‘ಭಾವಯಾಮಿ ಗೋಪಾಲಬಾಲ…’, ‘ಮಾಧವ ಮಾಧವ ದೇವಾ ಕೃಷ್ಣಾ…’, ‘ಯಾದವ ಕೃಷ್ಣ… ಯದುಕುಲ ಕೃಷ್ಣ…’ ಎಂಬ ಕೀರ್ತನೆಗಳನ್ನು ಕೇಳುತ್ತಿದ್ದಂತೆ ಶ್ರೀಕೃಷ್ಣನ ದೈವಿಕ ಸ್ವರೂಪವು ಕಣ್ಣಮುಂದೆ ಸುಳಿಯುತ್ತದೆ. ಪುರಂದರದಾಸರ ‘ಜಗದೋದ್ಧಾರನ ಆಡಿಸಿದಳೆಶೋದಾ…’ ಎಂಬ ಕೀರ್ತನೆಯನ್ನು ಆಲಿಸಿದಾಗ ಆ ಮುದ್ದುಮುಖದ ಬಾಲಕೃಷ್ಣನ ಬಾಲ್ಯ ಲೀಲೆಗಳು ನೆನಪಿಗೆ ಬರುತ್ತವೆ.
ಭಕ್ತವತ್ಸಲನಾದ ಕೃಷ್ಣ ಹುಟ್ಟಿದ್ದೇ ಕಾರಾಗೃಹದಲ್ಲಿ. ‘ಹುಟ್ಟಿದ ಮಕ್ಕಳನ್ನೆಲ್ಲ ಕಂಸ ಕೊಲ್ಲುತ್ತಿದ್ದಾನೆ; ಒಂದು ವೇಳೆ ಈ ಮಗು ಬದುಕಿದರೂ ಆಟವಾಡಲು ಬಣ್ಣದ ಆಟಿಕೆಗಳನ್ನು ತಂದುಕೊಡಲು ಸಾಧ್ಯವೇ?’ ಎಂದು ತಾಯಿ ದೇವಕಿ ಅದೆಷ್ಟು ನೊಂದಿರಬಹುದು! ಅದಕ್ಕಾಗಿಯೇ ಪರಮಾತ್ಮನು ವೈಕುಂಠದಿಂದಲೇ ಸುದರ್ಶನ ಚಕ್ರ, ಶಂಖ, ಗದೆಗಳನ್ನು ತನ್ನ ಲೀಲೆಯ ಭಾಗವಾಗಿ ತಂದನೋ ಎನಿಸುತ್ತದೆ. ಭಗವಂತನ ಈ ಬಾಲ್ಯ ಲೀಲೆಗಳು ಕೆಲವು ಭಕ್ತಿಯ ಮಹತಿಯನ್ನು ಸಾರಿದರೆ, ಇನ್ನು ಕೆಲವು ಶಾಪವಿಮೋಚನೆಗೆ ಹಾಗೂ ದುಷ್ಟಶಿಕ್ಷಣಕ್ಕೆ ಕಾರಣವಾದವು.
ಯಶೋದೆಯ ಪ್ರೇಮಪಾಶ ಮತ್ತು ‘ದಾಮೋದರ’
‘ಗೋಪಿ ಕೇಳು ನಿನ್ನ ಮಗ ಜಾರ ಚೋರ ಬೆಣ್ಣೆ ಕದ್ದ…’ ಎಂದು ಗೋಪಿಕೆಯರು ತರುವ ದೂರನ್ನು ಕೇಳಲಾರದೆ, “ಅವನನ್ನು ಬೆಣ್ಣೆ ಸಮೇತ ಹಿಡಿದು ತನ್ನಿ” ಎಂದು ಯಶೋದೆ ಹೇಳುತ್ತಾಳೆ. ಅಂತೆಯೇ ಬೆಣ್ಣೆಕಳ್ಳ ಕೃಷ್ಣನನ್ನು ಹಿಡಿದ ಗೋಪಿಕೆಯರು “ನೋಡು ನಿನ್ನ ಮಗನನ್ನು ಹಿಡಿದು ತಂದಿದ್ದೇವೆ” ಎನ್ನುತ್ತಾರೆ. ಆದರೆ ಗೋಪಿಯರ ಕೈಯಲ್ಲಿ ಕೃಷ್ಣನಿರುವುದಿಲ್ಲ! ಯಶೋದೆ ಮಗನನ್ನು ಕರೆದಾಗ, ತನ್ನ ಐದೂ ಬೆರಳುಗಳನ್ನು ಬಾಯಲ್ಲಿ ತುರುಕಿಕೊಂಡು, ಮೊಣಕೈವರೆಗೂ ಮೊಸರನ್ನು ಹರಿಸಿಕೊಳ್ಳುತ್ತಾ “ಅಮ್ಮಾ…” ಎಂದು ಬಂದ ಕೃಷ್ಣನನ್ನು ಕಂಡು, “ನಿನ್ನ ಮಗ ಮಾಯಾಕಾರ!” ಎಂದು ಗೋಪಿಯರು ಬೆರಗಾಗುತ್ತಾರೆ. ಅಂದರೆ, ಜಗದೊಡೆಯನು ಸದಾ ತನ್ನ ಭಕ್ತರ ಹೃದಯದಲ್ಲಿ ವಾಸಿಸುವ ಭಕ್ತವತ್ಸಲ ಎಂದಾಯಿತಲ್ಲವೇ?
ಮತ್ತೊಮ್ಮೆ, ಯಶೋದೆ ಕೃಷ್ಣನಿಗೆ ಹಾಲೂಡಿಸುತ್ತಿದ್ದಾಗ ಒಲೆಯ ಮೇಲಿನ ಹಾಲು ಉಕ್ಕಿ ಹರಿಯುತ್ತದೆ. ಅದನ್ನು ಕೆಳಗಿಳಿಸಲು ಯಶೋದೆ ಹೋದಾಗ, ಕೃಷ್ಣನು ಹಾಲು-ಮೊಸರಿನ ಗಡಿಗೆಗಳನ್ನೆಲ್ಲ ಒಡೆದು ಬೆಣ್ಣೆ ತಿನ್ನಲು ತೊಡಗುತ್ತಾನೆ. ಇದನ್ನು ಕಂಡ ಯಶೋದೆ ಕೋಪಗೊಂಡು ಅವನನ್ನು ಮರಕ್ಕೆ ಕಟ್ಟಲು ಹಗ್ಗ ತರುತ್ತಾಳೆ. ಆದರೆ ಎಷ್ಟೇ ಹಗ್ಗಗಳನ್ನು ಜೋಡಿಸಿದರೂ ಅದು ‘ಎರಡು ಅಂಗುಲ’ ಕಡಿಮೆಯೇ ಬೀಳುತ್ತದೆ! ಅಮ್ಮನ ಆಯಾಸವನ್ನು ನೋಡಲಾರದ ಪರಮಾತ್ಮ, ಸ್ವಯಂ ಭಕ್ತಿಯ ಬಂಧನಕ್ಕೆ ಸಿಲುಕಲು ನಿರ್ಧರಿಸಿ ಒರಳುಕಲ್ಲಿಗೆ ಬಂಧಿತನಾಗುತ್ತಾನೆ. (ಸಂಸ್ಕೃತದಲ್ಲಿ ‘ದಾಮ’ ಎಂದರೆ ಹಗ್ಗ, ‘ಉದರ’ ಎಂದರೆ ಹೊಟ್ಟೆ. ಹೀಗಾಗಿ ಆತನಿಗೆ ‘ದಾಮೋದರ’ ಎಂಬ ಹೆಸರು ಬಂತು). ಅರ್ಥಾತ್, ಯಾವ ಪಾಶಕ್ಕೂ ಸಿಗದ ಪರಮಾತ್ಮ ಕೇವಲ ಪ್ರೇಮಪಾಶಕ್ಕೆ ಸಿಲುಕುತ್ತಾನೆ.
