ಅಂಕಣ – ಸಂಘ ಸೌರಭ 44
- ಬಿ.ವಿ. ಶ್ರೀಧರಸ್ವಾಮಿ
1947ರ ದೇಶವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಪಾಕಿಸ್ತಾನದ ಹೆಸರಿನಲ್ಲಿ ಸಿಂಧೂ ಬಯಲಿನ ಪ್ರಮುಖ ಭೂಭಾಗವನ್ನು ನಾವು ಕಳೆದುಕೊಳ್ಳಬೇಕಾಯಿತು. ನಮ್ಮ ನಾಗರಿಕತೆಯ ಹೆಮ್ಮೆಯ ಗುರುತಾಗಿರುವ, ಹಿಂದೂ ಪದದ ಮೂಲ ನೆಲೆಯಾದ ಸಿಂಧೂನದಿಯನ್ನು ನಾವು ಬಿಟ್ಟುಕೊಡಬೇಕಾಯಿತು. ಆದರೆ ವಿಭಜಿತ ಭಾರತದಲ್ಲಿ ಸಿಂಧೂ ನದಿಯ ಹರಿವನ್ನು ಗುರುತಿಸಲು ನಮಗೆ ಸಾಧ್ಯವಾಗಿದ್ದು ನಂತರದ 50 ವರ್ಷಗಳಲ್ಲಿ. ಟಿಬೆಟ್ ಪ್ರದೇಶದಲ್ಲಿನ ಮಾನಸ ಸರೋವರದ ಪರಿಸರದಿಂದ ಉಗಮಗೊಳ್ಳುವ ಸಿಂಧೂ ನದಿಯ ಪ್ರವಾಹವು ನಂತರ ಲಡಾಕ್ನ ಗುಡ್ಡಬೆಟ್ಟಗಳ ನಡುವಿನ ಹಾದಿಯನ್ನು ಕ್ರಮಿಸಿ ಲೇಹ್ ಬಳಿಯಲ್ಲಿ ವಿಸ್ತಾರವಾಗಿ ಹರಿದು ನಂತರ ಪಾಕಿಸ್ತಾನ ಪ್ರವೇಶಿಸುವ ಸಂಗತಿ ಬೆಳಕಿಗೆ ಬಂದಿತು. ನಮ್ಮ ಸಂಸ್ಕೃತಿಯ ಮೂಲ ಧಾರೆಯಾದ ಸಿಂಧೂ ನದಿಯ ಪಾವನ ದರ್ಶನದ ಪರ್ವವನ್ನು ರಾಷ್ಟ್ರೀಯತೆಯ ಭಾವಜಾಗರಣದ ಪ್ರಸಂಗವನ್ನಾಗಿಸಿ ಮಹತ್ವದ ಸಿಂಧೂ ಉತ್ಸವ ನಡೆಸುವ ಪರಂಪರೆ ಆರಂಭವಾಯಿತು.
ಪ್ರತಿವರ್ಷದ ಆಷಾಢ ಹುಣ್ಣಿಮೆಯಂದು ನಡೆಯುವ ಈ ಉತ್ಸವ ಕೇವಲ ಸಂಭ್ರಮಾಚರಣೆಗೆ ಮಾತ್ರ ಸೀಮಿತವಾಗದೇ ಭಾರತದ ಐತಿಹಾಸಿಕ ಸಾಂಸ್ಕೃತಿಕ ಬೇರುಗಳೊಡನೆ ಜನರನ್ನು ಬೆಸೆಯುವ ಮಹತ್ವದ ಪರ್ವವಾಗಿದೆ. ಸಿಂಧೂ ನದಿಯ ಪವಿತ್ರ ಹರಿವು ನಮ್ಮ ಜಗತ್ತಿನ ನಾಗರಿಕತೆಯ ವಿಕಾಸದಲ್ಲಿ ತನ್ನದೇ ಆದ ಕಾಣಿಕೆ ನೀಡಿದೆ. ಮಾನವತೆಯ ಸುಸಂಸ್ಕೃತ ಜೀವನ ವಿಧಾನವು ಇಲ್ಲಿ ವಿಕಾಸವಾಗಿ ವಿಶ್ವಗುರುತ್ವದ ಹೊಣೆಗಾರಿಕೆಯನ್ನು ಮೆರೆದಿದೆ.
