ಅಂಕಣ – ದೃಶ್ಯ
- ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ಹಿರಿಯ ಕಲಾವಿದ ಪಿ.ಆರ್. ದರೋಜ್
- ಕರ್ನಾಟಕ ಚಿತ್ರಕಲಾ ಪರಿಷತ್ನಿಂದ ಪ್ರೊ. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿ
- ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
ಭಾರತೀಯ ಸೆರಮಿಕ್ ಕಲೆ ಇಂದು ನಿನ್ನೆಯದಲ್ಲ. ಸಿಂಧೂ ನಾಗರಿಕತೆಯ ಟೆರಾಕೋಟಾ, ಮಣ್ಣಿನ ಪಾತ್ರೆಗಳ ಕೌಶಲ್ಯ ಹೊಂದಿದ್ದ ಕಾಲದಿಂದ ಸಮಕಾಲೀನ ಸಂದರ್ಭದ ಕಲಾಕೃತಿಗಳವರೆಗಿನ ಇತಿಹಾಸ ಹೊಂದಿದೆ. ಸೆರಾಮಿಕ್ ಕಲಾವಿದರು ಇಂದು ಬಹಳ ಗಂಭೀರವಾದ ನೆಲೆಗೆ ಈ ಮಾಧ್ಯಮವನ್ನು ಕೊಂಡೊಯ್ದಿದ್ದಾರೆ. ಈ ನಿಟ್ಟಿನಲ್ಲಿ ಶ್ರಮಿಸಿದವರು ಒಬ್ಬಿಬ್ಬರಲ್ಲ. ಅನೇಕ ಭಾರತೀಯ ಕಲಾವಿದರು ಈ ಮಾಧ್ಯಮದ ಮೂಲಕ ಕಲಾಕೃತಿಗಳನ್ನು ರಚಿಸಿ, ದೇಶವಷ್ಟೇ ಅಲ್ಲ ವಿದೇಶಿ ನೆಲದಲ್ಲಿಯೂ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಜತೆ ಜೊತೆಗೆ ಭಾರತೀಯ ಸೆರಾಮಿಕ್ ಕಲೆಗೆ ಕೀರ್ತಿ ತಂದುಕೊಟ್ಟಿರುವುದನ್ನು ಯಾವ ಕಾಲಕ್ಕೂ ಸ್ಮರಿಸುವಂತದ್ದು.
ಬಹಳ ಆಸಕ್ತಿದಾಯಕ ಕಥೆಯೊಂದು ಈ ಸೆರಾಮಿಕ್ ಪದದ ಹಿಂದೆ ಅಡಗಿದೆ. ಗ್ರೀಕಿನ ‘ಕೆರಾಮಿಕೋಸ್’ ಪದದಿಂದ ಸೆರಾಮಿಕ್ ಎಂಬ ಪದದ ಉದಯವಾಗಿದೆ. ಕೆರಾಮಿಕೋಸ್ ಎಂದರೆ ಕುಂಬಾರಿಕೆ ಎಂದರ್ಥ. ಕುಂಬಾರಿಕೆಗೆ ಉಪಯೋಗಿಸುವ ಜೇಡಿಮಣ್ಣು ಅಂದರೆ ಕೆರಾಮೋಸ್ ಇದರ ಮೂಲ ಎಂದು ಇತಿಹಾಸ ಹೇಳುತ್ತದೆ. ವಿಶ್ವದ ಯಾವುದೇ ದೇಶದ ಸಂಸ್ಕೃತಿಯ ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದಾಗ ಎಲ್ಲಾದರೂ ಒಂದು ಕಡೆ ಸೆರಾಮಿಕ್ ಕಲೆಯ ಉಲ್ಲೇಖ ಆಗುವುದುಂಟು. ಕಾರಣ ಇಷ್ಟೆ, ನಾಗರಿಕತೆಯ ಸಂದರ್ಭದಿಂದಲೂ ಜೇಡಿಮಣ್ಣಿಗೂ ಮತ್ತು ಅಂದಿನ ಸಂಸ್ಕೃತಿಗೂ ಒಂದು ನಂಟು ಇರುವುದನ್ನು ಕಾಣುತ್ತೇವೆ. ಜೇಡಿಮಣ್ಣಿನ ಜೊತೆ ಇನ್ನಾವುದೋ ವಸ್ತುಗಳನ್ನು ಬೆರೆಸಿ ಮುಂದೆ ಅದೇ ಕುಂಬಾರಿಕೆಯ ಮುಂದುವರಿದ ಭಾಗವಾಗಿ ಸೆರಾಮಿಕ್ ವಸ್ತುಗಳು ಕಾಣಿಸಿಕೊಳ್ಳಲು ಆರಂಭವಾದವು. ಇತ್ತೀಚಿನ ದಿನಗಳಲ್ಲಿ ಸಮಕಾಲೀನ ಸೆರಾಮಿಕ್ ಕಲಾಕೃತಿಗಳು ಪ್ರಪಂಚದ ಎಲ್ಲಾ ಕಲಾ ವೇದಿಕೆಗಳಲ್ಲಿ, ಪ್ರದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕಲಾಶಾಲೆಗಳಲ್ಲಿ ಸೆರಾಮಿಕ್ ಕಲಾಕೃತಿಗಳ ರಚನೆಯ ಬಗ್ಗೆ ತರಬೇತಿಯನ್ನೂ ನೀಡಲಾಗುತ್ತದೆ. ವಿಶೇಷವಾಗಿ ಶಿಲ್ಪ ಕಲಾಕೃತಿಗಳ ರಚನೆಯಲ್ಲಿ ಸೆರಾಮಿಕ್ ಮಾಧ್ಯಮ ಒಂದು ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದೆ.

