- ಮಂಜುನಾಥ ಅಜ್ಜಂಪುರ, ಗೌರವ ಸಂಪಾದಕ, “ವಾಯ್ಸ್ ಆಫ್ ಇಂಡಿಯಾ” ಕನ್ನಡ ಸರಣಿ
ಪೂರ್ವ ಬಂಗಾಳದ ಹಿಂದೂ ನಿರಾಶ್ರಿತರ ‘ಮರೀಚಝಾಪೀ’ ಹತ್ಯಾಕಾಂಡದ ವಾಸ್ತವ ವೃತ್ತಾಂತವು ನಮಗೆಲ್ಲಾ ಅಪರಿಚಿತವಾಗಿಯೇ ಇದೆ. ಅದರಲ್ಲೂ ದಕ್ಷಿಣ ಭಾರತದ ನಮಗೆ ದೇಶವಿಭಜನೆ – ವಲಸೆ – ಯುದ್ಧಗಳ ಬಿಸಿ, ಬೇಗುದಿಗಳು ಅಷ್ಟಾಗಿ ಗೊತ್ತೇ ಇಲ್ಲ. ಪಶ್ಚಿಮ ಪಾಕಿಸ್ತಾನ, ಬಾಂಗ್ಲಾದೇಶ (ಹಿಂದಿನ ಪೂರ್ವ ಪಾಕಿಸ್ತಾನ), ಅಫ್ಘಾನಿಸ್ತಾನ ಮುಂತಾದೆಡೆ ಸಾವಿರಾರು ವರ್ಷಗಳಿಂದ ನೆಲೆಸಿದ್ದ ಮುಗ್ಧರಾದ ಬೌದ್ಧರಿಗೆ – ಹಿಂದೂಗಳಿಗೆ ದೇಶವಿಭಜನೆಯ ಕಾಲಘಟ್ಟದಲ್ಲಿ, ಕರಾಳ ಭವಿಷ್ಯದ ಮುನ್ಸೂಚನೆಯೇ ಇರಲಿಲ್ಲ. ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರೂ, ಲಿಯಾಖತ್ ಅಲಿ – ನೆಹರೂ ಒಪ್ಪಂದ ಮುಂತಾದವುಗಳು ಅವರಲ್ಲಿ ನೆಮ್ಮದಿಯ ಭ್ರಮೆಯನ್ನು ತುಂಬಿದ್ದವು. ಅಪರೂಪದ ಜಿಹಾದೀ ಪ್ರಕರಣಗಳು, ಇಸ್ಲಾಮೀ ಪಾಕಿಸ್ತಾನದ ಆವಿಷ್ಕಾರದ ಅನಂತರ ನಿತ್ಯದ ಯಾತನೆಗಳಾಗಿಬಿಟ್ಟವು. ಮುಖ್ಯವಾಗಿ ಭಾರತ – ಪಾಕ್ ಗಡಿಯಿಂದ ದೂರವಿದ್ದ ನತದೃಷ್ಟರ ಸ್ಥಿತಿ ತುಂಬ ಗಂಭೀರವಾಗಿತ್ತು. ಅವರು ಹೋಗುವುದಾದರೂ ಎಲ್ಲಿಗೆ? ಹೇಗೆ? ನೋವು – ಅವಮಾನ – ಕಿರುಕುಳ – ಅತ್ಯಾಚಾರ – ಬಲವಂತದ ಮತಾಂತರಗಳು ಹೆಚ್ಚುತ್ತಲೇಹೋದವು. ದುರಂತಗಳು – ಹತ್ಯಾಕಾಂಡಗಳು ಅಕ್ಷರಶಃ ನೂರಾರು. ಅದರಲ್ಲೊಂದು ಈ ಮರೀಚಝಾಪೀ ಸಾಮೂಹಿಕ ಹಿಂದೂ ಹತ್ಯಾಕಾಂಡ.
