ಕೇಂದ್ರ ಸಾಂಸ್ಕೃತಿಕ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉದ್ಘಾಟನೆ;
ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ರಾಷ್ಟ್ರೀಯ ಚಿಂತಕರಿಂದ ಜಾಗತಿಕ ವೇದಿಕೆಯಲ್ಲಿ ಭಾರತದ ಭವಿಷ್ಯದ ದಾರಿಯ ಕುರಿತು ಮಂಥನ
ಬೆಂಗಳೂರು: ಭಾರತವು ಸ್ವಾತಂತ್ರ್ಯದ ಶತಮಾನೋತ್ಸವದತ್ತ ಮುನ್ನಡೆಯುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ದೇಶದ ಬೌದ್ಧಿಕ, ಸಾಂಸ್ಕೃತಿಕ ಹಾಗೂ ಪ್ರಜಾಸತ್ತಾತ್ಮಕ ಪಯಣವನ್ನು ವಿಶ್ಲೇಷಿಸಿ ‘ವಿಕಸಿತ ಭಾರತ 2047’ ರ ಸ್ಪಷ್ಟ ದಿಕ್ಸೂಚಿಯನ್ನು ರೂಪಿಸುವ ಉದ್ದೇಶದಿಂದ ‘ದಿಶಾ ಭಾರತ್’ ಸಂಸ್ಥೆಯು ಕೇಂದ್ರ ಸಾಂಸ್ಕೃತಿಕ ಸಚಿವಾಲಯದ ಸಹಯೋಗದೊಂದಿಗೆ ಬೃಹತ್ ‘ಮೈಭಾರತ್ ಕಾಂಕ್ಲೇವ್ 2026’ ರಾಷ್ಟ್ರೀಯ ವಿಚಾರಸಂಕಿರಣವನ್ನು ಆಯೋಜಿಸಿದೆ.
ಆಗಸ್ಟ್ 1 ರಂದು ನಗರದ ‘ದಿ ಕ್ಯಾಪಿಟಲ್’ ಹೋಟೆಲ್ನಲ್ಲಿ ದಿನವಿಡೀ ನಡೆಯಲಿರುವ ಈ ವಿಚಾರಸಂಕಿರಣವು, ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಭಾರತದ ಸಾಂಸ್ಕೃತಿಕ ನಿರಂತರತೆ, ಸಂವಿಧಾನಾತ್ಮಕ ಮೌಲ್ಯಗಳು, ಶಿಕ್ಷಣ-ತಂತ್ರಜ್ಞಾನಗಳ ಪ್ರಗತಿ ಹಾಗೂ ಮುಂದಿನ ಕಾಲು ಶತಮಾನದ ಸವಾಲು ಮತ್ತು ಅವಕಾಶಗಳ ಕುರಿತು ಗಂಭೀರ ಚರ್ಚೆಗೆ ವೇದಿಕೆಯಾಗಲಿದೆ.
ನಾಲ್ಕು ಪ್ರಮುಖ ಗೋಷ್ಠಿಗಳಲ್ಲಿ ಬೌದ್ಧಿಕ ಮಂಥನ:
ರಾಷ್ಟ್ರ ನಿರ್ಮಾಣದ ನಾಲ್ಕು ಪ್ರಮುಖ ಆಯಾಮಗಳನ್ನು ಆಧರಿಸಿ ನಾಲ್ಕು ವಿಶಾಲ ಗೋಷ್ಠಿಗಳನ್ನು ವಿನ್ಯಾಸಗೊಳಿಸಲಾಗಿದ್ದು, ಸಾರ್ವಜನಿಕ ಜೀವನ, ಶೈಕ್ಷಣಿಕ ಕ್ಷೇತ್ರ ಹಾಗೂ ನಾಗರಿಕ ಸಮಾಜದ ಮುಂಚೂಣಿ ನಾಯಕರು ವಿಚಾರ ಮಂಡಿಸಲಿದ್ದಾರೆ:
ಸಾಂಸ್ಕೃತಿಕ ನಿರಂತರತೆ ಮತ್ತು ಜಾಗತಿಕ ನಾಯಕತ್ವ:
