ನವದೆಹಲಿ: ಜಪಾನ್ನ ಐಚಿ-ನಗೋಯಾದಲ್ಲಿ (Aichi-Nagoya) ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಸೆಪ್ಟೆಂಬರ್ 25, ಶುಕ್ರವಾರದಂದು ಭಾರತೀಯ ಅಥ್ಲೀಟ್ ಬಾರನಿಕಾ ಎಳಂಗೊವನ್ ಮಹಿಳೆಯರ ಪೋಲ್ ವಾಲ್ಟ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಏಷ್ಯನ್ ಗೇಮ್ಸ್ನಲ್ಲಿ ಈ ಕ್ರೀಡೆಯಲ್ಲಿ ಭಾರತಕ್ಕೆ ಇದುವರೆಗಿನ ಮೊದಲ ಪದಕ ಇದಾಗಿದೆ. 29 ವರ್ಷದ ಈ ಕ್ರೀಡಾಪಟುವಿನ ಸಾಧನೆಯನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ದೇಶದ ಯುವ ಅಥ್ಲೀಟ್ಗಳಿಗೆ ಸ್ಫೂರ್ತಿ ನೀಡುವ ಒಂದು “ವಿಶೇಷ ಜಿಗಿತ” ಎಂದು ಬಣ್ಣಿಸಿದ್ದಾರೆ.
ಬಾರನಿಕಾ ಎಳಂಗೊವನ್ ಅವರು 4.15 ಮೀಟರ್ ಎತ್ತರವನ್ನು ದಾಟುವ ಮೂಲಕ ಕಜಕಸ್ತಾನದ ಪೊಲಿನಾ ಇವಾನೊವಾ ಅವರೊಂದಿಗೆ ಕಂಚಿನ ಪದಕವನ್ನು ಹಂಚಿಕೊಂಡಿದ್ದಾರೆ (ಪೊಲಿನಾ ಕೂಡ ಅಷ್ಟೇ ಎತ್ತರವನ್ನು ಕ್ರಮಿಸಿ, ಅದೇ ಸಂಖ್ಯೆಯ ತಪ್ಪುಗಳನ್ನು ದಾಖಲಿಸಿದ್ದರು). ಜಪಾನ್ನ ಮಿಸಾಕಿ ಮೊರೊಟಾ ಅವರು ವೈಯಕ್ತಿಕ ಅತ್ಯುತ್ತಮ ಸಾಧನೆಯಾಗಿ 4.55 ಮೀಟರ್ ಎತ್ತರವನ್ನು ದಾಟಿ ಚಿನ್ನದ ಪದಕ ಪಡೆದರೆ, ಚೀನಾದ ಚುಂಗೆ ನಿಯು 4.50 ಮೀಟರ್ ಎತ್ತರ ಜಿಗಿದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಎಳಂಗೋವನ್ ಅವರು ತಮ್ಮ ಮೊದಲ ಏಷ್ಯನ್ ಗೇಮ್ಸ್ನಲ್ಲೇ ಈ ಐತಿಹಾಸಿಕ ವೇದಿಕೆಯನ್ನು ತಲುಪುವ ಮೂಲಕ ಭಾರತೀಯ ಅಥ್ಲೆಟಿಕ್ಸ್ನಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಪ್ರಧಾನಿ ಕಚೇರಿಯು (PMO India) ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ನಲ್ಲಿ, “ಭಾರತಕ್ಕೆ ಇದೊಂದು ವಿಶೇಷ ಜಿಗಿತ ಮತ್ತು ಮಾದರಿ ಪದಕ! ತಮ್ಮ ಮೊದಲ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಪೋಲ್ ವಾಲ್ಟ್ನಲ್ಲಿ ಕಂಚಿನ ಪದಕ ಗೆದ್ದ ಬಾರನಿಕಾ ಎಳಂಗೊವನ್ಗೆ ಅಭಿನಂದನೆಗಳು. ಇದು ಮತ್ತಷ್ಟು ಯುವ ಕ್ರೀಡಾಪಟುಗಳು ಈ ಕ್ರೀಡೆಯನ್ನು ಆಯ್ದುಕೊಳ್ಳಲು ಸ್ಫೂರ್ತಿ ನೀಡುವ ಹೆಮ್ಮೆಯ ಸಾಧನೆಯಾಗಿದೆ” ಎಂದು ತಿಳಿಸಿದೆ.
ಎಳಂಗೊವನ್ ಅವರು 3.85 ಮೀಟರ್ ಮತ್ತು 4.00 ಮೀಟರ್ ಎತ್ತರಗಳನ್ನು ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ದಾಟಿದರು. ನಂತರ 4.15 ಮೀಟರ್ ಎತ್ತರವನ್ನು ತಮ್ಮ ಎರಡನೇ ಪ್ರಯತ್ನದಲ್ಲಿ ಪೂರೈಸಿದರು. ಬಳಿಕ 4.25 ಮೀಟರ್ ಎತ್ತರಕ್ಕೆ ಮೂರು ಬಾರಿ ಪ್ರಯತ್ನಿಸಿದರಾದರೂ ಅದನ್ನು ತಲುಪಲು ಸಾಧ್ಯವಾಗಲಿಲ್ಲ.
