ಅಂಕಣ – ಕಡೆಗೋಲು
- ನಾರಾಯಣ ಶೇವಿರೆ, ಸಂಘಟನಾ ಕಾರ್ಯದರ್ಶಿ, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ
ರೈತರಾಗಿರುವ ಪಾಲಕರೊಬ್ಬರು ಗುರುಕುಲವೊಂದರ ದೀಕ್ಷಾಂತ ಕಾರ್ಯಕ್ರಮದ ಅನುಭವಕಥನ ಅವಧಿಯಲ್ಲಿ ಮಾತನಾಡುತ್ತಿದ್ದರು: ತಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬ ವಿಪರೀತ ತಂಟೆಕೋರನಾಗಿದ್ದ. ಇನ್ನೊಬ್ಬ ಮೃದುಸ್ವಭಾವದವನಿದ್ದ. ತಂಟೆಕೋರ ಮಗನ ಬಗ್ಗೆಯೇ ಚಿಂತೆ ಕಾಡಿತ್ತು. ಐದನೆಯ ತರಗತಿಯ ನಂತರ ಆತನನ್ನು ಗುರುಕುಲಕ್ಕೆ ಸೇರಿಸಿದೆ. ಮೃದುಸ್ವಭಾವದ ಮಗ ಊರ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಿದ. ಮುಂದೆ ಕಾಲೇಜು ಮೆಟ್ಟಿಲನ್ನೂ ಹತ್ತಿದ. ಈಗ, ಹನ್ನೆರಡು ವರ್ಷಗಳ ನಂತರ, ಗುರುಕುಲಕ್ಕೆ ಸೇರಿಸಲ್ಪಟ್ಟ ಹುಡುಗ ಏನೋ ಜಾದು ನಡೆದಂತೆ ಸಾತ್ತ್ವಿಕನಾಗಿದ್ದಾನೆ. ವಿವೇಕಿಯೂ ಜವಾಬ್ದಾರಿಯುತನೂ ಆಗಿದ್ದಾನೆ. ಎಲ್ಲದಕ್ಕಿಂತ ಮುಖ್ಯವಾಗಿ ರಾಷ್ಟ್ರಭಕ್ತನಾಗಿದ್ದಾನೆ. ಆದರೆ ಶಾಲೆ – ಕಾಲೇಜುಗಳಲ್ಲಿ ಓದಿದವ ಸೋಂಬೇರಿಯಾಗಿದ್ದಾನೆ. ಅವನ ಬಳಿ ಏನಾದರೂ ಕೆಲಸ ಮಾಡಿಸಬೇಕಿದ್ದಲ್ಲಿ ನಾಲ್ಕು ಸಲ ಹೇಳಬೇಕು. ಅತೀವ ಬೇಜವಾಬ್ದಾರಿ ಮನುಷ್ಯ ಆಗಿದ್ದಾನೆ. ಇನ್ನು ಆತನ ವಿಷಯದಲ್ಲಿ ದೇಶಗೀಶ ಏನೂ ಕೇಳಬೇಡಿ…
ಅವರ ಅನುಭವಕಥನದ ನುಡಿಗಳು ಹೀಗೆ ಸಾಗಿತ್ತು. ಅದರಲ್ಲಿ ಗುರುಕುಲದ ಕುರಿತು ಕೃತಜ್ಞತೆಯ ಮಾತುಗಳಂತೂ ಇದ್ದುವು. ಕೃತಜ್ಞತೆಯ ಈ ಮಾತುಗಳು ಅತಿಶಯದಿಂದ ಕೂಡಿದ್ದುವೋ ಎಂಬಂತೆ ಇದ್ದುವಾದರೂ ಅವೆಲ್ಲವೂ ಅವರ ಅನುಭವವೇ ಆಗಿದ್ದುವು. ಅವರ ಮಾತಿನಲ್ಲಿ; ಮೃದುಸ್ವಭಾವದ ಮಗ ಬದಲಾಗಿ ಹೋದ ಕುರಿತ ನೋವು, ಹೋಲಿಕೆಯ ಆವೇಶಕ್ಕಿಂತ ಹೆಚ್ಚು ಇಣುಕುತ್ತಿತ್ತು. ಉಳಿದವರಿಗೆ ಅರ್ಥವಾಗುವಂತೆ ಈ ಹೋಲಿಕೆ ಇದ್ದರೂ ಹಾಗೆ ಅರ್ಥಮಾಡಿಸುವ ಪ್ರಯತ್ನವನ್ನು ಅವರು ಕೈಗೊಂಡಂತೆ ಇರಲಿಲ್ಲ. ಅವರ ಮಾತಿನಲ್ಲಿ ಆಪೂರ್ತಿ ಇದ್ದುದು ಒಬ್ಬ ಮಗನ ಬೆಳವಣಿಗೆಯ ಕುರಿತಾಗಿ ಮೆಚ್ಚುಗೆ ಹಾಗೂ ಇನ್ನೊಬ್ಬನ ಕುರಿತಾಗಿ ನೋವು. ಮೆಚ್ಚುಗೆಯನ್ನು ಚೆನ್ನಾಗಿ ವ್ಯಕ್ತಪಡಿಸಲು ನೋವು ತೋಡಿಕೊಂಡದ್ದೂ ಅಲ್ಲ, ನೋವನ್ನು ವ್ಯಕ್ತಪಡಿಸಲು ಮೆಚ್ಚಿಕೊಂಡದ್ದೂ ಅಲ್ಲ. ಇರಲಿ.
ಮುಂದುವರಿದ ಅಪಸವ್ಯ
ಅವರಲ್ಲಿ ಅಭಿವ್ಯಕ್ತವಾದ ಭಾವಗಳೇನೇ ಇರಲಿ, ಆದರೆ ಅವರು ಹೋಲಿಸಿ ನೋಡಿದ ಎರಡು ವ್ಯವಸ್ಥೆಗಳ ಕುರಿತು ಚಿಂತಿಸುವುದು ವಿಹಿತವೇ ಇದೆ. ಅದನ್ನು ಅವರದೇ ಧಾಟಿಯಲ್ಲಿ ಚಿಂತಿಸಬೇಕೆಂಬ ಒತ್ತಡವನ್ನೇನೂ ಹೇರಿಕೊಳ್ಳಬೇಕಿಲ್ಲ. ಅದೇ ವೇಳೆ ಅದಕ್ಕಿಂತ ಭಿನ್ನ ದಾರಿಯಲ್ಲಿ ಸಾಗುವ ಒತ್ತಾಯವನ್ನೂ ತಂದುಕೊಳ್ಳಬೇಕಿಲ್ಲ. ಶಿಕ್ಷಣವ್ಯವಸ್ಥೆಯನ್ನು ಕುರಿತು ಹೇಗಿದೆಯೋ ಹಾಗೆ ನೋಡಲು ಹಾಗೂ ಚಿಂತಿಸಲು ಅವರ ಈ ಅನುಭವದ ಮಾತು ದಿಕ್ಸೂಚಿಯಾದೀತು.
ಈಗಣ ಶಿಕ್ಷಣವ್ಯವಸ್ಥೆಯ ಮೂಲವಿರುವುದು 1835ರಲ್ಲಿ ಆಂಗ್ಲರು ಇಲ್ಲಿ ಜಾರಿಗೆ ತಂದ ಶಿಕ್ಷಣಪದ್ಧತಿಯಲ್ಲಿ. ಅದಕ್ಕೆ ಮೂಲವಾದ ತನ್ನ ‘ಮಿನಿಟ್ ಆನ್ ಇಂಡಿಯನ್ ಎಜುಕೇಶನ್’ ಎಂಬ ವರದಿಯಲ್ಲಿ ಥಾಮಸ್ ಬಾಬಿಂಗ್ಟನ್ ಮೆಕಾಲೆ ನೀಡಿದ ಶಿಫಾರಸ್ಸಿನಲ್ಲಿ. ಆಂಗ್ಲ ಶಿಕ್ಷಣ ಪದ್ಧತಿಯ ಪ್ರಮುಖ ಮೆದುಳು ಥಾಮಸ್ ಬಾಬಿಂಗ್ಟನ್ ಮೆಕಾಲೆ. ಅದನ್ನು ಅಧಿಕೃತವಾಗಿ ಜಾರಿಗೆ ತಂದವ ಆಗಿನ ಗವರ್ನರ್ ವಿಲಿಯಂ ಬೆಂಟಿಂಕ್.