ಈ ಉತ್ಸವಕ್ಕೆ ಪ್ರತಿವರ್ಷ ಸಾವಿರಾರು ಜನ ಭಾರತದ ಮೂಲೆಮೂಲೆಗಳಿಂದ ಭಾಗವಹಿಸುತ್ತಾರೆ. ತಮ್ಮ ಪ್ರದೇಶದ ನದಿಯ ಜಲವನ್ನು ಕುಂಭದಲ್ಲಿ ತಂದು ಸಿಂಧೂ ನದಿಯ ಪಾವನ ಪ್ರವಾಹಕ್ಕೆ ಸೇರಿಸುತ್ತಾರೆ. ಭಾರತದ ವಿವಿಧ ಜಲದೇವತೆಯರ ಸಂಗಮವಾಗಿ ರಾಷ್ಟ್ರೀಯ ಏಕಾತ್ಮತೆಯ ಅನುಭೂತಿಯ ಪ್ರಸಂಗವಾಗಿ ಇದು ರೂಪಿತವಾಗಿದೆ. ಲಡಾಕ್ನ ಎಲ್ಲ ಆಧ್ಯಾತ್ಮಿಕ ಗುರುಗಳ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮ ಭಾರತದ ಸಾಂಸ್ಕೃತಿಕ ಉತ್ಸವವಾಗಿ ನಡೆಯುತ್ತದೆ. ಭಾರತದ ಶ್ರೀಮಂತ ನಾಗರಿಕತೆಯನ್ನು ಬೆಳೆಸಿ ಸಲಹಿ ಪೋಷಿಸಿದ ಸಿಂಧೂ ನದಿಯನ್ನು ಭಕ್ತಿ ಗೌರವಗಳಿಂದ ಪೂಜಿಸುವ ಹಬ್ಬವಾಗಿ ಇದನ್ನು ಆಚರಿಸಲಾಗುತ್ತಿದೆ.
ಕಾಶ್ಮೀರ ಭಾರತದ ಮುಕುಟಮಣಿ ಮತ್ತು ನಮ್ಮ ದೇಶದ ಅವಿಭಾಜ್ಯ ಅಂಗ. ಆದರೆ ಅದರ ದೊಡ್ಡ ಭಾಗವು ಪಾಕ್ ವಶದ ಕಾಶ್ಮೀರವಾಗಿ (POK) ಈಗಲೂ ಪಾಕಿಸ್ತಾನದ ವಶದಲ್ಲಿದೆ. ಉಳಿದ ಭಾಗದಲ್ಲಿಯೂ ಪಾಕಿಸ್ತಾನಿ ಮಾನಸಿಕತೆಯ ಆಡಳಿತವೇ ಇದ್ದು, ಇದೀಗ ಭಾರತದ ಆಡಳಿತ ನಡೆಯಲಾರಂಭವಾಗಿದೆ. ಉಳಿದ ಭಾರತದ ಪ್ರದೇಶದೊಡನೆ ಸಂಪರ್ಕ, ಹಿಂದಿನ ಇತಿಹಾಸದ ಸ್ಮರಣೆ ಮತ್ತು ಅಲ್ಲಿನ ಮಹಾಪುರುಷರ ಬಗೆಗಿನ ಜಾಗೃತಿ ಮೊದಲಾದ ಸಂಗತಿಗಳು ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯಾಗಿದ್ದು ಸಿಂಧೂ ದರ್ಶನ್ ಯಾತ್ರಾ. ಲೇಹ್ ಲಡಾಕಿನ ಪ್ರಕೃತಿ ರಮಣೀಯ ಪ್ರದೇಶಗಳಿಗೆ ಪ್ರವಾಸಿಗರ ಭೇಟಿ ಮತ್ತು ಅಲ್ಲಿಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಗತಿಗಳೊಡನೆ ಬೆಸೆಯುವ ಸುಸಂದರ್ಭವನ್ನಾಗಿ ಈ ಯಾತ್ರೆಯನ್ನು ನಡೆಸಲಾಗುತ್ತಿದೆ.