ಸೆರಾಮಿಕ್ ಮೊದ ಮೊದಲು ಚೈನೀಸ್, ಕೊರಿಯನ್, ಗ್ರೀಕ್, ಪರ್ಷಿಯನ್, ಕ್ರಟನ್, ಮಯನ್, ಜಪಾನೀಸ್ ಸಂಸ್ಕೃತಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ, ಈಗ ಬಹುತೇಕ ದೇಶಗಳು ಪ್ರಭಾವಕ್ಕೆ ಒಳಗಾಗಿ ಸಾಕಷ್ಟು ಅಲಂಕಾರಿಕಾ ವಸ್ತುಗಳಾಗಿ ಎಲ್ಲಾ ದೇಶಗಳ ಸಂಸ್ಕೃತಿಯ ಭಾಗವಾಗಿದೆ. ಮನೆ ಬಳಕೆಯ ಆಲಂಕಾರಿಕ ವಸ್ತುಗಳಿಂದ ಹಿಡಿದು, ಗ್ಯಾಲರಿ-ಮ್ಯೂಸಿಯಂಗಳಲ್ಲಿನ ಕಲಾಕೃತಿಗಳಿಗೆ ಸೆರಾಮಿಕ್ ಬಳಕೆ ಆಗಿರುವುದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಹೇಳುತ್ತಿರುವುದನ್ನು ಕಾಣಬಹುದು. ಸಮಕಾಲೀನ ಸಂದರ್ಭದಲ್ಲಿ ಇದಕ್ಕೊಂದು ವಿಶ್ವಮನ್ನಣೆ ಸಿಕ್ಕಿದೆ. ಇದೊಂದು ಆಕರ್ಷಕ ಮಾಧ್ಯಮವಾಗಿ ಮಾರ್ಪಟ್ಟಿದೆ.
ಈಗೇಕೆ ಸೆರಾಮಿಕ್ ಬಗ್ಗೆ ಹೇಳುತ್ತಿದ್ದಾರೆ ಎನ್ನುವುದು ನಿಮ್ಮೆಲ್ಲರಲ್ಲೂ ಅಚ್ಚರಿ ಮೂಡಿರಬೇಕು. ಕಾರಣ ಇಷ್ಟೆ, ಕರ್ನಾಟಕ ಚಿತ್ರಕಲಾ ಪರಿಷತ್ ಪ್ರತಿವರ್ಷ ಕಲಾಸಾಧಕರೊಬ್ಬರಿಗೆ ನೀಡುವ ಪ್ರೊ. ಎಂ.ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿಯನ್ನು ದೇಶದ ಖ್ಯಾತ ಹಿರಿಯ ಸೆರಾಮಿಕ್ ಕಲಾವಿದರಿಗೆ ನೀಡಿ ಗೌರವಿಸಿದೆ. ಗುಜರಾತ್ ಮೂಲದ ದೆಹಲಿ ನಿವಾಸಿಯಾಗಿರುವ ಪಿ.ಆರ್. ದರೋಜ್ ಅವರು ಈ ಸಾಲಿನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆರಾಮಿಕ್ ಕಲಾ ಪ್ರಕಾರದಲ್ಲಿ ಅರ್ಧ ದಶಕದ ಅನುಭವ ಹೊಂದಿರುವ ಅಪರೂಪದ ಕಲಾಶಕ್ತಿ ಇವರು. 1944ರಲ್ಲಿ ಹೈದರಾಬಾದ್ನಲ್ಲಿ ಜನಿಸಿದ ಇವರು, ಇಲ್ಲಿನ College of Fine Arts and Architectureನಲ್ಲಿ ಪದವಿ ಪಡೆದರು. ಬಳಿಕ 1970-72ರಲ್ಲಿ ಬರೋಡಾದ M.S. Universityಯಲ್ಲಿ ಜೋತ್ಸ್ನಾ ಭಟ್ ಅವರ ಮಾರ್ಗದರ್ಶನದಲ್ಲಿ ಮಾಸ್ಟರ್ಸ್ ಪದವಿಯನ್ನೂ ಪಡೆದುಕೊಂಡರು. ವಿಭಿನ್ನ ಆಲೋಚನೆಗಳಿಗೆ ಸೆರಾಮಿಕ್ ಎಂಬ ಮಾಧ್ಯಮವನ್ನು ಬಳಸಿಕೊಳ್ಳುತ್ತಾ ಸಾಗಿದ ದರೋಜ್ ಅವರು ಅನೇಕ ವಿಸ್ಮಯ ಪ್ರಯೋಗಗಳಲ್ಲಿ ಯಶಸ್ಸು ಕಂಡುಕೊಂಡರು. ದೇಶದ ಅನೇಕ ರಾಜ್ಯಗಳ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಇವರ ಕಲಾಕೃತಿಗಳನ್ನು ಕಾಣಬಹುದಾಗಿದೆ. ದೇಶ-ವಿದೇಶಗಳ ಗ್ಯಾಲರಿ, ಮ್ಯೂಸಿಯಂ ಮತ್ತು ಆಕ್ಷನ್ ಹೌಸ್ಗಳಲ್ಲಿ ದರೋಜ್ ಅವರ ಕಲಾಕೃತಿಗಳಿಗೆ ಬೇಡಿಕೆ ಇರುವುದನ್ನು ಗಮನಿಸಬಹುದು.
