ಆ. 8: ಹಿರಿಯ ನಾಗರಿಕರ ದಿನ
- ಚಿನ್ನಾಗನಹಳ್ಳಿ ಸೂರ್ಯಪ್ರಕಾಶ್, ನಿವೃತ್ತ ವಾಯುದಳ ಸೈನಿಕ
“ಮಗ ಕೆಲಸದ ಒತ್ತಡದಲ್ಲಿದ್ದರೆ ಅವನಿಗೆ ಮಾತನಾಡಲು ಸಮಯ ಸಿಗುವುದಿಲ್ಲ. ಆಗ ಸೊಸೆ ಕರೆ ಮಾಡುತ್ತಾಳೆ. ಅವರಿಬ್ಬರಲ್ಲಿ ಯಾರಾದರೂ ಮಾತನಾಡಿದ ನಂತರವೇ ನಮ್ಮಗಳ ನೆಮ್ಮದಿಯ ಊಟ…” ಎಂಭತ್ತರ ಆಸುಪಾಸಿನ ಆ ಹಿರಿಯರ ಮುಖದಲ್ಲಿ ಅದನ್ನು ಹೇಳುವಾಗ ವಿಚಿತ್ರವಾದ ತೃಪ್ತಿಯಿತ್ತು. ಅವರ ಮಾತಿನಲ್ಲಿ ಮಗನ ಬಗ್ಗೆ ದೂರಿರಲಿಲ್ಲ, ಸೊಸೆಯ ಬಗ್ಗೆ ಅಸಮಾಧಾನವೂ ಇರಲಿಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಮನಸ್ಸಿನ ಪ್ರೌಢತೆ ಮಾತ್ರ ಇತ್ತು. ಅವರು ಕುಳಿತಿದ್ದುದು ವೃದ್ಧಾಶ್ರಮದಲ್ಲಿ.
ಸಾಮಾನ್ಯವಾಗಿ ವೃದ್ಧಾಶ್ರಮವೆಂದರೆ ಮನಸ್ಸಿನಲ್ಲಿ ಮೂಡುವ ಚಿತ್ರ ಒಂದೇ – ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟ ಹಿರಿಯರು, ಏಕಾಂತ, ನೋವು ಮತ್ತು ಕಣ್ಣೀರು. ಆದರೆ ಈ ಹಿರಿಯರ ಕಥೆ ಆ ಕಲ್ಪನೆಯನ್ನು ಮೊದಲ ಕ್ಷಣದಲ್ಲೇ ಪ್ರಶ್ನಿಸಿತ್ತು. “ಅವರಿಗೆ ಬರಬೇಕೆಂಬ ಆಸೆ ಇಲ್ಲವೆಂದಲ್ಲ. ಈಗಿನ ಪರಿಸ್ಥಿತಿಯಲ್ಲಿ ಕೆಲಸ ಕಳೆದುಕೊಂಡರೆ ಮತ್ತೆ ಕೆಲಸ ಸಿಗುವುದು ಕಷ್ಟ. ಅವರ ಭವಿಷ್ಯ ಮುಖ್ಯ. ನಾನೇ ಧೈರ್ಯ ಹೇಳಿ ಕಳಿಸಿದ್ದೆ” ಎಂದು ಅವರು ನಿಧಾನವಾಗಿ ಹೇಳಿದರು. ಸ್ವಲ್ಪ ಹೊತ್ತು ನೀರವತೆ ಆವರಿಸಿತು. “ಪ್ರತಿದಿನ ವಿಡಿಯೋ ಕರೆ ಬರುತ್ತದೆ. ಕೆಲವೊಮ್ಮೆ ಮಗ, ಸಾಧ್ಯವಾಗದಿದ್ದರೆ ಸೊಸೆ ಮಾತನಾಡುತ್ತಾರೆ. ಅವರ ಧ್ವನಿ ಕೇಳಿದ ಮೇಲಷ್ಟೇ ನನ್ನ ಊಟಕ್ಕೂ ಸಮಾಧಾನ”. ಇದನ್ನು ಕೇಳುವಾಗ ಮನಸ್ಸಿನಲ್ಲಿ ಮೂಡುವ ಆಲೋಚನೆಗಳು ಹಲವು.
ವೃದ್ಧಾಶ್ರಮದಲ್ಲಿರುವ ಎಲ್ಲರೂ ತ್ಯಜಿಸಲ್ಪಟ್ಟವರೇ?
