ಹಳೆಯ ಹುಳುಕುಗಳನ್ನು ಕಿತ್ತೆಸೆಯುವ ಸಮಯ
- ಶೋಧನ್ ಕುಂದಾಪುರ, ಪತ್ರಕರ್ತ
ಭಾರತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ದೇಶ. ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಇಳಿಸಿಯಾಗಿದೆ, ಸೆಮಿಕಂಡಕ್ಟರ್ ಮಿಷನ್ ಮೂಲಕ ಜಾಗತಿಕ ತಾಂತ್ರಿಕ ಹಬ್ ಆಗುವ ಹಂಬಲದ ನಡಿಗೆ ವೇಗದಲ್ಲಿದೆ. ಇಷ್ಟೆಲ್ಲಾ ಹೆಮ್ಮೆಯ ನಡುವೆಯೂ ಈ ದೇಶದ ಅಡಿಪಾಯವಾಗಿರುವ ಯುವಜನತೆಯ ಭವಿಷ್ಯವನ್ನು ನಿರ್ಧರಿಸುವ ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಮಾತ್ರ ಕಳೆದ ಕೆಲವು ವರ್ಷಗಳಿಂದ ಹಲವು ಅವ್ಯವಸ್ಥೆಗಳಿಗೆ ಸಾಕ್ಷಿಯಾಗುತ್ತಿದೆ. ಮೇ 3ರ ನೀಟ್ (NEET) ಪೇಪರ್ ಸೋರಿಕೆಯಿಂದ ಹಿಡಿದು ಎಸ್ಎಸ್ಸಿ-ಸಿಜಿಎಲ್ (SSC-CGL) ಪರೀಕ್ಷೆಗಳ ಪದೇ ಪದೇ ಮುಂದೂಡಿಕೆಯವರೆಗೆ, ಇಂದಿನ ವ್ಯವಸ್ಥೆಯು ಕೇವಲ ಲೋಪದೋಷಗಳಿಂದ ಕೂಡಿದ್ದಲ್ಲದೇ, ಅದು ತನ್ನ ಮೂಲ ವಿನ್ಯಾಸದಿಂದಲೇ ದೂರವಾಗುತ್ತಿರುವ ಛಾಯೆ ಎದ್ದುಕಾಣುತ್ತಿದೆ.
ಈ ವ್ಯವಸ್ಥಿತ ವೈಫಲ್ಯದ ಬೇರುಗಳನ್ನು ಹುಡುಕುತ್ತಾ ಹೋದರೆ ಅವು ಈ ಹಿಂದೆ ದಶಕಗಳ ಕಾಲ ಆಳಿದ್ದ ಸರ್ಕಾರದ ದೋಷಪೂರಿತ ನೀತಿಗಳಲ್ಲಿ ಮತ್ತು ಸಾಂಸ್ಥಿಕ ಅಸಡ್ಡೆಯಲ್ಲಿ ಕಾಣಸಿಗುತ್ತವೆ. ಈ ಐತಿಹಾಸಿಕ ಲೋಪಗಳನ್ನು ಸರಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ‘ಹೈ-ಪವರ್ ಟಾಸ್ಕ್ ಫೋರ್ಸ್’ ರಚಿಸಿರುವುದು ಆಡಳಿತಾತ್ಮಕ ತೀರ್ಮಾನ ಮಾತ್ರವಲ್ಲದೇ, ರಾಷ್ಟ್ರೀಯ ಶಿಕ್ಷಣದ ಭದ್ರತೆಯ ದೃಷ್ಟಿಯಿಂದ ತೆಗೆದುಕೊಂಡ ದಿಟ್ಟ ಹೆಜ್ಜೆ.
