ಅಂಕಣ – ಕೃಷಿಯಿಂದ ಬದುಕು
- ಸುಧಾ ಸಂದೀಪ್, ಎಂ.ಎಸ್ಸಿ. ಕೃಷಿ, ಹುಣಸೂರು
ಬೇಸಿಗೆ ಕಾಲದಲ್ಲಿ ನನಗೆ ಬಹಳ ಇಷ್ಟವಾಗುವ ಬಹುಶಃ ಎಲ್ಲಾ ಹೆಂಗಸರಿಗೆ ಪ್ರಿಯವಾದ ಕೆಲಸ ಎಂದರೆ ಅದು ಸಂಜೆ ವೇಳೆ ಮಲ್ಲಿಗೆ ಮೊಗ್ಗು ಬಿಡಿಸಿ ಹೂವು ಕಟ್ಟುವುದು. ನಮ್ಮ ತೋಟದಲ್ಲಿ ಮೈಸೂರು ಮಲ್ಲಿಗೆ, ಜಾಜಿ ಮಲ್ಲಿಗೆ, ನಿತ್ಯ ಮಲ್ಲಿಗೆ, ಮಂಗಳೂರು ಮಲ್ಲಿಗೆ ಹೀಗೆ ಬಗೆ ಬಗೆಯ ಮಲ್ಲಿಗೆ ಗಿಡಗಳಿವೆ. ಬೇರೆ ಬೇರೆ ಸಮಯದಲ್ಲಿ ಇವುಗಳು ಹೂವು ಬಿಡುವುದರಿಂದ ವರ್ಷ ಪೂರ್ತಿ ಒಂದಲ್ಲಾ ಒಂದು ಬಗೆಯ ಪರಿಮಳಯುಕ್ತ ಹೂವು ದೇವರಿಗೆ ಸಮರ್ಪಿಸಲು ಅಥವಾ ನಾವೇ ಮುಡಿಯಲು ಅನುಕೂಲವಾಗಿದೆ. ನನಗಂತೂ ಸುವಾಸನೆ ಇಲ್ಲದ ಹೂವುಗಳಿಗಿಂತ ಪರಿಮಳಯುಕ್ತ ಹೂವುಗಳೇ ಬಹಳ ಇಷ್ಟ. ಇದೇ ಕಾರಣಕ್ಕೆ ಮಲ್ಲಿಗೆ, ಸಂಪಿಗೆ ಮುಡಿದಾಗ ಸಿಗುವ ಆನಂದ ಬೇರೆ ಹೂವು ಮುಡಿದಾಗ ಸಿಗುವುದಿಲ್ಲ. ಅದರಲ್ಲೂ ಮೈಸೂರು ಮಲ್ಲಿಗೆ ಅಂದರೆ ‘ದುಂಡು ಮಲ್ಲಿಗೆ’ಯ ಮೊಗ್ಗು ಬಿಡಿಸುವುದು ನಮಗೆ ವಿಶೇಷ ಅನುಭೂತಿ ನೀಡುತ್ತದೆ.
