ಪ್ರಜಾಪ್ರಭುತ್ವದ ಅತಿ ದೊಡ್ಡ ಸೌಂದರ್ಯವೆಂದರೆ ಅದು ತನ್ನ ರಾಜಕೀಯ ವಿರೋಧಿಗಳಿಗೂ ಧ್ವನಿ ಎತ್ತುವ ಅವಕಾಶ ನೀಡುತ್ತದೆ. ಆದರೆ, ಇದರ ದೊಡ್ಡ ದೌರ್ಬಲ್ಯವೂ ಅದೇ ಆಗಿದೆ; ಕೆಲವರು ತಮಗೆ ಸಿಕ್ಕ ಸ್ವಾತಂತ್ರ್ಯವನ್ನೇ ಪ್ರಜಾಪ್ರಭುತ್ವದ ಬೇರುಗಳನ್ನು ಅಗೆಯಲು ಬಳಸಿಕೊಳ್ಳುತ್ತಾರೆ. ಸಂವಿಧಾನದ 19(1)(b) ವಿಧಿಯು ಸಭೆ ಸೇರುವ ಹಕ್ಕನ್ನು ಖಾತರಿಪಡಿಸುತ್ತದೆ ನಿಜ, ಆದರೆ ಅದಕ್ಕೊಂದು ಸ್ಪಷ್ಟ ನಿಬಂಧನೆಯಿದೆ: ಆ ಸಭೆಯು “ಶಾಂತಿಯುತವಾಗಿ” ಹಾಗೂ “ಶಸ್ತ್ರಾಸ್ತ್ರಗಳಿಲ್ಲದೆ” ಇರಬೇಕು. ಎಲ್ಲಿ ಶಾಂತಿ ನೆಲೆ ತಪ್ಪುತ್ತದೋ, ಅಲ್ಲಿಗೆ ಆ ಹಕ್ಕಿನ ಮಿತಿಯೂ ಮುಕ್ತಾಯಗೊಳ್ಳುತ್ತದೆ. ಹಾಗಾದರೆ, ಕೇವಲ ವದಂತಿಗಳನ್ನೇ ನಂಬಿ ರಸ್ತೆಗಳನ್ನು ಬಂದ್ ಮಾಡುವುದು, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚುವುದು ಮತ್ತು ಗುಂಪುಗೂಡಿ ಗಲಾಟೆ ಮಾಡುವುದನ್ನು ಪ್ರತಿಭಟನೆಯ ಹೆಸರಿನಲ್ಲಿ ನಾವು ಇನ್ನು ಎಷ್ಟು ದಿನ ಸಹಿಸಿಕೊಂಡಿರಬೇಕು?
ಪ್ರತಿಭಟಿಸುವುದು ಬೇರೆ, ಗುಂಪುಕಟ್ಟಿಕೊಂಡು ಬಲವಂತವಾಗಿ ಪ್ರಜಾಪ್ರಭುತ್ವದ ಜನಾದೇಶವನ್ನು ಒತ್ತೆಯಾಗಿಡುವುದು ಸಂಪೂರ್ಣವಾಗಿ ಬೇರೆ. ಮೊದಲನೆಯದು ನಾಗರಿಕನ ಹಕ್ಕಾದರೆ, ಎರಡನೆಯದು ಅಕ್ಷರಶಃ ಅಪರಾಧ. ಇಂದು ಜಗತ್ತಿನಾದ್ಯಂತ ಒಂದು ಅಪಾಯಕಾರಿ ಧೋರಣೆ ಕಾಣಿಸಿಕೊಳ್ಳುತ್ತಿದೆ; ಅಂದರೆ ಪ್ರಜಾಪ್ರಭುತ್ವ ನೀಡಿದ ಸ್ವಾತಂತ್ರ್ಯವನ್ನೇ ಬಳಸಿ ಅದೇ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಾಗುತ್ತಿದೆ. ವಿಪರ್ಯಾಸವೆಂದರೆ, ಭಾರತದಲ್ಲಿ ಈ ಸ್ವಾತಂತ್ರ್ಯವನ್ನು ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಚುನಾವಣಾ ಪ್ರಕ್ರಿಯೆಯ ಮೇಲೆಯೇ ಕಿಂಚಿತ್ ನಂಬಿಕೆ ಇಲ್ಲದವರು. ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವವರು, ಈಗ ಬೀದಿಗಿಳಿದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನರ ತೀರ್ಪನ್ನೇ ಪ್ರಶ್ನಿಸಲು ಹೊರಟಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಈಗ ಸೃಷ್ಟಿಯಾಗಿರುವ ಕೋಲಾಹಲವೇ ಇದಕ್ಕೆ ತಕ್ಕ ಉದಾಹರಣೆ. ಮತದಾರರ ಪಟ್ಟಿಯನ್ನು ದೋಷರಹಿತವಾಗಿ ಇಡುವುದು ಸಾಂವಿಧಾನಿಕ ಸಂಸ್ಥೆಯ ಕರ್ತವ್ಯ. ಅದರ ಪಾರದರ್ಶಕತೆಯನ್ನು ಪ್ರಶ್ನಿಸುವ ಹಕ್ಕು ವಿರೋಧ ಪಕ್ಷಗಳಿಗಿದೆ. ಆದರೆ ನಕಲಿ ಹೆಸರುಗಳು ಮತ್ತು ನುಸುಳುಕೋರರನ್ನು ತಡೆಯುವ ಯಾವುದೇ ಸತ್ಕಾರ್ಯ ನಡೆದಾಗ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರಂತಹ ನಾಯಕರು ತತ್ತರಿಸಿಹೋಗುವುದನ್ನು ನೋಡಿದರೆ, ಅವರ ವಿರೋಧವಿರುವುದು ವ್ಯವಸ್ಥೆಯ ಮೇಲೆಯೇ ಹೊರತು ಪ್ರಕ್ರಿಯೆಯ ಮೇಲಲ್ಲ ಎಂಬುದು ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ. ಈಗ ಸಿಪಿಐ ನಾಯಕ ಡಿ. ರಾಜಾ ಕೂಡ ಈ ಸಾMಗೆ ಸೇರಿಕೊಂಡಿದ್ದಾರೆ. ಆಕ್ಷೇಪಣೆಗಳನ್ನು ಸಲ್ಲಿಸಲು ನ್ಯಾಯಾಲಯಗಳು ಹಾಗೂ ಚುನಾವಣಾ ಆಯೋಗದ ಬಾಗಿಲುಗಳು ತೆರೆದಿರುವಾಗ, ಅದನ್ನು ಬಿಟ್ಟು ರಸ್ತೆಗಿಳಿದು ಗೊಂದಲ ಸೃಷ್ಟಿಸುವುದರ ಹಿಂದೆ ಯಾವ ದುರುದ್ದೇಶವಿದೆ ಎಂಬ ಪ್ರಶ್ನೆ ಮೂಡುವುದು ಸಹಜವೇ ಸರಿ.
