ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-45
ತುರ್ತು ಪರಿಸ್ಥಿತಿಯ ನಂತರ ಫೆಬ್ರವರಿ 17, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ
1975ರ ಜುಲೈ 11. ನಾನು ಜಬ್ಬಲ್ಪುರ ಜಿಲ್ಲೆಯ ಮಂಡಲಾ ತಹಸೀಲಿನ ನಗರದ ಬಸ್ ಸ್ಟಾಂಡ್ನಲ್ಲಿ ನಿಂತಿದ್ದೆ. ಪೊಲೀಸರು ಹಿಡಿದು ಠಾಣೆಗೆ ಒಯ್ದರು. ಅಲ್ಲಿ ನನ್ನ ವಿಚಾರಣೆ. ನನ್ನ ಜೇಬಿನಲ್ಲಿ ಸಿಕ್ಕಿದ ಡೈರಿಯಲ್ಲಿದ್ದ ಹೆಸರು – ವಿಳಾಸಗಳ ಬಗ್ಗೆ ಪ್ರಶ್ನೆ. ಸಾಧ್ಯವಾದಷ್ಟೂ ಉತ್ತರಿಸಿದೆ. ಅಂದು ರಾತ್ರಿ ಪೊಲೀಸರ ವಶದಲ್ಲಿ ನನ್ನನ್ನು ಬಂಧಿಸಿಟ್ಟಿದ್ದರು. ಮರುದಿನ ವಿಚಾರಣೆಗೆ ಠಾಣೆಯ ಕಛೇರಿಗೆ ಒಯ್ದರು. ಬಸ್ ಸ್ಟಾಂಡ್ನಲ್ಲಿ ನನ್ನ ಸ್ವಂತ ಹಣದಲ್ಲಿ ಊಟಮಾಡಲು ಉದಾರವಾಗಿ ಅನುಮತಿ ನೀಡಿದರು!.
ಸಂಜೆ 04 ಘಂಟೆಗೆ ಸಬ್ ಜೈಲಿಗೆ ಒಯ್ದು ಮೀಸಾ ಬಂದಿಗಳ ಜೊತೆ 2 ದಿನ ಇಟ್ಟರು. ದಿ.14ರಂದು ನ್ಯಾಯಾಲಯದೆದುರು ಹಾಜರುಮಾಡಿದರು. “ನಿಮಗೆ ಜಾಮೀನು ನೀಡಲು ಯಾರಾದರೂ ಬಂದಿದ್ದಾರೆಯೇ?” ಎಂದು ಮಾನ್ಯ ನ್ಯಾಯಾಧೀಶರು ಕೇಳಿದರು. “ಈ ಬಗ್ಗೆ ಪೂರ್ವಸೂಚನೆ ಇರಲಿಲ್ಲ” ಎಂದು ಉತ್ತರಿಸಿದೆ.
ಯಾರು ಅಪರಾಧಿ?
“ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟಿದ ಅಪರಾಧವನ್ನು ಒಪ್ಪುವಿರೋ? ಅಥವಾ ಮೊಕದ್ದಮೆ ನಡೆಸುವಿರೋ?” ನ್ಯಾಯಾಧೀಶರ ಪ್ರಶ್ನೆ.
