ನವದೆಹಲಿ / ಅಯೋಧ್ಯೆ: ಮೇ 2025ರ ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ನಡೆಸಿದ ‘ಆಪರೇಷನ್ ಸಿಂದೂರ್’ ವಾಯುದಾಳಿಯ ನೇತೃತ್ವ ವಹಿಸಿದ್ದ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮಮಂದಿರದ ಪ್ರಥಮ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕ ಮಾಡಿದೆ.
2025ರ ಮೇ 7ರಂದು ಭಾರತೀಯ ಯುದ್ಧ ವಿಮಾನಗಳು ಗಡಿಯಾಚೆಗಿನ 9 ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿದಾಗ, ಆ ಇಡೀ ಕಾರ್ಯಾಚರಣೆಯ ನೇತೃತ್ವವನ್ನು ವಾಯುಪಡೆಯ ವೆಸ್ಟರ್ನ್ ಏರ್ ಕಮಾಂಡ್ ವಹಿಸಿಕೊಂಡಿತ್ತು. ಆ ಸಮಯದಲ್ಲಿ ಈ ಕಮಾಂಡ್ನ ಮುಖ್ಯಸ್ಥರಾಗಿದ್ದ ಜಿತೇಂದ್ರ ಮಿಶ್ರಾ ಅವರ ಮಾರ್ಗದರ್ಶನದಲ್ಲೇ ಪ್ರತಿಯೊಂದು ಯುದ್ಧ ವಿಮಾನವೂ ಕಾರ್ಯಾಚರಣೆಗಿಳಿದಿತ್ತು. ಮೇ 7 ರಿಂದ ಮೇ 10 ರವರೆಗಿನ ನಾಲ್ಕು ದಿನಗಳ ತೀವ್ರ ಕಾರ್ಯಾಚರಣೆಯ ವೇಳೆ, ಪಾಕಿಸ್ತಾನದ ಗಡಿಗೆ ಎದುರಾಗಿ ನಿಂತಿದ್ದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ಸುಮಾರು 45,000 ವಾಯು ಯೋಧರನ್ನು ಜಿತೇಂದ್ರ ಮಿಶ್ರಾ ಮುನ್ನಡೆಸಿದ್ದರು.
ಈ ವಿಶಿಷ್ಟ ಮತ್ತು ಅತ್ಯುನ್ನತ ಯೋಧ ಸೇವೆಗಾಗಿ ಅವರಿಗೆ ದೇಶದ ಅಪರೂಪದ ಯುದ್ಧಕಾಲೀನ ಗೌರವವಾದ ‘ಸರ್ವೋತ್ತಮ ಯುದ್ಧ ಸೇವಾ ಪದಕ’ (SYSM) ನೀಡಿ ಗೌರವಿಸಲಾಗಿತ್ತು. 1980 ಜನವರಿ 26 ರಂದು ಪ್ರಾರಂಭಗೊಂಡ ಈ ಪದಕವನ್ನು ಯುದ್ಧದ ಸಮಯದಲ್ಲಿ ಅತ್ಯುನ್ನತ ಕಾರ್ಯಾಚರಣೆಯ ಜವಾಬ್ದಾರಿ ವಹಿಸಿ, ಅತ್ಯಸಾಧಾರಣ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಮಾತ್ರ ನೀಡಲಾಗುತ್ತದೆ. ಕಳೆದ 46 ವರ್ಷಗಳಲ್ಲಿ ಈ ಪದಕವನ್ನು ಕೇವಲ 10 ಬಾರಿಯಷ್ಟೇ ನೀಡಲಾಗಿದ್ದು, ಅದರಲ್ಲಿ 6 ಪದಕಗಳನ್ನು ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಕಮಾಂಡರ್ಗಳಿಗೆ 2025ರ ಆಗಸ್ಟ್ 15 ರಂದು ರಾಷ್ಟ್ರಪತಿಗಳು ಪ್ರದಾನ ಮಾಡಿದ್ದರು.