ತುರ್ತುಪರಿಸ್ಥಿತಿಯ ಅಕ್ರಮ, ದೌರ್ಜನ್ಯ, ದುರಾಡಳಿತಗಳ ಪರಿಣಾಮವಾಗಿ, 1977ರಲ್ಲಿ ಇಂದಿರಾ ಸೋತರು. ಇಲ್ಲಿ 1970ರ ದಶಕದ ಹಿನ್ನೆಲೆಯನ್ನೂ ಅವಲೋಕಿಸಬೇಕಾಗಿದೆ. ಆಗ ಅಲ್ಲಿನ ಕಾಂಗ್ರೆಸ್ ಪಕ್ಷವು ಹಿಂಸೆ, ಪ್ರತಿಹಿಂಸೆ, ಅತಿರೇಕದ ಪೊಲೀಸ್ ಕ್ರಮಗಳ ಹೊಸ ಪರ್ವವನ್ನೇ ಆರಂಭಿಸಿತ್ತು. ಅನಂತರದ ಅರ್ಧ ಶತಮಾನದ ಕಪ್ಪು ಅವಧಿಯಲ್ಲಿ ಕಮ್ಯುನಿಸ್ಟ್, ತೃಣಮೂಲ ಪಕ್ಷಗಳು ಅದನ್ನೇ ಇನ್ನಷ್ಟು ಭಯಂಕರವಾಗಿ ಮುಂದುವರಿಸಿದವು. ಒಂದು ಕಾಲದಲ್ಲಿ ಜಗತ್ತಿಗೇ ಮಾದರಿಯಾಗಿದ್ದ ಬಂಗಾಳವು ಮತ್ತೆಂದೂ ಏಳಲಾಗದ ದುಃಸ್ಥಿತಿಗೆ ಸಿಲುಕಿತು. 1977ರ ಚುನಾವಣೆಗಳಲ್ಲಾದ ಕಾಂಗ್ರೆಸ್ ಪಕ್ಷದ ಅವನತಿಯಿಂದ, ಎಲ್ಲೆಡೆ ಕಾಂಗ್ರೆಸ್ ವಿರೋಧಿ ಶಕ್ತಿಗಳು ಪ್ರಬಲವಾದವು ಮತ್ತು ಮೊದಲ ಬಾರಿಗೆ ಅಧಿಕಾರದ ಬಳಿ ಸಾಗಿಬಂದವು. ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷವು ಉಳಿದ ಎಡಪಕ್ಷಗಳ ಬೆಂಬಲದೊಂದಿಗೆ ಪಶ್ಚಿಮ ಬಂಗಾಳ, ಕೇರಳಗಳಲ್ಲಿ ಅಧಿಕಾರಕ್ಕೆ ಬಂದಿತು. ಜ್ಯೋತಿ ಬಸು ಅವರ ಹೆಸರು ನಮ್ಮ ಕನ್ನಡನಾಡಿಗೆ, ಕನ್ನಡ ಪತ್ರಿಕೆಗಳ ಓದುಗರಿಗೆ ಪರಿಚಯವಾದುದೇ ಆಗ.
ಕಮ್ಯುನಿಸಂ ಎಂದರೆ ಸಮಾನತೆ; ಕಮ್ಯುನಿಸಂ ಎಂದರೆ ಶ್ರಮಿಕರ – ಕೃಷಿಕರ ರಾಜ್ಯ; ರಷ್ಯಾ – ಚೀನಾ ದೇಶಗಳ ಸಮೃದ್ಧಿಗೆ – ರಾಜ್ಯಶಕ್ತಿಗೆ ಈ ಸಾಮ್ಯವಾದವೇ ಕಾರಣ; ಎಲ್ಲ ಕಾರ್ಮಿಕರ ಸಂಕೋಲೆಗಳನ್ನು ಕತ್ತರಿಸುವ ಸುಖೀರಾಜ್ಯವೊಂದು ಬರುತ್ತದೆ ಎಂದು ಕನಸು ಕಾಣುತ್ತಿದ್ದ – ಆಶಯಗಳನ್ನಿಟ್ಟುಕೊಂಡಿದ್ದ ನಮಗೆಲ್ಲಾ ಜ್ಯೋತಿ ಬಸು ಅವರು ಮುಖ್ಯಮಂತ್ರಿಯಾದುದು ಐತಿಹಾಸಿಕ ಘಟನೆಯೆನಿಸಿಬಿಟ್ಟಿತು. ಸರಳತೆ, ಸರಳ ಉಡುಪು, ಮುಕ್ತ ಮಾತುಗಳು ಯಾವಾಗಲೂ ಪರಿಣಾಮಕಾರಿ. ಜ್ಯೋತಿಬಸು ಅವರ ವ್ಯಕ್ತಿತ್ವದಿಂದ ನಾವು ಮಾರುಹೋದುದರಲ್ಲಿ ಏನಾಶ್ಚರ್ಯ!.