ಅದಕ್ಕೆ ನನ್ನ ಉತ್ತರ: “ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕನಾಗುವುದು ಪಾಪವೇ? ದೇಶದ್ರೋಹವೇ? ಭಾರತಮಾತಾ ಕೀ ಜೈ ಎಂದುದು ಪಾಪವೇ ? ರಾಷ್ಟ್ರಧರ್ಮಕ್ಕಾಗಿ, ದೇಶಕ್ಕಾಗಿ ಕಾರ್ಯ ಮಾಡಿದೆ. ಇದು ಪಾಪವೇ? ಇಡೀ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಿರಪರಾಧಿ ಜನರನ್ನು ಜೈಲಿಗೆ ದೂಡುತ್ತಿರುವುದು ಎಂತಹ ನ್ಯಾಯ? ಸರ್ಕಾರವು ನ್ಯಾಯವನ್ನು ತುಳಿದುಹಾಕಿದೆ. ಸರ್ಕಾರವು ನ್ಯಾಯದಾನ ಮಾಡಲಾರದು. ನ್ಯಾಯಾಧೀಶರಿಂದಲೇ ನ್ಯಾಯ ದೊರೆಯುವುದೆಂಬ ಆಸೆಯಿದೆ. ಇಡೀ ದೇಶದಲ್ಲಿ ನೀವೆಲ್ಲ ನ್ಯಾಯಾಧೀಶರ ಬಾಯಿ ಏಕೆ ಮುಚ್ಚಿದೆ? ಅನ್ಯಾಯ ಆಗುತ್ತಿರುವಾಗ ನೀವು ನ್ಯಾಯಕ್ಕಾಗಿ ಏಕೆ ಬಾಯ್ತೆರೆಯಬಾರದು? ನ್ಯಾಯಕ್ಕಾಗಿ ಎಲ್ಲಿ ಹೋಗಬೇಕು? ಇಡೀ ರಾಜ್ಯದಲ್ಲಿ, ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಾರೂಢ ಪಕ್ಷವು ನನ್ನ ಮೇಲೆ ನಡೆಸುತ್ತಿರುವ ಅನ್ಯಾಯದಿಂದ ನನ್ನನ್ನು ಮುಕ್ತಗೊಳಿಸಿರಿ. ನೀವು ನ್ಯಾಯಾಧೀಶರು – ಸರ್ಕಾರ ಮತ್ತು ಪಕ್ಷಕ್ಕಿಂತ ಮೇಲಿನವರು. ನೀವು ನನಗೆ ನ್ಯಾಯದಾನ ಮಾಡಿರಿ ಎಂದು ನನ್ನ ಪ್ರಾರ್ಥನೆ”.
ತಲೆಬಾಗಿಸಿಕೊಂಡು ಎಲ್ಲ ಮಾತುಗಳನ್ನು ಕೇಳಿಕೊಂಡ ನಂತರ, ಆಗಸ್ಟ್ 02ಕ್ಕೆ ವಿಚಾರಣೆ ಮುಂದೂಡಿದ್ದಾಗಿ ನಯವಾಗಿ ಹೇಳಿದರು ನ್ಯಾಯಾಧೀಶರು.
ಪ್ರತ್ಯಕ್ಷ ನರಕ
ಎರಡು ದಿನ ಮಂಡಲಾ ತಹಸೀಲ್ ಸಬ್ಜೈಲಿನಲ್ಲಿ ಮೀಸಾ ಬಂದಿಗಳ ಜೊತೆ ಇಡಲಾಯಿತು. ಅಲ್ಲಿ ಚಹ, ದಪ್ಪರೊಟ್ಟಿ, ಎರಡು ಹಿಡಿ ಅನ್ನ, ತಿಳಿಸಾರು ಕೊಡುತ್ತಿದ್ದರು. ಸಾದಾ, ಆದರೆ ತುಂಬ ಊಟ ಕೊಡಲು ಒತ್ತಾಯಿಸಿದೆ, ಪ್ರಯೋಜನವಾಗಲಿಲ್ಲ… ಒಂದು ಸಣ್ಣಪಾತ್ರೆ, ನೀರು ಕುಡಿಯಲು ಒಂದು ಲೋಟ, ಸ್ನಾನ ಮಾಡಲು ಒಂದು ಬಕೆಟ್ ಕೇಳಿದೆ. ಅದೂ ಸಿಗಲಿಲ್ಲ, ಮೀಸಾ ಬಂದಿಗಳಿಗೆ ಹೇರ್ ಕಟಿಂಗ್ ಮತ್ತು ಮುಖಕ್ಷೌರಕ್ಕೆ ಪ್ರತ್ಯೇಕ ವ್ಯವಸ್ಥೆ ಇಲ್ಲ, ಇತರ ಕೈದಿಗಳು “ಗಿಡದ ಎಲೆ ಕತ್ತರಿಸುವ ಕತ್ತರಿಯಿಂದ ತಲೆಗೂದಲು ಕತ್ತರಿಸುತ್ತಾರೆ. ಅವರಿಂದಲೇ ಕಟಂಗ್ ಮಾಡಿಸಿಕೊಳ್ಳಿ” ಎಂದರು.
