‘ಭಾರತಬೋಧ್’ ಎಂದರೆ ಭಾರತದ ಬಗೆಗಿನ ಸರಿಯಾದ ಬೋಧೆ ಮತ್ತು ಅದರ ನಿಜವಾದ ನಾಗರಿಕತೆಯ ಸ್ವರೂಪದ ಸರಿಯಾದ ತಿಳಿವಳಿಕೆ ಎಂದು ಸರಳ ಮಾತುಗಳಲ್ಲಿ ಹೇಳಿಬಿಡಬಹುದು. ಭಾರತ ಎಂಬುದು ಕೇವಲ 1947ರಲ್ಲಿ ರೂಪುಗೊಂಡ ರಾಜಕೀಯ ರಾಷ್ಟ್ರವಲ್ಲ. ಅದರ ನಿರಂತರ ನಾಗರಿಕತೆ, ಸಾಂಸ್ಕೃತಿಕ ಅಸ್ಮಿತೆ ಮತ್ತು ಜ್ಞಾನ ಪರಂಪರೆಗಳು ಒಟ್ಟಾಗಿ ಈ ಕಲ್ಪನೆಯನ್ನು ರೂಪಿಸುತ್ತವೆ. ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಹರಡಿರುವ ಈ ವಿಶಾಲ ಭೂಭಾಗವು ಸಮಾಜ, ಜ್ಞಾನ ಮತ್ತು ಧರ್ಮದ ವಿಶಿಷ್ಟ ತಿಳುವಳಿಕೆಯ ಮೂಲಕ ದೇಶದ ಭೂತಕಾಲ, ವರ್ತಮಾನ ಮತ್ತು ಭವಿಷ್ಯತ್ತನ್ನು ಒಂದಾಗಿ ಜೋಡಿಸುವ ಜೀವಂತ ಪ್ರಜ್ಞೆಯಾಗಿದೆ.
ಪಾಶ್ಚಿಮಾತ್ಯರಲ್ಲಿ ‘ರಾಷ್ಟ್ರ’ ಎಂಬ ಪರಿಕಲ್ಪನೆಯು ಮುಖ್ಯವಾಗಿ ರಾಜಕೀಯ ವ್ಯವಸ್ಥೆ ಮತ್ತು ರಾಜ್ಯಕ್ಕೆ ಸೀಮಿತವಾಗಿದೆ. ಆದರೆ ಭಾರತೀಯ ರಾಷ್ಟ್ರದ ಪರಿಕಲ್ಪನೆಯು ರಾಜಕೀಯಕ್ಕಿಂತ ಮಿಗಿಲಾಗಿ ನಾಗರಿಕತೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ್ದಾಗಿದೆ. ಶತಮಾನಗಳ ನಿರಂತರ ಆಕ್ರಮಣಗಳು, ಇಸ್ಲಾಮಿಕ್ ವಿಸ್ತರಣಾವಾದ ಮತ್ತು ವಸಾಹತುಶಾಹಿ ಆಳ್ವಿಕೆಯ ಹೊರತಾಗಿಯೂ ಭಾರತವು ತನ್ನ ಮೂಲಭೂತ ಆಧ್ಯಾತ್ಮಿಕ ಆತ್ಮವನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ಭಾರತದ ಇತಿಹಾಸವು ಕೇವಲ ದಾಸ್ಯದ್ದಲ್ಲ; ಅದು ಪ್ರತಿರೋಧ, ಚೇತರಿಕೆ, ನವೀಕರಣ ಮತ್ತು ಪುನರ್ನಿರ್ಮಾಣದ ಇತಿಹಾಸವೂ ಹೌದು.
