ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು
- ದು.ಗು. ಲಕ್ಷ್ಮಣ ಹಿರಿಯ ಪತ್ರಕರ್ತ
ರಾಷ್ಟ್ರದೇವಗೆ ಪ್ರಾಣ ದೀವಿಗೆ
ಸೇವೆಯಾಗಲಿ ನಾಡಿಗೆ
ಮೃತ್ಯು ಭೃತ್ಯನು ಹಿಂದೂ ಭೂಮಿಗೆ
ಮರಣ ಕಾದಿದೆ ಸಾವಿಗೆ
ಅದು 1962ರಲ್ಲಿ ಭಾರತದ ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನಾ ಕಾಲು ಕೆದರಿ ಆಕ್ರಮಣ ಮಾಡಿದ ಸಂದರ್ಭ. ಇಡೀ ದೇಶದಲ್ಲಿ ಯುದ್ಧದ ಪರಿಣಾಮ ಕಂಡುಬಂದಿತ್ತು. ಅದೇ ವರ್ಷ ಡಿಸೆಂಬರ್ 8, 9ರಂದು ಬೆಂಗಳೂರಿನಲ್ಲಿ ಆರ್ಎಸ್ಎಸ್ನ ಪ್ರಾಂತ ತರುಣ ಶಿಬಿರ. ಆ ಶಿಬಿರದಲ್ಲಿ ಆಗಿನ ಸರಸಂಘಚಾಲಕರಾಗಿದ್ದ ಗುರೂಜಿಯವರು ಪಾಲ್ಗೊಂಡಿದ್ದರು. ಡಿ. 9ರಂದು ಸಂಜೆ ಸಾರ್ವಜನಿಕ ಸಮಾರಂಭದಲ್ಲಿ ‘ರಾಷ್ಟ್ರ ದೇವಗೆ…’ ಎಂಬ ದೇಶಭಕ್ತಿ ಗೀತೆ ಮೊಳಗಿತು. ಅದಕ್ಕೆ ರಾಗ ಹಾಕಿ ಸುಶ್ರಾವ್ಯವಾಗಿ ಹಾಡಿದವರು ಧಾರವಾಡ ಆಕಾಶವಾಣಿಯ ಕಲಾವಿದ ಕೇಶವ ಗುರ್ರಂ ಅವರು. ಸಮಾಜದಲ್ಲಿನ ಸುಪ್ತ ಪೌರುಷವನ್ನು ಬಡಿದೆಬ್ಬಿಸುವಂತಹ ಭಾವ ಗರ್ಭಿತ ಈ ಹಾಡು ಚೀನಾ ವಿರುದ್ಧ ನಡೆದ ಯುದ್ಧದ ಹಿನ್ನೆಲೆಯಲ್ಲಿ ಅತ್ಯಂತ ಸಮಯೋಚಿತವಾಗಿತ್ತು. ವೀರೋಚಿತ ವಿಚಾರ, ಪೌರುಷ ಆವಾಹಿಸುವ ರಾಗ ಸಂಯೋಜನೆ ಹಾಗೂ ಹಾಡುಗಾರರ ಕಂಠಸಿರಿ ಇವುಗಳ ತ್ರಿವೇಣಿ ಸಂಗಮದಿಂದಾಗಿ ಆ ಹಾಡು ಬಹುಬೇಗನೆ ಜನಪ್ರಿಯವಾಯಿತು.