ಬೃಹತ್ ಸವಾಲಿಗೆ ಸಜ್ಜಾದ ಮಾಜಿ ಸೇನಾಧಿಕಾರಿ:
2024ರ ಜನವರಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯಾದ ನಂತರ ಅಯೋಧ್ಯೆಯು ಜಗತ್ತಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಿದೆ. ಪ್ರತಿದಿನ ಹತ್ತಾರು ಸಾವಿರ ಭಕ್ತರು ಮಂದಿರಕ್ಕೆ ಆಗಮಿಸುತ್ತಿದ್ದು, ರಾಮನವಮಿಯಂತಹ ವಿಶೇಷ ದಿನಗಳಲ್ಲಿ ಈ ಸಂಖ್ಯೆ ಲಕ್ಷ ದಾಟುತ್ತದೆ. ಇಷ್ಟೊಂದು ಬೃಹತ್ ಸಂಖ್ಯೆಯ ಭಕ್ತಾದಿಗಳ ನಿರ್ವಹಣೆ, ರಾಜ್ಯ ಹಾಗೂ ಕೇಂದ್ರ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ, ಕೋಟ್ಯಂತರ ರೂಪಾಯಿ ಕಾಣಿಕೆಯ ಪಾರದರ್ಶಕ ನಿರ್ವಹಣೆ ಮತ್ತು ನಿರಂತರವಾಗಿ ಬೆಳೆಯುತ್ತಿರುವ ಮಂದಿರ ಸಂಕೀರ್ಣದ ಮೇಲ್ವಿಚಾರಣೆಯನ್ನು ನಿತ್ಯವೂ ಯಾವುದೇ ಅಡೆತಡೆಯಿಲ್ಲದೆ ನಿರ್ವಹಿಸುವುದು ಒಂದು ಬೃಹತ್ ಸವಾಲಾಗಿದೆ.
ಈ ಹಿನ್ನೆಲೆಯಲ್ಲಿ ಟ್ರಸ್ಟ್ ಸಿಇಒ ಹುದ್ದೆಯನ್ನು ಸೃಷ್ಟಿಸಿತ್ತು. ಈ ಹುದ್ದೆಗಾಗಿ ಸಲ್ಲಿಕೆಯಾಗಿದ್ದ 5,585 ಅರ್ಜಿಗಳನ್ನು ತಾಂತ್ರಿಕ ಸಾಮರ್ಥ್ಯ, ಕೃತಕ ಬುದ್ಧಿಮತ್ತೆ (AI) ಮತ್ತು ವೃತ್ತಿಪರ ಪರಿಶೀಲನೆಗಳ ಮೂಲಕ ಹಲವು ಹಂತಗಳಲ್ಲಿ ಪರಿಶೀಲಿಸಿ, ಅಂತಿಮವಾಗಿ ಮೂರು ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು.
ಯುದ್ಧಕಾಲದಲ್ಲಿ ನಿರ್ಧಾರ ತಳೆಯುವ ಕ್ಷಮತೆ, ಸಂಪನ್ಮೂಲಗಳ ನಿರ್ವಹಣೆ ಮತ್ತು ಬೃಹತ್ ಸಂಸ್ಥೆಯನ್ನು ಒತ್ತಡದ ನಡುವೆಯೂ ಯಶಸ್ವಿಯಾಗಿ ಮುನ್ನಡೆಸಿದ ಜಿತೇಂದ್ರ ಮಿಶ್ರಾ ಅವರ ಸುದೀರ್ಘ ಅನುಭವವನ್ನು ಪರಿಗಣಿಸಿ, ಟ್ರಸ್ಟ್ ಅವರನ್ನು ಈ ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡಿದೆ.
ಸಾಮಾನ್ಯವಾಗಿ ಪದಕಗಳು ಸೈನಿಕನ ನಿವೃತ್ತಿ ಅಥವಾ ಸೇವೆಯ ಮುಕ್ತಾಯದ ಸಂಕೇತವಾಗಿರುತ್ತವೆ, ಆದರೆ ಜಿತೇಂದ್ರ ಮಿಶ್ರಾ ವಿಷಯದಲ್ಲಿ ‘ಸರ್ವೋತ್ತಮ ಯುದ್ಧ ಸೇವಾ ಪದಕ’ವು ಅಯೋಧ್ಯೆಯಲ್ಲಿ ಅವರ ಹೊಸ ಅಧ್ಯಾಯಕ್ಕೆ ನಾಂದಿಯಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
