ಅಂಕಣ – Xಫ್ಯಾಕ್ಟರ್
- ಪರಪ್ಪ ಶಾನವಾಡ, ಸಾಮಾಜಿಕ ಜಾಲತಾಣ ವಿಶ್ಲೇಷಕ
ಭಾರತದ ಸುಪ್ರಸಿದ್ಧ ಹಿನ್ನೆಲೆ ಗಾಯಕಿ, ‘ದಕ್ಷಿಣ ಭಾರತದ ಕೋಗಿಲೆ’ ಎಂದೇ ಪ್ರಸಿದ್ಧರಾದ ಎಸ್. ಜಾನಕಿ ಅವರು ಮೈಸೂರಿನಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಅವರ ನಿಧನವು ದೇಶಾದ್ಯಂತ ಸಂಗೀತ ಪ್ರೇಮಿಗಳಿಗೆ ಅತೀವ ದುಃಖವನ್ನುಂಟು ಮಾಡಿದೆ. ಅವರ ಅಗಲಿಕೆಯ ಬಗೆಗೆ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿಗಳು, ಕಲಾವಿದರು, ರಾಜಕೀಯ ನಾಯಕರು ಹಾಗೂ ಸಂಗೀತಾಸಕ್ತರು ಭಾವಪೂರ್ಣ ನಮನ ಸಲ್ಲಿಸಿದರು. ಈ ಕ್ಷಣವು ಕೇವಲ ಒಬ್ಬ ಗಾಯಕಿಯ ನಿಧನದಿಂದ ಶೋಕಿಸುವುದಲ್ಲ, ಬದಲಾಗಿ ಭಾರತೀಯ ಸಂಗೀತದ ಒಂದು ಸುವರ್ಣಯುಗಕ್ಕೆ ವಿದಾಯ ಹೇಳಿದ ಕ್ಷಣವಾಗಿದೆ ಎಂಬುದು ಜಾಲತಾಣದಲ್ಲಿ ಪ್ರಕಟವಾದ ಒಟ್ಟಾರೆ ವಿಶ್ಲೇಷಣೆಯಾಗಿದೆ. ಜಾಲತಾಣದಲ್ಲಿ ಪ್ರಮುಖವಾಗಿ X (ಟ್ವಿಟರ್), ಇನ್ಸ್ಟಾಗ್ರಾಂ, ಫೇಸ್ಬುಕ್, ಯೂಟ್ಯೂಬ್ ಹಾಗೂ ವಾಟ್ಸಾಪ್ ಮೂಲಕ ಲಕ್ಷಾಂತರ ಪೋಸ್ಟ್ ಗಳು, ರೀಲ್ಸ್, ವಿಡಿಯೋಗಳು, ಹಳೆಯ ಸಂದರ್ಶನಗಳು, ಅಪರೂಪದ ಛಾಯಾಚಿತ್ರಗಳು ಹಾಗೂ ಅವರ ಅಮರ ಗೀತೆಗಳು ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟವು. ಸಾವಿರಾರು ಸಂಗೀತಾಸಕ್ತರು ತಮ್ಮ ಬಾಲ್ಯದ ನೆನಪುಗಳು, ಕುಟುಂಬದೊಂದಿಗೆ ಕೇಳಿದ ಹಾಡುಗಳು ಹಾಗೂ ಜಾನಕಿ ಅವರೊಂದಿಗೆ ಹೊಂದಿದ್ದ ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, “ಎಸ್. ಜಾನಕಿ ಧ್ವನಿ, ಭಾಷೆ ಮತ್ತು ತಲೆಮಾರುಗಳನ್ನು ಮೀರಿದ ಅಮೂಲ್ಯ ಪರಂಪರೆ. ಅವರ ಅಗಲಿಕೆ ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ” ಎಂದು ಸಂತಾಪ ಸೂಚಿಸಿದರು. ರಜನಿಕಾಂತ್, ಕಮಲಹಾಸನ್, ಚಿರಂಜೀವಿ, ಮೋಹನ್ಲಾಲ್, ಪಿ. ಸುಶೀಲಾ, ಚಿನ್ಮಯಿ ಶ್ರೀಪಾದ, ಇಳಯರಾಜ, ಹಂಸಲೇಖ, ವಿಜಯ್ ಪ್ರಕಾಶ್ ಸೇರಿದಂತೆ ಚಿತ್ರರಂಗದ ಗಣ್ಯರು ಜಾನಕಿ ಅವರನ್ನು ಭಾರತೀಯ ಸಂಗೀತದ ಶಾಶ್ವತ ಧ್ವನಿ ಎಂದು ಕೊಂಡಾಡಿದರು. ಅವರ ಮೊಮ್ಮಗಳು ಅಪ್ಸರಾ ಹಂಚಿಕೊಂಡ ಭಾವನಾತ್ಮಕ ಸಂದೇಶವೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಯಿತು. 