ಅಂಕಣ – ಕಡೆಗೋಲು
- ನಾರಾಯಣ ಶೇವಿರೆ, ಸಂಘಟನಾ ಕಾರ್ಯದರ್ಶಿ, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ
ಈ ವರ್ಷ ಮಾರ್ಚ್ ತಿಂಗಳಿನಿಂದಲೇ ಅಲ್ಲೊಂದು ಇಲ್ಲೊಂದು ಮಳೆ ಬೀಳಲು ಪ್ರಾರಂಭವಾಯಿತು. ಮಳೆಗಾಲ ಬೇಗನೇ ಪ್ರಾರಂಭವಾಗುವ ಮುನ್ಸೂಚನೆಯನ್ನು ಈ ಎದುರುಮಳೆ ನೀಡಿತ್ತು. ಹವಾಮಾನ ತಜ್ಞರೂ ಅದನ್ನೇ ಭವಿಷ್ಯ ನುಡಿದರು. ಜತೆಗೆ ಒಂದು ಎಚ್ಚರಿಕೆಯನ್ನೂ ಕೊಟ್ಟರು; ಈ ವರ್ಷ ಮಳೆಯ ಕೊರತೆ ಕಾಡಲಿದೆ! ಹಿಂದೆ ತಜ್ಞರ ಲೆಕ್ಕಾಚಾರಕ್ಕೆ ಸಿಗುತ್ತಿದ್ದ ಮಳೆಯು ಈಗೀಗ ಯಾಕೋ ಅಷ್ಟಾಗಿ ಸಿಗುತ್ತಿಲ್ಲ. ಸಿಲುಕುತ್ತಿಲ್ಲ. ಮಳೆಯ ಇರವು ಬರವು ಯಾವ ತಜ್ಞರ ಹಂಗೂ ಇಲ್ಲದೆ ಇದ್ದಂತಿದೆ. ಮಳೆಯೂ ಅಷ್ಟೇ. ಬಿಸಿಲೂ ಅಷ್ಟೇ. ಚಳಿಯೂ ಅಷ್ಟೇ. ಎಷ್ಟೆಂದರೂ ಅವು ಅಣ್ಣತಮ್ಮಂದಿರೇ ತಾನೇ!.
ಕಣ್ಣುಮುಚ್ಚಾಲೆಯ ಮಳೆ
ಮಾರ್ಚ್ ಏಪ್ರಿಲ್ಗಳ ಸಂಪ್ರದಾಯವನ್ನು ಮುರಿಯಬಾರದೆಂದು ಮೇ ತಿಂಗಳಲ್ಲಿ ಅಲ್ಲಿಲ್ಲಿ ಒಂದೆರಡು ಮಳೆ ಬಿತ್ತು. ಹೋಯಿತು. ಎಲ್ಲಿಗೋ! ಹಾಗೆ ಹೋದ ಮಳೆ ತಿಂಗಳಾದರೂ ಪತ್ತೆ ಇಲ್ಲ!. ತಜ್ಞರ ವರದಿಗಳು ದಿನಕ್ಕೊಂದರಂತೆ ಮಾಧ್ಯಮಗಳಲ್ಲಿ ಭರವಸೆಯನ್ನು ನೀಡುತ್ತಲೇ ಇದ್ದವು; ಈ ಬಾರಿ ಮೇ ಕೊನೆಗೆ ಮುಂಗಾರು ಕೇರಳವನ್ನು ಪ್ರವೇಶಿಸಲಿದೆ, ಕರ್ನಾಟಕದ ಕರಾವಳಿ – ಮಲೆನಾಡುಗಳಿಗೆ ಮೇ ತಿಂಗಳಿನಲ್ಲಿಯೇ ಮಳೆಗಾಲ ಪ್ರಾರಂಭವಾಗಲಿದೆ. ಕೊನೆಕೊನೆಗೆ, ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆಯನ್ನೂ ಕೊಡಲಾಯಿತು. ಹಾಗೆ ಎಚ್ಚರಿಕೆ ವಹಿಸಿದ ದಿನಗಳಂದು ಮಳೆಯ ಪತ್ತೆಯೇ ಇಲ್ಲ!.