ಸ್ವತಂತ್ರಭಾರತದ ಮೊದಲ ಸುದೀರ್ಘ ಶಿಕ್ಷಣಮಂತ್ರಿಯಾಗಿದ್ದವರು ಮೌಲಾನ ಅಬುಲ್ ಕಲಾಂ ಆಜಾದ್. ಮೆಕ್ಕಾದಲ್ಲಿ ಹುಟ್ಟಿದರೂ ಭಾರತಪ್ರೀತಿಯನ್ನು ಹೊಂದಿ ಸ್ವಾತಂತ್ರ್ಯ ಹೋರಾಟದಲ್ಲಿಯೂ ಪಾಲ್ಗೊಂಡವರು. ಆದರೆ ಅವರು ಭಾರತೀಯತೆಯ ಕುರಿತಾದ ಸ್ಪಷ್ಟತೆಯನ್ನು ಹೊಂದಿದ್ದರು ಎನ್ನಲಾಗದು. ಒಂದು ದೇಶದ ಶಿಕ್ಷಣವ್ಯವಸ್ಥೆಯ ನಿರ್ಣಯಾತ್ಮಕ ಜಾಗದಲ್ಲಿ ಆ ದೇಶದ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಚಿಂತಿಸಬಲ್ಲವರೇ ಇರಬೇಕಾದುದು ಅತ್ಯಂತ ಮೂಲಭೂತವಾದ ಆವಶ್ಯಕತೆ. ಸ್ವತಂತ್ರಭಾರತಕ್ಕೆ ಈ ಆವಶ್ಯಕತೆಯನ್ನು ಶಿಕ್ಷಣದಂಥ ಅತಿ ಮಹತ್ತ್ವದ ಕ್ಷೇತ್ರದಲ್ಲಿ ಪೂರೈಸಿಕೊಳ್ಳಲು ಸಾಧ್ಯವಾಗಲಿಲ್ಲ! ಇದೀಗಲೂ ಅದನ್ನು ಪೂರೈಸಿಕೊಳ್ಳುವಲ್ಲಿ ಎಡವುತ್ತಲೇ ಇದ್ದೇವಷ್ಟೆ!.
ತುಸು ಪರಿವರ್ತನೆಯೊಂದಿಗೆ ಅಂದೂ ಮುಂದುವರಿದಿದ್ದು ಆಂಗ್ಲ ಶಿಕ್ಷಣಪದ್ಧತಿಯೇ. ಇನ್ನಷ್ಟು ಪರಿವರ್ತನೆಯೊಂದಿಗೆ ಇಂದೂ ಮುಂದುವರಿಯುತ್ತಿರುವುದು ಅದೇ ಮೆಕಾಲೆಪ್ರಣೀತ ಪದ್ಧತಿಯೇ. ದೇಶಪ್ರೇಮವು ಸಾಂಸ್ಕೃತಿಕ ನೆಲೆಗಟ್ಟಿಗೆ ಸಾಕ್ಷಿಯಾಗಲಾರದು. ಸಾಂಸ್ಕೃತಿಕ ನೆಲೆಗಟ್ಟಿನಿಂದ ಕೂಡಿದ ದೇಶಪ್ರೇಮಕ್ಕೆ ತಾಕತ್ತು ಹೆಚ್ಚು.
