ಪಶ್ಚಿಮ ಬಂಗಾಳ: ನವೆಂಬರ್ 13, 2026 : ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಪ್ರಚಾರಕ ಸುಂದರ್ ಪಾಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು 200ಕ್ಕೂ ಹೆಚ್ಚು ಜನರು ಸೇರಿದ್ದರು. ಸಂಘಟನಾ ಕಾರ್ಯ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರು ಸಲ್ಲಿಸಿದ ಜೀವನಪರ್ಯಂತದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ನವೆಂಬರ್ 11ರಂದು ಸಂಜೆ 4 ಗಂಟೆಗೆ ಹೂಗ್ಲಿ ಜಿಲ್ಲೆಯ ದ್ವಾರಹಟ್ಟಾದ ಬ್ರಹ್ಮಚಾರಿ ಜ್ಯೋತಿರ್ಮಯ ಸರಸ್ವತಿ ಶಿಶು ಮಂದಿರದಲ್ಲಿ ಈ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಆರೆಸ್ಸೆಸ್ನ ದ್ವಾರಹಟ್ಟಾ ಶಾಖೆಯು ದಿವಂಗತ ಸುಂದರ್ ಪಾಲ್ ಅವರ ಜೀವನ, ಸಮರ್ಪಣೆ ಮತ್ತು ಸಂಘಟನಾ ಕಾರ್ಯಗಳಲ್ಲಿನ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಸುಂದರ್ ಪಾಲ್ ಅವರು ಹಿರಿಯ ಆರೆಸ್ಸೆಸ್ ಪ್ರಚಾರಕರಾಗಿದ್ದರು. ಅರುಣಾಚಲ ಪ್ರದೇಶ ಮತ್ತು ತ್ರಿಪುರದಲ್ಲಿ ಬಿಜೆಪಿಯ ಮಾಜಿ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಮಧ್ಯ ಬಂಗ ಪ್ರಾಂತ ಕಾರ್ಯಕಾರಿಣಿಯ ಆಹ್ವಾನಿತ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಸವಾಲಿನ ಪರಿಸ್ಥಿತಿಗಳ ನಡುವೆಯೂ ಈಶಾನ್ಯ ಭಾರತದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಹಿರಿಯ ಪ್ರಚಾರಕ ಶ್ರೀ ಅದ್ವೈತ ಚರಣ್ ದತ್ತ, ಪೂರ್ವ ಕ್ಷೇತ್ರ ಪ್ರಚಾರಕ ಶ್ರೀ ರಾಮಪದ ಪಾಲ್, ಪೂರ್ವ ಕ್ಷೇತ್ರ ಬೌದ್ಧಿಕ ಪ್ರಮುಖ್ ಶ್ರೀ ಬಲರಾಮ್ ದಾಸರಾಯ್, ಮಧ್ಯ ಬಂಗ ಪ್ರಾಂತ ಪ್ರಚಾರಕ ಶ್ರೀ ಕೃಷ್ಣ ಮಂಡಲ್, ಕ್ರೀಡಾ ಭಾರತಿಯ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಶ್ರೀ ಮಧುಮಯ್ ನಾಥ್ ಮತ್ತು ಹೂಗ್ಲಿ ವಿಭಾಗ ಸಂಘಚಾಲಕ ಶ್ರೀ ಸುನಿಲ್ ಬಾಗ್ ಸೇರಿದಂತೆ ಹಲವು ಹಿರಿಯ ಸಂಘದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುಂದರ್ ಪಾಲ್ ಅವರ ಕುಟುಂಬ ಸದಸ್ಯರು, ಹರಿಪಾಲ್ ಮತ್ತು ಸಿಂಗೂರ್ ವಿಧಾನಸಭಾ ಕ್ಷೇತ್ರಗಳ ಇಬ್ಬರು ಚುನಾಯಿತ ಪ್ರತಿನಿಧಿಗಳು ಹಾಗೂ ಹೂಗ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ಮತ್ತು ಕುಟುಂಬ ಸದಸ್ಯರು ದಿವಂಗತ ಪ್ರಚಾರಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಹಾರಗಳನ್ನು ಅರ್ಪಿಸಿದರು. ಬಳಿಕ ಭಗವದ್ಗೀತೆ ಮತ್ತು ವೇದಮಂತ್ರಗಳ ಪಠಣದೊಂದಿಗೆ ಕಾರ್ಯಕ್ರಮದ ವಿಧಿವಿಧಾನಗಳು ಆರಂಭವಾದವು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಕಳುಹಿಸಿದ್ದ ಸಂತಾಪ ಸಂದೇಶಗಳನ್ನು ಸಭೆಯಲ್ಲಿ ಓದಲಾಯಿತು. ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಡಾ. ಸುಕಾಂತ ಮಜುಂದಾರ್, ರಾಜ್ಯ ಕೃಷಿ ಸಚಿವ ದುಧ್ ಕುಮಾರ್ ಮಂಡಲ್ ಮತ್ತು ಅಸ್ಸಾಂ ಪ್ರದೇಶ ಬಿಜೆಪಿ ಅಧ್ಯಕ್ಷ ಹಿತೇಶ್ವರ್ ಸೈಕಿಯಾ ಅವರೂ ಸುಂದರ್ ಪಾಲ್ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದರು.
ಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಪ್ರಚಾರಕರಾಗಿ ಸುಂದರ್ ಪಾಲ್ ಅವರು ನಡೆಸಿದ ಸಮರ್ಪಿತ ಜೀವನ, ಅವರ ಅಸಾಧಾರಣ ಸಂಘಟನಾ ಸಾಮರ್ಥ್ಯ, ಸೇವಾ ಮನೋಭಾವ, ರಾಜಕೀಯ ಒಳನೋಟ ಮತ್ತು ರಾಷ್ಟ್ರ ನಿರ್ಮಾಣದ ಬದ್ಧತೆಯನ್ನು ಸ್ಮರಿಸಿದರು. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಸಂಘಟನಾ ಜಾಲವನ್ನು ವಿಸ್ತರಿಸಿ ಬಲಪಡಿಸುವಲ್ಲಿ ಅವರು ನೀಡಿದ ಕೊಡುಗೆಗೆ ವಿಶೇಷ ಒತ್ತು ನೀಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಪ್ರಚಾರಕ ಶ್ರೀ ಅದ್ವೈತ ಚರಣ್ ದತ್ತ ಅವರು ಸುಂದರ್ ಪಾಲ್ ಅವರಿಗೆ ಹೃದಯಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. ಆದರ್ಶಗಳ ಬಗೆಗಿನ ಅವರ ಅಚಲ ಬದ್ಧತೆ, ಕರ್ತವ್ಯನಿಷ್ಠೆ, ನಾಯಕತ್ವದ ಗುಣಗಳು, ಸಂಘಟನಾ ಸಾಮರ್ಥ್ಯ ಮತ್ತು ಸಾರ್ವಜನಿಕ ಸೇವೆಯಲ್ಲಿನ ಸಮರ್ಪಣೆಯನ್ನು ಸ್ಮರಿಸಿದರು.
ಮರಣವು ಪ್ರಕೃತಿಯ ಅನಿವಾರ್ಯ ನಿಯಮ. ಆದರೆ, ವ್ಯಕ್ತಿಯ ನಿಜವಾದ ಪರಂಪರೆ ಎಂದರೆ ಆತ ತನ್ನ ಕಾರ್ಯ ಮತ್ತು ಸಮರ್ಪಣೆಯ ಮೂಲಕ ಸಮಾಜದ ಮೇಲೆ ಬಿಟ್ಟುಹೋಗುವ ಶಾಶ್ವತವಾದ ಪ್ರಭಾವ ಎಂದು ಅವರು ಹೇಳಿದರು. ಜಗತ್ತಿನಲ್ಲಿ ಅಳಿಸಲಾಗದ ಗುರುತು ಮೂಡಿಸಬೇಕು ಎಂಬ ಸ್ವಾಮೀಜಿಯವರ ಸಂದೇಶವನ್ನು ಉಲ್ಲೇಖಿಸಿದ ಅವರು, ಸುಂದರ್ ಪಾಲ್ ಅವರು ನಿಸ್ವಾರ್ಥ ಸೇವೆ ಮತ್ತು ಜೀವನಪರ್ಯಂತದ ಸಮರ್ಪಣೆಯ ಮೂಲಕ ಅಂತಹ ಅಳಿಸಲಾಗದ ಗುರುತನ್ನು ಮೂಡಿಸಿದ್ದಾರೆ ಎಂದು ತಿಳಿಸಿದರು.
ಆತ್ಮದ ಅಮರತ್ವ ಮತ್ತು ಪುನರ್ಜನ್ಮದ ನಂಬಿಕೆಯನ್ನು ಪ್ರತಿಪಾದಿಸುವ ಹಿಂದೂ ತತ್ತ್ವಶಾಸ್ತ್ರವನ್ನು ಉಲ್ಲೇಖಿಸಿದ ಶ್ರೀ ದತ್ತ ಅವರು, ಸ್ವಾಮಿ ಅಭೇದಾನಂದರ ‘ಮರಣೇರ್ ಪಾರೆ’ (ಮರಣದ ನಂತರ) ಎಂಬ ಪುಸ್ತಕದ ಬಗ್ಗೆಯೂ ಪ್ರಸ್ತಾಪಿಸಿದರು. ಸುಂದರ್ ಪಾಲ್ ಅವರ ಆತ್ಮವು ಇಂದಿಗೂ ಜೀವಂತವಾಗಿದ್ದು, ಹೊಸ ರೂಪದಲ್ಲಿ ಮತ್ತೆ ಮರಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ದೇಶಸೇವೆ ಮತ್ತು ಸಂಘದ ಸಂಘಟನಾ ಚಟುವಟಿಕೆಗಳನ್ನು ವಿಸ್ತರಿಸುವ ಏಕೈಕ ಉದ್ದೇಶದಿಂದಲೇ ಸುಂದರ್ ಪಾಲ್ ಅವರು ಪ್ರಚಾರಕ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಅವರು ಹೇಳಿದರು. ಆದ್ದರಿಂದ, ಅಗಲಿದ ಈ ಕಾರ್ಯಕರ್ತನಿಗೆ ಸಲ್ಲಿಸಬಹುದಾದ ಅತ್ಯಂತ ಅರ್ಥಪೂರ್ಣ ಶ್ರದ್ಧಾಂಜಲಿ ಎಂದರೆ ಅವರು ಆರಂಭಿಸಿದ ಕಾರ್ಯವನ್ನು ಮುಂದುವರಿಸುವುದು ಮತ್ತು ಈ ಪ್ರದೇಶದಲ್ಲಿ ಸಂಘದ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸುವುದಾಗಿದೆ ಎಂದು ಒತ್ತಿ ಹೇಳಿದರು.
ಕೊನೆಯಲ್ಲಿ ದಿವಂಗತ ಸುಂದರ್ ಪಾಲ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಶ್ರೀ ದತ್ತ ಅವರು ಪ್ರಾರ್ಥಿಸಿದರು. ಶಾಂತಿ ಮಂತ್ರದ ಪಠಣದೊಂದಿಗೆ ಗಂಭೀರ ವಾತಾವರಣದಲ್ಲಿ ಕಾರ್ಯಕ್ರಮ ಮುಕ್ತಾಯಗೊಂಡಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
