ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು
- ದು.ಗು. ಲಕ್ಷ್ಮಣ
ಎಲ್ಲ ವಸ್ತುಗಳಿಗೂ expiry date ಎಂಬುದಿರುತ್ತದೆ. ಆ ವಸ್ತುವನ್ನು ಒಳಗೊಂಡ ಪ್ಯಾಕೆಟ್ ಮೇಲೆ ಆ ದಿನಾಂಕ, ಇಸವಿ ನಮೂದಾಗಿರುತ್ತದೆ. ಹೀಗೆ ವಸ್ತು, ಪದಾರ್ಥಗಳಿಗೆ expiry date ಇರುವಂತೆ ಮನುಷ್ಯನಿಗೂ ಇರುತ್ತಾ? ಈ ಬಗ್ಗೆ ಅಭಿಪ್ರಾಯ ಬೇಧಗಳಿದ್ದರೂ 60 ವರ್ಷವೆಂದರೆ ಒಬ್ಬ ವ್ಯಕ್ತಿಯ ಬದುಕಿನ ವಾರಂಟಿ ಪಿರಿಯಡ್ ಎನ್ನಲಾಗುತ್ತದೆ. 60ರ ನಂತರದ ಬದುಕೇನಿದ್ದರೂ ಅದು ಬೋನಸ್ ಎನ್ನುತ್ತಾರೆ.
ಹಾಗಾಗಿಯೇ ಕೆಲವರು 60 ದಾಟಿದ ಬಳಿಕ ಜೀವನೋತ್ಸಾಹವನ್ನೇ ಕಳೆದುಕೊಂಡು ಬಿಡುತ್ತಾರೆ. ಇನ್ನೇನು ಜೀವನ ಮುಗಿದೇ ಹೋಯಿತು ಎನ್ನುವ ಹತಾಶೆಯ ಅಂಚಿಗೆ ತಲುಪಿಬಿಡುತ್ತಾರೆ. 60ರ ನಿವೃತ್ತಿ ಅನೇಕರನ್ನು ನಿತ್ರಾಣಗೊಳಿಸಿಬಿಡುತ್ತದೆ. ಕೆಲವರು ಮಾತ್ರ ಇದಕ್ಕೆ ಅಪವಾದ. 60 ದಾಟಿದ ನಂತರವೂ ಅವರ ಜೀವನೋತ್ಸಾಹದಲ್ಲಿ ಒಂದಿನಿತೂ ಏರುಪೇರು ಇರುವುದಿಲ್ಲ.
ಆ ಸಾಲಿಗೆ ಸೇರಿದವರಲ್ಲೊಬ್ಬರು ಇತ್ತೀಚೆಗೆ (ನವೆಂಬರ್ 18, 2023) ಕಾಲವಾದ ಗುಳೇದ ಗುಡ್ಡದ ನಿವೃತ್ತ ಶಿಕ್ಷಕರು, ಲೇಖಕರು ಹಾಗೂ ಸಾಮಾಜಿಕ ಕಾರ್ಯಕರ್ತರೂ ಆಗಿದ್ದ ಕಲ್ಯಾಣ ರಾವ್ ಮರಳಿ ಮಾಸ್ತರ್ (ಜನನ: 1946). ಗುಳೇದ ಗುಡ್ಡದ ನಿವಾಸಿಯಾಗಿದ್ದ ಕಲ್ಯಾಣ ಮರಳಿಯವರು ಸರ್ಕಾರಿ ಹೈಸ್ಕೂಲ್ನಲ್ಲಿ ಹಿಂದಿ, ಚರಿತ್ರೆ ಬೋಧಿಸುವ ಶಿಕ್ಷಕರಾಗಿ ದುಡಿದವರು. ನಿವೃತ್ತಿಗೆ ಮುನ್ನ ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿದ್ದ ಅವರು, 1968ರಿಂದ 1978ರವರೆಗೆ ಅಖಂಡ ವಿಜಾಪುರ ಜಿಲ್ಲಾ ಕಾರ್ಯವಾಹರಾಗಿ ಸಂಘಕಾರ್ಯಕ್ಕೆ ಹೆಗಲು ಕೊಟ್ಟಿದ್ದರು. 3 ವರ್ಷ ಇಂಡಿ ತಾಲೂಕಿನ ವಿಸ್ತಾರಕರಾಗಿ ಆರ್ಎಸ್ಎಸ್ಗೆ ನೀರೆರೆದಿದ್ದರು. ಗುಳೇದ ಗುಡ್ಡದಲ್ಲಿ ಸಂಘದ ಪ್ರೇರಣೆಯಿಂದ ಪ್ರಾರಂಭವಾಗಿ, ಈಗ ಸುಸ್ಥಿರವಾಗಿ ಎದ್ದು ನಿಂತಿರುವ ಸರಸ್ವತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರು. ಇನ್ನೂ ಹತ್ತು ಹಲವು ಬಗೆಯ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರದು ಸಕ್ರಿಯ ಪಾತ್ರ.
