ಅಂಕಣ – ಜ್ಞಾನಭಂಡಾರ
- ಪ್ರೊ. ಕೆ.ಆರ್. ರವಿಕುಮಾರ್, ನಿವೃತ್ತ ಪ್ರಾಂಶುಪಾಲ
ಶ್ರೀ ಆದಿಶಂಕರಾಚಾರ್ಯರು ಕ್ರಿ.ಶ. ಎಂಟನೆಯ ಶತಮಾನದ ಭಾರತೀಯ ದಾರ್ಶನಿಕರು ಹಾಗೂ ದೇವತಾಶಾಸ್ತ್ರಜ್ಞರು. ಕೇವಲ 32 ವರ್ಷಗಳು ಬದುಕಿ ಅಗಾಧ ಸಾಧನೆಗಳನ್ನು ಮಾಡಿದರು. ಬೌದ್ಧಧರ್ಮ ಪ್ರಚಾರವು ಹೆಚ್ಚಾಗುತ್ತಿದ್ದ ಆ ಕಾಲದಲ್ಲಿ ಭಿನ್ನವಾಗಿದ್ದ ಆಧ್ಯಾತ್ಮಿಕ ಪರಿಸರವನ್ನು ಒಂದುಗೂಡಿಸಿ ಸನಾತನ ಧರ್ಮಕ್ಕೆ ಮರುಜೀವ ನೀಡಿದರು. ಅದ್ವೈತ ವೇದಾಂತ ತತ್ತ್ವವನ್ನು ಪ್ರತಿಪಾದಿಸಿದರು. ಬ್ರಹ್ಮವೇ ಸತ್ಯ, ಜಗತ್ತು ಮಿಥ್ಯ, ಜೀವ ಹಾಗೂ ಬ್ರಹ್ಮ ಒಂದೇ ಎಂದು ಸಾರಿದರು. ಭಾರತದ ನಾಲ್ಕು ದಿಕ್ಕುಗಳಲ್ಲಿ ಜ್ಞಾನ ಪ್ರಚಾರಕ್ಕಾಗಿ ಪೀಠಗಳನ್ನು ಸ್ಥಾಪಿಸಿದರು. ಸೌಂದರ್ಯಲಹರಿಯೂ ಸೇರಿದಂತೆ ಅಪಾರ ಸ್ತೋತ್ರ ಸಾಹಿತ್ಯವನ್ನು ರಚಿಸಿದರು.
ಶಂಕರಾಚಾರ್ಯರ ಈ ಎಲ್ಲ ಸಾಧನೆಗಳನ್ನು ಕುರಿತು ಮಾಧವಾಚಾರ್ಯ ವಿದ್ಯಾರಣ್ಯರು ಶಂಕರದಿಗ್ವಿಜಯ ಎಂಬ ಮಹಾಕಾವ್ಯವನ್ನು ಬರೆದಿದ್ದಾರೆ. ಶಂಕರ ಜೀವನ ಚರಿತ್ರೆಯು ಇದರಲ್ಲಿ ಚಿತ್ರಿತವಾಗಿದೆ. ಇದೇ ತರಹ ಶಂಕರರ ಜೀವನಾಧಾರಿತ ಹಲವು ಕಥೆ – ಕಾವ್ಯ – ಕೃತಿ – ಕಾದಂಬರಿಗಳು ಕನ್ನಡದಲ್ಲೂ ಪ್ರಕಟವಾಗಿವೆ.
ಅವುಗಳಲ್ಲಿ ‘ಪುನರುತ್ಥಾನ’ ಎಂಬ ಆಚಾರ್ಯ ಶಂಕರರ ಜೀವನಾಧರಿತ ಕಾದಂಬರಿಯೂ ಒಂದು. ಮರಾಠಿಯಲ್ಲಿ ಡಾ. ಸಚ್ಚಿದಾನಂದ ಶೆವಡೆಯವರು ಬರೆದಿದ್ದಾರೆ. ಅದನ್ನು ಕನ್ನಡಕ್ಕೆ ಅನುವಾದಿಸಿ ಪುನರುತ್ಥಾನ ಎಂಬ ಹೆಸರಿನಲ್ಲಿ ಡಾ. ಸುಮಾ ದ್ವಾರಕಾನಾಥ್ ಕೃತಿ ರಚಿಸಿದ್ದಾರೆ. ಆದಿಶಂಕರರು ಕೇವಲ ಮೂವತ್ತೆರಡು ವರ್ಷಗಳಲ್ಲಿ ಸಾಧಿಸಿದ ಅಪ್ರತಿಮ ಸಾಧನೆ, ಭಾರತದ ಪರ್ಯಟನೆ ಮತ್ತು ಸನಾತನ ಧರ್ಮದ ಪುನರುತ್ಥಾನದ ಕಥೆಯನ್ನು ರೋಚಕವಾಗಿ ಕಾದಂಬರಿ ರೂಪದಲ್ಲಿ ಈ ಕೃತಿ ಕಟ್ಟಿಕೊಡುತ್ತದೆ. ಶಂಕರರ ಜೀವನದ ಇತಿಹಾಸ, ಅವರ ದಿಗ್ವಿಜಯ ಮತ್ತು ಮಠಗಳ ಸ್ಥಾಪನೆಯನ್ನು ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಸರಳವಾಗಿ ಉಲ್ಲೇಖಿಸಿದ್ದಾರೆ. ಸುಮಾರು ಇಪ್ಪತ್ತು ಭಾಗ (ಅಧ್ಯಾಯ)ಗಳಲ್ಲಿ ಶ್ರೀ ಶಂಕರಾಚಾರ್ಯರ ಚರಿತ್ರೆಯ ವಿವಿಧ ಅಂಶಗಳನ್ನು ಪ್ರತಿಪಾದಿಸಿದ್ದಾರೆ.
