ಕೋಲ್ಕತ್ತಾ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧದ ಅತ್ಯಂತ ಆಕ್ಷೇಪಾರ್ಹ ಹಾಗೂ ಜಿಗುಪ್ಸಾಕರ ಪೋಸ್ಟರ್ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಇದು ಕೇವಲ ಕಾರ್ಟೂನ್ ಅಲ್ಲ, ನಮ್ಮ ಸಾಕ್ಷಿಪ್ರಜ್ಞೆಗೆ ಆಘಾತ ತಂದಿದೆ” ಎಂದು ಖಂಡಿಸಿದೆ.
ಕೋಲ್ಕತ್ತಾದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಪ್ರಧಾನಿ ಮೋದಿ ಅವರ ವ್ಯಂಗ್ಯಚಿತ್ರವಿದ್ದ ಆಕ್ಷೇಪಾರ್ಹ ಪೋಸ್ಟರ್ ಪ್ರದರ್ಶಿಸಿದ್ದರು. ಈ ಸಂಬಂಧ ಅವರ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 16 ಎಫ್ಐಆರ್ಗಳು (FIR) ದಾಖಲಾಗಿದ್ದವು. ಈ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಕೋರಿ ನಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರಿದ್ದ ಪೀಠ, ಅರ್ಜಿದಾರರ ಪರ ವಕೀಲರ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿತು.
ಪ್ರಕರಣದ ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ವಕೀಲರು, “ಅದು ಕೇವಲ ಒಂದು ರಾಜಕೀಯ ಕಾರ್ಟೂನ್ ಅಷ್ಟೇ” ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಆದರೆ ಇದಕ್ಕೆ ಕಠಿಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಇದು ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಮಾಡುವಂತಹ ಕೃತ್ಯವಲ್ಲ. ಇದು ಅತ್ಯಂತ ಅಸಹ್ಯಕರ ಮತ್ತು ಜಿಗುಪ್ಸಾಕರವಾಗಿದೆ. ಪ್ರಜಾಸತ್ತಾತ್ಮಕ ಪ್ರತಿಭಟನೆಯ ಹೆಸರಿನಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವವರ ಗೌರವಕ್ಕೆ ಧಕ್ಕೆ ತರುವುದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲದೆ, ಈ ಹಂತದಲ್ಲಿ ಎಫ್ಐಆರ್ಗಳನ್ನು ರದ್ದುಗೊಳಿಸಿದರೆ ಇಂತಹ ಕೃತ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ತಿಳಿಸಿದ ಹೈಕೋರ್ಟ್, ಎಫ್ಐಆರ್ ರದ್ದುಗೊಳಿಸಲು ಸ್ಪಷ್ಟವಾಗಿ ನಿರಾಕರಿಸಿತು.
ಆದಾಗ್ಯೂ, ನಟಿಯು ತನಿಖೆಗೆ ಸಹಕರಿಸುತ್ತಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ 24 ರವರೆಗೆ ಅವರ ವಿರುದ್ಧ ಯಾವುದೇ ಕಠಿಣ ಪೊಲೀಸ್ ಕ್ರಮ ಅಥವಾ ಬಂಧನವನ್ನು ಕೈಗೊಳ್ಳಬಾರದು ಎಂದು ಮಧ್ಯಂತರ ರಕ್ಷಣೆ ನೀಡಿದೆ. ಜೊತೆಗೆ, ವಿವಿಧ ಠಾಣೆಗಳಲ್ಲಿದ್ದ 16 ಎಫ್ಐಆರ್ಗಳನ್ನು ಒಗೂಡಿಸಿ ಆನಂದಪುರ ಪೊಲೀಸ್ ಠಾಣೆಯ ಮೂಲಕ ಸಮಗ್ರ ತನಿಖೆ ನಡೆಸುವಂತೆ ಆನಂದಪುರ ಪೊಲೀಸರಿಗೆ ನಿರ್ದೇಶಿಸಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