ಸೂಪರ್ ಎಲ್ನಿನೋ ಪ್ರಭಾವದಿಂದಾಗಿ ಮಳೆಮಾರುತ ದುರ್ಬಲವಾಗಿದ್ದು, ಜೂನ್ ತಿಂಗಳ ಮೊದಲ ವಾರದಲ್ಲಿ ಮಳೆಯಾಗುವ ಸಾಧ್ಯತೆಯನ್ನು ತಜ್ಞರು ನೀಡಿದರು. ಆದರೆ ಆ ಸಾಧ್ಯತೆಯೂ ಘಟಿಸದೇ ಹೋಯಿತು. ಜೂನ್ ತಿಂಗಳ ಮೊದಲ ಎರಡು ವಾರಗಳಲ್ಲಿ ಮಳೆಗಾಲ ಪ್ರಾರಂಭವಾಗದೇ ಹೋದರೆ ಅದು ಬರಗಾಲದ ಮುನ್ಸೂಚನೆ ಎಂದೇ ಅರ್ಥ. ಈಗ ಜೂನ್ ತಿಂಗಳ ಕೊನೆಯ ವಾರದಲ್ಲಿ ಮಳೆ ಬೀಳಲು ಪ್ರಾರಂಭವಾಗಿ, ಕಣ್ಣುಮುಚ್ಚಾಲೆಯ ಆಟವಾಡುತ್ತ ಜುಲೈ ತಿಂಗಳ ಪೂರ್ವಾರ್ಧದಲ್ಲಿ ಒಂದಿಷ್ಟು ಮಳೆಯಾಗುತ್ತಿದೆ. ಭರವಸೆ ಮೂಡಿಸುತ್ತಿದೆ. ಮಧ್ಯೆ ಮಧ್ಯೆ ಬೇಸಿಗೆಯ ಬಿಸಿಲನ್ನು ನಾಚಿಸುವಂತೆ ಸೂರ್ಯನು ತನ್ನ ಉಪಸ್ಥಿತಿಯನ್ನು ಸಾರಲು ಧುತ್ತನೆ ಪ್ರತ್ಯಕ್ಷನಾಗುತ್ತಿದ್ದಾನೆ. ಈಗ, ಮಳೆಗಾಲದಲ್ಲಿ ಸೂರ್ಯನಿಗೇನು ಕೆಲಸ ಎಂದು ಕೇಳುವಂತಿಲ್ಲ! ಭಾರೀ ಮಳೆ ಇದೆಯೆಂದು ಶಾಲೆಗಳಿಗೆ ರಜೆ ಘೋಷಣೆ ಮಾಡಿದ ದಿನವೇ ಮಳೆಗೂ ರಜೆ ಎಂಬ ಮಾತು ಕರಾವಳಿ ಮಲೆನಾಡಿನ ಭಾಗದಲ್ಲಿ ಪ್ರಚಲಿತವಿದೆ.
ಮಳೆಯಿದ್ದರೆ ತಾನೇ!
ಕರಾವಳಿ ಮಲೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಇಲ್ಲಿಯವರೆಗೆ ‘ಮಳೆಗಾಲಕ್ಕೆ ತಯಾರಾಗುವುದು’ ಎಂಬ ಸಂಭ್ರಮದಿಂದ ಕೂಡಿದ ಕೆಲಸಗಳ ಗೊಂಚಲು ಎದುರಾಗುತ್ತಿತ್ತು. ಈ ಗೊಂಚಲಿನಲ್ಲಿ ಹಪ್ಪಳ ಸಂಡಿಗೆ ತಯಾರು ಮಾಡುವ ಅಡುಗೆಮನೆ ಕೆಲಸದಿಂದ ಹಿಡಿದು ಕೊಟ್ಟಿಗೆಗೆ ಸೊಪ್ಪು ರಾಶಿಮಾಡುವ, ಗದ್ದೆಗಳಿಗೆ ಹಟ್ಟಿಗೊಬ್ಬರ ಒಯ್ಯುವ ಕೃಷಿಕಾರ್ಯದ ತನಕ ಎಲ್ಲರ ಕೈಗಳೂ ತೊಡಗಿಕೊಳ್ಳುವ ಬಗೆಯ ಕಾರ್ಯವೈವಿಧ್ಯ ಇತ್ತು.
ಈಗ ‘ಮಳೆಗಾಲಕ್ಕೆ ತಯಾರಾಗು’ವ ಈ ಮಾತೇ ಅಪ್ರಸ್ತುತ ಆಗುವ ಭೀತಿ ಎದುರಾಗಿದೆ. ಬಿಡಿ; ಇಂದಿನ ‘ಶೋಧ’ಹಾವಳಿಯ ಪರಿಣಾಮವಾಗಿ ಮಳೆಗಾಲದ ತಿನಿಸೆಂಬ ಭೇದವಿಲ್ಲದೆ ಮಳೆಗಾಲದ್ದು ಬೇಸಿಗೆಯಲ್ಲೂ ಸಿಗುವಂತಾಗಿ, ಯಾವುದೇ ಕಾಲದ ತಿನಿಸು ಎಲ್ಲಾ ಕಾಲದಲ್ಲಿಯೂ ಲಭ್ಯವಿರುವ ಸ್ಥಿತಿ ನಿರ್ಮಾಣವಾಗಿದೆಯಷ್ಟೆ. ಮಳೆಗಾಲದಲ್ಲಿ ಹೂ, ಹಣ್ಣು, ತರಕಾರಿ ಇತ್ಯಾದಿಗಳ ಬೆಳೆವು ಕನಿಷ್ಠ ಎಂಬುದು ಲೆಕ್ಕಾಚಾರ! ಆಧುನಿಕ ಕಾಲದಲ್ಲಿ ಈ ಲೆಕ್ಕಾಚಾರವೂ ತಪ್ಪಿಹೋದಂತಿದೆ. ಮಳೆಗಾಲದಲ್ಲಿ ಬೇಸಿಗೆಕಾಲದ್ದೂ ಸಿಗುತ್ತದೆ, ಚಳಿಗಾಲದ್ದೂ ಸಿಗುತ್ತದೆ ಎಂಬ ಸನ್ನಿವೇಶವನ್ನು ನಿರ್ಮಿಸಿಕೊಂಡು ಹಾಯಾಗಿದ್ದೇವೆ! ಮಳೆಗಾಲಕ್ಕೆ ತಯಾರಾಗುವ ಪ್ರಶ್ನೆ ಈ ನಿಟ್ಟಿನಲ್ಲಿ ಅಂತೂ ಖಂಡಿತ ಇಲ್ಲ. ಇರಲಿ.