ನಿವೃತ್ತಿಯ ನಂತರ ಮರಳಿ ಮಾಸ್ತರ್ ವಾರಂಟಿ ಡೇಟ್ ಮುಗಿಯಿತೆಂದು ಮೂಲೆ ಹಿಡಿದು ಕೂರಲಿಲ್ಲ. ಅದುವರೆಗೆ ಯಾವುದೇ ಲೇಖನ ಬರೆದು ಅಭ್ಯಾಸವೇ ಇರದಿದ್ದ ಅವರು, ಪತ್ರಿಕೆಗಳಿಗೆ ಲೇಖನ, ಕವನ ಬರೆಯತೊಡಗಿದರು. ಆರಂಭದಲ್ಲಿ ಅವರು ಬರೆದಿದ್ದೆಲ್ಲ ಚೆನ್ನಾಗಿ ಇರುತ್ತಿರಲಿಲ್ಲವಾದರೂ ಆ ಲೇಖನಗಳ ವಸ್ತು ಎಲ್ಲರನ್ನೂ ಚಿಂತನೆಗೆ ಹಚ್ಚುವಂತೆ ಇರುತ್ತಿತ್ತು. ಅವುಗಳಲ್ಲೊಂದು ಸಾಮಾಜಿಕ ಕಳಕಳಿ ವ್ಯಕ್ತವಾಗಿರುತ್ತಿತ್ತು. ಕ್ರಮೇಣ ಚೆನ್ನಾಗಿ ಬರೆಯುವುದನ್ನು ರೂಢಿಸಿಕೊಂಡ ಅವರು, ವಿಕ್ರಮ, ಅಸೀಮಾ, ಹೊಸದಿಗಂತ, ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ನಿಯಮಿತವಾಗಿ ಬರೆಯತೊಡಗಿದರು. ಅನುವಾದ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡರು. 2011ರಲ್ಲಿ, ಹರಿದ್ವಾರದ ಕಿಶೋರ ದಾಸ್ ಹಿಂದಿಯಲ್ಲಿ ರಚಿಸಿದ ಭಗವದ್ಗೀತೆಯ ಗದ್ಯವನ್ನು ಕನ್ನಡಕ್ಕೆ ಭಾಷಾಂತರಿಸಿದರು. ವಿವಿಧ ಪತ್ರಿಕೆಗಳಿಗೆ ಬರೆದ ಸಾಮಯಿಕ ಲೇಖನಗಳ ಸಂಗ್ರಹ ‘ಜಯೋಸ್ತುತೇ’ ಕೃತಿಯನ್ನು ಹೊರತಂದಿದ್ದಾರೆ. ಕಳೆದ 2023ರಲ್ಲಿ ‘ಬಿಜೆಪಿ ನಡೆದು ಬಂದ ದಾರಿ’ ಎಂಬ ಕೃತಿಯನ್ನು ಬರೆದರು. ಬರೆದು, ಪರಿಷ್ಕರಣವಾಗಿ, ಮುದ್ರಣದ ಹಂತದಲ್ಲಿರುವಾಗಲೇ ಮರಳಿ ಮಾಸ್ತರ್ ತಮ್ಮ ಕೊನೆಯುಸಿರು ಚೆಲ್ಲಿದರು.
