ಅಂಕಣ– ಕೃಷಿಯಿಂದ ಬದುಕು
ಸುರಭಿ ಕುಂಜ್ ಭಕ್ತಿ ಫಾರ್ಮ್ ನ ಅಭಿಷೇಕ್ ಮನದಾಳದ ಮಾತು
- ಸಂದೀಪ್ ಮಂಜುನಾಥ್, ಎಂ.ಎಸ್ಸಿ. ಕೃಷಿ, ಹುಣಸೂರು
ತುಮಕೂರಿನ ಪ್ರಸಿದ್ದ ‘ಶ್ರೀಷಾ’ ಸಾವಯವ ಮಳಿಗೆಯ ಅಭಿಷೇಕ್ ಅವರ ತೋಟ ನೋಡುವ ಅವಕಾಶವಾಯಿತು. ಅಜಪ್ಪನಹಳ್ಳಿ ಗ್ರಾಮದ ಸ್ವಂದೇನಹಳ್ಳಿಯಲ್ಲಿರುವ ಅಭಿಷೇಕ್ ಅವರ ‘ಸುರಭಿ ಕುಂಜ್ ಭಕ್ತಿ ಫಾರ್ಮ್’ ಸಾವಯವ ಕೃಷಿಯ ಹಲವು ಮಜಲುಗಳನ್ನು ತೆರೆದಿಡುತ್ತದೆ. ಮೂಲತಃ ಬಟ್ಟೆ ವ್ಯಾಪಾರ ಮಾಡುವ ಕುಟುಂಬದಲ್ಲಿ ಜನಿಸಿದ ಅಭಿಷೇಕ್ ಅವರಿಗೆ ಬಾಲ್ಯದಿಂದಲೂ ಗೋವು, ಗಿಡ ಮರಗಳೆಂದರೆ ಅಪಾರ ಪ್ರೀತಿ. ಮನೆದೇವರಾದ ದೇವರಾಯನ ದುರ್ಗಕ್ಕೆ ಪ್ರತಿಸಲ ಭೇಟಿಕೊಟ್ಟಾಗಲೂ ಅಲ್ಲಿನ ಪ್ರಕೃತಿ ಸೌಂದರ್ಯ ಇವರಿಗೆ ಬಹಳವೇ ಇಷ್ಟವಾಗುತ್ತಿತ್ತು. ಶಾಲೆಯಲ್ಲಿ ದೊಡ್ಡವನಾದ ಮೇಲೆ ಏನು ಆಗುತ್ತೀಯಾ? ಎಂದರೆ ಅರಣ್ಯಾಧಿಕಾರಿಯಾಗುತ್ತೇನೆ ಎಂದು ಉತ್ತರಿಸುತ್ತಿದ್ದರು ಅಭಿಷೇಕ್. ಕಾರಣಾಂತರಗಳಿಂದ ಎಂಸಿಎ ಪದವಿ ಪಡೆದು ಕೆಲಕಾಲ ಬೆಂಗಳೂರಿನ ಖಾಸಗಿ ಕಂಪೆನಿಗಳಲ್ಲಿ ಸೇವೆ ಸಲ್ಲಿಸಿದರು. ಸುಮಾರು 2008-09ರ ಸಮಯದಲ್ಲಿ ಇಸ್ಕಾನ್ ಸಂಸ್ಥೆಯ ಜೊತೆ ಬಾಂಧವ್ಯ ಹೆಚ್ಚಾಯಿತು. ಅಲ್ಲಿನ ಆಚಾರ್ಯರಾದ ಶ್ರೀ ಭಕ್ತಿ ರಾಘವ ಸ್ವಾಮಿಗಳ ಮಾತುಗಳಿಂದ ಪ್ರೇರಣೆ ಪಡೆದು ಕೆಲಸ ಬಿಟ್ಟು ಸ್ವಂತವಾಗಿ ಏನಾದರೂ ಮಾಡಬೇಕು ಎಂದು ನಿಶ್ಚಯಿಸಿ ತುಮಕೂರಿನಲ್ಲಿ ಕಾರ್ಟೂನ್ ಬಾಕ್ಸ್ ತಯಾರಿಸುವ ಕಾರ್ಖಾನೆ ತೆರೆದರು. ಸ್ವಂತ ಉದ್ಯಮವೇನೋ ಸರಿ, ಆದರೆ ಇಲ್ಲಿ ಮಣ್ಣಿನೊಂದಿಗೆ ಯಾವ ಬಂಧವೂ ಇಲ್ಲ. ಅಭಿಷೇಕ್ ಬಯಸಿದ ಗೋಮಾತೆಯ ಸೇವೆಯಾಗಲಿ, ಮಣ್ಣಿನೊಂದಿಗೆ ಇರುವ ಅವಕಾಶವಾಗಲಿ ಅದರಲ್ಲಿ ಸಿಗಲಿಲ್ಲ. ಮನೆಯವರ ವಿರೋಧವಿದ್ದರೂ 2016ರಲ್ಲಿ ಕಾರ್ಖಾನೆ ಮಾರಾಟ ಮಾಡಿ ‘ಶ್ರೀಷಾ’ ಸಾವಯವ ಮಳಿಗೆಯನ್ನು ಪ್ರಾರಂಭಿಸಿದರು. ಮುಂದೆ ಅವರ ಮಾತುಗಳಲ್ಲಿ…
ಶ್ರೀಷಾ ಸಾವಯವ ಮಳಿಗೆ ಸ್ಥಾಪನೆ
ಸುಮಾರು 2011ರಿಂದ ಸಾವಯವ ಕೃಷಿಕರ ಜಮೀನಿಗೆ ಭೇಟಿಕೊಡುವುದು, ಅವರಿಂದ ವಿವಿಧ ರೀತಿಯ ಕೃಷಿ ಪದ್ಧತಿಗಳನ್ನು ತಿಳಿಯುವುದು, ಅವರು ಬೆಳೆಯುವ ಉತ್ಪನ್ನಗಳನ್ನು ಖರೀದಿಸಿ ಮನೆಯಲ್ಲಿ ಉಪಯೋಗಿಸುವುದು ಹೀಗೆ ಎಷ್ಟು ಸಾಧ್ಯವೋ ಅಷ್ಟು ರೈತರ ಜೊತೆ ಇರುತ್ತಿದ್ದೆ. ಒಂದು ಕಡೆ ಸಾವಯವ ಕೃಷಿಕರಿಗೆ ಬೆಳೆ ಬೆಳೆಯುವುದೇ ಕಷ್ಟದ ಕೆಲಸ. ಬೆಳೆದರೂ ಸೂಕ್ತ ಮಾರುಕಟ್ಟೆ ಇರುವುದಿಲ್ಲ. ಇತ್ತ ಪೇಟೆಯ ಗ್ರಾಹಕರಿಗೆ ಒಳ್ಳೆಯ ಪದಾರ್ಥ ಸಿಕ್ಕರೆ ಸಾಕು ಎನ್ನುವ ಸ್ಥಿತಿ. ಇವರಿಬ್ಬರನ್ನೂ ಬೆಸೆಯಬೇಕೆಂದು ಶ್ರೀಷಾ ಸಾವಯವ ಮಳಿಗೆ ಪ್ರಾರಂಭಿಸಿದೆವು. ದೇಶದ ಹಲವು ಭಾಗಗಳಿಂದ ಸಾವಯವ ಉತ್ಪನ್ನಗಳನ್ನು ತರಿಸಿ ಮಾರಾಟ ಮಾಡಲು ಎಲ್ಲ ರೀತಿಯ ಸಿದ್ಧತೆ ಆಯಿತು. ಕ್ರಮೇಣವಾಗಿ ತುಮಕೂರಿನ ನಾಗರಿಕರಿಗೆ ದಿನಸಿಯ ಜೊತೆ ತಾಜಾ ಸೊಪ್ಪು, ತರಕಾರಿ, ಹಣ್ಣುಗಳನ್ನು ಸಹ ಒದಗಿಸುವ ಪ್ರಯತ್ನವಾಯಿತು. ಹೀಗೆ ಕಾರ್ಖಾನೆಯಿಂದ ಸಾಧ್ಯವಾಗದಿದ್ದುದನ್ನು ಸಾವಯವ ಮಳಿಗೆಯಲ್ಲಿ ಸ್ವಲ್ಪಮಟ್ಟಿಗೆ ಸಾಧಿಸಿದೆ. ಆದರೂ ನೇರವಾಗಿ ಭೂಮಿಯೊಂದಿಗೆ, ಗೋವುಗಳೊಂದಿಗೆ ಸಂಬಂಧ ಬೇಕೆಂಬ ನನ್ನ ಹಂಬಲ ಹಾಗೇ ಇತ್ತು.
ಕೋವಿಡ್ ಸಮಯದಲ್ಲಿ ಭೂಮಿ ಖರೀದಿ
2020ರ ಕೋವಿಡ್ ಸಮಯದಲ್ಲಿ ತುಮಕೂರಿನ ಹೊರವಲಯದಲ್ಲೇ 1.25 ಎಕರೆ ಜಮೀನು ಖರೀದಿಸುವಂತಾಯಿತು. ಈ ಹಿಂದೆ ತೋಟದಲ್ಲಿ ಕೆಲಸ ಮಾಡಿದ ಅಥವಾ ಹಸು ಸಾಕಿದ ಅನುಭವ ಇರಲಿಲ್ಲ. ಆದರೂ ಧೈರ್ಯ ಮಾಡಿ ಕೃಷಿ ಮಾಡಲೇಬೇಕೆಂದು ನಿಶ್ಚಯಿಸಿದೆ. ಪ್ರಗತಿಪರ ಸಾವಯವ ಕೃಷಿಕ ಅಮ್ನಘಟ್ಟ ಮಹೇಶ್ ಅಣ್ಣನ ಸಹಾಯದಿಂದ ತೋಟ ಮರುನಿರ್ಮಾಣದ ಕಾರ್ಯ ಪ್ರಾರಂಭವಾಯಿತು. ನಾವು ಜಮೀನು ಖರೀದಿಸಿದಾಗ ಇಲ್ಲಿ ಹಳೆಯ ತೆಂಗಿನ ಮರಗಳು ಯಾವುದೇ ಆರೈಕೆ ಇಲ್ಲದೆ ಇದ್ದವು. ಇದರ ಜೊತೆ ನನ್ನ ಅದೃಷ್ಟಕ್ಕೆ ದೊಡ್ಡ ಹುಣಸೆ ಮರ ಮತ್ತು ಹಲಸಿನ ಮರವಿತ್ತು. ಅಕ್ಕಪಕ್ಕದವರು ಇದನ್ನು ತೆಗೆದು ಅಡಕೆ ನೆಡಿ ಎಂದು ಎಷ್ಟು ಹೇಳಿದರೂ ನಾನು ಮರಗಳನ್ನು ತೆಗೆಯಲಿಲ್ಲ. ಇವೆಲ್ಲವುಗಳ ಜೊತೆ ನಮ್ಮ ಭೂಮಿಯ ಮತ್ತೊಂದು ವೈಶಿಷ್ಟ್ಯ ತೆರೆದ ಬಾವಿ ಮತ್ತು ಅದರಲ್ಲಿ ಈಗಲೂ ನೀರು ಇರುವುದು. ಇವುಗಳನ್ನೆಲ್ಲಾ ಕಾಪಾಡಿಕೊಂಡು ಮುಂದಿನ ಹೆಜ್ಜೆ ಇಟ್ಟೆವು.
ದೇಸಿ ಗೋಸಾಕಾಣಿಕೆಯಲ್ಲಿದೆ ಲಾಭ
ನಮ್ಮ ದೇಶದಲ್ಲಿ ಆಯಾ ವಾತಾವರಣಕ್ಕೆ ತಕ್ಕಂತೆ ಪ್ರತಿಯೊಂದು ಪ್ರಾಂತ್ಯದಲ್ಲೂ ಪ್ರತ್ಯೇಕ ದೇಸಿ ಹಸುಗಳ ತಳಿಗಳಿವೆ. ಎಷ್ಟೋ ಸಾವಿರ ವರ್ಷಗಳಿಂದ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡಿರುವ ಕಾರಣ ಇವುಗಳ ನಿರ್ವಹಣೆ ಸುಲಭ. ಇವು ಕಡಿಮೆ ಮೇವು ತಿಂದು ಔಷಧೀಯ ಗುಣವಿರುವ ಅಮೃತ ಸಮಾನವಾದ ಹಾಲು ನೀಡುತ್ತದೆ. ಹಾಲೊಂದೇ ಅಲ್ಲದೆ ಇವುಗಳ ಸಗಣಿಯಲ್ಲಿ ಕೋಟ್ಯಾನು ಕೋಟಿ ಉಪಯುಕ್ತ ಸೂಕ್ಷ್ಮಜೀವಿಗಳಿವೆ. ಗಂಜಲ ಕುಡಿದರೆ ಸಕಲ ರೋಗಗಳು ಮಾಯವಾಗುತ್ತವೆ ಎಂದು ನಮ್ಮ ಪೂರ್ವಿಕರು ತಿಳಿಸಿದ್ದಾರೆ. ಆದರೆ ನಮ್ಮಲ್ಲಿ ಸಾಕಷ್ಟು ರೈತರು ವಿದೇಶಿ ದನಗಳು ಹೆಚ್ಚು ಹಾಲು ನೀಡುತ್ತವೆ ಎನ್ನುವ ಕಾರಣಕ್ಕೆ ದೇಸಿ ದನಗಳನ್ನು ಸಾಕುವುದನ್ನೇ ಕೈ ಬಿಟ್ಟಿದ್ದಾರೆ. ಹಾಗಾಗಿ ಇಂದು ದೇಸಿ ದನಗಳು ಅವಸಾನದ ಅಂಚಿನಲ್ಲಿವೆ. ಇಂತಹ ತಳಿಗಳನ್ನು ಉಳಿಸಿ ಕೇವಲ ಹಾಲು ಮಾತ್ರವಲ್ಲದೇ ಅದರ ಪಂಚಗವ್ಯದಿಂದ ಆರ್ಥಿಕವಾಗಿ ಮುಂದುವರಿಯಬಹುದು ಎಂಬುದನ್ನು ತೋರಿಸಬೇಕು ಎನ್ನುವುದೇ ನಮ್ಮ ಉದ್ದೇಶ. ಹಾಗಾಗಿ ನಾಡಿನ ಹೆಮ್ಮೆಯ ತಳಿಗಳಾದ ಹಳ್ಳೀಕಾರ್, ಮಲೆನಾಡು ಗಿಡ್ಡ ಮತ್ತು ಹೋರಿಗಳನ್ನು ತಂದೆವು. ನಮ್ಮಲ್ಲಿ ಗಂಡುಕರು ಹುಟ್ಟಿದರೂ ಅವುಗಳನ್ನು ಮಾರಾಟಮಾಡದೆ ನಾವೇ ಬಳಸುತ್ತಿದ್ದೇವೆ. ಮುಂದೆ ಎತ್ತಿನ ಗಾಡಿ ಕಟ್ಟಿ ತುಮಕೂರಿಂದ ತೋಟಕ್ಕೆ ಮತ್ತಿತರ ಸ್ಥಳಗಳಿಗೆ ಪ್ರಯಾಣಿಸುವ ಉದ್ದೇಶವಿದೆ.
ಸಗಣಿ ಗಂಜಲದಿಂದ ಜೀವಾಮೃತ
ದೇಸಿಹಸುವಿನ ಸಗಣಿ ಗಂಜಲ ಬಳಸಿ ಜೀವಾಮೃತ, ಪಂಚಗವ್ಯ ಸಿದ್ಧಪಡಿಸಿ ತೆಂಗಿನ ಮರಗಳಿಗೆ ನೀಡಿದೆವು. ನೋಡ ನೋಡುತ್ತಲೇ ಮರಗಳು ಚೈತನ್ಯದಿಂದ ತುಂಬಿಕೊಂಡು ಕಾಯಿಗಳನ್ನು ನೀಡಲು ಪ್ರಾರಂಭಿಸಿದವು. ಇದರ ಜೊತೆಗೆ ಇತರೆ ಬೆಳೆಗಳನ್ನು ಬೆಳೆಯಲು ಆರಂಭಮಾಡಿದ ಮೇಲಂತೂ ಸಗಣಿ ಗೊಬ್ಬರದ ಮಹತ್ವ ಅರಿವಾಯಿತು. ಹೊರಗಿನಿಂದ ರಾಸಾಯನಿಕ ತರದೆ ಕೇವಲ ಸಗಣಿ ಗಂಜಲ ಬಳಸಿ ತರಕಾರಿ ಬೆಳೆಯಬಹುದು ಎಂಬ ನಂಬಿಕೆ ಮೂಡಿತು.
