ಲಖನೌ: ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ರಾಷ್ಟ್ರೀಯ ಸಹ-ಸಂಚಾಲಕ ಅಶುತೋಷ್ ರಾಂಕಾ ನಡುವೆ ನಡೆದಿರುವ ೯೦ ನಿಮಿಷಗಳ ರಹಸ್ಯ ಸಭೆ ಈಗ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ನಡೆದ ಸರಣಿ ಪ್ರತಿಭಟನೆಗಳು ಹಾಗೂ ರಾಜಸ್ಥಾನ-ಮಹಾರಾಷ್ಟ್ರದ ಸರ್ಕಾರಿ ಶಾಲೆಗಳ ಮೇಲೆ ಕೇಂದ್ರಿಕೃತವಾಗಿದ್ದ ಸಿಜೆಪಿ ಚಟುವಟಿಕೆಗಳ ಬೆನ್ನಲ್ಲೇ ಈ ಭೇಟಿ ನಡೆದಿದ್ದು, ಉತ್ತರ ಪ್ರದೇಶದಲ್ಲಿ ಸಿಜೆಪಿಯ ಮುಂದಿನ ಹೆಜ್ಜೆ ಏನಿರಬಹುದು ಎಂಬ ಪ್ರಶ್ನೆ ಮೂಡಿಸಿದೆ.
ಸೆಪ್ಟೆಂಬರ್ 3 ರಂದು ಲಖನೌದ ಎಸ್ಪಿ ಪ್ರಧಾನ ಕಚೇರಿ ಬಳಿಯಿರುವ ಜಾನೇಶ್ವರ್ ಮಿಶ್ರಾ ಟ್ರಸ್ಟ್ ಕಚೇರಿಯಲ್ಲಿ ಸಂಜೆ 4 ಗಂಟೆಗೆ ಈ ಸಭೆ ಆರಂಭವಾಗಿ ಸುಮಾರು ಒಂದೂವರೆ ಗಂಟೆ ಕಾಲ ನಡೆಯಿತು. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡದೆ ರಾಂಕಾ ನಿರ್ಗಮಿಸಿದರೆ, ಸಮಾಜವಾದಿ ಪಕ್ಷವೂ ಚರ್ಚೆಯ ವಿಷಯಗಳನ್ನು ಬಹಿರಂಗಪಡಿಸದೆ ಮೌನಕ್ಕೆ ಶರಣಾಗಿದೆ.
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಈ ಮೌನ ಅತ್ಯಂತ ಮಹತ್ವದ್ದಾಗಿದೆ. ಸದ್ಯಕ್ಕೆ ಎಸ್ಪಿ ಮತ್ತು ಸಿಜೆಪಿ ನಡುವೆ ಯಾವುದೇ ರಾಜಕೀಯ ಮೈತ್ರಿಯ ಅಧಿಕೃತ ಘೋಷಣೆಯಾಗಿಲ್ಲ. ಆದರೆ, ಸಿಜೆಪಿ ಇತ್ತೀಚೆಗೆ ನಡೆಸಿದ ಹೈ-ಪ್ರೊಫೈಲ್ ಪ್ರತಿಭಟನೆಗಳು ಮತ್ತು ವಾಗ್ದಾಳಿಗಳ ಹಿನ್ನೆಲೆಯಲ್ಲಿ ಈ ಭೇಟಿಯ ಸಮಯ ಹಾಗೂ ರಾಜಕೀಯ ಲೆಕ್ಕಾಚಾರಗಳು ಪ್ರಮುಖ ಚರ್ಚಾವಿಷಯವಾಗಿವೆ.
ರಾಂಕಾ ಭೇಟಿಯ ಹಿಂದಿನ ಉದ್ದೇಶವೇನು?
ಅಖಿಲೇಶ್ ಯಾದವ್ ಮತ್ತು ರಾಂಕಾ ನಡುವಿನ ಈ ಭೇಟಿಯು ಕೇವಲ ‘ಏಕೆ ನಡೆಯಿತು’ ಎನ್ನುವುದಕ್ಕಿಂತ ‘ಈಗಲೇ ಏಕೆ ನಡೆಯಿತು’ ಎಂಬುದು ಮುಖ್ಯ. ರಾಂಕಾ ಅವರು ಯಾವುದೇ ವಿದ್ಯಾರ್ಥಿ ಸಂಘಟನೆಯ ನಾಯಕರಲ್ಲ, ಬದಲಿಗೆ ಪೊಲಿಟಿಕಲ್ ಆಕ್ಟಿವಿಸ್ಟ್ ಹಾಗೂ ಸಿಜೆಪಿಯ ಪ್ರಮುಖ ನಾಯಕ. ಇತ್ತ, ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ.