ಈಗ ಮಳೆಗಾಲಕ್ಕೆ ತಯಾರಾಗುವ ಪ್ರಶ್ನೆಯು ಗಂಭೀರವಾದ ಇನ್ನೊಂದು ನಿಟ್ಟಿನಲ್ಲಿಯೂ ಅಪ್ರಸ್ತುತ. ಅದು ಹೇಗೆಂದರೆ; ಮಳೆಗಾಲ ಬರುತ್ತದೆ ಎಂದು ಅದಕ್ಕೆ ತಯಾರಾಗುವುದಷ್ಟೆ! ಹಾಗೆ ತಯಾರಾದುದು ಸಾರ್ಥಕವಾಗಲು ಮಳೆಗಾಲ ಇರಬೇಕು. ಮಳೆಗಾಲ ಇದ್ದರೆ ತಾನೇ! ಮಳೆಗಾಲದಲ್ಲಿ ಬರುವ ಮಳೆ ಮಳೆಗಾಲದ ಮಳೆಯಂತೆ ಇಲ್ಲದಿದ್ದರೆ! ಮಳೆಗಾಲದಲ್ಲಿ ಬರುವ ಬಿಸಿಲು ಬೇಸಿಗೆಯ ಬಿಸಿಲನ್ನು ನಾಚಿಸುವಂತೆ ಇದ್ದರೆ!. ಬೇಸಿಗೆಯಲ್ಲಿ ಬರುವ ಮಳೆಯಂತೆ ಮಳೆಗಾಲದ ಮಳೆಯಿದೆ. ಮಳೆಗಾಲದ ಬಿಸಿಲಿನಲ್ಲಿ ಬೇಸಿಗೆಯ ಧಗೆಯಿದೆ.
ಶ್ರದ್ಧಾದೃಷ್ಟಿಯ ರೈತ
ಮಳೆಯ ಪ್ರತ್ಯಕ್ಷ ನಿರೀಕ್ಷೆಯಲ್ಲಿರುವವ ರೈತ. ಕೆಲವರು ಅದರ ಪರೋಕ್ಷ ನಿರೀಕ್ಷೆಯಲ್ಲಿರುತ್ತಾರೆ. ಅವರಿಗೆ ಮುಖ್ಯವಾಗಿ ಬೇಕಾದುದು ನೀರು, ವಿದ್ಯುತ್. ಜಲವಿದ್ಯುದಾಗಾರದಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿಗಿಂತ ಉಷ್ಣ, ವಾಯು, ಸೌರ ಇತ್ಯಾದಿ ಇನ್ನಿತರ ಮೂಲಗಳಿಂದ ಉತ್ಪಾದನೆಯಾಗುವ ವಿದ್ಯುತ್ತಿನ ಪ್ರಮಾಣವೇ ಅಧಿಕ. ಅಸಲಿಗೆ, ನಮ್ಮ ದೇಶದ ವಿದ್ಯುತ್ತಿನ ಬೇಡಿಕೆಯ ಮುಕ್ಕಾಲು ಭಾಗದಷ್ಟು ಲಭ್ಯವಾಗುತ್ತಿರುವುದು ಉಷ್ಣವಿದ್ಯುತ್ ಸ್ಥಾವರಗಳಿಂದ. ಈ ನಿಟ್ಟಿನಲ್ಲಿ ಜಲವಿದ್ಯುತ್ ಉತ್ಪಾದನಾ ಪ್ರಮಾಣವು ಶೇಕಡಾ ಹತ್ತನ್ನು ಮೀರುವುದಿಲ್ಲ. ಆದರೂ ಅಣೆಕಟ್ಟುಗಳಿರುವುದೇ ವಿದ್ಯುತ್ ಉತ್ಪಾದನೆ ಮಾಡಲು, ಅಣೆಕಟ್ಟು ತುಂಬದೇ ಹೋದರೆ ಭೀಕರ ವಿದ್ಯುತ್ ಕೊರತೆ ಎದುರಾಗುತ್ತದೆ ಎಂಬ ಕಥನ ಸೃಷ್ಟಿಯಾಗಿದೆ. ಏನಿದ್ದರೂ ಅದು ಕಥನವೆನ್ನಿ. ಅದಕ್ಕೆ ಸತ್ಯದ ಹಂಗಿರಲಾರದು.
ಉಳಿದವರಿಗೆ ಮಳೆಗಾಲ ಮೂರು ಕಾಲಗಳಲ್ಲಿ ಒಂದು, ಅಷ್ಟೇ! ವಾತಾವರಣದಲ್ಲಿ ಒಂದು ಬದಲಾವಣೆ ಬೇಕು. ಸೆಕೆಯಿಂದ ಪಾರಾಗಲು ಒಂದಿಷ್ಟು ತಂಪು ಸೋಕಬೇಕು.. ಮಳೆಯನ್ನು ನೋಡಲೆಂದೇ ಮಳೆ ಬೀಳುವ ಪ್ರದೇಶಗಳಿಗೆ ಹೋಗುವವರಿದ್ದಾರೆ. ಮರುಭೂಮಿಯ ಜನರಿಗೆ ಮಳೆಯೊಂದು ಕುತೂಹಲ.