ಆದರೆ ಅಯೋಧ್ಯಾ ಪಬ್ಲಿಕೇಶನ್ಸ್ ನ ಪ್ರಕಾಶಕರಾದ ರೋಹಿತ್ ಚಕ್ರತೀರ್ಥ, ಮರಳಿಯವರ ಮಕ್ಕಳಾದ ಪ್ರದೀಪ್, ಪ್ರಸನ್ನ ಮತ್ತಿತರ ಮರಳಿ ಮಾಸ್ತರರ ಅಭಿಮಾನಿ ವರ್ಗ ಹಾಗೂ ಮುನ್ನುಡಿ ಬರೆದ ನಾನು ಒಗ್ಗೂಡಿ, ಆ ಕೃತಿ ಮುದ್ರಣವಾಗಿ ಬಿಡುಗಡೆಯ ಭಾಗ್ಯ ಕಾಣುವಂತೆ ಆಸ್ಥೆ ವಹಿಸಿದ್ದರಿಂದ, ಆ ಕೃತಿ ಬಿಡುಗಡೆಯಾಯಿತು. ಆ ಕೃತಿಯ ಬಿಡುಗಡೆಗೆ 35 ಸಾವಿರ ಜನಸಂಖ್ಯೆಯ ಗುಳೇದಗುಡ್ಡದ ಪುಟ್ಟ ಊರಿನಲ್ಲಿ 450ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು. ವಿಜಯಪುರ, ಜಮಖಂಡಿ, ಬಾಗಲಕೋಟೆ, ಕಮತಗಿ, ಅಥಣಿ, ಹುನಗುಂದ, ಬೆಂಗಳೂರು ಮೊದಲಾದ ಊರುಗಳಿಂದ ತಮ್ಮ ಮಾರ್ಗದರ್ಶಕ ಮರಳಿ ಮಾಸ್ತರ್ ಅವರ ದಿವ್ಯ ನೆನಪುಗಳನ್ನು ತುಂಬಿಕೊಳ್ಳಲೆಂದೇ ಅವರ ಅಭಿಮಾನಿಗಳು ಆಗಮಿಸಿದ್ದರು.
ಗುಳೇದ ಗುಡ್ಡದ ಸರಸ್ವತಿ ವಿದ್ಯಾಸಂಸ್ಥೆಯಲ್ಲಿ 16 ವರ್ಷ ಸೇವಾವ್ರತಿ ಶಿಕ್ಷಕಿಯಾಗಿ ದುಡಿದ, ಈಗ ಉಡುಪಿ ಸಮೀಪ ಪಡುಬಿದ್ರೆಯಲ್ಲಿ ನೆಲೆಸಿರುವ ಸುಮತಿ ಹೆಗಡೆ ಕೂಡ ರಾತ್ರಿಯಿಡೀ ಪ್ರಯಾಣಿಸಿ ಆ ಕಾರ್ಯಕ್ರಮಕ್ಕೆ ಬಂದಿದ್ದು ಮರಳಿ ಮಾಸ್ತರ್ ಬಗ್ಗೆ ಅವರಿಗಿದ್ದ ಅಭಿಮಾನಕ್ಕೆ ಸಾಕ್ಷಿಯಾಗಿತ್ತು. ನಾನು ಹಾಗೂ ಅಯೋಧ್ಯಾ ಪಬ್ಲಿಕೇಶನ್ಸ್ ನ ರೋಹಿತ್ ಚಕ್ರತೀರ್ಥ ಕೂಡ ಅತಿಥಿಗಳಾಗಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು.
