ಪ್ಯಾರಿಸ್ನಲ್ಲಿ ನಡೆದ ಅಂತರರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯನ್ನು (International Space Summit) ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 34 ದೇಶಗಳ 430 ಉಪಗ್ರಹಗಳನ್ನು ಭಾರತೀಯ ರಾಕೆಟ್ಗಳ ಮೂಲಕ ಉಡಾವಣೆ ಮಾಡಿರುವ ಇಸ್ರೋವನ್ನು (ISRO) ಭಾರತದ ಬಾಹ್ಯಾಕಾಶ ಆಕಾಂಕ್ಷೆಗಳ ಕೇಂದ್ರಬಿಂದು ಎಂದು ಬಣ್ಣಿಸಿದರು. ಅಲ್ಲದೆ ಚಂದ್ರಯಾನ-3, ಆದಿತ್ಯ ಎಲ್-1, ಚಂದ್ರನಿಗೆ ಮಾನವಸಹಿತ ಮಿಷನ್ ಮತ್ತು ಭಾರತೀಯ ಬಾಹ್ಯಾಕಾಶ ನಿಲ್ದಾಣ ಸೇರಿದಂತೆ ಭಾರತದ ಬಾಹ್ಯಾಕಾಶ ಮೈಲಿಗಲ್ಲುಗಳು ಮತ್ತು ಗುರಿಗಳನ್ನು ಅವರು ವಿವರಿಸಿದರು. ಎಲ್ಲರ ಒಳಿತಿಗಾಗಿ ಸುರಕ್ಷಿತ ಹಾಗೂ ಸುಸ್ಥಿರ ಬಾಹ್ಯಾಕಾಶ ವಲಯವನ್ನು ನಿರ್ಮಿಸಲು ಅವರು ಕರೆ ನೀಡಿದರು.
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 10, ಗುರುವಾರದಂದು ಪ್ಯಾರಿಸ್ನಲ್ಲಿ ನಡೆದ ಅಂತರರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯಲ್ಲಿ ಭಾರತೀಯ ಬಾಹ್ಯಾಕಾಶ ವಲಯ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ISRO) ಶ್ಲಾಘಿಸಿದರು ಹಾಗೂ ಜಾಗತಿಕ ಸಹಕಾರ ಮತ್ತು ಸುಸ್ಥಿರತೆಗೆ ಕರೆ ನೀಡಿದರು. ಶೃಂಗಸಭೆಯನ್ನು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ವಸುಧೈವ ಕುಟುಂಬಕಂ’ ಸಂದೇಶವನ್ನು ಎತ್ತಿಹಿಡಿದರು. ಅನ್ವೇಷಣೆ, ನಾವೀನ್ಯತೆ ಮತ್ತು ಬಾಹ್ಯಾಕಾಶ ರಕ್ಷಣೆಯಲ್ಲಿ ಪರಸ್ಪರ ಸಹಕಾರಕ್ಕೆ ಕರೆ ನೀಡಿದರು.
ಇಸ್ರೋ ಮೇಲಿರುವ ಜಾಗತಿಕ ನಂಬಿಕೆಯನ್ನು ಶ್ಲಾಘಿಸಿದ ಅವರು, 34 ದೇಶಗಳ 430ಕ್ಕೂ ಹೆಚ್ಚು ಉಪಗ್ರಹಗಳು ಭಾರತೀಯ ರಾಕೆಟ್ಗಳ ಮೂಲಕ ಬಾಹ್ಯಾಕಾಶಕ್ಕೆ ಪಯಣಿಸಿವೆ ಎಂದು ಉಲ್ಲೇಖಿಸಿದರು. ಪ್ರಧಾನಮಂತ್ರಿಯವರು ಮಾತನಾಡುತ್ತಾ, “ಶತಮಾನಗಳಿಂದ ಬಾಹ್ಯಾಕಾಶವು ನಮ್ಮ ಕಲ್ಪನೆಗೆ ಪ್ರೇರಣೆಯಾಗಿದೆ. ಇಂದು ಅದು ಭೂಮಿಯ ಮೇಲಿನ ಜೀವನವನ್ನೇ ಬದಲಾಯಿಸುತ್ತಿದೆ. ವಾತಾವರಣ ಮತ್ತು ಬೆಳೆಗಳಿಂದ ಹಿಡಿದು ಮಹಾಸಾಗರಗಳು ಮತ್ತು ಸಮುದಾಯಗಳವರೆಗೆ ಬಾಹ್ಯಾಕಾಶದ ಸಾಧ್ಯತೆಗಳು ಅಪಾರವಾಗಿವೆ” ಎಂದರು.