ಅಷ್ಟಕ್ಕೂ ಆ ಗೀತೆ ರಚಿಸಿದ ಕವಿಯನ್ನೇ ಸ್ಮರಿಸದಿದ್ದರೆ ಹೇಗೆ? ಪೌರುಷ ಉಕ್ಕಿಸುವ, ದೇಶದ ಬಗ್ಗೆ ಹೆಮ್ಮೆ ಮೂಡಿಸುವ ಆ ಗೀತೆ ರಚಿಸಿದವರು ತರುಣಕವಿ ಶಿವರಾಮು. ನಾಲ್ಕು ಚರಣಗಳ ಆ ಗೀತೆಯ ಕೊನೆಯ ಚರಣದ ಕೊನೆಯ ಎರಡು ಸಾಲುಗಳು “ಬಾಳಬಲ್ಲೆವು ಆಳಬಲ್ಲೆವು ಸೋಲನೊಲ್ಲೆವು ಒಲ್ಲೆವು| ವಿಶ್ವವೆಲ್ಲವು ಮುನಿದು ನಿಂತರು ನಾಡನುಳಿಸಲು ಬಲ್ಲೆವು” ಇಡೀ ಗೀತೆಯ ಸಂದೇಶದಂತಿತ್ತು. ಹಾಡಿನ ಪಲ್ಲವಿಯಲ್ಲಿ ಬರುವ ‘ಮರಣ ಕಾದಿದೆ ಸಾವಿಗೆ’ ಎಂಬ ಸಾಲನ್ನು ಗಮನಿಸಿದ ಪ್ರಖ್ಯಾತ ಕವಿ ದ.ರಾ. ಬೇಂದ್ರೆ ಅಜ್ಜ “ಅದೇನು ಕಲ್ಪನಾರೀ ಈ ಕವೀದು. ಸಾವಿಗೇ ಮರಣ ಕಾದಿದೆ ಎಂದು ಬರೆದಿದ್ದಾನಲ್ರೀ, ಶಭಾಷ್” ಎಂದು ಕೊಂಡಾಡಿದ್ದರಂತೆ (ಕೆಲವು ಉಗ್ರ ಹಿಂದೂ ದೇಶಭಕ್ತರು ‘ಅದು ಮರಣ ಕಾದಿದೆ ಸಾಬಿಗೆ’ ಎಂದಾಗಬೇಕು ಎಂದು ತಮ್ಮ ತಮ್ಮಲ್ಲಿ ಹೇಳಿಕೊಂಡಿದ್ದರಂತೆ! ಬಿಡಿ, ಆ ಮಾತು ಬೇರೆ)
ಈ ದೇಶಭಕ್ತಿ ಗೀತೆಯು ಅನಂತರ ಅದೆಷ್ಟು ಅಗಣಿತ ಮಂದಿ ಸ್ವಯಂಸೇವಕರ, ಸಾರ್ವಜನಿಕರ ಬಾಯಲ್ಲಿ ಮಾರ್ದನಿಸಿತೋ ಲೆಕ್ಕವಿಟ್ಟವರಾರು? ಈಗಲೂ ಸಂಘವಲಯದಲ್ಲಿ ಅದೊಂದು ಅತ್ಯಂತ ಜನಪ್ರಿಯ ಗೀತೆ. ಆ ಗೀತೆಯನ್ನು ಗುನುಗುತ್ತಾ ಮೈಮನಗಳಲ್ಲಿ ದೇಶಪ್ರೇಮದ ಕಾವು ತುಂಬಿಕೊಂಡವರು ಅದೆಷ್ಟೋ. ಶಿವರಾಮು ಅದೊಂದೇ ಗೀತೆ ಬರೆದುದಲ್ಲ. ‘ತೆರೆದು ಬಿಡು ಹೃದಯ ದ್ವಾರ, ಬರಲಿ ಬಿಡು ಸಮಿರ ನೇರ’, ‘ರಣಮಂತ್ರದುಚ್ಚಾರ ಘನಶೌರ್ಯದೋಂಕಾರ’, ‘ಉಘೇ ವೀರಭೂಮಿಗೆ’, ‘ಓ ಏಳು ಮೈತಾಳು’, ‘ಐಕ್ಯತೆಯು ಮಣ್ಗೂಡಿ ಭಾರತಿಯು ಬಳಲಿರಲು’, ‘ಓ ಬೆಳಗಲಿಹುದದೋ ಭಾರತದ ಬಾನಂಚು’ ಮುಂತಾದ ಹಲವಾರು ದೇಶಭಕ್ತಿ ಗೀತೆಗಳನ್ನು ರಚಿಸಿದ್ದಾರೆ. ಅವುಗಳನ್ನು ಲಕ್ಷಾಂತರ ಕಂಠಗಳು ಭಕ್ತಿಯಿಂದ ಪಠಿಸಿವೆ. ತಮ್ಮ ಅದ್ಬುತ, ಮೈ ನವಿರೇಳಿಸುವ ಸಾಹಿತ್ಯ ಬಳಸಿ ಅವರು ಬರೆದ ದೇಶಭಕ್ತಿ ಗೀತೆಗಳು ಕನ್ನಡದ ದೇಶಭಕ್ತಿ ಗೀತೆಗಳ ಘನತೆ ಗೌರವ ಹೆಚ್ಚಿಸಿವೆ.
