ನುಡಿ ನಮನ
- ಶೋಭಾ ನಂದ, ಲೇಖಕಿ
ರಾಷ್ಟ್ರ ಸೇವಿಕಾ ಸಮಿತಿಯ ಪೂರ್ವ ಅಖಿಲ ಭಾರತ ಸಹ ಕಾರ್ಯವಾಹಿಕಾ ಆಗಿದ್ದ ರುಕ್ಮಿಣಿ ಅಕ್ಕನವರು ಮೇ 21ರ ರಾತ್ರಿ 8.50ಕ್ಕೆ ತಮ್ಮ ಸ್ವಗೃಹದಲ್ಲಿ ನಿಧನರಾದರೂ ಅವರು ಬೆಳಗಿದ ದೀಪ ಮಾತ್ರ ಸದಾ ಪ್ರಜ್ವಲಿಸುತ್ತಾ ನಮ್ಮೆಲ್ಲರಿಗೂ ದಾರಿದೀಪವಾಗಿದೆ.
1929ರ ಮಾರ್ಚ್ 14ರಂದು ಕೃಷ್ಣಪ್ಪ – ಸುಂದರಮ್ಮ ದಂಪತಿಯ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದ ಕೃ. ರುಕ್ಮಿಣಿ ಅಕ್ಕನವರಿಗೆ ಐವರು ಸಹೋದರರು (ಒಬ್ಬರು ಅಣ್ಣ, ನಾಲ್ವರು ತಮ್ಮಂದಿರು). ಅವರ ಮನೆ ಆಧ್ಯಾತ್ಮಿಕವಾಗಿ, ಸಾಮಾಜಿಕವಾಗಿ, ರಾಷ್ಟ್ರದ ಅಭಿವೃದ್ದಿಯ ಬಗ್ಗೆ ಸದಾ ಚಿಂತಿಸುತ್ತಾ ಕಾರ್ಯತತ್ಪರವಾಗಿದ್ದರಿಂದ ಸಹಜವಾಗಿಯೇ ಅವರನ್ನು ದೇಶ ಭಕ್ತರನ್ನಾಗಿ ರೂಪಿಸಿರುವುದರಲ್ಲಿ ಸಂಶಯವಿಲ್ಲ.
ಒಮ್ಮೆ ನಮ್ಮ ಸಮಿತಿಯ ಕಾರ್ಯಕರ್ತೆ ರುಕ್ಮಿಣಿ ಅಕ್ಕನವರಿಗೆ “ನೀವು ಎಲ್ಲಾ ಸಂದರ್ಭದಲ್ಲೂ ಸಮಾಧಾನದಿಂದ ಮಾತನಾಡುತ್ತೀರಾ, ಅದು ಹೇಗೆ ಸಾಧ್ಯ?” ಎಂದು ಪ್ರಶ್ನೆ ಕೇಳಿದರು. ಅದಕ್ಕೆ ರುಕ್ಮಿಣಿ ಅಕ್ಕನವರ ಉತ್ತರ ಹೀಗಿತ್ತು –“ನಾವೆಲ್ಲರೂ ಶ್ರೇಷ್ಠ ಧ್ಯೇಯ ಅಂದರೆ ಉನ್ನತ ಧ್ಯೇಯವನ್ನು ಸ್ವೀಕಾರ ಮಾಡಿದ್ದೇವೆ. ಆದ್ದರಿಂದ ನಾನು ಕ್ಷುಲ್ಲಕ ವಿಷಯಗಳ ಬಗ್ಗೆ ಗಮನ ಕೊಡುವುದಿಲ್ಲ. ಹಾಗಾಗಿ ಸದಾ ಸಂತೋಷದಿಂದಿರುತ್ತೇನೆ. ಇದರಿಂದ ಒಂದು ಮಹಿಳಾ ಸಂಘಟನೆಯ ಕಾರ್ಯಕರ್ತೆಯಾಗಿ ನಮ್ಮ ದೃಷ್ಟಿಕೋನ ಹೇಗಿರಬೇಕೆಂಬುದು ತಿಳಿಯುತ್ತದೆ”.