ಯುಪಿಎ ಕಾಲದ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ನ(NAC) ವ್ಯವಸ್ಥಿತ ನಿರ್ಲಕ್ಷ್ಯ
ಭಾರತದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯು ಹಳ್ಳ ಹಿಡಿಯಲು ಆರಂಭವಾದದ್ದು ಇಂದು ನಿನ್ನೆಯಿಂದಲ್ಲ. ದಶಕಗಳ ಕಾಲ ಈ ಮೊದಲು ಆಳಿದ್ದ ಸರ್ಕಾರದ ಅವಧಿಯಲ್ಲೇ ಈ ಲಕ್ಷಣಗಳು ಕಾಣಿಸಿದ್ದವು. ಅಂದು ಪ್ರಧಾನ ಮಂತ್ರಿ ಕಾರ್ಯಾಲಯಕ್ಕಿಂತ ಹೆಚ್ಚಾಗಿ ಅಧಿಕಾರ ಚಲಾಯಿಸುತ್ತಿದ್ದುದು ‘ಶ್ಯಾಡೋ ಕ್ಯಾಬಿನೆಟ್’ ಎಂದು ವಿಪಕ್ಷಗಳಿಂದ ಕರೆಸಿಕೊಳ್ಳುತ್ತಿದ್ದ ನ್ಯಾಷನಲ್ ಅಡ್ವೈಸರಿ ಕೌನ್ಸಿಲ್ (NAC). ಈ ಸಮಿತಿಯು ಶಿಕ್ಷಣ ತಜ್ಞರಿಗಿಂತ ಹೆಚ್ಚಾಗಿ ಎನ್ಜಿಒ ಕಾರ್ಯಕರ್ತರು ಮತ್ತು ಎಡಪಂಥೀಯ ಸಿದ್ಧಾಂತದ ಪ್ರಭಾವೀ ವ್ಯಕ್ತಿಗಳಿಂದ ತುಂಬಿತ್ತು. ಅವರ ಅಜೆಂಡಾ ಫಲಿತಾಂಶ ಆಧಾರಿತ ಶಿಕ್ಷಣ ನೀಡುವುದಾಗಿರಲಿಲ್ಲ, ಬದಲಾಗಿ ಕೇವಲ ಹಕ್ಕುಗಳ ಬಗ್ಗೆ ಮಾತನಾಡುವುದು ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಾಗಿತ್ತು.
ಯುಪಿಎ ಅವಧಿಯಲ್ಲಿ ಜಾರಿಗೆ ಬಂದ ಶಿಕ್ಷಣ ಹಕ್ಕು ಕಾಯ್ದೆ (RTE) ಮೂಲಭೂತವಾಗಿ ದೋಷಪೂರಿತವಾಗಿತ್ತು. ಇತ್ತೀಚಿಗೆ ಅರ್ಥಶಾಸ್ತ್ರಜ್ಞೆ ಪ್ರೊ. ಗೀತಾ ಕಿಂಗ್ಡನ್ ಅವರು ಸಂದರ್ಶನವೊಂದರಲ್ಲಿ, “ಯುಪಿಎ ಸರ್ಕಾರವು ಶಾಲೆಗಳಿಗೆ ನೀಡುವ ಅನುದಾನವನ್ನು ಪ್ರತಿ ವಿದ್ಯಾರ್ಥಿಯ ಕಲಿಕೆಯ ಆಧಾರದ ಮೇಲೆ ನೀಡುವ ಬದಲು ಲಂಪ್ಸಮ್ ಗ್ರಾಂಟ್ ಆಗಿ ನೀಡಿತು. ಇದರಿಂದ ಶಾಲೆಗಳಲ್ಲಿ ಎಷ್ಟು ಜನ ಕಲಿಯುತ್ತಿದ್ದಾರೆ ಅಥವಾ ಶಿಕ್ಷಕರು ಎಷ್ಟು ಪಾಠ ಮಾಡುತ್ತಿದ್ದಾರೆ ಎಂಬ ಬಗ್ಗೆ ಯಾರಿಗೂ ಹೊಣೆಗಾರಿಕೆ ಇರಲಿಲ್ಲ. ಈ ಜವಾಬ್ದಾರಿಯಿಲ್ಲದ ವ್ಯವಸ್ಥೆಯೇ ಇಂದು ಪರೀಕ್ಷಾ ಕೇಂದ್ರಗಳಲ್ಲಿ ಭ್ರಷ್ಟಾಚಾರ ಬೆಳೆಯಲು ಮತ್ತು ಸಾಂಸ್ಥಿಕ ವೈಫಲ್ಯಕ್ಕೆ ಅಡಿಪಾಯವಾಯಿತು. ಪರೀಕ್ಷೆಗಳನ್ನು ನಡೆಸುವಲ್ಲಿ ತಾಂತ್ರಿಕ ಸುಧಾರಣೆ ತರುವ ಬದಲು, ಹಳೆಯ ಕಾಲದ ವ್ಯವಸ್ಥೆಯಲ್ಲೇ ಮುಂದುವರಿಯುವಂತೆ ಮಾಡಿದ್ದು ಅಂದಿನ ಅತಿದೊಡ್ಡ ಪ್ರಮಾದ” ಎಂದಿದ್ದರು.