ಮಳೆಯ ಕುರಿತು ಮನಸ್ಸನ್ನು ಮರುಭೂಮಿಯಾಗಿಸದೇ ಉಳಿಯುವವ ಬಹುಶಃ ರೈತನೊಬ್ಬನೇ ಇರಬೇಕು. ಆತನಿಗೆ ಮಳೆಯೊಂದು ಶ್ರದ್ಧೆ. ಆತ ಮೋಡಗಳ ಚಲನವಲನವನ್ನು ಗಮನಿಸುತ್ತಾ ಮಳೆಯ ಆಗಮನವನ್ನು ನಿರೀಕ್ಷಿಸುತ್ತಾನೆ. ಅದಕ್ಕನುಗುಣವಾಗಿ ಕೃಷಿಕಾರ್ಯದಲ್ಲಿ ತೊಡಗುತ್ತಾನೆ. ಕೃಷಿಗೆ ಮುಖ್ಯವಾಗಿ ಬೇಕಾದ ಮಳೆಯನ್ನೂ ಪೂಜಿಸುತ್ತಾನೆ, ಅದೆಷ್ಟೇ ಸುರಿಯಲಿ ಬಿಡಲಿ; ಫಸಲು ನೀಡುವ ಭೂಮಿಯನ್ನೂ ಪೂಜಿಸುತ್ತಾನೆ, ಆಕೆಯೆಷ್ಟೇ ಫಲವನ್ನು ನೀಡಲಿ ಬಿಡಲಿ. ಆತನಿಗೆ ಭೂಮಿಯ ಕುರಿತೂ ಭೂದೇವಿಯೆಂಬ ಶ್ರದ್ಧೆ.
ಇಲ್ಲಿ ರೈತನೆಂದರೆ ಆಹಾರ ಬೆಳೆಗಳನ್ನು ಬೆಳೆಯುವ ರೈತ. ಮಳೆಯ ಆವಶ್ಯಕತೆಯೂ ಅಧಿಕವಿರುವುದು ಆತನಿಗೇ. ಮಳೆಯ ಋತುಚಕ್ರಕ್ಕೆ ತಕ್ಕಂತೆ ಬೆಳೆ ಬೆಳೆಯುವ ಸಂಪ್ರದಾಯವನ್ನು ಇಟ್ಟುಕೊಂಡವನೂ ಆತನೇ ಸರಿ. ವಾಣಿಜ್ಯಬೆಳೆಗಳಿಗೆ ಅಣೆಕಟ್ಟು ಇಲ್ಲವೇ ಕೊಳವೆಬಾವಿಯ ಅಹಂಕಾರ. ಜತೆಗೆ ಮಳೆಬಿದ್ದು ಬೆಳೆಹಾನಿಯಾಗುವ ಆತಂಕ. ಇಂಥೆಲ್ಲ ಸಾಧ್ಯತೆಗಳ ವಾಣಿಜ್ಯಬೆಳೆಯ ಬೆಳೆಗಾರರಿಗೆ ಮಳೆಯಾಗದಿದ್ದರೂ ರೈತನಷ್ಟು ಆತಂಕ ಕಾಡದು. ರೈತನಷ್ಟು ಮಳೆ-ಶ್ರದ್ಧೆಯೂ ನೆಲೆಸದು. ವಾಣಿಜ್ಯಬೆಳೆಗಾರನಾಗಿ ಬದಲಾದ ರೈತನಲ್ಲಿ ಈ ಶ್ರದ್ಧೆ ಅಷ್ಟಿಷ್ಟು ಇದ್ದೀತಾದರೂ ತಲೆಮಾರು ಬದಲಾದಂತೆ ಈ ಶ್ರದ್ಧೆಯೂ ಬದಲಾಗುವುದು ಶತಃಸಿದ್ಧವೇ ಇದೆ. ರೈತನಿಗೆ ಕೃಷಿಯೊಂದು ಕಾಯಕ. ಲಾಭನಷ್ಟದ ಲೆಕ್ಕಾಚಾರ ಸುಳಿಯದು ಆತನ ಮನಸ್ಸಿನಲ್ಲಿ. ವಾಣಿಜ್ಯಬೆಳೆಗಾರನಿಗೆ ಬೆಳೆಯೊಂದು ಉದ್ದಿಮೆ. ಲಾಭವೇ ಆತನ ಏಕೈಕ ಗುರಿ. ಮಳೆಯು ನಮಗೆ ಶ್ರದ್ಧೆಯಾಗದೇ ಹೋದರೆ ನಾವು ತೊಡಗುವ ರೀತಿಯೇ ಭಿನ್ನ.
ಹಣದ ಕರಾಮತ್ತು
ನೋಡಿ, ಮಳೆ ಕೊರತೆಯ ಕಾರಣ ಬೆಳೆ ಬೆಳೆಯಬೇಡಿ ಎಂದು ಅಧಿಕಾರಸ್ಥರು ತಾಕೀತು ಮಾಡಿದ್ದಾರೆ.