5 ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಂಗೀತ ಲೋಕವನ್ನು ತನ್ನ ಅಮೃತಮಯ ಕಂಠದಿಂದ ಶ್ರೀಮಂತಗೊಳಿಸಿದ ಜಾನಕಿ ಅವರು 50,000ಕ್ಕೂ ಅಧಿಕ ಹಾಡುಗಳನ್ನು 18ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಅಪರೂಪದ ಸಾಧಕಿ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಜನಮನಗಳಲ್ಲಿ ಜೀವಂತವಾಗಿವೆ. ಕನ್ನಡದಲ್ಲಿ ಅತಿಹೆಚ್ಚು ಹಾಡು ಹಾಡಿದ್ದು ದಶಕಗಳ ಕಾಲ ಕನ್ನಡಿಗರ ‘ಗಾನ ಕೋಗಿಲೆ’ಯಾಗಿದ್ದರು. ಜಾಲತಾಣದಲ್ಲಿ ಹೆಚ್ಚಾಗಿ ಚರ್ಚೆಯಾದ ವಿಷಯಗಳಲ್ಲಿ ‘ಒಂದು ಯುಗದ ಅಂತ್ಯ’, ‘ಭಾಷೆಗಳನ್ನು ಮೀರಿ ಭಾರತವನ್ನು ಒಂದಾಗಿಸಿದ ಧ್ವನಿ’, ‘ಭಾರತ ರತ್ನ ಪ್ರಶಸ್ತಿ ಅವರಿಗೆ ದೊರೆಯಬೇಕಿತ್ತು’, ‘ಅಮರ ಗೀತೆಗಳ ನೆನಪು’ ಹಾಗೂ ‘ಸಂಗೀತದ ಮೂಲಕ ರಾಷ್ಟ್ರೀಯ ಏಕತೆ’ ಪ್ರಮುಖವಾಗಿದ್ದವು. ವಿಶೇಷವಾಗಿ ಅವರಿಗೆ ಹಲವು ರಾಜ್ಯ, ರಾಷ್ಟ್ರ ಪ್ರಶಸ್ತಿಗಳು ದೊರೆತಿದ್ದರೂ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎನ್ನುವ ಅಭಿಮಾನಿಗಳ ಬೇಡಿಕೆಯೂ ಅನೇಕ ಪೋಸ್ಟ್ ಗಳಲ್ಲಿ ವ್ಯಕ್ತವಾಯಿತು.
SJanakiAmma, #VoiceThatUnitedBharat, #LegendSJanaki, #JanakiAmmaForever ಹಾಗೂ #NightingaleOfIndia ಜಾಲತಾಣದಲ್ಲಿ ಹೆಚ್ಚು ಟ್ರೆಂಡ್ ಆದ ಪ್ರಮುಖ ಹ್ಯಾಶ್ಟ್ಯಾಗ್ಗಳಾಗಿವೆ. ಜಾನಕಿಯವರ ಚಲನಚಿತ್ರಗಳು, ಆಲ್ಬಂಗಳು, ದೂರದರ್ಶನ ಮತ್ತು ರೇಡಿಯೋಗಳಲ್ಲಿ 50,000ಕ್ಕೂ ಹೆಚ್ಚು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಇದರಲ್ಲಿ 20ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಮತ್ತು ಕೆಲವು ವಿದೇಶಿ ಭಾಷೆಗಳಲ್ಲಿ ಏಕವ್ಯಕ್ತಿ, ಯುಗಳ ಗೀತೆಗಳು, ಕೋರಸ್ ಮತ್ತು ಶೀರ್ಷಿಕೆ ಗೀತೆಗಳು ಸೇರಿವೆ. ನಟರಾಗಿದ್ದ ಡಾ. ರಾಜಕುಮಾರ್ ಅವರನ್ನು ಹಾಡುವಂತೆ ಪ್ರೇರೇಪಿಸಿದ್ದ ಜಾನಕಿ ಅವರನ್ನು ಜಾಲತಾಣದಲ್ಲಿ ಅಭಿಮಾನಿಗಳು ನೆನೆದಿದ್ದಾರೆ. ಜೊತೆಗೆ ಅವರ ಮೊದಲ ಸಾರ್ವಜನಿಕ ಹಾಡುಗಾರಿಕೆ ಮತ್ತು ಕೊನೆಯ ಸಾರ್ವಜನಿಕ ಹಾಡುಗಾರಿಕೆ ಎರಡೂ ಮೈಸೂರಿನಲ್ಲಿಯೇ ಜರುಗಿದ್ದು ವಿಶೇಷ. ಎಸ್. ಜಾನಕಿ ಅವರ ಅಗಲಿಕೆ ಜಾಲತಾಣದಲ್ಲಿ ಕೇವಲ ಶೋಕದ ಅಭಿವ್ಯಕ್ತಿಗೆ ಸೀಮಿತವಾಗಿರದೆ, ಭಾರತೀಯ ಸಂಗೀತ ಪರಂಪರೆಯ ಮಹತ್ವವನ್ನು ಮತ್ತೊಮ್ಮೆ ದೇಶಕ್ಕೆ ನೆನಪಿಸಿತು. ಇಂದಿನ ಯುವಜನತೆಯೂ ಅವರ ಅಮರ ಗೀತೆಗಳನ್ನು ಪುನಃ ಆಲಿಸಲು ಆರಂಭಿಸಿದ್ದು, ಭಾರತೀಯ ಶಾಸ್ತ್ರೀಯ ಹಾಗೂ ಚಲನಚಿತ್ರ ಸಂಗೀತದ ಮೇಲಿನ ಆಸಕ್ತಿ ಮತ್ತಷ್ಟು ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಜಾನಕಿ ಅಮ್ಮ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಧ್ವನಿ ಕೋಟ್ಯಂತರ ಭಾರತೀಯರ ಹೃದಯಗಳಲ್ಲಿ ಎಂದೆಂದಿಗೂ ಜೀವಂತವಾಗಿರಲಿದೆ. ಸಂಗೀತ ಇರುವವರೆಗೂ ಎಸ್. ಜಾನಕಿ ಅವರ ಹೆಸರು ಭಾರತೀಯ ಸಂಸ್ಕೃತಿಯ ಅಮರನಾದವಾಗಿ ಉಳಿಯಲಿದೆ.

