ಅಂಕಣ – ಮಕ್ಕಳಿಗೆ ವಿಜ್ಞಾನ
- ರೋಹಿತ್ ಚಕ್ರತೀರ್ಥ, ಚಿಂತಕರು, ಲೇಖಕರು
ಯುಕ್ತಿ ಎಂದರೇನು ಎಂಬುದನ್ನು ಒಂದಷ್ಟು ಉದಾಹರಣೆಗಳ ಮೂಲಕ ನೋಡೋಣ.
ಮೂರನೇ ತರಗತಿಯ ಶಿಕ್ಷಕರಿಗೆ ಅವತ್ತು ಪಾಠ ಮಾಡುವ ಉತ್ಸಾಹವಿರಲಿಲ್ಲವೋ ಅಥವಾ ಮಕ್ಕಳ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಉಮೇದಿ ಬಂದಿತ್ತೋ, ಅಂತೂ ಒಂದು ಪ್ರಶ್ನೆ ಕೊಟ್ಟರು: 1ರಿಂದ 100ರವರೆಗಿನ ಎಲ್ಲ ಪೂರ್ಣಾಂಕಗಳ ಮೊತ್ತ ಎಷ್ಟು? ಪ್ರಶ್ನೆಯ ಜೊತೆಗೆ ವಿದ್ಯಾರ್ಥಿಗಳಿಗೆ ಒಂದಷ್ಟು ಸಮಯಾವಕಾಶವನ್ನೂ ಕೊಟ್ಟರು. ಸೂಕ್ಷ್ಮವಾಗಿ ಗಮನಿಸಿದರೆ ತರಗತಿಯಲ್ಲಿ ಒಬ್ಬ ಹುಡುಗ ಮಾತ್ರ ಒಂದೆರಡು ನಿಮಿಷಗಳಲ್ಲಿ ಸ್ಲೇಟಿನ ಮೇಲೆ ಏನೋ ಗೀಚಿ, ಉತ್ತರ ತೆಗೆದವನಂತೆ ಸಮಾಧಾನ ತಾಳಿ, ಸ್ಲೇಟು ಮುಚ್ಚಿಟ್ಟು ಅತ್ತಿತ್ತ ಗಮನಹರಿಸುತ್ತ ಕೂತುಬಿಟ್ಟಿದ್ದು ಕಾಣಿಸಿತು. ಉಳಿದವರು ತಮ್ಮ ಕೈಬೆರಳು-ಕಾಲ್ಬೆರಳುಗಳನ್ನೆಲ್ಲ ಮಡಚಿ-ಬಿಡಿಸುತ್ತ, ಸ್ಲೇಟಿನಲ್ಲಿ ಏನೇನೋ ಬರೆಯುತ್ತ ಲೆಕ್ಕ ತೆಗೆಯಲು ತಿಣುಕಾಡುತ್ತಿದ್ದರು. ಹತ್ತುಹದಿನೈದು ನಿಮಿಷಗಳಾದ ಮೇಲೆ ಗುರುಗಳು ಉತ್ತರ ಏನು ಎಂದು ಕೇಳಿದಾಗ, ಎಲ್ಲರಿಗಿಂತ ಮೊದಲು ಲೆಕ್ಕ ಮುಗಿಸಿದ್ದ ಚೂಟಿ ಹುಡುಗ ಕೈ ಎತ್ತಿದ. ಅವನಿಗೆ ಅವಕಾಶ ಕೊಟ್ಟಾಗ “ಉತ್ತರ 5050” ಎಂದ. ಅದು ಹೇಗೆ ವಿವರಿಸು ಎಂದಾಗ ಅವನೆಂದದ್ದು: “ಗುರುಗಳೇ, ನೀವು ಕೇಳಿದ್ದು 1ರಿಂದ 100ರವರೆಗಿನ ಸಂಖ್ಯೆಗಳ ಮೊತ್ತ. ಈ ಎಲ್ಲ ಸಂಖ್ಯೆಗಳೂ ಒಂದರಿಂದ ಇನ್ನೊಂದಕ್ಕೆ ಸಮಾನಾಂತರ ದೂರದಲ್ಲಿವೆ. ಅಂದರೆ 1ರಿಂದ 2ಕ್ಕೆ ಇರುವ ಅಂತರ, 99ರಿಂದ 100ಕ್ಕೆ ಇರುವ ಅಂತರ – ಎರಡೂ ಒಂದೇ. ಹಾಗಾಗಿ ನಾನು 1ನ್ನು 2ಕ್ಕೆ ಕೂಡಲಿಲ್ಲ, 100ಕ್ಕೆ ಕೂಡಿದೆ. 2ನ್ನು 99ಕ್ಕೆ ಕೂಡಿದೆ. 1+100 = 101 ಆಯಿತು. 2+99 = 3+98 = 4+97 = 101. ಎಲ್ಲ ಅಂಥ ಜೋಡಿಗಳ ಮೊತ್ತವೂ 101. ಅಂಥ 50 ಜೋಡಿಗಳಿರುವುದರಿಂದ 50101 = 5050 ಆಯಿತು”. “ಭೇಷ್” ಎನ್ನದೆ ಬೇರೆ ಉಪಾಯವೇ ಇರಲಿಲ್ಲ ಗುರುಗಳಿಗೆ! “ಅದೇನೋ ಸರಿ, ಆದರೆ ಈ ಉತ್ತರ ಸರಿ ಎಂದು ಖಚಿತವಾಗಿ ಹೇಳುವುದು ಹೇಗೆ? ತಾಳೆನೋಡುವ ಯಾವುದಾದರೂ ಬಗೆ ಇದ್ದಿದ್ದರೆ ಒಳ್ಳೆಯದಿತ್ತು” ಎಂದರು ಗುರುಗಳು. “ಯಾಕಿಲ್ಲ ಗುರುಗಳೇ? ಅದೂ ಇದೆ! 1ರಿಂದ 10ರವರೆಗಿನ ಒಟ್ಟು ಹತ್ತು ಸಂಖ್ಯೆಗಳ ನಡುಬಿಂದು 5.5. ಹಾಗೆಯೇ 1ರಿಂದ 100ರವರೆಗಿನ ಸಂಖ್ಯೆಗಳ ನಡುಬಿಂದು 50.5. ಇದನ್ನು ಗಣಿತದ ಭಾಷೆಯಲ್ಲಿ ಸರಾಸರಿ ಎಂದೂ ಹೇಳಬಹುದು. ಈ ಸರಾಸರಿಯನ್ನು ಇರುವ ಒಟ್ಟು ಸಂಖ್ಯೆಗಳಿಗೆ ಗುಣಿಸಿದರೆ, ಅದೇ ಆ ಎಲ್ಲ ಸಂಖ್ಯೆಗಳ ಮೊತ್ತ. ಅಂದರೆ, 50.5100 = 5050!” ಎಂದ ಹುಡುಗ. ನೂರು ಸಂಖ್ಯೆಗಳನ್ನು ಒಂದರ ಪಕ್ಕ ಒಂದನ್ನಿಟ್ಟು ಕೂಡಿಸುತ್ತ ಹೋಗುವ ಕತ್ತೇದಾರಿಯ ಬದಲಿಗೆ ಹುಡುಗ ಸುಲಭದಲ್ಲಿ ಗುರಿಮುಟ್ಟುವ ಪತ್ತೇದಾರಿ ಕೆಲಸವನ್ನೇ ಮಾಡಿದ್ದ! ಇದನ್ನೇ ನಾವು ಯುಕ್ತಿ ಎನ್ನುವುದು.