ಅಗ್ಗದ ದರದ ಹಪಾಹಪಿ: L1 ಬಿಡ್ಡಿಂಗ್ ಎಂಬ ಶಾಪ
ಭಾರತದ ಪರೀಕ್ಷಾ ವ್ಯವಸ್ಥೆಯು ಇಂದು ಹಳ್ಳ ಹಿಡಿಯಲು ಮತ್ತೊಂದು ಪ್ರಮುಖ ಕಾರಣವೆಂದರೆ ಸರ್ಕಾರಿ ಖರೀದಿ ಮತ್ತು ಗುತ್ತಿಗೆ ಪ್ರಕ್ರಿಯೆಯಲ್ಲಿರುವ ಎಲ್ 1 (Lowest Bidder) ಪದ್ಧತಿ. ಅತ್ಯಂತ ಕಡಿಮೆ ದರಕ್ಕೆ ಯಾರು ಕೆಲಸ ಮಾಡಿಕೊಡುತ್ತಾರೋ ಅವರಿಗೆ ಗುತ್ತಿಗೆ ನೀಡುವ ಈ ಪದ್ಧತಿಯು ಶಿಕ್ಷಣ ಮತ್ತು ಪರೀಕ್ಷೆಯಂತಹ ಸೂಕ್ಷ್ಮ ವಲಯಕ್ಕೆ ಮಾರಕವಾಗಿ ಪರಿಣಮಿಸಿದೆ. ಕಳೆದ ಒಂದು ದಶಕದಿಂದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಅತ್ಯಂತ ದಕ್ಷತೆಯಿಂದ ಮತ್ತು ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸುತ್ತಿತ್ತು. ಆದರೆ, ಇತ್ತೀಚೆಗೆ ಎಡುಕ್ವಿಟಿ (Eduquity) ಎಂಬ ಸಂಸ್ಥೆ ಜವಾಬ್ದಾರಿ ತೆಗೆದುಕೊಂಡ ಮೇಲೆ ಸಮಸ್ಯೆಗಳು ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ.
ಟಿಸಿಎಸ್ ಪ್ರತಿ ಅಭ್ಯರ್ಥಿಗೆ 311 ರೂಪಾಯಿ ಬಿಡ್ ಮಾಡಿದ್ದರೆ, ಎಡುಕ್ವಿಟಿ ಕೇವಲ 171 ರೂಪಾಯಿಗೆ ಸಿದ್ಧವಾಯಿತು. ಕೇವಲ ಹಣ ಉಳಿಸುವ ಆಸೆಗಾಗಿ, ತಾಂತ್ರಿಕವಾಗಿ ದುರ್ಬಲವಾಗಿರುವ ಮತ್ತು ಈ ಹಿಂದೆ ಹಲವು ಬಾರಿ ಬ್ಲಾಕ್ಲಿಸ್ಟ್ ಗೆ ಒಳಗಾಗಿದ್ದ ಸಂಸ್ಥೆಯ ಕೈಗೆ ಲಕ್ಷಾಂತರ ಯುವಕರ ಭವಿಷ್ಯವನ್ನು ನೀಡಲಾಯಿತು. 2020ರಲ್ಲಿ ಕೇಂದ್ರ ತರಬೇತಿ ನಿರ್ದೇಶನಾಲಯವು ಈ ಸಂಸ್ಥೆಯನ್ನು ನಿಷೇಧಿಸಿದ್ದರೂ, ಸಾಂಸ್ಥಿಕ ಮರೆಗುಳಿತನದಿಂದಾಗಿ ಅದಕ್ಕೆ ಮತ್ತೆ ಗುತ್ತಿಗೆ ನೀಡಲಾಯಿತು. ಇದರ ಫಲವೇನು? ಬಯೋಮೆಟ್ರಿಕ್ ವೈಫಲ್ಯಗಳು, ಪರೀಕ್ಷಾ ಕೇಂದ್ರಗಳಲ್ಲಿ ಸರ್ವರ್ ಕ್ರಾಶ್ ಮತ್ತು ಅರ್ಧಕ್ಕೆ ನಿಂತ ಪರೀಕ್ಷೆಗಳು. 55,000 ಅಭ್ಯರ್ಥಿಗಳ ಡೇಟಾ ಮಾಯವಾಯಿತೆಂದು ಎಸ್ಎಸ್ಸಿ ಒಪ್ಪಿಕೊಂಡಾಗ ಅದು ಕೇವಲ ಒಂದು ತಾಂತ್ರಿಕ ಲೋಪವಲ್ಲ, ಬದಲಾಗಿ ವ್ಯವಸ್ಥೆಯ ನೈತಿಕ ಪತನವಾಗಿತ್ತು.