ರುಕ್ಮಿಣಿ ಅಕ್ಕನವರು ಎಲ್ಲಾ ಕ್ಷೇತ್ರಗಳಲ್ಲೂ ಅಗ್ರಗಣ್ಯರಾಗಿದ್ದರು. ಅಡುಗೆ, ಕಸೂತಿ, ರಂಗೋಲಿ, ಗಣಿತ, ಮತ್ತು ಶಿಕ್ಷಕ ವೃತ್ತಿ ಎಲ್ಲದರಲ್ಲೂ ಪರಿಪೂರ್ಣತೆಗೆ ಮಹತ್ವ ನೀಡುತ್ತಿದ್ದರು. ಬಹುಮುಖ ಪ್ರತಿಭಾವಂತರಾಗಿ, ಮಾದರಿ ಶಿಕ್ಷಕಿಯಾಗಿ, ಸಮಾಜ ಕಾರ್ಯದ ಪ್ರೇರಕ ಶಕ್ತಿಯಾಗಿ, ಪ್ರಬುದ್ಧ ವ್ಯಕ್ತಿತ್ವವನ್ನು ಹೊಂದಿದವರಾಗಿ, ನಿರಂತರ ಮಾರ್ಗದರ್ಶನ ಮತ್ತು ಎಲ್ಲರ ಬಗ್ಗೆ ಕಾಳಜಿ ವಹಿಸುತ್ತಾ ದೇಶ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿ ಇಟ್ಟವರು ಅವರು.
ಒಂದೊಮ್ಮೆ ಸಂಘದ ಕಾರ್ಯಕರ್ತರಾದ ಮಹಾರಾಷ್ಟ್ರದ ಮೌರ್ಯದೇವ ಅವರೊಂದಿಗೆ ರಾಷ್ಟ್ರ ಸಮಿತಿಯ ಕಾರ್ಯಕರ್ತೆ ಪ್ರಭಾವತಿಯವರು ರುಕ್ಮಿಣಿ ಅಕ್ಕನವರ ಮನೆಗೆ ಬಂದಿದ್ದರು. ಸಮಿತಿಯ ಶಾಖೆಯನ್ನು ಆರಂಭಿಸುವಂತೆ ಅವರು ನೀಡಿದ ಸಲಹೆ ಮೇರೆಗೆ 1948ರಲ್ಲಿ ಶ್ರೀರಾಮಪುರದ ಕಾಶೀನಾಥ್ ಭಟ್ ಅವರ ಮನೆಯಲ್ಲಿ ಶಾಖೆಯನ್ನು ಪ್ರಾರಂಭಿಸಿದರು. ಸುಮಾರು 60 ಹೆಣ್ಣು ಮಕ್ಕಳು ಶಾಖೆಗೆ ಬರುತ್ತಿದ್ದರು. ಇದರ ಜೊತೆಜೊತೆಗೆ ಶೇಷಾದ್ರಿಪುರಂನಲ್ಲೂ ಶಾಖೆ ಪ್ರಾರಂಭಿಸಿದರು. 1951ರಲ್ಲಿ ಸಮಿತಿಯ ಶಿಬಿರಕ್ಕಾಗಿ 8 ಜನ, ಗೆಳತಿ ಅಚ್ಚಮ್ಮನೊಂದಿಗೆ ಪೂನಾಗೆ ಹೋಗಿ ಬಂದರು. ರುಕ್ಮಿಣಿ ಅಕ್ಕನವರು ಖಾಸಗಿಯಾಗಿ ಗಣಿತದಲ್ಲಿ ಎಂ.ಎಸ್ಸಿ ಪರೀಕ್ಷೆಗೆ ಕಟ್ಟಿದ್ದರು. ಪರೀಕ್ಷೆ ಬರೆಯಲು ನಾಗಪುರಕ್ಕೆ ಹೋಗಬೇಕಾಯಿತು. ಆ ಸಂದರ್ಭದಲ್ಲಿ ಅಂದಿನ ಸರಸಂಘಚಾಲಕರಾಗಿದ್ದ ಗುರೂಜಿ ಗೋಳ್ವಲ್ಕರರು ತಮ್ಮ ಮನೆಯಲ್ಲೇ ವಸತಿಗೆ ವ್ಯವಸ್ಥೆ ಮಾಡಿದ್ದರು.