ಒಂದು ಸಾಬೂನಿನ ಕಾರ್ಖಾನೆಯಲ್ಲಿ ಎಲ್ಲವೂ ಯಂತ್ರಚಾಲಿತ. ಸೋಪಿನ ಬಿಲ್ಲೆಗಳು ಬಾಕ್ಸ್ ಗಳೊಳಗೆ ತಾವಾಗಿ ಬಿದ್ದು, ಪ್ಯಾಕ್ ಆಗಿ ಹೊರಬರುತ್ತಿದ್ದವು. ಆದರೆ ಕ್ರಮೇಣ ಅಲ್ಲೊಂದು ಇಲ್ಲೊಂದು ದೂರುಗಳು ಬರತೊಡಗಿದವು. ಅದೇನೆಂದರೆ ಕೆಲವು ಡಬ್ಬಗಳಲ್ಲಿ ಸೋಪುಗಳಿರಲಿಲ್ಲ; ಅವು ಖಾಲಿಯಾಗಿ ಇದ್ದೇ ಪ್ಯಾಕ್ ಆಗಿಬಿಟ್ಟಿದ್ದವು. ಯಂತ್ರಗಳಿಂದ ಹೊರಬರುವ ನೂರಾರು ಬಾಕ್ಸ್ ಗಳಲ್ಲಿ ಯಾವ ಬಾಕ್ಸ್ ಖಾಲಿ, ಯಾವುದು ತುಂಬಿದೆ ಎಂದು ಪರೀಕ್ಷಿಸುವುದು ಹೇಗೆ? ಅದಕ್ಕಾಗಿ ಜನರನ್ನು ನಿಯೋಜಿಸಿ ಕೂರಿಸುವುದು ಆಗದ ಕೆಲಸ. ಸೋಪಿನ ಬಾಕ್ಸ್ ಗಳು ನಿರಂತರ ಹೊರಬರುತ್ತಲೇ ಇರುವುದರಿಂದ ವ್ಯಕ್ತಿಗಳು ಅವನ್ನು ಮುಟ್ಟಿನೋಡಿ ಪರೀಕ್ಷಿಸುವುದು ಕಷ್ಟದ ಕೆಲಸವೇ. ಅದಕ್ಕೆಂದೇ ನಾಲ್ಕೈದು ಜನರನ್ನು ನಿಯೋಜಿಸಬೇಕಾದೀತು. ಪ್ರತಿ ಬಾಕ್ಸನ್ನೂ ತೂಗುವ ಯಂತ್ರವನ್ನಿಡಬೇಕು – ಒಂದು ಸಲಹೆ ಬಂತು. ಬಾಕ್ಸ್ ಗಳು ಹೋಗುವ ದಾರಿಯಲ್ಲಿ ಎಕ್ಸ್ ಕಿರಣಗಳನ್ನು ಅಥವಾ ಯಾವುದೇ ವಿದ್ಯುತ್ಕಾಂತೀಯ ಅಲೆಗಳನ್ನು ಹಾಯಿಸಿ, ಖಾಲಿ ಬಾಕ್ಸ್ ಗಳನ್ನು ಪತ್ತೆಹಚ್ಚಬಹುದು – ಮತ್ತೊಂದು ಸಲಹೆ ಬಂತು. ಇವೆಲ್ಲ ಒಳ್ಳೆಯ ಸಲಹೆಗಳೇನೋ ಹೌದು, ಆದರೆ ಖರ್ಚಿನ ಬಾಬ್ತು. ಅಲ್ಲದೆ ಅವು ಖಾಲಿ ಬಾಕ್ಸ್ ಯಾವುದೆಂದು ಹೇಳುತ್ತವೆಯೇ ಹೊರತು ಅದನ್ನು ಪ್ರತ್ಯೇಕಿಸುವುದಿಲ್ಲ. ಹಾಗಾದರೆ ಉಪಾಯ ಏನು – ಎಂದು ಯೋಚಿಸುತ್ತಿದ್ದಾಗ ಆ ಫ್ಯಾಕ್ಟರಿಯ ಓರ್ವ ಆಳು ಒಂದು ಉಪಾಯವನ್ನು ಮುಂದಿಟ್ಟ. ಅದೇನೆಂದರೆ ಸೋಪಿನ ಬಾಕ್ಸ್ ಗಳು ಅಂತಿಮವಾಗಿ ಹಾದುಹೋಗುವ ದಾರಿಯಲ್ಲಿ ಒಂದು ಫ್ಯಾನ್ ಇಟ್ಟುಬಿಡುವುದು! ಆಗ ಟೊಳ್ಳಾಗಿರುವ ಪ್ಯಾಕ್ಗಳು ತಾನೇ ತಾನಾಗಿ ಹಾರಿಹೋಗುತ್ತವೆ! ಸೋಪಿರುವ ಬಾಕ್ಸ್ ಗಳಷ್ಟೇ ಉಳಿದುಕೊಳ್ಳುತ್ತವೆ! ‘ಯುಕ್ತಿ’ ಎಂದರೆ ಇದುವೇ!.