ಶಿವರಾಮು ಎಂದೇ ಪ್ರಸಿದ್ಧರಾಗಿದ್ದ ಎಂ.ಎಸ್. ಶಿವರಾಮಯ್ಯ ಜನಿಸಿದ್ದು ಮಳವಳ್ಳಿಯಲ್ಲಿ, 1936ರ ಜುಲೈ 8ರಂದು. ತಂದೆ ಸೀತಾರಾಮಯ್ಯ, ತಾಯಿ ಸೀತಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಮಳವಳ್ಳಿಯಲ್ಲಿ. ಇಂಜಿನಿಯರಿಂಗ್ ಓದಲು ಬೆಂಗಳೂರಿನ ಬಿಎಂಎಸ್ ಕಾಲೇಜಿಗೆ ಸೇರಿದರು. ಅನಾರೋಗ್ಯ, ಬಡತನದ ಕಾರಣಗಳಿಂದ ಓದನ್ನು ಅರ್ಧಕ್ಕೇ ನಿಲ್ಲಿಸಬೇಕಾಯಿತು.
ನಂತರ ಶಿವರಾಮು ಅವರನ್ನು ಕೈಬೀಸಿ ಕರೆದದ್ದು ಆರ್ಎಸ್ಎಸ್. ಸಂಘದ ಕಾರ್ಯಕರ್ತರಾಗಿ, ಪ್ರಚಾರಕರಾಗಿ ಊರೂರು ಸುತ್ತಿದರು. ಅನಾರೋಗ್ಯ ಆರಂಭದಿಂದಲೂ ಕಾಡುತ್ತಿದ್ದುದರಿಂದ ಕೊನೆಗೆ ಬೆಂಗಳೂರಿನ ಕೇಶವ ಕೃಪಾದಲ್ಲಿ ನೆಲೆ ನಿಂತು ವಿಕ್ರಮ ಪತ್ರಿಕೆ, ರಾಷ್ಟ್ರೋತ್ಥಾನ ಸಾಹಿತ್ಯ ಮಾಲೆಗಳಿಗೆ ಬರೆದರು. ‘ಉತ್ಥಾನ’ ಮಾಸಪತ್ರಿಕೆಯ ಗೌರವ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನ ಕರ್ನಾಟಕದಲ್ಲಿ ತನ್ನದೇ ಛಾಪು ಮೂಡಿಸಿದ್ದರೆ ಅದಕ್ಕೆ ಶಿವರಾಮು ರಚಿಸಿದ ‘ಆತ್ಮಾಹುತಿ’, ‘ನೆತ್ತರು ತಾವರೆ’, ‘ಒಂದು ಕಥೆ -ಒಂದು ವ್ಯಥೆ’, ಭಾರತೀಯ ಸೈನಿಕರ ಹೋರಾಟದ ಕಥೆ ‘ರಣವೀಳ್ಯ’, ಸ್ವಧರ್ಮ, ಸ್ವದೇಶ ಸೇವೆಗಾಗಿ ಕೆಚ್ಚಿನಿಂದ ಹೋರಾಡಿದ ಅಮೋಘವರ್ಷ ನೃಪತುಂಗ, ಗಂಡುಗಲಿ ಕುಮಾರರಾಮ, ಕಿತ್ತೂರು ರಾಣಿ ಚೆನ್ನಮ್ಮ, ಮುಂಡರಗಿ ಭೀಮರಾಯ ಮುಂತಾದ 13 ಮಂದಿ ಕನ್ನಡ ವೀರಪುರುಷ, ಮಹಿಳೆಯರ ಸಂಸ್ಮರಣೆಯ ಕೃತಿ ‘ಕನ್ನಡದ ಕಡುಗಲಿಗಳು’, ‘ಅಕ್ಕ ನಿವೇದಿತಾ’ ಮೊದಲಾದ ಅದ್ಭುತ ಕೃತಿಗಳೇ ಕಾರಣ. ರಾಷ್ಟ್ರೋತ್ಥಾನ ಸಾಹಿತ್ಯಕ್ಕೆ ಬ್ರ್ಯಾಂಡ್ ವ್ಯಾಲ್ಯೂ ತಂದುಕೊಟ್ಟದ್ದು ಇದೇ ಕೃತಿಗಳು ಎಂದರೆ ಅದು ಉತ್ಪ್ರೇಕ್ಷೆಯಲ್ಲ.