ಶಾಪವಿಮೋಚನೆ ಮತ್ತು ದುಷ್ಟ ಸಂಹಾರ
ಯಶೋದೆ ಕಟ್ಟಿದ ಒರಳುಕಲ್ಲಿನ ಹತ್ತಿರವೇ ಜೋಡಿ ಅತ್ತಿ ಮರಗಳಿರುತ್ತವೆ (ಯಮಲಾರ್ಜುನ). ದುರಹಂಕಾರದ ಕಾರಣಕ್ಕೆ ನಾರದರ ಶಾಪಕ್ಕೆ ತುತ್ತಾಗಿ ಮರಗಳಾಗಿ ಹುಟ್ಟಿದ್ದ ಕುಬೇರನ ಮಕ್ಕಳಾದ ನಳಕೂಬರ ಮತ್ತು ಮಣಿಗ್ರೀವರಿಗೆ ಕೃಷ್ಣನು ಆ ಒರಳುಕಲ್ಲಿನಿಂದ ಮರಗಳನ್ನು ಉರುಳಿಸಿ ಶಾಪವಿಮೋಚನೆ ನೀಡುತ್ತಾನೆ. ಈ ರೀತಿ ಗಂಧರ್ವರನ್ನು ಉದ್ಧರಿಸಿದ ಕೃಷ್ಣನನ್ನು ಶ್ರೀತ್ಯಾಗರಾಜರು ತಮ್ಮ ಕೀರ್ತನೆಯಲ್ಲಿ ‘ಗಾನಮೂರ್ತೆ… ಶ್ರೀ ಕೃಷ್ಣ ವೇಣುಗಾನ ಲೋಲ ತ್ರಿಭುವನ ಪಾಲ ಪಾಹಿ…’ ಎಂದು ನಾದದೇವತೆಗೆ ಹೋಲಿಸಿ ಭಜಿಸಿದ್ದಾರೆ.
‘ಆಡಿ ಪೋಗೋಣ ಬಾರೋ ರಂಗ ಕೂಡಿ ಯಮುನಾ ತೀರದಲ್ಲಿ…’ ಎಂಬಂತೆ, ಯಮುನಾ ನದಿಯ ತೀರದಲ್ಲಿ ಗೆಳೆಯರೊಡನೆ ಚೆಂಡಾಟ ಆಡುತ್ತಾ, ಚೆಂಡನ್ನು ನದಿಗೆ ಬೀಳಿಸುತ್ತಾನೆ. ಅದನ್ನು ತರುವ ನೆಪದಲ್ಲಿ ಆಳದಲ್ಲಿದ್ದ ಕಾಳಿಂಗನೆಂಬ ವಿಷಸರ್ಪದ ಹೆಡೆಯೇರಿ ನರ್ತಿಸುತ್ತಾನೆ. “ಕಾಳಿಂಗ ಮರ್ದನ ರಂಗಗೆ ಹೇಳೇ ಗೋಪಮ್ಮ ಬುದ್ಧಿ…” ಎಂದು ಊರವರೆಲ್ಲ ಓಡಿಬರುವಷ್ಟರಲ್ಲಿ ಕೃಷ್ಣನು ಕಾಳಿಂಗನ ಹೆಡೆಯ ಮೇಲೆ ದಿವ್ಯ ನೃತ್ಯ ಮಾಡುತ್ತಾ ಅಭಯ ನೀಡುತ್ತಾನೆ.
ಕಂಸನ ಸೂಚನೆಯಂತೆ ಬಂದ ಕೇಶಿ ಎಂಬ ಕುದುರೆ ರಕ್ಕಸನನ್ನು ಸಂಹರಿಸಿ ‘ಕೇಶವ’ ಎನಿಸಿಕೊಳ್ಳುತ್ತಾನೆ. ನಂತರ ಕೋಣನ ರೂಪದಲ್ಲಿ ಬಂದ ಅರಿಷ್ಟಾಸುರನ ಕೊಂಬುಗಳನ್ನು ಹಿಡಿದು ಸದೆಬಡಿಯುತ್ತಾನೆ. ಮೂಲತಃ ಬೃಹಸ್ಪತಿಯ ಶಿಷ್ಯನಾಗಿದ್ದು, ಗುರುವಿಗೆ ಅಗೌರವ ತೋರಿ ಶಾಪಗ್ರಸ್ಥನಾಗಿದ್ದ ಅರಿಷ್ಟಾಸುರನಿಗೆ ಕೃಷ್ಣನು ಮುಕ್ತಿ ನೀಡುತ್ತಾನೆ. ಗುರುವಿನ ಅವಕೃಪೆಗೆ ಪಾತ್ರರಾದರೆ ಎಂಥ ದುರ್ಗತಿ ಬರುತ್ತದೆ ಎಂಬುದಕ್ಕೆ ಈ ಲೀಲೆ ಸಾಕ್ಷಿ.