ಹೀಗಾಗಿ, ಇವರ ನಡುವಿನ ೯೦ ನಿಮಿಷಗಳ ಸುದೀರ್ಘ ಚರ್ಚೆಯು ಕೇವಲ ಪರೀಕ್ಷೆಗಳು ಅಥವಾ ಶಿಕ್ಷಣ ವ್ಯವಸ್ಥೆಗೆ ಸೀಮಿತವಾಗಿದೆಯೇ ಅಥವಾ ಮುಂಬರುವ ರಾಜಕೀಯ ಮತ್ತು ಸಾಂಸ್ಥಿಕ ಬೆಳವಣಿಗೆಗಳಿಗೆ ತಳಹದಿ ಹಾಕಲಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಕೇವಲ ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟಿಸುವುದಷ್ಟೇ ಅಲ್ಲದೆ, ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳಿಗೆ ನೇರ ಭೇಟಿ ನೀಡಿ ಶಿಕ್ಷಣ ಇಲಾಖೆಯ ವೈಫಲ್ಯಗಳನ್ನು ಪ್ರಶ್ನಿಸುವ ಕೆಲಸವನ್ನು ಸಿಜೆಪಿ ಮಾಡುತ್ತಿದೆ. ಈಗ ಉತ್ತರ ಪ್ರದೇಶವೂ ಇಂತಹ ಚಟುವಟಿಕೆಗಳ ಹೊಸ ಕೇಂದ್ರವಾಗಲಿದೆಯೇ ಎಂಬ ಕುತೂಹಲ ಎದ್ದಿದೆ.
ಜಂತರ್ ಮಂತರ್ನಿಂದ ಶಾಲೆಗಳ ಪರಿಶೀಲನೆಯವರೆಗೆ…
ಜುಲೈ ೨೦ ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಪರೀಕ್ಷಾ ಅಕ್ರಮಗಳ ವಿರುದ್ಧ ಸಿಜೆಪಿ ಬೃಹತ್ ಪ್ರತಿಭಟನೆ ನಡೆಸಿತ್ತು. ಸಂಸತ್ ಚಲೋ ಸಂದರ್ಭದಲ್ಲಿ ಗಲಭೆ ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿಯಾದ ವರದಿಗಳಾಗಿದ್ದವು. ಈ ಪ್ರತಿಭಟನೆಯ ತೀವ್ರತೆಯಿಂದಾಗಿ ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ ೨೫ ರಂದು ರಾಜೀನಾಮೆ ನೀಡಬೇಕಾಯಿತು.
ಇದರ ಬೆನ್ನಲ್ಲೇ ರಾಂಕಾ ಅವರು ‘ಫಿಕ್ಸ್ ದಿ ಸ್ಕೂಲ್ಸ್’ (ಶಾಲೆಗಳನ್ನು ಸರಿಪಡಿಸಿ) ಎಂಬ ಹೊಸ ಅಭಿಯಾನ ಆರಂಭಿಸಿ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಸರ್ಕಾರಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಶಿಕ್ಷಣ ವ್ಯವಸ್ಥೆಯ ಕೊರತೆಗಳನ್ನು ಎತ್ತಿಹಿಡಿಯಲು ಶುರುಮಾಡಿದರು.