ಆದರೆ, ಅನಂತರದ್ದು ಕಣ್ಣೀರಿನ ಇತಿಹಾಸ, ರಕ್ತಸಿಕ್ತ ಚರಿತ್ರೆ. ಜ್ಯೋತಿ ಬಸು ಅವರು ಇಪ್ಪತ್ತಮೂರು ವರ್ಷ ಮುಖ್ಯಮಂತ್ರಿಯಾಗಿ, ಅಕ್ಷರಶಃ ಕಿರೀಟವಿಲ್ಲದ ರಾಜನಂತೆ ಆಳಿದರು. ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋನಲ್ಲೂ ಅವರ ಪ್ರಭಾವ – ನಿಯಂತ್ರಣ ಹೆಚ್ಚು. ಪ್ರಜಾಪ್ರಭುತ್ವ – ಚುನಾವಣೆಗಳೆಂದರೆ ಕಮ್ಯುನಿಸ್ಟರಿಗೆ ಗೌರವವೂ ಇಲ್ಲ, ಅವುಗಳ ಅಗತ್ಯವೂ ಅವರಿಗಿಲ್ಲ. ಮಾರ್ಕ್ಸ್ ವಾದಿ ಪಕ್ಷದ ಗೂಂಡಾಗಳು, ಇಡೀ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಹಾಸ್ಯಾಸ್ಪದ ಮಟ್ಟಕ್ಕೆ ಇಳಿಸಿದರು. ಕಮ್ಯುನಿಸ್ಟ್ ಪಕ್ಷಕ್ಕೆ ಮತ ನೀಡುವುದಿಲ್ಲ ಎಂಬ ಅನುಮಾನ ಬಂದ ಯಾರೂ ಮತಗಟ್ಟೆಗಳ ಬಳಿಯೇ ಬಾರದಂತೆ ಮಾಡಿಬಿಟ್ಟರು. ಚುನಾವಣೆಗಳನ್ನು ಗೆಲ್ಲಲು ಈ ಜ್ಯೋತಿ ಬಸು ಎಲ್ಲ ‘ವಾಮ’ಮಾರ್ಗಗಳನ್ನು ಅನುಸರಿಸಿದರು. ಲೋಕಸಭೆ, ವಿಧಾನಸಭೆಗಳಿಗೆ ಬಹುಮತದಿಂದ ಕಮ್ಯುನಿಸ್ಟರು ಹೇಗೆಲ್ಲಾ ಆರಿಸಿಬರಬಹುದು ಎಂಬ ಕುಕಾರ್ಯತಂತ್ರದಲ್ಲಿ ನಾಚಿಕೆಯಿಲ್ಲದ ಗೂಂಡಾಗಿರಿ – ಅನೀತಿಗಳೇ ತುಂಬಿದ್ದವು. ‘ವೈಜ್ಞಾನಿಕ’ವಾಗಿ, ‘ವ್ಯವಸ್ಥಾತ್ಮಕ’ವಾಗಿ ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವ ಇಂತಹ ಹೊಸ ಪದ್ಧತಿಯ ಹರಿಕಾರರಾದರು ಜ್ಯೋತಿ ಬಸು.
ಮುಷ್ಕರ – ಬಂದ್ಗಳಿಗೆ ಅಲ್ಲಿನ ರಾಜ್ಯ ಸರ್ಕಾರದ ಬೆಂಬಲ, ಪ್ರಾಯೋಜನೆಗಳೇ ದೊರೆತವು. ಪಶ್ಚಿಮ ಬಂಗಾಳದ ಕೈಗಾರಿಕೆ, ವ್ಯಾಪಾರ, ಉದ್ಯಮ ಎಲ್ಲವೂ ಕುಲಗೆಟ್ಟವು. ಬಡತನ – ನಿರುದ್ಯೋಗಗಳು ಮೇರೆ ಮೀರಿದವು. ಅಭಿವೃದ್ಧಿ ಪಟ್ಟಿಯ ರಸಾತಲದಲ್ಲಿ ಕೇರಳ – ಪಶ್ಚಿಮ ಬಂಗಾಳಗಳು ಪಟ್ಟು ಹಿಡಿದು ಕುಳಿತವು. ಬಂಗಾಳದಲ್ಲಿ ಹಾದುಹೋಗುವ ರೈಲು – ಬಸ್ಸುಗಳ ಅಂತಾರಾಜ್ಯ ಪ್ರಯಾಣಿಕರು ಜೀವ ಅಂಗೈಯಲ್ಲಿ ಇಟ್ಟುಕೊಂಡು ಪಯಣಿಸಬೇಕಾಯಿತು. ಕಾನೂನು ಪಾಲನೆ ಇರಲಿ, ಮಹಾನಗರಗಳ ಸಂಚಾರ ವ್ಯವಸ್ಥೆಯೇ ಹದಗೆಟ್ಟುಹೋಯಿತು. ಸೆಣಬು ಕೈಗಾರಿಕೆ, ಚರ್ಮ ಕೈಗಾರಿಕೆ, ಲೋಹ ಉದ್ಯಮಗಳಿಗೆ ಹೆಸರಾಗಿದ್ದ ಬಂಗಾಳದಲ್ಲಿ, ಎಲ್ಲ ಕೈಗಾರಿಕೆ ಉದ್ಯಮಗಳನ್ನು ಉಸಿರೆತ್ತದಂತೆ ನಾಶಪಡಿಸಲಾಯಿತು.
