ಅಂಕಣ – ಕೃಷಿಯಿಂದ ಬದುಕು
- ಸಂದೀಪ್ ಮಂಜುನಾಥ್, ಎಂ.ಎಸ್ಸಿ. ಕೃಷಿ, ಹುಣಸೂರು
ಎಲ್ ನಿನೋ ಅಥವಾ ಯಾವುದೇ ಅಪಾಯ ಎದುರಿಸಲು ತಿಳಿಯಬೇಕು ‘ಕೃಷಿ ಆರ್ಥಿಕತೆ’ ಮತ್ತು ‘ಕೃಷಿ ಮನಃಶಾಸ್ತ್ರ’ (psychology) ಎನ್ನುತ್ತಾರೆ ಚಾಮರಾಜನಗರದ ಪ್ರಗತಿಪರ ನೈಸರ್ಗಿಕ ಕೃಷಿಕ ಮಹದೇವಸ್ವಾಮಿ ಅವರು. ಈ ಎರಡು ಶಬ್ದಗಳು ರೈತರಿಗೆ ಹೊಸದೆನಿಸಿದರೂ ತಿಳಿದುಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಈ ವಿಷಯಗಳನ್ನು ಸರಿಯಾಗಿ ಅರಿಯದೆ ರೈತರು ಸೋಲುತ್ತಿದ್ದಾರೆ ಎನ್ನುತ್ತಾರೆ ಮಹದೇವಸ್ವಾಮಿ. ವಿಷಯಕ್ಕೆ ಬರುವ ಮುನ್ನ ಮಹದೇವಸ್ವಾಮಿ ಅವರು ಕುರಿತು ಸ್ವಲ್ಪ ತಿಳಿಯುವ ಪ್ರಯತ್ನ ಮಾಡೋಣ.
ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿ ಬಾಲ್ಯದಲ್ಲಿ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಕಷ್ಟಪಟ್ಟೆವು. ಕೂಡು ಕುಟುಂಬದಲ್ಲಿ ಎಲ್ಲರೂ ಜೊತೆಯಾಗಿ ದುಡಿದರೂ ಮಾಡಿದ ಸಾಲ ತೀರಿಸಲು ಹಪಹಪಿಸುತ್ತಿದ್ದೆವು. ಹೊಟ್ಟೆಗೆ ಹಿಟ್ಟು, ಮೈಯ್ಯಿಗೆ ಬಟ್ಟೆ, ಕಾಲಿಗೆ ಚಪ್ಪಲಿಯೂ ಸರಿಯಾಗಿ ಇರದಂತಹ ಸಮಯ. 1986ರಿಂದ 2014ರವರೆಗೆ ಎಲ್ಲರೂ ಮಾಡುವಂತೆ ರಾಸಾಯನಿಕಗಳನ್ನು ಬಳಸಿ ವ್ಯವಸಾಯ ಮಾಡಿದೆ. ನಾನು ಬೆಳೆಯದ ಬೆಳೆಯಿಲ್ಲ. ಬಾಳೆ, ಕಬ್ಬು, ಅರಿಶಿಣ, ಸೊಪ್ಪು, ತರಕಾರಿಯಿಂದ ಹಿಡಿದು ಮಳೆಯಾಶ್ರಿತ ರಾಗಿ, ಜೋಳ ಎಲ್ಲವನ್ನೂ ಬೆಳೆದೆ. ನೈಸರ್ಗಿಕ ಕೃಷಿ ಕುರಿತು ಹೆಚ್ಚು ತಿಳಿಯದಿದ್ದರೂ ಮನೆಯಲ್ಲಿ ಹಸುಗಳು ಸಾಕಷ್ಟು