ಇವರು ಮಹಾರಾಷ್ಟ್ರದ ರತ್ನಗಿರಿಯಿಂದ ಕಿಶನ್ ರಾವ್ ಗೋಖಲೆಯವರ ಜೊತೆ ಮದುವೆ ಆಗಿ ಧಾರವಾಡಕ್ಕೆ ಬಂದರು. ಗೃಹಸ್ಥ ಜೀವನ ನಡೆಸುತ್ತಾ 1967ರಲ್ಲಿ ಕರ್ನಾಟಕದಲ್ಲಿ ಸಮಿತಿ ಕಾರ್ಯ ಶುರು ಮಾಡಿದರು. 1957ರ ಜುಲೈ 16ರ ‘ಗುರು ಪೂರ್ಣಿಮೆ’ಯ ದಿನ ಮಲ್ಲೇಶ್ವರದ ಎಮ್.ಎಲ್.ಎ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡರು. ನಂತರ ಕರ್ನಾಟಕ ಪ್ರಾಂತ ಕಾರ್ಯವಾಹಿಕಾ, ದಕ್ಷಿಣಾಂಚಲ ಕಾರ್ಯವಾಹಿಕಾ, ಅಖಿಲ ಭಾರತೀಯ ಸಹ ಕಾರ್ಯವಾಹಿಕಾ, ಪ್ರಚಾರ ಪ್ರಮುಖರಾಗಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದರು. 1983ರಿಂದ 2010ರವರೆಗೂ ಅಸ್ಸಾಂನಲ್ಲಿ ಪಾಲಕ ಅಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸಿದರು. ಆಫ್ರಿಕಾದಲ್ಲಿ ‘ಇಂಡಿಯನ್ ಮದರ್ಹುಡ್’ ಬಗ್ಗೆ ಮಾತನಾಡಿದರು. ಮಾರಿಷಸ್ ಹಾಗೂ ಕೆನ್ಯಾದಲ್ಲಿ ಮಾರ್ಗದರ್ಶನ ಮಾಡಿದರು. ‘ಸೇವಾ ಇನ್ ಆಕ್ಷನ್’ನಲ್ಲಿಯೂ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಶ್ರೀ ಕೃಷ್ಣ ಸೇವಾ ಸಂಸ್ಥೆ ಹಾಗೂ ಸಂಘಮಿತ್ರ ಸೇವಾ ಪ್ರತಿಷ್ಟಾನದ (ನಾಗಪುರ) ಅಧ್ಯಕ್ಷರಾಗಿದ್ದರು. ತಮ್ಮ ತಾಯಿ ತಮಗೆ ಕೊಟ್ಟ ಗಾಯತ್ರಿ ನಗರದಲ್ಲಿರುವ ಮನೆ ‘ಸುಕೃಪಾ’ ಸಮಿತಿಯ ಕರ್ನಾಟಕ ಪ್ರಾಂತ ಕಾರ್ಯಲಯ ಆಯಿತು. ಅನೇಕ ಹಿಂದು ಸೇವಾ ಪ್ರತಿಷ್ಟಾನದ ಸೇವಾವ್ರತಿಗಳಿಗೆ ‘ಸುಕೃಪಾ’ ಕಾರ್ಯಕ್ಷೇತ್ರವಾಯಿತು. 1992ರಲ್ಲಿ ಸುಕೃಪಾವನ್ನು ಟ್ರಸ್ಟ್ ರಿಜಿಸ್ಟ್ರೇಷನ್ ಮಾಡಿಸಿದರು. 1996ರಲ್ಲಿ ಜಯನಗರದಲ್ಲಿರುವ ಶಾರದಾ ಶಾಲೆಯ ಜವಾಬ್ದಾರಿಯನ್ನು ತೆಗೆದುಕೊಂಡರು.