ಈ ಪ್ರಶ್ನೆಗೆ ಉತ್ತರ ಹುಡುಕಲು ಅಲ್ಲಿದ್ದ ಇನ್ನಷ್ಟು ಹಿರಿಯರೊಂದಿಗೆ ಮಾತನಾಡಿದೆ. ಒಂದು ಕೊಠಡಿಯಲ್ಲಿ ವಾಸಿಸುತ್ತಿದ್ದ ದಂಪತಿಗಳು ತಮ್ಮ ಕಥೆಯನ್ನು ತೆರೆದಿಟ್ಟರು. “ಸೊಸೆಯ ಜೊತೆ ಹೊಂದಾಣಿಕೆ ಆಗುತ್ತಿರಲಿಲ್ಲ. ಮಗ ಎರಡು ಕಡೆ ಸಿಲುಕಿದಂತಾಗುತ್ತಿದ್ದ. ನಮ್ಮಿಂದ ಅವರ ಸಂಸಾರದಲ್ಲಿ ಬಿರುಕು ಬರಬಾರದೆಂದು ಇಲ್ಲಿಗೆ ಬಂದೆವು”. “ಮಗ ಬರುತ್ತಾನಾ?” ಎಂದು ಕೇಳಿದಾಗ, “ಪ್ರತಿವಾರ ಬರುತ್ತಾನೆ. ವಿಡಿಯೋ ಕರೆ ಮಾಡುತ್ತಾನೆ. ಹಣದ ಕೊರತೆ ಇಲ್ಲ. ಆದರೆ ಮನೆಯಲ್ಲಿ ಪ್ರತಿದಿನ ಕಲಹವಾಗುವುದಕ್ಕಿಂತ ಇಲ್ಲಿ ನೆಮ್ಮದಿಯಿದೆ” ಎಂದರು. ಕೆಲವೊಮ್ಮೆ ವೃದ್ಧಾಶ್ರಮ ಸೋಲಿನ ಸಂಕೇತವಲ್ಲ; ಬದುಕಿನ ಒಂದು ಕಠಿಣ ಮತ್ತು ಪ್ರಬುದ್ಧ ನಿರ್ಧಾರದ ಸಂಕೇತವೂ ಆಗಿರಬಹುದಲ್ಲವೇ? ಅಲ್ಲಿನ ಸಿಬ್ಬಂದಿಯೊಂದಿಗೆ ಮಾತನಾಡುತ್ತಾ ತಿಳಿದ ಸಂಗತಿಗಳು ವೃದ್ಧಾಶ್ರಮದ ಇನ್ನೊಂದು ಮುಖವನ್ನು ತೆರೆದವು. ಕೆಲವರು ಕುಟುಂಬದ ಭಿನ್ನಾಭಿಪ್ರಾಯಗಳಿಂದ ಬರುತ್ತಾರೆ, ಕೆಲವರಿಗೆ ಇಪ್ಪತ್ತನಾಲ್ಕು ಗಂಟೆಯ ವೈದ್ಯಕೀಯ ಆರೈಕೆ ಬೇಕಾಗುತ್ತದೆ, ಕೆಲವರು ಸಂಪೂರ್ಣ ಅನಾಥರು, ಇನ್ನೂ ಕೆಲವರನ್ನು ಸಂಬಂಧಿಕರೇ ಇಲ್ಲಿ ಸೇರಿಸಿ ಮಾನವೀಯತೆಯ ದೃಷ್ಟಿಯಿಂದ ತಿಂಗಳ ಖರ್ಚನ್ನು ಭರಿಸುತ್ತಿದ್ದಾರೆ.
ವೃದ್ಧಾಶ್ರಮಕ್ಕೆ ಒಂದೇ ಕಥೆ ಇಲ್ಲ…
ನೂರು ಜನರಿದ್ದರೆ ನೂರು ಕಾರಣಗಳಿವೆ. ಒಬ್ಬರನ್ನು ಮತ್ತೊಬ್ಬರ ಅಳತೆಯಲ್ಲಿ ಅಳೆಯಲು ಸಾಧ್ಯವಿಲ್ಲ.
ಇಂದಿನ ಸಮಾಜದಲ್ಲಿ ವೃದ್ಧಾಪ್ಯದ ಚಿತ್ರವೂ ಬದಲಾಗುತ್ತಿದೆ. ಒಂದು ಕಾಲದಲ್ಲಿ ಅಜ್ಜ – ಅಜ್ಜಿ ಮನೆಯ ಮಧ್ಯದಲ್ಲಿದ್ದರು. ಇಂದು ಕೆಲವರು ನಗರಗಳಲ್ಲಿ ಒಂಟಿಯಾಗಿ ಬದುಕುತ್ತಿದ್ದಾರೆ. ಕೆಲವರು ವಿದೇಶದಲ್ಲಿರುವ ಮಕ್ಕಳನ್ನು ಪ್ರತಿದಿನ ಪರದೆಯ ಮೇಲೆಯೇ ಭೇಟಿಯಾಗುತ್ತಿದ್ದಾರೆ. ಇನ್ನೂ ಕೆಲವರು ಆಸ್ಪತ್ರೆ ಮತ್ತು ಮನೆಯ ನಡುವೆ ಬದುಕನ್ನು ತೂಗುತ್ತಿದ್ದಾರೆ. ಮತ್ತೆ ಕೆಲವರು ವೃದ್ಧಾಶ್ರಮದಲ್ಲಿ ನೆಮ್ಮದಿಯನ್ನು ಕಂಡಿದ್ದಾರೆ. ಹೀಗಾಗಿ ವೃದ್ಧಾಪ್ಯವನ್ನು ಕೇವಲ ಕಣ್ಣೀರಿನಿಂದ ಅಳೆಯುವುದು ಸರಿಯಲ್ಲ. ಹಾಗೆಯೇ ಕೇವಲ ಸೌಲಭ್ಯಗಳಿಂದ ಅಳೆಯುವುದೂ ಸರಿಯಲ್ಲ. ಹಾಗೆಂದು ಮನುಷ್ಯನ ಆಯುಷ್ಯ ಹೆಚ್ಚಾದಂತೆ ಸಂಬಂಧಗಳ ಆಯುಷ್ಯವೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚಿದೆಯೇ? ಎಂಬುದನ್ನು ಯೋಚಿಸಬೇಕಾಗುತ್ತದೆ. ವೈದ್ಯಕೀಯ ವಿಜ್ಞಾನ ಜೀವಿತಾವಧಿಯನ್ನು ಹೆಚ್ಚಿಸಿದೆ. ಆ ವರ್ಷಗಳಿಗೆ ಜೊತೆಗಾರಿಕೆಯನ್ನು ಹೆಚ್ಚಿಸುವಲ್ಲಿ ಸಮಾಜ ಯಶಸ್ವಿಯಾಗಿದೆಯೇ? ಈ ಚಿಂತನೆ ಇಂದಿನ ವೃದ್ಧಾಪ್ಯದ ನಿಜವಾದ ಚಿತ್ರವನ್ನು