ನ್ಯೂಯಾರ್ಕ್: ಸಂಯುಕ್ತ ರಾಷ್ಟ್ರಗಳ ಸಾಮಾನ್ಯ ಸಭೆಯಲ್ಲಿ (UNGA) ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಜಮ್ಮು ಮತ್ತು ಕಾಶ್ಮೀರದ ಕುರಿತು ಮಾಡಿರುವ ಪ್ರಚೋದನಕಾರಿ ಮತ್ತು ಆಧಾರರಹಿತ ಟೀಕೆಗಳಿಗೆ ಭಾರತೀಯ ರಾಜತಾಂತ್ರಿಕರು ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ನಿಲ್ಲಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಭಾರತ ಎಚ್ಚರಿಸಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಮಿಷನ್ನ ಪ್ರಥಮ ಕಾರ್ಯದರ್ಶಿ ಪೆಟಲ್ ಗೆಹ್ಲೋಟ್ ಅವರು ಹಕ್ಕು ಚಲಾವಣೆಯ ಅಧಿಕಾರವನ್ನು (Right of Reply) ಬಳಸಿ ಪಾಕಿಸ್ತಾನಕ್ಕೆ ಖಡಕ್ ಉತ್ತರ ನೀಡಿದರು. ಪಾಕಿಸ್ತಾನದ ಪ್ರಧಾನಿಯವರ ಮಾತುಗಳನ್ನು “ಕಪಟದ ಬೋಧನೆಗಳು ಮತ್ತು ಬೂಟಾಟಿಕೆ” ಎಂದು ಕರೆದ ಅವರು, ಜಗತ್ತಿನ ಗಮನ ಬೇರೆಡೆ ಸೆಳೆಯಲು ಪಾಕಿಸ್ತಾನ ನಿರಂತರವಾಗಿ ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸೇನೆಯ ಕೈಗೊಂಬೆ ಸರ್ಕಾರ:
ಪಾಕಿಸ್ತಾನದ ಆಡಳಿತ ವ್ಯವಸ್ಥೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಭಾರತ, ಅಲ್ಲಿನ ಪ್ರಧಾನಿ ಮತ್ತು ರಾಜಕೀಯ ನಾಯಕರು ಕೇವಲ ಸೇನೆಯ ಕೈಗೊಂಬೆಗಳು ಮಾತ್ರ ಎಂದು ಜಗತ್ತಿನ ಮುಂದೆ ಬಲವಾಗಿ ಪ್ರತಿಪಾದಿಸಿತು. “ಪಾಕಿಸ್ತಾನದಲ್ಲಿ ನಿಜವಾದ ಅಧಿಕಾರವಿರುವುದು ಅಲ್ಲಿನ ಮಿಲಿಟರಿ ಆಡಳಿತದ ಕೈಯಲ್ಲಿ. ರಾಜಕೀಯ ಮುಖಂಡರು ಮುಖವಾಡವಷ್ಟೇ, ಆದೇಶ ಹೊರಡಿಸುವುದು ಮತ್ತು ದೇಶವನ್ನು ನಿಯಂತ್ರಿಸುವುದು ಯಾರು ಎಂಬುದು ಜಗತ್ತಿಗೇ ಗೊತ್ತಿದೆ” ಎಂದು ಭಾರತ ಸ್ಪಷ್ಟಪಡಿಸಿತು. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಪಾಕಿಸ್ತಾನಕ್ಕಿಲ್ಲ ಎಂದು ಟೀಕಿಸಿತು.
