ಅಂಕಣ – ಸ್ವಾಸ್ಥ್ಯ ಸಂಪದ
- ಡಾ. ಶ್ರೀವತ್ಸ ಭಾರದ್ವಾಜ, ದತ್ತಂ ಆಯುರ್ಧಾಮ, ಮಂಗಳೂರು
ಬೆರಳುಗಳ ಸೌಂದರ್ಯ ಸುಂದರವಾದ ಉಗುರಿನಿಂದಲೇ ಹೆಚ್ಚುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಈ ಉಗುರಿನ ಸೌಂದರ್ಯವನ್ನು ಹೆಚ್ಚಿಸಲು ತರತರದ ರಾಸಾಯನಿಕಗಳನ್ನು ಬಳಸುವುದನ್ನು ನಾವೆಲ್ಲಾ ನೋಡಿದ್ದೇವೆ. ಬೆರಳುಗಳ, ಉಗುರಿನ ಸೌಂದರ್ಯಕ್ಕೆ ಅದೆಷ್ಟೋ ಖರ್ಚು ಮಾಡುವವರಿದ್ದಾರೆ. ಇಷ್ಟಾಗಿಯೂ ನಮ್ಮ ಬೆರಳು-ಉಗುರುಗಳಲ್ಲಿ ಸಮಸ್ಯೆಗಳು ಪ್ರಾರಂಭವಾದರೆ ಏನು ಅರ್ಥ? ಉಗುರುಗಳು ಹಾಗೂ ಅವುಗಳ ಸುತ್ತಲೂ ಇರುವ ಚರ್ಮದಲ್ಲಿ ಬರುವ ಸಮಸ್ಯೆಗಳನ್ನು ಸಶಕ್ತವಾಗಿ ಎದುರಿಸಿ ಗುಣಪಡಿಸಲು ಸಮಸ್ಯೆಯ ಮೂಲ ಏನು ಎನ್ನುವುದನ್ನು ತಿಳಿಯುವುದು ಅತ್ಯಗತ್ಯ. ಉಗುರುಗಳ ಹೊಡೆತಕ್ಕೆ ಹೆಚ್ಚಾಗಿ ದೇಹದ ಒಳಗೆ ಅಡಗಿರುವ ಕೊರತೆಗಳೇ ಮುಖ್ಯ ಕಾರಣವಾದರೆ ಉಗುರುಸುತ್ತು ಬರಲು ಹೊರಗಿನ ಪ್ರಭಾವವೇ ಹೆಚ್ಚು.
ನಮಗೆ ತಲೆಸುತ್ತಿನ ಬಗ್ಗೆ ತಿಳಿದಿದೆ, ಏನಿದು ಉಗುರುಸುತ್ತು ಎಂದು ಯೋಚಿಸುತ್ತಿದ್ದೀರಾ? ಉಗುರು ಸುತ್ತು ಎಂದರೆ ನಮ್ಮ ಉಗುರುಗಳ ಸುತ್ತಲೂ ಇರುವ ಸೂಕ್ಷ್ಮವಾದ ಚರ್ಮಕ್ಕೆ ಸೋಂಕು ತಗುಲಿ ನೋವು, ಬಾವು, ಸ್ರಾವಗಳು ಕಂಡು ಬರುತ್ತವೆ. ಇದಕ್ಕೆ ಎಷ್ಟೇ ಪರಿಹಾರ ಮಾಡಿದರೂ ಪುನಃ ಪುನಃ ಬರುತ್ತಲೇ ಇರುತ್ತದೆ. ಈ ಕಾಯಿಲೆಯ ತೀಕ್ಷ್ಣತೆಯು ಅನುಭವಿಸಿದವರಿಗೆ ಗೊತ್ತು. ಕೈಗಳ ಶುಚಿತ್ವ ಕಾಪಾಡದಿದ್ದರೆ, ಅತಿಯಾಗಿ ಸಾಬೂನು ಅಥವಾ ಇನ್ಯಾವುದೇ ರಾಸಾಯನಿಕಗಳನ್ನು ಬಳಸಿ ಕೈಗಳನ್ನು ತೊಳೆದರೆ, ಉಗುರುಗಳಿಗೆ ಅತಿಯಾಗಿ ನೈಲ್ ಪಾಲಿಶ್ ಹಚ್ಚಿದರೆ, ತಗಲಿದ ಮುಳ್ಳನ್ನು ಸರಿಯಾಗಿ ತೆಗೆಯದಿದ್ದಲ್ಲಿ ಈ ಸಮಸ್ಯೆ ಪ್ರಾರಂಭವಾಗುತ್ತದೆ. ಉಗುರುಸುತ್ತು ಬಾರದಿರಲು ಕೆಲವು ಸುಲಭ ಉಪಾಯಗಳು ಇಲ್ಲಿವೆ.
● ಮೊತ್ತ ಮೊದಲಿಗೆ ಕೈಗಳನ್ನು ರಾಸಾಯನಿಕ ಬಳಸಿ ತೊಳೆಯದಿರಿ.