78ರ ಇಳಿವಯಸ್ಸಿನಲ್ಲೂ ಈ ಪುಸ್ತಕದ ರಚನೆಗಾಗಿ ಮರಳಿ ಮಾಸ್ತರ್ ವಿಜಯಪುರ, ಬೆಂಗಳೂರು ಎಂದೆಲ್ಲ ಓಡಾಡುತ್ತಲೇ ಇದ್ದರು. ಅವರ ಜೀವನೋತ್ಸಾಹ ಕಂಡು ನಾಚಿ ತಲೆತಗ್ಗಿಸಬೇಕಾದ ಸರದಿ ನಮ್ಮೆಲ್ಲರದಾಗಿತ್ತು! ಇಡೀ ದೇಶ, ಅಷ್ಟೇಕೆ ಜಗತ್ತೇ ಕೊರೊನಾ ಮಾರಿಯಿಂದ ತತ್ತರಿಸಿಹೋಗಿದ್ದ ಕಾಲಘಟ್ಟವದು. ಇಳಿ ವಯಸ್ಸಿನಲ್ಲಿದ್ದ ಮರಳಿ ಮಾಸ್ತರ್ ಅವರಿಗೆ ತಮ್ಮ ಆರೋಗ್ಯದ ಬಗೆಗಿನ ಕಾಳಜಿಗಿಂತಲೂ ಕೊರೊನಾದ ಕಹಿನೆನಪುಗಳು ಮುಂದಿನ ಪೀಳಿಗೆಯವರಲ್ಲಿ ಮಾಸದಂತಿರಬೇಕು, ಕೊರೊನ ಕಾಲದಲ್ಲಿ ಬಳಕೆಯಾದ ಪದಗಳೆಲ್ಲ ಜನಮನದಲ್ಲಿ ಹಸಿರಾಗಿರಬೇಕು ಎಂಬ ಆಲೋಚನೆ ಹೇಗೆ ಹೊಳೆಯಿತೋ ಗೊತ್ತಿಲ್ಲ. ಅವರ ಶರೀರಕ್ಕೆ ವಯಸ್ಸಾಗಿದ್ದರೂ ಮನಸ್ಸು, ಚಿಂತನೆಗಳಲ್ಲಿ ತಾರುಣ್ಯ ತುಳುಕಾಡುತ್ತಿದ್ದುದಕ್ಕೇ ಇರಬಹುದು. Coronisation – Alphabetical chart ಅನ್ನು ತಯಾರಿಸಿಯೇ ಬಿಟ್ಟರು. ಇಂಗ್ಲಿಷ್ನ ವರ್ಣಮಾಲೆ Aಯಿಂದ ಆರಂಭವಾಗಿ Zವರೆಗೆ ಕೊರೊನಾಕ್ಕೆ ಸಂಬಂಧಿಸಿದ ಪದಗಳನ್ನು ಜೋಡಿಸಿ, ಪದಗಳಿಗೆ ಸೂಕ್ತಚಿತ್ರಗಳನ್ನು ಹುಡುಕಿಸಿ, ವಿನ್ಯಾಸಗೊಳಿಸಿ ಚಾರ್ಟ್ ಮುದ್ರಿಸಿ, ಬಿಡುಗಡೆಗೊಳಿಸಿದ ಮರಳಿ ಮಾಸ್ತರ್ ಅವರ ಸಾಹಸಕ್ಕೆ ಎಲ್ಲರೂ ಉಘೇ ಎನ್ನಲೇಬೇಕು. ಆಗ ಕೆಲವರಂತೂ ತಮ್ಮ ಜೀವವೊಂದನ್ನು ಉಳಿಸಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಯೋಚಿಸುವ ಗೊಡವೆಗೆ ಹೋಗಿರಲಿಲ್ಲ.
ಮರಳಿಯವರ ಈ ಕೊರೊನಾ ಚಾರ್ಟ್ ರಚನೆಗೆ ಸಾಥ್ ನೀಡಿದವರೆಂದರೆ ಬಾಗಲಕೋಟೆ ಜಿಲ್ಲಾಸ್ಪತ್ರೆಯ ವೈದ್ಯ ಡಾ. ಸಿ.ಎಸ್. ಜವಳಿ, ಪಿ.ಬಿ. ಜೇವೂರ್, ಗಿರೀಶ್ ಮೇದಾರ್ ಹಾಗೂ ಅವರ ಮೊಮ್ಮಗ (ಪ್ರದೀಪ್ ಮರಳಿಯವರ ಪುತ್ರ) 8ನೇ ತರಗತಿಯಲ್ಲಿದ್ದ ಅಭಿನವ್. ಮರಳಿಯವರ ಮೊಮ್ಮಗ ಅಭಿನವ್ ತಾತ ತಿಳಿಸಿದ ಕೊರೊನಾ ಶಬ್ದಗಳಿಗೆ ಗೂಗಲ್ ಸರ್ಚ್ ಮಾಡಿ, ಸೂಕ್ತವಾದ ಚಿತ್ರಗಳನ್ನು ಒದಗಿಸಿದ್ದನಂತೆ!.