ಸಾಮಾನ್ಯವಾಗಿ ಆಹಾರದ ಬೆಳೆಯು ಅಲ್ಪಾವಧಿಯದು. ಒಮ್ಮೆ ನೆಟ್ಟು ಬೆಳೆ ತೆಗೆದ ಬಳಿಕ ಅದರ ಪ್ರಕ್ರಿಯೆ ಮುಗಿಯುತ್ತದೆ. ಇನ್ನೊಂದು ಬೆಳೆ ಬೆಳೆಯಲು ಮತ್ತೆ ಮೊದಲಿನಿಂದ ಎಂಬಂತೆ ತೊಡಗಬೇಕು. ಹೆಚ್ಚಿನ ವಾಣಿಜ್ಯ ಬೆಳೆಗಳ ವಿನ್ಯಾಸವು ಇದಕ್ಕೆ ತದ್ವಿರುದ್ಧ. ಒಮ್ಮೆ ನೆಟ್ಟು ಪೋಷಿಸಿದರೆ ಮುಗಿಯಿತು, ಮತ್ತೆ ಪ್ರತಿ ವರ್ಷ ಬೆಳೆ ತೆಗೆಯುತ್ತ ಇದ್ದರಾಯಿತು. ಕಾಲಕಾಲಕ್ಕೆ ನೀರು ಗೊಬ್ಬರ ಎಂದು ಅದನ್ನು ಪೋಷಿಸುತ್ತ ಇದ್ದರಾಯಿತು. ಅವುಗಳಿಗೆ ಬೇಕಾದ ನೀರನ್ನು ಕೆರೆ – ಬಾವಿಗಳಿಂದಲೋ ನದಿ – ಜಲಾಶಯಗಳಿಂದಲೋ ಪೂರೈಸುತ್ತ ಇದ್ದರಾಯಿತು. ಪ್ರತ್ಯಕ್ಷ ಮಳೆಯ ಹಂಗಿಲ್ಲದ ಬೆಳೆಗಳವು. ಹಾಗಾಗಿ ಮಳೆ ಬರದೇ ಹೋದರೂ ಅವುಗಳ ತತ್ಕ್ಷಣದ ಪೋಷಣೆಗೆ ಧಕ್ಕೆಬಾರದು. ಆಹಾರದ ಬೆಳೆಗಳಿಗೆ ಕಾಲಕಾಲಕ್ಕೆ ನೀರೂ ಬೇಕು, ಗೊಬ್ಬರ ಮತ್ತಿತರ ಪೋಷಣೆಯೂ ಬೇಕು. ಸೂಕ್ತ ಸಮಯದಲ್ಲಿ ಅವುಗಳನ್ನು ಕಟಾವೂ ಮಾಡಬೇಕು ಇಲ್ಲವೇ ಬೆಳೆಯನ್ನು ಪಡೆಯಬೇಕು. ನಾಲ್ಕೈದು ತಿಂಗಳುಗಳಲ್ಲಿ ಹೆಚ್ಚಿನ ಆಹಾರ ಬೆಳೆಗಳ ಈ ಒಟ್ಟಾರೆ ಪ್ರಕ್ರಿಯೆ ಮುಗಿದೇ ಹೋಗುತ್ತದೆ. ಅವು ಮನುಷ್ಯಜೀವನಕ್ಕೆ ಆವಶ್ಯಕ. ವಾಣಿಜ್ಯಬೆಳೆಗಳು ಇಲ್ಲದೆಯೂ ಜೀವನ ಸಾಗುತ್ತದೆ. ಆಹಾರಬೆಳೆ ಇಲ್ಲದೆ ಇರುವುದಕ್ಕುಂಟೇ! ಇಂತಿರುವಾಗ ಒಂದು ಹನಿ ನೀರು ಇದ್ದರೂ ಅದನ್ನು ಬಳಸಿಕೊಳ್ಳಬೇಕಾದುದು ಆಹಾರದ ಬೆಳೆಗೇ ವಿನಾ ವಾಣಿಜ್ಯಬೆಳೆಗಲ್ಲ. ಆದರೆ ಅಧಿಕಾರಸ್ಥರು ಮಳೆ ಕೊರತೆ ಇರುವುದರಿಂದಾಗಿ ಬೆಳೆ ಬೆಳೆಯಬೇಡಿ ಎಂದು ನೀಡುತ್ತಿರುವ ಸೂಚನೆಯು ನೇರವಾಗಿ ತಟ್ಟುವುದು ಆಹಾರದ ಬೆಳೆಗೇ. ಅವರು ನೇರವಾಗಿಯೇ ವಾಣಿಜ್ಯಬೆಳೆಗೆ ನೀರು ಬಳಸಕೂಡದು ಎಂದು ಸೂಚಿಸಬಹುದಾಗಿತ್ತು, ಅಧಿಕ ನೀರು ಕುಡಿಯುವ ಉದ್ದಿಮೆಗಳಿಗೂ ತಾಕೀತು ಮಾಡಬಹುದಾಗಿತ್ತು. ಸುತರಾಂ ಮಾಡಲಾರರು. ಹಣದ ಕರಾಮತ್ತು ಒಂದೇ ಎರಡೇ!