● ಉಗುರುಗಳಿಗೆ ನೈಲ್ ಪಾಲಿಶ್ ಮೆತ್ತಿ ಸಹಜ ಸೌಂದರ್ಯವನ್ನು ಹಾಳುಮಾಡಿ ಉಗುರುಸುತ್ತಿನಂತಹ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳದಿರಿ.
● ದಿನನಿತ್ಯ ಬಿಸಿನೀರಿಗೆ ಸ್ವಲ್ಪ ಉಪ್ಪು ಮತ್ತು ಅರಶಿನವನ್ನು ಬೆರೆಸಿ ಸ್ವಲ್ಪ ಹೊತ್ತು ಕೈಗಳನ್ನು ನೆನೆಸಿ ಇಡಿ.
● ನೆಲ್ಲಿಕಾಯಿಯ ರಸವನ್ನು ಅರಶಿನದೊಂದಿಗೆ ಕಲಸಿ ಉಗುರು ಮತ್ತು ಅದರ ಸುತ್ತಲೂ ಹಚ್ಚಿದರೆ ಸಮಸ್ಯೆ ಪರಿಹಾರವಾಗುತ್ತದೆ.
● ಉಗುರುಸುತ್ತಿನಲ್ಲಿ ಉರಿ ಕಂಡುಬಂದರೆ ಗುಲಾಬಿ ದಳಗಳನ್ನು ತೆಂಗಿನಕಾಯಿಯ ಹಾಲಿನಲ್ಲಿ ಕಲಸಿ ಲೇಪಿಸಿದರೆ ಉತ್ತಮ.
● ಕೀವು, ಬಾವು ಕಂಡು ಬಂದಲ್ಲಿ ಲಿಂಬೆರಸಕ್ಕೆ ಅರಶಿನವನ್ನು ಕಲಸಿ ಲೇಪಿಸಿದರೆ ಪರಿಹಾರವಾಗುತ್ತದೆ.
● ತುರಿಕೆ ಇದ್ದಲ್ಲಿ ವಿನೆಗರ್ ಮತ್ತು ನೀರನ್ನು ಮಿಶ್ರಣ ಮಾಡಿ ಬೆರಳಿನ ಸುತ್ತಲೂ ಹಚ್ಚಿರಿ.
● ಉಗುರುಗಳನ್ನು ಉದ್ದಕ್ಕೆ ಬೆಳೆಸುವುದರಿಂದ ಮತ್ತು ಬೆಳೆದ ಉಗುರುಗಳನ್ನು ಚೆನ್ನಾಗಿ ತೊಳೆಯದೇ ಇದ್ದಲ್ಲಿ ಕೊಳೆಗಳು ಕೂತು, ಉಗುರಿನ ಸುತ್ತಲೂ ಸೋಂಕು ಉತ್ಪಾದನೆಯಾಗುತ್ತದೆ. ಹೀಗಾಗಿ ಉದ್ದ ಉಗುರು ಬಿಡುವವರು ಬಿಸಿನೀರಿಗೆ 1/2 ಲಿಂಬೆಯನ್ನು ಹಿಂಡಿ ದಿನನಿತ್ಯ ತೊಳೆಯಬೇಕು.
● ಬೆಳ್ಳುಳ್ಳಿಯನ್ನು ಲಿಂಬೆರಸದಲ್ಲಿ ಅರೆದು ಲೇಪಿಸಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ.
● ಮದರಂಗಿ ಸೊಪ್ಪನ್ನು ಉಗುರುಗಳಿಗೆ ಹಚ್ಚುವುದರಿಂದ ಈ ಸಮಸ್ಯೆ ಬಾರದಂತೆ ಕಾಪಾಡುತ್ತದೆ.
● ತೆಂಗಿನ ಎಣ್ಣೆಯನ್ನು ದಿನನಿತ್ಯ ಕೈ ಬೆರಳುಗಳಿಗೆ ಸವರಿದರೆ ಉಗುರುಸುತ್ತು ಬಾರದಂತೆ ಕಾಪಾಡುತ್ತದೆ.
ನೆನೆಪಿಡಿ ಉಗುರುಗಳ ಸೌಂದರ್ಯ ಪ್ರಕೃತಿ ಸಹಜವಾಗಿದ್ದಷ್ಟು ದೀರ್ಘಕಾಲ ಯಾವ ಸಮಸ್ಯೆಯೂ ಕಾಡುವುದಿಲ್ಲ. ಇಷ್ಟಾಗಿಯೂ ಉಗುರುಸುತ್ತಿನಂತಹ ಸಮಸ್ಯೆಗಳು ಬಂದಾಗ ಈ ಪರಿಹಾರಗಳನ್ನು ಪ್ರಯತ್ನಿಸಿ ನೋಡಿ, ಫಲವು ಖಂಡಿತವಾಗಿ ದೊರೆಯುತ್ತದೆ.