“ನಮ್ಮ ಜವಾಬ್ದಾರಿ ಸಾಮುದಾಯಿಕವಾಗಿದೆ. ಕಕ್ಷೆಗಳು ಹೆಚ್ಚು ಜನನಿಬಿಡವಾಗುತ್ತಿರುವಾಗ, ತಂತ್ರಜ್ಞಾನವು ಹೆಚ್ಚು ಶಕ್ತಿಶಾಲಿಯಾಗುತ್ತಿರುವಾಗ ಮತ್ತು ಭಾಗಿದಾರರು ಹೆಚ್ಚಾಗುತ್ತಿರುವಾಗ, ನಮ್ಮ ಆಯ್ಕೆಗಳು ಸ್ಪಷ್ಟವಾಗಿರಬೇಕು: ಸಂಘರ್ಷಕ್ಕಿಂತ ಸಹಕಾರ, ಅಲ್ಪಾವಧಿಯ ಲಾಭಕ್ಕಿಂತ ಸುಸ್ಥಿರತೆ ಮತ್ತು ಹೊರಗಿಡುವುದಕ್ಕಿಂತ ಒಳಗೊಳ್ಳುವಿಕೆ. ಭಾರತದ ವಿಧಾನವು ‘ವಸುಧೈವ ಕುಟುಂಬಕಂ’, ಅಂದರೆ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ತತ್ವದಲ್ಲಿ ಆಳವಾಗಿ ಬೇರೂರಿದೆ. ಈ ಭಾವನೆ ಈಗ ಭೂಮಿಯಿಂದ ಆಚೆಗೂ ತಲುಪಬೇಕಿದೆ” ಎಂದು ಪ್ರಧಾನಿ ಮೋದಿ ಹೇಳಿದರು. ಸಂವಾದ ಮತ್ತು ಬಹುಪಕ್ಷೀಯ ಸಹಕಾರದ ಆಧಾರದ ಮೇಲೆ ಬಾಹ್ಯಾಕಾಶ ವಲಯದಲ್ಲಿ ಸುರಕ್ಷಿತ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಭಾರತ ಬೆಂಬಲಿಸುತ್ತದೆ ಎಂದು ಅವರು ಗಮನಸೆಳೆದರು.
ಸುರಕ್ಷಿತ ಹಾಗೂ ಸುಸ್ಥಿರ ಬಾಹ್ಯಾಕಾಶ ವಲಯಕ್ಕೆ ಪ್ರಧಾನಿ ಮೋದಿ ಕರೆ:
“ಅಂತರರಾಷ್ಟ್ರೀಯ ಕಾನೂನು, ಸಂವಾದ ಮತ್ತು ಬಹುಪಕ್ಷೀಯ ಸಹಕಾರವನ್ನು ಆಧರಿಸಿದ ಸುರಕ್ಷಿತ, ಶಾಂತಿಯುತ ಮತ್ತು ಸುಸ್ಥಿರ ಬಾಹ್ಯಾಕಾಶ ವಲಯವನ್ನು ನಾವು ಬೆಂಬಲಿಸುತ್ತೇವೆ. ವೈಜ್ಞಾನಿಕ ದತ್ತಾಂಶವು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಸಾರ್ವಜನಿಕ ಒಳಿತಿಗೆ ಬಳಕೆಯಾಗಬೇಕು. ಭಾರತದ ಬಾಹ್ಯಾಕಾಶ ಪಯಣವು ಈ ತತ್ತ್ವಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ; ಈ ಪಯಣದ ಹೃದಯಭಾಗದಲ್ಲಿರುವ ಇಸ್ರೋ ತನ್ನ ಶ್ರೇಷ್ಠತೆ ಮತ್ತು ವೆಚ್ಚ-ರಹಿತ (ಸಾಧ್ಯವಾದಷ್ಟು ಕಡಿಮೆ ವೆಚ್ಚದ) ಮಿಷನ್ಗಳಿಗಾಗಿ ಜಾಗತಿಕ ಪ್ರಶಂಸೆಯನ್ನು ಪಡೆದುಕೊಂಡಿದೆ” ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.