ದುಷ್ಟ ಲೆಕ್ಕಾಚಾರ
ಮೆಕಾಲೆಯ ಉದ್ದೇಶ ವಿದ್ಯಾದಾನವಾಗಿರಲಿಲ್ಲ, ಆಂಗ್ಲ ಆಡಳಿತಕ್ಕೆ ಬೇಕಾದ ಸಿಬ್ಬಂದಿಯನ್ನು ಸಿದ್ಧಪಡಿಸುವುದಾಗಿತ್ತು. “ರಕ್ತ ಮತ್ತು ಬಣ್ಣದಲ್ಲಿ ಭಾರತೀಯರು. ಆದರೆ ಅಭಿರುಚಿ, ಅಭಿಪ್ರಾಯಗಳಲ್ಲಿ ಪೂರ್ತಿ ಇಂಗ್ಲೀಷರಾಗಿರುವ ಮನುಷ್ಯರ ನಿರ್ಮಾಣವೇ ನನ್ನ ಗುರಿ” ಎಂಬ ಆತನ ಮಾತಿನಲ್ಲಿ ಆಂಗ್ಲಶಿಕ್ಷಣದ ಉದ್ದೇಶವನ್ನು ಸರಿಯಾಗಿ ಗ್ರಹಿಸಲು ಸಾಧ್ಯ.
ಭಾರತೀಯರು ಭಾರತೀಯ ಸಂಸ್ಕೃತಿಯಿಂದ ಪೂರ್ತಿ ಹೊರತಾಗದೇ ಹೋಗದಿದ್ದಲ್ಲಿ ಅವರು ಆಂಗ್ಲ ಸಾಮ್ರಾಜ್ಯಕ್ಕೆ ನಿಷ್ಠರಾಗಿರಲು ಸಾಧ್ಯವಿಲ್ಲ. ಒಂದು ಜನಾಂಗವನ್ನು ಸಾಂಸ್ಕೃತಿಕವಾಗಿ ಪೂರ್ತಿ ಪಲ್ಲಟಗೊಳಿಸಲು ಸಾಧ್ಯವಾಗುವುದು ಶಿಕ್ಷಣದಿಂದ. ಇದನ್ನು ಉಳಿದೆಲ್ಲ ಪರಕೀಯ ದಾಳಿಕೋರರಿಗಿಂತ ಚೆನ್ನಾಗಿ ಅರಿತುಕೊಂಡಿದ್ದವರು ಆಂಗ್ಲರು. ಅರಿವನ್ನು ತಮ್ಮ ಉದ್ದೇಶಪೂರೈಕೆಗೆ ಬಳಸಿಕೊಳ್ಳುವಲ್ಲಿ ಇನಿತೂ ಎಡವದವರಾಗಿದ್ದರವರು. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಇದ್ದುದು ಭಾರತೀಯ ಶಿಕ್ಷಣವ್ಯವಸ್ಥೆ. ಸಂಸ್ಕೃತಿಯ ಹಂಗೇ ಇಲ್ಲದಿದ್ದುದು ಆಂಗ್ಲ ಶಿಕ್ಷಣವ್ಯವಸ್ಥೆ.
ಭಾರತದಲ್ಲಿಯಂತೂ ಅವರಿಗೆ ಬೇಕಾಗಿದ್ದುದು ಆಂಗ್ಲನಿಷ್ಠ ಕಾರಕೂನರು, ಆಂಗ್ಲನಿಷ್ಠ ಭಾರತೀಯರು. ಅಂದರೆ ತಮ್ಮ ಕಾರಕೂನರಂತೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವಂತಾಗಲು ಆಂಗ್ಲನಿಷ್ಠರಾಗಿರುವುದು ಅವರಿಗೆ ಅವಶ್ಯವಿತ್ತು. ಅವರ ಸಾಮ್ರಾಜ್ಯವು ಪ್ರಶ್ನಾತೀತವಾಗಿ ಮುಂದುವರಿಯಲು ಜನರೂ ಆಂಗ್ಲನಿಷ್ಠರಿರುವುದು ಅವಶ್ಯವಿತ್ತು. ಶಿಕ್ಷಣವನ್ನು ಸರ್ವವ್ಯಾಪಿಗೊಳಿಸಿದ ಅವರ ಉದ್ದೇಶವು ಭಾರತದ ಉದ್ಧಾರವಂತೂ ಖಂಡಿತಾ ಅಲ್ಲವೆಂಬುದು ಸುಸ್ಪಷ್ಟವೇ. ಮಾತ್ರವಲ್ಲ, ಅದರಲ್ಲಿ ಅದೆಂಥ ದುಷ್ಟ ಲೆಕ್ಕಾಚಾರ ಅಡಗಿತ್ತು ಎಂಬುದು ಸ್ಫಟಿಕಸ್ಪಷ್ಟವೂ ಹೌದಷ್ಟೆ!. ಆಂಗ್ಲರಿಂದಾಗಿ, ಅವರು ವ್ಯಾಪಕಗೊಳಿಸಿದ ಶಿಕ್ಷಣದಿಂದಾಗಿ ತಾವು ಉದ್ಧಾರವಾದೆವೆಂದು ಅದೆಷ್ಟು ಮಂದಿ ಕಣ್ಣುಮುಚ್ಚಿ ಪರಿಭಾವಿಸಿಲ್ಲ! ಅಂಥವರಿಗೂ ಎಂಥವರಿಗೂ ಕಣ್ತೆರೆದು ನೋಡಿದರೆ ಸತ್ಯ ಗೋಚರವಾಗದೇ ಹೋಗದು.
ಸಲ್ಲದ ಸಮೀಕರಣ
1947ರಲ್ಲಿ ಭಾರತವು ಸ್ವತಂತ್ರವಾದಾಗ ಶಿಕ್ಷಣವ್ಯವಸ್ಥೆಯೂ ಸ್ವತಂತ್ರಗೊಳ್ಳುತ್ತದೆ ಎಂಬ ನಿರೀಕ್ಷೆಯಿತ್ತು. ಹಾಗೆ ಸ್ವತಂತ್ರಗೊಳ್ಳುವುದು ಸಹಜವಿತ್ತು ಕೂಡಾ. ಭಾರತೀಯ ಸಂಸ್ಕೃತಿ, ಭಾಷೆ ಮತ್ತು ಜೀವನಮೌಲ್ಯಗಳನ್ನು ಆಧರಿಸಿದ ಸ್ವತ್ವಯುತ ಶಿಕ್ಷಣವ್ಯವಸ್ಥೆ ಜಾರಿಗೆ ಬರಬೇಕಾಗಿತ್ತು. ಆದರೆ ಹಾಗಾಗದೇ ಹೋಯಿತು. ಆಂಗ್ಲಶಿಕ್ಷಣದ ಉದ್ದೇಶವೇ ಆಂಗ್ಲನಿಷ್ಠ ಕಾರಕೂನರ ತಯಾರಿ ತಾನೇ. ಅಂದರೆ ಸಾಮ್ರಾಜ್ಯನಿಷ್ಠ ಉದ್ಯೋಗಿಗಳ ತಯಾರಿ. ರಾಷ್ಟ್ರನಿಷ್ಠ ಸುಸಂಸ್ಕೃತರ ತಯಾರಿಯು ಸ್ವತಂತ್ರಭಾರತದ ಶಿಕ್ಷಣಪದ್ಧತಿಯ ಉದ್ದೇಶವಿರಬೇಕಾಗಿತ್ತು.
‘ಶಿಕ್ಷಣದಿಂದ ಉದ್ಯೋಗ’ ಎಂಬುದು ಒಂದು ನಿಕೃಷ್ಟ ಸಮೀಕರಣ. ಸಂಸ್ಕಾರದ, ಜ್ಞಾನದ ಲಕ್ಷ್ಯವನ್ನು ಹೊಂದಬೇಕಾದ ಶಿಕ್ಷಣದಲ್ಲಿ ಅದೆಂಥ ನಿಕೃಷ್ಟ ಸಮೀಕರಣ!.
ಈ ಸಮೀಕರಣದಲ್ಲಿ ಪರೀಕ್ಷೆಯೇ ಶಿಕ್ಷಣದ ಕೇಂದ್ರಬಿಂದು. ಉದ್ಯೋಗವೇ ಪ್ರಧಾನ ಗುರಿ. ಪಶ್ಚಿಮದ ಜ್ಞಾನಪರಂಪರೆಗೇ ವಿಶೇಷ ಒತ್ತು. ಭಾರೀ ಭಾರೀ ಕಟ್ಟಡಗಳ ಶಾಲೆ – ಮಹಾವಿದ್ಯಾಲಯ – ವಿಶ್ವವಿದ್ಯಾನಿಲಯಗಳೇ ಶಿಕ್ಷಣದ ಸಂಕೇತಗಳು. ಅಂಕಪಟ್ಟಿ – ಪ್ರಮಾಣಪತ್ರಗಳೇ ಶಿಕ್ಷಣಗಳಿಕೆಗೆ ಸಾಕ್ಷಿ. ಆಂಗ್ಲರು ತಂದುದೂ ಇವುಗಳನ್ನೇ. ನಾವು ಮುಂದುವರಿಸಿಕೊಂಡು ಹೋದುದೂ ಇವುಗಳನ್ನೇ.