ಜಾಗತಿಕ ಪಾಠಗಳು: ಭಾರತದ ವೈಫಲ್ಯಕ್ಕೆ ಕನ್ನಡಿ
ಭಾರತದ ವೈಫಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಹೋಲಿಸಿದಾಗ ಆಘಾತಕಾರಿ ಸತ್ಯಗಳು ಹೊರಬರುತ್ತವೆ. ಚೀನಾದ ಗಾಕಾವೋ (Gaokao) ಪರೀಕ್ಷೆಯನ್ನು ವರ್ಷಕ್ಕೆ 1.3 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಬರೆಯುತ್ತಾರೆ. ಕಳೆದ ಐದು ವರ್ಷಗಳಲ್ಲಿ ಅಲ್ಲಿ ಒಂದೇ ಒಂದು ಪ್ರಮುಖ ಪೇಪರ್ ಸೋರಿಕೆ ವರದಿಯಾಗಿಲ್ಲ. ಅಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಸಾಗಿಸುವಾಗ ಮಿಲಿಟರಿ ಮಾದರಿಯ ಭದ್ರತೆ ಇರುತ್ತದೆ. ದಕ್ಷಿಣ ಕೊರಿಯಾದಲ್ಲಿ ಸುನಿಯುಂಗ್ ಪರೀಕ್ಷೆಯ ದಿನ ಇಡೀ ದೇಶವೇ ಸ್ತಬ್ಧವಾಗುತ್ತದೆ, ವಿಮಾನಗಳ ಹಾರಾಟವನ್ನೂ ನಿಲ್ಲಿಸಲಾಗುತ್ತದೆ. ಅಂದರೆ ಪರೀಕ್ಷೆಯ ಪವಿತ್ರತೆಗೆ ಅಷ್ಟು ಮಹತ್ವವಿದೆ.ಆದರೆ ಭಾರತದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಚೀನಾಕ್ಕಿಂತ ನಾಲ್ಕು ಪಟ್ಟು ಕಡಿಮೆ ಅಭ್ಯರ್ಥಿಗಳಿದ್ದರೂ ನಮ್ಮ ಸೋರಿಕೆಯ ಪ್ರಮಾಣ ವಿಶ್ವದಲ್ಲೇ ಅತಿಹೆಚ್ಚು. ಭಾರತದ ಶೇ.14ರಷ್ಟು ರಾಜ್ಯಗಳಲ್ಲಿ ಪ್ರತಿ ಪರೀಕ್ಷಾ ಚಕ್ರದಲ್ಲೂ ಯಾವುದಾದರೊಂದು ವೈಫಲ್ಯ ವರದಿಯಾಗುತ್ತದೆ. ನಮ್ಮ ದೇಶದಲ್ಲಿ ಪರೀಕ್ಷಾ ಪತ್ರಿಕೆಗಳನ್ನು ಸಾಗಿಸುವ ಗುತ್ತಿಗೆ ಚಾಲಕರ ಮೇಲೆ ಕನಿಷ್ಠ ಕಣ್ಗಾವಲೂ ಇಲ್ಲದಿರುವುದು ಶೋಚನೀಯ. 2024ರ ನೀಟ್ ಪರೀಕ್ಷೆಯಲ್ಲಿ ಪತ್ರಿಕೆಗಳು ಖಾಸಗಿ ಏಜೆನ್ಸಿಗಳ ಮೂಲಕ ಸಂಚರಿಸುವಾಗ ಉಂಟಾದ ಭದ್ರತಾ ಲೋಪಗಳೇ ಇದಕ್ಕೆ ಸಾಕ್ಷಿ.