ವೃಷಾದ್ರಿನಾಥನು ವರನೀಡುವ ಶಂಕರರ ಜನನಕ್ಕೆ ಕಾರಣವಾದ ಪ್ರಸಂಗ, ಶಂಕರರ ಜನನದ ಮಹತ್ವ ವಿವರಿಸಿದ್ದಾರೆ. ಬಾಲಶಂಕರನ ವೇದಾಭ್ಯಾಸ, ಭಿಕ್ಷಾಟನೆ, ‘ಕನಕಾಧಾರಾ’ ಸ್ತೋತ್ರ ರಚನಾ ಪ್ರಸಂಗ, ಸಂನ್ಯಾಸ ಸ್ವೀಕಾರ, ಶಂಕರಾಚಾರ್ಯರು – ಮಂಡನಮಿಶ್ರರ ಸಂವಾದ, ಶಿಷ್ಯ ಸಂಪಾದನೆ, ನಾಲ್ಕು ಪೀಠಗಳಿಗೆ ಶಿಷ್ಯರ ನಿಯೋಜನೆ, ಧರ್ಮ ಪ್ರಚಾರ – ಹೀಗೆ ಹತ್ತು ಹಲವು ಪ್ರಸಂಗಗಳನ್ನು ಲೇಖಕರು ಸಾರವತ್ತಾಗಿ ನಿರೂಪಿಸಿದ್ದಾರೆ. ಜೀವನದ ಪ್ರಮುಖ ಘಟನೆಗಳನ್ನು ಸರಳ ಕನ್ನಡ ಭಾಷೆಯಲ್ಲಿ ಚಿತ್ರಿಸಿದ್ದಾರೆ.
ಭಾರತದ ಇತಿಹಾಸದಲ್ಲಿ ಆಚಾರ್ಯ ಶಂಕರರ ಸ್ಥಾನ ಅತ್ಯಂತ ವಿಶಿಷ್ಟವಾದದ್ದು. ಸನಾತನಧರ್ಮದ ಪುನರುಜ್ಜೀವನಕ್ಕೆ ಕಾರಣರಾಗಿ, ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ಭಾರತೀಯರಲ್ಲಿ ‘ಸಾಂಸ್ಕೃತಿಕ ಭಾರತ’ದ ಕಲ್ಪನೆಯನ್ನು ಗಟ್ಟಿಗೊಳಿಸಿದವರು ಶಂಕರಾಚಾರ್ಯರು. ಭಾರತಕ್ಕೆ ಅವರು ನೀಡಿದ ಕೊಡುಗೆ ಅನನ್ಯ. ಕಡಿಮೆ ಜೀವಿತಾವಧಿಯಲ್ಲಿ ಅನೂಹ್ಯವೆನಿಸುವಂಥ ಮಹತ್ಕಾರ್ಯವನ್ನು ಸಾಧಿಸಿದ ಆಚಾರ್ಯ ಶಂಕರರ ಜೀವನವನ್ನು ಆಧರಿಸಿದ ಕಾದಂಬರಿ ‘ಪುನರುತ್ಥಾನ’ವು ಓದುಗರಿಗೆ ಶಂಕರಾಚಾರ್ಯರ ಬದುಕಿನ ಅನನ್ಯ ಪುಟಗಳನ್ನು ತೆರೆದಿಡುತ್ತದೆ. ಆಚಾರ್ಯ ಶಂಕರರದ್ದು ನಮ್ಮ ಕಲ್ಪನೆಗೂ ಎಟುಕದ ಜೀವನ-ಸಾಧನೆ ಎಂಬುದು ಕೃತಿಯನ್ನು ಓದಿಮುಗಿಸಿದಾಗ ಅರಿವಾಗುತ್ತದೆ. ಎಲ್ಲಾ ಓದುಗರಿಗೂ ಈ ಕೃತಿಯು ಉಪಾದೇಯವಾಗಿದೆ.
ಕೃ: ಪುನರುತ್ಥಾನ ಮೂಲ ಲೇ: ಸಚ್ಚಿದಾನಂದ ಶೆವಡೆ ಕನ್ನಡಾನುವಾದ: ಸುಮಾ ದ್ವಾರಕಾನಾಥ್ ಪ್ರ: ರಾಷ್ಟ್ರೋತ್ಥಾನ
ಪು: 259 ಬೆ: 300 ರೂ. ಸಂ: 91 080-26612730
