ಭೌಗೋಳಿಕವಾಗಿ ಭಾರತವು ವೈವಿಧ್ಯಮಯ ಮತ್ತು ಅತ್ಯಂತ ಸಂಕೀರ್ಣವಾದ ಗಡಿರೇಖೆಗಳನ್ನು ಹೊಂದಿರುವ ದೇಶ. ಉತ್ತರದಲ್ಲಿ ಹಿಮಾವೃತ ಹಿಮಾಲಯ, ಪಶ್ಚಿಮದಲ್ಲಿ ವಿಶಾಲ ಮರಳುಗಾಡು ಹಾಗೂ ಪೂರ್ವದ ದಟ್ಟ ಕಣಿವೆಗಳ ನಡುವೆ ಒಟ್ಟು 15,106 ಕಿಲೋಮೀಟರ್ ಭೂಗಡಿ ಹಾಗೂ 7,516 ಕಿಲೋಮೀಟರ್ ಸಮುದ್ರತೀರವನ್ನು ಕಾಯುವ ಹೊಣೆಗಾರಿಕೆ ನಮ್ಮ ಸಶಸ್ತ್ರ ಪಡೆಗಳ ಮೇಲಿದೆ. ಭಾರತವು ಸ್ವಾತಂತ್ರ್ಯದ ಸಂದರ್ಭದಲ್ಲೇ ಅವೈಜ್ಞಾನಿಕ ರ್ಯಾಡ್ಕ್ಲಿಫ್ ರೇಖೆಯ ಕಾರಣದಿಂದ ಗಡಿತಂಟೆಯ ಹೊರೆಯನ್ನು ಹೊತ್ತು ಜನಿಸಬೇಕಾಯಿತು. ಅಂದಿನಿಂದ ಇಂದಿನವರೆಗೂ ದೇಶವು ನಾಲ್ಕು ಪೂರ್ಣಪ್ರಮಾಣದ ಯುದ್ಧಗಳು, ಕಾರ್ಗಿಲ್ ಸಂಘರ್ಷ, ಸಿಯಾಚಿನ್ನ ಶೀತಲ ಸಮರ ಮತ್ತು ಇತ್ತೀಚಿನ ಗಲ್ವಾನ್ ಕಣಿವೆಯ ಘರ್ಷಣೆಗಳವರೆಗೆ ನಿರಂತರ ಭದ್ರತಾ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ.
ಆದರೆ, ಐತಿಹಾಸಿಕವಾಗಿ ಭಾರತವು ಅನುಸರಿಸಿಕೊಂಡು ಬಂದ ಗಡಿ ರಕ್ಷಣಾ ನೀತಿಯಲ್ಲಿ ಇಂದು ಮಹತ್ವದ ಪಲ್ಲಟ ಕಂಡುಬರುತ್ತಿದೆ. ಗಡಿ ಪ್ರದೇಶಗಳನ್ನು ಸಂಪೂರ್ಣವಾಗಿ ಹಿಂದುಳಿದ ಸ್ಥಿತಿಯಲ್ಲೇ ಇಡುವುದು ಮತ್ತು ಅಲ್ಲಿ ರಸ್ತೆಗಳನ್ನು ನಿರ್ಮಿಸದೆ ಇರುವುದೇ ಶತ್ರುಗಳನ್ನು ತಡೆಯುವ ಜಾಣ್ಮೆಯ ತಂತ್ರ ಎಂದು ನಂಬಿದ್ದ ಹಳೆಯ ನೆಹರೂ ನೀತಿಯನ್ನು ಭಾರತವೀಗ ಸಂಪೂರ್ಣವಾಗಿ ಕೈಬಿಟ್ಟಿದೆ. ಗಡಿ ಹಳ್ಳಿಗಳನ್ನು ಕತ್ತಲಲ್ಲಿಡುವುದು ರಕ್ಷಣೆಯಲ್ಲ, ಬದಲಿಗೆ ಅದು ಆತ್ಮಹತ್ಯಾಕಾರಕ ನಡೆ ಎಂಬುದನ್ನು ಮನಗಂಡಿರುವ ಪ್ರಸ್ತುತ ಆಡಳಿತ ವ್ಯವಸ್ಥೆಯು, ಮೂಲಸೌಕರ್ಯಗಳ ಅಭಿವೃದ್ಧಿಯನ್ನೇ ತನ್ನ ಪ್ರಧಾನ ಅಸ್ತ್ರವನ್ನಾಗಿಸಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಳೆದ 12 ವರ್ಷಗಳಲ್ಲಿ ದೇಶದ ಗಡಿಗಳನ್ನು ಭದ್ರಪಡಿಸುವುದರ ಜತೆಗೆ ಭಾರತದ ರಕ್ಷಣಾ ನೀತಿಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ರಾಷ್ಟ್ರದ ಹಿತವೇ ಪರಮೋಚ್ಚ ಎಂಬ ಧ್ಯೇಯದ ಅಡಿಯಲ್ಲಿ ಸರಕಾರ ಕಾರ್ಯನಿರ್ವಹಿಸುತ್ತಿದೆ. ದೇಶದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಜಗತ್ತಿನ ಯಾವುದೇ ಶಕ್ತಿಯಿಂದ ಒತ್ತಡಗಳು ಬಂದರೂ ಜಗ್ಗದೆ, ದಿಟ್ಟತನದಿಂದ ಎದುರಿಸುವ ಕಾರ್ಯನೀತಿಯನ್ನು ಅಳವಡಿಸಿಕೊಳ್ಳಲಾಗಿದೆ.
ಗಡಿ ರಸ್ತೆ ನಿಗಮದ (BRO) ಬಜೆಟ್ ಅನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ರಸ್ತೆ ಹಾಗೂ ಸುರಂಗ ಮಾರ್ಗಗಳ ನಿರ್ಮಾಣಕ್ಕೆ ಅಭೂತಪೂರ್ವ ವೇಗ ನೀಡಲಾಗಿದೆ. ಚಳಿಗಾಲದಲ್ಲೂ ತವಾಂಗ್ಗೆ ಸಂಪರ್ಕ ಕಲ್ಪಿಸುವ ‘ಸೇಲಾ ಸುರಂಗ’, ಲೇಹ್-ಮನಾಲಿಯನ್ನು ಜೋಡಿಸುವ ‘ಅಟಲ್ ಟನಲ್’ ಮತ್ತು ವಿಶ್ವದ ಅತಿ ಎತ್ತರದ ಹೆದ್ದಾರಿಯಾದ ‘ಉಮ್ಲಿಂಗ್ಲಾ ಪಾಸ್’ ಭಾರತದ ಸೈನಿಕ ಶಕ್ತಿಗೆ ಹೊಸ ಚೈತನ್ಯ ತುಂಬಿವೆ. ದುರ್ಗಮ ಹಿಮಾಲಯದ ಗಡಿಯಲ್ಲಿ ಚೀನಾದ ಆಕ್ರಮಣಕಾರಿ ನೀತಿಗೆ ಮತ್ತು ‘ನೂರು ಕಡಿತಗಳ’ ಪಾಕಿಸ್ತಾನದ ರಣತಂತ್ರಕ್ಕೆ ಭಾರತವು ಈಗ ತಂತ್ರಜ್ಞಾನ ಹಾಗೂ ಅಭಿವೃದ್ಧಿಯ ಮೂಲಕವೇ ತಕ್ಕ ಪ್ರತ್ಯುತ್ತರ ನೀಡುತ್ತಿದೆ.