ನನ್ನನ್ನು ಒಂದು ಸಣ್ಣ ಕೋಣೆ (ಅಪರಾಧಿ ಕೈದಿಗಳ ಕೋಣೆ)ಗೆ ದೂಡಿದರು. ಅದು 5×7 ಅಳತೆಯದು. ಅದರಲ್ಲಿ ಕೈದಿಗಳ ಮಲಮೂತ್ರ ಎಷ್ಟೋ ದಿನಗಳಿಂದ ಬಿದ್ದಿತ್ತು. ದುರ್ನಾತದಿಂದ ವಾಕರಿಕೆ ಬರುತ್ತಿತ್ತು. ಉಸಿರು ಕಟ್ಟುತ್ತಿತ್ತು. ತಕ್ಷಣ ಸ್ವಚ್ಛ ಮಾಡಿಸಲು ಒತ್ತಾಯಿಸಿದೆ. ಮರುದಿನ ಬೆಳಿಗ್ಗೆ ಮಾಡಿಸುವುದಾಗಿ ಹೇಳಿ, ಆಗ ಅಲ್ಲಿಯೇ ನನಗೆ ಊಟ ಕೊಡಲು ಹವಾಲ್ದಾರ ಆದೇಶ ನೀಡಿದ. ಅರ್ಧ ಘಂಟೆಯೊಳಗೆ ಸ್ವಚ್ಛಮಾಡಿಸದಿದ್ದರೆ ಕಂಬಿಗೆ ತಲೆಚಚ್ಚಿಕೊಳ್ಳುವುದಾಗಿಯೂ ಪರಿಣಾಮಕ್ಕೆ ಅವರೇ ಹೊಣೆಯೆಂದೂ ಹೇಳಿದೆ. ಜೈಲರರ ಅಪ್ಪಣೆ ಪಡೆದು ಕೂಡಲೇ ಸ್ವಚ್ಛಪಡಿಸಿದರು!.
ಚಿಕ್ಕ ಕೋಣೆ. ನೆಲ ಗುಂಡಿ ಬಿದ್ದಿತ್ತು. ಬೆಳಕು ಇಲ್ಲ. ಇಲ್ಲಿ ನಾನು ಹತ್ತು ತಿಂಗಳು ಇರಬೇಕಾಗಿತ್ತು!. ಹಾಸಲು-ಹೊದಿಯಲು ಕೆಳದರ್ಜೆ ಕಂಬಳಿ ತುಂಡುಗಳನ್ನು ಕೊಟ್ಟರು. ಸ್ವಲ್ಪ ಕೊಡವಿದರೂ ತುಪ್ಪಟ ಉದುರುತ್ತಿತ್ತು. ಕಂಬಳಿಗಳ ಮೇಲೆ ಕಾಗದದ ತುಂಡುಗಳನ್ನೂ, ನನ್ನ ಹರಿದ ಶಲ್ಯವನ್ನೂ, ಹಾಸಿ ಮಲಗುತ್ತಿದ್ದೆ. ನರ್ಮದಾ ದಂಡೆಯ ಮೇಲಿನ ಕೊರೆಸುವ ಗಾಳಿ. ರಾತ್ರಿಯ ಭಯಂಕರ ಶೀತದಿಂದ ಕಾಲಿನ ಮತ್ತು ಕೈಯ ಬೆರಳುಗಳು ಸೆಟೆದುಕೊಳ್ಳುತ್ತಿದ್ದವು. ಬಟ್ಟೆ ಕೇಳಿದರೆ ಕೊಡಲಿಲ್ಲ. ಅಲ್ಲಿ ನೀಡಲಾದ ಯಾತನೆಯಿಂದಾಗಿ ನಾನು ಸಾಯಬೇಕು ಇಲ್ಲವೇ ಹುಚ್ಚನಾಗಬೇಕಾಗಿತ್ತು. ‘ಸಾಯಿಸು ಇಲ್ಲವೇ ಸಾಯಲು ಬಿಡು’ ಎನ್ನುವ ಸ್ಥಿತಿಯಲ್ಲಿ ನನ್ನನ್ನು ಇಡಲಾಗಿದೆ ಎಂದು ನನಗೆ ಅನಿಸುತ್ತಿತ್ತು. ಸಂಜೆ 3 ಮಡಕೆಗಳಲ್ಲಿ ನೀರು ತುಂಬಿಸಿಡುತ್ತಿದ್ದರು. ರಾತ್ರಿಯ ಭಾರಿ ಶೀತದಲ್ಲಿ ಅದು ಮಂಜಿನಂತೆ ಕೊರೆಯುತ್ತಿತ್ತು. ಅದನ್ನೇ ಮರುದಿನ ಮತ್ತೆ ನೀರು ತುಂಬುವವರೆಗೆ ಉಪಯೋಗಿಸಬೇಕಾಗುತ್ತಿತ್ತು. ಸರಿಯಾದ ಬಟ್ಟೆಗಳಿರಲಿಲ್ಲ. ಚಳಿ ಬೇರೆ. ತಣ್ಣೀರು. ಬಿಸಿಲು ಕಾಯಿಸಲೂ ಅವಕಾಶ ಇಲ್ಲ. ಹೀಗಿತ್ತು ಸ್ಥಿತಿ.
ಊಟದಲ್ಲಿ ಸೀಮೆಎಣ್ಣೆ
ಅಪರಾಧಿ ಕೈದಿಗಳಿಗೆ ನೀಡಿದಂತೆಯೇ ನನಗೂ ಕೀಳುದರ್ಜೆಯ ಊಟ, ಒಂದು ದಿನವಂತೂ ಸಾರು, ಪಲ್ಯ, ರೊಟ್ಟಿಗೆ ಸೀಮೆಎಣ್ಣೆ ಹಾಕಿದ್ದರು. ಹಸಿದಿದ್ದ ಕಾರಣ ಅದನ್ನೇ ಸ್ವಲ್ಪ ತಿಂದೆ. ವಾಂತಿಯಾಯಿತು. ನಂತರ ಪ್ರಜ್ಞೆ ತಪ್ಪಿಬಿದ್ದೆ. ಸ್ವಲ್ಪ ಹೊತ್ತಾದ ಮೇಲೆ ಜ್ಞಾನ ಬಂತು. ಹವಾಲ್ದಾರನನ್ನೂ ಕಾವಲು ಪೊಲೀಸರನ್ನೂ ಕೂಗಿದೆ. ಹವಾಲ್ದಾರನಿಗೆ ಊಟದಲ್ಲಿ ಸೀಮೆಎಣ್ಣೆ ಬೆರೆತಿರುವ ವಿಷಯ ತಿಳಿಸಿದೆ. ಕೂಡಲೇ ಅವನು ಜೈಲರರನ್ನು ಅಲ್ಲಿಗೆ ಕರೆ ತಂದ. “ಊಟದಲ್ಲಿ ಸೀಮೆಎಣ್ಣೆ ಬೆರೆತಿರುವುದು ಸುಳ್ಳು, ಬೇರಾರಿಂದಲೂ ದೂರು ಬಂದಿಲ್ಲ” ಎಂದು ಜೈಲರ್ ವಾದಿಸಿದರು. “ಊಟ ಇಲ್ಲೇ ಇದೆ, ನೋಡಿ, ನಾನೇನೂ ಸುಳ್ಳು ಹೇಳುತ್ತಿಲ್ಲ” ಎಂದು ಮಲಗಿಕೊಂಡೇ ಹೇಳಿದೆ.