ಹಣಕಾಸಿನ ಮರಣಶಾಸನ ಮತ್ತು ಕೋಚಿಂಗ್ ಮಾಫಿಯಾ
ಭಾರತೀಯ ಕುಟುಂಬಗಳು ತಮ್ಮ ವಾರ್ಷಿಕ ತಲಾ ಆದಾಯದ 5ರಿಂದ 8 ಪಟ್ಟು ಹಣವನ್ನು ಕೇವಲ ಕೋಚಿಂಗ್ ಮತ್ತು ಪರೀಕ್ಷಾ ತಯಾರಿಗಾಗಿ ಖರ್ಚು ಮಾಡುತ್ತವೆ. ಅಮೆರಿಕದಲ್ಲಿ ಈ ಪ್ರಮಾಣ ಕೇವಲ ಶೇ.0.2ಷ್ಟಿದೆ. ಬಡ ಪೋಷಕರು ಸಾಲ ಮಾಡಿ ತಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿದಾಗ, ಕೊನೆಯ ಕ್ಷಣದಲ್ಲಿ ಪರೀಕ್ಷೆ ರದ್ದಾಗಿದೆ ಎಂಬ ಸುದ್ದಿ ಆ ಕುಟುಂಬಕ್ಕೆ ನೀಡುವ ಮರಣಶಾಸನವಿದ್ದಂತೆ. 2024ರಲ್ಲಿ ಯುಜಿಸಿ-ನೆಟ್ ಮತ್ತು ನೀಟ್-ಪಿಜಿ ಪರೀಕ್ಷೆಗಳ ಪದೇ ಪದೇ ಮುಂದೂಡಿಕೆ ಮತ್ತು ರದ್ದತಿಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಸಾವಿರಾರು ಕೋಟಿ ರೂಪಾಯಿ ಹಣ ಮತ್ತು ಅಮೂಲ್ಯವಾದ ಸಮಯ ಮಣ್ಣುಪಾಲಾಗಿದೆ. 8ರಿಂದ 12 ಲಕ್ಷ ರೂಪಾಯಿಗಳ ಈ ಕೋಚಿಂಗ್ ಉದ್ಯಮವು ಅಸ್ಥಿರ ಪರೀಕ್ಷಾ ವ್ಯವಸ್ಥೆಯ ಮೇಲೆ ಅವಲಂಬಿತವಾಗಿ ಬೆಳೆಯುತ್ತಿರುವುದು ದೇಶದ ಆರ್ಥಿಕತೆಗೆ ಮಾರಕವಾಗಿದೆ.
ನಂದನ್ ನಿಲೇಕಣಿ – ಮೋದಿಯವರ ಚಾಣಾಕ್ಷ ಆಯ್ಕೆ
ಈ ಎಲ್ಲಾ ಬಿಕ್ಕಟ್ಟುಗಳ ನಡುವೆ ಪ್ರಧಾನಿ ಮೋದಿ ಅವರು ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಿರುವುದು ಅತ್ಯಂತ ಚಾಣಾಕ್ಷತನದ ನಿರ್ಧಾರ. ನಿಲೇಕಣಿ ಅವರು 2014ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರೂ, ಅವರ ತಾಂತ್ರಿಕ ಸಾಮರ್ಥ್ಯದ ಮೇಲೆ ಮೋದಿಯವರಿಗೆ ಅಚಲ ವಿಶ್ವಾಸವಿದೆ. ಇದು ‘ರಾಷ್ಟ್ರ ಮೊದಲು’(Nation First) ಎಂಬ ನೀತಿಗೆ ಸಾಕ್ಷಿ. ಆಧಾರ್ ಮೂಲಕ ಭಾರತದ 140 ಕೋಟಿ ಜನರ ಡೇಟಾವನ್ನು ಸುಭದ್ರಗೊಳಿಸಿದ ನಿಲೇಕಣಿ ಅವರಿಗೆ, ಈ ಹರಿದು ಹಂಚಿಹೋಗಿರುವ ಪರೀಕ್ಷಾ ವ್ಯವಸ್ಥೆಯನ್ನು ಒಂದು ಸುಭದ್ರ ಡಿಜಿಟಲ್ ಚೌಕಟ್ಟಿನೊಳಗೆ ತರುವ ಶಕ್ತಿ ಇದೆ. ವಿರೋಧ ಪಕ್ಷಗಳಿಗೆ ಈಗ ಟೀಕಿಸಲು ಯಾವುದೇ ದಾರಿಯಿಲ್ಲ.ಏಕೆಂದರೆ ನಿಲೇಕಣಿ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾದವರಲ್ಲ, ಅವರು ದೇಶದ ತಂತ್ರಜ್ಞಾನದ ಧ್ರುವತಾರೆ. ಅವರು ರೂಪಿಸಲಿರುವ ಶಿಫಾರಸುಗಳು ಭಾರತದ ಪರೀಕ್ಷಾ ಇತಿಹಾಸದಲ್ಲಿ ಹೊಸ ಮನ್ವಂತರ ಬರೆಯುವ ವಿಶ್ವಾಸವನ್ನು ದೇಶವೇ ವ್ಯಕ್ತಪಡಿಸುತ್ತಿದೆ.