ಆದರೆ ಇಲ್ಲೊಂದು ಕಾನೂನಾತ್ಮಕ ಪ್ರಶ್ನೆಯೂ ಏಳುತ್ತದೆ—ಸರ್ಕಾರಿ ಶಾಲೆಗಳನ್ನು ಪರಿಶೀಲಿಸಲು ಅಥವಾ ತಪಾಸಣೆ ನಡೆಸಲು ಸಿಜೆಪಿಯಂತಹ ನಾಗರಿಕ ಸಂಘಟನೆಗೆ ಏನು ಅಧಿಕಾರವಿದೆ? ಯಾವುದೇ ಸಂಘಟನೆಯು ನ್ಯೂನತೆಗಳನ್ನು ಎತ್ತಿಹಿಡಿಯಬಹುದು, ಆದರೆ ಶಾಲೆಗಳಿಗೆ ಪ್ರತ್ಯಕ್ಷವಾಗಿ ತೆರಳಿ ಪರಿಶೀಲಿಸುವ ಅಥವಾ ಆಡಳಿತಾತ್ಮಕವಾಗಿ ಹಸ್ತಕ್ಷೇಪ ಮಾಡುವ ಅಧಿಕಾರ ಅವರಿಗಿರುವುದಿಲ್ಲ.
ರಾಜಸ್ಥಾನದಲ್ಲಿ ಎದ್ದಿದ್ದ ವಿವಾದ
ಆಗಸ್ಟ್ ೨೧ ರಂದು ರಾಜಸ್ಥಾನದ ಸೀತಾಪುರದಲ್ಲಿರುವ ಸರ್ಕಾರಿ ಶಾಲೆಯೊಂದಕ್ಕೆ ‘ಫಿಕ್ಸ್ ದಿ ಸ್ಕೂಲ್ಸ್’ ಅಭಿಯಾನದಡಿ ಭೇಟಿ ನೀಡಿದ್ದಾಗ ರಾಂಕಾ ಮತ್ತು ಗ್ರಾಮಸ್ಥರ ನಡುವೆ ತೀವ್ರ ಘರ್ಷಣೆ ನಡೆದಿತ್ತು. ತಮ್ಮ ತಂಡದ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಮತ್ತು ಮಹಿಳಾ ಸಹೋದ್ಯೋಗಿಯ ಮೇಲೆ ಹಲ್ಲೆಯಾಯಿತು ಎಂದು ರಾಂಕಾ ಆರೋಪಿಸಿ, ಬಿಜೆಪಿ ಕಾರ್ಯಕರ್ತರನ್ನು ಹೊಣೆ ಮಾಡಿದ್ದರು.
ಈ ವಿವಾದದ ಬಳಿಕ ಅಖಿಲೇಶ್ ಯಾದವ್ ಬಹಿರಂಗವಾಗಿಯೇ ಸಿಜೆಪಿ ಪರವಾಗಿ ಧ್ವನಿ ಎತ್ತಿ, ರಾಜಸ್ಥಾನ ಸರ್ಕಾರವನ್ನು ತೀವ್ರವಾಗಿ ತೊಳೆಯುತ್ತಿದ್ದರು. ಆ ಘಟನೆಯ ಬೆನ್ನಲ್ಲೇ ಈಗ ಈ ಖಾಸಗಿ ಭೇಟಿ ನಡೆದಿರುವುದು ಗಮನಾರ್ಹ.
ಉತ್ತರ ಪ್ರದೇಶವೇ ಮುಂದಿನ ಗುರಿಯೇ?
ಉತ್ತರ ಪ್ರದೇಶವು ಅಖಿಲೇಶ್ ಯಾದವ್ ಅವರ ಪ್ರಮುಖ ರಾಜಕೀಯ ನೆಲೆಯಾಗಿದೆ. ರಾಜ್ಯದಲ್ಲಿ ಶಿಕ್ಷಣ ಅಥವಾ ಪರೀಕ್ಷಾ ಅಕ್ರಮಗಳ ಹೆಸರಿನಲ್ಲಿ ಬೀದಿ ಹೋರಾಟ ಆರಂಭವಾದರೆ, ಅದು ತಕ್ಷಣವೇ ಪ್ರಮುಖ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತದೆ.
ಈ ಹಿಂದೆ ಜಂತರ್ ಮಂತರ್ನಲ್ಲಿ ಮಾತನಾಡಿದ್ದ ರಾಂಕಾ, ಯುಪಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯದಿದ್ದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದರು. ಈಗ ಲಖನೌದಲ್ಲಿ ಅಖಿಲೇಶ್ ಅವರ ಜೊತೆ ನಡೆಸಿರುವ ಈ ಚರ್ಚೆಯು, ಯುಪಿಯಲ್ಲಿ ಬೃಹತ್ ಚಳವಳಿಗೆ ಸ್ಕೆಚ್ ಹಾಕಲಾಗುತ್ತಿದೆಯೇ ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಡಿಂಪಲ್ ಯಾದವ್ ಬೆಂಬಲ ಮತ್ತು ಸಿಜೆಪಿಯ ಹಿನ್ನೆಲೆ
ಜುಲೈ ೨೦ ರ ದೆಹಲಿ ಪ್ರತಿಭಟನೆಯಲ್ಲಿ ಎಸ್ಪಿ ಸಂಸದೆ ಡಿಂಪಲ್ ಯಾದವ್ ಸೇರಿದಂತೆ ಹಲವು ನಾಯಕರು ಸಿಜೆಪಿ ಪರವಾಗಿ ಭಾಗವಹಿಸಿದ್ದರು. ಪೊಲೀಸರ ಕ್ರಮದ ವಿರುದ್ಧವೂ ಡಿಂಪಲ್ ಧ್ವನಿ ಎತ್ತಿದ್ದರು. ಎಸ್ಪಿಯ ಈ ಬಹಿರಂಗ ಬೆಂಬಲ ಮತ್ತು ಅಖಿಲೇಶ್ ಅವರ ಇತ್ತೀಚಿನ ಭೇಟಿ—ಇವೆಲ್ಲವೂ ಆಕಸ್ಮಿಕವಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಮೇ ೧೫ ರಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಸೃಷ್ಟಿಯಾದ ವಿವಾದದ ನಂತರ, ಮೇ ೧೬ ರಂದು ಅಮೆರಿಕದಲ್ಲಿ ಅಭಿಜಿತ್ ದಿಪ್ಕೆ ಎಂಬುವವರಿಂದ ಈ ‘ಕಾಕ್ರೋಚ್ ಜನತಾ ಪಾರ್ಟಿ’ ಜನ್ಮತಾಳಿತು. ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ಬೆಳೆದು, ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ೮ ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿತ್ತು. ನಂತರ ಬೀದಿಗಿಳಿದು ಹೋರಾಟ ನಡೆಸಿ ಪ್ರಧಾನ್ ರಾಜೀನಾಮೆಗೆ ಕಾರಣವಾಗಿತ್ತು.
ಹೊಸ ರಾಜಕೀಯ ಸಮೀಕರಣವೇ?
ಸದ್ಯಕ್ಕೆ ಎಸ್ಪಿ ಮತ್ತು ಸಿಜೆಪಿ ನಡುವೆ ಮೈತ್ರಿ ಏರ್ಪಟ್ಟಿದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಆದರೆ, ದೆಹಲಿ ಪ್ರತಿಭಟನೆ, ಶಾಲೆಗಳ ಮೇಲಿನ ದಾಳಿ ಮಾದರಿಯ ಅಭಿಯಾನ, ಎಸ್ಪಿ ನಾಯಕರ ಬೆಂಬಲ ಮತ್ತು ಈಗ ಲಖನೌದಲ್ಲಿ ನಡೆದ ೯೦ ನಿಮಿಷಗಳ ರಹಸ್ಯ ಸಭೆ—ಈ ಸರಣಿ ಬೆಳವಣಿಗೆಗಳು ಯುಪಿ ರಾಜಕೀಯದಲ್ಲಿ ಹೊಸದೊಂದು ಸಂಚಲನಕ್ಕೆ ಮುನ್ನುಡಿ ಬರೆಯುತ್ತಿವೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ.
ದೆಹಲಿ, ರಾಜಸ್ಥಾನ ಹಾಗೂ ಮಹಾರಾಷ್ಟ್ರದ ನಂತರ ಈಗ ಸಿಜೆപಿಯ ಮುಂದಿನ ರಣರಂಗ ಉತ್ತರ ಪ್ರದೇಶವೇ? ಹಾಗಿದ್ದಲ್ಲಿ, ಈ ಹಂತದಲ್ಲಿ ಅಖಿಲೇಶ್ ಯಾದವ್ ವಹಿಸಲಿರುವ ಪಾತ್ರವೇನು ಎಂಬುದನ್ನು ಕಾದುನೋಡಬೇಕಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