ಇದ್ದ ಕಾರಣ ತಿಪ್ಪೆಗೊಬ್ಬರವನ್ನು ಯಥೇಚ್ಛವಾಗಿ ಬಳಸುತ್ತಿದ್ದೆವು. ರಾಸಾಯನಿಕ ಕೃಷಿಕರು ಬಳಸುವ ಪ್ರಮಾಣಕ್ಕಿಂತ ಅರ್ಧದಷ್ಟು ಮಾತ್ರ ನಾವು ಗೊಬ್ಬರ, ಕೀಟನಾಶಕ ಬಳಸುತ್ತಿದ್ದೆವು. ಅಂದರೆ ಅಷ್ಟರ ಮಟ್ಟಿಗೆ ಖರ್ಚು ಕಡಿಮೆ ಇತ್ತು. ಆದರೂ ಪ್ರತಿಸಲ ಬೆಳೆ ಮಾರಿ ದುಡ್ಡು ಕೈ ಸೇರಿದಾಗಲೂ ಖಾಲಿ ಖಾಲಿ ಎನಿಸುತ್ತಿತ್ತು. ಅಕ್ಷರಶಃ Bank balance ಝೀರೋ ಆಗಿರುತ್ತಿತ್ತು. ಹಾಗಾಗಿ ನಾನು ಕೃಷಿ ಆರ್ಥಿಕತೆ ಕಡೆ ಹೆಚ್ಚಿನ ಗಮನ ಹರಿಸಿದೆ. ಯಾವುದಾದರೂ ಬೆಳೆ ಬೆಳೆದು ಲಕ್ಷ ದುಡ್ಡು ದೊರೆಯುತ್ತಿತ್ತು ಎಂದಿಟ್ಟುಕೊಳ್ಳಿ. ಕೂಡಲೇ ಸಾಲಗಾರರಿಗೆ, ಗೊಬ್ಬರದ ಅಂಗಡಿಯ ಬಾಪ್ತಿಗೆ, ಬೀಜ ಕೊಟ್ಟವರಿಗೆ, ಕೂಲಿ ಆಳುಗಳಿಗೆ ಹೀಗೆ ಎಲ್ಲರಿಗೂ ಹಣಕೊಟ್ಟು ನಮಗೆ ಉಳಿಯುತ್ತಿದ್ದುದು ಅತ್ಯಲ್ಪ ಮೊತ್ತ ಮಾತ್ರ. ಅಗತ್ಯ ಸಮಯದಲ್ಲಿ 5 ಸಾವಿರ ರೂ. ಸಾಲ ಕೊಡಲು ಸಹ ಯಾರೂ ಮುಂದಾಗುತ್ತಿರಲಿಲ್ಲ. ಒಂದು ವೇಳೆ ಸಾಲ ದೊರೆತರೂ ಅದನ್ನು ಬಡ್ಡಿ ಸಮೇತ ತೀರಿಸಲು ನಮಗೆ ವರ್ಷಗಳೇ ಬೇಕಾಗುತ್ತಿತ್ತು. ಸರಿಯಾದ ಸಮಯಕ್ಕೆ ಬಡ್ಡಿ ಹಿಂತಿರುಗಿಸಿದಿದ್ದರೆ ಮನೆ ಮುಂದೆ ಸಾಲ ಕೊಟ್ಟವರು ಆಗಮಿಸಿ ಆಡುವ ಮಾತುಗಳಿಗೆ ನಮ್ಮ ಆತ್ಮಸ್ಥೈರ್ಯವೇ ಕುಸಿಯುತ್ತಿತ್ತು. ಅಣ್ಣನ ಮದುವೆ, ತಂಗಿ ಮದುವೆಗೆ ಮಾಡಿದ ಸಾಲಗಳನ್ನು ತೀರುಸುವುದೇ ನನ್ನಂತಹ ರೈತರಿಗೆ ಜೀವಮಾನದ ಸಾಧನೆಯಾಗಿರುತ್ತದೆ. ನನ್ನಂತೆ ನನ್ನ ಮಡದಿಯಾಗಿ ಆಗಮಿಸುವವರು ಕಷ್ಟಪಡಬಾರದು ಎಂದು ನಾನು ಮದುವೆಯೇ ಆಗಬಾರದೆಂದು ನಿಶ್ಚಯಿಸಿದೆ.