ಅವರು ಆತ್ಮಾಹುತಿ (ಸಾವರ್ಕರ್ ಕುರಿತ ಅದ್ಭುತ ಕಾದಂಬರಿ) ಕೃತಿ ರಚಿಸುತ್ತಿದ್ದ ಸಂದರ್ಭ. ಮಲೆನಾಡು ಕೊಪ್ಪ ತಾಲೂಕಿನ ಜಯಪುರ ಸಮೀಪದ ಮಾಚಿಕೊಪ್ಪ ಎಂಬ ಸಣ್ಣ ಗ್ರಾಮದ ದಕ್ಷಿಣಾಮೂರ್ತಿ ಎಂಬ ಹಿರಿಯ ಕಾರ್ಯಕರ್ತರ ಮನೆಯಲ್ಲಿ ತಂಗಿದ್ದರು. ಒಂದು ಮಳೆಗಾಲದ ರಾತ್ರಿ. ಹೊರಗೆ ವಿಪರೀತ ಮಳೆ. ಶಿವಮೊಗ್ಗದ ಜಿಲ್ಲಾ ಪ್ರಚಾರಕರಾಗಿದ್ದ ಜಡೆ ಚಂದ್ರಶೇಖರ್ ವಿದ್ಯಾರ್ಥಿಯಾಗಿದ್ದ ನನ್ನನ್ನು ಜೊತೆಗೆ ಕರೆದುಕೊಂಡು ಶಿವರಾಮು ಇದ್ದ ಮಾಚಿಕೊಪ್ಪಕ್ಕೆ ಬಂದಿದ್ದರು. ಸಣಕಲು ಶರೀರದ ಕುಳ್ಳಗಿದ್ದ ಶಿವರಾಮ ಮೂಲೆಯಲ್ಲಿ ನೆಲದ ಮೇಲೆ ಕುಳಿತು ತಲೆತಗ್ಗಿಸಿ ಬರೆಯುತ್ತಿದ್ದರು. ಜಡೆಯವರು “ಏನ್ ಶಿವರಾಮು, ಎಲ್ಲಿವರೆಗೆ ಬಂತು ಬರೆವಣಿಗೆ?” ಎಂದು ಪ್ರಶ್ನಿಸಿದಾಗ, ಶಿವರಾಮು ಸಣ್ಣಗಿನ ಧ್ವನಿಯಲ್ಲಿ “ಸಾವರ್ಕರ್ರನ್ನು ಈಗ ತಾನೇ ಜೈಲಿಗೆ ಹಾಕಿದ್ದೇನೆ. ಇನ್ನೂ ಬರೆಯುವುದಿದೆ” ಅಂದಿದ್ದರು! ನನಗಾಗ ಆ ಕೃತಿಯ ತುದಿಬುಡ ಕೂಡ ತಿಳಿದಿರಲಿಲ್ಲ. ಆದರೆ ಅದು ಪ್ರಕಟವಾಗಿ ಅದ್ಭುತ ಜನಮೆಚ್ಚುಗೆ ಪಡೆದಾಗ ಶಿವರಾಮು ಇಂತಹ ಅದ್ಭುತ ಸಾಹಿತಿಯೆ ಎಂದು ಬೆರಗಾಗಿದ್ದೆ. ಆತ್ಮಹುತಿ ಓದಿ ರೋಮಾಂಚನಗೊಂಡಿದ್ದೆ. ಅದನ್ನೋದಿದ ಬಹುತೇಕರ ಅನುಭವವೂ ಇದಕ್ಕಿಂತ ಭಿನ್ನವಾಗಿರಲಿಲ್ಲ.