ಕೊರೊನಾ ಚಾರ್ಟ್ ಅನ್ನು ಕೊರೊನಾ ವಾರಿಯರ್ಸ್ ಮತ್ತು ಭರತ ವರ್ಷದ ಮಕ್ಕಳಿಗೆ ಅರ್ಪಿಸಿರುವುದು ಮರಳಿ ಮಾಸ್ತರ್ ಅವರ ದೇಶಪ್ರೇಮ ಹಾಗೂ ಕೊರೊನಾ ಯೋಧರ ಮಾನವೀಯ ಕಾರ್ಯದ ಬಗ್ಗೆ ಅವರಿಗಿದ್ದ ಕಾಳಜಿಗೆ ದಿವ್ಯಸಾಕ್ಷಿ.
ಕೊರೊನಾ ಚಾರ್ಟ್ ರಚನೆಗೂ ಮುನ್ನ ಮೂರು ವರ್ಷಗಳ ಹಿಂದೆ ಮರಳಿ ಮಾಸ್ತರ್ ‘Nationalisation of A B C D
Alphabets’ ಎಂಬ ಚಾರ್ಟ್ ರಚಿಸಿ, A, B, C, D ವರ್ಣಮಾಲೆಗೆ ದೇಸೀ ಸೊಗಡು ಹಾಗೂ ದೇಶಭಕ್ತಿಯ ಘಮವನ್ನು ತುಂಬಿದ್ದರು. ಎ-ಆರ್ಯಭಟ, ಬಿ-ಬಸವೇಶ್ವರ, ಸಿ-ಚಾಣಕ್ಯ, ಡಿ-ದಯಾನಂದ ಸರಸ್ವತಿ, ಇ-ಏಕನಾಥ ರಾನಡೆ… ಹೀಗೆ ನಮ್ಮ ದೇಶದ ಪ್ರಾತಃಸ್ಮರಣೀಯ ಸಾಧಕರು, ಸುಧಾರಕರನ್ನು ಎಳೆದುತಂದು ಎ, ಬಿ, ಸಿ, ಡಿ ಚಾರ್ಟ್ ಗೆ ಹೊಸ ರೂಪ ನೀಡಿದ್ದರು. ತನ್ಮೂಲಕ ಬೆಳೆಯುವ ಎಳೆಯ ಮನಗಳಲ್ಲಿ ಆ ಪ್ರಾತಃಸ್ಮರಣೀಯರ ಬಗ್ಗೆ ಗೌರವಾದರ ಹಾಗೂ ಕುತೂಹಲ ಮೂಡಿಸಿದ್ದರು. ರಾಷ್ಟ್ರೋತ್ಥಾನ ಮುದ್ರಣಾಲಯದಲ್ಲಿ ಮುದ್ರಣಗೊಂಡ ಆ ವರ್ಣರಂಜಿತ ಚಾರ್ಟ್ ಸಾಕಷ್ಟು ಜನಪ್ರಿಯತೆ ಗಳಿಸಿತ್ತು.
ನಿವೃತ್ತಿಯ ಬಳಿಕ ಮರಳಿ ಮಾಸ್ತರ್ ಮಕ್ಕಳು, ಮೊಮ್ಮಕ್ಕಳೊಂದಿಗೆ ಆನಂದವಾಗಿ, ಆರಾಮವಾಗಿ ಕಾಲ ಕಳೆಯಬಹುದಿತ್ತು. ಆದರೆ ಅಷ್ಟಕ್ಕೇ ಬದುಕನ್ನು ಸೀಮಿತಗೊಳಿಸಿಕೊಳ್ಳುವ ಜೀವ ಅದಾಗಿರಲಿಲ್ಲ. ವಯಸ್ಸು ಮಾಗಿದ್ದರೂ ಹೊಸ ಚಿಂತನೆಗಳಿಗೆ ಮನಸ್ಸು, ಬುದ್ಧಿಗಳನ್ನು ಹೇಗೆ ತೆರೆದಿಡಬೇಕೆಂಬುದಕ್ಕೆ ಕಲ್ಯಾಣ ಮರಳಿ ಮಾಸ್ತರ್ ಉಜ್ವಲ ನಿದರ್ಶನ. “ರಿಟೈರ್ಡ್, ಬಟ್ ನಾಟ್ ಟೈರ್ಡ್” ಎಂಬ ಮಾತಿಗೆ ಇಂಥ ಮಹನೀಯರಲ್ಲವೇ ಮೇಲ್ಪಂಕ್ತಿಯಾಗಿ ನಿಲ್ಲಬಲ್ಲವರು!. ಅರವತ್ತರ ಬಳಿಕ ಜೀವನ ಮುಗಿದೇ ಹೋಯ್ತು ಎಂದು ಅನವಶ್ಯಕವಾಗಿ ಪರಿತಪಿಸುವವರಿಗೆ ಕಲ್ಯಾಣ ಮರಳಿ ಒಂದು ಆಶಾಕಿರಣ.
