ಅಂಕಣ – ಪರ್ಯಾಯ
- ಪ್ರೊ. ಎಂ.ಎಸ್. ಚೈತ್ರ
ನಿರ್ದೇಶಕ ಮತ್ತು ಸೀನಿಯರ್ ಫೆಲೋ, ಫೌಂಡೇಶನ್ ಫಾರ್ ಸ್ಟಡಿ ಆಫ್ ಇಂಡಿಯನ್ ಕಲ್ಚರ್, ಬೆಂಗಳೂರು.
ಸಹಪ್ರಾಧ್ಯಾಪಕ, ಯುನಿವರ್ಸಿಟಿ ಆಫ್ ಟ್ರಾನ್ಸ್-ಡಿಸಿಪ್ಲಿನರಿ ಹೆಲ್ತ್ ಸೈನ್ಸ್ ಮತ್ತು ಟೆಕ್ನಾಲಜಿ, ಬೆಂಗಳೂರು
ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವದ ಕೊರತೆಯಿದೆ ಎಂದು ಆಗಾಗ ನಮ್ಮ ಸಾರ್ವಜನಿಕ ಸಂವಾದಗಳಲ್ಲಿ ಹಾಗೂ ನಮ್ಮ ಪಠ್ಯಪುಸ್ತಕಗಳಲ್ಲಿ ಪ್ರಸ್ತಾಪವಾಗುತ್ತಿರುತ್ತದೆ. ಈ ಚರ್ಚೆಗಳನ್ನು ಗಂಭೀರವಾಗಿ ಪರಿಗಣಿಸಿದಲ್ಲಿ, ಭಾರತೀಯರು ಅವೈಜ್ಞಾನಿಕರು ಮತ್ತು ಮೌಢ್ಯವನ್ನು ಜೀವಿಸುವವರಾದರೆ, ಇದಕ್ಕೆ ಸಂವಾದಿಯಾಗಿ ಯುರೋಪಿನವರೋ ಅಥವಾ ಅಮೆರಿಕದವರೋ ಅತ್ಯಂತ ವೈಜ್ಞಾನಿಕರು ಎನ್ನಬೇಕಾಗುತ್ತದೆ. ಹಾಗಾದರೆ ಭಾರತೀಯರು ಈ ರೀತಿಯ ಮೌಢ್ಯದಲ್ಲಿ ಸಿಲುಕಲು ಕಾರಣವೇನು ಮತ್ತು ಇದರಿಂದ ಹೊರಬರಲು ಇರುವ ಉಪಾಯಗಳೇನು ಎನ್ನುವ ಪ್ರಶ್ನೆಗಳು ನಮ್ಮನ್ನು ನಿರಂತರ ಕಾಡುತ್ತವೆ. ಈ ಚರ್ಚೆಗಳಲ್ಲಿ ಭಾರತೀಯರನ್ನು ಮೌಢ್ಯಕ್ಕೆ ಒಳಪಟ್ಟವರನ್ನಾಗಿ ಮಾಡಿರುವ ಸಂಗತಿ ಯಾವುದು ಎಂದು ಕೇಳಿದರೆ ನೇರವಾದ ಉತ್ತರವಿಲ್ಲ. ನಿರ್ದಿಷ್ಟ ಯಾವ ಸಂಗತಿಯ ಕುರಿತು ಮೌಢ್ಯ, ಅವೈಜ್ಞಾನಿಕ ಎಂದು ಮಾತನಾಡಲಾಗುತ್ತಿದೆ ಎನ್ನುವುದು ಅನೇಕ ಬಾರಿ ಸ್ಪಷ್ಟವಾಗುವುದಿಲ್ಲ. ಸ್ಥೂಲವಾಗಿ ಹೇಳಬೇಕೆಂದರೆ ಮೌಢ್ಯ ಮತ್ತು ಅವೈಜ್ಞಾನಿಕ ಎನ್ನುವುದನ್ನು ಅನೇಕ ಬಾರಿ ನಮ್ಮ ಆಚಾರಗಳಿಗೆ ಅನ್ವಯಿಸಿ ಚರ್ಚಿಸಲಾಗುತ್ತದೆ. ಬ್ರಿಟಿಶರು ಭಾರತಕ್ಕೆ ಬಂದ ಕಾಲದಿಂದ, ಅಂದರೆ ಸುಮಾರು ಕಳೆದ 200 ವರ್ಷಗಳಿಂದ, ಮೌಢ್ಯವನ್ನು ಆಚಾರಕ್ಕೆ ತಳುಕು ಹಾಕುವುದನ್ನು ಕಾಣಬಹುದಾಗಿದೆ. ಈ ಆಚಾರಗಳನ್ನು ಜನರು ಹೆಚ್ಚೆಚ್ಚು ಪಾಲಿಸುವುದರಿಂದ, ಇವು ಅವರಲ್ಲಿ ಅವೈಜ್ಞಾನಿಕತೆಯನ್ನು ಬೆಳೆಸುವುದಲ್ಲದೇ ಪ್ರತಿಗಾಮಿಗಳನ್ನಾಗಿಸುತ್ತದೆ ಎಂದು ವಾದಿಸಲಾಗುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ಜಾತ್ರೆ, ಹಬ್ಬ, ಹರಿದಿನ ಮೊದಲಾದ ಸಂದರ್ಭದಲ್ಲಿ ಮಾಡುವ ಪೂಜೆ, ಪುನಸ್ಕಾರ ಇತ್ಯಾದಿ ಆಚಾರಗಳನ್ನು ನಿರ್ಮೂಲನೆ ಮಾಡಬೇಕು ಎನ್ನುವುದು ಪ್ರಗತಿಶೀಲ ಚಿಂತಕರ ಆಶಯವಾಗಿದೆ.
ಮೂಲಭೂತವಾಗಿ ಈ ಚರ್ಚೆಗಳೆಲ್ಲವೂ ನಮ್ಮ ದಿನನಿತ್ಯದ ಆಚಾರಕ್ಕೆ ಕೇಂದ್ರವಾಗಿರುವ ಮೂರ್ತಿಗಳ ಜೊತೆಗೆ ತಳುಕು ಹಾಕಿಕೊಂಡಿವೆ. ಅನೇಕ ಬಾರಿ ನಮ್ಮಲ್ಲಿ ಮೂರ್ತಿ ಪೂಜೆಯ ಕುರಿತು ಅನೇಕ ಗಹನವಾದ ಚರ್ಚೆಗಳು ನಡೆಯುತ್ತವೆ. ಮೂರ್ತಿ ಪೂಜೆ ಮಾಡುವುದು ಸರಿಯೇ ತಪ್ಪೇ ಎಂದು ನಿರ್ಣಯಿಸುವುದೇ ಬಹುತೇಕ ಚಿಂತಕರ ಜೀವನದ ಗುರಿಯಾಗಿದೆ. ಏಕೆಂದರೆ ಈ ಮೂರ್ತಿಪೂಜೆಯನ್ನೊಮ್ಮೆ ಕೈಬಿಟ್ಟರೆ, ಯಾವುದನ್ನು ಅವೈಜ್ಞಾನಿಕ, ಮೌಢ್ಯ ಎಂದು ಕರೆಯಲಾಗುತ್ತದೆಯೋ ಆ ಆಚಾರಗಳೆಲ್ಲವೂ ಸಹಜವಾಗಿಯೇ ಕಣ್ಮರೆಯಾಗಿಬಿಡುತ್ತವೆ. ನಮ್ಮೆಲ್ಲರ ಮನೆಗಳಲ್ಲಿ ಸಹಜವಾಗಿ ಶಿವ, ವಿಷ್ಣು, ಕೇಶವ, ನರಸಿಂಹ ಇವುಗಳ ಜೊತೆಗೆ ಮಾರಮ್ಮ, ರೇಣುಕಮ್ಮ, ಹುಲಿಗಮ್ಮ ಇತ್ಯಾದಿ ಅನೇಕಾನೇಕ ದೇವತೆಗಳ ಮೂರ್ತಿಗಳನ್ನು ತರುತ್ತೇವೆ. ಪ್ರತಿ ಹೊಸ ದೇವತೆಯು ನಮ್ಮ ಮನೆಗೆ ಪ್ರವೇಶ ಮಾಡಿದಂತೆ, ಅದರ ಜೊತೆ ಒಂದಷ್ಟು ಹೊಸ ಆಚಾರಗಳೂ ನಮ್ಮ ಮನೆಗೆ ಸೇರಿಕೊಳ್ಳುತ್ತವೆ. ಅನೇಕ ಬಾರಿ ಈ ದೇವತೆಗಳ ಜೊತೆಗೆ ಏಸುಕ್ರಿಸ್ತ, ಅಲ್ಲಾಹುವು ಸಹ ಬಂದು ಸೇರಿಕೊಳ್ಳುತ್ತಾರೆ. ಈ ರೀತಿಯಲ್ಲಿ ಭಾರತೀಯ ಸಹಜ ಜನಜೀವನದ ಭಾಗವಾಗಿರುವ ಮೂರ್ತಿ ಪೂಜೆಯ ಕುರಿತು ವಿಜ್ಞಾನಿಗಳಿಂದ ಚಿಂತಕರವರೆಗೂ ಅನೇಕರಿಗೆ ಸಮಸ್ಯೆ ಇದೆ. ಅವರಿಗೆ ಈ ರೀತಿ ಸಮಸ್ಯೆ ಇರಲು ಕಾರಣವೇನು ಹಾಗೂ ಮೂರ್ತಿಪೂಜೆಯನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಲು ಇರುವ ಕಾರಣ ತಿಳಿಯದಾಗುತ್ತದೆ.