ನಮ್ಮ ಪೂರ್ವಜರ ಕಾಲದಿಂದಲೂ ತೋಟದಲ್ಲಿ ಮಲ್ಲಿಗೆ ಗಿಡಗಳಿವೆ. ಆದರೆ 7-8 ವರ್ಷಗಳ ಹಿಂದೆ ನಾವು ಹುಣಸೂರಿಗೆ ಆಗಮಿಸಿದಾಗ ಹಳ್ಳಿಯ ಹಿರಿಯರೊಬ್ಬರು ‘ಕೊಣಮಾವು’(Commiphora caudata) ಮರದ ಗೆಲ್ಲನ್ನು ನೆಟ್ಟು ಅದರ ಬುಡದಲ್ಲಿ ಮಲ್ಲಿಗೆ ಸಸಿ ಹಾಕಿ, ಗಿಡ ಚೆನ್ನಾಗಿ ಬೆಳೆದು ಒಳ್ಳೆಯ ಹೂವುಗಳನ್ನು ನೀಡುತ್ತದೆ, ಪ್ರಯತ್ನಿಸಿ ಎಂದರು. ಕೊಣಮಾವಿನ ಕುರಿತು ನನ್ನ ನೆಚ್ಚಿನ ಕಾದಂಬರಿಕಾರ ಪದ್ಮಭೂಷಣ, ದಿವಂಗತ ಡಾ. ಎಸ್.ಎಲ್ ಭೈರಪ್ಪನವರು ‘ವಂಶವೃಕ್ಷ’ ಕಾದಂಬರಿಯಲ್ಲೂ ಉಲ್ಲೇಖಿಸಿರುವುದು ನೆನಪಿಗೆ ಬಂತು. ನಂತರದ ದಿನಗಳಲ್ಲಿ ನಮ್ಮ ಊರಿನ ಸುತ್ತಮುತ್ತ ಇರುವ ಹಳ್ಳಿಗಳಿಗೆ ಭೇಟಿಕೊಟ್ಟಾಗ ಕೊಣಮಾವಿನ ಮರಕ್ಕೆ ಹಲವರು ಮಲ್ಲಿಗೆ ಬಳ್ಳಿಗಳನ್ನು ಹಬ್ಬಿಸಿರುವುದನ್ನು ನಾವು ಗಮನಿಸಿದ್ದೆವು. ಮೈಸೂರು ಭಾಗದಲ್ಲಿ ಈ ರೀತಿ ಮಾಡುವುದು ಸಾಮಾನ್ಯವಾದ ಸಂಗತಿ ಎಂದು ತಿಳಿಯಿತು. ಈ ಮರದ ಎಲೆಗಳನ್ನು ಆಡು-ಕುರಿ ತಿನ್ನದ ಕಾರಣ ಜೀವಂತ ಬೇಲಿಯಾಗಿಯೂ ಬಳಸಬಹುದು. ದಾಸವಾಳದ ರೀತಿ ಕಡ್ಡಿಗಳನ್ನು ಕತ್ತರಿಸಿ ನೆಟ್ಟು ಕಡ್ಡಿಯ ಮೇಲೆ ಸಗಣಿ ಇಟ್ಟರೆ ಚೆನ್ನಾಗಿ ಚಿಗುರುತ್ತದೆ. ಕೊಣಮಾವಿನ ಮರ ನೋಡಲು ಸ್ವಲ್ಪ ಅಮಟೆಕಾಯಿ ಮರದ ರೀತಿ ಇರುತ್ತದೆ. ಬೆಟ್ಟ ಗುಡ್ಡಗಳಲ್ಲಿ ಹೆಚ್ಚಾಗಿ ಬೆಳೆಯುವ ಕಾರಣ ಇದನ್ನು ತೆಲುಗಿನಲ್ಲಿ ‘ಕೊಂಡ ಮಾವು’ ಎಂದು ಕನ್ನಡದಲ್ಲಿ ಅದುವೇ ‘ಕೊಣ ಮಾವು’ ಆಗಿ ಅಪಭ್ರಂಶವಾಗಿರಬಹುದು. ಹಸಿರಾದ ಕಾಂಡ, ಮಾವಿನ ಪರಿಮಳ ಬೀರುವ ಎಲೆಗಳಿರುವ ಕೊಣಮಾವು ಬರ್ಸೆರಾ ಜಾತಿಗೆ ಸೇರುತ್ತದೆ. ಇದರಲ್ಲಿ ಮುಳ್ಳಿಲ್ಲ ಮತ್ತು ಬುಡದಲ್ಲಿ ಅತಿಯಾದ ಕವಲುಗಳೂ ಇರದ ಕಾರಣ ಮಲ್ಲಿಗೆ ಹಬ್ಬಲು ಸಹಕಾರಿಯಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಕೊಣಮಾವಿನ ಮರದಲ್ಲಿ ಎಲೆಗಳ ದಟ್ಟಣೆಯೂ ಅಷ್ಟಾಗಿ ಇರದ ಕಾರಣ ಮಲ್ಲಿಗೆಗೆ ಬೇಕಾದ ಬಿಸಿಲು, ನೆರಳು ಎರಡೂ ಸಿಗುತ್ತದೆ. ನಾಟಿ ಔಷಧಿಗಳಲ್ಲಿ, ಆಯುರ್ವೇದ ಚಿಕಿತ್ಸೆಯಲ್ಲೂ ಮೂಲಿಕೆಯಾಗಿ ಕೊಣಮಾವನ್ನು ಬಳಸಲಾಗುತ್ತದೆ.