ವಾಸಿಸಲು ಪರಿಸರ ಸ್ನೇಹಿ ಮಣ್ಣಿನ ಮನೆ
ತುಮಕೂರಿನಿಂದ ನಿತ್ಯ ತೋಟಕ್ಕೆ ಓಡಾಡುವ ಬದಲು ತೋಟದಲ್ಲೇ ಉಳಿಯಬೇಕೆಂದು ಮಣ್ಣಿನ ಮನೆ ನಿರ್ಮಿಸಿದೆವು. ಗೋಡೆಗಳಿಗೆ ಪ್ರಾಕೃತಿಕ್ ಪೇಂಟ್ಸ್ ಅವರ ಸಗಣಿ ಪೇಂಟ್ ಬಳಸಿದ್ದೇವೆ. ಇನ್ನು ಸದಾ ಮಣ್ಣಿನ ಸಂಪರ್ಕದಲ್ಲಿರಬೇಕೆಂದು ನೆಲಕ್ಕೆ ಯಾವುದೇ ರೀತಿ ಟೈಲ್ಸ್ ಬಳಸದೆ ಹಾಗೇ ಬಿಟ್ಟಿದ್ದೇವೆ. ಆಗಾಗ ಸಗಣಿ ಬಗ್ಗಡ ಮಾಡಿ ಸಾರಿಸುತ್ತೇವೆ. ಮನೆಯಿಂದ ಕೊಟ್ಟಿಗೆಗೆ ಹೋಗಲು ಸಂಪರ್ಕವಿದ್ದು ಮುಂಜಾನೆ ಎದ್ದ ತಕ್ಷಣ ಗೋಮಾತೆಯ ದರ್ಶನ ಭಾಗ್ಯ ಸಿಗುತ್ತದೆ.
ಅಡುಗೆ ಅನಿಲಕ್ಕೆ ಗೋಬರ್ ಗ್ಯಾಸ್
Sistema bio ಅವರ ಆಧುನಿಕ ಗೋಬರ್ ಗ್ಯಾಸ್ ಘಟಕವನ್ನು ನಾವು ಅಳವಡಿಸಿಕೊಂಡಿದ್ದು, ಇದರಿಂದ ನಿತ್ಯ 3 – 4 ಗಂಟೆ ಒಲೆ ಉರಿಸಬಹುದಾಗಿದೆ. ಈ ಹಿಂದೆ ಗೋಬರ್ ಗ್ಯಾಸ್ ಘಟಕ ಸ್ಥಾಪಿಸಲು ದೊಡ್ಡ ಗುಂಡಿ ತೆಗೆಸಿ ಸಾಕಷ್ಟು ಸಮಯ, ಹಣ ಖರ್ಚು ಮಾಡಬೇಕಿತ್ತು. ಆದರೆ ಈಗ ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ನಿರ್ಮಿಸಬಹುದಾಗಿದೆ. ನಿತ್ಯ 50-60 ಕೆಜಿ ಸಗಣಿ ಮತ್ತು ಅಷ್ಟೇ ಪ್ರಮಾಣದ ನೀರು ಬೆರೆಸಿ ಗೋಬರ್ ಗ್ಯಾಸ್ ಘಟಕಕ್ಕೆ ನೀಡುತ್ತೇವೆ. ಮರುದಿನ ಅಷ್ಟೇ ಪ್ರಮಾಣ ಅಂದರೆ ಸುಮಾರು 100 ಲೀ. ಸ್ಲರಿ ಸಿಗುತ್ತದೆ. ಇದನ್ನು ಸ್ಲರಿ ಪಂಪ್ ಮೂಲಕ ತೋಟಕ್ಕೆ ನೀಡುತ್ತೇವೆ. ಹೆಚ್ಚಾದರೆ ಕೃಷಿ ತ್ಯಾಜ್ಯಗಳ ಮೇಲೆ ಸಿಂಪಡಿಸಿ ಗೊಬ್ಬರ ಮಾಡುತ್ತೇವೆ.