ಆದರೆ ಸ್ವಾತಂತ್ರ್ಯದ ನಂತರ ರಾಜಕೀಯ ಅಧಿಕಾರದ ಹಸ್ತಾಂತರವಾಯಿತೇ ವಿನಃ ವಸಾಹತುಶಾಹಿ ಬೌದ್ಧಿಕ ಚೌಕಟ್ಟುಗಳಿಂದ ಸಂಪೂರ್ಣ ಮುಕ್ತಿಯಾಗಲಿಲ್ಲ. ಆಡಳಿತ ಮತ್ತು ಶಿಕ್ಷಣದಲ್ಲಿ ಪಾಶ್ಚಿಮಾತ್ಯ ಸಿದ್ಧಾಂತಗಳು ಪ್ರಬಲವಾಗಿ, ‘ಆಧುನೀಕರಣ ಎಂದರೆ ಪಾಶ್ಚಿಮಾತ್ಯೀಕರಣ’ ಎಂಬ ತಪ್ಪು ಕಲ್ಪನೆ ಬೆಳೆಯಿತು. ಇದರಿಂದಾಗಿ ನಮ್ಮದೇ ಆಯುರ್ವೇದ, ಯೋಗ, ವಾಸ್ತುಶಿಲ್ಪ ಮತ್ತು ಸುಸ್ಥಿರ ಜೀವನಶೈಲಿಯನ್ನು ಕೀಳಾಗಿ ಕಾಣುವ ಅಸ್ಮಿತೆಯ ಗೊಂದಲ ಉಂಟಾಯಿತು. ವಿದೇಶೀ ಕಲ್ಪನೆಯ ಶಿಕ್ಷಣದ ಪ್ರಸರಣದಿಂದಾಗಿ ಭಾರತೀಯವಾದುದೆಲ್ಲದರ ಬಗ್ಗೆ ಸಮಾಜದಲ್ಲಿ ಕೀಳರಿಮೆಯನ್ನು ತುಂಬಲಾಯಿತು.
ಸಮಾಜವು ತನ್ನ ಸಾಂಸ್ಕೃತಿಕ ಅಡಿಪಾಯದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಾಗ ಸ್ವಯಂ-ಸಂದೇಹ ಮೂಡುತ್ತದೆ. ಈ ತಪ್ಪು ಕಲ್ಪನೆಗಳನ್ನು ನಿವಾರಿಸಿ ನಾಗರಿಕತೆಯ ಸ್ವಾಭಿಮಾನವನ್ನು ಮರುಸ್ಥಾಪಿಸುವುದೇ ಭಾರತಬೋಧೆ ಮತ್ತು ಭಾರತೀಯ ಜ್ಞಾನ ಪರಂಪರೆಯ ಮುಖ್ಯ ಉದ್ದೇಶವಾಗಿದೆ.
ಭಾರತೀಯ ಜ್ಞಾನ ಪರಂಪರೆಯ ಮೂಲ ತತ್ತ್ವ ‘ಏಕತ್ವ’. ಬ್ರಹ್ಮಾಂಡವನ್ನು ಒಂದು ಸಂಯೋಜಿತ ವಾಸ್ತವತೆಯಾಗಿ ಕಾಣುವ ಈ ಚಿಂತನೆಯು ಜ್ಞಾನವನ್ನು ಅಂತರಂಗದ ಶುದ್ಧೀಕರಣ, ಆತ್ಮ ಪರಿವರ್ತನೆ ಮತ್ತು ಸತ್ಯದ ಸಾಕ್ಷಾತ್ಕಾರದ ಸಾಧನವಾಗಿ ಕಂಡಿದೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳು ಭೌತಿಕ ಮತ್ತು ಆಧ್ಯಾತ್ಮಿಕ ಆಯಾಮಗಳಿಗೆ ಸಮತೋಲನ ನೀಡುತ್ತವೆ. “ಧಾರಯತಿ ಇತಿ ಧರ್ಮಃ” ಎಂಬಂತೆ ಧರ್ಮವು ನೈತಿಕ ಜವಾಬ್ದಾರಿ ಮತ್ತು ಕರ್ತವ್ಯವನ್ನು ಸಂಕೇತಿಸುತ್ತದೆ.