ಈ ಆಟಕ್ಕೆ ಈಗ ಸಾಮಾಜಿಕ ಜಾಲತಾಣಗಳೇ ಮುಖ್ಯ ರಂಗವೇದಿಕೆಯಾಗಿವೆ. ಧ್ರುವ ರಾಠಿಯಂತಹ ಪ್ರಭಾವಿ ಸೃಷ್ಟಿಕರ್ತರು (Creators) ವಿದೇಶದಲ್ಲಿ ಕುಳಿತು ಭಾರತೀಯ ರಾಜಕಾರಣದ ಬಗ್ಗೆ ಪ್ರತಿದಿನ ವೀಡಿಯೊಗಳನ್ನು ಮಾಡುತ್ತಾ ಕೋಟ್ಯಂತರ ಯುವಕರನ್ನು ತಲುಪುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗೂ ಇದೆ. ಆದರೆ ಹಕ್ಕುಗಳ ಜತೆಗೆ ಜವಾಬ್ದಾರಿಯೂ ಇರಬೇಕಲ್ಲವೇ? ಕೋಟ್ಯಂತರ ಮನಸ್ಸುಗಳ ಮೇಲೆ ಗಾಢ ಪ್ರಭಾವ ಬೀರುವ ಈ ವೀಡಿಯೊಗಳಲ್ಲಿನ ಮಾಹಿತಿ ಕೇವಲ ಊಹಾತ್ಮಕವಾಗಿದ್ದಾಗ ಜವಾಬ್ದಾರಿಯ ಪ್ರಶ್ನೆ ಮುಂಚೂಣಿಗೆ ಬರುತ್ತದೆ. ಸಿಜೆಪಿ (CJP) ಯಂತಹ ವೇದಿಕೆಗಳಿಗೂ ಇಂತಹ ವ್ಯಕ್ತಿಗಳಿಗೂ ಇರುವ ಒಡನಾಟವೇನು, ಇವರ ನಿಧಿ ಮೂಲಗಳು ಯಾವುವು ಮತ್ತು ವಿದೇಶಿ ನಂಟುಗಳೇನು ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇವುಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಸರ್ಕಾರ ಹಾಗೂ ತನಿಖಾ ಸಂಸ್ಥೆಗಳು ಇವುಗಳ ಬಗ್ಗೆ ಸಂಪೂರ್ಣ ಪಾರದರ್ಶಕವಾಗಿ, ಸತ್ಯಾಸತ್ಯತೆಯನ್ನು ಹೊರತರಬೇಕು. ತಪ್ಪು ಮಾಡಿರುವವರು ಯಾರೇ ಆಗಲಿ, ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯನ್ನು ಎದುರಿಸಲೇಬೇಕು.
ಇಂತಹ ಆಂದೋಲನಗಳ ಅಸಲಿ ಬೆಲೆ ತೆರಬೇಕಾಗಿರುವುದು ಇವುಗಳ ಸಂಘಟಕರೊಂದಿಗೆ ಯಾವುದೇ ಸಂಬಂಧವಿಲ್ಲದ ನತದೃಷ್ಟರು. ಒಂದು ದಿನದ ಬಂದ್ ದಿನಗೂಲಿ ಕಾರ್ಮಿಕನ ಹೊಟ್ಟೆಮೇಲೆ ತಣ್ಣೀರು ಬಟ್ಟೆ ಬೀಳಿಸುತ್ತದೆ. ಬೆಂಕಿಹಚ್ಚುವಿಕೆಯಿಂದ ಸಣ್ಣಪುಟ್ಟ ಅಂಗಡಿಗಳನ್ನು ಕಳೆದುಕೊಂಡ ಬಡ ವ್ಯಾಪಾರಿಗೆ ಯಾವ ವಿಮೆಯೂ ಅಥವಾ ಪರಿಹಾರವೂ ಸಿಗುವುದಿಲ್ಲ. ಟ್ರಾಫಿಕ್ ಜಾಮ್ನಲ್ಲಿ ಸಿಲುಕಿರುವ ಆಂಬುಲೆನ್ಸ್ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ರೋಗಿಯ ನರಳಾಟ ಯಾರಿಗೂ ಕೇಳಿಸುವುದಿಲ್ಲ. ಪರೀಕ್ಷೆಗೆ ಹೊರಟ ವಿದ್ಯಾರ್ಥಿ ಹಾಗೂ ಕೆಲಸಕ್ಕೆ ಹೋಗುವ ಸಾಮಾನ್ಯ ಉದ್ಯೋಗಿ ಈ ಗುಂಪುಗಳ ಅನ್ಯಾಯದ ಒತ್ತೆಯಾಳುಗಳಾಗಬೇಕಾಗುತ್ತದೆ. 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಯಲ್ಲಿ ಎಷ್ಟು ಅಮಾಯಕ ಜೀವಗಳು ಬಲವಾದವು, ನೂರಾರು ಕುಟುಂಬಗಳು ಬೀದಿಪಾಲಾದವು! 26 ಜನವರಿ 2021ರಂದು ಕೆಂಪುಕೋಟೆಯ ಬಳಿ ನಮ್ಮ ಹೆಮ್ಮೆಯ ರಾಷ್ಟ್ರೀಯ ಚಿಹ್ನೆಗೆ ಅವಮಾನ ಮಾಡಿ, ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ನಡೆಸಲಾಯಿತು. ಹೀಗೆ ಜನರನ್ನು ಉದ್ರೇಕಿಸಿ ದಂಗೆ ಎಬ್ಬಿಸಿದವರಲ್ಲಿ ಎಷ್ಟು ಮಂದಿ ತಕ್ಕ ಶಿಕ್ಷೆ ಅನುಭವಿಸಿದ್ದಾರೆ?