ಮೊದಲೇ ತಿಳಿಸಿದಂತೆ ಹಿರಿಯರ ಸಲಹೆ ಮೇರೆಗೆ ನಾವು ಕೂಡ ಪರಿಚಯದ ರೈತರಿಂದ ಒಂದು ಕೊಣಮಾವಿನ ಗೆಲ್ಲನ್ನು ನೆಟ್ಟು ಅದು ಚಿಗುರಿದ ನಂತರ ಮಲ್ಲಿಗೆ ಗಿಡ ನೆಟ್ಟೆವು. ಪ್ರಾರಂಭದಲ್ಲಿ ಸ್ವಲ್ಪ ಆರೈಕೆ ಮಾಡಿದ್ದು ಬಿಟ್ಟರೆ ನಂತರ ಅಷ್ಟಾಗಿ ಏನೂ ಮಾಡಿಲ್ಲ. ಮಲ್ಲಿಗೆಯು ಬೇಸಿಗೆಯ ಸೀಮಿತ ದಿನಗಳಲ್ಲಿ ಮಾತ್ರ ಹೂವು ಬಿಡುವ ಕಾರಣ ನಾವು ಅಷ್ಟಾಗಿ ಆಕಡೆ ಹೋಗಿರಲಿಲ್ಲ. ಮೊನ್ನೆ ಸಂಜೆ ಯಾವುದೋ ಕಾರಣಕ್ಕೆ ಕೊಣಮಾವು ಇರುವ ಕಡೆ ಹೋದೆವು. ಅಬ್ಬಾ…ನಮಗೆ ಆಶ್ಚರ್ಯವಾಗುವಂತೆ ಮಲ್ಲಿಗೆ ಬಳ್ಳಿ ಕೊಣಮಾವಿನ ಮರವನ್ನು ಬಾಚಿ ಹಬ್ಬಿ ಭರಪೂರ ಹೂವು ಬಿಟ್ಟಿದೆ. ಇನ್ನು ನೆಲದ ಮೇಲೆ ಕಾಲು ಇಡಲು ಸ್ಥಳವಿರದ ಹಾಗೆ ಸಂಪೂರ್ಣವಾಗಿ ಹೂವ ಹಾಸು ಸೃಷ್ಠಿಯಾಗಿತ್ತು. ಎಲ್ಲದರ ಜೊತೆ ಮಲ್ಲಿಗೆಯ ಘಮ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ದಿತ್ತು. ಈ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ. ಯಾರೆಲ್ಲಾ ಮನೆಯಲ್ಲಿ ಮಲ್ಲಿಗೆ ಬಳ್ಳಿ ಬೆಳೆಸಿದ್ದಾರೋ ಅವರಿಗೆ ನಾವು ಹೇಳುವುದು ಚೆನ್ನಾಗಿ ಮನದಟ್ಟಾಗುತ್ತದೆ. ನನ್ನ ಈ ಆನಂದವನ್ನು ಪತಿ ಸಂದೀಪ ಮತ್ತು ಮಕ್ಕಳೊಂದಿಗೆ ಹಂಚಿಕೊಂಡೆನು.