‘ಚೈತನ್ಯ’
ಆ ಮನೆಗೊಂದು ಅನ್ವರ್ಥ ನಾಮ. ಸಮಾಜಪುರುಷನ ಅಭಂಗ ಪೂಜೆಗೆ ಈ ಮನೆಯಿಂದ ಚೈತನ್ಯ ಸ್ವರೂಪಿ ವ್ಯಕ್ತಿಗಳು ಹೊರಟಿದ್ದಾರೆ. ಕೇವಲ ತಮಗಾಗಿ ದುಡಿಯದೆ ಸಮಾಜಕ್ಕಾಗಿ ದೇಶಕ್ಕಾಗಿ ಶ್ರಮಿಸಿದರು. ಈ ಮನೆಯಿಂದ ಕೃ. ಸೂರ್ಯನಾರಾಯಣ ರಾವ್, ಕೃ. ರುಕ್ಮಿಣಿ ಅಕ್ಕ ಹಾಗೂ ಕೃ. ನರಹರಿ ಮಹಾನ್ ಚೇತನಗಳಾಗಿ ಸಮಾಜ ಸೇವೆಗಾಗಿ ಶ್ರೀಗಂಧದಂತೆ ತಮ್ಮನ್ನು ತೇಯ್ದುಕೊಂಡರು. ಸಮಾಜಕ್ಕೆ ಸೌರಭವನ್ನು ನೀಡಿದರು.
ರುಕ್ಮಿಣಿ ಅಕ್ಕನವರು ಸಮಿತಿಯ ಪ್ರಚಾರಿಕೆಯರನ್ನು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಪ್ರಚಾರಿಕೆಯರ ಯೋಗಕ್ಷೇಮಕ್ಕಾಗಿ ‘ಸಂಘಮಿತ್ರಾ ಟ್ರಸ್ಟ್’ ಅನ್ನು ಪ್ರಾರಂಭಸಿದರು. ‘ಸುಕೃಪಾ’ ಎಲ್ಲಾ ಪ್ರಚಾರಿಕೆಯರಿಗೂ ಸೇವಾವ್ರತಿಯರಿಗೂ ಮನೆಯಂತೆ ಹಾಗೂ ರುಕ್ಮಿಣಿ ಅಕ್ಕನವರು ತಾಯಿಯಂತೆ ಎಂದರೆ ಅತಿಶಯೋಕ್ತಿಯಲ್ಲ.
ಕರ್ನಾಟಕದಲ್ಲಿ ಸಮಿತಿ
ಕರ್ನಾಟಕದಲ್ಲಿ ಸಮಿತಿಯ ಕೆಲಸಕ್ಕೆ ಉತ್ತಮ ಅಡಿಪಾಯ ಹಾಕಿದವರು ರುಕ್ಮಿಣಿ ಅಕ್ಕ. ‘ಸುಕೃಪಾ’ ಮತ್ತು ‘ಶಾರದಾ ಶಾಲೆ’ ಎರಡನ್ನೂ ಬಹಳ ಅಕ್ಕರೆಯಿಂದ ನಡೆಸಿಕೊಂಡು ಬಂದರು. ಅನೇಕ ಸವಾಲುಗಳು ಬಂದರೂ ಹಿಂದೂಧರ್ಮದ ಸಂಘಟನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿ ಇಟ್ಟರು. ಅವರು ನಡೆದ ದಾರಿ ಎಲ್ಲಾ ಸೇವಿಕೆಯರಿಗೂ ದಾರಿದೀಪ. ಸಂಘ ಸಮರ್ಪಿತ ಸಾರ್ಥಕ ಬದುಕು ಎಲ್ಲರಿಗೂ ಅನುಕರಣೀಯ ಹಾಗೂ ಮಾರ್ಗದರ್ಶನ.