ನಮ್ಮ ಸುತ್ತಮುತ್ತಲಿನ ದೇಶಗಳಲ್ಲಿ ನಡೆದಿರುವ ಘಟನೆಗಳು ನಮಗೆ ದೊಡ್ಡ ಎಚ್ಚರಿಕೆಯಾಗಬೇಕು. 2024ರಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಚಳವಳಿಯು ಹಿಂಸಾಚಾರ ಮತ್ತು ಬೆಂಕಿಚುಚ್ಚಾಟಕ್ಕೆ ತಿರುಗಿ ಅಲ್ಲಿನ ಸರ್ಕಾರವೇ ಪತನಗೊಂಡಿತು; ಅಲ್ಪಸಂಖ್ಯಾತ ಹಿಂದೂ, ಬೌದ್ಧ ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಮೇಲೆ ಭೀಕರ ದಾಳಿಗಳು ನಡೆದವು. ಇನ್ನು 2025ರ ಸೆಪ್ಟೆಂಬರ್ನಲ್ಲಿ ನೇಪಾಳದಲ್ಲಿ ಸಾಮಾಜಿಕ ಜಾಲತಾಣದ ನಿಷೇಧದ ವಿರುದ್ಧ ಆರಂಭವಾದ ಯುವಕರ ಪ್ರತಿಭಟನೆಯು ದೇಶದ ಸಂಸತ್ತು ಹಾಗೂ ನಾಯಕರ ಮನೆಗಳಿಗೆ ಬೆಂಕಿ ಇಡುವ ಮಟ್ಟಕ್ಕೆ ಬೆಳೆದು ಸರ್ಕಾರವೇ ಕುಸಿದುಹೋಯಿತು. ಈ ಎಲ್ಲ ಕಡೆಗಳಲ್ಲೂ ಪ್ರತಿಭಟನೆ ಆರಂಭವಾಗಿದ್ದು ನಿಜವಾದ ಅಸಮಾಧಾನದಿಂದಲೇ. ಆದರೆ ಕಾಲಕಾಲಕ್ಕೆ ಸರ್ಕಾರಗಳು ಪರಿಸ್ಥಿತಿಯನ್ನು ಹತೋಟಿಗೆ ತರದೆ ಹೋದಾಗ, ಆ ಆಂದೋಲನದ ಚುಕ್ಕಾಣಿಯು ಬೇರೆಬೇರೆ ಸ್ವಾರ್ಥಿ ಅಜೆಂಡಾಗಳಿದ್ದ ಕಿಡಿಗೇಡಿಗಳ ಕೈ ಸೇರಿಕೊಂಡಿತು. ಭಾರತವು ಈ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ಅಂಥದ್ದೇ ಅನಾಹುತಕ್ಕೆ ಕಾಯಬಾರದು. ದೇಶದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯಿಂದ ಸರ್ಕಾರ ಹಿಂದೆ ಸರಿಯಬಾರದು.