ಬಿಚ್ಚಿಡುತ್ತದೆ. ವೃದ್ಧಾಪ್ಯದ ಸಮಸ್ಯೆಯನ್ನು ಕೇವಲ “ಮಕ್ಕಳು ನೋಡಿಕೊಳ್ಳುತ್ತಿಲ್ಲ…” ಎಂಬ ಒಂದೇ ವಾಕ್ಯದಲ್ಲಿ ಮುಗಿಸುವುದು ಸುಲಭ. ಆದರೆ ವಾಸ್ತವ ಹೆಚ್ಚು ಸಂಕೀರ್ಣ. ಒಬ್ಬನೇ ಮಗ, ಉದ್ಯೋಗದ ಒತ್ತಡ, ನಗರ ಜೀವನ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ಸವಾಲುಗಳು, ವಿದೇಶದ ಅವಕಾಶಗಳು, ಹೆಣ್ಣುಮಕ್ಕಳ ಕುಟುಂಬದ ಇತಿಮಿತಿಗಳು ಇವೆಲ್ಲಾ ಸೇರಿ ಹೊಸರೀತಿಯ ಕುಟುಂಬ ವ್ಯವಸ್ಥೆಯನ್ನು ನಿರ್ಮಿಸಿವೆ. ಈ ಬದಲಾವಣೆಯನ್ನು ಅರ್ಥಮಾಡಿಕೊಳ್ಳದೆ ವೃದ್ಧಾಪ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಸಂಸ್ಕಾರದ ಬೇರುಗಳು
ವೃದ್ಧಾಶ್ರಮದಿಂದ ಹಿಂದಿರುಗಿದ ಮೇಲೂ ಅಲ್ಲಿನ ಮುಖಗಳು ನನ್ನ ಮನಸ್ಸನ್ನು ಬಿಡಲಿಲ್ಲ. ಆಶ್ಚರ್ಯವೆಂದರೆ ನನ್ನ ಆಲೋಚನೆ ಅಲ್ಲೇ ನಿಲ್ಲಲಿಲ್ಲ, ಅದು ನೇರವಾಗಿ ನನ್ನ ಮನೆಯಂಗಳಕ್ಕೆ ಬಂದು ನಿಂತಿತು. ಅಲ್ಲಿ ನನ್ನ ವಯಸ್ಸಾದ ತಾಯಿಯ ಮುಖ ಕಾಣಿಸಿತು. ಅವರ ಸುತ್ತ ಓಡಾಡುತ್ತಿದ್ದ ನನ್ನ ಚಿಕ್ಕ ಮಕ್ಕಳು ಕಾಣಿಸಿದರು. ಇದರಿಂದಾಗಿ ವೃದ್ಧಾಪ್ಯದ ಪ್ರಶ್ನೆಗೆ ಉತ್ತರ ವೃದ್ಧಾಶ್ರಮದಲ್ಲಿ ಹುಟ್ಟುವುದಿಲ್ಲ; ಅದು ಮನೆಯಲ್ಲೇ ಹುಟ್ಟುತ್ತದೆ ಎಂಬುದು ಸ್ಪಷ್ಟವಾಯಿತು.
ಸಂಸ್ಕಾರ ಕಲಿಸುವುದು ಮಾತಲ್ಲ – ಬದುಕು
ಮನೆಯಲ್ಲಿ ವಯಸ್ಸಾದ ತಾಯಿ ಇದ್ದಾಗ, ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಾನು ಮಕ್ಕಳ ಮೂಲಕವೇ ಆರಂಭಿಸಿದ್ದೆ. ಸಮಯಕ್ಕೆ ಮಾತ್ರೆ ಕೊಡುವುದು, ನೀರು ತಂದುಕೊಡುವುದು, ಬೇಕಾದ ವಸ್ತುಗಳನ್ನು ತಲುಪಿಸುವುದು ಇವೆಲ್ಲ ಮಕ್ಕಳಿಗೆ ಸಣ್ಣ ಕೆಲಸಗಳಾಗಿದ್ದವು. ಆದರೆ ಉದ್ದೇಶ ಮಕ್ಕಳಿಗೆ ಕೆಲಸ ಮಾಡಿಸುವುದಲ್ಲ. ಹಿರಿಯರ ಸೇವೆ ಮನೆಯ ಸಹಜ ಬದುಕಿನ ಭಾಗವಾಗಬೇಕು ಎಂಬ ಭಾವನೆ ಅವರೊಳಗೆ ಬೆಳೆಯಬೇಕು. ಮಕ್ಕಳಿಗೆ ಏನಾದರೂ ತಿನಿಸು ತಂದರೂ ನೇರವಾಗಿ ಅವರ ಕೈಗೆ ಕೊಡುತ್ತಿರಲಿಲ್ಲ. “ಮೊದಲು ಅಜ್ಜಿಯ ಕೈಯಿಂದ ತೆಗೆದುಕೊಳ್ಳಿ…” ಎಂದು ಹೇಳುತ್ತಿದ್ದೆ. ತಾಯಿ ಮಕ್ಕಳ ಕೈಗೆ ತಿನಿಸು ಕೊಡುವ ಆ ಕ್ಷಣದಲ್ಲಿ, ತಿನಿಸು ಮಾತ್ರ ಹೋಗುತ್ತಿರಲಿಲ್ಲ. ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪ್ರೀತಿಯೂ, ಗೌರವವೂ, ಸಂಸ್ಕಾರವೂ ಮೌನವಾಗಿ ಹರಿಯುತ್ತಿತ್ತು. ಕೆಲವೊಮ್ಮೆ ತಾಯಿ ಒಂದೆರಡು ದಿನ ಮನೆಯಲ್ಲಿರದಿದ್ದರೆ, ಮಕ್ಕಳು ಮೊದಲು ಕೇಳುತ್ತಿದ್ದ ಪ್ರಶ್ನೆ: “ಅಜ್ಜಿ ಯಾವಾಗ ಬರುತ್ತಾರೆ?” ಎಂದು. ಇದರಿಂದ ಅರಿವಾಗುವುದೇನೆಂದರೆ ಸಂಬಂಧಗಳು ರಕ್ತದಿಂದ ಹುಟ್ಟಬಹುದು. ಆದರೆ ಹೃದಯಸ್ಪರ್ಶಿ ನಂಟು ಸಂಸ್ಕಾರದಿಂದ ಬೆಳೆಯುತ್ತದೆ.