ಇದಕ್ಕೆ ಪೂರಕವಾಗಿ ಜಾರಿಗೆ ತಂದಿರುವ ‘ವೈಬ್ರಂಟ್ ವಿಲೇಜಸ್ ಪ್ರೋಗ್ರಾಮ್’ (VVP) ಗಡಿಭಾಗದ ಹಳ್ಳಿಗಳನ್ನು ದೇಶದ ಮೊದಲ ಹಳ್ಳಿಗಳನ್ನಾಗಿ ಪರಿವರ್ತಿಸುತ್ತಿದೆ. ಚೀನಾದ ‘ಚಿಯಾವೋಕಾಂಗ್’ ಮಾದರಿ ಗ್ರಾಮಗಳಿಗೆ ಪ್ರತಿಯಾಗಿ ಭಾರತವು ತನ್ನ ಗಡಿ ಹಳ್ಳಿಗಳಲ್ಲಿ ಸರ್ವಋತು ರಸ್ತೆ, ವಿದ್ಯುತ್, ದೂರಸಂಪರ್ಕ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತಿದೆ. ಇದರೊಂದಿಗೆ, ಭೌಗೋಳಿಕ ಸವಾಲುಗಳಿರುವ ನದಿ ಹಾಗೂ ದಟ್ಟಾರಣ್ಯದ ಪ್ರದೇಶಗಳಲ್ಲಿ ಸಮಗ್ರ ಗಡಿ ನಿರ್ವಹಣಾ ವ್ಯವಸ್ಥೆ (CIBMS) ಮತ್ತು ಆಂಟಿ-ಡ್ರೋನ್ ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ. ಆಂತರಿಕ ಭದ್ರತೆಯ ಹಿತದೃಷ್ಟಿಯಿಂದ ಮ್ಯಾನ್ಮಾರ್ ಗಡಿಯ ಮುಕ್ತ ಸಂಚಾರವನ್ನು ರದ್ದುಗೊಳಿಸಿ ಬೇಲಿ ಹಾಕುತ್ತಿರುವುದು ಸಮಯೋಚಿತ ಹೆಜ್ಜೆಯಾಗಿದೆ.
ನೆರೆಯ ದೇಶಗಳ ಸತತ ಕುತಂತ್ರಗಳ ನಡುವೆಯೂ ಭಾರತವು ತನ್ನ ರಕ್ಷಣಾ ನೀತಿಯಲ್ಲಿ ತಳೆದಿರುವ ಈ ಆಕ್ರಮಣಕಾರಿ ಮತ್ತು ಪ್ರಗತಿಪರ ಧೋರಣೆ ಸ್ವಾಗತಾರ್ಹ. ಕೇವಲ ಬೇಲಿಗಳನ್ನು ಎಳೆಯುವುದಷ್ಟೇ ಗಡಿ ರಕ್ಷಣೆಯಲ್ಲ; ಗಡಿಯ ಕೊನೆಯ ಹಳ್ಳಿಗೂ ಪ್ರಗತಿಯ ಬೆಳಕನ್ನು ತಲುಪಿಸಿ, ಸೈನ್ಯಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಾರಿಗೆ ಸೌಕರ್ಯ ಒದಗಿಸುವುದೇ ನಿಜವಾದ ರಾಷ್ಟ್ರಭದ್ರತೆ ಎಂಬುದನ್ನು ಭಾರತ ಇಂದು ಜಗತ್ತಿಗೆ ಸಾಬೀತುಪಡಿಸುತ್ತಿದೆ. ಸುದೃಢ ಗಡಿಯೇ ಸಮರ್ಥ ಭಾರತದ ಅಡಿಪಾಯ.
ಭಾರತ ತನ್ನ ಪರಮ ವೈಭವದ ಸ್ಥಿತಿಯನ್ನು ತಲುಪಲು ಸಾಗಬೇಕಾದ ಹಾದಿ ಇನ್ನೂ ಬಹಳಷ್ಟಿದೆ. ಆದರೆ ಆ ದಿಕ್ಕಿನತ್ತ ಇಡುತ್ತಿರುವ ಹೆಜ್ಜೆಗಳು ದೃಢವಾಗಿವೆ ಮತ್ತು ನಿರಂತರವಾಗಿವೆ. ದೇಶದ ಪ್ರಜೆಗಳ ಯೋಗದಾನ ಅತ್ಯಂತ ಮಹತ್ವದ್ದಾಗಿದ್ದು, ವಿಚ್ಛಿದ್ರಕಾರಿ ಶಕ್ತಿಗಳ ಹುನ್ನಾರಗಳಿಗೆ ಬಲಿಯಾಗದೆ ಏಕತೆಯೇ ಮೂಲ ಮಂತ್ರವಾಗಿ ಆಡಳಿತದ ಜತೆಗೆ ದೃಢವಾಗಿ ನಿಲ್ಲಬೇಕಿದೆ.