ಬ್ಲಾಕ್ಚೈನ್ ತಂತ್ರಜ್ಞಾನ ಪರೀಕ್ಷೆಯ ಐದು ನಿಮಿಷಗಳ ಮೊದಲು ಡಿಜಿಟಲ್ ಕೀ ಮೂಲಕ ಪೇಪರ್ ಅನ್ಲಾಕ್ ಆಗುವ ವ್ಯವಸ್ಥೆ, ಎಐ ಚಾಲಿತ ಬಯೋಮೆಟ್ರಿಕ್ ನಕಲಿ ಅಭ್ಯರ್ಥಿಗಳ ಪ್ರವೇಶ ತಡೆಯಲು ಆಧಾರ್ ಆಧಾರಿತ ಕಟ್ಟುನಿಟ್ಟಿನ ದೃಢೀಕರಣ, ವೆಂಡರ್ ಸ್ಟೆಬಿಲಿಟಿ, ಅಗ್ಗದ ದರದ ಬಿಡ್ಡಿಂಗ್ ವ್ಯವಸ್ಥೆಗೆ ಅಂತ್ಯ ಹಾಡಿ ತಾಂತ್ರಿಕ ಸಾಮರ್ಥ್ಯದ ನಂಬಿಕಸ್ಥ ಸಂಸ್ಥೆಗಳಿಗೆ ಮಾತ್ರ ಜವಾಬ್ದಾರಿ, ವರ್ಷಕ್ಕೊಮ್ಮೆ ಮಾತ್ರ ಪರೀಕ್ಷೆ ನಡೆಸಿ ಒತ್ತಡ ಸೃಷ್ಟಿಸುವ ಬದಲು ಅಮೆರಿಕದ SAT ಮಾದರಿಯಲ್ಲಿ ವರ್ಷಕ್ಕೆ ಹಲವು ಬಾರಿ ಪರೀಕ್ಷೆ ಬರೆಯುವ ಅವಕಾಶ…ಇಂತಹ ಮಾದರಿಯ ಅದೆಷ್ಟೋ ಬದಲಾವಣೆಗಳನ್ನು ಭಾರತದ ಯುವಸಮುದಾಯ ನಿರೀಕ್ಷಿಸುತ್ತಿದೆ.