ಭಾರತದಲ್ಲಿನ ಮೂರ್ತಿಪೂಜೆಯನ್ನು ಇಂಗ್ಲಿಷ್ನಲ್ಲಿ ಐಡಲ್ ವರ್ಷಿಪ್ (Idol worship) ಮತ್ತು ಅನೇಕ ಬಾರಿ ಐಡೊಲಾಟ್ರಿ (Idolatry) ಎಂದು ಕರೆಯಲಾಗುತ್ತದೆ. 19ನೆಯ ಶತಮಾನದಲ್ಲಿ ರಾಜಾ ರಾಮ್ ಮೋಹನ್ ರಾಯರು ಏಸುಕ್ರಿಸ್ತರ ಜೀವನದಿಂದ ಪ್ರೇರಿತರಾಗಿ ಮೂರ್ತಿಪೂಜೆಯನ್ನು ನಿರಾಕರಿಸಬೇಕೆಂದು ಭಾರತದಾದ್ಯಂತ ವಾದಿಸತೊಡಗಿದರು. ಮೂರ್ತಿ ಪೂಜೆ ಎನ್ನುವುದು ಬೈಬಲ್ಲಿನ ದೃಷ್ಟಿಯಲ್ಲಿ ತುಚ್ಛವಾದುದೆಂದು, ಭಾರತೀಯರೆಲ್ಲರೂ ಮೂರ್ತಿಪೂಜೆಯನ್ನು ತಿರಸ್ಕರಿಸಬೇಕೆಂದು ಅವರು ಕರೆಕೊಡುತ್ತಿದ್ದರು. ಆದರೆ ಇಂಗ್ಲೆಂಡಿನಲ್ಲಿ ಅನೇಕ ಚರ್ಚ್ ಗಳಿಗೆ ಭೇಟಿ ನೀಡಿದಾಗ ಅಲ್ಲಿನ ಚರ್ಚ್ ಗಳಲ್ಲಿ ಜೀಸಸ್, ಮೇರಿ ಮತ್ತು ಶಿಲುಬೆಗಳು ಅವರ ವರ್ಷಿಪ್ನ (Worship) ಭಾಗವಾಗಿರುವುದು ರಾಜಾ ರಾಮ್ ಮೋಹನರಾಯರಿಗೆ ಕಂಡುಬಂದಿತು. ಹಾಗಿದ್ದರೂ ಅತ್ಯಂತ ಪ್ರಾಚೀನವಾದ ಕ್ರಿಶ್ಚಿಯನ್ನರ ಈ ವರ್ಷಿಪ್ನ ಕ್ರಮವನ್ನೇ ರಾಜಾ ರಾಮ್ ಮೋಹನರಾಯರು ಕ್ರಿಶ್ಚಿಯನ್ನರ ಪ್ರಕಾರವಲ್ಲವೆಂದು ವಾದಿಸಿದರು. ಇವರೊಬ್ಬರು ಪೇಗನ್ನರಾದ ಕಾರಣ ವರ್ಷಿಪ್ನ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಇಲ್ಲವೆಂದು ಅಲ್ಲಿನ ಕ್ರಿಶ್ಚಿಯನ್ ತತ್ತ್ವಜ್ಞಾನಿಗಳು ಅವರನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈ ಘಟನೆಯಿಂದ ರಾಜಾ ರಾಮ್ ಮೋಹನರಾಯರು ಮತ್ತು ಕ್ರಿಶ್ಚಿಯನ್ನರು ಮೂರ್ತಿಯನ್ನು ನೋಡಿದ ಕ್ರಮದ ಬಗ್ಗೆ ಅನೇಕ ವ್ಯತ್ಯಾಸಗಳಿರುವುದು ನಮ್ಮ ಗಮನಕ್ಕೆ ಬರುತ್ತದೆ. ಭಾರತದಲ್ಲಿ ಮೂರ್ತಿಪೂಜೆಯೆಂಬುದು ಹಿಂದೂಧರ್ಮದ ಭಾಗವಾಗಿದ್ದು, ಅದು ಮೌಢ್ಯ ಮತ್ತು ಅವೈಜ್ಞಾನಿಕ ಎಂದು ಮಾತನಾಡಲು ಪ್ರಾರಂಭಿಸಿದವರು ಕ್ರಿಶ್ಚಿಯನ್ ಪಾದ್ರಿಗಳೇ ಆಗಿದ್ದರು. ರಾಜಾ ರಾಮ್ ಮೋಹನರಾಯರ ಮೂರ್ತಿಪೂಜೆಯ ಬಹುತೇಕ ಕಟುವಿಮರ್ಶೆಗಳೂ ಈ ಕ್ರಿಶ್ಚಿಯನ್ ಮಿಶನರಿಯ ಕಥೆಗಳೇ ಆಗಿದ್ದವು. ಆದರೆ ಕ್ರಿಶ್ಚಿಯನ್ನರೇ ಸ್ವತಃ ಮೂರ್ತಿಗಳನ್ನು ಮತ್ತು ಸಂಕೇತಗಳನ್ನು ವರ್ಷಿಪ್ನಲ್ಲಿ ಬಳಸುವುದರ ಕುರಿತು ರಾಜಾರಾಮರಿಗೆ ಕೊನೆಯವರೆಗೂ ತಿಳಿವಳಿಕೆ ಬಂದಂತೆ ಕಾಣುವುದಿಲ್ಲ. ರಾಜಾರಾಮರ ರೀತಿಯಲ್ಲೇ, ಆರ್ಯ ಸಮಾಜದವರೂ ಕೂಡ ನಿರ್ಗುಣ ಬ್ರಹ್ಮನ ಉಪಾಸನೆಯ ಕಾರಣಕ್ಕಾಗಿ ಮೂರ್ತಿಪೂಜೆಯನ್ನು ತಿರಸ್ಕರಿಸಬೇಕು ಎಂದು ವಾದಿಸುತ್ತಿದ್ದರು. ಅಂಬೇಡ್ಕರರು ಸಹ ಅನೇಕ ಬಾರಿ ‘I am no worshipper of Idols, I believe in breaking them’ ಎಂದು ಹೇಳುತ್ತಿದ್ದರು. ಆದರೆ ಈಗ ಅವರ ಅನುಯಾಯಿಗಳೇ ಅವರನ್ನು ಬೋಧಿಸತ್ತ್ವ ಅಂಬೇಡ್ಕರ್ ಎಂದು ಮೂರ್ತಿಯನ್ನಾಗಿಸಿ ದೇಶದಾದ್ಯಂತ ಪೂಜಿಸುತ್ತಿರುವುದು ವಿಪರ್ಯಾಸವಾಗಿದೆ. ಮೂರ್ತಿಪೂಜೆಯ ಕುರಿತಾದ ಇವರೆಲ್ಲರ ಕಟು ವಿಮರ್ಶೆಗಳನ್ನು ಗಮನಿಸಿದಾಗ, ಮೂರ್ತಿ ಪೂಜೆ ಎಂಬುದು ಬಹುಷಃ ಘನಘೋರ ಅಪರಾಧವೆಂದೂ, ಆ ಕಾರಣಕ್ಕೆ ಹಿಂದೂ ಧರ್ಮದಿಂದ ಇದನ್ನು ಕೈಬಿಡುವುದು ಅಗತ್ಯ ಎಂದು ಈ ಅನೇಕರು ಭಾವಿಸಿದಂತೆ ತೋರುತ್ತದೆ.