ವಾಣಿಜ್ಯದೃಷ್ಟಿಯಿಂದಾದ ಅಸಂತುಲನ
ಆಧುನಿಕ ಬದುಕಿಗೆ ಹಣವೇ ದಿಕ್ಸೂಚಿಯಾಗಿದೆ. ಹಣ ಓಡಾಡದೇ ಹೋದರೆ ಜಗತ್ತೇ ಅಲ್ಲೋಲಕಲ್ಲೋಲ ಆಗುತ್ತದೆ ಎಂದೇ ಕೋವಿಡ್ ಸಂದರ್ಭದಲ್ಲಿ ಅನಿವಾರ್ಯವಾಗಿ ಲಾಕ್ಡೌನ್ ನಿಯಮವನ್ನು ಕೊನೆಕೊನೆಗೆ ಸಡಿಲಿಸಿ ವಾರದಲ್ಲೆರಡು ದಿನವೆಂದು, ಸಾಮಾಜಿಕ ಅಂತರವೆಂದು…ಹೀಗೆ ನಾನಾಬಗೆಗಳಲ್ಲಿ ನಿಯಮಗಳನ್ನು ರೂಪಿಸಲಾಯಿತು. ಆರ್ಥಿಕ ಚಟುವಟಿಕೆಗಳು ಮನುಷ್ಯನ ಅಗತ್ಯವನ್ನು ಪೂರೈಸಬಹುದು. ಆದರೆ ಮನುಷ್ಯನ ಅಗತ್ಯಗಳನ್ನು ಪೂರೈಸುವುದೇ ಆರ್ಥಿಕ ಚಟುವಟಿಕೆಗಳ ಉದ್ದೇಶವಾಗಬೇಕಲ್ಲವೇ! ಅವು ಅಗತ್ಯಗಳನ್ನು ಪೂರೈಸುವ ಜತೆಗೆ ಅದಕ್ಕಿಂತ ಅಧಿಕವಾಗಿ ಅಗತ್ಯವಲ್ಲದ್ದನ್ನೂ ಪೂರೈಸುತ್ತವೆ. ಅಗತ್ಯವಲ್ಲದ್ದನ್ನು ಅಗತ್ಯಕ್ಕಿಂತ ಹೆಚ್ಚು ಅಗತ್ಯವಾಗಿಸುತ್ತವೆ. ವಾಣಿಜ್ಯಬೆಳೆಗಾರರೇ ರೈತರಿಗಿಂತ ಹೆಚ್ಚು ರೈತರೆನಿಸಿಕೊಂಡಂತೆ. ರೈತರಿಗಿರುವ ಸರ್ಕಾರೀ ಸೌಲಭ್ಯಗಳನ್ನು ರೈತರಿಗಿಂತ ಹೆಚ್ಚು ಅವರೇ ಅನುಭವಿಸುವಂತೆ. ಹಣದ ಕರಾಮತ್ತಿನ ಕಬಂಧಬಾಹುಗಳು ಎಲ್ಲೆಲ್ಲಿ ಹೇಗ್ಹೇಗೆ ಚಾಚಿವೆಯೋ! ಅದು ಆಹಾರದ ಬೆಳೆಯ ರೈತನನ್ನು ವಾಣಿಜ್ಯಬೆಳೆಗಾರನನ್ನಾಗಿಸುತ್ತದೆ. ಹೊಲಗದ್ದೆಗಳನ್ನು ಕಾಡುಬೆಟ್ಟಗಳನ್ನು ತೋಟಗಳನ್ನಾಗಿಸುತ್ತದೆ. ಬೆಟ್ಟಗುಡ್ಡಗಳನ್ನು ಮೈದಾನವಾಗಿಸುತ್ತದೆ. ಹೊಲ – ಗದ್ದೆ, ಬಯಲು – ಬೆಟ್ಟಗಳೆಲ್ಲವನ್ನೂ ನಗರವಾಗಿಸುತ್ತದೆ, ಉದ್ಯಮವಾಗಿಸುತ್ತದೆ, ರಸ್ತೆ – ಹೆದ್ದಾರಿಯಾಗಿಸುತ್ತದೆ. ಇಲ್ಲಿ ಒಟ್ಟಿನಲ್ಲಿ ಉಂಟಾಗುವುದು ಭೌಗೋಳಿಕ ಅಸಂತುಲನ. ಪಾರಿಸಾರಿಕ ಅಸಂತುಲನ. ಮಳೆಯ ಏರುಪೇರಿಗೆ ಇದೂ ಒಂದು ಕಾರಣ.