ಶಿಕ್ಷಣದ ಲಕ್ಷ್ಯ
ಮನುಷ್ಯನಾದವ ಯಾವತ್ತಿಗೂ ಅಪರಿಪೂರ್ಣ ಎಂದೇ ತಾನೇ ಸರ್ವಸಾಮಾನ್ಯವಾದ ತರ್ಕವಿರುವುದು!. ಪರಿಪೂರ್ಣತೆಯೆಡೆಗೆ ಆತನನ್ನು ಕರೆದೊಯ್ಯಲು ಸಾಧ್ಯ ಮತ್ತದಕ್ಕೆ ಶಿಕ್ಷಣವು ಸಹಕಾರಿ ಎಂಬುದು ಇಲ್ಲಿ ಶಿಕ್ಷಣದ ಕುರಿತಾಗಿ ಇರುವ ಭರವಸೆ. ವಿವೇಕಾನಂದರು ಇದನ್ನು ವಿಭಿನ್ನವಾಗಿ ನೋಡಿದರು. ಮನುಷ್ಯನು ಯಾವತ್ತೂ ಪರಿಪೂರ್ಣನೇ. ಆ ಪರಿಪೂರ್ಣತೆಯನ್ನು ಹೊರತರುವುದು ಶಿಕ್ಷಣದಿಂದ ಸಾಧ್ಯ ಎಂದರವರು. ಆತ್ಮಿಕ ಜ್ಞಾನವನ್ನು ಕಂಡುಕೊಳ್ಳಲು ದೇಹ, ಮನಸ್ಸು, ಬುದ್ಧಿಗಳ ಸಮಗ್ರ ವಿಕಾಸವನ್ನು ಶಿಕ್ಷಣವು ಸಾಧಿಸಬೇಕೆಂದವರು ಯೋಗಿ ಅರವಿಂದರು. ಅಂದರೆ ಜ್ಞಾನದ ಲಕ್ಷ್ಯವನ್ನು ಈಡೇರಿಸಲು ಮನುಷ್ಯನ ದೇಹಾದಿ ಪರಿಕರಗಳನ್ನು ಸೂಕ್ತವಾಗಿ ಸಜ್ಜುಗೊಳಿಸಬೇಕು. ಈ ಸಜ್ಜುಗೊಳಿಸುವಿಕೆಯನ್ನು ಸಂಸ್ಕಾರವೆನ್ನಬಹುದೇನೋ!.
ಶ್ರಮಜೀವನವನ್ನೂ ಕಾರ್ಯಕೌಶಲವನ್ನೂ ಆಗ್ರಹಿಸಿದ ಗಾಂಧೀಜಿಯವರು, ಅದನ್ನು ಸಾಧಿಸಬಲ್ಲ ಶಿಕ್ಷಣದಲ್ಲಿ ಒತ್ತು ನೀಡಿದ್ದು ಜೀವನಮೌಲ್ಯಗಳಿಗೆ. ಭವಿಷ್ಯದಲ್ಲಿ ಉದ್ಯೋಗಿಯಾಗುವ ಮಗುವನ್ನು ಮೌಲ್ಯಶಿಕ್ಷಣವನ್ನು ನೀಡಿ ತಯಾರುಮಾಡಬೇಕು ಎಂದವರು ಆಗ್ರಹಿಸಿದರು. ಶಿಕ್ಷಣದ ಮೂಲಕ ಉದ್ಯೋಗಿಗಳನ್ನು ತಯಾರು ಮಾಡುತ್ತೀರೋ ಇಲ್ಲವೋ, ಸುಸಂಸ್ಕೃತರನ್ನಂತೂ ತಯಾರುಮಾಡಲಿಕ್ಕೇ ಬೇಕು. ಜೀವನನಿರ್ವಹಣೆ ಹೇಗೆ ಮಾಡಬೇಕೆಂಬುದನ್ನು ಕಲಿಸಲು ಅಲ್ಪಾವಧಿಯ ತರಬೇತಿ ಸಾಕು. ಜೀವನನಿರ್ವಹಣೆ ಮಾಡುವವರು ಹೇಗಿರಬೇಕೆಂಬುದನ್ನು ಕಲಿಸಲು ದೀರ್ಘಾವಧಿಯ ಶಿಕ್ಷಣವೇ ಬೇಕು.
