ಅಂತರರಾಷ್ಟ್ರೀಯ ಸೀಸ ತಡೆಗಟ್ಟುವ ಸಪ್ತಾಹ (ಅಕ್ಟೋಬರ್ 18-24)
ಪ್ರತಿ ವರ್ಷ ಅಕ್ಟೋಬರ್ ಕೊನೆಯ ವಾರವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಜಂಟಿಯಾಗಿ ಅಂತರರಾಷ್ಟ್ರೀಯ ಸೀಸ ವಿಷ ತಡೆಗಟ್ಟುವ ಸಪ್ತಾಹವಾಗಿ ಆಚರಿಸುತ್ತವೆ. ಈ ವರ್ಷ 2026ರ ಸಪ್ತಾಹ ಅಕ್ಟೋಬರ್ 18ರಿಂದ 24ರವರೆಗೆ ನಡೆಯುತ್ತಿದ್ದು, ಇದರ ಮುಖ್ಯ ಘೋಷವಾಕ್ಯ “ಪತ್ತೆಯಿಂದ ತಡೆಗಟ್ಟುವಿಕೆಯೆಡೆಗೆ” ಎಂದಾಗಿದೆ. ಏಕೆಂದರೆ ಸೀಸದ ವಿಷ ಕಣ್ಣಿಗೆ ಕಾಣುವುದಿಲ್ಲ, ಅದನ್ನು ಮೊದಲು ಪತ್ತೆ ಹಚ್ಚಬೇಕು, ನಂತರ ತಡೆಗಟ್ಟಬೇಕು. ಈ ಸಪ್ತಾಹದ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ಮತ್ತು ಅತಿ ಹೆಚ್ಚು ನಿರ್ಲಕ್ಷ್ಯಕ್ಕೊಳಗಾದ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಈ ಲೇಖನ.
ನಾವು ಪ್ರತಿದಿನ ಅಂಗಡಿಯಿಂದ ತರಕಾರಿ ತರುತ್ತೇವೆ, ಅದನ್ನು ಮೂರು ಬಾರಿ ನೀರಿನಲ್ಲಿ ತೊಳೆಯುತ್ತೇವೆ, ಅರಿಶಿನ ಉಪ್ಪು ಹಾಕಿ ನೆನೆಸುತ್ತೇವೆ, ಮನೆಯಲ್ಲೇ ಖುದ್ದು ರುಬ್ಬಿದ ಮಸಾಲೆಯಿಂದ ಸಾರು ಮಾಡುತ್ತೇವೆ, ಸ್ಟೀಲ್ ಡಬ್ಬದಲ್ಲಿ ಭದ್ರವಾಗಿ ಇಡುತ್ತೇವೆ. ಇಷ್ಟೆಲ್ಲ ಮಾಡಿದ ಮೇಲೆ ನಮ್ಮ ಊಟ ಸುರಕ್ಷಿತ ಎಂದು ನಾವು ನಂಬಿ ಬಿಡುತ್ತೇವೆ. ಆದರೆ ಈ ನಂಬಿಕೆಯೇ ಇಂದು ಭಾರತದ ಅತಿ ದೊಡ್ಡ ಆರೋಗ್ಯ ಬಿಕ್ಕಟ್ಟುಗಳಲ್ಲಿ ಒಂದನ್ನು ಮರೆಮಾಚಿದೆ. ಕಣ್ಣಿಗೆ ಕಾಣದ, ವಾಸನೆ ಇಲ್ಲದ, ರುಚಿಯಲ್ಲಿ ಗೊತ್ತಾಗದ, ಆದರೆ ಒಮ್ಮೆ ದೇಹ ಸೇರಿದರೆ ಮೂಳೆಗಳಲ್ಲಿ ನೂರಾರು ವರ್ಷಗಳ ಕಾಲ ಕುಳಿತು ಮೆದುಳು, ಮೂತ್ರಪಿಂಡ ಮತ್ತು ಹೃದಯವನ್ನು ನಿಧಾನವಾಗಿ ತಿನ್ನುವ ಒಂದು ಭಾರ ಲೋಹ ನಮ್ಮ ಅಡುಗೆ ಮನೆಯನ್ನು ಪ್ರವೇಶಿಸಿದೆ, ಅದರ ಹೆಸರು ಸೀಸ (Lead). ಇದು ಯಾವುದೋ ದೂರದ ಕಾರ್ಖಾನೆಯ ಸಮಸ್ಯೆಯಲ್ಲ, ಇದು ನಮ್ಮ ಮನೆಯ ಹಿತ್ತಲಿನ ಬ್ಯಾಟರಿ ಅಂಗಡಿಯಿಂದ, ನಾವು ದಿನಾ ಬಳಸುವ ಅರಿಶಿನದ ಪೊಟ್ಟಣದಿಂದ, ನಮ್ಮ ಮಗು ಆಡುವ ನೆಲದ ಧೂಳಿನಿಂದಲೇ ಬರುತ್ತಿದೆ ಮತ್ತು ಇದಕ್ಕೆ ಯಾವುದೇ ಸುರಕ್ಷಿತ ಮಿತಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಹಳ ಹಿಂದೆಯೇ ಸ್ಪಷ್ಟಪಡಿಸಿದೆ.