ಗೋವರ್ಧನ ಗಿರಿಧಾರಿ ಮತ್ತು ಚಪ್ಪನ್ ಭೋಗ್
ವೃಂದಾವನದಲ್ಲಿ ಅನಾದಿಕಾಲದಿಂದಲೂ ನಡೆಯುತ್ತಿದ್ದ ಇಂದ್ರಪೂಜೆಯ ಬದಲಾಗಿ, ನಮಗೆ ಅನ್ನ-ಆಸರೆ ನೀಡುವ ಗೋವುಗಳು ಮತ್ತು ಪ್ರಕೃತಿಯನ್ನು ಪೂಜಿಸೋಣ ಎಂದು ಕೃಷ್ಣ ಜನರಿಗೆ ತಿಳಿಸುತ್ತಾನೆ. ಇದರಿಂದ ಕುಪಿತಗೊಂಡ ಇಂದ್ರನು ಭೀಕರ ಮಳೆ-ಬಿರುಗಾಳಿಯನ್ನು ಸುರಿಸುತ್ತಾನೆ. ಜನರು ಮತ್ತು ದನಕರುಗಳು ದಿಕ್ಕುತೋರದೆ ತಲ್ಲಣಿಸಿದಾಗ, ಕೃಷ್ಣನು ಗೋವರ್ಧನ ಪರ್ವತವನ್ನು ತನ್ನ ಕಿರುಬೆರಳಿನಲ್ಲಿ ಸತತ ಏಳು ದಿನಗಳ ಕಾಲ ಎತ್ತಿ ಹಿಡಿದು ರಕ್ಷಿಸುತ್ತಾನೆ. ಅಹಂಕಾರ ಮುರಿದ ಇಂದ್ರನು ಕೃಷ್ಣನ ಕ್ಷಮೆ ಯಾಚಿಸುತ್ತಾನೆ.
ಏಳು ದಿನಗಳ ಕಾಲ ಕೃಷ್ಣನು ಆಹಾರವಿಲ್ಲದೆ ನಮಗಾಗಿ ಬೆಟ್ಟವನ್ನು ಎತ್ತಿ ಹಿಡಿದಿದ್ದನೆಂದು ಭಕ್ತಿಪೂರ್ವಕವಾಗಿ ವೃಂದಾವನದ ಜನರು, ಒಂದು ದಿನಕ್ಕೆ ೮ ಬಗೆಯ ಭಕ್ಷ್ಯಗಳಂತೆ 7 ದಿನಗಳಿಗೆ ಒಟ್ಟು 56 (ಅಷ್ಟಪ್ರಹರ) ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ ಅರ್ಪಿಸುತ್ತಾರೆ. ಇದೇ ಸಂಪ್ರದಾಯ ಇಂದಿಗೂ ‘ಚಪ್ಪನ್ ಭೋಗ್’ ಆಗಿ ಪ್ರಸಿದ್ಧಿಯಾಗಿದೆ.
ಕಾರುಣ್ಯಮೂರ್ತಿ ಕೃಷ್ಣ ಎಂಬ ಹೆಸರೇ ಒಂದು ಸುಂದರ ಅನುಭೂತಿ. ಅದಕ್ಕಾಗಿಯೇ ದಾಸರು ‘ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ…’ ಎಂದಿದ್ದಾರೆ. ಭವಬಂಧನದಲ್ಲಿ ಸಿಲುಕಿ ನಲುಗುತ್ತಿರುವ ನಾವು, ‘ಕಂಡು ಕಂಡು ಎನ್ನ ಕೈ ಬಿಡುವರೇ ಕೃಷ್ಣಾ…’ ಎಂದು ಆ ಪರಮಾತ್ಮನಿಗೆ ಶರಣಾಗೋಣ.
ಕೃಷ್ಣಂ ವಂದೇ ಜಗದ್ಗುರುಂ!
- ಸುಮಾ ವೀಣಾ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