ಮಕ್ಕಳು ತಮ್ಮ ಪುಟ್ಟ ಕೈಗಳಲ್ಲಿ ಅವರಿಗೆ ಎಟುಕುವಷ್ಟು ಮೊಗ್ಗು ಬಿಡಿಸಿದರು. ನಂತರ ಮನೆಯಲ್ಲಿ ಹೂವು ಕಟ್ಟಲು ತೆರಳಿದೆವು. ನಮ್ಮ ಬಾಲ್ಯದಲ್ಲಿ ಅಮ್ಮನ ಜೊತೆ ಈ ರೀತಿಯ ಕೆಲಸಗಳಲ್ಲಿ ಕೈ ಜೋಡಿಸುತ್ತಿದ್ದೆವು. ಸಾಮಾನ್ಯವಾಗಿ ಮಲ್ಲಿಗೆ ಬಳ್ಳಿಯನ್ನು ಯಾವುದಾದರೂ ಮರಕ್ಕೆ ಹಬ್ಬಿಸಿರುತ್ತಾರೆ. ಕೆಳಗೆ ಬಿಟ್ಟ ಮೊಗ್ಗುಗಳನ್ನು ಯಾರು ಬೇಕಾದರೂ ಬಿಡಿಸಬಹುದು. ಆದರೆ ಮೇಲೆ ಬಿಟ್ಟ ಮೊಗ್ಗುಗಳನ್ನು ಮಕ್ಕಳೇ ಬಿಡಿಸಬೇಕು. ದೊಡ್ಡವರು ಮರ ಹತ್ತಿದರೆ ಅಥವಾ ಏಣಿಯ ಸಹಾಯದಿಂದ ಹತ್ತಿದರೆ ಭಾರಕ್ಕೆ ಗಿಡ ಹಾಳಾಗುತ್ತದೆ. ಹಾಗಾಗಿ ಹಗುರವಾಗಿರುವ ನಮ್ಮನ್ನೇ ಹತ್ತಿಸುತ್ತಿದ್ದರು. ಮೊಗ್ಗು ಬಿಡಿಸುವುದು ನಮಗೆ ಸಡಗರದ ಕೆಲಸ. ಮಲ್ಲಿಗೆ ಬಳ್ಳಿಯಲ್ಲಿ ಅನೇಕ ಮೊಗ್ಗುಗಳಿರುತ್ತವೆ. ಎಲ್ಲವನ್ನೂ ಒಮ್ಮೆಲೇ ಬಿಡಿಸಬಾರದು. ನಾಳೆಗೆ ಅರಳುವ ಮೊಗ್ಗು ದಪ್ಪಕ್ಕೆ ಆಕರ್ಷಕವಾಗಿ ಕಾಣುತ್ತಿರುತ್ತದೆ. ಅಂತಹ ಮೊಗ್ಗುಗಳನ್ನು ಬಿಡಿಸಬೇಕು. ಸಣ್ಣ ಮತ್ತು ಎಳೆಯ ಹೀಚುಗಳನ್ನು ಬಿಡಿಸಿದರೆ ಅಮ್ಮನ ಬಳಿ ಬೈಗುಳ ಕೇಳಬೇಕಿತ್ತು. ಮೊಗ್ಗು ಬಿಡಿಸಿ ಔಡಲ ಎಲೆಯಲ್ಲಿ ಸುತ್ತಿಕೊಂಡು ಮನೆಗೆ ಬರುತ್ತಿದ್ದೆವು. ಹಾಗೇ ಬಿಟ್ಟರೆ ಬೇಗನೆ ಮೊಗ್ಗು ಅರಳಿ ಹೂವು ಕಟ್ಟಲು ಕಷ್ಟವಾಗುತ್ತದೆ. ನಮಗೆ ಬೇಕಾದಷ್ಟು ಮೊಗ್ಗುಗಳನ್ನು ಇಟ್ಟುಕೊಂಡು ಉಳಿದದ್ದನ್ನು ಅಕ್ಕಪಕ್ಕದವರಿಗೆ ನೀಡುತ್ತಿದ್ದೆವು, ಮತ್ತೂ ಹೆಚ್ಚಾದರೆ ಮಾರಾಟವನ್ನೂ ಮಾಡುತ್ತಿದ್ದೆವು. ಹೂವು ಕಟ್ಟುವಾಗ ತಾಯಿ ಅಥವಾ ಅಜ್ಜಿ ದೇವರ ನಾಮ, ಪುರಾಣ – ಇತಿಹಾಸಗಳ ಕಥೆಗಳನ್ನು ಹೇಳುತ್ತಿದ್ದರು.