ಗಡಿಯಾಚೆಗಿನ ಭಯೋತ್ಪಾದನೆಗೆ ತೀಕ್ಷ್ಣ ಎಚ್ಚರಿಕೆ:
ಒಂದು ಕಡೆ ಶಾತಿಯ ಮಾತನಾಡುತ್ತಲೇ ಮತ್ತೊಂದೆಡೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪೋಷಿಸುವ ಪಾಕಿಸ್ತಾನದ ದ್ವಂದ್ವ ನೀತಿಯನ್ನು ಭಾರತ ಬಟಾಬಯಲು ಮಾಡಿತು. ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ರಾಷ್ಟ್ರಗಳು ಜಾಗತಿಕ ವೇದಿಕೆಯಲ್ಲಿ ಬಲಿಪಶುವಿನಂತೆ ನಟಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಪಾಕಿಸ್ತಾನ ತಕ್ಷಣವೇ ನಿಲ್ಲಿಸಬೇಕು, ಇಲ್ಲದಿದ್ದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಭಾರತ ಕಠಿಣ ಎಚ್ಚರಿಕೆ ನೀಡಿತು.
ಜಮ್ಮು ಮತ್ತು ಕಾಶ್ಮೀರ ಭಾರತದ ಅಭಿಭಾಜ್ಯ ಅಂಗ:
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಹಸ್ತಕ್ಷೇಪದ ಧೋರಣೆಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿತು. “ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರ ಆಡಳಿತ ಪ್ರದೇಶಗಳು ಭಾರತದ ಅಭಿಭಾಜ್ಯ ಮತ್ತು ಅನ್ಯೇಲ್ಯ ಅಂಗಗಳಾಗಿದ್ದವು, ಇವೆ, ಮತ್ತು ಎಂದೆಂದಿಗೂ ಹಾಗೆಯೇ ಇರುತ್ತವೆ” ಎಂದು ಭಾರತ ಪುನರುಚ್ಚರಿಸಿತು. ಪಾಕಿಸ್ತಾನವು ತನ್ನ ಅಕ್ರಮ ವಶದಲ್ಲಿರುವ ಕಾಶ್ಮೀರ ಪ್ರದೇಶದಲ್ಲಿ (PoJK) ಮಾಡುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ದೌರ್ಜನ್ಯಗಳು ಮತ್ತು ಅಲ್ಲಿನ ಜನರ ಧ್ವನಿಯನ್ನು ಅಡಗಿಸುತ್ತಿರುವ ಕೃತ್ಯಗಳ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತೀಕ್ಷ್ಣವಾಗಿ ನುಡಿಯಿತು.
ಅಲ್ಪಸಂಖ್ಯಾತರ ದೌರ್ಜನ್ಯ ಮತ್ತು ಆಂತರಿಕ ಬಿಕ್ಕಟ್ಟು:
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂ, ಸಿಖ್, ಕ್ರಿಶ್ಚಿಯನ್ ಸಮುದಾಯಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳು, ಬಲವಂತದ ಮತಾಂತರಗಳು ಮತ್ತು ಕಠಿಣ ನಿಂದನಾ ಕಾನೂನುಗಳ ದುರ್ಬಳಕೆಯ ಬಗ್ಗೆ ಭಾರತ ಜಾಗತಿಕ ಸಮುದಾಯದ ಗಮನ ಸೆಳೆಯಿತು. ತನ್ನ ದೇಶದಲ್ಲಿ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ಮತ್ತು ಆಂತರಿಕ ಅಶಾಂತಿಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನದ ನಾಯಕರು ಕಾಶ್ಮೀರ ವಿಷಯವನ್ನು ಪದೇ ಪದೇ ಪ್ರಸ್ತಾಪಿಸುವ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಭಾರತ ವ್ಯಂಗ್ಯವಾಡಿದೆ.
ಕೊನೆಯಲ್ಲಿ, ಭಾರತದೊಂದಿಗೆ ಶಾಂತಿ ಮತ್ತು ಮಾತುಕತೆ ನಡೆಸಬೇಕಾದರೆ ಪಾಕಿಸ್ತಾನವು ಮೊದಲು ಭಯೋತ್ಪಾದನೆ ರಹಿತ ವಾತಾವರಣವನ್ನು ಸೃಷ್ಟಿಸಬೇಕು ಎಂದು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