‘ಉತ್ತರ ಕರ್ನಾಟಕದಲ್ಲಿ ಸಂಘ ನಡೆದುಬಂದ ದಾರಿ’ ಎಂಬ ಕೃತಿಯೊಂದನ್ನು ಬರೆಯಬೇಕೆಂಬುದು ಮರಳಿ ಮಾಸ್ತರ್ ಅವರ ಕೊನೆಯಾಸೆ ಆಗಿತ್ತಂತೆ. ಆದರೆ ಅದು ಮಾತ್ರ ಕೈಗೂಡಲಿಲ್ಲ. ಕಲ್ಯಾಣ ಮರಳಿ ನನ್ನನ್ನೇಕೋ ಬಹಳಷ್ಟು ಹಚ್ಚಿಕೊಂಡಿದ್ದರು. ಒಮ್ಮೆ ಹಿಂದಿ ಲೇಖನವೊಂದರ ಕನ್ನಡ ಅನುವಾದಕ್ಕೆ ಅವರ ಬಳಿ ಕೊಟ್ಟಿದ್ದೆ. ಅವರ ಮನೆಯ ನವರಾತ್ರಿ ಗದ್ದಲದಲ್ಲಿ ಆ ಲೇಖನ ಎಲ್ಲೋ ಕಳೆದುಹೋಗಿತ್ತು. ಆದರೆ ಇದನ್ನು ಹೇಳಿಕೊಳ್ಳಲು ಅವರಿಗೇನೋ ಮುಜುಗರ. ಆದರೂ ಒಂದು ದಿನ ಫೋನ್ ಮಾಡಿ, “ದಯಮಾಡಿ ಕ್ಷಮಾ ಮಾಡ್ರಿ. ಬೇರೆ ಪ್ರತಿ ಕಳಿಸಿ. ಅನುವಾದಿಸಿ ಕೊಡ್ತೇನೆ” ಎಂದು ಇನ್ನಿಲ್ಲದಂತೆ ಗೋಗರೆದಿದ್ದರು. ಪರವಾಗಿಲ್ಲ, ಬಿಡಿ ಎಂದು ಎಷ್ಟು ಹೇಳಿದರೂ ಅವರಿಗೆ ಸಮಾಧಾನವಾಗಿರಲಿಲ್ಲ. ಅಂಥ ಮುಗ್ಧ, ನಿಷ್ಕಲ್ಮಶ ಮನಸ್ಸು ಅವರದಾಗಿತ್ತು.
ತುರ್ತು ಪರಿಸ್ಥಿತಿ, ರಾಮಜನ್ಮಭೂಮಿ ಆಂದೋಳನ, ಶಾಖಾ ವಿಸ್ತಾರ, ನೆರೆ ಹಾವಳಿ… ಇತ್ಯಾದಿ ಎಲ್ಲ ಸಂದರ್ಭಗಳಲ್ಲೂ ಮರಳಿಯವರದು ಸಕ್ರಿಯ ಪಾತ್ರ. ಈ ಸಕ್ರಿಯತೆಯ ಕಾರ್ಯ ನಿರ್ವಹಣೆಯ ನಡುವೆ ತನಗೆ ವಯಸ್ಸಾಗಿದೆ ಎಂಬುದೇ ಅವರ ಅರಿವಿಗೆ ಬರಲಿಲ್ಲ. ಕಾರ್ಯ ಮಾಡುತ್ತಾ ಮಾಡುತ್ತಲೇ ಕೊನೆಯುಸಿರೆಳೆದರು.
“ತ್ವದೀಯಾಯ ಕಾರ್ಯಾಯ…” ಸಂಘದ ಪ್ರಾರ್ಥನೆಯನ್ನು ಅಕ್ಷರಶಃ ಕೃತಿಗಿಳಿಸಿದ್ದರು.