ರಸ್ತೆಗಳಲ್ಲಿ ರಾತ್ರಿ ಹೊತ್ತು ವಾಹನ ಚಲಾವಣೆ ಮಾಡುವವರಿಗೆ ಎದುರಾಗುವ ಒಂದು ಸಮಸ್ಯೆ, ರಸ್ತೆಯ ಅಂಚು ಕಾಣದಿರುವುದು. ಅದರಲ್ಲೂ ರಸ್ತೆಯು ಹಾವಿನಂತೆ ಅಂಕುಡೊಂಕಾಗಿದ್ದರಂತೂ ಡ್ರೈವಿಂಗ್ ಎನ್ನುವುದು ಹಾವಿನ ತುಟಿಗೆ ಮುತ್ತಿಟ್ಟಂತೆಯೇ! ಈ ಸಮಸ್ಯೆಯನ್ನು ಪರಿಹರಿಸಲು ಏನು ಮಾಡಬೇಕು ಎಂದು ತಂತ್ರಜ್ಞರು ತಲೆಕೆಡಿಸಿಕೊಂಡರು. ರಸ್ತೆಗಳ ಇಕ್ಕೆಲಗಳಲ್ಲಿ ಎಲೆಕ್ಟ್ರಿಕ್ ದೀಪಗಳನ್ನು ನೆಡಬೇಕು – ಎಂದೊಬ್ಬ ಸಲಹೆ ಕೊಟ್ಟ. ರಸ್ತೆಗಳ ವಿದ್ಯುದೀಕರಣ ಮಾಡುವುದೇನೋ ಸರಿಯೇ, ಆದರೆ ದೇಶದ ಉದ್ದಗಲಕ್ಕೆ ಹರಡಿರುವ ಎಲ್ಲ ಬಗೆಯ ರಸ್ತೆಗಳನ್ನೂ ಅಂಥ ಮೇಲ್ದರ್ಜೆಗೇರಿಸಲು ಆಗುವ ಖರ್ಚು ಎಷ್ಟು? ವಾಹನದಟ್ಟಣೆ ಇರುವ ನಗರದ ರಸ್ತೆಗಳ ಜೊತೆಗೆ, ರಾತ್ರಿಯಲ್ಲಿ ಎರಡು-ಮೂರು ವಾಹನಗಳಷ್ಟೇ ಸಾಗುವ ಹಳ್ಳಿರಸ್ತೆಗಳೂ ಇರುತ್ತವೆ. ಅಂಥ ರಸ್ತೆಗಳಲ್ಲಿ ರಾತ್ರಿ ಇಡೀ ದೀಪ ಉರಿಸುವುದು ರಾಷ್ಟ್ರೀಯ ನಷ್ಟ ಅಲ್ಲವೆ? ಆಗ ಒಬ್ಬ ಬುದ್ಧಿವಂತ, ರಸ್ತೆಯ ಇಕ್ಕೆಲಗಳಲ್ಲಿ ಪ್ರತಿಫಲಕಗಳನ್ನು (ರಿಫ್ಲೆಕ್ಟಿವ್ ಸ್ಟಡ್ಸ್) ಅಳವಡಿಸುವ ಉಪಾಯವನ್ನು ಮುಂದಿಟ್ಟ. ಈ ಪ್ರತಿಫಲಕ ಸ್ಟಿಕರ್ಗಳು ವಾಹನಗಳ ಹೆಡ್ಲೈಟ್ನ ಬೆಳಕನ್ನು ಪ್ರತಿಫಲಿಸುವುದರಿಂದ ವಾಹನ ಸವಾರರಿಗೆ ರಸ್ತೆಯ ಅಂಚಿನ ಸ್ಪಷ್ಟ ಅಂದಾಜು ಸಿಗುತ್ತದೆ. ಈ ಪ್ರತಿಫಲಕಗಳು ರಾತ್ರಿ ಇಡೀ ಬೆಳಗಬೇಕಿಲ್ಲ; ಆದರೆ ವಾಹನಗಳು ಸಂಚರಿಸುವಾಗ ತಮ್ಮ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ ಸವಾರರ ಕಣ್ಣಿಗೆ ಹಾಯಿಸಿ ರಸ್ತೆಯ ಉದ್ದಗಲಗಳ ಅಂದಾಜನ್ನು ಮಾಡಿಕೊಡುತ್ತವೆ.