ಬಂಗಾಳ ಮತ್ತು ಪೂರ್ವಾಂಚಲ ರಾಜ್ಯಗಳ ವಿದ್ಯಾವಂತರು, ಕಳೆದ ಮೂರು – ನಾಲ್ಕು ದಶಕಗಳಲ್ಲಿ ತಮ್ಮ ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗಲಾರದಂತಹ – ಹೋಗಲಿಚ್ಛಿಸದಂತಹ ವಾತಾವರಣವನ್ನು ಸೃಷ್ಟಿಸಿದ ಮುಖ್ಯ ರೂವಾರಿ ಈ ಬಸು. ಬೆಂಗಳೂರು – ಮುಂಬಯಿ – ದೆಹಲಿಗಳಂತಹ ಮಹಾನಗರಗಳಲ್ಲಿ ವಿದ್ಯಾವಂತ ಬಂಗಾಳಿಗಳ ಜನಸಾಂದ್ರತೆ ಹೆಚ್ಚಲು, ವಲಸೆ ಇಮ್ಮಡಿಸಲು ಈ ಮಹಾನ್ ಮಾರ್ಕ್ಸ್ವಾದಿ ನಾಯಕ ಏಕಪ್ರಕಾರವಾಗಿ ಶ್ರಮಿಸಿದರು. ಬಂಗಾಳದ ಶಿಕ್ಷಣ ಕ್ಷೇತ್ರ, ಆರೋಗ್ಯ ವ್ಯವಸ್ಥೆ, ಮೂಲಸೌಕರ್ಯ, ಸಾರಿಗೆ, ದೂರಸಂಪರ್ಕ, ಗೃಹನಿರ್ಮಾಣ, ನೀವು ಯಾವ ಕ್ಷೇತ್ರವನ್ನಾದರೂ ಹೆಸರಿಸಿ, ಅದನ್ನು ಅಡ್ಡಡ್ಡ ಮಲಗಿಸಿದ ಕೀರ್ತಿ ಜ್ಯೋತಿ ಬಸು ಅವರಿಗೇ ಸಲ್ಲಬೇಕು.
