ಅಂಕಣ – ಸ್ವಾಸ್ಥ್ಯ ಸಂಪದ
- ಡಾ. ಶ್ರೀವತ್ಸ ಭಾರದ್ವಾಜ, ದತ್ತಂ ಆಯುರ್ಧಾಮ, ಮಂಗಳೂರು
ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ತುರಿಕೆ, ಕಜ್ಜಿಯನ್ನು ಅನುಭವಿಸಿಯೇ ಇರುತ್ತೇವೆ. ಈ ತುರಿಕೆ ಕಜ್ಜಿಗಳು ಕೇವಲ ಮನುಷ್ಯನಿಗೆ ಸೀಮಿತವಲ್ಲ, ಇದನ್ನು ಪ್ರಾಣಿಗಳೂ ಅನುಭವಿಸುತ್ತವೆ. ಹಿಂದೆಲ್ಲಾ ಕೆಲವು ಋತುಮಾನಕ್ಕೆ ಸೀಮಿತವಾಗಿದ್ದ ಈ ಸಮಸ್ಯೆ ಈಗ ಎಲ್ಲಾ ಋತುಗಳಲ್ಲಿ ಕಂಡುಬರುತ್ತದೆ. ಇವುಗಳ ಲಕ್ಷಣಗಳೇನು, ಇವು ನಮ್ಮ ಶರೀರಕ್ಕೆ ಹೇಗೆ ತಗಲುತ್ತದೆ ಎಂದು ನೋಡೋಣ ಬನ್ನಿ.
ಹೆಸರೇ ತಿಳಿಸುವ ಹಾಗೆ ತುರಿಕೆ ಇದರ ಮುಖ್ಯ ಲಕ್ಷಣ. ಈ ಸಹಿಸಲಾರದ ತುರಿಕೆ ಹೇಗಿರುತ್ತದೆ ಎಂದರೆ ನಾವಿರುವ ಜಾಗವನ್ನೇ ಮರೆತು, ನಾಚಿಕೆ ಬಿಟ್ಟು ಎಲ್ಲೆಂದರಲ್ಲಿ ತುರಿಸಲು ಪ್ರಾರಂಭಿಸುತ್ತೇವೆ. ತುರಿಸಿದ ಜಾಗದಲ್ಲಿ ಉರಿ, ದಡಿಕೆ ಕಂಡುಬರುತ್ತದೆ. ಯಾವ ಮುಲಾಮು ಕೂಡ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಲಾರದು ಎನ್ನುವ ತೀರ್ಮಾನಕ್ಕೆ ಬರುತ್ತೇವೆ. ಬೇಸಿಗೆಯ ಕಾಲದಲ್ಲಿ ಹೆಚ್ಚಾಗಿ ಕಾಡುವ ಈ ಸಮಸ್ಯೆಯ ಹಿಂಸೆ ವರ್ಣಿಸಲು ಅಸಾಧ್ಯ. ತುರಿಕೆ ಕಜ್ಜಿಗಳು ನಮಗೆ ಬರಲು ಹಲವಾರು ಕಾರಣಗಳಿವೆ. ಇವುಗಳನ್ನು ಶರೀರದ ಒಳಗಿನ ಕಾರಣ ಹಾಗೂ ಶರೀರದ ಹೊರಗಿನ ಕಾರಣಗಳೆಂದು ವಿಂಗಡಿಸಬಹುದು. ಶರೀರದ ಒಳಗಿನ ಕಾರಣಗಳಿಂದ ತುರಿಕೆ ಮತ್ತು ಕಜ್ಜಿ ಹೇಗೆ ಜನಿಸುತ್ತದೆ ಎಂದು ಯೋಚಿಸುತ್ತಿದ್ದೀರಾ? ನಾವು ತಿನ್ನುವ ಆಹಾರ, ನಿದ್ರಿಸುವ ಸಮಯ, ಮಾನಸಿಕ ಒತ್ತಡ ಹೀಗೆ ಹಲವಾರು ಕಾರಣಗಳಿಂದ ದೇಹದ ಜೀರ್ಣಶಕ್ತಿಯು ಕುಂಠಿತವಾಗುತ್ತದೆ. ಈ ರೀತಿ ಇದ್ದಾಗ ತಿಂದ ಆಹಾರದ ಸತ್ವವು ದೇಹವನ್ನು ಪೋಷಿಸುವುದಿಲ್ಲ. ಇದರಂದ ದೇಹದ ಅಂಗಾಂಗಗಳು ಒತ್ತಡದಿಂದ ಕೆಲಸ ಮಾಡಲು ಪ್ರಾಂಭಿಸುತ್ತವೆ. ಇಂತಹ ಸಮಯದಲ್ಲಿ ದೇಹದ ಉಷ್ಣತೆ ಜಾಸ್ತಿಯಾಗಿ ರಕ್ತವು ನಂಜಾಗುತ್ತದೆ. ಇದೇ ಕಾರಣದಿಂದ ಹಲವಾರು ಸಮಸ್ಯೆಗಳು ಶುರುವಾಗುತ್ತವೆ. ಇಂತಹ ಸಮಸ್ಯೆಗಳ ಪೈಕಿ ತುರಿಕೆ ಮತ್ತು ಕಜ್ಜಿಯೂ ಒಂದು. ಮಲಬದ್ಧತೆಯಿಂದ ದೇಹದಲ್ಲಿ ಕಶ್ಮಲಗಳು ಬೆಳೆದಾಗಲೂ ತುರಿಕೆ ಕಜ್ಜಿಗಳು ಬೆಳೆಯುತ್ತವೆ. ಇನ್ನು ದೇಹದ ಹೊರಗಿನ ಕಾರಣಗಳಲ್ಲಿ ಬಲುಮುಖ್ಯವಾದ ಕಾರಣವೆಂದರೆ ಶುಚಿತ್ವ. ಆಟವಾಡಿ ಮನೆಗೆ ಬಂದಾಗ, ಬಿಸಿಲಿನಿಂದ ಬಂದಾಗ, ತುಂಬಾ ಬೆವರಿದಾಗ, ಕ್ರಿಮಿಕೀಟಗಳು ಬಾಧಿಸಿದಾಗ, ರಾಸಾಯನಿಕ ವಸ್ತುಗಳನ್ನು ಬಳಸಿದಾಗ ನಮ್ಮ ಮೈಯಲ್ಲಿ ತುರಿಕೆ ಕಜ್ಜಿಗಳು ಹುಟ್ಟುತ್ತವೆ.