ಬೇರೆ ಊಟ ತರಲು ಹೇಳಿದರು. ಮೊದಲು ಇರುವ ಊಟವನ್ನು ಪರೀಕ್ಷಿಸಲು ಜೈಲಿನ ಡಾಕ್ಟರರನ್ನು ಕರೆಸಿ, ಅವರ ವರದಿ ಮೇಲೆ ಕಳಿಸಿ ಎಂದು ಒತ್ತಾಯಿಸಿದೆ. ಇದಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದೆ. ಡಾಕ್ಟರರು ಪರಿಶೀಲಿಸಿ ನನ್ನ ಮಾತು ನಿಜವೆಂದು ಒಪ್ಪಿದರು. ಪ್ರಕರಣವನ್ನು ಅಲ್ಲಿಗೇ ಮುಗಿಸಲು ಜೈಲರರು ಕೈಮುಗಿದು ಕೇಳಿದ್ದರಿಂದ ಸುಮ್ಮನಾದೆ.
ಡಿಸೆಂಬರ್ ಚಳಿ ತಡೆಯದಾದೆ. ಜ್ವರ ಬಂತು. ಡಾಕ್ಟರರು ಔಷಧಿಕೊಟ್ಟರೂ ಗುಣಕಾಣದ್ದರಿಂದ ನನ್ನ ಹಾಸಿಗೆ – ಹೊದಿಕೆ ಬಟ್ಟೆ ಅಭಾವ ಕಾರಣವೆಂದು ಕಂಡುಹಿಡಿದರು. ಕೂಡಲೇ ಒಮ್ಮೆಗೇ ಐದು ಕಂಬಳಿ ತರಿಸಿಕೊಟ್ಟರು!.
ಆ ಕೋಣೆಯಲ್ಲಿ ಕಳೆದ ಹತ್ತು ತಿಂಗಳು ಹತ್ತು ಯುಗಗಳೆನಿಸಿದುವು. ಅಲ್ಲಿ ಕಾಣಬರುತ್ತಿದ್ದ ಇತರ ಮಾನವಪ್ರಾಣಿಗಳೆಂದರೆ ನನಗೆ ಊಟ ತರುತ್ತಿದ್ದ ಅಪರಾಧಿ ಕೈದಿಗಳು. ಅವರೊಡನೆಯೂ ಹೆಚ್ಚು ಮಾತನಾಡುವಂತಿರಲಿಲ್ಲ. ಪತ್ರಿಕೆಯನ್ನಂತೂ ಕೊಡಲೇ ಇಲ್ಲ. ಲೋಕಸಭಾ ಚುನಾವಣೆ ನಂತರ 1977ರ ಮಾರ್ಚ್ 21ರಂದು ನನ್ನ ಬಿಡುಗಡೆಯಾಯಿತು.
- ಚಾಮರಾಜನಗರದ ಡಿ.ಎಸ್. ಕೃಷ್ಣಪ್ಪ ರಾ.ಸ್ವ.ಸಂಘದ ಸಿಹೋರಾ ತಾಲ್ಲೂಕು ಪ್ರಚಾರಕ (ಮಧ್ಯಪ್ರದೇಶ)
ಸೆರೆಮನೆಯೊಳಗೆ- ದೂರದಿಂದಲೇ ನಮಸ್ಕಾರ!