ಈ ಹಿನ್ನೆಲೆಯಲ್ಲಿ ಮೂರ್ತಿಪೂಜೆಯ ಕುರಿತು ಈಗಾಗಲೇ ಸಮಸ್ಯೆಗಳನ್ನು ಹೊಂದಿದ್ದ ವಿವೇಕಾನಂದರಿಗೊಮ್ಮೆ ಮೂರ್ತಿಪೂಜೆಯ ವಿರೋಧದ ಬಗ್ಗೆ ಅನುಮಾನ ಬರಲು ಆರಂಭವಾಯಿತು. ಅವರೇ ಹೇಳುವಂತೆ –
“It has become a trite saying that idolatry is wrong, and every man swallows it at the present time without questioning. I once thought so, and to pay the penalty of that I had to learn my lesson sitting at the feet of a man who realised everything through idols…If such Ramakrishna Paramahamsas are produced by idol-worship, what will you have — the reformer’s creed or any number of idols? … Take a thousand idols more if you can produce Ramakrishna Paramahamsas through idol worship, and may God speed you! Produce such noble natures by any means you can. Yet idolatry is condemned! Why? Nobody knows”.
ಮೂರ್ತಿ ಪೂಜೆಯು ಯಾಕೆ ಕೆಟ್ಟದ್ದು ಮತ್ತು ಅದರಿಂದಾಗುವ ಅನಾಹುತವೇನು ಎನ್ನುವುದು ಸ್ವಾಮಿ ವಿವೇಕಾನಂದರಿಗೂ ಕೂಡ ಅರ್ಥವಾಗದ ಕಗ್ಗಂಟಾಗಿತ್ತು. ಅವರೇ ಸ್ವತಃ ಪ್ರಾರಂಭದಲ್ಲಿ ಮೂರ್ತಿಪೂಜೆ ತಪ್ಪೆಂದು ನಂಬಿದ್ದರು. ಆದರೆ ದೇಶದಾದ್ಯಂತ ರಾಮಕೃಷ್ಣ ಪರಮಹಂಸರೂ ಸೇರಿದಂತೆ ನಮ್ಮಲ್ಲಿ ಕಂಡುಬರುವ ಗುರುಗಳೆಲ್ಲರೂ ಮೂರ್ತಿಪೂಜೆಯಲ್ಲಿ ತೊಡಗಿರುತ್ತಿದ್ದರು. ಒಬ್ಬರಿಗೆ ಆಂಜನೇಯ, ಇನ್ನೊಬ್ಬರಿಗೆ ದತ್ತಾತ್ರೇಯ, ಮತ್ತೊಬ್ಬರಿಗೆ ಅಮ್ಮ ಇತ್ಯಾದಿ ಹಲವು ಪರಂಪರೆಗಳಲ್ಲಿ ಮೂರ್ತಿಗಳನ್ನು ಪೂಜೆ ಮಾಡುವುದನ್ನು ‘ಅನುಷ್ಠಾನ’ ಎಂದೇ ಕರೆಯುತ್ತೇವೆ. ಹೀಗೆ ಮೂರ್ತಿ ಪೂಜೆಯ ಅನುಷ್ಠಾನವು ಆನಂದದ ಮತ್ತು ಜ್ಞಾನದ ಮಾರ್ಗವಾಗಿತ್ತು. ಹಾಗಿರುವಾಗ ಅದನ್ನು ಐಡೊಲಾಟ್ರಿಯ ಹೆಸರಿನಲ್ಲಿ ತಿರಸ್ಕರಿಸಲು ಕಾರಣವೇನು? 19ನೆಯ ಶತಮಾನದಲ್ಲಿ ಮೂರ್ತಿಪೂಜೆಯ ಕುರಿತಾದ ಹೊಸ ಚರ್ಚೆಗಳು ಏಕೆ ಬಂದವು ಎನ್ನುವುದನ್ನು ಪುನಃ ಅವಲೋಕಿಸಬೇಕಾಗುತ್ತದೆ.