ಪೋಲ್ ವಾಲ್ಟ್ನಲ್ಲಿ ಭಾರತಕ್ಕೆ ಮೊದಲ ಏಷ್ಯನ್ ಗೇಮ್ಸ್ ಪದಕ
ಏಷ್ಯನ್ ಗೇಮ್ಸ್ನ ಮಹಿಳೆಯರ ಪೋಲ್ ವಾಲ್ಟ್ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಇದಾಗಿರುವುದರಿಂದ ಎಳಂಗೊವನ್ ಅವರ ಈ ಕಂಚಿನ ಪದಕವು ಅತ್ಯಂತ ಮಹತ್ವದ್ದಾಗಿದೆ. ವೇಗವಾಗಿ ಬೆಳೆಯುತ್ತಿರುವ ಅವರ ಕ್ರೀಡಾಜೀವನಕ್ಕೆ ಈ ಸಾಧನೆ ಮತ್ತೊಂದು ಗರಿಯಾಗಿದೆ. 29 ವರ್ಷದ ಇವರು 2026ರಲ್ಲಿ ಎರಡು ಬಾರಿ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ.
ಅವರು ಮಾರ್ಚ್ನಲ್ಲಿ ರಾಷ್ಟ್ರೀಯ ದಾಖಲೆಯನ್ನು 4.22 ಮೀಟರ್ಗೆ ಏರಿಸಿದ್ದರು ಮತ್ತು ಮೇ ತಿಂಗಳಲ್ಲಿ ಅದನ್ನು ಮತ್ತಷ್ಟು ಸುಧಾರಿಸಿ 4.23 ಮೀಟರ್ಗೆ ತಲುಪಿಸುವ ಮೂಲಕ ಭಾರತದ ಅಗ್ರಗಣ್ಯ ಪೋಲ್ ವಾಲ್ಟರ್ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಅಥ್ಲೆಟಿಕ್ಸ್ನಲ್ಲಿ ಗುಲ್ವೀರ್ ಮತ್ತು ಮನ್ಪ್ರೀತ್ ಅವರಿಂದಲೂ ಅದ್ಭುತ ಪ್ರದರ್ಶನ
ಎಳಂಗೊವನ್ ಅವರ ಐತಿಹಾಸಿಕ ಪದಕದ ಜೊತೆಗೆ, ಭಾರತೀಯ ಅಥ್ಲೆಟಿಕ್ಸ್ ತಂಡಕ್ಕೆ ಗುಲ್ವೀರ್ ಸಿಂಗ್ ಮತ್ತು ಮನ್ಪ್ರೀತ್ ಕೌರ್ ಕೂಡ ಪದಕಗಳನ್ನು ತಂದುಕೊಡುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸಿದರು. ಗುಲ್ವೀರ್ ಸಿಂಗ್ ಪುರುಷರ 10,000 ಮೀಟರ್ ಓಟದಲ್ಲಿ 28:29.38 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದುಕೊಂಡರು. ಬಹ್ರೇನ್ನ ಬಿರ್ಹನು ಬಾಲೇವ್ 28:27.51 ಸೆಕೆಂಡುಗಳಲ್ಲಿ ಚಿನ್ನ ಗೆದ್ದರೆ, ಅದೇ ದೇಶದ ಆಲ್ಬರ್ಟ್ ಕಿಪ್ಟೂ 28:34.38 ಸೆಕೆಂಡುಗಳಲ್ಲಿ ಕಂಚು ಪಡೆದರು.
ಈ ಬೆಳ್ಳಿ ಪದಕದೊಂದಿಗೆ ಗುಲ್ವೀರ್ ಸಿಂಗ್ ಅವರು 2023ರ ಹಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದನ್ನು ಸೇರಿಸಿ, ಏಷ್ಯನ್ ಗೇಮ್ಸ್ನ 10,000 ಮೀಟರ್ ಓಟದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. “ಗುಲ್ವೀರ್ ಸಿಂಗ್ ಅವರು ಏಷ್ಯನ್ ಗೇಮ್ಸ್ ಪದಕ ವೇದಿಕೆಯಲ್ಲಿ ನಮಗೆ ನಿರಂತರವಾಗಿ ಹೆಮ್ಮೆ ತರುತ್ತಿದ್ದಾರೆ!” ಎಂದು ಪ್ರಧಾನಿ ಕಚೇರಿ ಅವರ ಪರಿಶ್ರಮವನ್ನು ಕೊಂಡಾಡಿದೆ.
ಇದಲ್ಲದೆ, ಮನ್ಪ್ರೀತ್ ಕೌರ್ ಅವರು ಮಹಿಳೆಯರ ಶಾಟ್ ಪುಟ್ (Shot Put) ವಿಭಾಗದಲ್ಲಿ 17.17 ಮೀಟರ್ ದೂರ ಎಸೆದು ಕಂಚಿನ ಪದಕ ಪಡೆದರು. ಈ ಪದಕದೊಂದಿಗೆ ಅವರು ಈ ವಿಭಾಗದಲ್ಲಿ ಏಷ್ಯನ್ ಗೇಮ್ಸ್ ಪದಕ ಗೆದ್ದ ಮೂರನೇ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಗುಲ್ವೀರ್, ಮನ್ಪ್ರೀತ್ ಮತ್ತು ಎಳಂಗೊವನ್ ಅವರ ಅದ್ಭುತ ಪ್ರದರ್ಶನಗಳು ಐಚಿ-ನಗೋಯಾ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಅಥ್ಲೆಟಿಕ್ಸ್ ಅಭಿಯಾನಕ್ಕೆ ಬಲ ತುಂಬಿವೆ. ಅದರಲ್ಲಿಯೂ ಬಾರನಿಕಾ ಎಳಂಗೊವನ್ ಅವರ ಪೋಲ್ ವಾಲ್ಟ್ ಕಂಚಿನ ಪದಕವು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿ ನಿಂತಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
