ಅಂಕಣ – ಜ್ಞಾನಭಂಡಾರ
- ಮೃಣಾಲಿನಿ ಅಗರಖೇಡ್, ಸದಸ್ಯರು, ಮಹಿಳಾ ಪ್ರಕಾರ, ಅಭಾಸಾಪ, ಬೆಂಗಳೂರು
ಹೇಗೆ ಹೃದಯದ ಆಂತರ್ಯದಲ್ಲಿ ಯಾವುದ್ಯಾವುದೋ ವಿಷಯಗಳಿಂದ ಕೋಲಾಹಲವೆದ್ದಿರುತ್ತದೆಯೋ ಹಾಗೆಯೇ ಮೆದುಳಿನಲ್ಲಿಯೂ ಹಲವು ವಿಚಾರಗಳ ನಿರಂತರ ಮಂಥನ ನಡೆದಿರುತ್ತದೆ. ಪ್ರಪಂಚದೊಂದಿಗೆ ವ್ಯವಹರಿಸುವಾಗ ಕಂಡ ಸಮಸ್ಯೆಗಳಿಗೆ, ನಮ್ಮ ಬುದ್ಧಿ ಕೂಡ ಹಲವು ಉಪಾಯಗಳನ್ನು ಸೂಚಿಸಿರುತ್ತದೆ. ಆದರೆ ಅಂತಹ ಪರಿಹಾರಗಳು ನಮ್ಮಲ್ಲೇ ಉಳಿದುಬಿಟ್ಟಿರುತ್ತವೆ, ಸಾಮಾನ್ಯರಿಗೆ ಹೊಳೆದಂತಹ ಪರಿಹಾರಗಳಿಗೂ ಕೇಳುವ ಕಿವಿಗಳಿವೆ, ಅದಕ್ಕಾಗಿಯೇ ಸರ್ಕಾರ ಕೆಲವು ಪೋರ್ಟಲ್ಗಳನ್ನು ಮಾಡಿದೆ. ಆ ಉಪಾಯಗಳು ಕಾರ್ಯರೂಪಕ್ಕೆ ಬಂದಿರುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ಮೆದುಳು ಕೊರೆಯುವ ಹುಳಕ್ಕೆ ಮಾತ್ರ ಸಾಂತ್ವನ ಸಿಕ್ಕಿರುತ್ತದೆ. ಈ ಪುಸ್ತಕವನ್ನು ಓದಿ ಮುಗಿಸಿದಾಗ ಆಗುವ ಸಮಾಧಾನ ಗ್ರೇಟ್. ಇದೊಂದು ಇಮ್ಯಾಜಿನ್ಡ್ ರಿಯಾಲಿಟಿ(ಕಲ್ಪಿತ ವಾಸ್ತವ) ಎಂದು ಲೇಖಕರು ಮುನ್ನುಡಿಯಲ್ಲಿ ಹೇಳಿಕೊಳ್ಳದೆ ಹೋಗಿದ್ದರೆ ಓದುಗರಿಗೆ ಇನ್ನೂ ಅಧಿಕ ಪ್ರಮಾಣದ ಸಮಾಧಾನ ಸಿಗಬಹುದೇನೋ, ಯಾಕೆಂದರೆ ಇದು ವಾಸ್ತವವೇ ಎಂದು ಖಚಿತವಾಗಿ ಹೇಳುವಷ್ಟು ನೈಜತೆಯಿಂದ ಮೂಡಿ ಬಂದಿದೆ.
‘Justice delayed is justice denied’ ಎಂಬ ಆಂಗ್ಲ ಉಕ್ತಿಗೆ ಅಜಕ್ಕಳ ಗಿರೀಶ್ ಭಟ್ ಅವರ ಪುಸ್ತಕ, ‘ವ್ಯಥೆ ಕಥೆ’ ಸಂಪೂರ್ಣವಾದ ನ್ಯಾಯ ಒದಗಿಸಿದೆ. ದೇಶದ ಎಲ್ಲ ಸ್ಥರದ ಪ್ರಗತಿ ನ್ಯಾಯಾಂಗದ ವಿಳಂಬದಿಂದ ಕುಂಠಿತವಾಗುತ್ತದೆ ಎಂದು ಗಂಭೀರ ಹಾಗೂ ಅತಿಯಾಗಿ ನಿರ್ಲಕ್ಷ್ಯಕ್ಕೊಳಗಾಗಿರುವ ವಿಷಯದ ಕುರಿತು ಈ ಪುಸ್ತಕ ಚರ್ಚಿಸುತ್ತದೆ.
ಸರಳ ನಿರೂಪಣೆಯಲ್ಲಿ ಲೇಖಕರು ಕಂದಾಯ ಇಲಾಖೆಯ ತಮ್ಮ ತಹಸೀಲ್ದಾರ್ ಹುದ್ದೆಯ ನಿವೃತ್ತಿಯಿಂದ ಕಥೆಯನ್ನು ಪ್ರಾರಂಭಿಸುತ್ತಾ ತಮಗೆ, ತಮ್ಮ ನೆರೆಹೊರೆಯವರಿಗೆ, ಅಷ್ಟೇ ಏಕೆ ರೈಲಿನಲ್ಲಿ ಭೇಟಿಯಾದ ಸಹಪ್ರಯಾಣಿಕನಿಗೆ ಎದುರಾದ ಸಮಸ್ಯೆಗಳನ್ನು ಒಂದೊಂದಾಗಿ ತೆರೆದಿಡುತ್ತಾ ಹೋಗುತ್ತಾರೆ. ಈ ಎಲ್ಲ ಸಮಸ್ಯೆಗಳು ಕಾನೂನಿನ ಲೋಪದೋಷಗಳು, ನ್ಯಾಯಾಂಗದ ವಿಳಂಬ ಮುಂತಾದ ನ್ಯಾಯಾಂಗದ ಕುಂದು ಕೊರತೆಗಳಿಂದ ತಲೆದೂರಿ, ಬದುಕನ್ನೇ ಹಳಿ ತಪ್ಪಿಸಿರುತ್ತವೆ.
ಲೇಖಕರು, ಸ್ವತಃ ತಹಸೀಲ್ದಾರ್ ಆದರೂ ಪಕ್ಕದ ಮನೆಯವರು ಹೂಡಿದ ಮೈನರ್ ವ್ಯಾಜ್ಯದಿಂದ ಕಿರುಕುಳ ಅನುಭವಿಸುತ್ತಿರುತ್ತಾರೆ. ದೇಶಾಭಿರಾಮವಾಗಿ ಹರಟೆ ಹೊಡೆಯೋಣ ಎಂದು ರೈಲಿನಲ್ಲಿ ಸಿಕ್ಕ ಅಪರಿಚಿತರು ಹೇಳಿದ ವ್ಯಥೆಯ ಕಥೆಯಂತೂ ಬಹುವಾಗಿ ಕಾಡುತ್ತದೆ. ಜೀವನರಾಮ ಹಾಗೂ ಶಾಲೆಯ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಅವನ ಸಹೋದರನ ಕಥೆ ನಮ್ಮನ್ನು ವಿಚಲಿತರನ್ನಾಗಿಸುತ್ತದೆ. ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ದೌರ್ಜನ್ಯದ ಸುಳ್ಳು ಅಪಾದನೆ ಹೊರಿಸಿ, ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ, ಅಮಾಯಕ ಶಿಕ್ಷಕ ನ್ಯಾಯಾಲಯದ ವಿಳಂಬ ನೀತಿಯಿಂದ, ಜಾಮೀನು ರಹಿತ ಬಂಧನದಂತಹ ಘೋರಶಿಕ್ಷೆಗೆ ಒಳಗಾಗಿ, ತನ್ನ ಸಾಮಾಜಿಕ ಹಾಗೂ ಕೌಟುಂಬಿಕ ವ್ಯಕ್ತಿತ್ವಕ್ಕೆ ‘ಚಾರಿತ್ರಹೀನ’ ಎಂಬ ಪಟ್ಟ ಕಟ್ಟಿಕೊಂಡು, ಚಿತ್ರಹಿಂಸೆ ಅನುಭವಿಸಿದ ಅನುಭವ ಓದಿದಾಗ, ಓದುಗರ ಮನಸ್ಸು ಕದಡುತ್ತದೆ, ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಕಾಯಕಲ್ಪವಾಗಬೇಕು ಎಂಬುದು ಸಾಮಾನ್ಯರಿಗೂ ಅರ್ಥವಾಗುತ್ತದೆ, ಆದರೆ ಅದು ಹೇಗೆ ಜಾರಿಗೆ ಬರಬೇಕು ಎನ್ನುವುದನ್ನು ಲೇಖಕರು ಈ ಪುಸ್ತಕದಲ್ಲಿ ಅತ್ಯಂತ ವಿವರವಾಗಿ, ಅಂಕಿ-ಅಂಶಗಳೊಂದಿಗೆ ನಮೂದಿಸಿದ್ದಾರೆ. ಈ ಪುಸ್ತಕವನ್ನು ಓದಿ ಅರ್ಥ ಮಾಡಿಕೊಂಡು ಅಯ್ಯೋ…! ಎಂದು ಉದ್ಗರಿಸಿ ಸುಮ್ಮನಾಗಬಾರದು, ಇದು ಸಂಬಂಧಪಟ್ಟವರ ತನಕ ತಲುಪಬೇಕು, ಸಲಹೆ ಸೂಚನೆಗಳಿಗೆ ಮಾನ್ಯತೆ ಸಿಗಬೇಕು, ಬದಲಾವಣೆ ಕಾಣದೆ ತುಕ್ಕು ಹಿಡಿಯುತ್ತಿರುವ ನ್ಯಾಯಾಂಗ ವ್ಯವಸ್ಥೆಗೆ ಹೊಸ ಚೈತನ್ಯ ಬರಬೇಕು ಎಂಬ ಆಶಯ ಹೊತ್ತ ಈ ಚಿಕ್ಕ ಹೊತ್ತಿಗೆ ಮಾಹಿತಿಪೂರ್ಣವಾಗಿದೆ.
ಕೃ: ವ್ಯಥೆ ಕಥೆ ಲೇ: ಅಜಕ್ಕಳ ಗಿರೀಶ್ ಭಟ್ಟ ಪ್ರ: ಚಿಂತನ ಬಯಲು ಪ್ರಕಾಶನ ಪು: 72 ಬೆ: 90 ರೂ. ಸಂ: 7019225774