ಈ ಮಾತು ಕೇವಲ ಎಚ್ಚರಿಕೆಗಾಗಿ ಹೇಳುತ್ತಿಲ್ಲ, ಇದಕ್ಕೆ ಭಾರತದಲ್ಲೇ ಬೆಚ್ಚಿ ಬೀಳಿಸುವ ಅಂಕಿ-ಸಂಖ್ಯೆಗಳಿವೆ. 2020ರಲ್ಲಿ UNICEF ಮತ್ತು Pure Earth ಸಂಸ್ಥೆಗಳು ಜಗತ್ತಿನ 120 ದೇಶಗಳಲ್ಲಿ ಮಾಡಿದ ‘The Toxic Truth’ ಅಧ್ಯಯನವನ್ನು ಭಾರತ ಸರ್ಕಾರದ NITI Aayog ಮತ್ತು CSIR 2022ರಲ್ಲಿ ಮರುಪರಿಶೀಲಿಸಿ ದೃಢಪಡಿಸಿತು. ಆ ವರದಿಯ ಪ್ರಕಾರ ಭಾರತದಲ್ಲಿ 27.5 ಕೋಟಿ ಮಕ್ಕಳ ರಕ್ತದಲ್ಲಿ ಸೀಸದ ಪ್ರಮಾಣ WHO ನಿಗದಿಪಡಿಸಿದ 5 ಮೈಕ್ರೋಗ್ರಾಂ ಪ್ರತಿ ಡೆಸಿಲೀಟರ್ (5 µg/dL) ಮಿತಿಗಿಂತ ಹೆಚ್ಚಿದೆ, ಅಂದರೆ ಈ ದೇಶದ ಪ್ರತಿ ಇಬ್ಬರು ಮಕ್ಕಳಲ್ಲಿ ಒಬ್ಬರು ಈ ನಿಶ್ಯಬ್ದ ವಿಷಕ್ಕೆ ಒಡ್ಡಿಕೊಂಡಿದ್ದಾರೆ ಮತ್ತು ಅವರಲ್ಲಿ 6.43 ಕೋಟಿ ಮಕ್ಕಳಲ್ಲಿ ಪ್ರಮಾಣ 10 µg/dL ಗಿಂತಲೂ ಹೆಚ್ಚಿದೆ. 2023ರಲ್ಲಿ ಪ್ರತಿಷ್ಠಿತ The Lancet ನಲ್ಲಿ ಪ್ರಕಟವಾದ ಜಾಗತಿಕ ಅಧ್ಯಯನವು ಭಾರತದಲ್ಲಿ ಒಂದು ವರ್ಷಕ್ಕೆ 10 ಲಕ್ಷಕ್ಕೂ ಹೆಚ್ಚು ವಯಸ್ಕರ ಸಾವು ಹೃದಯ ಮತ್ತು ರಕ್ತನಾಳದ ಕಾಯಿಲೆಯಿಂದ ಆಗುತ್ತಿದ್ದು, ಅದಕ್ಕೆ ದೀರ್ಘಕಾಲದ ಸೀಸದ ಒಡ್ಡುವಿಕೆ ಪ್ರಮುಖ ಕಾರಣ ಎಂದು ಹೇಳಿದೆ ಮತ್ತು NCDC ಯ ಪ್ರಧಾನ ಸಲಹೆಗಾರರ ಪ್ರಕಾರ ಈ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಪ್ರತಿ ವರ್ಷ ಸುಮಾರು 20 ಲಕ್ಷ ಕೋಟಿ ರೂಪಾಯಿಗಳಷ್ಟು GDP ನಷ್ಟವಾಗುತ್ತಿದೆ. ಬಿಹಾರದಲ್ಲಿ 90% ಮಕ್ಕಳು, 80% ಗರ್ಭಿಣಿಯರಲ್ಲಿ ಮಿತಿ ಮೀರಿದ ಸೀಸ ಕಂಡುಬಂದಿದೆ ಮತ್ತು ಸರಾಸರಿ ಭಾರತೀಯ ಮಗುವಿನ ರಕ್ತದಲ್ಲಿ 10.4 µg/dL ಸೀಸ ಇದೆ, ಇದು WHO ಮಿತಿಯ ಎರಡು ಪಟ್ಟು!!
