ಅಂಕಣ – ಸಂಘ ಸೌರಭ 47
- ಎಸ್.ಎಸ್. ನರೇಂದ್ರಕುಮಾರ್, ಲೇಖಕ
ಕರ್ನಾಟಕದಲ್ಲಿ ಸಂಘಕಾರ್ಯಕ್ಕೆ ಬೀಜಾರೋಪಣ ಮಾಡಿದವರಲ್ಲಿ ಮೊದಲಿಗರಾದ ಯಾದವರಾವ್ ಜೋಶಿ ಅವರ ದೂರದೃಷ್ಟಿಯಿಂದಾಗಿ ಸೇವಾ ಆಯಾಮ ಸಂಘಕಾರ್ಯದ ಅವಿಭಾಜ್ಯ ಅಂಗವೇ ಆಗಿದೆ. ಸಂಘದ ಗುರಿ ಕೇವಲ ಶಾಖೆ ನಡೆಸುವುದಷ್ಟೇ ಅಲ್ಲ, ನಿತ್ಯಶಾಖೆಯಿಂದ ಚಾರಿತ್ರ್ಯವಂತ ವ್ಯಕ್ತಿಗಳ ನಿರ್ಮಾಣವಾಗಬೇಕು. ಈ ರೀತಿ ತಯಾರಾದ ವ್ಯಕ್ತಿಗಳು ವಿವಿಧ ರೀತಿಯ ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತನ್ಮೂಲಕ ಸಾಮಾಜಿಕ ಪರಿವರ್ತನೆಯನ್ನು ತರಬೇಕು. ಒಂದು ಗ್ರಾಮದಲ್ಲಿ ಅಥವಾ ಮೊಹಲ್ಲಾದಲ್ಲಿ ನಿತ್ಯಶಾಖೆ ಎಷ್ಟು ವರ್ಷಗಳಿಂದ ನಡೆಯುತ್ತಿದೆ ಎನ್ನುವುದಕ್ಕಿಂತ ಶಾಖೆಯ ಪ್ರಭಾವದಿಂದಾಗಿ ಸುತ್ತಮುತ್ತಲಿನ ಸಮಾಜದಲ್ಲಿ ಪರಸ್ಪರ ಸ್ನೇಹ, ಸಹಕಾರ, ಸ್ವಾವಲಂಬನೆ, ಸಾಮರಸ್ಯ ಮುಂತಾದ ಧನಾತ್ಮಕ ಅಂಶಗಳು ಎಷ್ಟರಮಟ್ಟಿಗೆ ಮೂಡಿವೆ ಎಂಬುದೇ ಅದರ ಯಶಸ್ಸಿನ ನಿಜವಾದ ಅಳತೆಗೋಲು ಎಂಬ ಅಂಶವನ್ನು ಯಾದವರಾಯರು ತಮ್ಮ ಪ್ರವಾಸದಲ್ಲಿ ತಪ್ಪದೇ ಉಲ್ಲೇಖಿಸುತ್ತಿದ್ದರು.
ಪ್ರಾರಂಭದ ದಿನಗಳಲ್ಲಿ ದಕ್ಷಿಣಕನ್ನಡದಲ್ಲಿ ಕೈಗೊಳ್ಳಲಾದ ಸೇವಾಕಾರ್ಯ ಉಲ್ಲೇಖನೀಯ. 1950ನೇ ಇಸವಿ. ಆ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ‘ನಡಾವಳಿ’ ನಡೆದಿತ್ತು. ಅದೊಂದು ಶ್ರೀ ಕ್ಷೇತ್ರದ್ದೇ ಆದ ಹಲವು ದಶಕಗಳಿಗೊಮ್ಮೆ ಅಪರೂಪವಾಗಿ ನಡೆಯುವಂತಹ ವಿಶೇಷ ಕಾರ್ಯಕ್ರಮ – ಒಂದು ರೀತಿಯ ಜಾನಪದ ಉತ್ಸವ ಎನ್ನಬಹುದು. ಹಲವು ದಿನಗಳ ಕಾಲ ನಡೆಯುವ ಇದರಲ್ಲಿ ಸಾವಿರಾರು ಯಾತ್ರಿಕರು ಪಾಲ್ಗೊಳ್ಳುತ್ತಾರೆ.