ಮಾತೃ ಹೃದಯಿ ರುಕ್ಮಿಣಿ ಅಮ್ಮ
- ಸ್ವರ್ಣ ಉಡುಪ, ಸಹ ಸೇವಾ ಪ್ರಮುಖ್, ರಾಷ್ಟ್ರ ಸೇವಿಕಾ ಸಮಿತಿ, ವಿಜಯನಗರ ಪ್ರಾಂತ
ನಾವು ಅಕ್ಕ ಎಂದೇ ಸಂಬೋಧಿಸುತ್ತಿದ್ದರೂ ಎಲ್ಲಾ ರೀತಿಯಲ್ಲೂ ಅವರು ನಮಗೆ ಅಮ್ಮನೇ ಆಗಿದ್ದರು. ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಾಲಯ ‘ಸುಕೃಪಾ’ದಲ್ಲಿ ನಾವಾಗ 10 – 12 ಜನ ಪ್ರಚಾರಿಕೆಯರಿದ್ದೆವು.
ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿ, ಸಮಿತಿಯ ಅಖಿಲ ಭಾರತೀಯ ಕಾರ್ಯವಾಹಿಕಾ ಆಗಿದ್ದರೂ ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಿದ್ದರು. ಹೆಚ್ಚಿನ ಸಮಯ ಅಖಿಲ ಭಾರತ ಪ್ರವಾಸದಲ್ಲಿರುತ್ತಿದ್ದರೂ ಬೆಂಗಳೂರಿಗೆ ಬಂದಾಗಲೆಲ್ಲಾ ಸುಕೃಪಾಕ್ಕೆ ಬರುತ್ತಿದ್ದರು. ನಮ್ಮನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಯೋಗಕ್ಷೇಮ ವಿಚಾರಿಸುವುದಷ್ಟೇ ಅಲ್ಲದೆ ಮನೆಯಲ್ಲಿ ಎಲ್ಲಾ ಚೆನ್ನಾಗಿದ್ದಾರಾ? ಪತ್ರ ಬರೆಯುತ್ತಿದ್ದೀರಲ್ವಾ ಎಂದು ಕೇಳುವುದನ್ನು ಮರೆಯುತ್ತಿರಲಿಲ್ಲ. ಅವರಿಗೆ ಪುಸ್ತಕ ಓದುವ ಹವ್ಯಾಸವಿತ್ತು. ಅಂತೆಯೇ ನಮ್ಮನ್ನೂ “ಇತ್ತೀಚೆಗೆ ಯಾವ ಪುಸ್ತಕ ಓದಿದೆ?” ಎಂದು ಕೇಳುತ್ತಿದ್ದರು. ಹೊಸ ಹೊಸ ಕಥೆ, ಶ್ಲೋಕ, ಅಮೃತವಚನ, ಭಜನೆ, ದೇಶಭಕ್ತಿ ಗೀತೆ – ಇವುಗಳನ್ನು ಕಲಿಯುತ್ತಿದ್ದೀರಾ ಎಂದು ನಯವಾಗಿ ಕೇಳುತ್ತಿದ್ದರು. ಇದರಿಂದಾಗಿ ನಮಗೆ ಹೊಸತನ್ನು ಸಂಗ್ರಹಿಸುವ ಆಸಕ್ತಿ, ಪ್ರೇರಣೆ ತಾನಾಗಿಯೇ ಸಿಗುತ್ತಿತ್ತು.