ಈ ಚರ್ಚೆಯನ್ನು ಗ್ರಹಿಸಬೇಕೆಂದರೆ ಈಗಾಗಲೇ ನಾವು ಚರ್ಚಿಸುತ್ತಿರುವ ಹಾವು-ಹಗ್ಗದ ಉದಾಹರಣೆಗೆ ಪುನಃ ಹೋಗಬೇಕಾಗುತ್ತದೆ. ಪ್ರಾರಂಭದಲ್ಲಿ 10ನೆಯ ಶತಮಾನದ ನಂತರ ಭಾರತದಲ್ಲಿ ಇಸ್ಲಾಮಿನ ಆಕ್ರಮಣ ಮತ್ತು ರಾಜ್ಯಾಡಳಿತ ಪ್ರಾರಂಭವಾದಾಗ ಇಸ್ಲಾಮಿನ ರಿಲಿಜನ್ನಿನ ಪರಿಭಾಷೆಯ ಒಳಗೆ ಭಾರತೀಯರು ಮೂರ್ತಿಪೂಜಕರಾಗಿ ಕಂಡುಬಂದರು. ಇಸ್ಲಾಮಿನ ರಿಲಿಜನ್ನಿನ ತಳಹದಿಯಲ್ಲಿ ಮೂರ್ತಿಗಳನ್ನು ಮತ್ತು ಸಂಕೇತಗಳನ್ನು ಪೂಜಿಸುವುದು ಅಲ್ಲಾಹುವಿನ ಇಚ್ಚೆಗೆ ವಿರುದ್ಧವಾದುದು. ಆ ಕಾರಣಕ್ಕಾಗಿ ಇಸ್ಲಾಮಿನ ಪ್ರಕಾರ ಮೂರ್ತಿ ಪೂಜೆ ‘ಶಿರ್ಕ್’ ಎಂದು ಕರೆಯಲ್ಪಡುತ್ತದೆ. ಅದಕ್ಕಾಗಿ ಇಸ್ಲಾಮಿನ ಆಕ್ರಮಣಕಾರರು ಭಾರತದಾದ್ಯಂತ ದೇವಾಲಯಗಳ ಮೂರ್ತಿ ಭಂಜನೆಯಲ್ಲಿ ತೊಡಗಿದ್ದು ನಮಗೆಲ್ಲರಿಗೂ ತಿಳಿದಿದೆ. ಇಸ್ಲಾಮಿನ ನಂತರ ಭಾರತಕ್ಕೆ ಪ್ರವೇಶ ಮಾಡಿದ ಯುರೋಪಿಯನ್ನರು ಭಾರತದಾದ್ಯಂತ ಪ್ರಚಲಿತದಲ್ಲಿ ಇದ್ದ ಅನೇಕಾನೇಕ ರೀತಿಯ ವಿಗ್ರಹಗಳ ಆರಾಧನೆಯನ್ನು ಕಂಡು ಅವಾಕ್ಕಾಗಿದ್ದರು. ಇದು ಅವರಿಗೆ ಮೌಢ್ಯದ ಮಂದಿರವಾಗಿ ಕಾಣತೊಡಗಿತು. ಏಕೆಂದರೆ, ಕ್ರಿಶ್ಚಿಯಾನಿಟಿಯ ಪ್ರಕಾರ ಈ ಜಗತ್ತಿಗೆಲ್ಲ ಒಬ್ಬನೇ ಗಾಡ್ (God) ಮತ್ತು ಇಡೀ ಜಗತ್ತು ಅವನ ಅಣತಿಯಂತೆ ನಡೆಯುತ್ತದೆ. ಅದಲ್ಲದೇ, ಕ್ರಿಶ್ಚಿಯನ್ನರಲ್ಲದ ಭಾರತೀಯ ಪೇಗನ್ನರು ಗಾಡ್ನ ದಾರಿಯಿಂದ ತಪ್ಪಿ, ಸೈತಾನನ (Devil) ಸೆಳೆತಕ್ಕೆ ಒಳಗಾಗಿ, ಭ್ರಷ್ಟವಾದ ಸುಳ್ಳು ರಿಲಿಜನ್ ಹೊಂದಿದ್ದಾರೆ. ಹಾಗಾಗಿ ಭಾರತದಲ್ಲಿ ಸೈತಾನನು ಅಮಾಯಕ ಪೇಗನ್ನರಿಗೆ ಅನೇಕ ಕಲ್ಲು, ಮಣ್ಣು, ಮರ, ಗಿಡ, ಪ್ರಾಣಿ ಇತ್ಯಾದಿ ರೂಪದಲ್ಲಿ ವಿಗ್ರಹಗಳನ್ನು ಪೂಜಿಸುವಂತೆ ಮಾಡಿ ಅವರನ್ನು ನಿಜವಾದ ರಿಲಿಜನ್ನಿನಿಂದ ದೂರಮಾಡುತ್ತಿದ್ದಾನೆ. ಹಾಗಾಗಿಯೇ ತಮ್ಮ ವಿಮೋಚನೆಯ ಸಲುವಾಗಿ, ಈ ಸುಳ್ಳು ರಿಲಿಜನ್ನಿನಿಂದ ಬಿಡುಗಡೆ ಹೊಂದಿ ಗಾಡ್ನ ಕಡೆಗೆ ಬರುವುದೊಂದೇ ಪೇಗನ್ನರಿಗಿರುವ ಪರಿಹಾರವೆಂದು ಕ್ರಿಶ್ಚಿಯನ್ನರು ಪರಿಭಾವಿಸುತ್ತಾರೆ. ಆದ್ದರಿಂದ ಕ್ರಿಶ್ಚಿಯನ್ನರ ಪ್ರಕಾರ ಐಡೊಲಾಟ್ರಿ ಎಂದರೆ ಅದು ಕೇವಲ ಮೂರ್ತಿಯ ಪೂಜೆಯಾಗಿರಲಿಲ್ಲ, ಬದಲಿಗೆ ಇಡೀ ಪೇಗನ್ನರ ಜೀವನವೇ ಐಡೊಲಾಟ್ರಿಯಾಗಿತ್ತು. ಅಂದರೆ ಪೇಗನ್ನರ ಜೀವನವು ಸುಳ್ಳಿನಿಂದ, ಅವೈಜ್ಞಾನಿಕತೆಯಿಂದ ಮತ್ತು ಮೌಢ್ಯದಿಂದ ಕೂಡಿದ್ದು, ಅವರ ಬದುಕಿನ ಕ್ರಮವೇ ತಿರಸ್ಕಾರಾರ್ಹವಾಗಿತ್ತು. ಕ್ರಿಶ್ಚಿಯನ್ನರ ಪ್ರಕಾರ ಬೈಬಲ್ಲಿನಲ್ಲಿ ಹೇಳಿರುವಂತೆ ಗಾಡ್ನನ್ನು ಆರಾಧಿಸುವುದು ಮಾತ್ರವೇ ನಿಜವಾದ ವರ್ಷಿಪ್ ಆಗಿದೆ. ಇದನ್ನು ಹೊರತುಪಡಿಸಿ ಹಿಂದೂಧರ್ಮದ ನಡೆವಳಿಕೆ ಮತ್ತು ಅಸ್ತಿತ್ವವು ಅವರಿಗೆ ಐಡೊಲಾಟ್ರಿಯಾಗಿ ಕಾಣಿಸಿತು.
ಆದರೆ ಭಾರತದ ಚಿಂತಕರಿಗೆ ಕ್ರಿಶ್ಚಿಯಾನಿಟಿಯ ಬಗ್ಗೆ ಇರುವ ತಿಳಿವಳಿಕೆಯ ಕೊರತೆಯಿಂದಾಗಿ, ಐಡೊಲಾಟ್ರಿ ಎಂದರೆ ಕೇವಲ ಮೂರ್ತಿಪೂಜೆಯಾಗಿ ಕಾಣಿಸತೊಡಗಿತು. ಆ ಕಾರಣಕ್ಕಾಗಿ ಕ್ರಿಸ್ತನ ವಿಗ್ರಹ, ಶಿಲುಬೆ ಇತ್ಯಾದಿಗಳು ಏಕೆ ಚರ್ಚಿನಲ್ಲಿ ಐಡೊಲಾಟ್ರಿ ಅಥವಾ ಐಡಲ್ ವರ್ಷಿಪ್ ಆಗುವುದಿಲ್ಲ ಎನ್ನುವುದರ ಕುರಿತು ರಾಜಾ ರಾಮ್ ಮೋಹನರಾಯರಿಗೆ ತಿಳಿವಳಿಕೆ ಬರಲೇ ಇಲ್ಲ. ವಿವೇಕಾನಂದರು ಸರಿಯಾಗಿಯೇ ಗುರುತಿಸಿರುವಂತೆ ಇಂತಹ ಮೂರ್ತಿಗಳ ಪೂಜೆಯಿಂದ ರಾಮಕೃಷ್ಣ ಪರಮಹಂಸರಂತಹ ಗುರುಗಳು ಸೃಷ್ಟಿಯಾಗುವುದಾದರೆ, ಸಾವಿರಾರು