ಮೊದಲ ಬಾರಿ ಸಿರಿಂಜ್ ಹಿಡಿದ ಹತ್ತು ವರ್ಷದ ಕೈ
ಪಕ್ಕದ ಮನೆಯ ಹಿರಿಯರಿಗೆ ಕಣ್ಣು ಕಾಣುತ್ತಿರಲಿಲ್ಲ. ಅವರು ಮಧುಮೇಹಿಗಳಾಗಿದ್ದು, ಪ್ರತಿದಿನ ಇನ್ಸುಲಿನ್ ಪಡೆಯುತ್ತಿದ್ದರು. ಒಂದು ದಿನ ಆ ಮನೆಯವರು ಅನಿವಾರ್ಯ ಕಾರಣಕ್ಕೆ ಹೊರಹೋಗುವಾಗ, “ಸ್ವಲ್ಪ ಗಮನವಿರಲಿ” ಎಂದು ಹೇಳಿ ಹೊರಟಿದ್ದರು. ಸ್ವಲ್ಪ ಹೊತ್ತಿನ ಬಳಿಕ ಅವರ ಮನೆಯೊಳಗಿಂದ ಜೋರಾಗಿ ಕೂಗು ಕೇಳಿಸಿತು. ನನ್ನ ಹತ್ತು ವರ್ಷದ ಮಗ ಓಡಿ ಹೋಗಿದ್ದ. ಹಿರಿಯರು ಜಾರಿ ಬಿದ್ದು ಕೈಗೆ ಗಾಯಮಾಡಿಕೊಂಡಿದ್ದರು. ಅವನು ಅವರನ್ನು ಎಬ್ಬಿಸಿ ಕುಳ್ಳಿರಿಸಿದ. ಗಾಯವನ್ನು ಶುಚಿಗೊಳಿಸಿದ. ಊಟ ಬಡಿಸಿದ. ಅಷ್ಟರಲ್ಲಿ ಇನ್ಸುಲಿನ್ ತೆಗೆದುಕೊಳ್ಳುವ ಸಮಯವಾಯಿತು. ಸಾಮಾನ್ಯವಾಗಿ ಸೂಜಿ ಕಂಡರೆ ಹೆದರುವ ವಯಸ್ಸು ಅದು. ಆದರೆ ಪರಿಸ್ಥಿತಿ ಬೇರೆ. ಜೀವನದಲ್ಲಿ ಮೊದಲ ಬಾರಿಗೆ ಅವನು ಸಿರಿಂಜ್ ಕೈಗೆತ್ತಿಕೊಂಡ. ಎದುರಿಗೆ ಕುಳಿತಿದ್ದ ಕಣ್ಣು ಕಾಣದ ಹಿರಿಯರು ನಿಧಾನವಾಗಿ ಹೇಳುತ್ತಿದ್ದರು. “ಹೀಗೆ ತುಂಬು…ಈಗ ನಿಧಾನವಾಗಿ…ಈಗ ಇಲ್ಲಿ ಕೊಡು…” ಅವರ ಮಾತನ್ನೇ ನಂಬಿಕೊಂಡು, ಅವರ ಸೂಚನೆಯಂತೆ ನನ್ನ ಮಗ ಮೊದಲ ಬಾರಿಗೆ ಅವರಿಗೆ ಇನ್ಸುಲಿನ್ ಚುಚ್ಚುಮದ್ದು ನೀಡಿದ. ಆ ದಿನ ನನಗೆ ಹೆಮ್ಮೆ ಅನಿಸಿದ್ದು ಮಗನ ಧೈರ್ಯವಲ್ಲ, ಆ ಧೈರ್ಯಕ್ಕೆ ಅಡಿಪಾಯವಾಗಿದ್ದ ಮನೆಯ ವಾತಾವರಣ. ಮಕ್ಕಳಿಗೆ ನಾವು ಬಿಟ್ಟುಹೋಗುವ ದೊಡ್ಡ ಆಸ್ತಿ ಹಣವಲ್ಲ, ಇಂತಹ ಸಂಸ್ಕಾರಗಳು.