ಇನ್ನು ಶಾಲಾ – ಕಾಲೇಜುಗಳಲ್ಲಿ ಅಳತೆ ಪ್ರಮಾಣಗಳ ಕುರಿತು ಸೆಂಟಿಮೀಟರ್ ಇತ್ಯಾದಿ ಮಾಪಕಗಳ ಕುರಿತು ತಿಳಿಸುತ್ತಾರೆ. ಆದರೆ ನಮ್ಮ ಆಡುಭಾಷೆಯ ಮೊಳ, ಮಾರು, ಸೇರು, ಪಾವು, ಚಟಾಕು ಕುರಿತು ತಿಳಿಸುವುದಿಲ್ಲ. ಹೂವು ಬಿಡಿಸಿ ಹೂವು ಕಟ್ಟುವುದರಿಂದ ಮಕ್ಕಳಿಗೆ ಈ ಎಲ್ಲ ವಿಷಯ ತಿಳಿಯುತ್ತದೆ. ಇಂದಿಗೂ ನಮ್ಮ ಕಡೆ ಹೂವನ್ನು ಮೊಳ, ಮಾರು ಲೆಕ್ಕದಲ್ಲೇ ಮಾರುತ್ತಾರೆ. ಬಿಡಿಹೂವನ್ನು ಕೆಲವರು ತಕ್ಕಡಿಯಲ್ಲಿ ಮಾರಿದರೆ ಹಲವರು ಸೇರು – ಪಾವು ಲೆಕ್ಕದಲ್ಲೇ ಮಾರುತ್ತಾರೆ. ಸಂಜೆ ವೇಳೆ ಮೈಸೂರು – ಬೆಂಗಳೂರು ರೈಲು ಪ್ರಯಾಣ ಮಾಡಿದವರಿಗೆ ಇದು ತಿಳಿದಿರುತ್ತದೆ. ಬಹುತೇಕ ಹೆಂಗಸರು ಕೆ.ಆರ್ ಮಾರುಕಟ್ಚೆಯಿಂದ ಬಿಡಿ ಹೂವು ಖರೀದಿಸಿ ಊರು ತಲುಪುವ ವೇಳೆಗೆ ಕಟ್ಟಿರುತ್ತಾರೆ. ಇನ್ನು ಕೆಲವರು ಸ್ವಲ್ಪ ಮೊಗ್ಗುಗಳನ್ನು ಕವರ್ ಒಳಗಿಟ್ಟು ಒಂದು ಸಣ್ಣ ದಾರದ ತುಂಡನ್ನು ಹಾಕಿ 20-30 ರೂಗಳಿಗೆ ಮಾರಾಟ ಮಾಡುತ್ತಾರೆ. ಪ್ರಯಾಣಿಕರು ತಮ್ಮ ಊರು ತಲುಪುವ ವೇಳೆಗೆ ಆ ಮೊಗ್ಗುಗಳನ್ನು ಕಟ್ಟಿ ಮಾಲೆ ಮಾಡಿರುತ್ತಾರೆ. ಸಾವಿರಾರು ಹೆಂಗಸರು ಈ ರೀತಿ ಹೂವಿನೊಂದಿಗೆ ಜೀವನ ಕಟ್ಟಿಕೊಂಡಿರುತ್ತಾರೆ.
ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನದಿಂದ ಮರಳಿ ಬರುವಾಗ ಇಬ್ಬರು ವಯಸ್ಕ ಹೆಂಗಸರು ಮನೆ ಮುಂದಿನ ಮರಳೆ ಗಿಡದಲ್ಲಿ ಮೊಗ್ಗು ಬಿಡಿಸುತ್ತಿದ್ದರು. ಕಾರು ನಿಲ್ಲಿಸಿ ಅವರಿಂದ ಮೊಗ್ಗು ಖರೀದಿಸಿ ಹಾಗೇ ಮಾತನಾಡಿಸಿದೆವು. ಆಶ್ಚರ್ಯವೆಂದರೆ ಅವರ ಕುಟುಂಬ ನಡೆಯುವುದು ಇದೇ ಎರಡು ಮರಳೆ ಬಳ್ಳಿಯಿಂದ. ದೇವಸ್ಥಾನದ ಹತ್ತಿರವಿರುವ ಕಾರಣ ಹೂವಿನ ಮಾರಾಟಕ್ಕೆ ಯಾವುದೇ ತೊಂದರೆ ಇಲ್ಲ. ಇವರು ನಿತ್ಯ 200-300ರೂ.ವರೆಗೆ ಸಂಪಾದಿಸುತ್ತಾರೆ. ಇನ್ನೊಬ್ಬರ ಹೊಲಕ್ಕೆ ಕೆಲಸಕ್ಕೆ ಹೋಗದೆ ಒಂದೆರಡು ಮರಳೆ ಗಿಡದಿಂದ ಜೀವನ ಕಟ್ಟಿಕೊಂಡ ಪರಿ ಸ್ಫೂರ್ತಿದಾಯಕವಾಗಿದೆ. ಇದೇ ರೀತಿ ಮಂಗಳೂರು ಮಲ್ಲಿಗೆ ಕೃಷಿಯಿಂದ ಕರಾವಳಿಯ ಹಲವಾರು ಮಹಿಳೆಯರು ಜೀವನ ರೂಪಿಸಿಕೊಂಡಿರುವುದರ ಬಗ್ಗೆ 2025ರ ಮಾರ್ಚ್ 30ರ ಸಂಚಿಕೆಯ ಕೃಷಿ ಅಂಕಣದಲ್ಲಿ ಬರೆದಿದ್ದೆವು.