ಶುದ್ಧೀಕರಣ ಘಟಕ
ನದಿ ಪಾತ್ರದ ನೀರು ಜಲವಿದ್ಯುದಾಗಾರದಲ್ಲಿ ಪ್ರವಾಹದೋಪಾದಿಯಲ್ಲಿ ಹೋಗಿ ಟರ್ಬೈನನ್ನು ತಿರುಗಿಸಿ ಮುಂದಕ್ಕೆ ಹರಿಯುತ್ತದೆ. ವಿದ್ಯುತ್ ಉತ್ಪಾದನೆಗೆ ಕಾರಣವಾಗುತ್ತದೆ. ಆದರೆ ನೀರಿನ ಗುಣಮಟ್ಟದಲ್ಲಿ ಇನಿತೂ ಬದಲಾವಣೆ ಘಟಿಸುವುದಿಲ್ಲ. ಜಲಶುದ್ಧೀಕರಣ ಘಟಕದಲ್ಲಿ ನೀರು ಒಳಹೋಗಿ ಸಂಸ್ಕಾರಕ್ಕೊಳಗಾಗಿ ಕೊನೆಗೆ ಹೊರಹೋಗುತ್ತದೆ. ಒಳಹೋಗುವಾಗ ಪರಿಶುದ್ಧವಲ್ಲದ ನೀರು. ಹೊರಬರುವಾಗ ಕುಡಿಯಲು ಯೋಗ್ಯವಾದ ಶುದ್ಧ ನೀರು.
ಶಿಕ್ಷಣವ್ಯವಸ್ಥೆಯು ಇರಬೇಕಾದುದು ಜಲಶುದ್ಧೀಕರಣ ಘಟಕದಂತೆ. ಅದು ವಿದ್ಯಾರ್ಥಿಗಳನ್ನು ಸುಸಂಸ್ಕೃತರನ್ನಾಗಿ ತಯಾರುಮಾಡಬೇಕು. ಆತ್ಯಂತಿಕ ಜ್ಞಾನವನ್ನು ಹೊಂದಲು ಬೇಕಾದ ಸಾಮರ್ಥ್ಯವನ್ನು ತುಂಬಬೇಕು. ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ನೀಡುವುದು ಶಿಕ್ಷಣದ್ದೇ ಕರ್ತವ್ಯ. ರಾಷ್ಟ್ರಕ್ಕೆ ಉತ್ತಮ ಪ್ರಜೆಗಳನ್ನು ನೀಡುವುದೂ ಶಿಕ್ಷಣದ್ದೇ ಹೊಣೆಗಾರಿಕೆ. ಶುದ್ಧ ನೀರು ಕುಡಿಯಲೂ ಉಪಯೋಗವಾಗುತ್ತದೆ. ಅಡುಗೆಗೂ ಉಪಯೋಗವಾಗುತ್ತದೆ. ಪೂಜೆಗೂ ಉಪಯೋಗವಾಗುತ್ತದೆ. ಆಧುನಿಕ ವ್ಯವಸ್ಥೆಯಲ್ಲಿ; ಇವೆಲ್ಲದಕ್ಕೂ ಉಪಯೋಗವಾಗಬೇಕಾದ ನೀರು ತಯಾರಾಗಿ ಬರುವುದು ಜಲಶುದ್ಧೀಕರಣ ಘಟಕದಿಂದ ಹೇಗೋ ಹಾಗೇ ಉದ್ಯೋಗಕ್ಷೇತ್ರಕ್ಕೂ ಸಾಮಾಜಿಕ ಕ್ಷೇತ್ರಕ್ಕೂ ಧಾರ್ಮಿಕ ಕ್ಷೇತ್ರಕ್ಕೂ…ಒಟ್ಟಾರೆಯಾಗಿ ರಾಷ್ಟ್ರದ ಸರ್ವವಿಧ ಆಯಾಮಗಳಿಗೂ ಬೇಕಾದ ಉತ್ತಮ ವ್ಯಕ್ತಿತ್ವಗಳು ತಯಾರಾಗಿ ಬರಬೇಕಾದುದು ವಿದ್ಯಾಸ್ಥಾನದಿಂದಲೇ.