ಸಣಕಲು ಶರೀರ, ಸದಾ ಕಾಡುತ್ತಿದ್ದ ಅನಾರೋಗ್ಯ, ಬೆಂಗಳೂರಿನ ಹವೆ ಯಾಕೋ ಅವರಿಗೆ ಹೊಂದಿಕೆಯಾಗಲಿಲ್ಲ. ಆರೋಗ್ಯ ಮತ್ತಷ್ಟು ಹದಗೆಟ್ಟು, ವೈದ್ಯರ ಸಲಹೆಯಂತೆ ಶಿವರಾಮು ಬೆಂಗಳೂರು ಬಿಟ್ಟರು. ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮಕ್ಕೆ ಬಂದು ನೆಲೆಸಿದರು. ಅನಂತರ ಗೃಹಸ್ಥರೂ ಆದರು. ಕಾಸರಗೋಡು ತಾಲೂಕಿನಲ್ಲೂ ಕೆಲವು ಕಾಲ ನೆಲೆಸಿದ್ದರು.
1974ರಲ್ಲಿ ನನ್ನ ಒಬ್ಬಳೇ ತಂಗಿಯ ವಿವಾಹ ಶೃಂಗೇರಿ ಸಮೀಪ ಮೇಗೂರಿನ ಗುಡ್ಡದ ಮೇಲಿರುವ ದುರ್ಗತೋಟ ಮನೆಯಲ್ಲಿ ಏರ್ಪಾಡಾಗಿತ್ತು. ನನ್ನ ಕೋರಿಕೆಯಂತೆ ಶಿವರಾಮು ಎಲ್ಲೆಲ್ಲೋ ಸುತ್ತಿ, ಮೈಲುಗಟ್ಟಲೆ ನಡೆದು ಅಲ್ಲಿಗೆ ಬಂದಿದ್ದರು. ನನಗೋ ಶಿವರಾಮು ಬಂದಿದ್ದಾರೆಂದು ಖುಷಿ, ಸಂಭ್ರಮ. “ಶಿವರಾಮು ಅವರೇ ಕುಡಿಯಲು ನಿಮಗೇನು ಕೊಡಲಿ?” ಎಂದೆ. ಗುಡ್ಡಹತ್ತಿ ಸುತ್ತಿ ಬಂದಿದ್ದ, ಏದುಸಿರು ಬಿಡುತ್ತಿದ್ದ ಶಿವರಾಮು “ನನಗೆ ಸ್ವಲ್ಪ ಉಸಿರು ಕೊಡು” ಎಂದರು. ನನಗೋ ಗಾಬರಿ. ತಕ್ಷಣ ತಣ್ಣಗಿನ ಜಾಗದಲ್ಲಿ ಹಾಸಿಗೆ ಹಾಸಿ ಅವರನ್ನು ಮಲಗಿಸಿ ಸುಧಾರಿಸಿಕೊಳ್ಳಲು ಹೇಳಿದ್ದೆ. ಅವರಿಗೆ ಪ್ರತಿ ಬಾರಿ ನಾನು ಪತ್ರ ಬರೆಯುತ್ತಿದ್ದಾಗಲೂ “ನಿಮ್ಮ ಅನಾರೋಗ್ಯ ಈಗ ಹೇಗಿದೆ?” ಎಂದೇ ಕುಶಲೋಪರಿ ವಿಚಾರಿಸುತ್ತಿದ್ದೆ.