ಆದರೆ ಇಂದು ಅನೇಕ ಹೆಂಗಸಿರಿಗೆ ಹೂವು ಕಟ್ಟುವುದಕ್ಕೆ ಬರುವುದಿಲ್ಲ. ಇದೊಂದು ಅಪರೂಪದ ಕೌಶಲ. ಹಣಕ್ಕಾಗಿ ಮಾತ್ರವಲ್ಲದೆ ಹಲವು ಕಾರಣಗಳಿಗೆ ಹೂವು ಕಟ್ಟುವುದು ವಿಶೇಷವಾಗಿದೆ. ಹೂವುಕಟ್ಟುವ ಹವ್ಯಾಸ ಏಕಾಗ್ರತೆ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ಹೂವಿನ ಸ್ಪರ್ಶ, ಅದರ ಪರಿಮಳ, ದೇಹ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕ ಭಾವ ಮೂಡುವಂತೆ ಮಾಡುತ್ತದೆ. ಹಾಗಾಗಿ ತಾಯಂದಿರು ಮಕ್ಕಳನ್ನು ಈ ರೀತಿ ಮನೆಕೆಲಸಗಳಲ್ಲಿ ಸೇರಿಸಿಕೊಂಡಷ್ಟು ಉತ್ತಮ. ಮೊದ ಮೊದಲು ಹೂವು ಜೋಡಿಸುವುದಕ್ಕೆ ಬಿಟ್ಟು ನಂತರ ಹೂವಿನ ಮಾಲೆ ಮಾಡುವ ಕುರಿತು ತಿಳಿಸಿದರೆ ಖಂಡಿತಾ ಅವರು ಕಲಿಯುತ್ತಾರೆ.
ನಮ್ಮ ಬಳಿ ಚರ್ಚಿಸುವ ಅನೇಕ ಪೋಷಕರ ದೊಡ್ಡ ಕಂಪ್ಲೆಂಟ್- “ಮಕ್ಕಳು ಹೆಚ್ಚು ಮೊಬೈಲ್ ನೋಡುತ್ತಿದ್ದಾರೆ, ಹೇಳಿದ ಮಾತು ಕೇಳುವುದಿಲ್ಲ” ಎಂದು. ನಮ್ಮ ಮಕ್ಕಳೂ ಇದಕ್ಕೆ ಹೊರತಲ್ಲ. ಆದರೂ ನಾವು ಪ್ರಯತ್ನಪೂರಕವಾಗಿ ಅವರಿಂದ ಮೊಬೈಲ್ ಅನ್ನು ಹೇಗೆ ದೂರ ಮಾಡುವುದು ಎಂದು ಯೋಚಿಸಿ ನಮ್ಮ ಬಾಲ್ಯದ ದಿನಗಳನ್ನು ಮರುಕಳಿಸುವಂತೆ ಮಾಡುವ ಹಾದಿಯಲ್ಲಿದ್ದೇವೆ. ನಾವು ಮಾಡುವ ಪ್ರತಿ ಕೆಲಸದಲ್ಲೂ ಮಕ್ಕಳನ್ನು ಜೊತೆಯಾಗಿ ಸೇರಿಸಿಕೊಂಡರೆ ಖಂಡಿತಾ ಅವರಿಗೆ ಮೊಬೈಲ್ ನೋಡಬೇಕು ಎನಿಸುವುದಿಲ್ಲ. ಇದರಿಂದ ಅವರಲ್ಲಿ ಕ್ರಿಯಾತ್ಮಕತೆಯೂ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ಮನೆಯಲ್ಲೊಂದು ಮಲ್ಲಿಗೆ ಗಿಡವಿದ್ದರೆ ಎಷ್ಟೆಲ್ಲಾ ಉಪಯೋಗವಿದೆ ಅಲ್ಲವೇ?