ಬೆಳಿಗ್ಗೆ ನಡೆಯಲಿರುವ ಉದ್ಘಾಟನಾ ಗೋಷ್ಠಿಯಲ್ಲಿ ಕೇಂದ್ರ ಸಾಂಸ್ಕೃತಿಕ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಜೆಎನ್ಯು ಸಹಾಯಕ ಪ್ರಾಧ್ಯಾಪಕಿ ಡಾ. ಅನ್ಷು ಜೋಶಿ, ಇಂಡಿಕಾ ಕೌಟಿಲ್ಯ ಕೇಂದ್ರದ ನಿರ್ದೇಶಕ ಶ್ರೀ ಶಿವಕುಮಾರ್ ಜಿ.ವಿ. ಹಾಗೂ ದಿಶಾ ಭಾರತ್ ಅಧ್ಯಕ್ಷ ಡಾ. ರಘುರಾಮ್ ಎನ್.ವಿ. ಅವರು ಭಾರತದ ಪುರಾತನ ನಾಗರಿಕತೆಯ ಸತ್ವವು ಆಧುನಿಕ ಜಾಗತಿಕ ನಾಯಕತ್ವಕ್ಕೆ ಹೇಗೆ ಪೂರಕವಾಗಿದೆ ಎಂಬುದನ್ನು ವಿಶ್ಲೇಷಿಸಲಿದ್ದಾರೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮಕ ಪಯಣ:
ಸ್ವಾತಂತ್ರ್ಯೋತ್ತರ ಭಾರತದ ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಲವರ್ಧನೆಯ ಕುರಿತು ಲೇಖಕರಾದ ಕ್ಷಮಾ ನಾರಗುಂದ ಹಾಗೂ ರಶ್ಮಿ ಸಾಮಂತ್ ವಿಚಾರ ವಿನಿಮಯ ನಡೆಸಲಿದ್ದು, ಸಿಎಸ್ ಸ್ಪೂರ್ತಿ ಮುರಳೀಧರ್ ಸಂವಾದ ನಿರ್ವಹಿಸಲಿದ್ದಾರೆ.
ಶಿಕ್ಷಣ ಮತ್ತು ತಂತ್ರಜ್ಞಾನ ಪ್ರಗತಿ:
ಮಧ್ಯಾಹ್ನದ ಗೋಷ್ಠಿಯಲ್ಲಿ NIAS ಪ್ರಾಧ್ಯಾಪಕ ಡಾ. ಅಂಶುಮಾನ್ ಬೆಹ್ರಾ ಹಾಗೂ ಅಜೀಮ್ ಪ್ರೇಮ್ಜಿ ವಿವಿಯ ಕುಲಸಚಿವ ಪ್ರೊ. ಋಷಿಕೇಶ್ ಬಿ.ಎಸ್. ಅವರು ಜಾಗತಿಕ ಮಟ್ಟದಲ್ಲಿ ಭಾರತದ ಶೈಕ್ಷಣಿಕ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೆಳಕು ಚೆಲ್ಲಲಿದ್ದು, ಡಾ. ಸೌಮ್ಯ ಸಂವಾದ ನಡೆಸಲಿದ್ದಾರೆ.
ಭಾರತ@2047 – ಮಾರ್ಗದರ್ಶಿ ನಕ್ಷೆ:
ಸಮಾರೋಪ ಗೋಷ್ಠಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ಶ್ರೀ ತೇಜಸ್ವಿ ಸೂರ್ಯ, ವಿಭು ಅಕಾಡೆಮಿಯ ಡಾ. ಆರತಿ ವಿ.ಬಿ., ಬಿಇಎಸ್ಟಿ ಇನ್ನೋವೇಶನ್ ವಿವಿಯ ಕುಲಾಧಿಪತಿ ಡಾ. ರೂಪಾ ವಾಸುದೇವನ್, ಅದಿತಿ ಅವಿನಾಶ್ ಹಾಗೂ ಮೈಥಿಕ್ ಸೊಸೈಟಿಯ ಶ್ರೀ ವಿ. ನಾಗರಾಜ್ ಅವರು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ರೋಡ್ಮ್ಯಾಪ್ ಕುರಿತು ಚರ್ಚಿಸಲಿದ್ದಾರೆ.
ಈ ವಿಚಾರಸಂಕಿರಣದಲ್ಲಿ ರಾಜನೀತಿಜ್ಞರು, ಸಂಶೋಧಕರು, ಶಿಕ್ಷಣ ತಜ್ಞರು, ಯುವ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಲಿದ್ದು, ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವಾದ ಮಹತ್ವದ ಶಿಫಾರಸುಗಳು ಈ ಚರ್ಚೆಯಿಂದ ಹೊರಹೊಮ್ಮುವ ನಿರೀಕ್ಷೆಯಿದೆ.