1975, ಸೆಪ್ಟೆಂಬರ್ 14, ಭಾನುವಾರ. ಪುನಃ ಪ್ರಾತಃಸ್ಮರಣೆ, ‘ಆರದಿಹ ಆದರ್ಶಜ್ವಾಲೆಯ ಅರ್ಚಿಸುವೆ ನಾ ದಿನದಿನಾ’ ಹಾಡು; ಸಂಜೆ ಪ್ರಾರ್ಥನೆ, ಭಜನೆ ಮತ್ತು ‘ತುಮನೆ ಸೋತಾ ದೇಶ್ ಜಗಾಯಾ’ ಹಾಡಿನ ಕಾರ್ಯಕ್ರಮಗಳ ಆರಂಭ. ಹೇಳಿಕೊಡುವವರು ದ್ವಾರಕಾನಾಥ. ತಗಣೆ ವಿಪರೀತ. ಡಿಡಿಟಿ ಹೊಡೆಸಿದರೆ ಹೆಚ್ಚಾಗುವುದೇ ಹೊರತು ಕಡಿಮೆಯಿಲ್ಲ. ಕೈ ಹಾಕಿದರೆ ಬೊಗಸೆತುಂಬ ಬಾಚಬಹುದು! ಅಧಿಕಾರಿಗಳಿಗೆ ಹೇಳಿದರೆ “ದೊಡ್ಡ ಪಂಪಿಗೆ ಬರೆದು ಹಾಕುತ್ತೇವೆ” ಎಂದು ಉತ್ತರ. ದಿ.16ರಂದು ಎ.ಕೆ. ಸುಬ್ಬಯ್ಯನವರನ್ನು ಬಂಧಿಸಿ ಮಲ್ಲಿಕಾರ್ಜುನಯ್ಯನವರ ಒಟ್ಟಿಗೆ ಇಟ್ಟಿದ್ದಾರೆಂದು ಸುದ್ದಿ ಬಂದಿತು. ಬೆಳಿಗ್ಗೆ ಆಸ್ಪತ್ರೆಗೆ ಹೋಗುವಾಗ ನಂಜುವಮ್ಮಯ್ಯ (ಕೇಸರಿ ಪ್ರೆಸ್ ಮ್ಯಾನೇಜರ್), ಉದಯಪ್ರಭು ಮತ್ತು ವಿನಾಯಕ ಪ್ರಭು (ಅಣ್ಣತಮ್ಮಂದಿರು) ಕಣ್ಣಿಗೆ ಬಿದ್ದರು. ‘ಕಹಳೆ’ ಪ್ರಕರಣದಲ್ಲಿ ಅವರನ್ನು ಬಂಧಿಸಿ ಡಿಐಆರ್ ಅನ್ವಯ ಮೊಕದ್ದಮೆ ಹೂಡಿದ್ದಾರೆಂದು ನಂತರ ಗೊತ್ತಾಯಿತು. ಕರ್ನಾಟಕ ಉಚ್ಚ ನ್ಯಾಯಾಲದಲ್ಲಿ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆಗಾಗಿ ಅಟಿಲಜಿ, ಅದ್ವಾನಿ, ದಂಡವತೆ ಮತ್ತು ಎಸ್.ಎನ್. ಮಿಶ್ರರನ್ನು ಬೆಂಗಳೂರು ಜೈಲಿಗೆ ಕರೆತರಲಿದ್ದಾರೆಂಬ ಸುದ್ದಿ ದಿ.17ರಂದು ಬಂದಿತು.