ಕೃಷಿ ಆರ್ಥಿಕತೆಗೆ ಬೇಕು ಕೃಷಿ ಮನಃಶಾಸ್ತ್ರದ ಅರಿವು
ಪ್ರಸ್ತುತ ಟಮೋಟಗೆ ಬೆಲೆಯಿದೆ ಎಂದು ಎಲ್ಲರೂ ಅದನ್ನೇ ಬೆಳೆದರೆ ಮುಂದೆ ಕಟಾವಿಗೆ ಬರುವ ಹಂತದಲ್ಲಿ ಖಂಡಿತ ಮಾರುಕಟ್ಟೆಯ ಬೆಲೆ ಕುಸಿಯುತ್ತದೆ. ಮಾಡಿದ ಖರ್ಚು ಸಹ ಹುಟ್ಟುವುದಿಲ್ಲ. ಹಾಗಾಗಿ ನಾವು ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯುತ್ತೇವೆ ಎಂದು ಸ್ವಲ್ಪ ಆಲೋಚಿಸಬೇಕು. ಪಕ್ಕದವರು ಬೆಳೆದರೆಂದು ನಾನು ಅದನ್ನೇ ಬೆಳೆದರೆ ಕೆಟ್ಟೆ ಎಂದರ್ಥ. ಬೆಳೆ ಬೆಳೆಯುವ ಸಮಯದಲ್ಲೂ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎಂದು ಲೆಕ್ಕ ಹಾಕಬೇಕು. ಒಮ್ಮೆ ಬಾಳೆ ಮಾರಾಟದಿಂದ 1 ಲಕ್ಷ ದೊರೆತಿತ್ತು. ಆದರೆ ಅದನ್ನು ಬೆಳೆಯುವುದಕ್ಕೆ 80,000 ಖರ್ಚು ಮಾಡಿದ್ದೆವು. ಒಂದು ವರ್ಷ ಕಷ್ಟಪಟ್ಟು 20,000 ಗಳಿಸಿದ್ದು ಯಾವ ಪುರುಷಾರ್ಥಕ್ಕೆ? ಇದರಿಂದ ಯಾವ ಪ್ರಯೋಜನವೂ ಇಲ್ಲ. ಸುಮ್ಮನೆ ಲಕ್ಷ ದೊರೆಯಿತು ಎಂದು ಎಲ್ಲರ ಮುಂದೆ ಹೇಳಿಕೊಂಡು ಓಡಾಡಬೇಕಷ್ಟೇ.
ಹೀಗೆ ನಾನು ಮಾಡುವ ಪ್ರತಿಕೆಲಸದಲ್ಲೂ ಮುಂದಾಲೋಚನೆ ಮಾಡಲು ಪ್ರಾರಂಭಿಸಿದೆ. ಎಲ್ಲೆಲ್ಲಿ ಖರ್ಚು ಕಡಿಮೆ ಮಾಡಲು ಸಾಧ್ಯ ಎಂದು ಪಟ್ಟಿಮಾಡಿ ಅದರಂತೆ ವ್ಯವಸಾಯ ಮಾಡಲು ಮುಂದಾದಾಗ ಸ್ವಲ್ಪ ಮಟ್ಟಿನ ಯಶಸ್ಸು, ಆದಾಯ ದೊರೆಯಿತು.