ಜ್ಯೋತಿಬಸು ಅವರ ತಂದೆ ಡಾ || ನಿಶಿಕಾಂತ ಬಸು ಅವರು ಸಂತನಂತಹ ಓರ್ವ ಹಿಂದೂ. ಅವರು ಮೂಲತಃ ಪೂರ್ವ ಬಂಗಾಳದವರು. ನೋಡಿ, ಇಪ್ಪತ್ತನೆಯ ಶತಮಾನದ ಉದ್ದಕ್ಕೂ ಪೂರ್ವ ಬಂಗಾಳದ ಹಿಂದೂಗಳು, ಬೌದ್ಧರು ಹಿಂಸೆ – ಹತ್ಯೆ – ಅತ್ಯಾಚಾರಗಳಿಗೆ ತುತ್ತಾದರು. ಆದರೆ ಅಂತಹ ನಿಶಿಕಾಂತರ ಈ ಮಗ, ಯಾಹ್ಯಾಖಾನ್ ಸಂತತಿಯ ಉತ್ತರಾಧಿಕಾರಿಯೆಂಬಂತೆ ಮಾಡಬಾರದ ಎಲ್ಲ ಅಕೃತ್ಯಗಳನ್ನೂ ಮಾಡಿದರು. ಹಿಂದೂಸಮಾಜವನ್ನು ನಾಶಪಡಿಸಿದ ದುಷ್ಟರ ಸಾಲಿಗೆ, ಈ ಜ್ಯೋತಿ ಬಸು ಹೆಮ್ಮೆಯಿಂದ ಸೇರಿದರು. ಜಿಹಾದಿಗಳಿಗೆ, ತಾಲಿಬಾನಿಗಳಿಗೆ ಹೋಲಿಸಬಹುದಾದ ಮಹಾಪುರುಷ ಈ ಜ್ಯೋತಿಬಸು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲಿಯೇ, 40,000 ಬಾಂಗ್ಲಾದೇಶಿ ಹಿಂದೂ ನಿರಾಶ್ರಿತರಿಗೆ, ಸುಂದರಬನದ ಮರೀಚಝಾಪೀ ದ್ವೀಪದಲ್ಲಿ ನೆಲೆಸಲು ಹೇಳಿದರು. ಮರೀಚಝಾಪೀಯಲ್ಲಿದ್ದುದು ಬರಿಯ ಕುರುಚಲು ಗಿಡಗಳು, ಪೊದೆಗಳು. ಈ ನಿರಾಶ್ರಿತರು ಪ್ರತಿಯೊಂದಕ್ಕೂ ದೋಣಿಗಳ ಮೂಲಕ ಬೇರೆಡೆ ಹೋಗಿ ಕುಡಿಯುವ ನೀರು, ಆಹಾರ, ಔಷಧಿಗಳನ್ನು ತರಬೇಕಿತ್ತು. ಈ ಶರಣಾರ್ಥಿಗಳೆಲ್ಲರೂ ಬಡವರು, ಕೆಳವರ್ಗದವರು, ಹೆಚ್ಚಿನವರು ಶಿಕ್ಷಣ ಸಹ ಇಲ್ಲದವರು.
ಮರೀಚಝಾಪೀಯ ಈ ನತದೃಷ್ಟರ ಮೇಲೆ 1979ರಲ್ಲಿ ಪೊಲೀಸರಿಂದ – ಮಾರ್ಕ್ಸ್ವಾದಿ ಪಕ್ಷದ ಗೂಂಡಾಗಳಿಂದ ಸಶಸ್ತ್ರ ಆಕ್ರಮಣಗಳಾದವು, ಬೇರೆಲ್ಲಿಗೂ ಅವರು ಹೋಗದಂತೆ ದಿಗ್ಬಂಧನವೂ ಅಯಿತು. ಪತ್ರಕರ್ತ ದೀಪ್ ಹಲಧರ್ ಅವರ ‘ಬ್ಲಡ್ ಐಲ್ಯಾಂಡ್’ ಕೃತಿ ಬಿಚ್ಚಿಡುವ ಈ ದುರಂತದಲ್ಲಿ ಬದುಕುಳಿದವರು ಹೇಳಿದ ದಾರುಣ ಕಥೆಗಳು ಘೋರ, ಘನಘೋರ. ಆಹಾರಕ್ಕಾಗಿ ದೋಣಿಗಳಲ್ಲಿ ಹೊರಟ ಹಿಂದೂ ನಿರಾಶ್ರಿತ ಹೆಂಗಸರನ್ನು ಈ ಪೊಲೀಸರು ಹಿಡಿದು ಸಾಮೂಹಿಕ ಅತ್ಯಾಚಾರ ಮಾಡಿದರು, ಕೊಂದೂ ಹಾಕಿದರು. ಅವರ ದೋಣಿಗಳನ್ನೂ ನಾಶಪಡಿಸಿದರು. ಮರೀಚಝಾಪೀ ದ್ವೀಪದಲ್ಲಿದ್ದ ನಿಶ್ಶಸ್ತ್ರ ನಿರಾಶ್ರಿತ ಗಂಡಸರು ಕೊನೆಗೆ ಇಟ್ಟಿಗೆ, ಕಲ್ಲುಗಳಿಂದ ಹೋರಾಟ ಮಾಡಿದರು. ಪೊಲೀಸರ ಮತ್ತು ಮಾರ್ಕ್ಸ್ ವಾದಿ ಪಕ್ಷದ ಸಶಸ್ತ್ರ ಗೂಂಡಾಗಳ ಆಕ್ರಮಣದ ಮುಂದೆ ಅವರಿಗೆ ಏನೂ ಮಾಡಲಾಗಲಿಲ್ಲ. ಬಸು ಸರ್ಕಾರದ ಈ ಪೊಲೀಸ್ ಆ್ಯಕ್ಷನ್ಗೆ ಅಲ್ಲಿನ ಬಹುಪಾಲು ನಿರಾಶ್ರಿತ ಹಿಂದೂಗಳು ಬಲಿಯಾದರು, ನಾಶವಾದರು, ನಿಶ್ಶೇಷವಾದರು. ಇಡೀ ದ್ವೀಪವೇ ನಾಶವಾಯಿತು. ಉಳಿದ ಕೆಲವರು ಓಡಿಹೋದರು. ತಪ್ಪಿಸಿಕೊಂಡು ಓಡಿಹೋಗಿ ಬದುಕುಳಿದವರ ಪ್ರಕಾರ, ಈ ಹತ್ಯಾಕಾಂಡಕ್ಕೆ ಬಲಿಯಾದವರು ಮೂವತ್ತು ಸಾವಿರ ಜನ. 1919ರ ಜಲಿಯನ್ವಾಲಾ ಬಾಗ್, 1984ರ ಸಿಖ್ ಹತ್ಯಾಕಾಂಡಗಳಲ್ಲಿ ಬಲಿಯಾದವರ ಸಂಖ್ಯೆಗೂ ಹೋಲಿಕೆಯಲ್ಲಿ ಇದು ತುಂಬಾ ಹೆಚ್ಚು. ಮಾಧ್ಯಮಗಳನ್ನು ದೂರವಿಟ್ಟುದರಿಂದ ಜನರಿಗೆ ವಿವರಗಳೇ ತಿಳಿಯಲಿಲ್ಲ. ಇಂದಿಗೂ ಭಾರತದ ಮಾಧ್ಯಮಗಳ ಮೇಲಿರುವ ಕಮ್ಯುನಿಸ್ಟರ ಹಿಡಿತವು ಊಹೆಗೂ ಮೀರಿದ್ದು. ಇನ್ನು ಕಮ್ಯುನಿಸ್ಟರ ರಾಜಧಾನಿಯೇ ಆಗಿದ್ದ ಪಶ್ಚಿಮ ಬಂಗಾಳದಲ್ಲಿ ಮರೀಚಝಾಪೀ ಹತ್ಯಾಕಾಂಡವನ್ನು ಮುಚ್ಚಿಡುವುದು ಸುಲಭವೇ ಆಯಿತು.
ಕೊಲ್ಕತ್ತಾ ಮಹಾನಗರದ 220 ಪೊಲೀಸ್ ಠಾಣೆಗಳಲ್ಲಿ, ನೂರು ಠಾಣೆಗಳಿಗೆ ಆರಿಸಿದ ಮುಸ್ಲಿಂ ಅಧಿಕಾರಿಗಳನ್ನು ನಿಯುಕ್ತಿ ಮಾಡಿ, 1946ರ ಹಿಂದೂ ನರಹಂತಕ ಸುಹ್ರಾವರ್ದಿಯೇ ನಾಚುವಂತೆ, ಬಸು ಅವರು ಹಿಂದೂಗಳು ಉಸಿರೆತ್ತದಂತೆ ಮಾಡಿದರು. ಐದು ಕೋಟಿ ಬಾಂಗ್ಲಾದೇಶಿ ಮುಸ್ಲಿಮರು ಭಾರತ ಪ್ರವೇಶಿಸಲು, ಭಾರತದಲ್ಲಿ ನೆಲೆಸಲು ಬಸು ಸಂಕಲ್ಪ ತೊಟ್ಟು ಸಾಧಿಸಿದರು. ಅಹೋಮ್ ಮತ್ತಿತರ ರಾಜ್ಯಗಳ ಹಿಂದೂ – ಮುಸ್ಲಿಂ ಜನಸಂಖ್ಯಾ ಸಮತೋಲನ (ಡೆಮೋಗ್ರಫಿ) ದಿಕ್ಕುತಪ್ಪುವಂತೆ ಮಾಡಿದರು. ಎಲ್ಲ ಕಾನೂನು ವಿರೋಧೀ ಅಕ್ರಮಗಳಿಗೆ ಬೆಂಬಲ ನೀಡಿ, ಬಾಂಗ್ಲಾದೇಶಿ ಮುಸ್ಲಿಮರಿಗೆ ರೇಷನ್ ಕಾರ್ಡ್, ಚುನಾವಣಾ ಗುರುತುಪತ್ರ ಮುಂತಾದ ದಾಖಲೆಗಳನ್ನು ಒದಗಿಸಿದರು. ಇಂದು ಪಶ್ಚಿಮ ಬಂಗಾಳ ರಾಜ್ಯದ ಎಂಟರಿಂದ ಹತ್ತು ಜಿಲ್ಲೆಗಳಲ್ಲಿ, ಮುಸ್ಲಿಂ ಜನಸಂಖ್ಯೆ ಮಿತಿ ಮೀರಿದೆ. ಇಡೀ ರಾಜ್ಯದಲ್ಲಿ ಮದ್ರಸಾಗಳು ನೆಲೆಗೊಳ್ಳಲು ಬಸು ವ್ಯವಸ್ಥೆ ಮಾಡಿದರು.