ಸಂಘಕಾರ್ಯದ ಬಗ್ಗೆ ಮಾತ್ರವಲ್ಲದೆ ಅಡುಗೆ ವಿಷಯಗಳ ಬಗ್ಗೆ ಮಾತನಾಡುವುದರೊಂದಿಗೆ ನಮಗೆ ಕೈತುತ್ತನ್ನೂ ನೀಡುತ್ತಿದ್ದರು. ಆ ಅಮೃತಮಯ ತುತ್ತು ಪ್ರೇರಣೆಯಿಂದ ಇನ್ನೊಂದಿಷ್ಟು ಖುಷಿಯಿಂದ ಕುಣಿದು ಕೆಲಸ ಮಾಡುವಂತಾಗುತ್ತಿತ್ತು. ಪ್ರಾತಃಕಾಲ 5-45ಕ್ಕೆ ನಾವು ಶ್ರೀರಾಮಪುರದ ಉಪೇಕ್ಷಿತ ಕಾಲೋನಿ(ಸ್ಲಮ್)ಯಲ್ಲಿ ಸಂಸ್ಕಾರ ಕೇಂದ್ರ ನಡೆಸಲು ಹೋಗುವಾಗ ಅವರ ಮನೆಯ ಮುಂದೆಯೇ ಹೋಗುತ್ತಿದ್ದೆವು. ಏನಾದರೂ ಕೆಲಸವಿದ್ದರೆ ಅವರ ಮನೆಗೆ ಹೋಗಬೇಕಾದಾಗ, ಮಧ್ಯಮ ವರ್ಗದ ಮನೆಯಲ್ಲಿ ಬೆಳೆದ ನಾವು ಇಷ್ಟು ಶ್ರೀಮಂತರ ಮನೆಗೆ ಹೇಗೆ ಹೋಗುವುದಪ್ಪ! ಎಂದುಕೊಳ್ಳುತ್ತಿದ್ದೆವು. ಆದರೆ ಒಳಗೆ ಹೋದರೆ ರುಕ್ಮಿಣಿ ಅಕ್ಕನವರು, ಕೃ. ನರಹರಿಯವರು, ಗೋಪಣ್ಣ – ಜಯಲಕ್ಷ್ಮಿಅಕ್ಕ (ರುಕ್ಮಿಣಿ ಅಕ್ಕನವರ ತಮ್ಮ – ನಾದಿನಿ) ಎಲ್ಲರೂ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದರು. ಕಾಫಿಯೋ, ಹಾಲೋ ಕುಡಿಯಲೇಬೇಕಿತ್ತು. ಅನೇಕ ಬಾರಿ ತಿಂಡಿಯನ್ನೂ ತಿನ್ನುತ್ತಿದ್ದೆವು. ಹಾಗೆಯೇ ಅಕ್ಕಿರೊಟ್ಟಿ, ಮಾವಿನ ಹಣ್ಣಿನ ರಸಾಯನ ಹೀಗೆ ಅನೇಕ ತಿನಿಸುಗಳನ್ನು ಮಾಡಿ, ಮಾತೃ ವಾತ್ಸಲ್ಯದಿಂದ ಬಡಿಸುತ್ತಿದ್ದರು. ಅವರು ತಿಂಡಿ ತಯಾರಿಸುವುದರೊಂದಿಗೆ ರೆಸಿಪಿಯನ್ನೂ ವಿವರಿಸಿ ಹೇಳುತ್ತಿದ್ದರು.
ನಾವು ಮಾಡುತ್ತಿರುವ ನಿತ್ಯ ಸಂಪರ್ಕ, ಶಾಖೆ, ವಿವಿಧ ಸೇವಾ ಚಟುವಟಿಕೆಗಳ ಬಗ್ಗೆ ಪ್ರತಿಯೊಂದು ಅಂಶವನ್ನೂ ಅಚ್ಚುಕಟ್ಟಾಗಿ ಬರೆದಿಡುವಂತೆ ಆಗ್ರಹ ಪೂರ್ವಕವಾಗಿ ತಿಳಿಸುತ್ತಿದ್ದರು. ಪ್ರತಿಯೊಂದು ಅಂಶವನ್ನೂ ಗಮನವಿಟ್ಟು ಸ್ಪಷ್ಟವಾಗಿ ಬರೆಯುವ, ಯಾವುದೇ ಬೌದ್ಧಿಕ ಬಿಂದುಗಳನ್ನಾದರೂ ಬರೆದುಕೊಳ್ಳುವ ಅಭ್ಯಾಸ ನಮಗೆ ಹೀಗೇ ರೂಢಿಯಾದದ್ದು.ಇದರೊಂದಿಗೆ ಸಂದರ್ಭಕ್ಕೆ ತಕ್ಕಂತೆ ಹಲವು ಕಿವಿಮಾತುಗಳನ್ನು ಹೇಳುತ್ತಿದ್ದರು.