ಪರಿಸರ ನಾಶದ ಇಂದಿನ ಕಾಲಘಟ್ಟದಲ್ಲಿ, ಪ್ರಕೃತಿಯನ್ನು ತಾಯಿಯಾಗಿ ಕಾಣುವ ಮತ್ತು ಈಶಾವಾಸ್ಯ ಉಪನಿಷತ್ತು ಬೋಧಿಸುವ ಸಂಯಮದ ದೃಷ್ಟಿಕೋನವು ಹೆಚ್ಚಿನ ಪ್ರಸ್ತುತತೆ ಪಡೆದಿದೆ. “ವಸುಧೈವ ಕುಟುಂಬಕಮ್” ಮತ್ತು “ಸರ್ವೇ ಭವಂತು ಸುಖಿನಃ” ಎಂಬ ತತ್ತ್ವಗಳು ಭಾರತೀಯ ನಾಗರಿಕತೆಯ ಜಾಗತಿಕ ಗುಣವನ್ನು ಪ್ರತಿಬಿಂಬಿಸುತ್ತವೆ. ಹಕ್ಕುಗಳಿಗಿಂತ ಕರ್ತವ್ಯಗಳ ಪ್ರಾಮಾಣಿಕ ನಿರ್ವಹಣೆಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತಗಳಿಂದ ಹಿಡಿದು ಪಾಣಿನಿ, ಕೌಟಿಲ್ಯ, ಆರ್ಯಭಟ, ಚರಕ, ಸುಶ್ರುತ ಮತ್ತು ಶಂಕರಾಚಾರ್ಯರಂತಹ ಋಷಿಮುನಿಗಳ ಕೊಡುಗೆಗಳನ್ನು ಪ್ರತಿಯೊಬ್ಬ ಭಾರತೀಯನೂ ಅರಿಯಬೇಕಿದೆ. ನಮ್ಮ ದೇವಾಲಯಗಳು, ಗುರುಕುಲಗಳು, ಹಬ್ಬಗಳು ಮತ್ತು ಕೌಟುಂಬಿಕ ವ್ಯವಸ್ಥೆಗಳು ಈ ಪರಂಪರೆಯ ಅವಿಭಾಜ್ಯ ಅಂಗಗಳಾಗಿವೆ. ಭಾರತಬೋಧೆ ಎನ್ನುವುದು ಕೇವಲ ಭೂತಕಾಲದ ಅಧ್ಯಯನವಲ್ಲ; ಅದು ಭಾರತವು ತನ್ನ ಭೂತಕಾಲವನ್ನು ವಿಶ್ಲೇಷಿಸಿ, ವರ್ತಮಾನವನ್ನು ಮುನ್ನಡೆಸಿ, ತನ್ನ ಸ್ವಂತ ಬೌದ್ಧಿಕ ಅಡಿಪಾಯದ ಮೇಲೆ ಭವಿಷ್ಯವನ್ನು ರೂಪಿಸಿಕೊಳ್ಳಲು ಇರುವ ಸತ್ಯವಾದ ದಾರಿದೀಪ. ಈ ಎಲ್ಲ ವಿಚಾರಗಳ ಸಮಗ್ರವಾದ ಅವಲೋಕನ ಈ ಸಂಚಿಕೆಯ ಮುಖಪುಟ ಲೇಖನದಲ್ಲಿದೆ.
ಕಾರ್ಗಿಲ್ ವಿಜಯ ದಿವಸದ ಸ್ಮರಣೆ
ಜುಲೈ 26 – ಭಾರತೀಯ ಶೌರ್ಯ ಮತ್ತು ತ್ಯಾಗದ ಸಂಕೇತವಾದ ‘ಕಾರ್ಗಿಲ್ ವಿಜಯ ದಿವಸ್’. 1999ರಲ್ಲಿ ಹಿಮಾಲಯದ ಕಡಿದಾದ ಹಿಮಶಿಖರಗಳಲ್ಲಿ ಮಾತೃಭೂಮಿಯ ರಕ್ಷಣೆಗಾಗಿ ಹೋರಾಡಿದ ನಮ್ಮ ಸೈನಿಕರು, ಶತ್ರುಪಡೆಗಳನ್ನು ಹಿಮ್ಮೆಟ್ಟಿಸಿ ತ್ರಿವರ್ಣ ಧ್ವಜವನ್ನು ಎತ್ತರದಲ್ಲಿ ಹಾರಿಸಿದರು. ಈ ದಿನ ಕೇವಲ ಯುದ್ಧದ ಗೆಲುವನ್ನು ಸಂಭ್ರಮಿಸುವುದಷ್ಟೇ ಅಲ್ಲ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತರ್ಪಣ ನೀಡಿದ ಅಮರ ಜವಾನರ ಅಪ್ರತಿಮ ದೇಶಭಕ್ತಿ ಮತ್ತು ಬಲಿದಾನವನ್ನು ಗೌರವದಿಂದ ಸ್ಮರಿಸುವ ಪವಿತ್ರ ಸಂದರ್ಭ. ದೇಶದ ಭದ್ರತೆಗಾಗಿ ಸದಾ ಜಾಗರೂಕರಾಗಿರುವ ನಮ್ಮ ಸಶಸ್ತ್ರ ಪಡೆಗಳ ನಿಸ್ವಾರ್ಥ ಸೇವೆಗೆ ದೇಶವಾಸಿಗಳೆಲ್ಲರೂ ತಲೆಬಾಗಬೇಕಿದೆ. ಶೂರ ಯೋಧರ ತ್ಯಾಗವು ಪ್ರತಿಯೊಬ್ಬ ಭಾರತೀಯನಲ್ಲೂ ದೇಶಪ್ರೇಮದ ಜ್ಯೋತಿಯನ್ನು ಸದಾ ಪ್ರಜ್ವಲಿಸುವಂತೆ ಮಾಡಲಿ.