ಒಬ್ಬನೇ ಮಗನ ಭುಜದ ಮೇಲಿನ ಜಗತ್ತು
ಇಂದಿನ ಕುಟುಂಬ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಒಂದೊಮ್ಮೆ ನಾಲ್ಕೈದು ಮಕ್ಕಳ ನಡುವೆ ಹಂಚಿಕೆಯಾಗುತ್ತಿದ್ದ ಜವಾಬ್ದಾರಿಗಳು, ಇಂದು ಅನೇಕ ಮನೆಗಳಲ್ಲಿ ಒಬ್ಬನೇ ಮಗನ ಹೆಗಲಿಗೆ ಬಿದ್ದಿವೆ. ಅವನ ಭುಜದ ಮೇಲೆ ವಯಸ್ಸಾದ ತಂದೆ – ತಾಯಿಯ ಆರೈಕೆ ಇದೆ; ಪತ್ನಿ ಮತ್ತು ಮಕ್ಕಳ ಭವಿಷ್ಯವಿದೆ; ಉದ್ಯೋಗದ ಒತ್ತಡ, ಸಾಲದ ಹೊರೆ, ಆರೋಗ್ಯದ ಕಾಳಜಿ, ನಾಳಿನ ಅನಿಶ್ಚಿತತೆ – ಇವೆಲ್ಲವೂ ಒಂದೇ ಸಮಯದಲ್ಲಿ ಜೊತೆಯಾಗಿವೆ. ಹೆಣ್ಣುಮಕ್ಕಳಿಗೂ ತಂದೆ – ತಾಯಿಯ ಮೇಲಿನ ಪ್ರೀತಿಯಲ್ಲಿ ಕಡಿಮೆಯಿಲ್ಲ. ಆದರೆ ಮದುವೆಯ ನಂತರ ಅವರ ಜೀವನಕ್ಕೂ ತನ್ನದೇ ಆದ ಇತಿಮಿತಿಗಳಿರುತ್ತವೆ. ಮನಸ್ಸು ಒಂದು ಕಡೆ ಎಳೆದರೆ, ಪರಿಸ್ಥಿತಿ ಇನ್ನೊಂದು ಕಡೆ ನಿಲ್ಲಿಸುತ್ತದೆ. ಈ ಸಂಕೀರ್ಣ ವಾಸ್ತವವನ್ನು ಅರಿಯದೆ, ಪ್ರತಿಯೊಂದು ವೃದ್ಧಾಶ್ರಮದ ಕಥೆಯನ್ನು ಒಂದೇ ತೀರ್ಪಿನಿಂದ ನೋಡುವುದು ನ್ಯಾಯವಲ್ಲ. ಕರುಣೆ ಬೇಕು; ಆದರೆ ಅದಕ್ಕಿಂತ ಮೊದಲು ಅರಿವು ಬೇಕು.
ಸಂಬಂಧಗಳ ಬಿರುಕು ಎಲ್ಲಿಂದ ಆರಂಭವಾಗುತ್ತದೆ?
ಸಂಬಂಧಗಳು ಒಂದೇ ದಿನದಲ್ಲಿ ಮುರಿಯುವುದಿಲ್ಲ. ಮೊದಲು ಹಿರಿಯರ ಮಾತನ್ನು “ಹಳೆಯ ಕಾಲದ ಮಾತು…” ಎಂದು ತಳ್ಳಿಹಾಕುತ್ತೇವೆ. ನಂತರ ಮನೆಯ ನಿರ್ಧಾರಗಳಲ್ಲಿ ಅವರ ಅಭಿಪ್ರಾಯ ಕೇಳುವುದೇ ಕಡಿಮೆಯಾಗುತ್ತದೆ. ಕ್ರಮೇಣ ಅವರು ಮನೆಯಲ್ಲಿದ್ದರೂ ಮನೆಯ ಕೇಂದ್ರದಿಂದ ದೂರವಾಗುತ್ತಾರೆ. ಕೊನೆಗೆ ಅವರು ತಮ್ಮ ಮನೆಯಲ್ಲೇ ಅತಿಥಿಗಳಂತೆ ಬದುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ವೃದ್ಧಾಶ್ರಮದಲ್ಲಿ ಆರಂಭವಾಗುವುದಿಲ್ಲ. ಮನೆಯೊಳಗೆ ಆರಂಭವಾಗುವ ಶೀತಲ ಸ್ಥಿತಿ.
ಸಂಬಂಧಗಳ ಭವಿಷ್ಯ ಮತ್ತು ಸಮಯದ ಬಡತನ
ವೃದ್ಧಾಶ್ರಮದಲ್ಲಿ ಸಿಗುವ ಆರೈಕೆ ಮಾತ್ರ ಸಾಕೇ? ಮಾನವೀಯ ಸ್ಪರ್ಶ ಬೇಕಲ್ಲವೇ? ಅಲ್ಲಿರುವವರಿಗೆ ಕೊರತೆಯಾಗುವುದು ಆಹಾರವಲ್ಲ, ಔಷಧಿಯೂ ಅಲ್ಲ, ಹಾಸಿಗೆಯೂ ಅಲ್ಲ. ಕೆಲವರಿಗೆ ಮಗನ ಧ್ವನಿ, ಇನ್ನು ಕೆಲವರಿಗೆ ಮೊಮ್ಮಗನ ನಗು. ಮತ್ತೊಬ್ಬರಿಗೆ ಯಾರಾದರೂ… “ಊಟ ಆಯಿತಾ?” ಎಂದು ಕೇಳುವ ಒಂದು ಮಾತು. ಆರೈಕೆ ಮತ್ತು ಆತ್ಮೀಯತೆ ಒಂದೇ ಅಲ್ಲ. ಆರೈಕೆಯನ್ನು ವ್ಯವಸ್ಥೆಗಳು ಒದಗಿಸಬಹುದು. ಹೃದಯಸ್ಪರ್ಶಿ ನಂಟನ್ನು ಸಂಬಂಧಗಳೇ ನೀಡಬೇಕು.