ಪ್ರಜೆ ಎಂದರೆ ವಿಶೇಷವಾಗಿ ಹುಟ್ಟಿದವ ಎಂದು ಅರ್ಥ. ಸಂಸ್ಕಾರದ ಮೂಲಕ ಹಾಗೆ ಮರುಹುಟ್ಟು ಪಡೆಯುವ ಜಾಗ ಶಾಲೆಯೇ ಇರಬೇಕು. ಶಾಲೆಯು ಅಂಥ ಜಾಗ ಆಗಬೇಕು. ಉದ್ಯೋಗಕ್ಷೇತ್ರಕ್ಕೆ ಹೋಗಿಬರುವ ಉದ್ಯೋಗಿ ವಿದ್ಯುದಾಗಾರದಲ್ಲಿ ಒಳಹೊಕ್ಕು ಹೊರಬರುವ ನೀರಿನಂತೆ. ಆ ನೀರು ಕೊಳಚೆಯಾಗಿರಕೂಡದು. ಹಾಗೆ ಒಳಹೊಕ್ಕ ನೀರು ಕಲುಷಿತವಿದ್ದರೆ ವಿದ್ಯುದಾಗಾರದ ಯಂತ್ರಗಳೂ ಕೊಳೆ ಮೆತ್ತಿಕೊಂಡಾವು, ಬೇಗನೆ ಕೆಟ್ಟೂ ಹೋದಾವು. ಉದ್ಯೋಗಿಯ ಕೌಶಲವನ್ನು ಸಿದ್ಧಗೊಳಿಸುವುದು ಉದ್ಯೋಗಕ್ಷೇತ್ರದ್ದೇ ಹೊಣೆಗಾರಿಕೆ. ಅದನ್ನು ಶಿಕ್ಷಣಕ್ಷೇತ್ರವು ವಹಿಸಿಕೊಳ್ಳಬೇಕಿಲ್ಲ. ಉದ್ಯೋಗಿಯನ್ನು ಸಂಸ್ಕಾರವಂತನನ್ನಾಗಿ ಮಾಡಬೇಕಾದುದು ಶಿಕ್ಷಣಕ್ಷೇತ್ರದ ಕಾರ್ಯ. ಅದನ್ನದು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗಿದೆ.
ಮೇಲೆ ಉಲ್ಲೇಖಿಸಿದ ಗುರುಕುಲದ ವಿದ್ಯಾರ್ಥಿ ತಯಾರಾದುದು ಬಹುಶಃ ಹೀಗೇ ಇರಬೇಕು; ಶಿಕ್ಷಣಕ್ಷೇತ್ರದ ಉದ್ದೇಶವನ್ನು ಅರ್ಥೈಸಿಕೊಂಡು ಅದರಂತೆ ಕಾರ್ಯನಿರ್ವಹಿಸುವ ಗುರುಕುಲದಿಂದಾಗಿ. ಅದೇ ಮನೆಯ ಸಾತ್ತ್ವಿಕ ಸ್ವಭಾವದ ಹುಡುಗನನ್ನೇ ಬದಲಿಸಬಾರದಂತೆ ಬದಲಿಸಿಬಿಟ್ಟಿತಲ್ಲ ಮೆಕಾಲೆಪ್ರಣೀತ ಶಿಕ್ಷಣವ್ಯವಸ್ಥೆ! ಈ ವ್ಯವಸ್ಥೆಯನ್ನು ಬದಲಿಸುವುದೆಂತು!