ಮುಂಪೀಳಿಗೆಗೆ ಕೊಡುಗೆ
ಮಳೆಯಲ್ಲಿ ಏರುಪೇರು. ಅಂದರೆ; ಬರುತ್ತದೆ – ಒಂದೋ ಹೆಚ್ಚು, ಇಲ್ಲವೇ ಕಡಮೆ. ಹತ್ತು ದಿನಗಳಲ್ಲಿ ಬರಬೇಕಾದುದು ಒಂದೇ ದಿನ ಸುರಿದುಹೋಗುವುದೂ ಅದರ ಒಂದು ಕ್ರಮ. ಒಂದು ದಿನದಲ್ಲಿ ಸುರಿಯಬೇಕಾದುದು ಹತ್ತು ದಿನಗಳಾದರೂ ಸುರಿಯದೇ ಇರುವುದೂ ಒಂದು ಕ್ರಮ. ಕ್ರಮಬದ್ಧತೆ ಇಲ್ಲದಿರುವ ಕ್ರಮ. ಮಳೆಯಲ್ಲಿ ಕ್ರಮಬದ್ಧತೆ ಇಲ್ಲವಾದಾಗ ಒಂದೋ ಪ್ರವಾಹ, ಇಲ್ಲವೇ ಬರ. ಮಳೆಯು ಕ್ರಮತಪ್ಪಿದೆ ಎಂದು ಅರ್ಥೈಸುವ ನಾವು ಕ್ರಮಬದ್ಧವಾಗಿ ಇದ್ದೇವೆಯೇ? ಕನಿಷ್ಠಪಕ್ಷ ಪರಿಸರಕ್ಕೆ ಸಂಬಂಧಿಸಿ, ಮಳೆಗೆ ಸಂಬಂಧಿಸಿ ಕ್ರಮಬದ್ಧವಾಗಿ ಇದ್ದೇವೆಯೇ? ತೋರುಬೆರಳು ನಮ್ಮೆಡೆಗಿರುವ ಪ್ರಶ್ನೆಯಿದು.
ಅಂದರೆ; ಮಳೆಯ ಕೊರತೆಯನ್ನು ಕೇವಲ ಪರಿಸರದ ಸಮಸ್ಯೆ ಎಂದಷ್ಟೆ ನೋಡುವುದು ಸರಿಹೋಗದು. ಅದು ನಮ್ಮ ಜೀವನಶೈಲಿ, ಅಭಿವೃದ್ಧಿಯ ಮಾದರಿ ಮತ್ತು ಪರಿಸರದ ಕುರಿತ ನಮ್ಮ ದೃಷ್ಟಿಕೋನವನ್ನು ಪ್ರಶ್ನಿಸುತ್ತಿರುವಂತಿದೆ. ಪರಿಸರವು ಪ್ರತೀಕಾರ ಮಾಡುವುದಿಲ್ಲ, ಆದರೆ ಪ್ರತಿಕ್ರಿಯಿಸುತ್ತದೆ, ಎಚ್ಚರಿಕೆ ನೀಡುತ್ತದೆ. ಬರ, ಪ್ರವಾಹ, ಅತಿಯಾದ ಬಿಸಿಲು, ಅಸಮರ್ಪಕ ಮಳೆ… ಇವೆಲ್ಲವೂ ಆ ಎಚ್ಚರಿಕೆಯ ರೂಪಗಳು. ಮಳೆಯ ಮೂಲಕ ಪರಿಸರವು ನೀಡುತ್ತಿರುವ ಎಚ್ಚರಿಕೆಯನ್ನು ಅರ್ಥಮಾಡಿಕೊಂಡು ಅದಕ್ಕನುಗುಣವಾಗಿ ನಾವು ನಡೆದರೆ; ಭವಿಷ್ಯದ ಪೀಳಿಗೆಯು ತನ್ನ ನೀರು, ಆಹಾರ ಮತ್ತು ಆರೋಗ್ಯಕರ ಪರಿಸರವನ್ನು ಪಡೆಯುವಲ್ಲಿ ನಮ್ಮದಾದ ಯೋಗದಾನವನ್ನು ನೀಡಬಹುದೆನಿಸುತ್ತದೆ. ನೀರಿಗೆ ಜೀವನ ಎಂಬುದೂ ಒಂದು ಅರ್ಥ. ನೀರನ್ನು ಉಳಿಸುವುದು ಎಂದರೆ ಜೀವನವನ್ನು ಉಳಿಸುವುದು ಎಂದೇ ಅರ್ಥ. ಪರಿಸರವನ್ನು ರಕ್ಷಿಸುವುದು ಎಂದರೆ ನಮ್ಮ ಮುಂಪೀಳಿಗೆಯನ್ನು ರಕ್ಷಿಸುವುದು ಎಂದೇ ಅರ್ಥ.
ಶ್ರದ್ಧೆಯಲ್ಲಡಗಿದ ಕರ್ತವ್ಯ
‘ಶಂ ನೋ ವರ್ಷತು ಪರ್ಜನ್ಯಃ’ – ಪರ್ಜನ್ಯನು ನಮಗೆ ಮಂಗಲಕರವಾದ ಮಳೆಯನ್ನು ಸುರಿಸಲಿ ಎಂದು ಅಥರ್ವವೇದದ ಮಂತ್ರವೊಂದು ಹೇಳುತ್ತದೆ. ‘ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ’ – ಮಳೆಯಿಂದ ಅನ್ನವು ಉತ್ಪಾದನೆಯಾಗುವುದು, ಜೀವಿಗಳು ಅನ್ನದಿಂದ ಬದುಕುತ್ತವೆ ಎನ್ನುತ್ತದೆ ಭಗವದ್ಗೀತೆ. ಇವೆರಡು ವಾಕ್ಯಗಳನ್ನು ಅಕ್ಕಪಕ್ಕ ಇಟ್ಟಾಗ ಮಳೆಯ ಮೂಲ ಹಾಗೂ ಪರಿಣಾಮ ಅಂದಾಜಾಗುತ್ತದೆ. ‘ಪರ್ಜನ್ಯಃ ಪ್ರಜಾನಾಂ ಜೀವನಮ್’ – ಮಳೆಯೇ ಜೀವಜಗತ್ತಿನ ಆಧಾರ ಯಾಕೆಂಬುದು ಸ್ಪಷ್ಟವಾಗುತ್ತದೆ.