ಇಂದಿನ ಅನೇಕ ಮಕ್ಕಳು ತಂದೆ – ತಾಯಿಗೆ ಹಣ ಕಳುಹಿಸುತ್ತಾರೆ. ಔಷಧಿ ಕೊಡಿಸುತ್ತಾರೆ. ಬೇಕಾದ ಸೌಲಭ್ಯಗಳನ್ನೆಲ್ಲಾ ಒದಗಿಸುತ್ತಾರೆ. ಆದರೂ ಸಮಯದ ಕೊರತೆ ಉಳಿದುಬಿಡುತ್ತದೆ. ಇಂದಿನ ಜಗತ್ತಿನಲ್ಲಿ ಹಣದ ಬಡತನಕ್ಕಿಂತ ಸಮಯದ ಬಡತನವೇ ಹೆಚ್ಚು. ಐದು ನಿಮಿಷಗಳ ಮಾತು, ಒಂದು ವಿಡಿಯೋ ಕರೆ, ಜೊತೆಯಾಗಿ ಕುಳಿತು ಕುಡಿಯುವ ಒಂದು ಕಪ್ ಕಾಫಿ, ಇವೆಲ್ಲಾ ದುಬಾರಿ ಔಷಧಿಗಳಿಗಿಂತಲೂ ಹೆಚ್ಚು ನೆಮ್ಮದಿ ನೀಡುತ್ತವೆ. ಏಕೆಂದರೆ ಹಿರಿಯರಿಗೆ ಬೇಕಾಗಿರುವುದು ಯಾವಾಗಲೂ ಸಹಾಯವಲ್ಲ; ತಮ್ಮ ಬದುಕಿನಲ್ಲಿ ಇನ್ನೂ ತಾವು ಅಗತ್ಯವಿದ್ದೇವೆ ಎಂಬ ಭರವಸೆ. ಗಡಿಯಾರದಲ್ಲಿ ಐದು ನಿಮಿಷಗಳು ಮಾತ್ರ ಕಳೆಯಬಹುದು; ಆದರೆ ಅವರ ಮನಸ್ಸಿನಲ್ಲಿ ಆ ಐದು ನಿಮಿಷಗಳು ಒಂದು ದಿನವನ್ನೇ ಬೆಳಗಿಸಬಹುದು.
ಕಾನೂನಿನ ಆರೈಕೆ
ಹಿರಿಯ ನಾಗರಿಕರ ಆರೈಕೆಯನ್ನು ಭಾರತೀಯ ಕಾನೂನು ಕೇವಲ ನೈತಿಕ ಹೊಣೆಗಾರಿಕೆಯಾಗಿ ಮಾತ್ರವಲ್ಲ, ಕಾನೂನುಬದ್ಧ ಜವಾಬ್ದಾರಿಯಾಗಿಯೂ ಗುರುತಿಸಿದೆ. ಇತ್ತೀಚಿನ ಕೆಲವು ಪ್ರಕರಣಗಳಲ್ಲಿ, ಪೋಷಣೆಯ ಭರವಸೆಯ ಮೇಲೆ ಆಸ್ತಿ ಅಥವಾ ಉಯಿಲು ಬರೆಸಿಕೊಂಡ ನಂತರ ತಂದೆ – ತಾಯಿಯನ್ನು ನಿರ್ಲಕ್ಷಿಸಿದ ಘಟನೆಗಳ ಬಗ್ಗೆ ನ್ಯಾಯಾಲಯಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಇದು ಹಿರಿಯರ ಗೌರವ ಮತ್ತು ಭದ್ರತೆಯನ್ನು ಕಾಪಾಡುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಆದರೆ ಒಂದು ಪ್ರಶ್ನೆ ನಮ್ಮೆಲ್ಲರ ಮುಂದೆ ನಿಂತೇ ಇರುತ್ತದೆ. ತಂದೆ – ತಾಯಿಯನ್ನು ನೋಡಿಕೊಳ್ಳಲು ಕಾನೂನು ನೆನಪಿಸಬೇಕಾದ ಪರಿಸ್ಥಿತಿ ಬಂದರೆ, ಸಮಾಜವಾಗಿ ನಾವು ಏನನ್ನೋ ಕಳೆದುಕೊಂಡಿದ್ದೇವೆಯೇ? ಕಾನೂನು ಹಕ್ಕುಗಳನ್ನು ಕಾಪಾಡಬಹುದು. ನ್ಯಾಯ ಕೊಡಬಹುದು. ಆದರೆ ಸಂಬಂಧಗಳಿಗೆ ಜೀವ ತುಂಬುವುದು ಮಾತ್ರ ಸಂಸ್ಕಾರ ಮತ್ತು ಮಾನವೀಯತೆ. ವೃದ್ಧಾಶ್ರಮಕ್ಕೆ ಹೋಗುತ್ತಿರುವುದು ಹಿರಿಯರು ಮಾತ್ರವಲ್ಲ. ಅವರೊಂದಿಗೆ ಒಂದು ತಲೆಮಾರಿನ ಅನುಭವವೂ ದೂರವಾಗುತ್ತದೆ. ಅಜ್ಜಿಯ ಕಥೆಗಳು, ತಾತನ ಬದುಕಿನ ಪಾಠಗಳು, ಸೋಲು – ಗೆಲುವಿನ ಅನುಭವಗಳು, ತಾಳ್ಮೆ, ಸಹನೆ, ಕುಟುಂಬದ ಇತಿಹಾಸ ಇವೆಲ್ಲವೂ ಮೊಮ್ಮಕ್ಕಳಿಂದ ದೂರವಾಗುತ್ತವೆ. ಹಿರಿಯರನ್ನು ಕಳೆದುಕೊಳ್ಳುವುದು ಅವರ ನಷ್ಟ ಮಾತ್ರವಲ್ಲ. ಮುಂದಿನ ತಲೆಮಾರಿನ ಬಹುದೊಡ್ಡ ನಷ್ಟವೂ ಹೌದು.