ಇವುಗಳು ಬಾಧಿಸದಂತೆ ನಾವೇನು ಮಾಡಬಹುದು?
● ನಾವು ಕುಡಿಯುವ ನೀರಿನ ಪ್ರಮಾಣವನ್ನು ಗಮನಿಸಿ ಅದನ್ನು ಸಮತೋಲನದಲ್ಲಿ ಇಡುವುದು ಮುಖ್ಯ.
● ಆಹಾರದಲ್ಲಿ ಸುಲಭವಾಗಿ ಜೀರ್ಣವಾಗುವ ನಾರುಯುಕ್ತ, ನೀರುಯುಕ್ತ ತರಕಾರಿಗಳನ್ನು ಹೆಚ್ಚು ಬಳಸಬೇಕು.
● ವಾರಕ್ಕೆ ಎರಡು ಬಾರಿಯಾದರೂ ಇಡೀ ಶರೀರಕ್ಕೆ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡಬೇಕು.
● ತುರಿಕೆ ಇದ್ದ ಜಾಗಕ್ಕೆ ಅರಶಿನವನ್ನು ಲೋಳೆಸರದೊಂದಿಗೆ ಮಿಶ್ರಣ ಮಾಡಿ ಹಚ್ಚುವುದು ಉತ್ತಮ.
● ಸ್ನಾನ ಮಾಡುವ ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಬೆರೆಸಿ ಮಿಂದರೆ ತುರಿಕೆ ಕಡಿಮೆಯಾಗುತ್ತದೆ.
● ಕಜ್ಜಿಗಳಿಗೆ ಮತ್ತು ಸೋರುತ್ತಿರುವ ಕಜ್ಜಿಗಳಿಗೆ ಶ್ರೀಗಂಧವನ್ನು ಲೇಪಿಸಿದರೆ ಪರಿಹಾರವಾಗುತ್ತದೆ.
● ಅತಿಯಾದ ತುರಿಕೆ ಇದ್ದಲ್ಲಿ ಪುದೀನಾ ಸೊಪ್ಪನ್ನು ಅರೆದು ಲೇಪಿಸಿದರೆ ಉಪಶಮನವಾಗುತ್ತದೆ.
● ಸ್ವಲ್ಪ ಅರಶಿನವನ್ನು ಆಪಲ್ ಸಿಡರ್ ವಿನೇಗರ್ನಲ್ಲಿ ಬೆರೆಸಿ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ.
● ತುರಿಕೆ ಇದ್ದಾಗ ಬಿಸಿನೀರಿನಲ್ಲಿ ಸ್ನಾನ ಮಾಡಬಾರದು.
● ಲೋಳೆಸರ ಮತ್ತು ಗುಲಾಬಿದಳಗಳನ್ನು ಅರೆದು ತುರಿಕೆ, ಕೆಂಪಾಗಿರುವ ಜಾಗಕ್ಕೆ ಲೇಪಿಸಿದರೆ ಶೀಘ್ರ ಶಮನವಾಗುತ್ತದೆ.
ಈ ಪರಿಹಾರಗಳೊಂದಿಗೆ ನಮ್ಮ ಆಹಾರ ಕ್ರಮವನ್ನು ಸರಿಯಾಗಿ ಪಾಲಿಸುವುದು ಅತ್ಯಗತ್ಯ. ನಮ್ಮ ಚರ್ಮವು ಆರೋಗ್ಯವಂತವಾಗಿದ್ದಲ್ಲಿ ಯಾವ ತುರಿಕೆ ಕಜ್ಜಿಗಳೂ ನಮ್ಮನ್ನು ಬಾಧಿಸುವುದಿಲ್ಲ.