ಭಾರತದ ಎಲ್ಲ ಭಾಗಗಳಿಂದ ಮತ್ತು ಪ್ರಪಂಚದ ಅನೇಕ ದೇಶಗಳಿಂದ ಬರುವ ಶ್ರದ್ಧಾಳುಗಳು ಸಿಂಧೂಘಾಟ್ ನಲ್ಲಿ ಪವಿತ್ರ ಸ್ನಾನ, ಸಿಂಧೂ ಪೂಜನ್ ಮತ್ತು ಬೆಹ್ರಾನಾ ಪೂಜನ್ನಲ್ಲಿ ಭಾಗವಹಿಸುತ್ತಾರೆ. ಸಾಂಪ್ರದಾಯಿಕ ಪಾರಂಪರಿಕ ಉತ್ಸವದ ಸ್ವರೂಪವನ್ನು ಇದು ಪಡೆದುಕೊಂಡಿದೆ. ಮಹಾತ್ಮ ಬುದ್ಧ ಮತ್ತು ಗುರುನಾನಕ ದೇವ್ ಅವರಿಂದ ಪಾವನಗೊಂಡ ಲಡಾಕ್ನ ಈ ಭೂಮಿಯನ್ನು ಅಸಂಖ್ಯ ಶೂರವೀರರು ತಮ್ಮ ತ್ಯಾಗ, ಬಲಿದಾನಗಳಿಂದ ಸಮೃದ್ಧಗೊಳಿಸಿದ್ದಾರೆ. ಇಂದಿಗೂ ಭಾರತೀಯ ಯೋಧರು ಅತ್ಯಂತ ಪ್ರತಿಕೂಲ ಹವಾಮಾನದ ನಡುವೆಯೂ ದೇಶದ ಗಡಿರಕ್ಷಣೆಯ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ. ಸಿಂಧೂ ದರ್ಶನದ ಯಾತ್ರಿಗಳಿಗೆ ಇದನ್ನು ನೆನಪಿಸುವ, ಅಲ್ಲಿನ ಸಾಂಸ್ಕೃತಿಕ, ಪ್ರೇರಕ ಸಂಗತಿಗಳನ್ನು ದರ್ಶನ ಮಾಡಿಸುವ ಕಾರ್ಯ ಉತ್ಸವದಲ್ಲಿ ನಡೆಯುತ್ತದೆ. ಸ್ವಯಂಸೇವಕರ ದೂರದರ್ಶಿತ್ವದ ಕಾರಣದಿಂದಾಗಿ ಸಿಂಧೂ ದರ್ಶನ ಕೇವಲ ಒಂದು ಉತ್ಸವ ಮಾತ್ರವಾಗದೇ ರಾಷ್ಟ್ರೀಯ ಭಾವಜಾಗರಣದ, ಏಕಾತ್ಮತೆಯ ಅನುಭೂತಿಯ ಯಾತ್ರೆಯಾಗಿ ಪರಿವರ್ತನೆಯಾಗಿದೆ. 30ನೇ ಸಿಂಧೂದರ್ಶನ ಉತ್ಸವವು ಇದೇ ಜೂನ್ ತಿಂಗಳ 22ರಿಂದ 27ರವರೆಗೆ ಸಂಪನ್ನಗೊಳ್ಳಲಿದೆ. ಪ್ರತಿವರ್ಷ ಹತ್ತಾರು ಸಾವಿರ ಶ್ರದ್ಧಾಳುಗಳು ಪಾಲ್ಗೊಳ್ಳುತ್ತಿರುವ ಈ ಯಾತ್ರೆ ಕ್ರಮೇಣ ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಮತ್ತಷ್ಟು ಸಬಲವಾಗಿ ಬೆಳೆದು ನಿಲ್ಲುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ.