ಮೂರ್ತಿಗಳ ಪೂಜೆಯನ್ನು ಮಾಡಿದರೆ ತಪ್ಪೇನು ಎನ್ನುವುದು ಭಾರತೀಯರಿಗೆ ಅರ್ಥವಾಗುವ ತರ್ಕವಾಗಿ ಕಾಣಿಸುತ್ತದೆ. ಅಂದರೆ ಇಲ್ಲಿ ಕ್ರಿಶ್ಚಿಯನ್ ಜಗತ್ತು ಬೈಬಲ್ಲಿನ ಹೊರಗಿರುವ ಎಲ್ಲ ಬದುಕಿನ ಕ್ರಮವನ್ನು ಐಡೊಲಾಟ್ರಿ ಎಂದು ಗುರುತಿಸಿ ಭಾರತದವರನ್ನು ಐಡೊಲಾಟ್ರಸ್ ಎಂದು ಪರಿಗಣಿಸಿದ್ದರು. ಅಂದರೆ ಕ್ರಿಶ್ಚಿಯನ್ ರಿಲಿಜನ್ನಿನ ಅನುಭವದ ಹಿನ್ನೆಲೆಯಲ್ಲಿ ಅವರಿಗೆ ಭಾರತವೆಂಬ ಹಗ್ಗವೊಂದು, ಯುರೋಪಿನ ಅನುಭವದ ಐಡೊಲಾಟ್ರಿಯ ಸರ್ಪವಾಗಿ ಕಾಣಿಸಿತು. ತದನಂತರ, ಭಾರತದ ಸಮಾಜ ಸುಧಾರಕರೆಲ್ಲರೂ ವಿವೇಕಾನಂದರು ಗುರುತಿಸಿದಂತೆ ತಮಗೆ ಅರ್ಥವಾಗದಿದ್ದರೂ ಮೂರ್ತಿಪೂಜೆಯನ್ನು ಖಂಡಿಸಲು ತಮ್ಮ ಜೀವನವನ್ನು ಮುಡುಪಾಗಿ ಇಡತೊಡಗಿದರು. “ಅಗ್ನೌ ಕ್ರಿಯಾವತಾಂ ದೇವೋ ದಿವಿ ದೇವೋ ಮನೀಷಿಣಾಮ್। ಪ್ರತಿಮಾಸ್ವಲ್ಪಬುದ್ಧೀನಾಂ ಯೋಗಿನಾಂ ಹೃದಯೇ ಹರಿಃ॥” ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಿದಂತೆ, ಯಾರಿಗೆ ಜಗತ್ತಿನಲ್ಲಿ ಪರಮಾರ್ಥದ ತಿಳಿವಳಿಕೆಯ ಕೊರತೆ ಇರುತ್ತದೆಯೋ ಅವರಿಗೆ ಮೂರ್ತಿಪೂಜೆ ಮೋಕ್ಷಾರ್ಥದ ಪ್ರಮುಖ ದಾರಿಯಾಗುತ್ತದೆ. ಅಷ್ಟೇ ಅಲ್ಲ, ಪ್ರಾರಂಭಿಕ ಹಂತದಲ್ಲಿ ಎಲ್ಲ ಸಾಧಕರಿಗೂ ಮೂರ್ತಿಪೂಜೆ ಎನ್ನುವುದು ಪ್ರಮುಖ ಸಾಧನ. ಹಾಗಾಗಿ ಮೂರ್ತಿಪೂಜೆಯ ನಂತರ ಏನು ಮಾಡಬೇಕು, ಹೇಗೆ ವ್ಯವಹರಿಸಬೇಕು ಎಂದು ತಮ್ಮದೇ ಆದ ಕಲ್ಪನೆಯನ್ನು ಇಟ್ಟುಕೊಂಡಿರುವ ಭಾರತೀಯರ ಈ ಶ್ರಿಮಂತದ ಜಗತ್ತೊಂದನ್ನು ಮೌಢ್ಯಕ್ಕೆ ತಂದು ಇರಿಸುವುದು ಹಗ್ಗವನ್ನು ಹಾವೆಂದು ಭಾವಿಸಿದಂತಲ್ಲದೇ ಮತ್ತೇನು ಎಂದು ಕೇಳಿಕೊಳ್ಳುವ ಅನಿವಾರ್ಯತೆ ಇಂದಿದೆ.