ಯುಕ್ತಿಯ ಕಲ್ಪನೆ ಈಗ ನಿಮಗೆ ಬಂದಿರಬಹುದು. ಯುಕ್ತಿ ಎಂದರೆ ಕೊಟ್ಟಿರುವ ಪ್ರಶ್ನೆಯಲ್ಲಿ ಯಾವ ರಾಜಿಯನ್ನೂ ಮಾಡಿಕೊಳ್ಳದೆ, ಅತಿ ಕಡಿಮೆ ಅವಧಿಯಲ್ಲಿ, ಕಡಮೆ ಸಂಪನ್ಮೂಲ ಬಳಸಿಕೊಂಡು, ಹೆಚ್ಚು ಪರಿಣಾಮಕಾರಿಯಾಗಿ ಉತ್ತರವನ್ನು ತೆಗೆಯುವ ತಂತ್ರ. ಕೊಟ್ಟಿರುವ ಪ್ರಶ್ನೆಯನ್ನು ಇದು ಕೆಲವೊಮ್ಮೆ ಪರಿಹರಿಸುವುದು ಮಾತ್ರವಲ್ಲದೆ ಇನ್ನೊಂದೆರಡು ಉಪಕಾರಗಳನ್ನೂ ಮಾಡಬಹುದು (ಟನೆಲ್ ಬೂಮ್ ಸಮಸ್ಯೆಯನ್ನು ಪರಿಹರಿಸಲು ಮಾಡಿಕೊಂಡ ವ್ಯವಸ್ಥೆ ರೈಲಿನ ವೇಗವನ್ನೂ ಹೆಚ್ಚಿಸಿದಂತೆ). ಮೂರ್ನಾಲ್ಕು ರಸ್ತೆಗಳು ಒಂದಕ್ಕೊಂದು ಕೂಡುವ ಸ್ಥಳಗಳಲ್ಲಿ ಟ್ರಾಫಿಕ್ ಲೈಟುಗಳನ್ನು ಅಳವಡಿಸಿರುವುದು ಇಂಥ ಯುಕ್ತಿಯ ಉದಾಹರಣೆಯೇ. ಹಾಗೆಯೇ ಒಂದು ಕಾಲದಲ್ಲಿ ಪತ್ರಗಳನ್ನು ತಲುಪಿಸಲು ವಿಳಾಸ ಪತ್ತೆಹಚ್ಚುವುದೇ ದೊಡ್ಡ ಸಮಸ್ಯೆಯಾಗಿದ್ದಾಗ ಅಂಚೆಯಣ್ಣನ ಅನುಕೂಲಕ್ಕಾಗಿ ಅಡ್ಡರಸ್ತೆ/ಮುಖ್ಯರಸ್ತೆಗಳ ಸಂಖ್ಯೆ, ಪೋಸ್ಟ್ ಕೋಡ್ ಇತ್ಯಾದಿ ಎಲ್ಲ ಚಾಲ್ತಿಗೆ ಬಂದವು (ಯುಕ್ತಿಗೆ ಸಂಬಂಧಿಸಿದ ಇನ್ನೊಂದು ಅಂಶವು ಅಂಚೆ ಇಲಾಖೆಯೊಂದಿಗೆ ಜೋಡಣೆಗೊಂಡಿದೆ. ತುಂಬ ಹಿಂದೆ, ಅಂಚೆ ಇಲಾಖೆ ಅಸ್ತಿತ್ವಕ್ಕೆ ಬಂದ ಕಾಲದಲ್ಲಿ ಅಂಚೆ ಚೀಟಿಗಳು ಅಸ್ತಿತ್ವದಲ್ಲಿರಲಿಲ್ಲ. ಯಾರಾದರೂ ತಮ್ಮ ಪ್ರೀತಿಪಾತ್ರರಿಗೆ ಕಾಗದ ಬರೆಯಬೇಕಾದರೆ, ಆ ಕಾಗದಗಳನ್ನು ಬರೆದು, ತಲುಪಬೇಕಾದ ವಿಳಾಸ ಬರೆದು ಅಂಚೆಡಬ್ಬದಲ್ಲಿ ಹಾಕುತ್ತಿದ್ದರು. ಪತ್ರವನ್ನು