“ಇದರ ಸಾಮರ್ಥ್ಯಗಳು ರೈತರು, ಮೀನುಗಾರರು, ಹವಾಮಾನ ಮುನ್ಸೂಚನೆ, ವಿಪತ್ತು ನಿರ್ವಹಣೆ ಮತ್ತು ನ್ಯಾವಿಗೇಷನ್ಗೆ ಸೇವೆಯನ್ನು ಒದಗಿಸುತ್ತಿವೆ. 34 ದೇಶಗಳ 430ಕ್ಕೂ ಹೆಚ್ಚು ಉಪಗ್ರಹಗಳು ಭಾರತೀಯ ರಾಕೆಟ್ಗಳ ಮೂಲಕ ಬಾಹ್ಯಾಕಾಶ ತಲುಪಿವೆ. ಇಸ್ರೋದ ತಂತ್ರಜ್ಞಾನ ಮತ್ತು ಪಾಲುದಾರಿಕೆಯು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಸೇವೆಯನ್ನು ನೀಡುತ್ತಿದೆ. ಈ ಜಾಗತಿಕ ನಂಬಿಕೆಯ ಹಿಂದೆ ಭಾರತೀಯ ವಿಜ್ಞಾನಿಗಳು, ಎಂಜಿನಿಯರ್ಗಳು ಮತ್ತು ತಂತ್ರಜ್ಞರ ತಲೆಮಾರುಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮವಿದೆ” ಎಂದು ಪ್ರಧಾನಿ ಪ್ರತಿಪಾದಿಸಿದರು.
ಚಂದ್ರಯಾನ-3, ಆದಿತ್ಯ ಎಲ್-1 ಮತ್ತು ಚಂದ್ರನಿಗೆ ಮಾನವಸಹಿತ ಮಿಷನ್: ಭಾರತದ ಆಕಾಂಕ್ಷೆಗಳು
ಚಂದ್ರಯಾನ-3 ಮತ್ತು ಆದಿತ್ಯ ಎಲ್-1 ಮಿಷನ್ಗಳನ್ನು ಶ್ಲಾಘಿಸಿದ ಪ್ರಧಾನಿ, ಭಾರತವು 2035ರ ವೇಳೆಗೆ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಮತ್ತು 2040ರ ವೇಳೆಗೆ ಚಂದ್ರನ ಮೇಲ್ಮೈಗೆ ಭಾರತೀಯನನ್ನು ಕಳುಹಿಸಲು ಗುರಿ ಹೊಂದಿದೆ ಎಂದು ಪುನರುಚ್ಚರಿಸಿದರು. “ಚಂದ್ರಯಾನ-3 ಭಾರತವನ್ನು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದ ಮೊದಲ ದೇಶವನ್ನಾಗಿ ಮಾಡಿದೆ. ಆದಿತ್ಯ-ಎಲ್1 ಸೂರ್ಯನ ರಹಸ್ಯಗಳನ್ನು ಬಿಚ್ಚಿಡುತ್ತಿದೆ. ಕಳೆದ ವರ್ಷ, ಭಾರತೀಯ ಗಗನಯಾತ್ರಿಯೊಬ್ಬರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಮುಂಬರುವ ದಿನಗಳಲ್ಲಿ, 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಮತ್ತು 2040ರ ವೇಳೆಗೆ ಭಾರತೀಯನನ್ನು ಚಂದ್ರನಿಗೆ ಕಳುಹಿಸುವ ಗುರಿಯನ್ನು ನಾವು ಹೊಂದಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದರು.