ಗೊತ್ತಿಲ್ಲದೆಯೇ ದೇಹ ಸೇರುತ್ತಿರುವ ಸೀಸ
ಸೀಸ ದೇಹಕ್ಕೆ ೯೦% ಬಾಯಿಯ ಮೂಲಕ ಅಂದರೆ ಆಹಾರ, ನೀರು ಮತ್ತು ಉಸಿರಾಡುವ ಗಾಳಿಯಿಂದ ಧೂಳಿನ ಮುಖಾಂತರ ಒಳಗೆ ಸೇರುತ್ತದೆ . ೧. ಅನೌಪಚಾರಿಕ ಬ್ಯಾಟರಿ ಮರುಬಳಕೆ. ಭಾರತದಲ್ಲಿ ಬಳಸುವ ಸೀಸದ ಶೇಕಡಾ 85ರಷ್ಟು ಲೆಡ್-ಆಸಿಡ್ ಬ್ಯಾಟರಿಗಳಿಗೆ ಹೋಗುತ್ತದೆ ಮತ್ತು ಹಳ್ಳಿ-ಪಟ್ಟಣಗಳಲ್ಲೆಲ್ಲ ಹಿತ್ತಲಿನಲ್ಲಿ ಹಳೆಯ ಬ್ಯಾಟರಿಯನ್ನು ಒಡೆದು ಸೀಸವನ್ನು ಕರಗಿಸುವ ಉದ್ಯಮದಿಂದ ಬರುವ ಹೊಗೆ, ಬೂದಿ ಮತ್ತು ಆಮ್ಲೀಯ ನೀರು ನೇರವಾಗಿ ಮನೆ, ಹೊಲ ಮತ್ತು ಕೆರೆ ಸೇರುತ್ತದೆ. ೨.ಮಸಾಲೆ ಕಲಬೆರಕೆ. ಅರಿಶಿನಕ್ಕೆ ಹಳದಿ ಬಣ್ಣಕ್ಕೆ Lead Chromate ಮತ್ತು ಮೆಣಸಿನಕಾಯಿ ಪುಡಿಗೆ ಕೆಂಪು ಬಣ್ಣಕ್ಕೆ Lead Oxide ಬೆರೆಸುವುದು ಅನೇಕ ಕಡೆಗಳಲ್ಲಿ ಪತ್ತೆಯಾಗಿದ್ದು ವಿಶೇಷವಾಗಿ ಸರಿಯಾಗಿ ಪ್ಯಾಕ್ ಆಗದ ಸಾಮಾನುಗಳನ್ನು ಬಳಸುವಾಗ ಎಚ್ಚರ ಇದ್ದರೆ ಒಳ್ಳೆಯದು . ೩.ಕಲುಷಿತ ಮಣ್ಣು. ಹೆದ್ದಾರಿ ಪಕ್ಕದ, ಕಾರ್ಖಾನೆ ಹತ್ತಿರದ ತೋಟ – ಹೊಲಗ ಮಣ್ಣಿನಲ್ಲಿ ದಶಕಗಳಿಂದ ಸೀಸ ಸಂಗ್ರಹವಾಗಿದೆ .ಕ್ಯಾರೆಟ್, ಬೀಟ್ರೂಟ್, ಗೆಣಸು, ಮೂಲಂಗಿ ಮತ್ತು ಪಾಲಕ್ ಸೊಪ್ಪುಗಳು ಈ ಸೀಸವನ್ನು ಬೇಗನೆ ಹೀರುತ್ತವೆ. ಹೀಗಾಗಿ ಇವುಗಳನ್ನು ಉಪಯೋಗಿಸುವ ಮೊದಲು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಬಳಸಬೇಕು ೪. ಅಸುರಕ್ಷಿತ ಪಾತ್ರೆ:ಅಗ್ಗದ ಅಲ್ಯೂಮಿನಿಯಂ, ಕಡಿಮೆ ಗುಣಮಟ್ಟದ ಸೆರಾಮಿಕ್ ಪಾತ್ರೆಗಳ ಗ್ಲೇಜ್ ನಲ್ಲಿ ಸೀಸವಿದ್ದು, ಹುಣಸೆ ರಸ, ಮೊಸರು, ಬೇಯಿಸಿದ ಟೊಮೆಟೊ , ಹಾಗೂ ಉಪ್ಪಿನಕಾಯಿ ಇಟ್ಟಾಗ ರಾಸಾಯನಿಕ ಪ್ರಕಿಯೆಗಳು ಆಗುತ್ತದೆ. ಈ ನಿಟ್ಟಿನಲ್ಲಿ ಸ್ಟೀಲ್ ಡಬ್ಬಿಗಳು ಉತ್ತಮ ೫. ಕಾಡಿಗೆ, ಸಿಂಧೂರ ಮತ್ತು ಬಣ್ಣದ ಆಟಿಕೆ: ಮಕ್ಕಳ ಕಣ್ಣಿಗೆ ಹಾಕುವ ಕಾಡಿಗೆ, ಸಿಂಧೂರ ಮತ್ತು ಕಡಿಮೆ ಗುಣಮಟ್ಟದ ಆಟಿಕೆಗಳ ಬಣ್ಣದಲ್ಲಿ ಸೀಸವಿದೆ, ಕೈಯಿಂದ ಬಾಯಿಗೆ ಹೋಗುತ್ತದೆ. ಉತ್ತಮ ಗುಣಮಟ್ಟದನ್ನು ಆಯ್ಕೆ ಮಾಡಿ ೬.ಧೂಳು: ಹೊರಗಿನ ಮಣ್ಣು ಚಪ್ಪಲಿಯೊಂದಿಗೆ ಮನೆಗೆ ಬಂದು ನೆಲ, ಪಾತ್ರೆ, ಕೈಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಪುಟ್ಟ ಮಕ್ಕಳು ನೆಲದ ಮೇಲೆ ಆಡುವುದರಿಂದ ಸೀಸ ದೇಹಕ್ಕೆ ಹೋಗುತ್ತದೆ
ಪರಿಣಾಮಗಳು :
ಮಕ್ಕಳ ಮೆದುಳು ಬೆಳೆಯುವಾಗ ಸೀಸ ನರ ಕೋಶಗಳ ಸಂಪರ್ಕ ಕಡಿತಗೊಳಿಸುತ್ತದೆ. ಇದರಿಂದ IQ ಕಡಿಮೆಯಾಗುವುದು, ಓದುವುದರಲ್ಲಿ, ನೆನಪಿಡುವುದರಲ್ಲಿ ತೊಂದರೆ, ಗಮನ ಕೊರತೆ, ಹಠಾತ್ ಕೋಪ, ರಕ್ತಹೀನತೆ, ಹೊಟ್ಟೆ ನೋವು ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ. WHO ಪ್ರಕಾರ 3.5 µg/dL ಇದ್ದರೂ ಕಲಿಕೆಗೆ ತೊಂದರೆಯಾಗುತ್ತದೆ ದೊಡ್ಡವರಲ್ಲಿ ಅಧಿಕ ರಕ್ತದೊತ್ತಡ, ಹೃದಯಾಘಾತದ ಅಪಾಯ ಎರಡು ಪಟ್ಟು, ಮೂತ್ರಪಿಂಡ ವೈಫಲ್ಯ, ಗರ್ಭಿಣಿಯರಲ್ಲಿ ಗರ್ಭಪಾತ ಮತ್ತು ಕಡಿಮೆ ತೂಕದ ಮಗು ಜನಿಸುವುದು ಹೀಗೆ ಹತ್ತು ಹಲವಾರು ಪರಿಣಾಮವನ್ನು ಬೀರುತ್ತದೆ .ಈ ಅಪಾಯ ಪ್ರಾಣಿಗಳಿಗೂ ಸಹ ಇದೆ. ಕಾರ್ಖಾನೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಹುಲ್ಲು ತಿಂದ ದನದ ಹಾಲು, ಬಿದ್ದ ಆಹಾರ ಹೆಕ್ಕಿ ತಿಂದ ಕೋಳಿಯ ಮೊಟ್ಟೆ, ಹಂದಿ ಮಾಂಸದಲ್ಲೂ ಸೀಸ ಸೇರುತ್ತದೆ, ಅದೇ ಹಾಲನ್ನು ನಮ್ಮ ಮಕ್ಕಳು ಕುಡಿಯುತ್ತಾರೆ. ಇದು ಒಂದು ವಿಷವರ್ತುಲವಾಗಿ ರುವುದು ಆತಂಕವೇ ಸರಿ