ಸುಧಾರಣೆಯ ಹೆಸರಿನಲ್ಲಿ ಹಿಂದೂಗಳ ಜಮೀನನ್ನು ಮುಸ್ಲಿಮರಿಗೆ ಆರಿಸಿ ಆರಿಸಿ ಹಂಚಿದ ಮಹಾನುಭಾವ, ಈ ಬಸು. ಬಂಗಾಳಿ ಹಿಂದೂಗಳು ಕಿರುಕುಳಕ್ಕೆ ತುತ್ತಾಗಲು, ಹಿಂಸೆ – ಅವಮಾನ ಅನುಭವಿಸಲು, ದಮನಕ್ಕೆ ಈಡಾಗಲು ಕಮ್ಯುನಿಸ್ಟರ ದುರಾಡಳಿತವೇ ಕಾರಣವಾಯಿತು. ನಮ್ಮ ದೇಶದ ಎಲ್ಲ ರಾಜಕೀಯ ಪಕ್ಷಗಳೂ ತಥಾಕಥಿತ ‘ಅಲ್ಪಸಂಖ್ಯಾತ’ರ ಓಲೈಕೆಯಲ್ಲಿ, ಉಚಿತ ಕೊಡುಗೆಗಳನ್ನು ನೀಡುವ ಅನುಚಿತ ಸ್ಪರ್ಧೆಯಲ್ಲಿ, ಅಂತೆಯೇ ದಿನದಿನಕ್ಕೂ ಕಗ್ಗಂಟಾಗುತ್ತಿರುವ ಮೀಸಲಾತಿಯ ರಾಜಕಾರಣದಲ್ಲಿ ಮುಳುಗಿವೆ, ಜನರನ್ನೂ ಮುಳುಗಿಸುತ್ತಿವೆ. ಇಂತಹ ನಿರಾಶಾದಾಯಕ ಪರಿಪ್ರೇಕ್ಷ್ಯದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿಜೀ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಅವರು ಅದ್ಭುತವಾದ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದೇ ಸಾಲಿಗೆ ಇದೀಗ ಸುವೇಂದು ಅಧಿಕಾರಿ ಸೇರುತ್ತಿದ್ದಾರೆ. ಆರ್ಥಿಕವಾಗಿ, ಔದ್ಯೋಗಿಕವಾಗಿ, ಸಾಂಸ್ಕೃತಿಕವಾಗಿ ಬಹುಪಾಲು ನಾಶವಾಗಿರುವ ಪಶ್ಚಿಮ ಬಂಗಾಳವು ಹೊಸಹುಟ್ಟು ಪಡೆಯುತ್ತಿದೆ. ಪಶ್ಚಿಮ ಬಂಗಾಳದ ಜನ ಕೊನೆಗೂ ಎಚ್ಚೆತ್ತುಕೊಂಡರು. ಹಾಗೆ ನೋಡುವುದಾದರೆ, ಇದು ಅವರಿಗೆ ಕೊನೆಯ ಅವಕಾಶವಾಗಿತ್ತು. ಈ ಬಾರಿ ಮಮತಾ ಮತ್ತೆ ಅಧಿಕಾರಕ್ಕೆ ಬಂದಿದ್ದರೆ, ಬರಿಯ ಪಶ್ಚಿಮ ಬಂಗಾಳ ಮಾತ್ರವಲ್ಲ, ಭಾರತವೇ ವಿನಾಶದ ಹಾದಿ ಹಿಡಿಯುತ್ತಿತ್ತು.