ಹಳೆಯ ಹೆಂಚುಗಳನ್ನು ಬಳಸಿ ತರಕಾರಿ ಮಡಿಗಳು
ತರಕಾರಿ ಬೆಳೆಯಲು 6 ಅಡಿ ಉದ್ದ, 3 ಅಡಿ ಅಗಲದ ಏರು ಮಡಿ ಮಾಡಿದೆವು. ಹಳೆಯ ಹೆಂಚುಗಳನ್ನು ಮಡಿಗಳ ಸುತ್ತ ಜೋಡಿಸಿದ ಕಾರಣ ಮಣ್ಣು ಸವಿಯುವುದಿಲ್ಲ. ಒಂದೊಂದು ಮಡಿಯಲ್ಲಿ ಒಂದೊಂದು ಬಗೆಯ ಸೊಪ್ಪುಗಳು ಅದರ ಜೊತೆಯಲ್ಲೇ ಕೋಸು, ಬದನೆ, ಟೊಮ್ಯಾಟೊ, ಬೆಂಡೆ ಇತ್ಯಾದಿ ತರಕಾರಿಗಳನ್ನು ಬೆಳೆಯುತ್ತಿದ್ದೇವೆ. ನೀರಿಗಾಗಿ ಮೈಕ್ರೋ ಸ್ಪ್ರಿಂಕ್ಲರ್ ವ್ಯವಸ್ಥೆಯಿದೆ.
ಬಾವಿಯಿಂದ ನೀರು ತೆಗೆಯಲು ಸೋಲಾರ್ ಪಂಪ್ ಅಳವಡಿಕೆ
ಸ್ವಾವಲಂಬಿ ಜೀವನ ನಡೆಸುವ ಹಾದಿಯಲ್ಲಿರುವ ನಾವು ಬಾವಿಯಿಂದ ನೀರು ತೆಗೆಯಲು ಸೆಲ್ಕೋ ಸಂಸ್ಥೆಯ ಸೋಲಾರ್ ಪಂಪ್ ಅಳವಡಿಸಿದ್ದೇವೆ. ಇದರಿಂದ ವಿದ್ಯುತ್ಗಾಗಿ ಕಾಯಬೇಕಿಲ್ಲ. ಬೇಸಿಗೆಯಲ್ಲಂತೂ ಸೂರ್ಯಾಸ್ತವಾಗುವವರೆಗೆ ನೀರು ಹಾಯಿಸಬಹುದು.
ಭಗವಂತನಿಗೆ ಸಮರ್ಪಿಸಲು ರಾಸಾಯನಿಕ ಮುಕ್ತ ಆಹಾರ
ಇಸ್ಕಾನ್ ಸೇರಿ ದಶಕಗಳು ಕಳೆದಿವೆ. ನಿತ್ಯ ಪೂಜೆ, ಭಗವಂತನಿಗೆ ನೈವೇದ್ಯ ಇತ್ಯಾದಿ ಕಾರ್ಯಗಳನ್ನು ಮಾಡಲು ನಮ್ಮ ತೋಟದಲ್ಲೇ ಬೆಳೆದ ರಾಸಾಯನಿಕ ಮುಕ್ತ ಆಹಾರ ಉತ್ಪಾದಿಸುತ್ತಿರುವುದು ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಪ್ರತಿ ಗ್ರಾಮವನ್ನೂ ‘ವೃಂದಾವನ’ ಗ್ರಾಮವಾಗಿ ಮಾರ್ಪಡಿಸಲು ಶ್ರಮಪಡುತ್ತೇನೆ. ಸಾವಯವ ಕೃಷಿ ಕೇವಲ ದೈಹಿಕವಾಗಿ ನಾವು ತಿನ್ನುವ ಆಹಾರಕ್ಕೆ ಸೀಮಿತಗೊಳಿಸದೆ ಆಧ್ಯಾತ್ಮಿಕವಾಗಿ ಭಗವಂತನ ಕಡೆಗೆ ಮೋಕ್ಷ ಪಡೆಯುವ ಕಡೆಗೆ ಸಾಗುವ ಮಾರ್ಗವಾಗಬೇಕಾಗಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು ಅಭಿಷೇಕ್. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 97317 33011.