ವೃದ್ಧಾಪ್ಯಕ್ಕೆ ತಯಾರಿ
ನಾವು ಮಕ್ಕಳ ಶಿಕ್ಷಣಕ್ಕೆ ಯೋಜನೆ ಮಾಡುತ್ತೇವೆ, ಉದ್ಯೋಗಕ್ಕೆ ಯೋಜನೆ ಮಾಡುತ್ತೇವೆ, ಮದುವೆಗೆ ಯೋಜನೆ ಮಾಡುತ್ತೇವೆ, ನಿವೃತ್ತಿಗೂ ಯೋಜನೆ ಮಾಡುತ್ತೇವೆ. ಆದರೆ ವೃದ್ಧಾಪ್ಯದ ಭಾವನಾತ್ಮಕ ಬದುಕಿಗೆ ಯೋಜನೆ ಮಾಡುತ್ತೇವೆಯೇ? ಇದು ಹಣದ ಪ್ರಶ್ನೆಯಲ್ಲ. ಇದು ಸಂಬಂಧಗಳ ಪ್ರಶ್ನೆ. ಇದು ಸಮಯದ ಪ್ರಶ್ನೆ. ಇದು ಸಂಸ್ಕಾರದ ಪ್ರಶ್ನೆ.

ವೃದ್ಧಾಪ್ಯ: ಬದುಕಿನ ಇನ್ನೊಂದು ವಸಂತ
ಸನಾತನ ಪರಂಪರೆ ಜೀವನವನ್ನು ನಾಲ್ಕು ಆಶ್ರಮಗಳಾಗಿ ವಿಂಗಡಿಸಿದೆ. ಅವುಗಳಲ್ಲಿ ವಾನಪ್ರಸ್ಥ ಎಂದರೆ ಬದುಕಿನಿಂದ ದೂರವಾಗುವುದಲ್ಲ; ಬದುಕಿನ ಮೇಲಿನ ಅತಿಯಾದ ಅವಲಂಬನೆಯನ್ನು ನಿಧಾನವಾಗಿ ಕಡಿಮೆ ಮಾಡಿಕೊಂಡು, ಮನಸ್ಸನ್ನು ಒಳಮುಖವಾಗಿಸುವ ಪಯಣ. ಕುಟುಂಬದ ಜವಾಬ್ದಾರಿಗಳನ್ನು ನೆರವೇರಿಸಿದ ಮನಸ್ಸು ಈ ಹಂತದಲ್ಲಿ ತನ್ನ ಅನುಭವಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಅವಕಾಶವನ್ನು ಕಂಡುಕೊಳ್ಳಬಹುದು. ಆದ್ದರಿಂದ ವೃದ್ಧಾಪ್ಯ ಎಂದರೆ ಬದುಕಿನ ಇಳಿಜಾರಲ್ಲ; ಪರಿಪಕ್ವತೆಯ ಶಿಖರ. ದೇಹದ ಶಕ್ತಿ ಸ್ವಲ್ಪ ಕುಂದಬಹುದು. ಆದರೆ ಅನುಭವ, ವಿವೇಕ, ಸಹನೆ ಮತ್ತು ಬದುಕಿನ ಸಾರವನ್ನು ಅರಿತ ಮನಸ್ಸು ಈ ವಯಸ್ಸಿನಲ್ಲೇ ಅತ್ಯಂತ ಶ್ರೀಮಂತವಾಗಿರುತ್ತದೆ. ಆದ್ದರಿಂದ ವೃದ್ಧಾಪ್ಯವನ್ನು ಕೇವಲ “ಇನ್ನು ಏನೂ ಮಾಡಲು ಆಗದ ವಯಸ್ಸು” ಎಂದು ನೋಡುವುದು ತಪ್ಪು. ಇದು ಗಳಿಸಿದ ಅನುಭವವನ್ನು ಸಮಾಜಕ್ಕೆ ಮರಳಿಸುವ ಸುವರ್ಣಕಾಲ. ಶಾಲೆಯಲ್ಲಿ ಮಕ್ಕಳಿಗೆ ಕಥೆ ಹೇಳುವ ಅಜ್ಜ – ಅಜ್ಜಿ, ಗ್ರಂಥಾಲಯದಲ್ಲಿ ಪುಸ್ತಕಗಳ ನಡುವೆ ಸಮಯ ಕಳೆಯುವ ಹಿರಿಯರು, ದೇವಾಲಯ ಅಥವಾ ಸಮಾಜಸೇವೆಯಲ್ಲಿ ತೊಡಗುವ ನಿವೃತ್ತರು, ಗಿಡಗಳನ್ನು ನೆಟ್ಟು ಪೋಷಿಸುವವರು, ಸಾಹಿತ್ಯ, ಸಂಗೀತ, ಚಿತ್ರಕಲೆ, ರಂಗೋಲಿ, ಭಜನೆ, ಪ್ರವಾಸ ಇವುಗಳಲ್ಲಿ ಬದುಕಿನ ಹೊಸ ಅರ್ಥ ಕಂಡುಕೊಳ್ಳುವವರು, ಇವರೆಲ್ಲರೂ ವೃದ್ಧಾಪ್ಯವನ್ನು ಕಳೆಯುವುದಿಲ್ಲ. ಅದನ್ನು ಸಾರ್ಥಕಗೊಳಿಸುತ್ತಾರೆ. ವೃದ್ಧಾಪ್ಯದ ಸಾರ್ಥಕತೆ “ಎಷ್ಟು ವರ್ಷ ಬದುಕಿದೆವು?” ಎಂಬ ಪ್ರಶ್ನೆಯಲ್ಲ; “ಬದುಕಿದ ವರ್ಷಗಳಿಗೆ ಎಷ್ಟು ಅರ್ಥ ತುಂಬಿದೆವು?” ಎಂಬ ಪ್ರಶ್ನೆಯಲ್ಲಿದೆ.
