಕಲಿತ ಪಾಠ ಶೂನ್ಯ. ಅಂದು ಜಪಾನಿನ ಮುಗ್ಧರ ರಕ್ತದಿಂದ ಶುರುವಾದ ಅಮೆರಿಕದ ಸಾಮ್ರಾಜ್ಯಶಾಹಿ ಶಕ್ತಿಪ್ರದರ್ಶನದ ದಾಹವು ಇಂದು ಇರಾನ್ನ ಅತ್ಯಾಧುನಿಕ ಕತ್ತಿಯ ಅಂಚಿನಲ್ಲಿ ಬಂದು ನಿಂತಿದೆ. ಅಂದು ಅಣುಬಾಂಬ್ ಹಾಕಿ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಿದೆವು ಎಂದು ಬೀಗಿದ್ದವರು, ಇಂದು ಅದೇ ವಿನಾಶಕಾರಿ ಅಸ್ತ್ರಗಳ ಕೊರತೆಯಿಂದಾಗಿ ಅನಿವಾರ್ಯವಾಗಿ ಶಾಂತಿಯ ಜಪ ಮಾಡುತ್ತಿದ್ದಾರೆ. ಶಕ್ತಿಯಿಂದ ಶಾಂತಿ ಎಂಬುದು ಮನುಕುಲದ ವಿನಾಶದ ಮುನ್ನುಡಿಯೇ ವಿನಃ ಬದುಕುವ ದಾರಿಯಲ್ಲ ಎಂಬ ಕಟುಸತ್ಯ ಹಿರೋಷಿಮಾದ ಸುಟ್ಟ ಕಲ್ಲುಗಳಿಗೂ ಗೊತ್ತು, ಇರಾನ್ನ ಬಿಸಿ ಮರಳುಗಾಡಿಗೂ ಗೊತ್ತು. ಬಲಪ್ರಯೋಗದ ಅಹಂಕಾರವು ಮನುಷ್ಯನನ್ನು ಮೃಗವನ್ನಾಗಿಸುತ್ತದೆ, ಕಾಲಚಕ್ರ ಉರುಳಿದಂತೆ ಅದೇ ಅಹಂಕಾರವು ಅವನನ್ನೇ ಭಸ್ಮಮಾಡುತ್ತದೆ.