ರೋಹಟಕ್ ಜೈಲಿನಲ್ಲಿದ್ದ ಅಟಲಜಿ ಮತ್ತು ಗುರುಗಾಂವ್ನಲ್ಲಿದ್ದ ಮೊರಾರ್ಜಿಯವರನ್ನು ಕಾಣಲು ಹರಿಯಾಣದ ಮುಖ್ಯಮಂತ್ರಿ ಬನ್ಸಿಲಾಲ್ ಬಂದಿದ್ದರೆಂದೂ ಅವರೊಡನೆ ಮಾತನಾಡಲು ಇಬ್ಬರೂ ನಿರಾಕರಿಸಿದರೆಂದೂ ಸೆ.20ರಂದು ಸುದ್ದಿ. ಹೊರಗೆ ತೀವ್ರ ಭಯದ ವಾತಾವರಣ ಇದೆ ಎಂದು ಸಂದರ್ಶನಕ್ಕೆ ಬಂದಿದ್ದ ತನ್ನ ಅಣ್ಣ ಹೇಳಿದರೆಂದು ನಂದಕುಮಾರ್ ಹೇಳಿದರು. ಯಾರಿಗೇ ಸಂದರ್ಶನ ಬರಲಿ, ಹೊರಗಿನಿಂದ ಬರುವ ಸುದ್ದಿ ಏನೆಂದು ತಿಳಿಯುವ ಕಾತರ ಎಲ್ಲರಿಗೂ. ದಿ. 26ರಂದು ಬೆಳಿಗ್ಗೆ ಪತ್ರಿಕೆಗಳು ಬರಲೇ ಇಲ್ಲ. ಹೊರಗೆ ಏನೋ ನಡೆದಿರಬೇಕು, ಅದರ ಸುದ್ದಿ ಪತ್ರಿಕೆಗಳಲ್ಲಿ ಬಂದಿರಬೇಕು, ಆದುದರಿಂದಲೇ ಕೊಡಲಿಲ್ಲ ಎಂದು ಊಹೆ.
ಶಿವಮೊಗ್ಗದ ಖ್ಯಾತ ವೈದ್ಯರು, ಜನಸಂಘದ ಪ್ರಾಂತೀಯ ಅಧ್ಯಕ್ಷರು ಮತ್ತು ಸಮಾಜ ಸೇವೆಯಲ್ಲಿ ಪ್ರಮುಖರಾಗಿದ್ದ ಡಾ| ಕೆ.ಎಂ. ದತ್ತಾತ್ರಿಯವರು ಸೆ. 25ರಂದು ನಿಧನರಾದ ಸುದ್ದಿ ಬಾರಕಿನಲ್ಲಿ ಎಲ್ಲರನ್ನೂ ದುಃಖಕ್ಕೀಡುಮಾಡಿತು. ಅವರ ಆತ್ಮಕ್ಕೆ ಶಾಂತಿಯನ್ನೂ, ಸದ್ಗತಿಯನ್ನೂ ಕೋರಿದೆವು.
ರೋಹಟಕ್ನಿಂದ ಬೆಂಗಳೂರಿಗೆ ವರ್ಗಾಯಿಸಲ್ಪಟ್ಟ ಅದ್ವಾನಿಯವರು ಸೆ.26ರಂದು ವಾಚನಾಲಯದ ಎದುರು ನಿಂತಾಗ ಅಷ್ಟು ದೂರದಿಂದಲೇ ನಮಸ್ಕರಿಸಿದರು. ಪ್ರತಿನಮಸ್ಕಾರವೂ ಆಯಿತು. ಒಂದು ನಿಮಿಷ ಬ್ಯಾರಕಿನಲ್ಲಿದ್ದವರೆಲ್ಲ ಹೊರಬಂದು ಅವರನ್ನು ಕಂಡರು. ಪರಸ್ಪರ ಭೇಟಿ, ಮಾತುಕತೆಗೆ ಅವಕಾಶವಿಲ್ಲವಲ್ಲ ಎಂದು ಮನಸ್ಸಿನಲ್ಲಿ ಕಸಿವಿಸಿ!.
ಮೀಸಾ ಬಂಧು ಉವಾಚ
ಅಕ್ಕಿ ಗೋಧಿಯಲಿ ಕಲ್ಲು ಹೆಕ್ಕುವ ಕೆಲಸ
ಉಣುವ ದೇಹಕ್ಕದು ಆಗದು ದೊಡ್ಡ ಸಾಹಸ
ಆಲಸ್ಯ ಮಾಡಿದರೆ ಕಲ್ಲ ನಾವೇ ಉಣಬೇಕಲ್ಲ
ಚೊಕ್ಕವಾಗಿ ಮಾಡುವ ಕೆಲಸ ಮರ್ಯಾದೆಗೆ ಕುಂದಲ್ಲ.
– ರಾಮಭಟ್ಟ
19-12-76