ಆರೋಗ್ಯಕರ ವೃದ್ಧಾಪ್ಯ: ದೇಹಕ್ಕೂ ಮನಸ್ಸಿಗೂ ಸಿದ್ಧತೆ
ಇಂದಿನ ಹಿರಿಯರಿಗೆ ಆರೋಗ್ಯ ಎಂದರೆ ಕೇವಲ ಔಷಧಿಗಳ ವಿಷಯವಲ್ಲ; ಅದು ದೇಹ, ಮನಸ್ಸು ಮತ್ತು ಸಂಬಂಧಗಳ ಸಮತೋಲನ. ಮನಸ್ಸನ್ನು ಚೈತನ್ಯವಾಗಿಡಲು ಓದು, ಹವ್ಯಾಸಗಳು, ಸ್ನೇಹ, ತಂತ್ರಜ್ಞಾನದ ವಿವೇಕಪೂರ್ಣ ಬಳಕೆ ನೆರವಾಗಬಹುದು. ದೇಹವನ್ನು ಚೈತನ್ಯವಾಗಿಡಲು ಯೋಗ, ನಿಯಮಿತ ನಡಿಗೆ ಮತ್ತು ಸರಳ ವ್ಯಾಯಾಮಗಳು ಸಹಕಾರಿಯಾಗುತ್ತವೆ. ಮನಸ್ಸಿಗೆ ಸಂಸ್ಕಾರ ಎಷ್ಟು ಅಗತ್ಯವೋ, ಸಂಬಂಧಗಳಿಗೆ ಪ್ರೀತಿ ಹಾಗೂ ದೇಹಕ್ಕೆ ಯೋಗವೂ ಅಷ್ಟೇ ಅಗತ್ಯ. “ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ” ಎಂಬ ಈ ಬಾರಿಯ ವಿಶ್ವ ಯೋಗ ದಿನಾಚರಣೆಯ ಘೋಷವಾಕ್ಯವೂ ಇದೇ ಜೀವನಸತ್ಯವನ್ನು ನೆನಪಿಸುತ್ತದೆ. ವಾರಾಣಸಿಯ 125 ವರ್ಷದ ಯೋಗಸಾಧಕ ಹಾಗೂ ಸಮಾಜ ಸೇವಕ ಪದ್ಮಶ್ರೀ ಸ್ವಾಮಿ ಶಿವಾನಂದ ಅವರ ಬದುಕು ಇದಕ್ಕೆ ಜೀವಂತ ಸಾಕ್ಷಿ. ವಯಸ್ಸು ದೇಹಕ್ಕೆ ಬರುತ್ತದೆ; ಚೈತನ್ಯ ಮನಸ್ಸಿನಲ್ಲಿ ಉಳಿಯುತ್ತದೆ ಎಂಬುದನ್ನು ಅವರ ಜೀವನ ಸಾರುತ್ತದೆ.
ಆತ್ಮಾವಲೋಕನ
ನಾವೆಲ್ಲರೂ ಪ್ರತಿದಿನ ವೃದ್ಧಾಪ್ಯದ ಕಡೆಗೆ ಒಂದು ಹೆಜ್ಜೆ ಇಡುತ್ತಿದ್ದೇವೆ. ಇಂದು ವೃದ್ಧಾಶ್ರಮದಲ್ಲಿರುವವರು ಯಾರೋ ಅಪರಿಚಿತರಲ್ಲ. ಅವರು ಯಾರದೋ ತಂದೆ, ಯಾರದೋ ತಾಯಿ, ಯಾರದೋ ಬದುಕಿನ ಮೊದಲ ಗುರು. ನಾಳೆ ಬಹುಶಃ ನಾವೇ. ಆಗ ಮಕ್ಕಳಿಗೆ ನಮ್ಮನ್ನು ನೋಡಿಕೊಳ್ಳಲು ಕಾನೂನಿನ ನೆನಪು ಬೇಕಾಗುತ್ತದೆಯೇ ಅಥವಾ ನಾವು ಬದುಕಿ ತೋರಿಸಿದ ಸಂಸ್ಕಾರದ ನೆನಪೇ ಸಾಕಾಗುತ್ತದೆಯೇ? ಈ ಪ್ರಶ್ನೆಗೆ ಉತ್ತರವನ್ನು ನ್ಯಾಯಾಲಯ ಬರೆಯುವುದಿಲ್ಲ. ಸರ್ಕಾರವೂ ಬರೆಯುವುದಿಲ್ಲ. ಅದನ್ನು ಪ್ರತಿದಿನ ಬರೆಯುತ್ತಿರುವುದು ನಮ್ಮ ಮನೆಗಳು. ವೃದ್ಧಾಶ್ರಮಗಳನ್ನು ಕಟ್ಟುವುದು ಸಮಾಜದ ಅಗತ್ಯವಾಗಿರಬಹುದು. ಆದರೆ ಹಿರಿಯರಿಗೆ ಮನೆಯೊಳಗೆ ಸ್ಥಾನ ಉಳಿಸಿಕೊಳ್ಳುವುದು ನಮ್ಮ ಸಂಸ್ಕೃತಿಯ ಅಗತ್ಯ. ಏಕೆಂದರೆ ಹಿರಿಯರು ಭೂತಕಾಲದ ನೆನಪುಗಳಷ್ಟೇ ಅಲ್ಲ, ಭವಿಷ್ಯದ ಪಠ್ಯಪುಸ್ತಕವೂ ಹೌದು. ಇಂದು ಮಕ್ಕಳು ನಮ್ಮನ್ನು ನೋಡುತ್ತಿದ್ದಾರೆ. ನಾಳೆ ಅವರು ನಮ್ಮನ್ನೇ ಅನುಕರಿಸುತ್ತಾರೆ. ನಾವು ಮಕ್ಕಳ ಮುಂದೆ ಬದುಕುವ ಬದುಕೇ, ನಾಳೆ ಅವರು ನಮ್ಮ ಮುಂದೆ ಬದುಕುವ ಬದುಕಾಗುತ್ತದೆ.