ಪರೀಕ್ಷೆ ಮತ್ತು ತಡೆಗಟ್ಟುವ ಕ್ರಮಗಳು
ಪರೀಕ್ಷೆಗೆ ಅತ್ಯುತ್ತಮ ದಾರಿ ರಕ್ತದ ಸೀಸದ ಮಟ್ಟದ ಪರೀಕ್ಷೆ (BLL Test). ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜಿನಲ್ಲಿ ಬೆರಳಿನ ರಕ್ತದಿಂದ 3 ನಿಮಿಷದಲ್ಲಿ ಫಲಿತಾಂಶ ಬರುವ LeadCare ಪರೀಕ್ಷೆ ಲಭ್ಯವಿದೆ. ಮನೆಯಲ್ಲಿ ಮಾಡಬಹುದಾದ ಕ್ರಮಗಳೆಂದರೆ ಕಬ್ಬಿಣ, ಕ್ಯಾಲ್ಸಿಯಂ, ಹಾಲು, ಮೊಸರು, ರಾಗಿ, ಬೆಲ್ಲ, ನೆಲ್ಲಿಕಾಯಿ, ಪಪ್ಪಾಯಿ ಇವೆಲ್ಲಾ ಸೀಸದ ಹೀರುವಿಕೆ ತಡೆಯುತ್ತದೆ. ಎಲ್ಲ ತರಕಾರಿ, ಸೊಪ್ಪನ್ನು ಉಪ್ಪು-ಅರಿಶಿನ ನೀರಿನಲ್ಲಿ ನೆನೆಸಿ ಹರಿಯುವ ನೀರಿನಲ್ಲಿ ತೊಳೆಯಿರಿ, ಸಿಪ್ಪೆ ತೆಗೆಯಿರಿ. ಹುಳಿ ಆಹಾರವನ್ನು ಸ್ಟೀಲ್, ಗಾಜಿನ ಪಾತ್ರೆಯಲ್ಲಿ ಇಡಿ, Agmark, FSSAI ಇರುವ ಪ್ಯಾಕ್ ಮಸಾಲೆ ಮಾತ್ರ ಕೊಳ್ಳಿ. ಮಕ್ಕಳ ಆಟಿಕೆ ಸ್ವಚ್ಛವಾಗಿರಲಿ ಮತ್ತು ಕಾಡಿಗೆ, ಸಿಂಧೂರ, ಉತ್ತಮ ಗುಣಮಟ್ಟದಾಗಿರಲಿ
ನನ್ನ ಮಗಳ ರಕ್ತದಲ್ಲಿ ಸೀಸ ಕಂಡಾಗ ನನಗೆ ಗೊತ್ತಾಗಿದ್ದು ಇದು ನನ್ನ ಮನೆಯೊಂದರ ಕಥೆಯಲ್ಲ, 27 ಕೋಟಿ ಮನೆಗಳ ಕಥೆ ಎಂದು. ಲಕ್ಷಣ ಕಾಣುವವರೆಗೆ ಕಾಯಬೇಡಿ, ಪರೀಕ್ಷೆ ಮಾಡಿಸಿ. ಈ ಅರಿವೇ ಮೊದಲ ಔಷಧ.
ಅಕ್ಟೋಬರ್ 18-24ರ ಸಪ್ತಾಹದಲ್ಲಿ ನಿಮ್ಮ ಮಕ್ಕಳ ವೈದ್ಯರನ್ನು ಭೇಟಿ ಮಾಡಿ ರಕ್ತದ ಸೀಸದ ಪರೀಕ್ಷೆ ಬಗ್ಗೆ ಕೇಳಿ. ಇದು ದೊಡ್ಡ ಖರ್ಚಿನ ಪರೀಕ್ಷೆಯಲ್ಲ, ಆದರೆ ದೊಡ್ಡ ರಕ್ಷಣೆ.
- ಸುಪ್ರೀತಾ ಶಾಸ್ತ್ರೀ, ವಾಷಿಂಗ್ಟನ್
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