‘ಹಿಂದೂ ಬಂಡಾಯ’, ‘ಅರಳು – ಸುರಳಿ’, ‘ತಾಯೇ ವಂದಿಸುವೆ’, ‘ನನ್ನ ಜನ ನನ್ನ ಮನ’ ಕವನ ಸಂಕಲನಗಳನ್ನು ಶಿವರಾಮು ರಚಿಸಿದ್ದಾರೆ. ‘ಚಿನ್ನದ ಕತ್ತಿ’ ಎಂಬ ಅವರ ವಿಡಂಬನಾ ಕೃತಿಯನ್ನು ಸಾಹಿತ್ಯ ದಿಗ್ಗಜ ಶಿವರಾಮ ಕಾರಂತರೂ ಮುಕ್ತವಾಗಿ ಪ್ರಶಂಸಿಸಿದ್ದರು. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದ ಭಾರತ – ಭಾರತಿ ಮಕ್ಕಳ ಕೃತಿ ಮಾಲಿಕೆಗಾಗಿ ವಲ್ಲಭಭಾಯ್ ಪಟೇಲ್, ಭಕ್ತ ನಂದನಾರ್, ಬಾಜಿಪ್ರಭು ದೇಶಪಾಂಡೆ, ಸುಶೀಲಕುಮಾರ್ ಸೇನ್ ಮುಂತಾದವರ ಜೀವನ ಚರಿತ್ರೆಯನ್ನೂ ಶಿವರಾಮು ರಚಿಸಿದ್ದಾರೆ. ವೀರ ಸಾವರ್ಕರ್ ಕುರಿತ ಅವರ ಸ್ವತಂತ್ರ ಕೃತಿ ‘ಆತ್ಮಾಹುತಿ’ಯನ್ನು ಓದಿದ ಬಂಡಾಯ ಸಾಹಿತಿ ಚಂಪಾ “ಎಂಥಾ ಅದ್ಭುತ ಕೃತಿ ಇದು. ಸಾವರ್ಕರ್ ಕುರಿತು ನನಗೆ ಭಿನ್ನಾಭಿಪ್ರಾಯವಿದೆ ನಿಜ. ಆದರೆ ಈ ಕೃತಿಯ ಶೈಲಿ ಅಮೋಘ” ಎಂದು ಕೊಂಡಾಡಿದ್ದರು.
ಇಂಥ ಒಬ್ಬ ಮೇರು ಸಾಹಿತಿ, ಕವಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ತಾನಾಗಿಯೇ ಒಲಿದು ಬಂದಿವೆ ಎಂದು ನೀವು ಭಾವಿಸಿದ್ದರೆ ಅದು ಶುದ್ಧ ತಪ್ಪು. ಉನ್ನತ ಪ್ರಶಸ್ತಿಗಳಿರಲಿ, ಸಾಧಾರಣ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ದೊರಕಲಿಲ್ಲ. ದೇಶಭಕ್ತಿಯ, ರಾಷ್ಟ್ರೀಯ ಸಾಹಿತ್ಯದ ಕವಿ, ಲೇಖಕ ಎಂಬುದೇ ಪ್ರಶಸ್ತಿ ವಿಷಯದಲ್ಲಿ ಅವರಿಗೆ ‘ಮೈನಸ್ ಪಾಯಿಂಟ್’ ಆಗಿ ಕಾಡಿದ್ದಿರಬಹುದು. ಪ್ರಶಸ್ತಿ, ಪುರಸ್ಕಾರಗಳೆಂದರೆ ಅದು ಎಡಪಂಥೀಯರಿಗೇ ಮೀಸಲು ಎಂಬ ಅಲಿಖಿತ ನಿಯಮ ಆಗಲೂ ಇತ್ತು. ಈಗಲೂ ಅದು ಬದಲಾಗಿಲ್ಲ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಅಲಿಖಿತ ನಿಯಮ ಬದಲಾಗುವುದಿಲ್ಲ. (ಎಡಪಂಥೀಯರ ಕಬಂಧ ಹಿಡಿತ ಆ ಮಟ್ಟಕ್ಕಿದೆ).