ಇತ್ತೀಚಿಗೊಂದು ಪುಸ್ತಕದ ಪುಟಗಳನ್ನು ತಿರುವಿ ಹಾಕಿದ ನೆನಪು ದರೋಜ್ ಹೆಸರು ಕೇಳುತ್ತಿದ್ದಂತೆ ಕಣ್ಣೆದುರಿಗೆ ಬಂತು. ಅದೇ Fire in the Soul: The Art of P.R. Daroz. ಸೆರಾಮಿಕ್ ಕಲೆ ಮತ್ತು ದರೋಜ್ ಅವರ ಪಯಣ ಪರಿಚಯಿಸಿದ ಪುಸ್ತಕವದು. ಪುಂಡೋಲ್ ಆರ್ಟ್ ಗ್ಯಾಲರಿ ಪ್ರಕಟಿಸಿರುವ ಪುಸ್ತಕವನ್ನು ಕ್ರಿಸ್ಟೀನ್ ಮೈಕೆಲ್ ಬರೆದಿದ್ದಾರೆ. ಈ ಪುಸ್ತಕದಲ್ಲಿ ಕ್ರಿಸ್ಟೀನ್ ದಾಖಲಿಸಿರುವಂತೆ ಜಿನೀವಾದ ಅಂತಾರಾಷ್ಟ್ರೀಯ ಸೆರಾಮಿಕ್ಸ್ ಅಕಾಡೆಮಿಯ ಸದಸ್ಯತ್ವಕ್ಕೆ ಆಹ್ವಾನ ಪಡೆದ ಎರಡನೇ ಕಲಾವಿದ ಪಿ.ಆರ್. ದರೋಜ್. 1970ರ ದಶಕದಲ್ಲಿ ಗೌರಿ ಖೋಸ್ಲಾ ಅವರ ಬಳಿಕ ಈ ವಿಶೇಷ ಆಹ್ವಾನ ಪಡೆದುಕೊಂಡಿರುವ ಕಲಾವಿದರು. 20ನೇ ಶತಮಾನದಲ್ಲಿ ಸಂಖೋ ಚೌಧರಿ ಮತ್ತು ದರೋಜ್ ಅವರು ಸೆರಾಮಿಕ್ಸ್ ಕಲೆಗೆ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಗುವಂತೆ ಮಾಡುವಲ್ಲಿ ಶ್ರಮಿಸಿದ ಪ್ರಮುಖರು ಎಂದಿದ್ದಾರೆ. ಭಾರತೀಯ ಸೆರಾಮಿಕ್ಸ್ ಕಲಾವಿದರ ಜೊತೆ ಸಾಕಷ್ಟು ಒಡನಾಟ ಇಟ್ಟುಕೊಂಡು, ಅಧ್ಯಯನ ಮುಖೇನ ದಾಖಲಿಸುತ್ತಿರುವ ಬರೆಹಗಾರರಲ್ಲಿ ಕ್ರಿಸ್ಟೀನ್ ಒಬ್ಬರಾಗಿದ್ದಾರೆ.
ಈ ಕ್ಷೇತ್ರದಲ್ಲಿ ಅತ್ಯಧಿಕ ಸಾಧನೆ ಮಾಡಿರುವ ಪಿ.ಆರ್. ದರೋಜ್ ಅವರಿಗೆ ಚಿತ್ರಕಲಾ ಪರಿಷತ್ ಪ್ರೊ. ಎಂ.ಎಸ್. ನಂಜುಂಡರಾವ್ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ. ದರೋಜ್ ಅವರಿಗೆ 2004ರಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿ ಗೌರವ, ಭಾರತ ಸರ್ಕಾರದ H.R.D. Department of Cultureನಿಂದ ಫೆಲೋಶಿಪ್, ಯುಗೊಸ್ಲೋವಿಯಾದಲ್ಲಿ ನಡೆದ ಸೆರಾಮಿಕ್ ಟ್ರಿನಾಲೆಯ 3ನೇ ಆವೃತ್ತಿಯಲ್ಲಿ ಗೌರವ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರ, ಗೌರವಗಳು ಲಭಿಸಿವೆ.