ಅಕ್ರಮ ಫಂಡಿಂಗ್ ಮತ್ತು ಅಶಾಂತಿಯ ಸಂಚು
ಭಾರತದ ಪರೀಕ್ಷಾ ವ್ಯವಸ್ಥೆಯಲ್ಲಿ ಅಶಾಂತಿ ಮೂಡಿಸುವ ಮೂಲಕ ಯುವಜನರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಡೀಪ್ ಸ್ಟೇಟ್ ಸಂಚಿನ ಬಗ್ಗೆಯೂ ಎಚ್ಚರದಿಂದಿರಬೇಕಾದ ಸಮಯವಿದು. ಇತ್ತೀಚಿನ ನೀಟ್ ಪ್ರತಿಭಟನೆಗಳಲ್ಲಿ ವಿದೇಶಿ ಫಂಡಿಂಗ್ ಮತ್ತು ಕೆಲವು ಪ್ರತ್ಯೇಕತಾವಾದಿ ನಾಯಕರ ಹಠಾತ್ ಪ್ರವೇಶವನ್ನು ಗಮನಿಸಿದರೆ, ಇದರ ಹಿಂದೆ ಭಾರತದ ಆಂತರಿಕ ಸ್ಥಿರತೆಯನ್ನು ಹಾಳು ಮಾಡುವ ಉದ್ದೇಶವಿದೆ ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರವು ಎಫ್ಸಿಆರ್ಎ ಕಾಯ್ದೆಯನ್ನು ಬಿಗಿಗೊಳಿಸುತ್ತಿದ್ದಂತೆ, ವಿದೇಶಿ ಹಣದ ಮೇಲೆ ಬೇಳೆ ಬೇಯಿಸಿಕೊಳ್ಳುತ್ತಿದ್ದ ಎನ್ಜಿಒಗಳಿಗೆ ನಡುಕ ಶುರುವಾಗಿದೆ. ವಿದ್ಯಾರ್ಥಿಗಳ ಸಮಸ್ಯೆಯನ್ನು ಅಸ್ತ್ರವಾಗಿ ಬಳಸಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿರುವುದು ಆತಂಕಕಾರಿ ನಡೆಯಾಗಿದೆ.
ಶುದ್ಧೀಕರಣದ ಆರಂಭ
‘ಸಾರ್ವಜನಿಕ ಪರೀಕ್ಷೆಗಳ ತಡೆಗಟ್ಟುವಿಕೆ ತಿದ್ದುಪಡಿ ಬಿಲ್- 2026’ ಮತ್ತು ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ಬದಲಾವಣೆಗಳು ಭಾರತವು ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿ. ಪರೀಕ್ಷೆಗಳು ಕೇವಲ ಒಂದು ಪ್ರಕ್ರಿಯೆಯಾಗಬಾರದು, ಅವು ಪ್ರತಿಭೆಯ ಸಮರ್ಪಕಮಾಪಕವಾಗಬೇಕು. ಯುವಜನತೆಯ ಕಣ್ಣೀರು ಮತ್ತು ಹತಾಶೆಯ ಮೇಲೆ ಯಾವುದೇ ರೀತಿಯ ಬಲಿಷ್ಠ ಭಾರತವನ್ನು ಕಟ್ಟಲು ಸಾಧ್ಯವಿಲ್ಲ. ನಂದನ್ ನಿಲೇಕಣಿ ಅವರ ನೇತೃತ್ವದ ಸಮಿತಿಯು ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಜಾಗತಿಕ ಮಟ್ಟದ ಪಾರದರ್ಶಕತೆಗೆ ಕೊಂಡೊಯ್ಯುವ ಆಶಾಭಾವನೆಯನ್ನು ಸದ್ಯಕ್ಕೆ ದೇಶ ಇರಿಸಿಕೊಂಡಿದೆ. ಅರ್ಹತೆಗೆ ಬೆಲೆ ಸಿಗುವ, ಭ್ರಷ್ಟಾಚಾರಕ್ಕೆ ಜಾಗವಿಲ್ಲದ ನೂತನ ವ್ಯವಸ್ಥೆಯು ನವ ಭಾರತದ ಯುವಜನತೆಯ ಪಾಲಿಗೆ ಒಲಿಯಬೇಕು. ಸರ್ಕಾರ ಯಾವುದೇ ಇದ್ದರೂ ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಹಾದಿ ತಪ್ಪದಂತೆ ಕಾಯುವುದು ಅದರ ಕರ್ತವ್ಯವಾಗಬೇಕು. ಈ ಹಿಂದಿದ್ದ ಬ್ರೋಕನ್ ಸಿಸ್ಟಮ್ ಅನ್ನು ಡಿಜಿಟಲ್ ಕವಚದ ಮೂಲಕ ಪ್ರಸ್ತುತ ಸರ್ಕಾರಸರಿಪಡಿಸುತ್ತಿದೆ. ತಂತ್ರಜ್ಞಾನ ಮತ್ತು ಪಾರದರ್ಶಕತೆ ಇಂತಹ ಅಂಧಕಾರಕ್ಕಿರುವ ಏಕೈಕ ಮದ್ದು.