ನಂಬರ್ ಒನ್ ಆಲೆಮನೆ ಕಟ್ಟಿದ ಪಯಣ
ಕೇವಲ ಬೆಳೆ ಬೆಳೆಯುವುದರಿಂದ ಯಾವ ಲಾಭವೂ ಇಲ್ಲ ಎಂದು ಬಹುಬೇಗ ಅರಿವಾಯಿತು. ರೈತರಾದವರು ಕೃಷಿಯ ಜೊತೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ – ಆಡು ಅಥವಾ ಯಾವುದಾದರೂ ಮೌಲ್ಯವರ್ಧಿತ ಉತ್ಪನ್ನ ತಯಾರಿಸಿ ಮಾರಾಟ ಮಾಡಬೇಕು. ಆಗ ಮಾತ್ರ ಆರ್ಥಿಕವಾಗಿ ಸ್ವಲ್ಪ ಮುಂದೆ ಬರಲು ಸಾಧ್ಯ. ವ್ಯವಸಾಯದ ಜೊತೆ ಉಪಕಸುಬುಗಳನ್ನು ಮಾಡಬೇಕು ಎಂದು ಯೋಚಿಸುತ್ತಿರುವಾಗ ಆಲೆಮನೆ ಮಾಡಬೇಕೆಂಬ ಆಲೊಚನೆ ಮೂಡಿತು. ಆದರೆ ಆ ಸಮಯದಲ್ಲಿ ನಮ್ಮ ಊರಿನ ಸುತ್ತಮುತ್ತ ಸುಮಾರು 30 ಆಲೆಮನೆಗಳಿದ್ದವು. ಆದರೂ ಧೈರ್ಯ ಮಾಡಿ ಸರ್ಕಾರದ ಯೋಜನೆಯೊಂದನ್ನು ಬಳಸಿಕೊಂಡು ಆಲೆಮನೆ ನಿರ್ಮಿಸಿದೆವು. 31ನೇ ಆಲೆಮನೆಯನ್ನು ನಂಬರ್ ಒನ್ ಆಲೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಬೇರೆ ಆಲೆಮನೆಗಳಿಗೂ ನಮಗೂ ಏನು ವ್ಯತ್ಯಾಸ? ಏಕೆ ರೈತರು ನಮ್ಮ ಆಲೆಮನೆಗೆ ಬರಬೇಕು ಎಂದು ಒಂದೊಂದೇ ವಿಚಾರಗಳನ್ನು ಪಟ್ಟಿ ಮಾಡಿ ಅದರಂತೆ ನಡೆದೆ. ಸಾಮಾನ್ಯವಾಗಿ ರೈತರಿಗೆ ಬರುವ ಮೊದಲ ಸಮಸ್ಯೆ ಕೂಲಿ ಆಳುಗಳದ್ದು. ನಾನು ಆಲೆಮನೆ ಪ್ರಾರಂಭಿಸಿದ ಕೂಡಲೇ ಹತ್ತು ಜನ ಕೂಲಿ ಆಳುಗಳಿಗೆ ಮುಂಗಡ ಹಣ ಕೊಟ್ಟು ನಮ್ಮ ಕೆಲಸಗಳಿಗೆ ನೇಮಿಸಿದೆ. ಯಾರೇ ರೈತರು ಕಬ್ಬು ಕಟಾವು ಮಾಡಬೇಕೆಂದರೆ ನಾವೇ ಆಳುಗಳನ್ನು ಕಳುಹಿಸಿ ಗಾಡಿಗೆ ತುಂಬಿಸಿ ಆಲೆಮನೆಯಲ್ಲಿ ಕಬ್ಬು ಇಳಿಸುತ್ತಿದ್ದೆವು. ಒಬ್ಬರ ಕಬ್ಬು ಅರಿಯುವಾಗ ಮತ್ತೊಬ್ಬ ಕೃಷಿಕರ ಕಬ್ಬು ಅರಿಯುತ್ತಿರಲಿಲ್ಲ. ಸ್ವಂತ ನಮ್ಮ ತೋಟದ ಕಬ್ಬು ಕಟಾವಿಗೆ ಬಂದರೂ ಮಧ್ಯದಲ್ಲಿ ಬೇರೆ ಅವರಿಗೆ ತೊಂದರೆ ಕೊಡುತ್ತಿರಲಿಲ್ಲ. ಬೆಲ್ಲ ತಯಾರಾದ ಮೇಲೂ ರೈತರಿಗೆ ಅದನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದೇ ಇದ್ದಾಗ ನಮ್ಮ ಆಲೆಮನೆಯಲ್ಲೇ ಇರುವ ಎರಡು ಕೊಠಡಿಗಳಲ್ಲಿ ಅವುಗಳನ್ನು ತಾತ್ಕಾಲಿಕವಾಗಿ ಸಂಗ್ರಹಿಸುವ ವ್ಯವಸ್ಥೆ ಮಾಡಿದೆವು. ರೈತರಿಗೆ ಬೀಗ ಕೊಟ್ಟು ಯಾವುದೇ ಮೋಸ ಆಗದಂತೆ ಎಚ್ಚರ ವಹಿಸಿದೆವು. ನೋಡ ನೋಡುತ್ತಲೇ ನಮ್ಮ ಪ್ರಾಮಾಣಿಕ ಸೇವೆಯಿಂದ ರೈತರ ಮನಗೆದ್ದು ಕಬ್ಬು ಬಿತ್ತನೆ ಮಾಡುವ ದಿನವೇ ನಮ್ಮ ಬಳಿ ಮುಂದಿನ ವರ್ಷ ಇಂತಹ ದಿನಾಂಕದಲ್ಲಿ ಕಬ್ಬು ಕಟಾವಿಗೆ ಬರುತ್ತದೆ, ಈಗಲೇ ಮುಂಗಡ ಹಣ ಪಡೆದು ನಮಗೆ ಆ ದಿನಾಂಕವನ್ನು ಕಬ್ಬು ಕಟಾವಿಗೆ ನಿಗದಿ ಮಾಡಿ ಎನ್ನುವ ಮಟ್ಟಕ್ಕೆ ನಮ್ಮ ಆಲೆಮನೆ ಹೆಸರು ಮಾಡಿ ನಮ್ಮ ಊರಿನಲ್ಲೇ ಖ್ಯಾತಿ ಪಡೆಯಿತು.