ಧರ್ಮಸ್ಥಳ ಆಗ ಬಹಳ ಸಣ್ಣ ಊರು. ಅಲ್ಲಿಗೆ ತಲುಪಲು ಸಾರಿಗೆ ಸೌಕರ್ಯವಾಗಲಿ, ಬಂದ ಯಾತ್ರಿಕರಿಗೆ ವಸತಿಗಾಗಿ ಛತ್ರಗಳಾಗಲೀ ಇದ್ದುದು ತೀರ ಕಡಿಮೆ. ಹೀಗಾಗಿ ನಡಾವಳಿಗಾಗಿ ಬರುವ ಯಾತ್ರಿಕರಿಗೆ ಸರ್ವವಿಧ ಅನುಕೂಲತೆ ಒದಗಿಸಲು ಸಾಕಷ್ಟು ಯೋಜನೆ ನಡೆಸಿ, ಹರಸಾಹಸವನ್ನೇ ನಡೆಸುವಂತಹ ಪರಿಶ್ರಮದ ಕಾರ್ಯವಾಗಿತ್ತು.
ಆಗ ಶ್ರೀ ಕ್ಷೇತ್ರದ ಧರ್ಮಾಧಿಕಾರಿಯಾಗಿದ್ದವರು ಹಿರಿಯರಾದ ಮಂಜಯ್ಯ ಹೆಗ್ಗಡೆಯವರು. ಅವರು ಯಾತ್ರಿಕರ ಸೌಕರ್ಯ, ಅನುಕೂಲತೆಗಳಿಗೆ ಸಂಬಂಧಿತ ಕೆಲಸಗಳ ನಿರ್ವಹಣೆಗಾಗಿ ಸಂಘದ ಸ್ವಯಂಸೇವಕರ ಸೇವೆಯನ್ನು ಅಪೇಕ್ಷಿಸಿದರು. ಈ ಕುರಿತು ತಮ್ಮ ಆತ್ಮೀಯರಾದ ಜಿನರಾಜ ಹೆಗ್ಡೆಯವರ ಮೂಲಕ ಜಿಲ್ಲಾ ಸಂಘಚಾಲಕ ಕಾರ್ಕಳ ಸದಾಶಿವ ರಾಯರ ಬಳಿ ಅವರು ತಮ್ಮ ಮನದ ಆಶಯವನ್ನು ನಿವೇದಿಸಿದರು. ಸಂಘಚಾಲಕರು ಅದಕ್ಕೆ ಸಹರ್ಷವಾಗಿಯೇ ಸೈ ಎಂದರು. ಅವರ ಸೂಚನೆಯಂತೆ ಜಿಲ್ಲಾ ಪ್ರಚಾರಕ ಗೋಪಾಲ ಬಾಕ್ರೆಯವರ ಮುಂದಾಳುತನದಲ್ಲಿ ಜಿಲ್ಲೆಯ ಕೆಲವು ಆಯ್ದ ಸ್ವಯಂಸೇವಕರ ತಂಡ ನಡಾವಳಿಯ ವಿವಿಧ ವ್ಯವಸ್ಥೆಗಳ ನಿರ್ವಹಣೆ ವಹಿಸಿತು.
ಜಿಲ್ಲೆಯ ಸ್ವಯಂಸೇವಕರಿಗೆ ನಿತ್ಯಶಾಖೆಗಿಂತ ಭಿನ್ನ ರೀತಿಯ ಸಾಮಾಜಿಕ ಸೇವೆಯ ಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದುದು ಅದೇ ಮೊದಲ ಬಾರಿ. ಅವರಿಗೆ ಅದರಲ್ಲಿ ಅನುಭವವಿತ್ತೆಂದಲ್ಲ. ಆದರೆ ಸಮಾಜದ ಬಗ್ಗೆ ಆತ್ಮೀಯತೆಯ ಭಾವ, ಅನುಶಾಸನದ ಸಂಸ್ಕಾರ, ಒಪ್ಪಿಸಲಾದ ಕೆಲಸ ಯಾವುದೇ ಇರಲಿ ಅದನ್ನು ಶ್ರದ್ಧೆಯಿಂದ ಮಾಡುವಂತಹ ದೃಷ್ಟಿ ಮತ್ತು ವ್ಯವಸ್ಥಾ ಕೌಶಲ್ಯ ಇವೆಲ್ಲವನ್ನೂ ನಿತ್ಯಶಾಖೆಯ ಸಂಸ್ಕಾರದ ಮೂಲಕ ಮೈಗೂಡಿಸಿಕೊಂಡಿದ್ದರು. ಹೀಗಾಗಿ ನಡಾವಳಿಯಲ್ಲಿ ಸ್ವಯಂಸೇವಕರು