ಖಾಸಗಿ ವಲಯದ ಕೊಡುಗೆಯನ್ನು ಎತ್ತಿಹಿಡಿದ ಅವರು, “ಭಾರತದ ಖಾಸಗಿ ಬಾಹ್ಯಾಕಾಶ ವಲಯವೂ ಸಹ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಉದ್ಯಮಶೀಲತೆಯ ಶಕ್ತಿಯು ಇಸ್ರೋದ ಶ್ರೇಷ್ಠತೆಯೊಂದಿಗೆ ಕೈಜೋಡಿಸುತ್ತಿದೆ. 1960ರ ದಶಕದಲ್ಲಿ തുಂಬಾದಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಫ್ರಾನ್ಸ್ ಭಾರತದ ನಂಬಿಕಸ್ಥ ಪಾಲುದಾರನಾಗಿದೆ. ಭಾರತದ ಮುಂದಿನ ಬಾಹ್ಯಾಕಾಶ ಗಡಿಯ ಪಯಣದಲ್ಲಿ ಭಾಗಿಯಾಗಲು ನಾವು ಫ್ರಾನ್ಸ್ ಮತ್ತು ಇಡೀ ಜಗತ್ತನ್ನು ಆಹ್ವಾನಿಸುತ್ತೇವೆ. ಪ್ಯಾರಿಸ್ನಲ್ಲಿ ನಡೆಯುತ್ತಿರುವ ಈ ಬಾಹ್ಯಾಕಾಶ ಶೃಂಗಸಭೆಯು ಸ್ಪಷ್ಟ ಸಂದೇಶವನ್ನು ನೀಡಲಿ: ನಾವು ಒಟ್ಟಾಗಿ ಅನ್ವೇಷಿಸೋಣ, ಒಟ್ಟಾಗಿ ನಾವೀನ್ಯತೆ ಮಾಡೋಣ ಮತ್ತು ಇಡೀ ಮಾನವಕುಲಕ್ಕಾಗಿ ಹಾಗೂ ಮುಂಬರುವ ತಲೆಮಾರುಗಳಿಗಾಗಿ ಬಾಹ್ಯಾಕಾಶವನ್ನು ಒಟ್ಟಾಗಿ ರಕ್ಷಿಸೋಣ” ಎಂದರು.
ಈ ಬಾಹ್ಯಾಕಾಶ ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10ರಂದು ಫ್ರಾನ್ಸ್ನ ಪ್ಯಾರಿಸ್ನಲ್ಲಿ ನಡೆಯುತ್ತಿದ್ದು, ಬಾಹ್ಯಾಕಾಶದ ಸುರಕ್ಷಿತ ಮತ್ತು ಸುಸ್ಥಿರ ಬಳಕೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಈ ನಡುವೆ, ಶೃಂಗಸಭೆಯ ಸಮಯದಲ್ಲಿ ಭಾರತಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ.
ಭಾರತದೊಂದಿಗೆ ಬಾಹ್ಯಾಕಾಶ ಸಹಕಾರ ಘೋಷಿಸಿದ ಫ್ರಾನ್ಸ್
RIDE!: ಫ್ರೆಂಚ್ ಉಡಾವಣಾ ಸೇವಾ ಪೂರೈಕೆದಾರ ಸಂಸ್ಥೆಯಾದ RIDE!, ಭಾರತದೊಂದಿಗೆ ಬಾಹ್ಯಾಕಾಶ ಸಹಕಾರವನ್ನು ಬಲಪಡಿಸುವುದಾಗಿ ಘೋಷಿಸಿದೆ. ಭಾರತದ ಮೊದಲ ಕಕ್ಷೀಯ ದತ್ತಾಂಶ ಕೇಂದ್ರಗಳ (orbital data centres) ವಿನ್ಯಾಸಕರಾದ ‘TakeMeToSpace (India)’ ಪರವಾಗಿ ಎರಡು ಹೊಸ ಉಪಗ್ರಹಗಳನ್ನು ಉಡಾವಣೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ.
Safran Space: ಫ್ರಾನ್ಸ್ನ ಸಫ್ರಾನ್ ಸ್ಪೇಸ್ ಸಂಸ್ಥೆಯು ಬಾಹ್ಯಾಕಾಶ ವಲಯದಲ್ಲಿ ಫ್ರಾಂಕೋ-ಇಂಡಿಯನ್ ಯುದ್ಧತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಭಾರತದ ‘ಧ್ರುವ ಸ್ಪೇಸ್’ (Dhruva Space) ಜೊತೆಗೆ 5 ಮಿಲಿಯನ್ ಯುರೋಗಳಿಗಿಂತ ಹೆಚ್ಚು ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಿದೆ.
U-Space & AXISCADES: ಫ್ರಾನ್ಸ್ನ U-Space ಮತ್ತು ಭಾರತದ AXISCADES ಸಂಸ್ಥೆಗಳು ಭಾರತೀಯ ಮೈಕ್ರೋಸ್ಯಾಟಲೈಟ್ ಮಾರುಕಟ್ಟೆಯನ್ನು ಅನ್ವೇಷಿಸಲು ವಾಣಿಜ್ಯ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