ನಕ್ಸಲಿಸಮ್ ವಿರುದ್ಧ ಸರ್ಕಾರ ಯಾವ ಮಟ್ಟದ ದೃಢತೆಯನ್ನು ಮೆರೆದಿತೋ, ಅದೇ ಕಠಿಣ ನಿಲುವು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಪ್ರತಿಯೊಂದು ಶಕ್ತಿಯ ವಿರುದ್ಧವೂ ತೋರಬೇಕಿದೆ. ಪಕ್ಷ ಅಥವಾ ಸಿದ್ಧಾಂತ ಯಾವುದೇ ಇರಲಿ, ಗಲಭೆ ಮತ್ತು ಅಶಾಂತಿಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಿ ತ್ವರಿತಗತಿಯ ನ್ಯಾಯಾಲಯದ ಮೂಲಕ ಶಿಕ್ಷೆಗೆ ಗುರಿಪಡಿಸಬೇಕು. ಸಾರ್ವಜನಿಕ ಆಸ್ತಿಗೆ ಉಂಟಾದ ನಷ್ಟವನ್ನು ಅಂತಹ ಗಲಭೆಕೋರರು ಹಾಗೂ ಸಂಘಟಕರ ವತಿಯಿಂದಲೇ ವಸೂಲಿ ಮಾಡಬೇಕು. ಸುಳ್ಳು ಹಾಗೂ ಪ್ರಚೋದನಾಕಾರಿ ಸಂದೇಶಗಳ ಮೂಲಕ ಸಮಾಜದಲ್ಲಿ ಒಡಕು ಮೂಡಿಸುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಐಟಿ ಕಾನೂನುಗಳ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿದೇಶಿ ಅನುದಾನದ ಕುರಿತು ಬರುವ ಪ್ರತಿಯೊಂದು ಆರೋಪದ ಬಗ್ಗೆಯೂ ನ್ಯಾಯಾಂಗ ತನಿಖೆಯಾಗಬೇಕು. ಈ ಕಾನೂನು ಕ್ರಮಗಳು ಕೇವಲ ನ್ಯಾಯಾಲಯದಲ್ಲಿ ನಿಲ್ಲುವುದಷ್ಟೇ ಅಲ್ಲ, ಸಾರ್ವಜನಿಕರ ದೃಷ್ಟಿಯಲ್ಲೂ ಅತ್ಯಂತ ಪಾರದರ್ಶಕವಾಗಿ ಗೋಚರಿಸಬೇಕು.
ಸರ್ಕಾರದ ನೀತಿಗಳನ್ನು ವಿರೋಧಿಸುವುದು ಪ್ರಜಾಪ್ರಭುತ್ವದ ಮೂಲಭೂತ ಶಕ್ತಿಯೇ ಹೊರತು, ಹಿಂಸೆ ಮತ್ತು ಅರಾಜಕತೆಯಲ್ಲ. ರಸ್ತೆ ತಡೆ, ಬೆಂಕಿ ಹಚ್ಚುವಿಕೆ ಹಾಗೂ ಸುಳ್ಳು ಸುದ್ದಿಗಳನ್ನು ಹರಡುವ ಕಿಡಿಗೇಡಿಗಳಿಗೆ ಮೃದು ಧೋರಣೆ ತೋರುವುದು ಈ ದೇಶದ ಶಾಂತಿಪ್ರಿಯ ಕೋಟ್ಯಂತರ ನಾಗರಿಕರಿಗೆ ಮಾಡುವ ದ್ರೋಹವಾಗುತ್ತದೆ. ದೇಶಕ್ಕೆ ಈಗ ಸ್ಪಷ್ಟ ಸಂದೇಶದ ಅಗತ್ಯವಿದೆ: ಮಾತನಾಡುವ ಸಂಪೂರ್ಣ ಸ್ವಾತಂತ್ರ್ಯವಿದೆ, ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಪರವಾನಗಿಯಿಲ್ಲ. ಅಪರಾಧಿ ಬೀದಿ ಗಲಭೆಕೋರನಿರಲಿ, ಟಿವಿ ಪರದೆ ಮೇಲೆ ಮೆರೆಯುವ ಪ್ರಭಾವಿ ಮುಖವಾಗಿರಲಿ ಅಥವಾ ಅಧಿಕಾರ ಹಿಡಿಯಲು ಹವಣಿಸುವ ಮಹತ್ವಾಕಾಂಕ್ಷಿಯಾಗಿರಲಿ- ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಗಟ್ಟಿಯಾಗಿ ಸಾರಬೇಕು.
- ಡಾ. ಮಯಾಂಕ್ ಚತುರ್ವೇದಿ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