ನಡೆಸಿದ ಸೇವಾಕಾರ್ಯ ವ್ಯವಸ್ಥಾಪಕರ ಮತ್ತು ಯಾತ್ರಿಕರ ಮನಗಳನ್ನು ಗೆದ್ದಿತು. ದೂರದ ಊರುಗಳಿಂದ ಬಂದ ಯಾತ್ರಿಕರ ಮನದ ಮೇಲೆ ಖಾಕಿ ನಿಕ್ಕರ್ ಮತ್ತು ಬಿಳಿ ಅಂಗಿ ಧರಿಸಿದ ಸ್ವಯಂಸೇವಕರು ಸೌಜನ್ಯದಿಂದ ಮಾಡುತ್ತಿದ್ದ ಸೇವೆ ವಿಶೇಷ ಪ್ರಭಾವ ಬೀರಿತು. ಅವರಲ್ಲನೇಕರಿಗೆ ಅದುವರೆಗೆ ಸಂಘ ತಿಳಿದಿರಲಿಲ್ಲ. ಅಂತಹವರಿಗೆ ಸ್ವಯಂಸೇವಕರು ಮಾಡುತ್ತಿದ್ದ ಸೇವೆಯೇ ಸಂಘವನ್ನು ಪರಿಚಯಿಸಿತು. ಮಂಜಯ್ಯ ಹೆಗ್ಗಡೆಯವರೂ ಸ್ವಯಂಸೇವಕರ ಕಾರ್ಯಶೈಲಿಯಿಂದ ಸಂಪ್ರೀತರಾದರು. ರಾಜಕೀಯ ಕಾರಣದಿಂದಾಗಿ ಸಂಘದ ಬಗ್ಗೆ ಈ ಹಿಂದೆ ಸಮಾಜದಲ್ಲಿ ಮೂಡಿದ್ದ ತಪ್ಪು ಚಿತ್ರ, ನಡಾವಳಿಯಿಂದಾಗಿ ಒಂದಿಷ್ಟು ಬದಲಾಗಿ ಸದ್ಭಾವನೆ ಬೆಳೆಯಿತು.
ನಡಾವಳಿಯ ಕಾರ್ಯಕ್ರಮಗಳೆಲ್ಲ ಮುಗಿದು ಕೊನೆಯಲ್ಲಿ ಆಭಾರ ಸಲ್ಲಿಕೆಯ ಸಭೆ ಸೇರಿತ್ತು. ಈ ಸಂದರ್ಭದಲ್ಲಿ ವ್ಯವಸ್ಥಾಪಕರು ಮತ್ತು ಇನ್ನೂ ಕೆಲವು ಗಣ್ಯರು ನಡಾವಳಿಯಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಉಲ್ಲೇಖಿಸಿ ತುಂಬುಮನದಿಂದ ಧನ್ಯವಾದಗಳನ್ನು ತಿಳಿಸಿದರು. ಸಾಂದರ್ಭಿಕವಾಗಿ ಸ್ವಯಂಸೇವಕರ ಸೇವೆಯೂ ಪ್ರಸ್ತಾಪಿತವಾಯಿತು.
ತಾಡಿದವರೆಲ್ಲರಿಂದಲೂ ಬಿಚ್ಚುಮನದ ಪ್ರಶಂಸೆ ಕೇಳಿಬಂದುದು ಸಹಜವೇ. ಆದರೆ ನಡಾವಳಿಯಲ್ಲಿ ಪ್ರಬಂಧಕರಾಗಿ ದುಡಿದಿದ್ದ ಯಾವ ಸ್ವಯಂಸೇವಕರೂ ಅಂದಿನ ಸಭೆಯಲ್ಲಿ ಹಾಜರಿರಲಿಲ್ಲ. ಆಗ ಶಾಖೆಯ ಸಮಯವಾಗಿದ್ದುದರಿಂದ ಅವರೆಲ್ಲರೂ ಸಂಘಸ್ಥಾನದಲ್ಲಿದ್ದರು. ಸಭೆಯಲ್ಲಿದ್ದವರಿಗೆ ಇದೂ ಒಂದು ಆಶ್ಚರ್ಯದ ಸಂಗತಿಯೇ. ಸ್ವಯಂಸೇವಕರು ನಿಷ್ಠೆಯಿಂದ ಕೆಲಸ ಮಾಡುವವರಷ್ಟೇ ಅಲ್ಲ, ಸ್ವಂತದ ಬಗ್ಗೆ ಹೊಗಳಿಕೆಯನ್ನು ಬಯಸುವವರೂ ಅಲ್ಲ ಎಂಬುದು ಅವರೆಲ್ಲರಿಗೂ ಅನುಭವವಾಯಿತು.
