ಬೆಂಗಳೂರು: “ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರನಿರ್ಮಾಣ ಮಾಡುವ ಕಾರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದೊಂದು ಶತಮಾನದಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ” ಎಂದು ರಾ.ಸ್ವ.ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಎಂ.ಜಯಪ್ರಕಾಶ್ ನುಡಿದರು.
ಜನಸೇವಾ ವಿದ್ಯಾಕೇಂದ್ರದಲ್ಲಿ ಮೇ 22ರಂದು ನಡೆದ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯಕರ್ತ ವಿಕಾಸ ವರ್ಗ ಪ್ರಥಮ (ಸಾಮಾನ್ಯ)ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಜಾಗೃತ ಸಮಾಜದ ಮೂಲಕ ನಡೆಯುವ ಅಭಿವೃದ್ಧಿ ಮಾತ್ರ ದೇಶದಲ್ಲಿ ಶಾಶ್ವತವಾಗಿರಲು ಸಾಧ್ಯ. ಸಂಘವು ತನ್ನ ಜನ್ಮ ಶತಾಬ್ದಿಯ ಹೊಸ್ತಿಲಲ್ಲಿ ನಿಂತಿದೆ. ದೇಶಾದ್ಯಂತ ಪ್ರತಿವರ್ಷ ಸುಮಾರು 22 ಸಾವಿರಕ್ಕೂ ಹೆಚ್ಚು ಜನರು ಸಂಘದ ವಿವಿಧ ಶಿಕ್ಷಣ ವರ್ಗಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಕಾರ್ಯದ ಉದ್ದೇಶ ಕೇವಲ ಸಂಘಟನೆಯ ಬೆಳವಣಿಗೆಯಲ್ಲದೇ, ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ ಎಂದರು.
ನಿತ್ಯ ಶಾಖೆಯ ಒಂದು ಗಂಟೆಯ ಸಾಧನೆಯ ಮೂಲಕ ಸ್ವಯಂಸೇವಕರಲ್ಲಿ ಸಂಸ್ಕಾರ ಮೂಡಿಸಲಾಗುತ್ತದೆ. ಸಂಘವು ನೇರವಾಗಿ ಎಲ್ಲವನ್ನೂ ಮಾಡುವುದಿಲ್ಲ, ಬದಲಿಗೆ ಸಂಘದಿಂದ ನಿರ್ಮಾಣವಾದ ಸ್ವಯಂಸೇವಕನು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಸಕ್ರಿಯನಾಗಿ ದೇಶದ ಹಿತಕ್ಕಾಗಿ ಎಲ್ಲವನ್ನೂ ಮಾಡುತ್ತಾನೆ. ಈ ಶಿಬಿರಗಳು ಸ್ವಯಂಸೇವಕರಲ್ಲಿ ಶಾರೀರಿಕ, ಮಾನಸಿಕ ಹಾಗೂ ಬೌದ್ಧಿಕ ಸದೃಢತೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು.
ನಿವೃತ ಸೈನ್ಯಾಧಿಕಾರಿ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಮಾತನಾಡಿ, ಸ್ವಯಂಸೇವಕರು ಕಳೆದ 21 ದಿನಗಳ ಅವಧಿಯಲ್ಲಿ ಕಲಿತಿರುವ ಮೌಲ್ಯಗಳು ಹಾಗೂ ಸಂಸ್ಕಾರಗಳನ್ನು ಕೇವಲ ತಮಗಷ್ಟೇ ಸೀಮಿತಗೊಳಿಸಿಕೊಳ್ಳಬಾರದು. ಇದನ್ನು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಬೇಕು. ಈ ಉತ್ತಮ ವಿಚಾರಗಳನ್ನು ಸಮಾಜದ ಕಟ್ಟಕಡೆಯ ಮೂಲೆಗೂ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ದೇಶದಲ್ಲಿ ಉತ್ತಮ ಪ್ರಜೆಗಳಿದ್ದಾಗ ಮಾತ್ರ ಭಾರತ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಇತಿಹಾಸದಲ್ಲಿ ನಮ್ಮ ದೇಶದ ಮೇಲೆ ಅನೇಕರು ದಾಳಿಗಳನ್ನು ಮಾಡಿದ್ದರೂ, ನಮ್ಮ ದೇಶ ತನ್ನ ಭವ್ಯ ನಾಗರಿಕತೆ ಮತ್ತು ಸಂಸ್ಕಾರವನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡುಬಂದಿದೆ. ಮಾನವೀಯ ಮೌಲ್ಯಗಳಿದ್ದರೆ ದೇಶ ಮತ್ತಷ್ಟು ಉತ್ತಮವಾಗಿ ಮುನ್ನಡೆಯುತ್ತದೆ. ಇಂತಹ ಮೌಲ್ಯಗಳನ್ನು ಬಿತ್ತುವ ವರ್ಗಗಳು (ಶಿಬಿರಗಳು) ಇಂದಿನ ದೇಶಕ್ಕೆ ಅತ್ಯಂತ ಅಗತ್ಯವಾಗಿವೆ. ನಮ್ಮ ದೇಶ ನಿಜವಾದ ವಿಕಸಿತ ಭಾರತವಾಗಬೇಕಾದರೆ ಮಹಿಳೆಯರು ಮುಂಚೂಣಿಗೆ ಬರಬೇಕು. ಮಹಿಳೆಯರನ್ನು ಜತೆಗೂಡಿಸಿಕೊಂಡು ಸಮಾಜದ ಕೆಲಸಗಳನ್ನು ಮಾಡಬೇಕೆಂದು ಕರೆ ನೀಡಿದರು. ವರ್ಗಾಧಿಕಾರಿ ಗಿರೀಶ್ ಹೆಬ್ಬಾರ್, ಅಖಿಲ ಭಾರತೀಯ ಅಧಿಕಾರಿಗಳು ಹಾಗೂ ಹಿರಿಯ ಸ್ವಯಂಸೇವಕರು ಉಪಸ್ಥಿತರಿದ್ದರು.