ಶಿವರಾಮು ಅವರ ಕೊನೆಯ ದಿನಗಳು ಏನೇನೂ ಚೆನ್ನಾಗಿರಲಿಲ್ಲ. ನಿಶ್ಚಿತ, ನಿಗದಿತ ಆದಾಯ ಎಂಬುದೇ ಅವರಿಗಿರಲಿಲ್ಲ. ತಾರುಣ್ಯದಲ್ಲಿ ರಾಷ್ಟ್ರಸೇವೆಗೆ ತಮ್ಮ ತನು, ಮನ, ಸಾಹಿತ್ಯ ಕೃಷಿ ಎಲ್ಲವನ್ನೂ ಮೀಸಲಾಗಿಟ್ಟ ಅವರನ್ನು ಬದುಕಿನ ಸಂಧ್ಯಾಕಾಲದಲ್ಲಿ ಆಧರಿಸುವವರೇ ಇರಲಿಲ್ಲ. ಅವರ ಸಾಹಿತ್ಯ, ಕವನಗಳಿಗೆ ಮನಸೋತಿದ್ದ ಕೆಲವೇ ಕೆಲವು ಅಭಿಮಾನಿಗಳು ಒಂದಿಷ್ಟು ನೆರವು ನೀಡಿದ್ದರಷ್ಟೆ. ಅವರನ್ನು ಕೈಹಿಡಿದು ಕಾಪಾಡಬೇಕಾದವರೇ ಕೈಬಿಟ್ಟರು. ಶಿವರಾಮು ಪಾಲಿಗೆ ಅವರೆಲ್ಲ ಚಿನ್ನದ ಕತ್ತಿಯಾಗಿ ಬಿಟ್ಟರು! ಭಾರತೀಯ ಧರ್ಮ, ಪರಂಪರೆ, ದೇಶಪ್ರೇಮ ಮುಂತಾದವುಗಳ ಬಗ್ಗೆ ಚಿಂತಿಸುತ್ತಿದ್ದ, ಉಜ್ವಲ ರಾಷ್ಟ್ರಪ್ರೇಮಿಯೂ ಆಗಿದ್ದ ಶಿವರಾಮು 1999ರ ನವೆಂಬರ್ 14ರಂದು ನಿಧನರಾದಾಗ ಹಲವು ಮಂದಿ ಅಭಿಮಾನಿಗಳು, ಪರಿಚಿತರಿಗೇ ಈ ಸುದ್ದಿ ತಕ್ಷಣ ತಿಳಿದಿರಲಿಲ್ಲ.
ಶಿವರಾಮು ಅವರು ಕವಿಯಾಗಿ, ಚರಿತ್ರಕಾರರಾಗಿ, ವಿಚಾರ ಸಾಹಿತ್ಯದ ನಿರ್ಮಾಪಕರಾಗಿ, ಹಾಸ್ಯ- ವಿಡಂಬನೆ -ಪ್ರಬಂಧಕಾರರಾಗಿ ಆರಿಸಿಕೊಂಡ ಎಲ್ಲ ಪ್ರಕಾರಗಳಲ್ಲೂ ಅಚ್ಚೊತ್ತಿದ್ದು ಭಾರತೀಯ ಸಂಸ್ಕೃತಿಯ ಸಾಕಾರ ರೂಪವನ್ನೇ. ಈ ಹೊತ್ತಿಗೂ ಅವರ ‘ಆತ್ಮಾಹುತಿ’, ‘ಒಂದು ಕಥೆ ಒಂದು ವ್ಯಥೆ’, ‘ರಣವೀಳ್ಯ’ ಕೃತಿಗಳನ್ನು ಓದಿದವರಿಗೆ ಆಗುವ ರೋಮಾಂಚನ, ಭಾವೋದ್ವೇಗ ಬಣ್ಣಿಸಲಸದಳ. “ರಾಷ್ಟ್ರ ದೇವಗೆ…” ದೇಶಭಕ್ತಿ ಗೀತೆ ಈಗಲೂ ಶಾಖೆಗಳಲ್ಲಿ, ಸಂಘದ ಕಾರ್ಯಕ್ರಮಗಳಲ್ಲಿ ಅನುರಣಿಸಿ ದೇಶಪ್ರೇಮದ ಉನ್ಮಾದ ಮೂಡಿಸುತ್ತದೆ. ಶಿವರಾಮು ಅವರ ಸಾಹಿತ್ಯ ಸಾರ್ವಕಾಲಿಕ ಹಾಗೂ ಜೀವಂತ ಎನ್ನುವುದಕ್ಕೆ ಇದೇ ದಿವ್ಯಸಾಕ್ಷಿ.
ಸಂಘದ ಶತಮಾನೋತ್ಸವ ಸಂದರ್ಭದಲ್ಲಿ, ರಾಷ್ಟ್ರ ದೇವಗೆ ಪ್ರಾಣ ದೀವಿಗೆ ಯಾದ ಕವಿ, ಸಾಹಿತಿ ಶಿವರಾಮು ಅವರಿಗೆ ಇದೋ ನಮ್ಮೆಲ್ಲರ ಮೌನ ಶ್ರದ್ಧಾಂಜಲಿ. ಅಷ್ಟೂ ಮಾಡದಿದ್ದರೆ ನಾವೆಲ್ಲ ಕೃತಘ್ನರಾಗಿ ಬಿಡುತ್ತೇವೆ.