ಪ್ರಾಂತ ಕಾರ್ಯಾಲಯವಾಗಿದ್ದರಿಂದ ಸುಕೃಪಾದಲ್ಲಿ ಯಾವುದಾದರೂ ಬೈಠಕ್ಗಳು, ಕಾರ್ಯಕ್ರಮಗಳು ಸದಾ ಇರುತ್ತಿದ್ದವು. ಅದಕ್ಕೆ ಒಂದೆರೆಡು ದಿನ ಮೊದಲೇ ಬಂದು, ನಮಗೆ ವ್ಯವಸ್ಥಾ ಬೈಠಕ್ ತೆಗೆದುಕೊಂಡು, ಜವಾಬ್ದಾರಿ ಹಂಚುತ್ತಿದ್ದರು. ಇದರಿಂದ ಯಾವುದೇ ರೀತಿಯಲ್ಲಿ ವ್ಯತ್ಯಯವಾಗದಂತೆ ವ್ಯವಸ್ಥಿತವಾಗಿ ನಿಗದಿತ ಕಾರ್ಯ ನಡೆಯುತ್ತಿತ್ತು. ನಂತರ ಅವಲೋಕನ ಬೈಠಕ್ ಕೂಡ ಇದ್ದು, ದೋಷಗಳಾಗಿದ್ದರೂ ಅದನ್ನು ಶಾಂತಚಿತ್ತರಾಗಿಯೇ ತಿಳಿ ಹೇಳುತ್ತಿದ್ದರು. ಮಧ್ಯದಲ್ಲಿ ನಗೆ ಚಟಾಕಿಗಗಳೂ ಇರುತ್ತಿದ್ದವು. ಅದರಲ್ಲಿ ಒಂದು ನೆನಪಾಗುತ್ತಿದೆ. ನಾನು ಸೇವಾವ್ರತಿಯಾಗಿ ಸುಕೃಪಾಕ್ಕೆ ಬಂದ ಹೊಸತರಲ್ಲಿ ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಪ್ರವೇಶ ವರ್ಗ ನಡೆಯುತ್ತಿತ್ತು. ಘೋಷ್ನಲ್ಲಿ ನಾನು ಪಣವ ತೆಗೆದುಕೊಂಡಿದ್ದೆ. ನನ್ನ ಎತ್ತರ ಕಡಿಮೆಯಿದ್ದ ಕಾರಣ ಮಾ. ರುಕ್ಮಿಣಿ ಅಕ್ಕನವರು “ಸ್ವರ್ಣ ನೀನು ಇನ್ಮುಂದೆ ತೆಗೆದುಕೊಳ್ಳಬೇಡಮ್ಮ, ಪಣವನೇ ನಡೆದ ಹಾಗೆ ಕಾಣುತ್ತೆ” ಅಂದಿದ್ದರು.
ಹೀಗೆ ಎಲ್ಲಾ ಆಯಾಮಗಳಲ್ಲೂ ನಮ್ಮನ್ನು ತಿದ್ದಿ ರೂಪಿಸಿದವರು ರುಕ್ಮಿಣಿ ಅಕ್ಕನವರು. ಕಳೆದ ವರ್ಷ ನಾನು ಹಿರಿಯ ಸೇವಾವ್ರತಿ ಭಗಿನಿ ಛಾಯಕ್ಕನವರೊಂದಿಗೆ ಹೋಗಿ ಅವರನ್ನು ನೋಡಿ, ಮಾತನಾಡಿಸಿದಾಗ ಈ ವಯಸ್ಸಿನಲ್ಲಿಯೂ ಆ ಮೊದಲಿನ ಪ್ರೀತಿ – ವಾತ್ಸಲ್ಯ, ದೃಢತೆಯಿಂದಲೇ ನನ್ನನ್ನು ಗುರುತಿಸಿ ಮಾತನಾಡಿದ್ದು ನೆನಪಿದೆ.