ಹಲವು ವರ್ಷಗಳ ಕಾಲ ಆಲೆಮನೆ ನಡೆಸಿ ಸುಸ್ಥಿರ ಜೀವನ ಕಟ್ಟಿಕೊಳ್ಳಲು ಒಂದು ದಾರಿ ರೂಪಿಸಿದೆವು. ಆದರೆ ಕಾಲಕ್ರಮೇಣ ನಮ್ಮಲ್ಲಿ ನೀರಿನ ಸಮಸ್ಯೆ, ಕೂಲಿ ಆಳುಗಳ ಸಮಸ್ಯೆಯಿಂದ ಕಬ್ಬು ಬೆಳೆಯುವವರ ಸಂಖ್ಯೆ ಕಡಿಮೆಯಾಯಿತು. ಪ್ರಸ್ತುತ ನಮ್ಮ ತೋಟದ ಕಬ್ಬು ಅರೆದು ಬೆಲ್ಲ ಮಾಡಲು ಆಲೆಮನೆ ಉಪಯೋಗಿಸುತ್ತಿದ್ದೇವೆ. ಕಬ್ಬು ಬೆಳೆಯಲು ಯಾವುದೇ ರಾಸಾಯನಿಕ ಬಳಸದೆ ನಂತರ ಬೆಲ್ಲ ಮಾಡುವಾಗಲೂ ಯಾವುದೇ ಕೃತಕ ರಾಸಾಯನಿಕಗಳನ್ನು ನಾವು ಬಳಸುವುದಿಲ್ಲ. ಸುಣ್ಣ ಮತ್ತು ಬೆಂಡೆ ಗಿಡದ ರಸ ಉಪಯೋಗಿಸಿ ಪರಿಶುದ್ಧ ಬೆಲ್ಲದ ಅಚ್ಚು ಮತ್ತು ಬೆಲ್ಲದ ಪುಡಿಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತೇವೆ. ರೈತರು ಮುಂದಾಲೋಚನೆಯಿಂದ ಸರಿಯಾಗಿ ಯೋಜನೆ ರೂಪಿಸಿದರೆ ಕೃಷಿಯಲ್ಲೂ ಯಶಸ್ಸು ಕಾಣಬಹುದು ಎಂದು ಆಲೆಮನೆ ಉದ್ಯಮದಿಂದ ಅರಿವಾಯಿತು.
ಮುಂದಿನ ಲೇಖನದಲ್ಲಿ ರಾಸಾಯನಿಕ ಕೃಷಿ ಬಿಟ್ಟು ನೈಸರ್ಗಿಕ ಕೃಷಿಯೆಡೆಗಿನ ಪಯಣ, ರೈತರು ಏಕೆ ನೇರವಾಗಿ ಗ್ರಾಹಕರಿಗೆ ತಾವು ಬೆಳೆದ ಉತ್ಪನ್ನ ಮಾರಾಟ ಮಾಡಬೇಕು ಎನ್ನುವುದರ ಕುರಿತು ತಿಳಿಯೋಣ.