ಸ್ವೀಕರಿಸುವವನು ದುಡ್ಡು ತೆರಬೇಕಾಗಿತ್ತು! “ದುಡ್ಡು ಕೊಡಬೇಕೇ? ಹಾಗಾದರೆ ಈ ಪತ್ರವೇ ಬೇಡ! ಪತ್ರ ಬರೆಯಿರೆಂದು ನಾವೇನು ಕೇಳಿಕೊಂಡಿದ್ದೆವೇ?” ಎಂದು ಪತ್ರ ಸ್ವೀಕರಿಸಬೇಕಿದ್ದವರು ಹೇಳಿ, ಪತ್ರ ತೆಗೆದುಕೊಳ್ಳಲು ನಿರಾಕರಿಸಿದಾಗ ಪರಿಸ್ಥಿತಿ ಬಿಗಡಾಯಿಸಿತು. ಇದಕ್ಕೆಲ್ಲ ಇತಿಶ್ರೀ ಹಾಡುವುದಕ್ಕೆಂದು ಕೊನೆಗೆ ಅಂಚೆಚೀಟಿಗಳ ವ್ಯವಸ್ಥೆ ಜಾರಿಗೆ ಬಂತು. ಪತ್ರ ಬರೆಯುವವರೇ ತಮ್ಮ ಪತ್ರದ ತೂಕ, ತಲುಬೇಕಿರುವ ಜಾಗ ಇವೆಲ್ಲವನ್ನು ನೋಡಿಕೊಂಡು ಅದಕ್ಕೆ ತಕ್ಕ ಬೆಲೆಯ ಅಂಚೆಚೀಟಿಯನ್ನು ಕೊಂಡು ಪತ್ರಕ್ಕೆ ಹಚ್ಚುವ ವ್ಯವಸ್ಥೆ ಬಂದದ್ದು – ಹೀಗೆ, ಒಂದು ಸಮಸ್ಯೆಯ ನಿವಾರಣೆಯ ಭಾಗವಾಗಿ).
ನಾವು ದಿನನಿತ್ಯ ಹೊಟೇಲುಗಳಲ್ಲಿ ತಿನ್ನುವ ವಡೆ ಕೂಡ ಇಂಥ ಯುಕ್ತಿಯ ಭಾಗವೇ ಎಂದರೆ ನಿಮಗೆ ಅಚ್ಚರಿಯಾದೀತು. ಮೊದಲು ಉದ್ದಿನ ವಡೆಯನ್ನು ನಡುವೆ ತೂತಾಗಿಸಿ ಎಣ್ಣೆಯಲ್ಲಿ ಕರಿಯುವ ಕ್ರಮ ಇದ್ದಿರಲಿಲ್ಲ. ಇದರಿಂದ ವಡೆಯ ಉಬ್ಬಿದ ಹೊರಭಾಗವು ಚೆನ್ನಾಗಿ ಎಣ್ಣೆಯಲ್ಲಿ ಕರಿಯಲ್ಪಟ್ಟರೂ ಅದರ ನಡುಮಧ್ಯದ ಭಾಗ ಬೇಯದೆ ಹಸಿಯಾಗಿಯೇ ಇರುತ್ತಿತ್ತು. ನಡುಮಧ್ಯವು ಪೂರ್ತಿ ಬೇಯಲೆಂದು ಹೆಚ್ಚು ಹೊತ್ತು ಕರಿದರೆ ಹೊರಪದರವು ಕರಕಲಾಗುತ್ತಿತ್ತು. ಸರಿಯಾಗಿ ಬೇಯದ ವಡೆ ತಿನ್ನಲು ರುಚಿಯಾಗುತ್ತಿರಲಿಲ್ಲ; ಅಲ್ಲದೆ ಬೇಯದ ಭಾಗವನ್ನು ತಿಂದುದಕ್ಕಾಗಿ ಹೊಟ್ಟೆ ಕೆಡುವುದಂತೂ ಮಾಮೂಲಿಯಾಗಿತ್ತು. ಹಾಗಾದರೆ ಏನು ಮಾಡಬಹುದು ಎಂದು ಯೋಚಿಸಿದ ಯಾವುದೋ ಬುದ್ಧಿವಂತ ಅಡುಗೆಭಟ್ಟರು ವಡೆಯನ್ನು ಪೂರ್ತಿಯಾಗಿ ಉಂಡುಂಡೆ ಗೋಲ ಮಾಡುವ ಬದಲು ನಡುವೆ ತೂತು ಮಾಡಿ ಬಳೆಯಾಕಾರದಲ್ಲಿ ಎಣ್ಣೆಯಲ್ಲಿ ಕರಿದರು. ಆಗ ವಡೆಯ ಎಲ್ಲ ಭಾಗಗಳೂ ಸಮಾನವಾದ ಶಾಖ ಪಡೆದು ಸಮಾನವಾಗಿ ಬೆಂದವು. ವಡೆಯ ಈ ಹೊಸ ರೂಪಕ್ಕೆ ಗಣಿತದ ಭಾಷೆಯಲ್ಲಿ ಟಾರಸ್ ಎನ್ನುತ್ತೇವೆ. ಸ್ವಾರಸ್ಯವೆಂದರೆ ವಡೆಯು ಯಾಕೆ ಎಣ್ಣೆಯಲ್ಲಿ ಸಮಾನವಾಗಿ ಬೇಯುತ್ತದೆ ಹಾಗೂ ಗೋಲಾಕಾರದ ಹಿಟ್ಟು ಯಾಕೆ ಸಮಾನವಾಗಿ ಬೇಯುವುದಿಲ್ಲ ಎಂದು ಸಾಧಿಸಲು ಬಳಸುವ ಗಣಿತದಿಂದಲೇ – ಬೆಂಗಳೂರಿಗೆ ಯಾಕೆ ಪೆರಿಫರಲ್ ರಸ್ತೆ ಬೇಕು; ಯಾಕೆ ಔಟರ್ ರಿಂಗ್ ರೋಡ್ ಮಾತ್ರವೇ ಸಾಲುವುದಿಲ್ಲ – ಎಂಬುದನ್ನೂ ಸಾಧಿಸಬಹುದು! ಹೇಗೆ ವಡೆಯೊಳಗಿನ ಪ್ರತಿ ಬಿಂದುವಿಗೂ ಹೊರಗಿನ ಬೆಂಕಿಯ ಸಂಪರ್ಕವು ಹೆಚ್ಚುಕಡಿಮೆ ಸಮಾನವಾಗಿ ಒದಗುತ್ತದೋ ಹಾಗೆಯೇ ಬೆಂಗಳೂರಿಗೆ ಎರಡು ವರ್ತುಲರಸ್ತೆಗಳು (ಹೊರಗಿನಿಂದ ಒಂದು ವರ್ತುಲ, ಒಳಗಿನಿಂದ ಇನ್ನೊಂದು ವರ್ತುಲ) ಇದ್ದರೆ ನಗರದೊಳಗಿನ ಪ್ರತಿ ಸ್ಥಳವೂ ಈ ಎರಡು ರಸ್ತೆಗಳ ಮೂಲಕ ಬೇರೆ ಭಾಗಗಳ ಸಂಪರ್ಕಕ್ಕೆ ಬೇಗನೆ ಬರಲು ಸಾಧ್ಯ. ಯುಕ್ತಿ ಎಂದರೆ ಹೀಗೆಯೇ – ಮೇಲ್ನೋಟಕ್ಕೆ ಸಂಬಂಧವಿಲ್ಲದಂತೆ ಕಾಣುವ ಎರಡು ಸಂಗತಿಗಳಲ್ಲಿ ಸಮಾನಾಂಶಗಳನ್ನು ಕಾಣುವುದು. ಕೂಡುವ ಲೆಕ್ಕದಲ್ಲಿ ಪುಟ್ಟ ಹುಡುಗ ಸರಾಸರಿಯ ಕಲ್ಪನೆಯನ್ನು ತುಂಬಿದಂತೆ!.