ನೀರಿಲ್ಲದೆ ಜೀವವಿಲ್ಲ; ಮಳೆಯಿಲ್ಲದೆ ನೀರಿಲ್ಲ. ಹಾಗಾಗಿ ನಮ್ಮ ಪರಂಪರೆಯು ಮಳೆಯನ್ನು ಕೇವಲ ಹವಾಮಾನದ ಒಂದು ಘಟನೆಯಾಗಿ ನೋಡದೆ, ಜೀವಜಗತ್ತಿನ ಪೋಷಕಶಕ್ತಿಯಾಗಿ ಪೂಜಿಸಿದೆ. ವೇದಗಳಲ್ಲಿ ಮಳೆಗೆ ಸಂಬಂಧಿಸಿದ ಸ್ತುತಿಗಳಿವೆ. ರೈತನು ಮೊದಲ ಮಳೆಯ ಹನಿಯನ್ನು ಭೂಮಿಯ ಆಶೀರ್ವಾದವೆಂದು ಸ್ವೀಕರಿಸುತ್ತಾನೆ. ಕವಿ ಮಳೆಯನ್ನು ಕಾವ್ಯವಾಗಿಸುತ್ತಾನೆ; ವಿಜ್ಞಾನಿ ಅದನ್ನು ಜಲಚಕ್ರವೆಂದು ವಿವರಿಸುತ್ತಾನೆ. ವಿಜ್ಞಾನಿಯದು ವಸ್ತುಸ್ಥಿತಿಯ ದೃಷ್ಟಿ. ಕವಿಯದು ಭಾವುಕದೃಷ್ಟಿ. ರೈತನದು ಶ್ರದ್ಧಾದೃಷ್ಟಿ. ಆದರೆ ಎಲ್ಲರಿಗೂ ಸಲ್ಲುವ ಮಳೆಯ ಅರ್ಥ ಒಂದೇ, ಅದು ಜೀವನ.
ನಾವು ಪ್ರಕೃತಿಯನ್ನು ಕಾಣುವುದು ತಾಯಿಯ ಸ್ವರೂಪದಲ್ಲಿ. ಅದರಂಗಗಳಾದ ನದಿ, ನೀರು, ಗಿಡ – ಮರ ಇತ್ಯಾದಿ ಎಲ್ಲವೂ ನಮಗೆ ದೇವತಾಸ್ವರೂಪಗಳೇ. ಅದೇ ರೀತಿ ಮಳೆಯೂ ದೇವತಾಸ್ವರೂಪವೇ. ಅದನ್ನು ಜಾನಪದರು ಮಳೆರಾಯ ಎಂದರು. ವೇದದ ಋಷಿಗಳು ಪರ್ಜನ್ಯನೆಂದರು. ಭಾಷೆ ಭಿನ್ನವಾಗಿದ್ದರೂ ಎರಡೂ ಸೂಚಿಸುತ್ತಿರುವುದು ಒಂದೇ ಭಾವವನ್ನು. ಅದು ಶ್ರದ್ಧಾಭಾವ. ರೈತನ ಬಳಿ ಇರುವ ಭಾವ. ಅಣೆಕಟ್ಟಿನ ನೀರಿಗಾಗಿ, ವಿದ್ಯುತ್ತಿನ ನೀರಿಗಾಗಿ, ಉದ್ದಿಮೆಯ ಉಪಯೋಗಕ್ಕಾಗಿ…ಹೀಗೆ ನಾನಾ ಪ್ರಯೋಜನಗಳಿಗಾಗಿ ಮಳೆಯ ಅನಿವಾರ್ಯತೆಯನ್ನು ಕಾಣುವವರದು ವಸ್ತುಸ್ಥಿತಿಯ ದೃಷ್ಟಿ. ಅದು ಶುದ್ಧ ಪ್ರಯೋಜನಶೀಲ ದೃಷ್ಟಿ. ಪ್ರಯೋಜನಶೀಲ ದೃಷ್ಟಿಗೆ ಮಳೆಯ ನೀರು ಹಕ್ಕಿನ ವಿಷಯ. ಶ್ರದ್ಧಾದೃಷ್ಟಿಗೆ ಮಳೆಯ ಕುರಿತು ಕರ್ತವ್ಯದ ಹೊಣೆಗಾರಿಕೆ ಇದೆ. ಪರಿಸರವನ್ನು ದೈವೀಸ್ವರೂಪದಲ್ಲಿ ಕಂಡು ಅದಕ್ಕೆ ಇನಿತೂ ಹಾನಿಯಾಗದಂತೆ ತೊಡಗುವ ಕರ್ತವ್ಯವದು. ನಾವು ಪರಿಸರದ ಕುರಿತ ನಮ್ಮ ಕರ್ತವ್ಯವನ್ನು ಪೂರೈಸೋಣ. ಮಳೆ ಅದರ ಪಾಡಿಗೆ ಬರಲಿ.
